ಅಥವಾ

ಒಟ್ಟು 30 ಕಡೆಗಳಲ್ಲಿ , 14 ವಚನಕಾರರು , 24 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೇಡಿ ಮಾಡುವ ಭಕ್ತನ ಇರವೆಂತೆಂದಡೆ: ಆ ಗಳಿಗೆಯಲ್ಲಿ ಆ ದ್ರವ್ಯ ಸಂದು ಈಗ-ಆಗವೆಂಬ ಬೈಕೆಯ ಮರೆದು, ಸತಿಸುತರಿಗೆಂದೆನ್ನದೆ, ಇಂತೀ ಭಕ್ತಿಯೆ ಗತಿಯಾಗಿ, ಸತ್ಯವೆ ಒಡಲಾಗಿ, ಇಂತೀ ಗುಣದಲ್ಲಿ ನಿತ್ಯ-ಅನಿತ್ಯವ ಅಳಿದು ಮಾಡುವ ಸದ್ಭಕ್ತ ಬೇಡಿ[ದ]ನೆಂಬ ಭಾವವಿಲ್ಲ. ಆ ದ್ರವ್ಯ ಏಲೇಶ್ವರಲಿಂಗದ ಬೈಚಿಟ್ಟ ಬಯಕೆ.
--------------
ಏಲೇಶ್ವರ ಕೇತಯ್ಯ
ಕೆಸರಲ್ಲಿ ಬಿದ್ದ ಪಶುವಿನ ದೇಹವ ತೊಳೆವರಲ್ಲದೆ, ಲೋಕದೊಳಗೆ ಗಂಜಳದೊಳಗಣ ಹಂದಿಯ ದೇಹವನಾರೂ ತೊಳೆಯರು. ಗುರುಕಾರುಣ್ಯವುಳ್ಳ ಭಕ್ತರ ನಡೆವ ಗುಣದಲ್ಲಿ ಎಡಹಿದ ಶಬ್ದಕ್ಕೆ ಪ್ರಾಯಶ್ಚಿತವಂ ಕೊಟ್ಟು, ವಿಭೂತಿಯನಿಟ್ಟು, ಒಡಗೂಡಿಕೊಂಡು ನಡೆಸುವದೆ ಸದಾಚಾರ. ಗುರುಚರಲಿಂಗವನರಿಯದ ದುರಾಚಾರಿಗಳಿಗೆ ಪ್ರಾಯಶ್ಚಿತವಂ ಕೊಟ್ಟು, ವಿಭೂತಿಯನಿಟ್ಟು, ಒಡಗೂಡಿಕೊಂಡ ತೆರನೆಂತೆಂದಡೆ, ಶೂಕರನ ದೇಹವ ತೊಳೆದಡೆ, ಕೂಡೆ ಪಾಕುಳದೊಳಗೆ ಹೊರಳಿದ ತೆರನಾಯಿತ್ತೆಂದ ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ನಿಜ ಬೋಳಿಂಗೆ ಲೋಚು ಮಾಡಲೇತಕ್ಕೆ? ಚಿದ್ಘನ ಬೋಳಿಂಗೆ ವೈಭವದ ಮದನನ ಶೃಂಗಾರದ ಹಾರವೇತಕ್ಕೆ? ಸಕಲಸುಖ ಬೋಳಿಂಗೆ ಅಖಿಳ ಸುಖಗೋಷಿ* ಏತಕ್ಕೆ? ಸರ್ವಸಂಗಪರಿತ್ಯಾಗ ನಿರ್ಮಲ ಪರಮನಿರ್ವಾಣಿಗೆ ತ್ರಿಬಂಧದಲ್ಲಿ ಸಿಲುಕಿ ಕಂಡವರಿಗೆ ಕಾರ್ಪಣ್ಯಬಡಲೇತಕ್ಕೆ? ಇಂತೀ ಗುಣದಲ್ಲಿ ತಾವು ತಾವು ಬಂದುದನರಿಯದೆ ತಮಗೆ ವಂದಿಸಿ ನಿಂದಿಸುವರಂಗವನರಿಯದೆ ಮತ್ತೆ ಲಿಂಗಾಂಗಿಗಳೆಂದು ನುಡಿವ ಜಗ ಸರ್ವಾಂಗ ಭಂಡರ ಕಂಡು ನುಡಿದಡೆ ಸಮಯಕ್ಕೆ ಹಾನಿ. ಸುಮ್ಮನಿದ್ದಡೆ ಜ್ಞಾನಕ್ಕೆ ಭಂಗ. ಉಭಯವನೂ ಪ್ರತಿಪಾದಿಸದಿದ್ದಡೆ, ತನ್ನಯ ಭಕ್ತಿಗೆ ಇದಿರೆಡೆಗೇಡು. ಇದು ಚುನ್ನವಲ್ಲ, ಎನ್ನಯ ಕೇಡು. ಈ ಗುಣ ಚೆನ್ನಬಸವಣ್ಣಪ್ರಿಯ ಕಮಳೇಶ್ವಲಿಂಗ ಸಾಕ್ಷಿಯಾಗಿ.
--------------
ಶ್ರೀಗುರು ಪ್ರಭುನ್ಮುನೀಶ್ವರ
ಆವ ಬಗೆ ಭಾವ ಬಲ್ಲತನ ಅಳವಟ್ಟಲ್ಲಿ ರಾಗವಿರಾಗವೆಂಬುದಿಲ್ಲ. ಸುಖ ಸುಮ್ಮಾನ ರುಜೆ ರೋಗ ತಾಗು ನಿರೋಧ ಬಂದಲ್ಲಿ ಶೋಕ ಮೋಹಾದಿಗಳು ವರ್ತಿಸಿದಲ್ಲಿ ಜ್ಯೋತಿಯ ಬುಡದಂತೆ; ರಜ್ಜು ತೈಲ ಅಗ್ನಿ ಉಳ್ಳನ್ನಕ್ಕ ಉರಿದು ಆ ಬುಡ ಹೊದ್ದದಂತೆ. ಈ ಸಂಸಾರದ ಬುಡದಲ್ಲಿ ನಾನಾ ವಿಕಾರತ್ರಯದ ಗುಣದಲ್ಲಿ ನೀರಿನೊಳಗಿರ್ದು ಈಸುವನಂತೆ ಬಂಧ ಮೋಕ್ಷ ಕರ್ಮಂಗಳಲ್ಲಿ ದ್ವಂದ್ವಿತನಲ್ಲದೆ, ನಿಂದ ನಿಜೈಕ್ಯಂಗೆ ಹಿಂದು ಮುಂದೆಂಬ ಬಂಧವಿಲ್ಲ. ಗೋರಕ್ಷಪಾಲಕ ಮಹಾಪ್ರಭು ಸಿದ್ಧಸೋಮನಾಥ-ಲಿಂಗವಾದವಂಗೆ.
--------------
ಗೋರಕ್ಷ / ಗೋರಖನಾಥ
ಮಾತಿನಲ್ಲಿ ಗೆಲ್ಲಸೋಲದಲ್ಲಿ ಅಜಾತನನರಿಯಬಾರದು. ಶಾಸ್ತ್ರದ ಗೀತೆಯ ಗುಣದಲ್ಲಿ, ಪ್ರಖ್ಯಾತನಾದನ ನೀತಿಯ ವೇಷವನರಿಯಬಾರದು. ಉಂಟೆಂಬವನಲ್ಲಿ, ಇಲ್ಲ ಎನಲೇಕೆ ? ಇಲ್ಲ ಎಂಬವನಲ್ಲಿ, ಉಂಟು ಎನಲೇಕೆ ? ಈ ಉಭಯದ ಕಂಟಕವನೀಂಟಿಯಲ್ಲದೆ, ನಿಜವಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕಾಯದಲ್ಲಿ ಸೋಂಕ ಅಳಿದು, ಕೊಂಬುದು ಶುದ್ಧಪ್ರಸಾದಿಯ ಅಂಗ. ಕರಣಂಗಳಿಚ್ಫೆಯಿಲ್ಲದೆ ಕೊಂಬುದು ಸಿದ್ಧಪ್ರಸಾದಿಯ ಅಂಗ. ಭಾವ ತಲೆದೋರದೆ ಜನನ ಮರಣಾದಿಗಳಲ್ಲಿ ನಾಮ ರೂಪು ಕ್ರೀಗೆ ಬಾರದೆ ನಿಶ್ಚಯ ನಿಜಾಂಗಲೇಪವಾಗಿ ಕೊಂಬುದು ಪ್ರಸಿದ್ಧಪ್ರಸಾದಿಯ ಅಂಗ. ಇಂತೀ ತ್ರಿವಿಧಪ್ರಸಾದಿಗಳಲ್ಲಿ ಹೊರಗೆ ವಿಚಾರಿಸಿ, ಒಳಗ ಕಂಡು ಒಳಗಿನ ಗುಣದಲ್ಲಿ ಕಳೆ ನಿಂದು ನಿಃಪತಿಯಾಗಿ ದೃಷ್ಟ ತನ್ನಷ್ಟವಾದುದು ಸ್ವಯಂಪ್ರಸಾದಿಯ ಅಂಗ. ಇಂತಿವರಲ್ಲಿ ತಿಳಿದುಳಿದವಂಗಲ್ಲದೆ ಜಂಗಮಪ್ರಸಾದವ ಲಿಂಗಕ್ಕೆ ಕೊಟ್ಟಿಹೆನೆಂಬುದು ದೃಷ್ಟಾಂತವಲ್ಲ. ಕೊಟ್ಟು ಕೊಂಡೆಹೆನೆಂದಡೆ ಆ ಗುರುವಿಗೂ ಲಿಂಗವೆಂಬುದೊಂದು ಕುರುಹು. ಜಂಗಮಕ್ಕೂ ಲಿಂಗವೆಂಬುದೊಂದು ಕುರುಹು. ಕೊಟ್ಟು ಕೊಂಡೆಹೆನೆಂಬ ಭಕ್ತಂಗೂ ಲಿಂಗವೆಂಬುದೊಂದು ಕುರುಹು. ಇಂತೀ ಬೀಜ, ಆ ಬೀಜದಿಂದಂಕುರ. ಆ ಅಂಕುರದಿಂದ ಪತ್ರ ಕುಸುಮ ಫಲಭೋಗ. ಆ ಫಲಭೋಗದಿಂದ ಮತ್ತೆ ಬೀಜವಪ್ಪುದರಿಂದ ಕಂಡು ಇಂತೀ ತ್ರಿವಿಧಗುಣ ಲಿಂಗ ಸೋಂಕೆಂಬುದ ಕಂಡು ಒಂದರಿಂದೊಂದು ಗುಣವನರಿದೆಹೆನೆಂದಡೆ ಸಂದನಳಿದ ಸದಮಲಾನಂದವೊಂದು ಸೂತಕವೆಂದಳಿದು ಕೊಡಲಿಲ್ಲ. ಎರಡು ಸೂತಕವೆಂದು ಮುಟ್ಟಿ ಅರ್ಪಿಸಲಿಲ್ಲ. ಮೂರನೊಡಗೂಡಿ ಪ್ರಸಾದವಿದೆಯೆಂದು ಬೇರೆ ಅರ್ಪಿಸಿಕೊಂಬವರಿನ್ನಾರೊ ? ಇಂತೀ ಪ್ರಸಾದಿಯ ಪ್ರಸನ್ನವ ತಿಳಿದಲ್ಲಿ ದಹನ ಚಂಡಿಕೇಶ್ವರಲಿಂಗವು ಪ್ರಸನ್ನಪ್ರಸಾದಿಕಾಯನು.
--------------
ಪ್ರಸಾದಿ ಲೆಂಕಬಂಕಣ್ಣ
ಇಷ್ಟಲಿಂಗಕ್ಕೆ ದೃಷ್ಟಪದಾರ್ಥಂಗಳ ಅರ್ಪಿಸುವಲ್ಲಿ ಕಟ್ಟಳೆವುಂಟು, ತನ್ನ ಘಟದ ಲಕ್ಷಣವುಂಟು. ಇಂತೀ ಉಭಯವ ಪ್ರಮಾಣಿಸಿಕೊಂಡು ಅರ್ಪಣದಿಂದ ಅರ್ಪಿಸುವಲ್ಲಿ ತೃಪ್ತಿಯ ಅಭಿಲಾಷೆಯಿಂದ ಸತ್ಯ ಸದೈವರ ಸಹಪಙ್ಞ್ತಯಲ್ಲಿ ಕ್ಷುತ್ತಿನ ಅಪೇಕ್ಷಕ್ಕಾಗಿ ಮತ್ತೆ ಪುನರಪಿಯಾಗಿ ಇಕ್ಕು ತಾಯೆಂದಡೆ, ಅದು ತನ್ನ ಕ್ಷುತ್ತಿನ ಭೇದವೊ ? ಭರಿತಾರ್ಪಣದ ಯುಕ್ತಿಯ ಭಿತ್ತಿಯೊ? ಭರಿತಾರ್ಪಣವೆಂಬಲ್ಲಿ ಲಿಂಗಕ್ಕೆ ಕೊಟ್ಟಲ್ಲದೆ ಮುಟ್ಟೆನೆಂಬ ಕಟ್ಟೊ ? ಅಲ್ಲಾ, ಸಾಧಕಾಂಗಿಗಳ ಸಂಗದ ಗುಣದಿಂದ ಬಂದ ಮುಟ್ಟೊ ? ಇಂತಿವ ತಿಳಿದು, ಮನವಚನಕಾಯ ಕರಣೇಂದ್ರಿಯಂಗಳು ಮುಂತಾದ ಭೇದಂಗಳಲ್ಲಿ ಒಮ್ಮೆಗೊಮ್ಮೆ ತುತ್ತನಿಡುವಲ್ಲಿ, ಸವಿಯಾದ ರಸಾನ್ನಗಳ ಚಪ್ಪಿರಿವಲ್ಲಿ, ಅಲ್ಲಿಗಲ್ಲಿಗೆ ಉಭಯವಳಿದ ಭರಿತಾರ್ಪಣದ ತೆರನ ಕಂಡು, ಈ ಗುಣ ಜಿಹ್ವೇಂದ್ರಿಯದ ಭರಿತಾರ್ಪಣ. ಇಂತೀ ಭರಿತಾರ್ಪಣವನಂಗೀಕರಿಸಿದ ಸರ್ವವ್ಯವಧಾನಿಯ ಎಚ್ಚರಿಕೆಯ ಮುಟ್ಟು, ಮುಂದೆ ಗುಹ್ಯೇಂದ್ರಿಯಕ್ಕೆ ಸಿಕ್ಕು. ಇಂತೀ ವಿಷಯ ವ್ಯಸನಾದಿಗಳಲ್ಲಿ ಭರಿತಾರ್ಪಣದಿಂದ ಕೂಡುವ ಪರಿಯಿನ್ನೆಂತೊ ? ಇಂದ್ರಿಯ ಬಿಡುವನ್ನಕ್ಕ ಪುನರಪಿಯಾಗಿ ಅಂಗೀಕರಿಸಿಯಲ್ಲದೆ ಚಲನೆಯ ಗುಣ ಹೆರೆಹಿಂಗದು. ಅಲ್ಲಿಯ ಭರಿತಾರ್ಪಣದ ಪರಿಯ ಬಲ್ಲವನಾದಡೆ ಸರ್ವ ಎಲ್ಲಾ ಗುಣದಲ್ಲಿ ಭರಿತಾರ್ಪಣ, ಲಿಂಗಾಂಗ ಪರಿಪೂರ್ಣನೆಂಬೆ. ಇಂತೀ ಗುಣವನರಿಯದೆ ಕಂಡಕಂಡವರ ಕಂಡು ಕೈಕೊಂಡು ಈ ವ್ರತವನಂಗೀಕರಿಸಿದನಾದಡೆ ಗುರುವಿಂಗೆ ದೂರ, ಲಿಂಗ ಅವಂಗಿಲ್ಲ, ಚರಪ್ರಸಾದ ಸಲ್ಲ. ಇಂತಿವನರಿಯದೆ, ಗೆಲ್ಲಸೋಲಕ್ಕೆ ಹೋರಿಹೆನೆಂದಡೆ ಚೆನ್ನಬಸವಣ್ಣನ ಕೋರಡಿಯ ಕೊಡುವೆ. ಸಂಗನಬಸವಣ್ಣನ ಮೆಚ್ಚಿಸುವೆ. ಪ್ರಭು ನಿಜಗುಣದೇವರ ತಲೆದೂಗಿಸುವೆ. ಇದಕ್ಕೆ ಹಾಕಿದೆ ಮುಂಡಿಗೆ, ವರ್ಮದ ತಲೆಸುತ್ತು, ಎನ್ನೊಡೆಯ ಚೆನ್ನ ಚೆನ್ನಕೂಡಲ ರಾಮೇಶ್ವರಲಿಂಗ ಸಾಕ್ಷಿಯಾಗಿ.
--------------
ಭರಿತಾರ್ಪಣದ ಚೆನ್ನಬಸವಣ್ಣ
ನೆರೆಮನೆಯ ಕೇರಿಯೊಳಗೆ ಗುರುಕರುಣ ಪಾತ್ರೆಯ ಹರುಷದಿಂದ ಭಿಕ್ಷವ ತಂದೆ ಅವ್ವಾ, ಕರಣ ಶುದ್ಧಮಾಡಿ ಉಣ್ಣ ಬಾರಾ. ನೆನಹಿನ ಗುಣದಲ್ಲಿ ಕರುಣ ಕಾನನದಲ್ಲಿ ತೆರಹುಗೆಟ್ಟು ಇದ್ದೆನು ಕಂಡಾ. ಕರುಣಾಕರನೆ ಕಪಿಲಸಿದ್ಧಮಲ್ಲಿಕಾರ್ಜುನನೆಂಬ ನೆನಹಿನಲ್ಲಿ ೀಯವಾದೆನು.
--------------
ಸಿದ್ಧರಾಮೇಶ್ವರ
ಮೂರುಸ್ಥಲದಲ್ಲಿ ಎಯ್ದಿಹೆನೆಂದಡೆ, ಮಲಮೂರು ಮುಟ್ಟಲೀಸದಿವೆ ನೋಡಾ. ಆರುಸ್ಥಲದಲ್ಲಿ ಕೂಡಿಹೆನೆಂದಡೆ, ಅರಿಷಡುವರ್ಗಂಗಳು ಹಗೆಯಾಗಿವೆ ನೋಡಾ. ಐದು ಗುಣದಲ್ಲಿ ಅರಿದೆಹೆನೆಂದಡೆ, ಈರೈದು ಕೊಂದು ಕೂಗುತ್ತವೆ ನೋಡಾ. ಇವರ ಸಂದನಳಿದು ಒಂದರಲ್ಲಿ ಕೂಡೆಹೆನೆಂದಡೆ, ಇಂದ್ರಿಯಂಗಳ ಬಂಧ ಬಿಡದು. ಈ ಉಭಯಸಂದೇಹ, ನೀನು ಎನ್ನಲ್ಲಿ ಬಂದಡೆ ಬಿಡುಗು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹಲವು ಗುಳಿಯ ಬೆಟ್ಟದ ಗುಂಟಿಗೆಯಂತೆ ಸುಮುದ್ರೆ ಏಕವಾಗಿ ಹಲವು ಗುಣದಲ್ಲಿ ಸಲುವಂತೆ ಆ ಗುಣ ನೆಲೆ ಆಚಾರ್ಯನಂಗ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ಉಮಾಪತಿಯಾದ ಸಂಗ.
--------------
ಪ್ರಸಾದಿ ಭೋಗಣ್ಣ
ಅಂಗವಾರು ಗುಣದಲ್ಲಿ ಹರಿದಡೆ, ಲಿಂಗ ಮೂರೆಂದು ಕಂಡಡೆ, ಆತ್ಮ ಹಲವೆಂದು ನೋವ ಕಂಡಡೆ, ಎನ್ನ ವ್ರತಕ್ಕೆ ಅದೇ ಭಂಗ. ಒಂದ ದೃಢವೆಂದು ಹಿಡಿದಲ್ಲಿ ನಾನಾ ವ್ರತ ನೇಮ ಅಲ್ಲಿ ಸಂದಿಪ್ಪವು. ಇದಕ್ಕೆ ಸಂದೇಹವಿಲ್ಲ, ಏಲೇಶ್ವರಲಿಂಗದಾಣತಿ
--------------
ಏಲೇಶ್ವರ ಕೇತಯ್ಯ
ಓಂ ಎಂಬ ಓಂಕಾರ ಪೃಥ್ವೀತತ್ವದ ನಾಮಬೀಜ. ನ ಎಂಬ ನಕಾರ ಅಪ್ಪುತತ್ವದ ನಾಮಬೀಜ. ಮ ಎಂಬ ಮಕಾರ ತೇಜತತ್ವದ ನಾಮಬೀಜ. ಶಿ ಎಂಬ ಶಿಕಾರ ವಾಯುತತ್ವದ ನಾಮಬೀಜ. ವಾ ಎಂಬ ವಾಕಾರ ಆಕಾಶತತ್ವದ ನಾಮಬೀಜ. ಯ ಎಂಬ ಯಕಾರ ಆತ್ಮತತ್ವದ ನಾಮಬೀಜ. ಇಂತೀ ಷಡಕ್ಷರದ ನಾಮಭೇದ. ರೋಹ ಅವರೋಹವಾಗಿ, ಅವರೋಹ ರೋಹವಾಗಿ ಪೂರ್ವ ಉತ್ತರಕ್ಕೆ ಪುಂಜಕ್ಕೆ ವಿರಳವಾದಂತೆ ಉಭಯಚಕ್ಷು ಅಭಿಮುಖವಾಗಿ ಏಕಾಕ್ಷರದಲ್ಲಿ ಗುಣಿತನಾಮದಿಂದ ಹಲವಕ್ಷರ ಹೊಲಬುದೋರುವಂತೆ ಓಂಕಾರ ಬೀಜನಾಮದಲ್ಲಿ ದಶಾಕ್ಷರವಡಗಿ ದಶಾಕ್ಷರದ ಅಕಾರಾಂತದಲ್ಲಿ ಷೋಡಶಾಕ್ಷರ ಭೇದ. ಆ ಭೇದದಿಂದ ಐವತ್ತೆರಡು ಅಕ್ಷರನಾಮ ಬೀಜವಾಗಿ ಷಡಕ್ಷರ ಘಟವಾಗಿ ಪಂಚಾಕ್ಷರಿ ಪ್ರಾಣವಾಗಿ ಆ ಗುಣದಲ್ಲಿ ತೊಳಗಿ ಬೆಳಗುವ ಕಳೆ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವಾಗಿ.
--------------
ಪ್ರಸಾದಿ ಭೋಗಣ್ಣ
ತನುತ್ರಯದ ಗುಣದಲ್ಲಿ ತಾಮಸಿಯಲ್ಲ ಬಸವಣ್ಣ; ಮನತ್ರಯದಲ್ಲಿ ಮತ್ತನಲ್ಲ ಬಸವಣ್ಣ; ಮಲತ್ರಯದಲ್ಲಿ ಮಗ್ನನಲ್ಲ ಬಸವಣ್ಣ; ಲಿಂಗತ್ರಯದಲ್ಲಿ ನಿಪುಣ ಬಸವಣ್ಣ; ಐದಾರು ಪ್ರಸಾದದಲ್ಲಿ ಪ್ರಸನ್ನ ಬಸವಣ್ಣ; ಈರೈದು ಪಾದೋದಕದಲ್ಲಿ ಪ್ರಭಾವ ಬಸವಣ್ಣ; ಎರಡು ಮೂರು ಭಕ್ತಿಯಲ್ಲಿ ಸಂಪನ್ನ ಬಸವಣ್ಣ; ಮೂವತ್ತಾರು ತತ್ತ್ವದಿಂದತ್ತತ್ತ ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿ, ಫಲಪದಕ್ಕೆ ದೂರವಾದನಯ್ಯಾ ನಮ್ಮ ಬಸವಣ್ಣನು.
--------------
ಸಿದ್ಧರಾಮೇಶ್ವರ
ಪೃಥ್ವಿಯ ಗುಣವ ಅಪ್ಪು ನುಂಗಿತ್ತಾಗಿ, ಪೃಥ್ವಿಯ ಗುಣವಿಲ್ಲ. ಅಪ್ಪುವಿನ ಗುಣವ ಅನಲ ನುಂಗಿತ್ತಾಗಿ, ಅಪ್ಪುವಿನ ಗುಣವಿಲ್ಲ. ಅನಲನ ಗುಣವ ಅನಿಲ ನುಂಗಿತ್ತಾಗಿ, ಅನಲನ ಗುಣವಿಲ್ಲ. ಅನಿಲನ ಗುಣವ ಆಕಾಶ ನುಂಗಿತ್ತಾಗಿ, ಆನಿಲನ ಗುಣವಿಲ್ಲ ಅನಿಲನ ಗುಣವ ತನ್ನನೆ ನುಂಗಿತ್ತಾಗಿ, ಆಕಾಶದ ಗುಣವಿಲ್ಲ. ಆಕಾಶದ ಗುಣವ ತನ್ನ ತನ್ನನೆ ನುಂಗಿತ್ತಾಗಿ, ಆಕಾಶದ ಗುಣವಿಲ್ಲ. ಇದು ಕಾರಣ, ಐದರ ಗುಣದಲ್ಲಿ ಅರ್ಪಿಸಿ, ಮುಕ್ತಿಯ ಕಂಡೆಹೆನೆಂಬ ನಿಷೆ* ನಿನಗೆಲ್ಲಿಯದೊ? ಹೊಯ್ದಿರಿಸಿದ ಹೊಯ್ಗಲದಂತೆ ಭೋಗಿಸಿಹೆನೆಂದಡೆ ಕರ್ತೃತ್ವವಿಲ್ಲ. ದರುಶನವ ಹೊತ್ತು ಹೊತ್ತು ತಿರುಗುವುದಕ್ಕಲ್ಲದೆ, ಜ್ಞಾನಕ್ಕೆ ಸಂಬಂಧಿಗಳಲ್ಲ. ಐದರ ಗುಣವಡಗಿ, ಮೂರರ ಗುಣ ಮುಗಿದು, ಆರರ ಗುಣ ಹಾರಿ, ಎಂಟರ ಗುಣದ [ನೆ]ಂಟತನವ ಬಂಧಿಸಿ, ತೋರುವುದಕ್ಕೆ ಮುನ್ನವೆ ಮನ ಜಾರಿ ನಿಂದ ಮತ್ತೆ ಮೀರಲಿಲ್ಲವಾಗಿ, ಸ್ವಯ ಚರ ಪರ ತ್ರಿವಿಧವನರಿದು ಹೊರಗಾಗಿ, ಮೂರು ಮಾಟದ ಬೆಡಗನರಿದು ವಿಚಾರಿಸದೆ, ಉದರ ಘಾತಕತನಕ್ಕೆ ಹೊಟ್ಟೆಹೊರಕರೆಲ್ಲ ಜಂಗಮವೆ ? ಅಂತಲ್ಲ, ನಿಲ್ಲಿರಣ್ಣಾ. ನೀವೆ ಲಿಂಗ ಜಂಗಮವಾಗಬಲ್ಲಡೆ ನಾನೆಂಬುದ ವಿಚಾರಿಸಿಕೊಳ್ಳಿರಣ್ಣಾ. ನೀವು ಪೂಜೆಯ ಮಾಡಿಸಿಕೊಂಬುದಕ್ಕೆ ವಿವರ: ಪೂಜೆಯ ಮಾಡುವ ಭಕ್ತಂಗೆ, ಭಾರಣೆಯ ವಿದ್ಯವ ಹೊತ್ತ ವಿಧಾತೃನಂತಿರಬೇಕು. ಜಲವ ನಂಬಿದ ಜಲಚರದಂತಿರಬೇಕು, ಆಡುವ ಪಶುವಿನ ಲಾಗಿನಂತಿರಬೇಕು. ಇಂತಿವನೆಲ್ಲವಂ ಕಳೆದುಳಿದು, ಆ ಚರಲಿಂಗಮೂರ್ತಿ ತಾನಾಗಿ ನಿಂದಾತನೆ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ವೇದ ಶಾಸ್ತ್ರ ಪುರಾಣ ಆಗಮಂಗಳಿಗೆ ಅಭೇದ್ಯಲಿಂಗಕ್ಕೆ ಸಕಲಸಂಸಾರವೇದಿಗಳ ಶೇಷವ ಸಮರ್ಪಿಸಬಹುದೆ? ಅಲ್ಲಾಯೆಂದಡೆ ಸಮಯವಿರೋಧ. ಅಹುದೆಂದಡೆ ಆದಿಯನಾದಿಯಿಂದತ್ತ ಭೇದಿಸಿ ಕಾಣದ ಅಭೇದ್ಯಲಿಂಗಕ್ಕೆ ಸರ್ವಸಾಧನೆಯಲ್ಲಿ ಸಾವವರ ಶೇಷವ ನಾದ ಬಿಂದು ಕಳೆಗೆ ಅತೀತವಪ್ಪ ವಸ್ತುವಿಂಗೆ ನೈವೇದಿಸಬಹುದೆ? ಲಿಂಗದ ಆದ್ಯಂತವನರಿಯರು. ಗುರುಲಿಂಗಜಂಗಮದ ಭೇದಕ್ರೀಯನರಿದು ಕಂಡು ತನ್ನಿರವ ತಾ ಶೋಧಿಸಿಕೊಂಡು ತ್ರಿವಿಧವ ಅರಿತವಂಗಲ್ಲದೆ ಉಭಯಪ್ರಸಾದವ ಲಿಂಗಕ್ಕೆ ಅರ್ಪಿಸಿ ತ್ರಿವಿಧಪ್ರಸಾದವ ಒಡಗೂಡಿಕೊಂಬುದು ನಿರಂಗಿ. ನಿರಂಗಿಯ ಮಹಾಪ್ರಸಾದಿಯ ಅಂಗ ಹೀಂಗಲ್ಲದೆ ಕಂಡವರ ಕೈಕೊಂಡು ಬಂಧ ಮೋಕ್ಷ ಕರ್ಮಂಗಳೊಂದೂ ಹರಿಯದೆ ನಿಂದ ಕೀರ್ತಿ ಆಡಂಬರಕ್ಕಾಗಿ ಮಾಡಿಕೊಂಡ ನೇಮಕ್ಕೆ ಕೆಟ್ಟಡೆ ತ್ರಿವಿಧವೇದಿಗಳು ಬಾಧಿಸಿಹರೆಂದು ಕಟ್ಟುಗುತ್ತಿಗೆಯ ವರ್ತಕರಿಗೆ ತ್ರಿವಿಧಪ್ರಸಾದದ ನಿಜನಿಶ್ಚಯ ಉಂಟೆ? ಇಂತೀ ಭೇದವಿಚಾರಗಳ ತಿಳಿದು ಲಿಂಗದ ಅಂದಿನ ಸೋಂಕಿನಿಂದ ಬಂದ ಗುರು ಲಿಂಗ ಜಂಗಮದ ಅಂಗವನರಿದು ಲಿಂಗಮೂರ್ತಿ ತ್ರಿವಿಧರೂಪಾಗಿ ಬಂದುದ ತಿಳಿದು, ತನ್ನ ಮೂರ್ತಿಗೆ ತಾ ಗುರುವಾಗಿ ದೀಕ್ಷಿತನಾಗಿ ಬಂದುದ ಕಂಡು ತನ್ನ ಮೂರ್ತಿಗೆ ತಾನು ಸುಳಿದು, ಚರವಾಗಿ ನಿಂದುದ ಕಂಡು ತನ್ನ ಮೂರ್ತಿಗೆ ನಿಜಕ್ಕೆ ತಾ ಮೂರ್ತಿಯಾಗಿ ಆ ಲಿಂಗವು ಉಭಯದ ಗುಣದಲ್ಲಿ ಕುರುಹಗೊಂಡಿತ್ತು. ಇಂತೀ ನಡೆನುಡಿ ಸಿದ್ಧಾಂತವಾದವಂಗಲ್ಲದೆ ಗುರುಚರಪ್ರಸಾದ ಲಿಂಗಕ್ಕೆ ನೈವೇದ್ಯವಲ್ಲ, ದಹನ ಚಂಡಿಕೇಶ್ವರಲಿಂಗವನರಿದ ಪ್ರಸಾದಿಯ ನಿರಂಗ.
--------------
ಪ್ರಸಾದಿ ಲೆಂಕಬಂಕಣ್ಣ
ಇನ್ನಷ್ಟು ... -->