ಅಥವಾ

ಒಟ್ಟು 23 ಕಡೆಗಳಲ್ಲಿ , 12 ವಚನಕಾರರು , 21 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಮನವರಿತು ಸುಳಿಯಬಲ್ಲಡೆ ಆಪ್ಯಾಯನವರಿತು ಉಣಬಲ್ಲಡೆ ಇಚ್ಛೆಯರಿತು ಬೇಡಬಲ್ಲಡೆ ಈ ತ್ರಿವಿಧ ಗುಣದ ಅನುವ ಬಲ್ಲವರು ದೇವರಿಗೆ ದೇವರಾಗಿಪ್ಪರು ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನ ದೇವರ ದೇವಾ.
--------------
ಸಿದ್ಧರಾಮೇಶ್ವರ
ಕಸವಿದ್ದು ಕೃಷೀವಲನಿಲ್ಲದೆ, ಅಸಮಾಕ್ಷವಲನಿಲ್ಲದೆ ಅಸಮಾಕ್ಷಗುಣವಿರೆ, ಈ ಕಸ ಗುಣದ ಕೇಡು ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಸೀಮೆ ಸಂಬಂಧಗಳ ಮೀರಿಪ್ಪ ಮಂತ್ರಕ್ಕೆ ರಾಜಮಂತ್ರನು ತಾನು ಪಂಚಾಕ್ಷರಿ. ಪಂಚಾಕ್ಷರಿಯ ಗುಣದ ಬಸವಾಕ್ಷರತ್ರಯದ ಧ್ಯಾನ ಮೌನದ ಗುಣದ ಸತ್ವವಿಡಿದು, ಆನಂದ ತ್ರೈಲಿಂಗ ಮೂಲಮಂತ್ರಕ್ಕೀಗ ಬಸವಾಕ್ಷರವು ಮಾತೆ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಜಂಗಮಭಕ್ತನು, ಚಿನ್ನದಂತೆ ಕಬ್ಬಿನಂತೆ ಶ್ರೀಗಂಧದಂತೆ ಇರಬೇಕು. ಅದು ಹೇಂಗೆ ? ಆ ಚಿನ್ನವ ಕಾಸಿದಡೆ ಕರಗಿಸಿದಡೆ ಕಡಿದಡೆ ನಿಗುಚಿದಡೆ ಬಣ್ಣ ಅಧಿಕವಲ್ಲದೆ ಕಿರಿದಾಗದು, ಇವರು ನನ್ನನೇಕೆ ಘಾಸಿ ಮಾಡಿದರೆನ್ನದು. ಆ ಕಬ್ಬ ಕಡಿದಡೆ ಖಂಡಿಸಿದಡೆ ಗಾಣದಲಿಕ್ಕಿ ಹಿಂಡಿ, ಹಿಳಿದು, ಬಂದ ರಸವನಟ್ಟಡೆ, ನಾನಾ ಪ್ರಕಾರದಲ್ಲಿ ಸಾಯಸಗೊಳಿಸಿದಡೆಯೂ ಮಿಗೆ ಮಿಗೆ ಮಧುರವಾಗಿಪ್ಪುದಲ್ಲದೆ ವಿಷವಾಗದು, ನನ್ನನೇಕೆ ನೋಯಿಸಿದರೆಂದೆನ್ನದು. ಆ ಶ್ರೀಗಂಧವು ಕೊರೆದಡೆ ತೇದಡೆ ಹೂಸಿದಡೆ ಬೆಂಕಿಯೊಳಗೆ ಹಾಯಿಕಿದಡೆ ಪರಿಮಳ ಘನವಾಯಿತ್ತಲ್ಲದೆ ದುರ್ಗಂಧವಾಗದು, ತನ್ನಲ್ಲಿ ದುಃಖಗೊಳ್ಳದು. ಈ ತ್ರಿವಿಧದ ಗುಣದ ಪರಿಯಲ್ಲಿ; ಭಕ್ತನು ತನ್ನ ಸುಗುಣವ ಬಿಡದ ಕಾರಣ ಸದ್ಭಕ್ತನಹ ಮಾಹೇಶ್ವರನಹ ಪ್ರಸಾದಿಯಹ ಪ್ರಾಣಲಿಂಗಿಯಹ ಶರಣನಹ ಐಕ್ಯನಹ. ಇಂತು ಷಟ್‍ಸ್ಥಲದಲ್ಲಿ ಸಂಪನ್ನನಹಡೆ ಇಂತಪ್ಪ ಜಂಗಮಭಕ್ತಿಯೆ ಮೂಲವಯ್ಯ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಭಕ್ತಂಗೆ ವಂದಿಸಿ ನಿಂದಿಸಿದಲ್ಲಿಯೆ ವಿಶ್ವಾಸ ಜಾರಿತ್ತು. ವಿರಕ್ತಂಗೆ ಸುಗುಣ ದುರ್ಗುಣವ ಸಂಪಾದಿಸಿದಲ್ಲಿಯೆ ವಿವೇಕ ಹೋಯಿತ್ತಯ್ಯಾ. ಕಣ್ಣಿನಲ್ಲಿ ಮುಳ್ಳುಮುರಿದಂತೆ ಚುಚ್ಚಿ ತೆಗೆಯಬಾರದು, ವೇದನೆ ಬಿಡದು. ವರ್ತನೆಗೆ ಭಂಗ, ಸತ್ಯಕ್ಕೆ ದೂರ, ಈ ಸಮಯದ ಸಂಗ. ಎನ್ನ ಗುಣದ ಕಷ್ಟವನಳಿವುದಕ್ಕೆ ಸಂಗನಬಸವಣ್ಣನಿಂದ ಬ್ರಹ್ಮೇಶ್ವರಲಿಂಗವನರಿದವರಿಗಲ್ಲದಾಗದು.
--------------
ಬಾಹೂರ ಬೊಮ್ಮಣ್ಣ
ಜೀವಾತ್ಮನಳಿದು ಪರಮಾತ್ಮನಾಗಬೇಕೆಂಬಲ್ಲಿ ಆ ಪರಮಾತ್ಮನ ಪರವಶದಲ್ಲಿ ಬೆರೆಸಬೇಕೆಂಬುದು ಅದಾವಾತ್ಮ ? ಸ್ಥೂಲ ಸೂಕ್ಷ್ಮ ಕಾರಣ ಇಂತೀ ತನುತ್ರಯಂಗಳಲ್ಲಿ ಕೀಳ ಬಿಟ್ಟು ಮೇಲ ಬೆರಸಬೇಕೆಂಬುದು ಅದಾವಾತ್ಮ ? ಹಿಂದೆ ಮಾಡಿದ ಕರ್ಮವ ಇಂದರಿದು ಮುಂದಣ ಮುಕ್ತಿ ಎಂಬುದು ಅದಾವಾತ್ಮ ? ತಿತ್ತಿಯಲ್ಲಿ ಹೊಕ್ಕ ವಾಯು ಒತ್ತಿದಡೆ ಹೋಗಿ ಎತ್ತಿದಡೆ ತುಂಬಿ ಮತ್ತೆ ಇರಿಸಿದಡೆ ಸತ್ತಹಾಗೆಯಿಪ್ಪುದು ಅದಾವಾತ್ಮ ? ಮೃತ ಘಟ, ಚೇತನ ಘಟಂಗಳಲ್ಲಿ ಹೊರಳಿ ಮರಳುವುದು ಅದಾವಾತ್ಮ ? ಇಂತೀ ಗುಣದ ವಾಯುಧಾರಣದಿಂದ ಅಷ್ಟಾಂಗಯೋಗ ಕರ್ಮಂಗಳ ಮಾಡುವ ಯೋಗಿಗಳೆಲ್ಲರೂ ಮುಕ್ತರಪ್ಪರೆ ? ಭೂನಾಗ ಭೂಮಿಯೊಳಗಿದ್ದು ಉಸುರಿಂಗೆ ಉಬ್ಬಸವಿಲ್ಲದಂತೆ ಜಲಚರ ಜಲದಲ್ಲಿದ್ದು ಆ ಜಲವ ನಾಸಿಕ ಬಾಯಿಗೆ ಹೊಗಲೀಸದಂತೆ ನೇತ್ರ ಶ್ರೋತ್ರಂಗಳಲ್ಲಿ ಜಲವೆ ಮನೆಯಾಗಿ ಇಪ್ಪ ತೆರ. ಆವಾವ ಜಾತಿಗೂ ಆ ವಿಷಯಗೋತ್ರ ಲಕ್ಷಣಭೇದ. ಸಾಧಕ ಸಾಧನೆಗಳಿಂದ ಅಸಾಧ್ಯವ ಸಾಧಿಸಬಾರದು. ಅಸಾಧ್ಯ ವೇದ್ಯವಾದವ, ಕರ್ಮಕಾಂಡಿಯಲ್ಲ ತ್ರಿವಿಧಮಲಕ್ಕೆ ಸಲ್ಲ, ತಥ್ಯಮಿಥ್ಯವಿಲ್ಲ. ಹೆಚ್ಚು ಕುಂದೆಂಬ ಶರೀರಕ್ಕೆ ಚಿತ್ತದ ಭಾರದವನಲ್ಲ. ಸದ್ಭಕ್ತರ ಸದಮಲಯುಕ್ತರ ಸರ್ವವಿರಕ್ತರ ಷಟ್‍ಸ್ಥಲಸಂಪನ್ನರ ಸರ್ವಾಂಗಲಿಂಗಿಗಳ ಅಂಗದಲ್ಲಿ ನಿಜ ಹಿಂಗದಿಪ್ಪ ಆತ ನಿರಂಗ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು.
--------------
ಪ್ರಸಾದಿ ಭೋಗಣ್ಣ
ರಸೇಂದ್ರಿಯ ಗಂಧೇಂದ್ರಿಯ ರೂಪೇಂದ್ರಿಯ ಶಬ್ದೇಂದ್ರಿಯ ಸ್ವರ್ಶನೇಂದ್ರಿಯ ಪಂಚೇಂದ್ರಿಯಂಗಳಲ್ಲಿ ಸಲೆ ಸಂದು ಒಂದರ ಗುಣವ ಒಂದರಿಯದಂತೆ ಮತ್ತೆ ಏಕೇಂದ್ರಿಯವೆಂದು ಸಂಧಿಸಿ ಅರ್ಪಿಸುವ ಪರಿಯಿನ್ನೆಂತೊ? ಆ ಗುಣದ ಸಂಗವನರಿದಲ್ಲಿ ಇಂದ್ರಿಯಂಗಳ ಮುಖದಲ್ಲಿ ಲಿಂಗವನರಿದುದು. ಹುಟ್ಟಿನ ದೆಸೆಯಿಂದ ಹಸ್ತಕ್ಕೆ ಬಂದು ಮತ್ತೆ ಜಿಹ್ವೆ ಅರಿದಂತೆ ಅರ್ಪಿತದ ಭೇದ. ಇಷ್ಟ ಪ್ರಾಣಸಂಗ ಕಾಲಾಂತಕ ಭೀಮೇಶ್ವರಲಿಂಗವನರಿವುದಕ್ಕೆ ಅರ್ಪಿತ ಅವಧಾನಿಯ ಇರವು.
--------------
ಡಕ್ಕೆಯ ಬೊಮ್ಮಣ್ಣ
ಪೃಥ್ವಿಯ ಗುಣವ ಅಪ್ಪು ನುಂಗಿತ್ತಾಗಿ, ಪೃಥ್ವಿಯ ಗುಣವಿಲ್ಲ. ಅಪ್ಪುವಿನ ಗುಣವ ಅನಲ ನುಂಗಿತ್ತಾಗಿ, ಅಪ್ಪುವಿನ ಗುಣವಿಲ್ಲ. ಅನಲನ ಗುಣವ ಅನಿಲ ನುಂಗಿತ್ತಾಗಿ, ಅನಲನ ಗುಣವಿಲ್ಲ. ಅನಿಲನ ಗುಣವ ಆಕಾಶ ನುಂಗಿತ್ತಾಗಿ, ಆನಿಲನ ಗುಣವಿಲ್ಲ ಅನಿಲನ ಗುಣವ ತನ್ನನೆ ನುಂಗಿತ್ತಾಗಿ, ಆಕಾಶದ ಗುಣವಿಲ್ಲ. ಆಕಾಶದ ಗುಣವ ತನ್ನ ತನ್ನನೆ ನುಂಗಿತ್ತಾಗಿ, ಆಕಾಶದ ಗುಣವಿಲ್ಲ. ಇದು ಕಾರಣ, ಐದರ ಗುಣದಲ್ಲಿ ಅರ್ಪಿಸಿ, ಮುಕ್ತಿಯ ಕಂಡೆಹೆನೆಂಬ ನಿಷೆ* ನಿನಗೆಲ್ಲಿಯದೊ? ಹೊಯ್ದಿರಿಸಿದ ಹೊಯ್ಗಲದಂತೆ ಭೋಗಿಸಿಹೆನೆಂದಡೆ ಕರ್ತೃತ್ವವಿಲ್ಲ. ದರುಶನವ ಹೊತ್ತು ಹೊತ್ತು ತಿರುಗುವುದಕ್ಕಲ್ಲದೆ, ಜ್ಞಾನಕ್ಕೆ ಸಂಬಂಧಿಗಳಲ್ಲ. ಐದರ ಗುಣವಡಗಿ, ಮೂರರ ಗುಣ ಮುಗಿದು, ಆರರ ಗುಣ ಹಾರಿ, ಎಂಟರ ಗುಣದ [ನೆ]ಂಟತನವ ಬಂಧಿಸಿ, ತೋರುವುದಕ್ಕೆ ಮುನ್ನವೆ ಮನ ಜಾರಿ ನಿಂದ ಮತ್ತೆ ಮೀರಲಿಲ್ಲವಾಗಿ, ಸ್ವಯ ಚರ ಪರ ತ್ರಿವಿಧವನರಿದು ಹೊರಗಾಗಿ, ಮೂರು ಮಾಟದ ಬೆಡಗನರಿದು ವಿಚಾರಿಸದೆ, ಉದರ ಘಾತಕತನಕ್ಕೆ ಹೊಟ್ಟೆಹೊರಕರೆಲ್ಲ ಜಂಗಮವೆ ? ಅಂತಲ್ಲ, ನಿಲ್ಲಿರಣ್ಣಾ. ನೀವೆ ಲಿಂಗ ಜಂಗಮವಾಗಬಲ್ಲಡೆ ನಾನೆಂಬುದ ವಿಚಾರಿಸಿಕೊಳ್ಳಿರಣ್ಣಾ. ನೀವು ಪೂಜೆಯ ಮಾಡಿಸಿಕೊಂಬುದಕ್ಕೆ ವಿವರ: ಪೂಜೆಯ ಮಾಡುವ ಭಕ್ತಂಗೆ, ಭಾರಣೆಯ ವಿದ್ಯವ ಹೊತ್ತ ವಿಧಾತೃನಂತಿರಬೇಕು. ಜಲವ ನಂಬಿದ ಜಲಚರದಂತಿರಬೇಕು, ಆಡುವ ಪಶುವಿನ ಲಾಗಿನಂತಿರಬೇಕು. ಇಂತಿವನೆಲ್ಲವಂ ಕಳೆದುಳಿದು, ಆ ಚರಲಿಂಗಮೂರ್ತಿ ತಾನಾಗಿ ನಿಂದಾತನೆ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಚಿತ್ತವಸ್ತುವಿನಲ್ಲಿ ನಿಂದು ತನ್ನಯ ಗುಣದ ಭಿತ್ತಿಯನರಿಯಬೇಕೆಂಬರು. ಅರಿದ ಮತ್ತೆ ಹೊರಗಾದವ ಬೇರೆ ಕುರುಹಿಡಲೇಕೆ ? ಕಳೆದು ಬೀಳುವ ಫಲಕ್ಕೆ ಹಿಡಿಗಲ್ಲುಂಟೆ ? ಅರಿದು ನಿಶ್ಚಯವಾದವಂಗೆ ಬೇರೊಂದೆಡೆಯುಂಟೆ ? ಏಣಾಂಕಧರ ಸೋಮೇಶ್ವರಲಿಂಗಕ್ಕೆ ಪಡಿಪುಚ್ಚವಿಲ್ಲ.
--------------
ಬಿಬ್ಬಿ ಬಾಚಯ್ಯ
ಮೂಷಕ ಮಾರ್ಜಾಲ ಮಕ್ಷಿಕ ಇವು ಮೊದಲಾದ ಸಕಲ ಜೀವಪ್ರಾಣಿಗಳಿಗೆ ಎಲ್ಲಕ್ಕು ತನುವಿಂಗಾಚಾರ ಮನಕ್ಕರಿವು ಅರಿವಿಂಗೆ ವ್ರತವ ಬಿಡದಿದ್ದಡೇನಾಯಿತ್ತಾದಡೆ ಎನಗದೆ ಭಂಗ. ಲಿಂಗಕ್ಕು ಲಿಂಗವೆಂಬುದ ಅಂಗದ ಮೇಲೆ ಅವಧರಿಸದಿದ್ದಡೆ ನಾ ಕೊಂಡ ಪಂಚಾಚಾರಕ್ಕೆ ದೂರ. ಈ ಕಟ್ಟಿದ ತೊಡರ ಬಿಡಿಸುವುದಕ್ಕೆ ಕಟ್ಟಾಚಾರಿಗಳಾರನು ಕಾಣೆ. ಈ ಗುಣದ ದೃಷ್ಟ ಹಿಂದು ಮುಂದಿಲ್ಲ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಲೀಯವಲ್ಲದೆ.
--------------
ಅಕ್ಕಮ್ಮ
ತಟ್ಟುವ ಮುಟ್ಟುವ ಭೇದವನೊಲ್ಲ ; ಅದೇನು ಕಾರಣ? ಐದಾರು ಪ್ರಸಾದದಲ್ಲಿ ಈರೈದು ಪಾದೋದಕದ್ಲ ಸಂಪನ್ನನಾಗಿ ಅವನ ಲಿಂಗತನುವೆನ್ನರಿ ಕಂಡಿರೆ, ಅದು ಪ್ರಸಾದತನು. ಆತನ ಮಸ್ತಕದಲ್ಲಿ ಒಪ್ಪಿಪ್ಪ ಲಿಂಗದ ಗುಣಂದ, ಆತನು ಲಿಂಗತನುವಾದನೈಸಲ್ಲದೆ ಆತನು ಸಾಕ್ಷಾತ್‍ಪ್ರಸಾದತನು ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಸೀಮೆ ಸಂಬಂಧಗಳ ಮೀರಿಪ್ಪ ಮಂತ್ರಕ್ಕೆ ರಾಜಮಂತ್ರವು ತಾನು ಪಂಚಾಕ್ಷರಿ. ಪಂಚಾಕ್ಷರಿಯ ಗುಣದ, ಬಸವಾಕ್ಷರತ್ರಯದ, ಧ್ಯಾನಮೌನದ ಗುಣದ ಸತ್ವವಿಡಿದು, ಆನಂದ ತೆಂಗ ಮೂಲಮಂತ್ರಕ್ಕೀಗ ಬಸವಾಕ್ಷರತ್ರಯವು ಮಾತೆಯಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
ಕೋ ಬಾ ಎಂದಲ್ಲಿ ಆತ್ಮನ ಭೇದ, ಅಂಬಾ ಎಂದಲ್ಲಿ ಅರಿವಿನ ಭೇದ, ಧಾ ಎಂದು ನಕ್ಕಿರಿದಲ್ಲಿ ಚಿದಾತ್ಮನ ಭೇದ. ಇಂತೀ ಗುಣದ ಪಶು ಅಸುವಿನ ಬಲೆಯ ಕಾಯ್ದೊಪ್ಪಿಸಬೇಕು, ಗೋಪತಿನಾಥ ವಿಶ್ವೇಶ್ವರಲಿಂಗಕ್ಕೆ.
--------------
ತುರುಗಾಹಿ ರಾಮಣ್ಣ
ಮರದ ದೇವರಿಗೆ ಉರಿಯ ಪೂಜೆಯುಂಟೆ ? ಮಣ್ಣಿನ ಹರುಗುಲದಲ್ಲಿ ತುಂಬಿದ ತೊರೆಯ ಹಾಯಬಹುದೆ ? ತೆರಕಾರನ ನಚ್ಚಿ ಕಳನೇರಬಹುದೆ ? ಇಂತೀ ಗುಣದ ದೃಷ್ಟವ ಕಡೆಗಾಣಿಸಿದಲ್ಲಿ, ಪ್ರಮಾಣಿಸಿದಲ್ಲಿಯೂ ಏತರನು, ಹಾಂಗೆ ಬರಿಹುಂಡರ, ಆಚಾರಭ್ರಷ್ಟರ, ಅರ್ತಿಕಾರರ, ಚಚ್ಚಗೋಷಿ*ವಂತರ, ಬಹುಯಾಚಕರ, ಪಗುಡೆ ಪರಿಹಾಸಕರ, ತ್ರಿವಿಧದಲ್ಲಿ ಸೂತವನರಸುವ ವಿಶ್ವಾಸಘಾತಕರ, ಅಪ್ರಮಾಣ ಪಾತಕರ, ಭಕ್ಕಿಯ ತೊಟ್ಟಲ್ಲಿ ಭಕ್ತನೆಂದಡೆ, ವಿರಕ್ತಿಯ ತೊಟ್ಟಲ್ಲಿ ಕರ್ತುವೆಂದಡೆ, ದೀಕ್ಷೆಯ ಮಾಡಿದಲ್ಲಿ ಗುರುವೆಂದಡೆ, ತಪ್ಪ ಕಂಡಲ್ಲಿ ಎತ್ತಿ ತೋರುವೆನು. ಗುಟ್ಟಿನಲ್ಲಿ ಚಿತ್ತ ಬಿಡಲಾರದಿರ್ದಡೆ, ನಿಃಕಳಂಕ ಕೂಡಲಚೆನ್ನ ಸಂಗಮದೇವರಾದಡೂ ಎತ್ತಿಹಾಕುವೆನು.
--------------
ಹಡಪದ ರೇಚಣ್ಣ
ತರುಣ ಬೆಟ್ಟದ ನಡುವೆ ತಪಸಿ ಕುಳ್ಳಿದ್ದಹನೆ, ತರಗೆಲೆಗಳೂ ತನಗೆ ಆಧಾರವು. ಆ ಆಧಾರ ಆಧೇಯ ಮುನ್ನಿಲ್ಲ ಮೂದೇವರಿಗೆ ದೀಕ್ಷಾಗುರು ತಾನೆಯಾಗಿ, ನಾನಾ ವಿಧದ ಗುಣದ ಸ್ವಾನುಭಾವದ ಮನೆಯ ಭಾನುವಿನ ಉದಯದಲಿ ವಿಕಸವಾಗಿ, ನಾನಾ ಗುಣರೂಪ ಕಪಿಲಸಿದ್ಧಮಲ್ಲಿಕಾರ್ಜುನನ ಕೂಡಿದಾ ಸುಖತರದ ಅರೂಪುವಾಗಿ
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->