ಅಥವಾ

ಒಟ್ಟು 10 ಕಡೆಗಳಲ್ಲಿ , 7 ವಚನಕಾರರು , 10 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಲಿಂಗ ಶಿವಲಿಂಗ ಜಂಗಮಲಿಂಗ_ ಈ ತ್ರಿವಿಧ ಒಂದೇ ಎಂದುದಾಗಿ ಒಂದರ ಕಡನ ಒಂದು ತಿದ್ದುವವು. ಗುರು ನಷ್ಟವಾದರೆ ಜಂಗಮ ಗುರುವಲ್ಲದೆ ಭಕ್ತ ಗುರುವಾಗಲಾಗದು. ಪಶು ಪಶುವಿಂಗೆ ಗರ್ಭವಹುದೆ ಬಸವಂಗಲ್ಲದೆ ? ಭಕ್ತ ಗುರುವಾದರೆ ಅವನನಾಚಾರಿ, ವ್ರತಗೇಡಿ, ಅವನುನ್ಮತ್ತನು. ಗುರುಶಿಷ್ಯರಿಬ್ಬರು ಕೆಟ್ಟಕೇಡಿಂಗೆ ಕಡೆಯಿಲ್ಲ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಗುಕಾರವೇ ನಿರ್ಗುಣಾತ್ಮನು, ರುಕಾರವೇ ಪರಮಾತ್ಮನು. ಗುಕಾರವೇ ಶಿವ, ರುಕಾರವೇ ಶಿವಾತ್ಮನು. ಈ ಉಭಯ ಸಂಗವೇ ಗುರುರೂಪ ನೋಡಾ. ಇದಕ್ಕೆ ಈಶ್ವರೋýವಾಚ : ಗುಕಾರಂ ಚ ಗುಣಾತೀತಂ ರುಕಾರಂ ರೂಪವರ್ಜಿತಂ | ಗುಕಾರಂ ಮಮ ರೂಪಂ ಚ ರುಕಾರಂ ತನುರೂಪಕಂ | ಉಭಯೋಃ ಸಂಗಮೇದೇವ ಗುರುರೂಪೋ ಮಹೇಶ್ವರಿ ||'' ಇಂತೆಂದುದಾಗಿ, ಇದಕ್ಕೆ ವೀರಾಗಮೇ : ಗುಕಾರಂ ಚ ಗುಣಾತೀತಂ ರುಕಾರಂ ರೂಪವರ್ಜಿತಂ | ಗುಣರೂಪಮತೀತಂ ಚ ಯೋತ್ಸದದ್ಯಾತ್ಸ ಗುರುಸ್ಮೃತಃ ||'' ಇಂತೆಂದುದಾಗಿ, ಇದಕ್ಕೆ ಈಶ್ವರೋýವಾಚ : ``ಯೋ ಗುರುಃ ಸ ಶಿವಃ ಪ್ರೋಕ್ತಃ ಯೋ ಶಿವಸ್ಸಗುರುಸ್ಮøತಃ | ಭುಕ್ತಿ ಮುಕ್ತಿ ಪ್ರದಾತಾ ಚ ಮಮ ರೂಪೋ ಮಹೇಶ್ವರಿ ||'' ಇಂತೆಂದುದಾಗಿ, ಇಂಥ ಮಹಾಮಹಿಮನೆ ಗುರುವಲ್ಲದೆ ಮಿಕ್ಕಿನ ನಾಮಧಾರಕ ಗುರುಗಳೆಲ್ಲ ಗುರುವಲ್ಲ ; ಆ ಗುರುವಿನ ಬೆಂಬಳಿಯವರೆಲ್ಲ ಶಿಷ್ಯರಲ್ಲ. ಆ ಗುರುಶಿಷ್ಯರಿಬ್ಬರಿಗೂ ಕುಂಭೀಪಾತಕವೆಂದುದು ನೋಡಾ. ಇದಕ್ಕೆ ಉತ್ತರವೀರಾಗಮೇ : ``ನಾಮಧಾರಕಶಿಷ್ಯಾನಾಂ ನಾಮಧಾರೀ ಗುರುಃ ಸದಾ | ಅಂಧಕಾಂಧಕರಾಯುಕ್ತಂ ದ್ವಿವಿಧಂ ಪಾತಕಂ ಭವೇತ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಮಹಾಘನ ಶ್ರೀಗುರುಲಿಂಗವೆ ಗುರುವಲ್ಲದೆ, ಪಿತನೊಂದು ಗುರುವೆ? ಮಾತೆಯೊಂದು ಗುರುವೆರಿ ಭ್ರಾತನೊಂದು ಗುರುವೆ? ಸತಿಯೊಂದು ಗುರುವೆರಿ ಸುತನೊಂದು ಗುರುವೆ? ಗುರುಗುರುವೆಂದೇನೊ ಒಮ್ಮರ (ಒಮ್ಮ?) ಗುರುವೆ? ಆ ಮಹಾಘನ ಗುರುಲಿಂಗಕ್ಕೆ ಇವರೆಲ್ಲರ ಸರಿಗಂಡಡೆ ಅಘೋರ ನಾಯಕನರಕ ತಪ್ಪದು ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಮುನ್ನ ಗುರುವಿಂಗೆ ಜ್ಞಾನವಿಲ್ಲ. ಇನ್ನು ಶಿಷ್ಯಂಗೆ ಜ್ಞಾನವಿಲ್ಲ. ಇಂತವರ ಮಗನಹ ಕುನ್ನಿಗಳನೇನೆಂಬೆ. ಗುಹೇಶ್ವರಾ, ಅದು ಕಾರಣ ತನ್ನ ಗುರುವಲ್ಲದೆ, ಅನ್ಯಹಸ್ತ ಮಂಡೆಯ ಮೇಲೆ ಬಿದ್ದಡೆ, ಆ ಭಕ್ತಿ ಮುನ್ನವೆ ಹಾಳದುದು ಎಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಗುರುಕೊಟ್ಟ ಪಾದತೀರ್ಥ ಪ್ರಸಾದ ವಿಭೂತಿ ರುದ್ರಾಕ್ಷಿ ಪ್ರಣವಪಂಚಾಕ್ಷರಿಯ ಅನ್ಯರಿಗೆ ಕೊಡಬಹುದೆ ? ಕೊಡಬಾರದು. ಆ ಗುರುವಿಂಗೆ ಕೊಡಬೇಕು; ಆ ಗುರುವಲ್ಲದೆ ಈಸಿಕೊಳ್ಳಲರಿಯನಾಗಿ, ಇಂತಲ್ಲದೆ ಗುರುಸಂಬಂಧಕ್ಕೆ ಬೆರೆವ ಗುರುದ್ರೋಹಿಯನೇನೆಂಬೆ ಮಸಣಯ್ಯಪ್ರಿಯ ಗಜೇಶ್ವರಾ !
--------------
ಗಜೇಶಮಸಣಯ್ಯಗಳ ಪುಣ್ಯಸ್ತ್ರೀ
ಗುರು ಲಿಂಗ ಜಂಗಮವೇಕವಾದುದೆ ಗುರುವಲ್ಲದೆ, ಪಿತ-ಮಾತೆ, ಸತಿ-ಸುತ, ಅತ್ತೆ-ಮಾವ ಇದಲ್ಲದೆ ಯೋಗಿ-ಜೋಗಿ, ಶ್ರವಣ-ಸನ್ಯಾಸಿ, ಕಾಳಾಮುಖಿ-ಪಾಶುಪತಿ ಎಂಬ ಷಡುದರ್ಶನದ ಶೈವಕರ್ಮಿಗಳ `ಗುರುವು ಗುರುವು' ಎಂಬುದಕ್ಕೆ ನಾಚದವರನೇನೆಂಬೆನಯ್ಯಾ ? ಆ ಮಹಾಘನಗುರುವಿಂಗೆ, ಇಂತಿವರನೆಲ್ಲರ ಸರಿಗಂಡಡೆ ಒಂದೆ ಎಂದು ನುಡಿದಡೆ, ಅಘೋರನರಕ ತಪ್ಪದಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಗುರುವನರಿವನ್ನಕ್ಕರ ಅಷ್ಟಾದಶ ವಿದ್ಯೆಯನರಿಯಲುಂಟು ಓದಲುಂಟು ಕೇಳಲುಂಟು ಹೇಳಲುಂಟು. ಗುರುಕರುಣದಿಂದ ಗುರುವನರಿದ ಬಳಿಕ, ಗುರುವಲ್ಲದೆ ತಾನಿಲ್ಲ. ಕೇಳಲಿಲ್ಲ ಹೇಳಲಿಲ್ಲ, ಹೇಳಲಿಲ್ಲಾಗಿ ಅರಿಯಲಿಲ್ಲ. ಅರಿಯಲಿಲ್ಲದ ಅರಿವನರುಹಿಸಿದ ಗುರುವನರಿಯಲುಂಟೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅರಿವನರಿದಹೆನೆಂಬುದು ಮರವೆ, ಮರಹ ಮರೆದಹೆನೆಂಬುದು ಮರವೆ, ಸಾಕಾರ ನಷ್ಟ ನಿರಾಕಾರ ದೃಷ್ಟವೆಂಬುದು ಭಾವದ ಬಳಲಿಕೆ. ಗುರುವೆಂಬುದು ಶಿಷ್ಯನೆಂದಲ್ಲಿಯೆ ಹೋಯಿತ್ತು. ಶಿಷ್ಯನೆಂಬುದು ಗುರುವೆಂದಲ್ಲಿಯೆ ಹೋಯಿತ್ತು. ನಿರ್ಣಯದಲ್ಲಿ ನಿಜೈಕ್ಯನಾದಹೆನೆಂದಡೆ, ಎಚ್ಚರಿಕೆಯಲ್ಲಿ ತಪ್ಪಿತ್ತು. ಸಹಜ ಸಂಬಂಧಕ್ಕೆ ಗುರುವಲ್ಲದೆ ಅಸಹಜಕ್ಕೆ ಗುರುವುಂಟೆ ? ಗುಹೇಶ್ವರಲಿಂಗದಲ್ಲಿ ಪರವೆಂದಲ್ಲಿ ಗುರುವುಂಟಲ್ಲದೆ ಸ್ವಯವೆಂದಲ್ಲಿ ನುಡಿಯಲಿಲ್ಲ.
--------------
ಅಲ್ಲಮಪ್ರಭುದೇವರು
ಗುರುವಿಂಗೂ ಶಿಷ್ಯಂಗೂ,_ ಆವುದು ದೂರ ? ಆವುದು ಸಾರೆ ? ಎಂಬುದನು, ಆರುಬಲ್ಲರು ? ಗುರುವೆ ಶಿಷ್ಯನಾದ ತನ್ನ ವಿನೋದಕ್ಕೆ, ಶಿಷ್ಯನೆ ಗುರುವಾದ ತನ್ನ ವಿನೋದಕ್ಕೆ. ಕರ್ಮವೆಂಬ ಕೌಟಿಲ್ಯ ಎಡೆವೊಕ್ಕ ಕಾರಣ, ಭಿನ್ನವಾಗಿ ಇದ್ದಿತ್ತೆಂದಡೆ, ಅದು ನಿಶ್ಚಯವಹುದೆ ? ಆದಿ ಅನಾದಿಯಿಂದತ್ತತ್ತ ಮುನ್ನಲಾದ ಪರತತ್ವಮಂ ತಿಳಿದು ನೋಡಲು, ನೀನೆ ಸ್ವಯಂ ಜ್ಯೋತಿಪ್ರಕಾಶನೆಂದರಿಯಲು, ನಿನಗೆ ನೀನೆ ಗುರುವಲ್ಲದೆ ನಿನ್ನಿಂದಧಿಕವಪ್ಪ ಗುರುವುಂಟೆ ? ಇದು ಕಾರಣ ಗುಹೇಶ್ವರಲಿಂಗವು ತಾನೆ ಎಂಬುದನು ತನ್ನಿಂದ ತಾನೆ ಅರಿಯಬೇಕು ನೋಡಾ.
--------------
ಅಲ್ಲಮಪ್ರಭುದೇವರು
ನಾನೆ ಕರ್ತನೆಂದು ಹಾಡಿದೆನು ವಚನವ. ನಾನೆ ನಿತ್ಯನೆಂದು ಕಟ್ಟಿದೆನು ಬಿರಿದ. ನಾನೆ ನಿರವಯಸ್ಥಲದಲ್ಲಿ ನಿಂದು ಓದಿದೆನು ವಚನವ. ನಾ ಓದಿದುದೆಲ್ಲಾ ನೀ ಓದಿದುದು; ನಾ ಕಟ್ಟಿದ ಬಿರಿದು ನಿನ್ನ ಬಿರಿದು. ನಾನರಿದ ಅರಿವೆಯಲ್ಲಾ ನಿನ್ನರಿವು. ನಾ ಕಟ್ಟಿದ ಬಿರಿದಿಂಗೆ ಹಿಂದೆಗೆವನಲ್ಲ. ಅಮುಗೇಶ್ವರಲಿಂಗಕ್ಕೂ ಎನಗೂ ಪ್ರಭುದೇವರೆ ಗುರುವಲ್ಲದೆ ಈರೇಳುಲೋಕ ಹದಿನಾಲ್ಕುಭುವನದಲ್ಲಿ ಆರನೂ ಕಾಣೆ
--------------
ಅಮುಗೆ ರಾಯಮ್ಮ
-->