ಅಥವಾ

ಒಟ್ಟು 22 ಕಡೆಗಳಲ್ಲಿ , 11 ವಚನಕಾರರು , 22 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

`ಓಂ' ಎಂದು ವೇದವನೋದುವ ಮಾದಿಗಂಗೆ ಸಾಧ್ಯವಾಗದು ವಿಭೂತಿ. ಪುರಾಣವನೋದುವ ಪುಂಡರಿಗೆ ಸಾಧ್ಯವಗದು ವಿಭೂತಿ ಶಾಸ್ತ್ರವನೋದುವ ಸಂತೆಯ ಸೂಳೆಮಕ್ಕಳಿಗೆ ಸಾಧ್ಯವಾಗದು ವಿಭೂತಿ ಅಂಗಲಿಂಗಸಂಬಂಧವನರಿದ ಶಿವಜ್ಞಾನಿಗಳಿಗಲ್ಲದೆ ಸಾಧ್ಯವಾಗದು ವಿಭೂತಿ. ಅಂಗೈಯೊಳಗೆ ವಿಭೂತಿಯನಿರಿಸಿಕೊಂಡು, ಅಗ್ಘಣಿಯ ನೀಡಿ ಗುಣಮರ್ದನೆಯ ಮಾಡಿ ಲಿಂಗ ಉಚ್ಛಿಷ್ಟನಂಗೈದು ? ಲಿಂಗ ಸಮರ್ಪಣಂಗೈದು, ಷಡಕ್ಷರಿಯ ಸ್ಮರಣೆಯಂಗೈದು ಭಾಳದೊಳು ಪಟ್ಟವಂ ಕಟ್ಟಿ, ವಿಭೂತಿಯ ಧಾರಣಂಗೈದು ಹಸ್ತವ ಪ್ರಕ್ಷಾಲಿಸುವವ ಗುರುದ್ರೋಹಿ ಲಿಂಗದ್ರೋಹಿ ಜಂಗಮದ್ರೋಹಿ. ಶ್ರೀವಿಭೂತಿಯ ಲಲಾಟಕ್ಕೆ ಧರಿಸಿ ಹಸ್ತವ ತೊಳೆವ ಪಾತಕರ ಮುಖವ ನೋಡಲಾಗದು. ಶ್ರೀವಿಭೂತಿಯನು ಶಿವನೆಂದು ಧರಿಸುವುದು, ಪರಶಿವನು ತಾನೆಂದು ಧರಿಸುವುದು. ಸಾಕ್ಷಿ:ಕೃತ್ವೇವ ಜಲಮಿಶ್ರಂತು ಸಮುಧೃತ್ಯಷಡಕ್ಷರಿ ಧಾರಯೇತ್ ತ್ರಿಪುಂಡ್ರಂತು ಮಂತ್ರೇಣ ಮಂತ್ರಿತಂ'' ಶ್ರೀವಿಭೂತಿಯ ಧರಿಸಿ ಹಸ್ತವ ತೊಳದಾತಂಗೆ ದೇವಲೋಕ ಮತ್ರ್ಯಲೋಕಕ್ಕೆ ಸಲ್ಲದೆಂದುದಾಗಿ ನಿಮ್ಮಾಣೆ ನಿಮ್ಮ ಪ್ರಮಥರಾಣೆ, ನಮ್ಮ ಗುಹೇಶ್ವರಲಿಂಗವು ತಾನಾದ ವಿಭೂತಿ ಕಾಣಾ ಸಂಗನಬಸವಣ್ಣ.
--------------
ಅಲ್ಲಮಪ್ರಭುದೇವರು
ಎಲೆ ಶಿವನೆ, ನೀನು ಎನ್ನ ಮೆಚ್ಚಿ ಕೈವಿಡಿದ ಕಾರಣ ಎಮ್ಮವರು ಸಕಲಗಣಂಗಳ ಸಾಕ್ಷಿಯಮಾಡಿ ನಿನಗೆ ಎನ್ನ ಮದುವೆಯಮಾಡಿಕೊಟ್ಟರು. ನೀನು ಎನ್ನನಗಲಿದಡೆ ಗುರುದ್ರೋಹಿ. ಆನು ನಿನ್ನನಗಲಿದಡೆ ಸಮಯಕ್ಕೆ ಹೊರಗು. ಅದೆಂತೆಂದೊಡೆ : ಮುನ್ನ ಶ್ರೀಗುರುಸ್ವಾಮಿ ಎನ್ನ ಪ್ರಾಣದೊಳಗೆ ನಿನ್ನ ಪ್ರಾಣವ ಹುದುಗಿಸಿ, ನಿನ್ನ ಪ್ರಾಣದೊಳಗೆ ಎನ್ನ ಪ್ರಾಣವ ಹುದುಗಿಸಿ ಎಂದೆಂದೂ ಅಗಲಬೇಡೆಂದು ನಿರೂಪಿಸಿದನು. ಆ ನಿರೂಪವನು ಮಹಾಪ್ರಸಾದವೆಂದು ಕೈಕೊಂಡ ಬಳಿಕ ನಾವಿಬ್ಬರು ಎಂದೆಂದಿಗೂ ಅಗಲದಿರಬೇಕಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ವಸ್ತ್ರ ಬಲುಹಿನಲ್ಲಿ ಕಟ್ಟು, ಸೆಜ್ಜೆಯ ಬಲುಹಿನಲ್ಲಿ ಕಟ್ಟು. ಶಿವದಾರವ ಬಲುಹಿನಲ್ಲಿ ಕಟ್ಟೆಂದು ಹೇಳೂದು ಉಪದೇಶವೆ ? ಮತ್ತೆ ಕಟ್ಟುವರಿವುಂಟಾಗಿ, ಅಷ್ಟವಿಧಾರ್ಚನೆ, ಷೋಡಶೋಪಚಾರ, ಕಾಲನೇಮವೆಂದು ಹೇಳೂದು ದೀಕ್ಷೆಯೆ ? ಮತ್ತೆ ಕಾಲನೇಮವುಂಟಾಗಿ, ಇದನರಿಯದೆ ಹೇಳಿದಾತ ಶಿವದ್ರೋಹಿ. ಕೇಳಿದಾತ ಗುರುದ್ರೋಹಿ. ಐಕ್ಯವಿಲ್ಲದ ಮಾಟ, ಸಯಿದಾನದ ಕೇಡು. ಕೂಡಲಚೆನ್ನಸಂಗಯ್ಯಾ ಆ ಗುರುಶಿಷ್ಯರಿಬ್ಬರೂ ಉಭಯಭ್ರಷ್ಟರು.
--------------
ಚನ್ನಬಸವಣ್ಣ
ಹರಬೀಜ ನಾನಾದಡೆ ಹದನವರಿಯದಿರ್ಪೆನೆ ಗುರುವೆ? ಪರಮ ಭೃತ್ಯ ನಾನಾದಡೆ ಪ್ರಾಣದಿಂದಿರ್ಪೆನೆ ಗುರುವೆ? ನರಬೀಜ ನಾನಾದೆ, ಗುರುದ್ರೋಹಿ ನಾನಾದೆ, ಇನ್ನೆಂತು ಶ್ರೀಗುರು ಕಪಿಲಸಿದ್ಧಮಲ್ಲಿಕಾರ್ಜುನಾ?
--------------
ಸಿದ್ಧರಾಮೇಶ್ವರ
ಆಚಾರಶೂನ್ಯ ಅಂಗ ಗುರುದ್ರೋಹಿ ಮಾಡಲಾಗದು ಭಕ್ತಿಯ. ಆಚಾರಶೂನ್ಯ ಮನ ಲಿಂಗದ್ರೋಹಿ ಮಾಡಲಾಗದು ಪೂಜೆಯ. ಆಚಾರಶೂನ್ಯ ಭಾವ ಜಂಗಮದ್ರೋಹಿ ಮಾಡಲಾಗದು ದಾಸೋಹವ. ಆಚಾರತ್ರಯವಿರಹಿತವಾದ ಅನಾಚಾರ ಭ್ರಷ್ಟರುಗಳ ಶ್ರೇಷ್ಠರೆಂದು ಪೂಜೆಯ ಮಾಡಿದರೆ ಭವತಪ್ಪದು ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪ್ರಸಾದ ಪ್ರಸಾದವೆಂದು ಹೆಸರಿಟ್ಟುಕೊಂಡುಂಬಿರಿ, ಪ್ರಸಾದವಾವುದು? ಓಗರವಾವುದು? ಬಲ್ಲವರು ನೀವು ಹೇಳಿರೇ. ಕೈಯಲಿಕ್ಕಿದವ ಶಿವದ್ರೋಹಿ, ಕೈಯಾಂತು ಕೊಂಡವ ಗುರುದ್ರೋಹಿ, ಕಾಯವ ಕಳೆದು ಕಾಯಪ್ರಸಾದಿ, ಜೀವವ ಕಳೆದು ಜೀವಪ್ರಸಾದಿ, ಪ್ರಾಣವ ಕಳೆದು ಪ್ರಾಣಪ್ರಸಾದಿ. ಕಾಯ ಜೀವ ಇಂದ್ರಿಯ ವಿರೋಧಿಗಲ್ಲದೆ ಮತ್ತಾರಿಗೂ ಆಗದು. ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣಂಗಲ್ಲದೆ ಮತ್ತಾರಿಗೂ ಆಗದು.
--------------
ಚನ್ನಬಸವಣ್ಣ
ಗುರುಪ್ರಸಾದವೆಂಬಿರಿ, ಲಿಂಗಪ್ರಸಾದವೆಂಬಿರಿ, ಅಚ್ಚಪ್ರಸಾದವೆಂಬಿರಿ, ಭರಿತಬೋನವೆಂಬಿರಿ. ಗುರುಪ್ರಸಾದವೆಂಬುದನು ಲಿಂಗಪ್ರಸಾದವೆಂಬುದನು ಅಚ್ಚಪ್ರಸಾದವೆಂಬುದನು ಭರಿತಬೋನವೆಂಬುದನು ಅರಿವವರು ನೀವು ಕೇಳಿರೆ; ಶ್ರೀಗುರುಕಾರುಣ್ಯವುಳ್ಳ ಶಿವಭಕ್ತರು ಆ ಶ್ರೀಗುರುಲಿಂಗಕ್ಕೆ ತನುಕ್ರೀಯಿಂದ ಪಾದಾರ್ಚನೆಯ ಮಾಡಿ ಪಾದತೀರ್ಥಮಂ ಕೊಂಡು, ಷಡುಸಮ್ಮಾರ್ಜನೆಯ ಮಾಡಿ ರಂಗವಾಲಿಯನಿಕ್ಕಿ, ಶ್ರೀಗುರುವ ಲಿಂಗಾರ್ಚನೆಗೆ ಕುಳ್ಳಿರಿಸಿ ಅಷ್ಟವಿಧಾರ್ಚನೆ ಷೋಡಶೋಪಚಾರವಂ ಮಾಡಿ ಪುರುಷಾಹಾರ ಪ್ರಮಾಣಿನಿಂದ ನೀಡಿ, ತೆರಹು ಮರಹಿಲ್ಲದೆ ಆ ಶ್ರೀಗುರುವಾರೋಗಣೆಯಂ ಮಾಡಿದ ಬಳಿಕ ಹಸ್ತಮಜ್ಜನಕ್ಕೆರೆದು, ಒಕ್ಕುಮಿಕ್ಕುದ ಕೊಂಡುಂಬುದು ಗುರುಪ್ರಸಾದ. ಇಂತಲ್ಲದೆ ಕೈಯೊಡ್ಡಿ ಬೇಡುವಾತ ಗುರುದ್ರೋಹಿ, ಕೈ ನೀಡಿದಡೆ ಇಕ್ಕುವಾತ ಶಿವದ್ರೋಹಿ. ಇನ್ನು ಲಿಂಗಪ್ರಸಾದವನರಿವ ಪರಿ; ಹಿಂದಣ ಪರಿಯಲಿ ಪುರುಷಾಹಾರ[ವ] ಪ್ರಮಾಣಿನಿಂದ ತೆರಹು ಮರಹಿಲ್ಲದೆ ಭರಿತಬೋನವಾಗಿ ಗಡಣಿಸಿ, ತಟ್ಟುವ ಮುಟ್ಟುವ ಮರ್ಮವನರಿತು, ಸಂಕಲ್ಪ ವಿಕಲ್ಪವಿಲ್ಲದೆ ಭಾವಶುದ್ಧನಾಗಿ, ಏಕಚಿತ್ತದಿಂದ ಮನಮುಟ್ಟಿ ಲಿಂಗಕ್ಕೆ ನೈವೇದ್ಯಮಂ ತೋರಿ, ಸೀತಾ?ಮಂ ಕೊಟ್ಟು, ಸೆಜ್ಜೆಯರಮನೆಗೆ ಬಿಜಯಂಗೈಸಿಕೊಂಡು ಪಂಚೇಂದ್ರಿಯ ಸಪ್ತಧಾತು ತೃಪ್ತರಾಗಲ್ಕೆ, ಪ್ರಸಾದಭೋಗವಂ ಮಾಡುವುದು ಲಿಂಗಪ್ರಸಾದ. ಅಖಂಡಿತವಾದಡೆ ಇರಿಸಿ ಲಿಂಗಪ್ರಸಾದಿಗಳಿಗೆ ಕೊಡುವುದು. ಕೊಡದೆ ಛಲಗ್ರಾಹಕತನದಲ್ಲಿ ಕೊಂಡು ಒಡಲ ಕೆಡಿಸಿಕೊಂಡಡೆ ಪಂಚಮಹಾಪಾತಕ. ಅವನ ಮುಖವ ನೋಡಲಾಗದು ಕೂಡಲಚೆನ್ನಸಂಗಯ್ಯ.
--------------
ಚನ್ನಬಸವಣ್ಣ
ಆದಿಯನಾದಿ ಆಚಾರವ ಕಾಣದೆ, ಸಮಮಾನದ ಲಿಂಗದ ಘನವ ತಿಳಿಯದೆ, ದಾಸಿಯ ಸಂಗಂಗೆಯ್ವ ಜಂಗಮಾಚಾರ್ಯಜ್ಞಾನಪುರುಷರು ಚಿತ್ತೈಸಿ, ಶೈವಾರಾದನೆಯ ಸ್ಥಲದಂತೆ ನಡೆದು, ಗಳಹಿಕೊಂಡು ಇಪ್ಪಿರಿ. ಅಂಗದನಿತ ದಾಸೆಗೆ, ಪಂತಿಯ ಗಡಣದ ಹಸುವಿನಾಸೆಗೆ, ಕಾಂಚಾಣದ ಪಂತಿಯಾಸೆಗೆ, ಸ್ಥಲ ಜಂಗಮಸ್ಥಲವಾಸಿಯ ಗಡಣದಾಸೆಗೆ, ಪಂತಿ ಪಾದಾರ್ಚನೆಯ ಹಿರಿಯತನದ ಗಡಣ ಗಮಕದಾಸೆಗೆ, ಕೃತಿಯ ದ್ವೆ ೈತವ ನಟಿಸುವ ಪಂಚಮಹಾಪಾತಕದೇವರ ದೇವತ್ವದ ಬಲ್ಲರು ಕೇಳಿರಣ್ಣ. ನಾ ದೇವತಾದೇವನೆಂಬುದೊಂದು ಸಮದೇವತ್ವದ ಗಳಹುವಿರಿ. ಅಂಗದಲ್ಲಿ ಸೋವಿ ಮಾತ್ರವೆಂಬ ಸ್ತ್ರೀಯ ಆಲಿಂಗನಂಗೈದು ಗಳಹುವಿರಿ. ಶ್ರುತಿಃ ಅರ್ಧವಣಿ ಕಥಃ ಸೋವಿ ವಚಃ ಬಾದಿನಿ ಪರ್ವಣಃ | ಪಾಪಿಷ್ಟಾ ದುಷ್ಟದ್ರೋಹಿ ಚಾ ಪಾಪಿಷ್ಟ ಗುರುದ್ರೋಹಿ ಚಾ | ಗುರುಶಿವಚ್ಚೇದನ ತತ್ ಗುರುಷಾಮಾ ಚಿ ಅಪಹಿನ್ | ಗುರುಬಂಧನ ಗ್ರಾಹಿ ಚಃ | ಇಂತೆಂದುದಾಗಿ, ಸೋವಿಮಾತ್ರವೆಂದು ವಾಗದ್ವೈತವನುಂಟುಮಾಡಿ ಕಂಡು, ತಮ್ಮ ಸ್ವಯ ಇಚ್ಛೆಯ ಭಾವಕ್ಕೆ ಗಳಹಿಕೊಂಡು, ಹಿರಿಯರ ಮರೆಯಲ್ಲಿ ಕುಳಿತು, ಒಡಲ ಹೊರೆವ ಶೂಕರನಂತೆ, ತುಡುಗುಣಿತನಕ್ಕೆ ಗಡಣಿಸಿಕೊಂಡು ಹಿರಿಯರೆಂಬಿರಿ. ಶಿವಾಚಾರ ಃ ಗಿರಿಜಾನಾಥಂಗೆ ಗೌರಿ ತ್ರಿವಿಧವಿಧಮೇಕಾರ್ಥಕಲ್ಯಾಣ, ಗಿರಿಜಾಧಾರಿಯಲ್ಲಿ ಶಿವನ ದೇವತ್ವ ಕೆಟ್ಟಿತ್ತೆ ಪಾತಕರಿರಾ? ಸೋವಿಯ ಆಲಿಂಗನಂಗೈದು, ಚುಂಬನ ಕರ ಉರ ಜಘನ ಯೋನಿಚಕ್ರವ ಕೂಡಿ ನೆರೆದ ಬಳಿಕ, ಪ್ರಾತಃಕಾಲದಲ್ಲಿ ಹನ್ನೆರಡು ಜಂಗಮದೇವರಿಗೆ ಹನ್ನೆರಡು ಸುವರ್ಣಗಾಣಿಕೆಯನಿಕ್ಕಿ, ಹನ್ನೆರಡು ದ್ವಿವಸ್ತ್ರ, ಹನ್ನೆರಡು ತೆಂಗಿನಕಾಯಿಂದ ಹನ್ನೆರಡು ಜಂಗಮದೇವರಿಗೆ ಈ ಪರಿಯಾರ್ಥ ಅರ್ಚನೆಯ ಮಾಡಿದರೆ, ನವಭೋಗದೊಳಗಣ ತ್ರಿವಿಧ ಭಾಗೆಯ ಕಲೆಯಿರಣ್ಣ. ಅರಿದು ಮಾಡಿ ಮರದಂತೆ, ಬೆಬ್ಬನೆ ಬೆರೆತುಕೊಂಡಿರುವಾತ ಹಿರಿಯನಲ್ಲ. ಆತ ಗುರುವಲ್ಲ ಲಿಂಗವಲ್ಲ ಜಂಗಮವಲ್ಲ ಪಾದೋದಕ ಪ್ರಸಾದದೊಳಗಲ್ಲ. ಅವ ಅಮೇಧ್ಯ ಸುರ ಭುಂಜಕನು. ಇಂತೆಂಬ ಶ್ರುತಿಯ ಮೀರಿ ಆಚರಿಸುವ, ಬ್ರಹ್ಮರಾಕ್ಷಸ. ನವಕೋಟಿ ಯೋನಿಚಕ್ರದಲ್ಲಿ ರಾಟಾಳದ ಘಟದಂತೆ ತಿರುಗುವನು. ಆದಿಯ ವಚನದ ಸಮ್ಮತವಿದು, ಸೋವಿಯ ಸಂಗ ಆಲಿಂಗನಂಗೈವಿರಿ. ಸೋವಿಯ ಸಂಗ ಆಲಿಂಗನಂಗೈದವ, ಶತಕೋಟಿ ಶೂಕರಯೋನಿಯಲ್ಲಿ ಬಪ್ಪನು. ನವಕೋಟಿ ಗಾರ್ಧಭಯೋನಿಯಲ್ಲಿ ಬಪ್ಪನು. ಶತಕೋಟಿ ಕುಕ್ಕುಟಯೋನಿಯಲ್ಲಿ ಬಪ್ಪನು. ಸಚರಾಚರಯೋನಿ ಯೋನಿನವಕೋಟಿ ತಪ್ಪದು. ಅವಂಗೆ ಜನ್ಮ ಜನ್ಮಾಂತರದಲ್ಲಿ ಬಪ್ಪುದು ತಪ್ಪದು. ಇಂತಿದನರಿದು ಮರೆದೆಡೆ, ದೇವ ಮತ್ರ್ಯ ತಪರ್ಲೋಕಕ್ಕೆ ಸಲ್ಲಸಲ್ಲ, ಅಲ್ಲ ನಿಲ್ಲು, ಮಾಣು, ಹೊರಗಯ್ಯ. ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಹೊಯ್ಯೋ ಡಂಗುರವ, ದೇವರಾಯ ಸೊಡ್ಡಳಾ.
--------------
ಸೊಡ್ಡಳ ಬಾಚರಸ
ಅರ್ಥೇಷಣ ಪುತ್ರೇಷಣ ದಾರೇಷಣವೆಂಬ ಈಷಣತ್ರಯಂಗಳನೆ ಬಿಟ್ಟು, ಮಂಡೆ ಬೋಳಾದ ಬಳಿಕ ಮರಳಿ ಹೊನ್ನಿಂಗೆರಗಿದಡೆ ಗುರುದ್ರೋಹಿ, ಹೆಣ್ಣಿಂಗೆರಗಿದಡೆ ಲಿಂಗದ್ರೋಹಿ ಮಣ್ಣಿಂಗೆರಗಿದಡೆ (ಜಂಗಮದ್ರೋಹಿ), ಆತ ಪೂರ್ವಾಚಾರಿಯಲ್ಲ. ``ಸ್ಥಾವರಂ ಭಿನ್ನದೋಷೇಣ ವ್ರತಭ್ರಂಶೇನ ಜಂಗಮಃ ಉಭಯೊರ್ಭಿನ್ನಭಾವೇನ ನ ಚಾರ್ಚಾ ನ ಚ ವಂದನಂ ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ, ಬಸವಣ್ಣನೊಬ್ಬನೆ ಭಕ್ತ; ಪ್ರಭುವೆ ಜಂಗಮ
--------------
ಚನ್ನಬಸವಣ್ಣ
ಪ್ರಸಾದ ಪ್ರಸಾದವೆಂದು ಹೆಸರಿಟ್ಟು ನುಡಿವವರಿಗೆ ಪ್ರಸಾದವೆಲ್ಲಿಯದೋ? ಮನಮುಟ್ಟಿ ಕೊಂಡುದು ಪ್ರಸಾದವಲ್ಲ, ತನುಮುಟ್ಟಿ ಕೊಂಡುದು ಪ್ರಸಾದವಲ್ಲ, ಧನಮುಟ್ಟಿ ಕೊಂಡುದು ಪ್ರಸಾದವಲ್ಲ. ಅವು ಏಕಾಗಿ ತ್ರಿವಿಧಸಾಹಿತ್ಯದಲ್ಲಿ ಮುಟ್ಟಿ ಕೊಂಡುದು ಪ್ರಸಾದವಲ್ಲ. ಇಕ್ಕುವವ ಶಿವದ್ರೋಹಿ, ಕೊಂಬವ ಗುರುದ್ರೋಹಿ. ಇದು ಕಾರಣ ಕೂಡಲಚೆನ್ನಸಂಗಯ್ಯನ ಪ್ರಸಾದ ಘನಕ್ಕೆ ಮಹಾಘನ ನಾನೇನೆಂದು ಬಣ್ಣಿಸುವೆ.
--------------
ಚನ್ನಬಸವಣ್ಣ
ಪರದೈವ ಪರಧನ ಪರಸ್ತ್ರೀ ಪರನಿಂದೆ ಪರಹಿಂಸೆಯಲ್ಲಿ ಚರಿಸುವ ಹೊಲೆಯರಿಗೆ, ಕ್ರಿಯಾದೀಕ್ಷೆಯ ಮಾಡುವನೊಬ್ಬ ಗುರುದ್ರೋಹಿ ನೋಡಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಭಕ್ತರಲ್ಲಿ ಬಣ್ಣವನರಸುವಾತನೆ ಆಚಾರದ್ರೋಹಿ. ಜಂಗಮದಲ್ಲಿ ಜಾತಿಯನರಸುವಾತನೆ ಗುರುದ್ರೋಹಿ. ಪಾದೋದಕದಲ್ಲಿ ಸೂತಕವ ಪಿಡಿವಾತನೆ ಲಿಂಗದ್ರೋಹಿ. ಪ್ರಸಾದದಲ್ಲಿ ರುಚಿಯನರಸುವಾತನೆ ಜಂಗಮದ್ರೋಹಿ. ಇಂತೀ ಚತುರ್ವಿಧದೊಳಗೆ ಸನ್ನಿಹಿತನಾದಾತನೆ ಭಕ್ತ, ಇಂತೀ ಚತುರ್ವಿಧದೊಳಗೆ ಕಲಿಯಾದಾತನೆ ಮಾಹೇಶ್ವರ, ಇಂತೀ ಚತುರ್ವಿಧದೊಳಗೆ ಅವಧಾನಿಯಾದಾತನೆ ಪ್ರಸಾದಿ, ಇಂತೀ ಚತುರ್ವಿಧದೊಳಗೆ ತದ್ಗತನಾದಾತನೆ ಪ್ರಾಣಲಿಂಗಿ, ಇಂತೀ ಚತುರ್ವಿಧದೊಳಗೆ ಲವಲವಿಕೆಯುಳ್ಳಾತನೆ ಶರಣ, ಇಂತೀ ಚತುರ್ವಿಧದೊಳಗೆ ಅಡಗಿದಡೆ ಐಕ್ಯ. ಇಂತಿಪ್ಪ ಷಡುಸ್ಥಲವು ಸಾಧ್ಯವಾದಡೆ ಲಿಂಗದೇಹಿ. ಆತ ನಡೆಯಿತ್ತೇ ಬಟ್ಟೆ ಆತ ನುಡಿಯಿತ್ತೇ [ಸಿದ್ಧಾಂತ]. ಕೂಡಲಚೆನ್ನಸಂಗಯ್ಯನಲ್ಲಿ ಆತನೇ ಸರ್ವಾಂಗಲಿಂಗಿ, ಆತನೆ ನಿರ್ದೇಹಿ
--------------
ಚನ್ನಬಸವಣ್ಣ
ಕುಲವೆಣ್ಣ ಬಿಟ್ಟು ಬೆಲೆವೆಣ್ಣಿಗೆ ಮನವನಿಟ್ಟ ಆ ಹೊಲೆಯನ ತಲೆಯೆತ್ತಿ ನೋಡದಿರಾ ಮನವೆ. ಅವ ಗುರುದ್ರೋಹಿ, ಲಿಂಗದ್ರೋಹಿ, ಜಂಗಮದ್ರೋಹಿ, ಪ್ರಸಾದದ್ರೋಹಿ, ಶಿವದ್ರೋಹಿ. ಅವ ಪಂಚಮಹಾಪಾತಕಿ ಪಾಷಂಡಿ. ಅವನ ಮುಖವ ನೋಡಲಾಗದು ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ ಕೊರಳಿಗೆ ಕವಡೆಯ ಕಟ್ಟಿ ನಾಯಾಗಿ ಬೊಗಳುವರು! ಅದಾವ ವಿಚಾರವಯ್ಯ? ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ ಬೇವಿನುಡಿಗೆಯನುಟ್ಟು ಹಡಲಿಗೆಯ ಹೊತ್ತು `ಉಧೋ ಉಧೋ ಎಂಬರು! ಅದಾವ ವಿಚಾರವಯ್ಯ? ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ ಹಗ್ಗಹುರಿ-ಬೆನ್ನಸಿಡಿ-ಬಾಯಬೀಗದಲ್ಲಿ ಹೋಗುವರು! ಅದಾವ ವಿಚಾರವಯ್ಯ? ಇಂಥ ಭವಿಮಾರ್ಗದಲ್ಲಿ ಚರಿಸುವ ಶಿವದ್ರೋಹಿಗಳಿಗೆ ಲಿಂಗಧಾರಣವ ಮಾಡುವನೊಬ್ಬ ಗುರುದ್ರೋಹಿ, ಅವರಿಗೆ ಚರಣೋದಕವ, ತಾ ಧರಿಸುವ ವಿಭೂತಿ-ರುದ್ರಾಕ್ಷಿಯ ಕೊಡುವನೊಬ್ಬ ಲಿಂಗದ್ರೋಹಿ! ಅವನು ಭಕ್ತನೆಂದು ಅವನ ಮನೆಯ ಹೊಕ್ಕು, ಮಂತ್ರವ ಹೇಳಿ, ಅನ್ನವ ತಿಂದವನೊಬ್ಬ ಜಂಗಮದ್ರೋಹಿ! ಇಂತೀ ನಾಲ್ವರಿಗೆ ಸೂರ್ಯಚಂದ್ರರುಳ್ಳನ್ನಕ್ಕ ಎಕ್ಕಲಕೊಂಡದಲ್ಲಿಕ್ಕದೆ ಮಾಣ್ಬನೆ ಅಂಬಿಗರ ಚೌಡಯ್ಯನು?
--------------
ಅಂಬಿಗರ ಚೌಡಯ್ಯ
ಅಯ್ಯಾ ನಿಮ್ಮ ಭಕ್ತರಲ್ಲಿ ಹೊಲೆಸೂತಕವ ಕಲ್ಪಿಸುವಾತನೆ ಗುರುದ್ರೋಹಿ ಜಂಗಮದಲ್ಲಿ ಜಾತಿಸೂತಕವನರಸುವಾತನೆ ಲಿಂಗದ್ರೋಹಿ ಪ್ರಸಾದದಲ್ಲಿ ಎಂಜಲಸೂತಕವ ಭಾವಿಸುವಾತನೆ ಜಂಗಮದ್ರೋಹಿ ಪಾದೋದಕದಲ್ಲಿ ಸಂಕಲ್ಪಸೂತಕವ ನೆನೆವಾತನೆ ಪ್ರಸಾದದ್ರೋಹಿ ಈ ಚತುರ್ವಿಧದಲ್ಲಿ ಭಯ ಭಕ್ತಿ ನಿಷೆ* ಪ್ರೀತಿ ಪ್ರೇಮ ವಿಶ್ವಾಸವುಳ್ಳಾತನೆ ಭಕ್ತನು. ಈ ಚತುರ್ವಿಧದಲ್ಲಿ ಛಲ ನಿಷೆ* ದೃಢತರವಾದಾತನೆ ಮಾಹೇಶ್ವರನು ಈ ಚತುರ್ವಿಧದಲ್ಲಿ ನಿಜಾವಧಾನವುಳ್ಳಾತನೆ ಪ್ರಸಾದಿ ಈ ಚತುರ್ವಿಧದಲ್ಲಿ ತದ್ಗತಾನುಭಾವವುಳ್ಳಾತನೆ ಪ್ರಾಣಲಿಂಗಿ ಈ ಚತುರ್ವಿಧದಲ್ಲಿ ನಿರ್ಣಯಾನಂದವುಳ್ಳಾತನೆ ಶರಣ ಈ ಚತುರ್ವಿಧದಲ್ಲಿ ಸ್ಥಿರೀಕರಿಸಿ ಸಂದಳಿದೊಂದಾಗಿ ಕೂಡಿದಾತನೆ ಲಿಂಗೈಕ್ಯನು ಈ ಚತುರ್ವಿಧದೊಳಗಡಗಿತು ಷಟ್ಸ್ಥಲವು. ಆತಂಗೆ ಸರ್ವವೂ ಸಾಧ್ಯವಹುದು. ಆತ ಲಿಂಗದೇಹಿ ಲಿಂಗಪ್ರಾಣಿ ಲಿಂಗಕಾಯನು. ಆತ ನಡೆಯಿತ್ತೇ ಬಟ್ಟೆ, ಆತ ನುಡಿದುದೇ ಶಿವಮಂತ್ರ, ಆತನಿರ್ದುದೇ ಶಿವಕ್ಷೇತ್ರ, ಆತ ನಿರ್ದೋಷಿ, ಕೂಡಲಚೆನ್ನಸಂಗಯ್ಯನಲ್ಲಿ ಆತನೆ ಸರ್ವಾಂಗಲಿಂಗಿ.
--------------
ಚನ್ನಬಸವಣ್ಣ
ಇನ್ನಷ್ಟು ... -->