ಅಥವಾ

ಒಟ್ಟು 13 ಕಡೆಗಳಲ್ಲಿ , 7 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈರೇಳುಭುವನವನು ಒಡಲೊ?ಗೆ ಇಂಬಿಟ್ಟುಕೊಂಡು ಲಿಂಗರೂಪನಾಗಿ ಭಕ್ತನ ಕರಸ್ಥಲಕ್ಕೆ ಬಂದು ಪೂಜೆಗೊಂಡಿತ್ತು ನೋಡಾ ! ಅಂತಹ ಅಗಮ್ಯ ಅಗೋಚರ ಲಿಂಗವೆಂದರಿದು ಭಕ್ತನು ತಾನು ಹಿಂದೆ ನಡೆದ ಜೂಜು ಬೇಂಟೆ ಚದುರಂಗ ಲೆತ್ತ ಪಗಡೆಯಾಟಂಗಳಂ ಪರಿಹಾಸಕರ ಕೂಡಿಕೊಂಡು ಕೆಲೆದಾಡುವದಂ ಬಿಟ್ಟು ಬಂಧುವ ತೊರೆದು ಮುಂದೆ ಶಿವಪಥದಲ್ಲಿ ನಡೆಯಬಲ್ಲಾತನೇ ಸದ್ಭಕ್ತನಲ್ಲದೆ, ಹಣದಾಸೆಗೆ ಹಂಗಿಗನಾಗಿ ಗುಣದಾಸೆಗೆ ಅಮೇಧ್ಯವ ತಿಂದು ಬಂಧುಗಳ ಬಿಟ್ಟು ಭಕ್ತಿಯಿಲ್ಲವೇ ಉಂಟೇ ಎಂಬ ಪಂಚಮಹಾಪಾತಕರ ಮುಖವ ನೋಡಲಾಗದು ಅವರ ಮಾತ ಕೇಳಲಾಗದು, ಅದೆಂತೆಂದಡೆ; ಕತ್ತೆ ಭಕ್ತನಾದರೆ ಕಿಸುಕುಳವ ತಿಂಬುದ ಮಾಂಬುದೆ ? ಬೆಕ್ಕು ಭಕ್ತನಾದರೆ ಇಲಿಯ ತಿಂಬುದ ಮಾಂಬುದೆ ? ಹಂದಿ ಭಕ್ತನಾದರೆ ಹಡಿಕೆಯ ತಿಂಬುದ ಮಾಂಬುದೆ ? ಶುನಕ ಭಕ್ತನಾದರೆ ಮೂಳೆ ಮಾಂಸವ ತಿಂಬುದ ಮಾಂಬುದೆ ? ಕೋಳಿಯ ತಂದು ಪಂಜರವ ಕೂಡಿ ಅಮೃತಾನ್ನವನಿಕ್ಕಿ ಸಲಹಿದರೆ ಅದು ತಾನೆ ಮತ್ತೆ ತಿಂಬ ಹಡುವಿಂಗೆ ಚಿತ್ತವನಿಕ್ಕುದುಂ ಮಾಂಬುದೆ ? ಇಂತೀ ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ ಅನಾಚಾರವ ಬಿಟ್ಟು ಸದಾಚಾರದಲ್ಲಿ ನಡೆಯಬೇಕು. ಗುರುವಾದಡೂ ಆಗಲಿ ಭಕ್ತನಾದಡೂ ಆಗಲಿ ತಾನು ಹಿಂದೆ ಭವಿಯಾಗಿದ್ದಾಗ ಭುಂಜಿಸುತ್ತಿದ್ದ ಸುರೆ ಮಾಂಸ ಭಂಗಿ ಭವಿಸಂಗ ಭವಿಪಾಕ ಇಂತಿವ ಬಿಡದಿರ್ದವರುಗಳು ಆ ಕತ್ತೆ ಬೆಕ್ಕು ಸೂಕರ ಸೊಣಗ ಕೋಳಿಗಿಂದತ್ತತ್ತ ಕಡೆ ನೋಡಿರೇ. ಚಿನ್ನದ ಬೆಟ್ಟವನೇರಿದವನು ಕಣ್ಣುಕಾಣದಿಪ್ಪಂತೆ ಗಣೆಯನೇರಿದ ಡೊಂಬ ಮೈ ಮರೆದಿಪ್ಪಂತೆ ನಡುನೀರಿಗೆ ಹೋದ ಹರಿಗೋಲು ತಲೆ ಕೆಳಗಾದಂತೆ ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಕೆಯಿ ಬೆಳೆವಲ್ಲಿ ಸದೆಗೆ ಮುನಿವರಲ್ಲದೆ ಬೆಳೆಗೆ ಮುನಿದವರುಂಟೆ ಅಯ್ಯಾ? ಅರಿದಂಗವ ತಾಳಿದವರಲ್ಲಿ ಮರವೆಗೆ ಮುನಿವರಲ್ಲದೆ ಅರಿವಿಗೆ ಮುನಿವರುಂಟೆ ಅಯ್ಯಾ? ಕೊಲ್ಲಿ ಆವಿಂಗೆ ಕಾಲ ಕಟ್ಟುವರಲ್ಲದೆ ಮೊಲೆಯ ಕಟ್ಟಿದರುಂಟೆ ಅಯ್ಯಾ? ಗುರುವಾದಡೂ ಆಗಲಿ, ಲಿಂಗವಾದಡೂ ಆಗಲಿ, ಜಂಗಮವಾದಡೂ ಆಗಲಿ ಅರಿವಿಂಗೆ ಶರಣು ಮರವಿಂಗೆ ಮಥನವ ಮಾಡಿದಲ್ಲದೆ ಇರೆ. ಇದು ನೀವು ಕೊಟ್ಟ ಅರಿವಿನ ಮಾರನ ಇರವು, ಸದಾಶಿವಮೂರ್ತಿಲಿಂಗದ ಬರವು.
--------------
ಅರಿವಿನ ಮಾರಿತಂದೆ
ಏರಿಯಕೆಳಗೆ ಬಿದ್ದ ನೀರು ಪೂರ್ವದ ತಟಾಕಕ್ಕೆ ಏರಬಲ್ಲುದೆ ? ವ್ರತಾಚಾರವ ಮೀರಿ ಕೆಟ್ಟ ಅನಾಚಾರಿ ಸದ್ಭಕ್ತರ ಕೂಡಬಲ್ಲನೆ ? ದೇವಾಲಯದಲ್ಲಿ ಸತ್ತಡೆ ಸಂಪ್ರೋಕ್ಷಣವಲ್ಲದೆ ದೇವರು ಸತ್ತಲ್ಲಿ ಉಂಟೆ ಸಂಪ್ರೋಕ್ಷಣ ? ಅಂಗದಲ್ಲಿ ಮರವೆಗೆ ಹಿಂಗುವ ಠಾವಲ್ಲದೆ, ಮನವರಿದು ತಾಕು ಸೋಂಕಿಗೆ ಹೆದರದೆ ಕೂಡಿದ ದುರ್ಗಣಕ್ಕುಂಟೆ ಪ್ರಾಯಶ್ಚಿತ್ತ ? ಇಂತಿವ ಕಂಡಲ್ಲಿ ಗುರುವಾದಡೂ ಬಿಡಬೇಕು, ಲಿಂಗವಾದಡೂ ಬಿಡಬೇಕು, ಜಂಗಮವಾದಡೂ ಬಿಡಬೇಕು ; ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಾದಡೂ ಬಿಡಬೇಕು.
--------------
ಅಕ್ಕಮ್ಮ
ಗುರುವಾದಡೂ ಮಲತ್ರಯದಾಸೆ ಉಳ್ಳನ್ನಕ್ಕ ಮಲದೇಹಿ. ಲಿಂಗವಾದಡೂ ಶಕ್ತಿಸಂಪುಟವುಳ್ಳನ್ನಕ್ಕ ಭವಕ್ಕೊಳಗು. ಜಂಗಮವಾದಡೂ ತನ್ನಿರವ ತಾನರಿಯದನ್ನಕ್ಕ ಪ್ರಸಿದ್ಧಭಾವಿಯಲ್ಲ. ಇಂತೀ ಇದನರಿತು ಪೂಜಿಸಬೇಕು, ತನ್ನಯ ಜನ್ಮವ ನಿವೃತ್ತಿಯ ಮಾಡಿಕೊಳಬಲ್ಲಡೆ. ಇದೆ ಸದ್ಭಕ್ತನಿರವು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಗುರುವಾದಡೂ ಬಸವಣ್ಣನಿಲ್ಲದೆ ಗುರುವಿಲ್ಲ. ಲಿಂಗವಾದಡೂ ಬಸವಣ್ಣನಿಲ್ಲದೆ ಲಿಂಗವಿಲ್ಲ. ಜಂಗಮವಾದಡೂ ಬಸವಣ್ಣನಿಲ್ಲದೆ ಜಂಗಮವಿಲ್ಲ. ಪ್ರಸಾದವಾದಡೂ ಬಸವಣ್ಣನಿಲ್ಲದೆ ಪ್ರಸಾದವಿಲ್ಲ. ಅನುಭಾವವಾದಡೂ ಬಸವಣ್ಣನಿಲ್ಲದೆ ನುಡಿಯಲಾಗದು. ಇಂತು ಸಂಗಿಸುವಲ್ಲಿ, ನಿಜಸಂಗಿಸುವಲ್ಲಿ, ಸುಸಂಗಿಸುವಲ್ಲಿ, ಮಹಾಸಂಗಿಸುವಲ್ಲಿ, ಪ್ರಸಾದ ಸಂಗಿಸುವಲ್ಲಿ, ಕಲಿದೇವಾ ನಿಮ್ಮ ಶರಣ ಬಸವಣ್ಣನ ನಿಲುವು.
--------------
ಮಡಿವಾಳ ಮಾಚಿದೇವ
ಮರದೊಳಗಣ ಬೆಂಕಿ ತನ್ನ ತಾನೇ ಉರಿಯಬಲ್ಲುದೆ ? ಶಿಲೆಯೊಳಗಣ ದೀಪ್ತಿ ಆ ಬೆಳಗ ತನ್ನ ತಾನೆ ಬೆಳಗಬಲ್ಲುದೆ ? ಆ ತೆರನಂತೆ ಕುಟಿಲನ ಭಕ್ತಿ, ಕಿಸಕುಳನ ವಿರಕ್ತಿ ಮಥನಿಸಿಯಲ್ಲದೆ ದಿಟಹುಸಿಯ ಕಾಣಬಾರದು. ಸತ್ಯವನು ಅಸತ್ಯವನು ಪ್ರತ್ಯಕ್ಷ ಪ್ರಮಾಣಿಸಿದಲ್ಲದೆ ನಿಶ್ಚಯವನರಿಯಬಾರದು, ಗುರುವಾದಡೂ ಲಿಂಗವಾದಡೂ ಜಂಗಮವಾದಡೂ ಪರೀಕ್ಷಿಸಿ ಹಿಡಿಯದವನ ಭಕ್ತಿ, ವಿರಕ್ತಿ, ತೂತಕುಂಭದಲ್ಲಿಯ ನೀರು, ಸೂತ್ರ ತಪ್ಪಿದ ಬೊಂಬೆ, ನಿಜನೇತ್ರ ತಪ್ಪಿದ ದೃಷ್ಟಿ; ಬೇರು ಮೇಲಾದ ಸಸಿಗೆ ನೀರಿನಾರೈಕೆಯುಂಟೆ ? ಇಂತು ಆವ ಕ್ರೀಯಲ್ಲಿಯೂ ಭಾವಶುದ್ಧಾತ್ಮನಾಗಿ ಆರೈಕೆ ಬೇಕು, ಭೋಗಬಂಕೇಶ್ವರಲಿಂಗದ ಸಂಗದ ಶರಣನ ಸುಖ.
--------------
ಶ್ರೀ ಮುಕ್ತಿರಾಮೇಶ್ವರ
ಗುರುವಾದಡೂ ಕಾಯಕದಿಂದವೆ ಜೀವನ್ಮುಕ್ತಿ. ಲಿಂಗವಾದಡೂ ಕಾಯಕದಿಂದವೆ ವೇಷದ ಪಾಶ ಹರಿವುದು. ಗುರುವಾದಡೂ ಚರಸೇವೆಯ ಮಾಡಬೇಕು. ಲಿಂಗವಾದಡೂ ಚರಸೇವೆಯ ಮಾಡಬೇಕು. ಜಂಗಮವಾದಡೂ ಚರಸೇವೆಯ ಮಾಡಬೇಕು ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗದ ಅರಿವು.
--------------
ನುಲಿಯ ಚಂದಯ್ಯ
ಗುರುವಾದಡೂ ತನ್ನ ಶಿಷ್ಯನ ಕೈಯ(ಕೈಯಿಂದ?) ಜಂಗಮಕ್ಕೆ ಸೇವೆಯ ಮಾಡಿಸದೆ, ತಾ ಮಾಡಿಸಿಕೊಂಡನಾದಡೆ ಶ್ವಾನ ಒಡಲ ಹೊರೆದಂತೆ. ಅದು ಹೇಗೆಂದಡೆ; ತನ್ನ ಲಿಂಗವನಾ ಶಿಷ್ಯಂಗೆ ಕೊಟ್ಟು, ತಾನು ವ್ರತಗೇಡಿಯಾಗಿ ಹೋಹಲ್ಲಿ, ಆ ಜಂಗಮವೆ ಸಾಕ್ಷಿಯಾಗಿರ್ದು ವಿಭೂತಿವೀಳೆಯವ ತೆಗೆದುಕೊಂಡು ಗುರು ಶಿಷ್ಯರಿಬ್ಬರ ಪೂರ್ವಾಶ್ರಯವ ಕಳೆದರಾಗಿ, ಆ ಜಂಗಮಕ್ಕೆ ಮಾಡಿಸುವುದು. ಗುರುವಾದಡಾಗ ಲಿಂಗವಾದಡಾಗಲಿ ಜಂಗಮ ತಾನಾದಡೂ ಆಗಲಿ ಜಂಗಮ ಪಾದೋದಕ ಪ್ರಸಾದವಿಲ್ಲದವರನೊಲ್ಲೆನೊಲ್ಲೆ. ಅವರು ಬರುಕಾಯರೆಂಬೆ, ಬರುಮುಖಿಗಳೆಂಬೆ, ಅಂಗಹೀನರೆಂಬೆ ಲಿಂಗಹೀನರೆಂಬೆ. ಜಂಗಮದಲ್ಲಿ ಗುಣವ ನೋಡದೆ, ಅವಗುಣವ ನೋಡದೆ ರೂಪವ ನೋಡದೆ, ನಿರೂಪವ ನೋಡದೆ, ಕೋಪವ ನೋಡದೆ, ಶಾಂತವ ನೋಡದೆ, ವಿವೇಕವ ನೋಡದೆ, ಅವಿವೇಕವ ನೋಡದೆ, ಮಲಿನವ ನೋಡದೆ, ಅಮಲಿನವ ನೋಡದೆ, ರೋಗವ ನೋಡದೆ, ನಿರೋಗವ ನೋಡದೆ, ಕುಲವ ನೋಡದೆ, ಛಲವ ನೋಡದೆ, ಆಶೆಯ ನೋಡದೆ, ನಿರಾಶೆಯ ನೋಡದೆ, ಅಂಗದ ಮೇಲಣ ಲಿಂಗವನೆ ನೋಡಿ, ಜಂಗಮಕ್ಕೆ ಮಾಡಿ ನೀಡಿ, ಪಾದೋದಕ ಪ್ರಸಾದವ ಕೊಂಬ ಶರಣನ ಬಸವಣ್ಣನೆಂಬೆ ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಗುರುವಾದಡೂ ಲಿಂಗವ ಪೂಜಿಸಬೇಕು. ಲಿಂಗವಾದಡೂ ದೇವತ್ವವಿರಬೇಕು. ಜಂಗಮವಾದಡೂ ಲಿಂಗವಿಲ್ಲದೆ ಪ್ರಮಾಣವಲ್ಲ. ಆದಿಗೆ ಆಧಾರವಿಲ್ಲದೆ ಜಗವೇನೂ ಇಲ್ಲ. ಅರಿದೆನೆಂದಡೂ ಅಂಗವೇ ಲಿಂಗವಾಗಿರಬೇಕು. ಕಲಿದೇವರದೇವಯ್ಯನ ಅರಿವುದಕ್ಕೆ ಇದೇ ಮಾರ್ಗ, ಚಂದಯ್ಯ.
--------------
ಮಡಿವಾಳ ಮಾಚಿದೇವ
ಗುರುವಾದಡೂ ಆಗಲಿ, ಲಿಂಗವಾದಡೆಯೂ ಆಗಲಿ, ಜಂಗಮವಾದಡೆಯೂ ಆಗಲಿ ಪಾದೋದಕ ಪ್ರಸಾದವಿಲ್ಲದ ಪಾಪಿಯ ಮುಖವ ತೋರಿಸದಿರಯ್ಯಾ. ಭವಭಾರಿ ಜೀವಿಯ ಮುಖವ ತೋರಿಸದಿರಯ್ಯಾ. ಅವರ ನಡೆವೊಂದು ನುಡಿವೊಂದು. ಹಿರಿಯತನಕ್ಕೆ ಬೆಬ್ಬನೆ ಬೆರತು ಉದರವ ಹೊರೆದುಕೊಂಡಿಹ ಕ್ರೂರಕರ್ಮಿಯ ಮುಖವ ತೋರಿಸದಿರಯ್ಯಾ, ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಗುರುವಾದಡೂ ಆಚಾರಭ್ರಷ್ಟನಾದಡೆ ಅನುಸರಿಸಲಾಗದು. ಲಿಂಗವಾದಡೂ ಆಚಾರದೋಹಳವಾದಲ್ಲಿ ಪೂಜಿಸಲಾಗದು. ಜಂಗಮವಾದಡೂ ಆಚಾರ ಅನುಸರಣೆಯಾದಲ್ಲಿ ಕೂಡಲಾಗದು. ಆಚಾರವೆ ವಸ್ತು, ವ್ರತವೆ ಪ್ರಾಣ, ಕ್ರಿಯೆಯೆ ಜ್ಞಾನ, ಜ್ಞಾನವೆ ಆಚಾರ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ.
--------------
ಅಕ್ಕಮ್ಮ
ವ್ರತಾಚಾರವ ಹಿಡಿದು ಬಿಟ್ಟಲ್ಲಿ, ಗುರುವಾದಡೂ ಪರಿಹರಿಸಬಾರದು. ಲಿಂಗವಾದಡೂ ಪರಿಹರಿಸಬಾರದು, ಜಂಗಮವಾದಡೂ ಪರಿಹರಿಸಬಾರದು. ರತ್ನದ ಗುಂಡೆಂದಡೆ, ಶಿರದ ಮೇಲೆ ಹಾಕಿದಡೆ ಒಡೆಯದೆ ? ನೀನೊಡೆಯನಾದಡೂ ಆ ಲೆಂಕನಾದಡೂ ಈ ಗುಣವಡಗಿಯಲ್ಲದೆ, ಮೃಡಶರಣರ ಸಂಗಕ್ಕೊಳಗಲ್ಲ. ಅಂಗದ ಮಲಿನವ, ಕೈ ಹಿಂಗಿ ಒರಸಿದಡೆ ಭಂಗವುಂಟೆ ? ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವಾದಡೂ ಆಗಲಿ, ಲೆಂಕನ ಬಿನ್ನಹಕ್ಕೆ ಸಂಕಲ್ಪವಿಲ್ಲ.
--------------
ಶಿವಲೆಂಕ ಮಂಚಣ್ಣ
-->