ಅಥವಾ

ಒಟ್ಟು 20 ಕಡೆಗಳಲ್ಲಿ , 7 ವಚನಕಾರರು , 15 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಡಿಸಯ್ಯ ಎನಗೆ ನಿನ್ನವರ ಸಂಗವ, ಮಾಡಿಸಯ್ಯ ಎನಗೆ ನಿನ್ನವರ ಆನಂದವ, ಆಗಿಸಯ್ಯ ನಿನ್ನವರಾದಂತೆ, ನೋಡಯ್ಯ, ನಿನ್ನವರ ಕೂಡೆ ಸಂಗವನು ಮಾಡಿಸಯ್ಯ, ಎನಗೆ ಬಚ್ಚ ಬರಿಯ ಭಕ್ತಿಯನು ಕೊಡಿಸಯ್ಯ. ಎನಗೆ ಪಾದೋದಕ ಪ್ರಸಾದವನೊಚ್ಚತ ಸಲಿಸಯ್ಯ. ನಿನ್ನವರ ಕೂಡಿ ಸಲಿಕೆಗೆ ಇರಿಸಯ್ಯ ನಿನ್ನವರ ಪಾದದ ಕೆಳಗೆ. ನಿತ್ಯನಿತ್ಯನಾಗಿ ಬರಿಸರಯ್ಯ ಎನ್ನ ಭವಭವದಲ್ಲಿ, ಬರಿಸಿ ಬರಿಸಿ ಕಾಲಕಾಮಂಗೆ ಗುರಿ ನಿಗ್ರಹಕ್ಕೆ. ಕಪಿಲಸಿದ್ಧಮಲ್ಲಿಕಾರ್ಜುನಾ, ಇನಿತನು ಇತ್ತು ಕೆಡಿಸಯ್ಯಾ ಎನ್ನ ಭವದ ಹುಟ್ಟ.
--------------
ಸಿದ್ಧರಾಮೇಶ್ವರ
ಗುರಿ ಒಂದಕ್ಕೆ ಧನು ಮೂರು, ಸರ ಹದಿನಾರು. ಒಂದೆ ಬಿಡುಮುಡಿಯಲ್ಲಿ ಎಸಲಿಕ್ಕೆ, ಗುರಿತಪ್ಪಿ ಎಚ್ಚವನಂಗ ಬಟ್ಟಬಯಲಾಯಿತ್ತು, ಅದು ತಪ್ಪಿಹೋದ ಕಾರಣ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವೆ ಗುರಿ, ಅರಿವ ಮನ ಸರವಾದ ಕಾರಣ.
--------------
ಸಗರದ ಬೊಮ್ಮಣ್ಣ
ಕಟ್ಟರಸಿಲ್ಲದ ರಾಜ್ಯದಂತೆ, ಜೀವನಿಲ್ಲದ ಕಾಯದಂತೆ ದೇವನಿಲ್ಲದ ದೇಗುಲದಂತೆ, ಪತಿಯಿಲ್ಲದ ಸತಿಯ ಶೃಂಗಾರದಂತೆ, ಗುರುವಾಜ್ಞೆಯಿಲ್ಲದೆ ತನ್ನ ಮನಕ್ಕೆ ತೋರಿದ ಹಾಂಗೆ ಮಾಡಿದ ಭಕ್ತಿ ಶಿವನ ಮುಟ್ಟದು ನೋಡಾ. ಶ್ರೀಗುರುವಿನ ವಾಕ್ಯದಿಂದಹುದೆಂದುದನು ಅಲ್ಲ ಎಂದು ಉದಾಸಿನದಿಂದ ಮಾಡಿದ ಭಕ್ತಿ ಅದು ಕರ್ಮಕ್ಕೆ ಗುರಿ ನೋಡಾ. ಶ್ರೀಗುರುವಾಜ್ಞೆವಿಡಿದು ಆಚರಿಸುವ ಸತ್ಯ ಸಾತ್ವಿಕ ಭಕ್ತಿ ಸದ್ಯೋನ್ಮುಕ್ತಿಗೆ ಕಾರಣ ನೋಡಾ. ಏಕೋಭಾವದ ನಿಷ್ಠೆ ಭವದ ವ್ಯಾಕಲುವನೆಬ್ಬಟ್ಟುವುದು ನೋಡಾ. ಅಹುದೋ ಅಲ್ಲವೋ ಎಂಬ ಮನದ ಸಂದೇಹದ ಕೀಲ ಕಳೆದು ಶಿವಲಿಂಗದೊಳಗೊಂದು ಮಾಡಿ ಬಂಧ ಮೋಕ್ಷ ಕರ್ಮಂಗಳ ಒತ್ತಿ ಒರಸುವುದು ನೋಡಾ. ಇಂದುಧರನೊಳಗೆ ಬೆರಸಿದ ಅಚಲಿತ ಮಹೇಶ್ವರಂಗೆ ನಮೋ ನಮೋ ಎಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಎಲೆ ಅಯ್ಯಾ, ಎಲೆ ನಲ್ಲ, ನಿನ್ನ ಕೈಯ ಬಿಲ್ಲ ಗುಣವ ಕಂಡೆ ನಾನಯ್ಯ. ಗುರಿ ಎರಡ ಕೊಂದಂಬನೆಸುವ ಅದ ಒಂದೆಡೆಗೆ ಬರ ಹರಿಯ ಹುಟ್ಟ ಹರಿಯಲೆಸುವ ವಿರಿಂಚನ ಬಿಡ! ಅ್ಕನ್ನದಲೆಸುವ! ಎನ್ನ ಕಪಿಲಸಿದ್ಧಮಲ್ಲಿನಾಥಯ್ಯನು!
--------------
ಸಿದ್ಧರಾಮೇಶ್ವರ
ಕಳವಳದ ಕಂದೆರವಿಗೊಳಗು ಮಾಡಿರಿ. ಹಾ! ಹಾ! ಎಲೆ ಅಯ್ಯಾ, ಎನ್ನ ವಿಕಾರದಲ್ಲಿ ಗುರಿ ಮಾಡಿರಯ್ಯಾ. ಕೋಪದ ಕಾಡುಗಿಚ್ಚಿಗೆ ಅಡವಿಯ ಗುರಿಮಾಡಿರಿ ಎನ್ನ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಕಾಲಾಗ್ನಿಯೆಂಬ ಕಾಡುಗಿಚ್ಚೆದ್ದು ಲೋಕವ ಸುಟ್ಟಿತ್ತೆಂದಡೆ ಶಿವಶರಣರಂಜರು. ಶಶಿಧರ ಮುನಿದು ಬಿಸುಗಣ್ಣ ತೆಗೆದಡೆ ಶಿವಶರಣರದ ಮನಸಿಗೆ ತಾರರು. ಅಸಮಾಕ್ಷಲಿಂಗವ ತಮ್ಮ ವಶಕ್ಕೆ ತಂದ ಶರಣರು, ಮುನಿದು ಉರಿಗಣ್ಣ ತೆಗೆದಡೆ, ಚತುರ್ದಶ ಭುವನದೊಳಗೆ ಆರೂ ಗುರಿಯಲ್ಲ. ಗುಹೇಶ್ವರಾ ನಿಮ್ಮ ಅರಿವಿನ ಬೆಳಗು ಬಿಸಿಯಾದಡೆ ಸಿದ್ಧರಾಮಯ್ಯದೇವರೆಂಬ ಶಿವಯೋಗಿಯ ಹೃದಯವೆ ಗುರಿ.
--------------
ಅಲ್ಲಮಪ್ರಭುದೇವರು
ಪಶುವಿನ ಮುಂದೆ ಮುರವುಂ ಹಾಕಿ ಅಮೃತವ ಕರಕೊಂಬಂತೆ, ಹೊನ್ನು ಹೆಣ್ಣು ಮಣ್ಣು ಮೂರೆಂಬ ಮಾಯಾಪಾಶWದಘೆ ಹಸರು ಹುಲ್ಲಂ ಎನ್ನ ಮುಂದೆ ಚೆಲ್ಲಿ, ಆಸೆಗೆಳೆಸಿ, ಶಿವಜ್ಞಾನಾಮೃತವನೊಯಿದು ಅಜ್ಞಾನಕೆನ್ನ ಗುರಿ ಮಾಡಿ ಎನ್ನ ಕಾಡುತಿದ್ದೆಯಲ್ಲ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಆರೆ ನೀನಾರೆ ಮಾಯದ ಬಲೆಯ ತೋರೆನ್ನ ಸಿಗಿಸಿ ನೀನಗಲಿದರೆ. ತ್ರಿವಿಧ ಗುಣವು ತ್ರಿವಿಧ ಮಲವು ತ್ರಿವಿಧ ತನುವು ತ್ರಿವಿಧ ಮನವು ತ್ರಿವಿಧ ಕರಣ ತ್ರಿವಿಧ ಅಗ್ನಿಗೆನ್ನನಿಕ್ಕಿ ಭಾವಿಸಿ ಕಾಡುತಿದೆ ನಿನ್ನ ಮಾಯ. | 1 | ಪಂಚವಿಂಶವು ಪಂಚಭೂತಗಳುಪವಿ ಪಂಚಕರ್ಮೇಂದ್ರಿಯಂಗಳ ಬಲೆಯು ಸಂಚನಿಕ್ಕಿ ಹರಿಹಂಚ ಮಾಡಿ ಮಾಯಾ ಪ್ರ ಪಂಚನ ಕಾಡುತಿದೆ ಗುರುವೆ. | 2 | ಹೊನ್ನಾಗಿ ಚರಿಸಿ ಹೆಣ್ಣಾಗಿ ಸುಳಿದು ಮಣ್ಣಾಗಿ ನಿಂದು ಮಾಯಾರಕ್ಕಸಿಯು ಕಣ್ಣಿಂದ ನೋಡಿ ಕಾಲ್ನೆಡಿಸಿ ಅಜಹರಿಸುರರ ಬಣ್ಣಗುಂದಿಸಿ ಕಾಡುತಿದೆ ಗುರುವೆ. | 3 | ಪಶುವಿನ ಮುಂದೆ ಗ್ರಾಸವ ಚೆಲ್ಲಲದು ಹಸುರೆಂದು ಆಸೆಗೈವಂತೆ ಮಾಯಾ ರಸ ವಿಷಯ ಅಲ್ಪಸುಖಕೆನ್ನ ಗುರಿಮಾಡಿ ವಿಷಕಂಠ ನೀನಗಲಿದೆ ಗುರುವೆ. | 4 | ಪರುಷಕೆ ಪಾಷಾಣವನೊತ್ತೆಯಿಡುವಂತೆ ಶರೀರಮಾಯೆಗೆ ಎನ್ನ ಗುರಿ ಮಾಡಿ ಹರ ನೀನಗಲದಿರು ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. | 5 |
--------------
ಹೇಮಗಲ್ಲ ಹಂಪ
ಕಾಡುಗಿಚ್ಚೆದ್ದಡೆ ಅಡವಿಯೆ ಗುರಿ. ನೀರುಗಿಚ್ಚೆದ್ದಡೆ ಸಮುದ್ರವೆ ಗುರಿ. ಒಡಲುಗಿಚ್ಚೆದ್ದಡೆ ತನುವೆ ಗುರಿ. ಕಾಲಾಗ್ನಿಯೆದ್ದಡೆ ಲೋಕಂಗಳೆ ಗುರಿ. ಶಿವಶರಣರ ಮನದಲ್ಲಿ ಕೋಪಾಗ್ನಿಯೆದ್ದಡೆ ನಿಂದಕರೆ ಗುರಿ. ಗುಹೇಶ್ವರಾ ನಿಮ್ಮ ಮಾಯದ ಹೊಡೆಗಿಚ್ಚಿಂಗೆ ನಾನು ಗುರಿಯಲ್ಲ ಕೇಳಾ.
--------------
ಅಲ್ಲಮಪ್ರಭುದೇವರು
ಕುಲವುಳ್ಳನ್ನಕ್ಕ ಭಕ್ತನಲ್ಲ, ಛಲವುಳ್ಳನಕ್ಕ ಮಹೇಶ್ವರನಲ್ಲ, ಫಲವುಳ್ಳನ್ನಕ್ಕ ಪ್ರಸಾದಿಯಲ್ಲ. ಕುಲ ಗುರುಕೃಪೆಯ ಕೆಡಿಸಿತ್ತು, ಛಲ ಲಿಂಗಾರ್ಚನೆಯ ಕೆಡಿಸಿತ್ತು. ಫಲ ದುಃಖಂಗಳಿಗೆ ಗುರಿ ಮಾಡಿತ್ತು. ಕುಲಂ ಛಲಂ ಧನಂ ಚೈವ ಯೌವನಂ ರೂಪಮೇವ ಚ | ವಿದ್ಯಾ ರಾಜ್ಯಂ ತಪಶ್ಚೈವ ತೇ ಚಾಷ್ಟಮದಾ ಸ್ಮøತಾಃ || ಎಂದುದಾಗಿ, ಒಂದು ಸುರೆಯ ಕುಡಿದವರು ಬಂಧುಬಳಗವನರಿಯರು. ಎಂಟು ಸುರೆಯ ಕುಡಿದವರು ನಿಮ್ಮನೆತ್ತಬಲ್ಲರಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ ?
--------------
ಸಂಗಮೇಶ್ವರದ ಅಪ್ಪಣ್ಣ
ಸಪ್ತವ್ಯಸನವೆಂಬ ಪಾಪಿಯ ಕೂಸಿಂಗೆ ಒಪ್ಪಿಸಿಕೊಟ್ಟು ನೀನಗಲಬೇಡವೊ ಗುರುವೆ. ಪದ : ಉರಿಗೆ ಕೊಟ್ಟ ಅರಗಿನಂದದಿ, ಕಿರಾತನ ಕೈಯ ಲಿರುವ ಎರಳೆಯ ಮರಿಯಂತೆ, ಪಂಜರದೊಳಗ ಣರಗಿಣಿಯ ಮಾರ್ಜಾಲಗೆ ಸೆರೆಗೊಡುವಂತೆ, ಪರಿಯಲೆನ್ನನು ಮನಭ್ರಮೆಯ ಸಪ್ತವ್ಯಸನಕ್ಕೆ ಗುರಿಮಾಡಿ ನೀ ಎನ್ನ ಅಗಲಿಹೋಗದೆ ಕರುಣಾ ಕರ ರಕ್ಷಿಸಯ್ಯಾ ಕೃಪೆಯಿಂದ ರಕ್ಷಿಸು ಸದ್ಗುರುರಾಯ. | 1 | ತನು ಮನ ವ್ಯಸನ ಸಮಸ್ಸಂಧಕಾರದ ಧನವ್ಯಸನದ ಬಯಕೆಯ ರಾಜ್ಯವ್ಯಸನದ ವಿನಯದುತ್ಸಾಹ ವ್ಯಸನವಿಶ್ವಾಸದಿಂದ ಪರರ ಅನುದಿನ ಆಶ್ರಯಿಸುವ ಸೇವಕ ವ್ಯ ಸನಗುಣವ ಕೊಟ್ಟು ಸಪ್ತವ್ಯಸನಕ್ಕೆ ಗುರಿ ಮಾಡಿ ತ್ರಿಣಯ ಸದ್ಗುರುರಾಯ ಅಗಲದಿರಯ್ಯ. | 2 | ಓಡಿನಲ್ಲುಂಟೆ ಕನ್ನಡಿಯ ನೋಟವು ? ಭವ ಕಾಡೊಳು ತಿರುಗಿಯೆ ಸತ್ತು ಹುಟ್ಟುತಿಹೆ ; ಮೂಢನಪಾಯವ ಕಾಯೋ ದೇವ, ನಿಮ್ಮೊ ಳಾಡಲು ಹುರುಳಿಲ್ಲ, ಎನ್ನ ಗುಣವನು ನೋಡಿ ಕಾಡದೆ ಬಿಡಬೀಸದೆ ಕುಮಾರನ ಕೂಡಿಕೊ ಗುರು ಪಡುವಿಡಿ ಸಿದ್ಧಮಲ್ಲೇಶ. | 3 |
--------------
ಹೇಮಗಲ್ಲ ಹಂಪ
ಹಿಂದಣಜನ್ಮದಲ್ಲಿ ಗುರುವ ಮರೆದ ಕಾರಣ, ಹಿಂದಣಜನ್ಮದಲ್ಲಿ ಲಿಂಗವ ಮರೆದ ಕಾರಣ, ಹಿಂದಣಜನ್ಮದಲ್ಲಿ ಅರುಹು ಕುರುಹೆಂಬುದನರಿಯದಕಾರಣದಿಂ ಸಂಸಾರಬಂಧನಕ್ಕೆ ಗುರಿಯಾದೆನಯ್ಯಾ. ನಿನ್ನವರ ಮರೆದ ಕಾರಣದಿ ಅನ್ಯ ಭವಕ್ಕೆ ಎನ್ನ ಗುರಿ ಮಾಡಿದೆ. ಇನ್ನಾದರೂ ನಿಮ್ಮ ಸೊಮ್ಮೆಂಬ ಗುರುಲಿಂಗಜಂಗಮವ ಮರೆಯೆ. ಮರೆದರೆ ಮೂಗಿನ ಧಾರೆಯ ತೆಗೆವೆನು. ಸರ್ವ ಅಪರಾಧಿ, ಎನ್ನವಗುಣವ ನೋಡದೆ ಕಾಯೋ ಕಾಯೋ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಭವಭಾರಿ ಬಂಡಿ ಎತ್ತಿನ ಕಣ್ಣಿ ಹರಿದ ಕಾರಣ ನಿನ್ನ ಅರಿವಿನ ಬೆಳಗು ಗುರಿ ತಾಗಿ ಬಿದ್ದಡೂ ಎತ್ತು ಅತ್ತ ಹೋಗಿಯೆ ಮರಳಿತು. ಆ ಹೆಜ್ಜೆಯನು ಏಕೆ ಇಕ್ಕರೊ ? ಎತ್ತ ಎತ್ತನೆ ಹೊತ್ತು ಮೀರಿ ಓಡಿತ್ತಾಗಿ ಹಿಂದೆ ಅರಸುವರಿಲ್ಲ. ರೇಕಣ್ಣಪ್ರಿಯ ನಾಗಿನಾಥನ ಗೊಗ್ಗನೆತ್ತಿಗೆ ಹಗ್ಗವಿಲ್ಲ.
--------------
ಬಹುರೂಪಿ ಚೌಡಯ್ಯ
ಕಲ್ಲ ಶರೀರವ ಧರಿಸಿ ಶಿಲಾಭೋಗಕ್ಕೆ ಬಂದವರು ಕೆಲಬರು: ಕಾಯಕಂಥೆಯ ತೊಟ್ಟು ಕರ್ಮಭೋಗಕ್ಕೆ ಬಂದವರು ಕೆಲಬರು. ಕಲ್ಲಕಂಥೆಯ ತೊಟ್ಟು ಲಿಂಗವೆನಿಸಿಕೊಂಡು ಕಾಯಕಂಥೆಯ ತೊಟ್ಟು ಜಂಗಮವೆನಿಸಿಕೊಂಡು ಲೋಗರ ಉಪಚಾರಕ್ಕೆ ಬಂದ ಭೋಗರುದ್ರರೆಲ್ಲ ಆಗು ಹೋಗಿಂಗೆ ಗುರಿ ನೋಡಾ. ಅದೇನು ಕಾರಣವೆಂದರೆ: ತಮ್ಮಾದಿಯ ಶಿವತತ್ವವ ಭೇದಿಸಿ ಘನಲಿಂಗಪದಸ್ಥರು ತಾವೆಂದೆರಿಯದೆ, ಶಿವಪದಕ್ಕೆ ಅನ್ಯವಾದ ಗಣೇಶ್ವರಪದವೆಂಬ ಗರ್ವಪರ್ವತವಡರಿ ಕೆಟ್ಟರು ನೋಡ, ತಮ್ಮ ನಿಜಪದವನರಿಯದೆ. ಇದು ಕಾರಣ, ಮಹಾಲಿಂಗಗುರು ಶಿವಸಿದ್ಧೇಶ್ವರಪ್ರಭುವೆಂಬ ನಿಜಲಿಂಗಜಂಗಮವೊಂದಾದ ಪದವು [ಈ] ಒಂದರ ಹಾದಿಯದಲ್ಲ ಬಿಡಾ, ಮರುಳೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅನ್ನ ಉದಕದ ದೆಸೆಯಿಂದ ನಿದ್ರೆ, ನಿದ್ರೆಯಿಂದ ಕಾಮ, ಕಾಮದಿಂದ ಅಜ್ಞಾನ, ಅಜ್ಞಾನದಿಂದ ಕರ್ಮ, ಕರ್ಮದಿಂದ ಮಾಯಾತಮಂಧಕ್ಕೆ ಗುರಿ. ಮಾಯಾತಮಂಧದಿಂದ ಮರಣಕ್ಕೆ ಗುರಿಮಾಡಿ ಸತ್ತು ಸತ್ತು ಹುಟ್ಟಿಸಿ, ಎನ್ನ ಭವಾರಣ್ಯದೊಳಗೆ ಕಣ್ಗಾಣದಂಧಕನಂತೆ ತಿರುವಿ ತಿರುವಿ ಕಾಡುತಿರ್ದೆಯಲ್ಲ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
-->