ಅಥವಾ

ಒಟ್ಟು 12 ಕಡೆಗಳಲ್ಲಿ , 9 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಹಪಂತಿಯಲ್ಲಿ ತನ್ನ ಗುರುವೆಂದು ವಿಶೇಷವ ಮಾಡಲಾಗದು. ಅದೆಂತೆಂದಡೆ: ಆ ಗುರುವಿಂಗೂ ಆ ಶಿಷ್ಯಂಗೂ ಎರಡಿಟ್ಟು ಮಾಡೂದಕ್ಕೆ ದೃಷ್ಟವ ತೋರಿದ ಮತ್ತೆ, ದ್ರವ್ಯಂಗಳಲ್ಲಿ ವಿಶೇಷವಾಗಿ ಕೈದುಡುಕಿದಡೆ ಮನ ಕೂರ್ತಡೆ ಅದೆ ಕಿಲ್ವಿಷ, ಸದಾಶಿವಮೂರ್ತಿಲಿಂಗಕ್ಕೆ ಹೊರಗು.
--------------
ಅರಿವಿನ ಮಾರಿತಂದೆ
ತಂದೆಯ ಸಾಮಥ್ರ್ಯದಿಂದ ಹುಟ್ಟಿದ ಮಗನಿಗೆ ಆ ತಂದೆಯ ಸ್ವರೂಪಲ್ಲದೆ ಬೇರೊಂದೂ ಸ್ವರೂಪೆಂದು ತಿಳಿಯಲುಂಟೇ ಅಯ್ಯ?. ಶಿವ ತಾನೆ ತನ್ನ ಸಾಮಥ್ರ್ಯವೆ ಒಂದೆರಡಾಗಿ, ಗುರುವೆಂದು ಶಿಷ್ಯನೆಂದು ಆಯಿತ್ತೆಂದಡೆ, ಆ ಗುರುವಿಂಗೂ ಶಿಷ್ಯಂಗೂ ಬೇರಿಟ್ಟು ನುಡಿಯಲಾಗದಯ್ಯ. ಗುರುವಿನ ಅಂಗವೇ ಶಿಷ್ಯ; ಶಿಷ್ಯನ ಅಂಗವೇ ಗುರು. ಆ ಗುರುವಿನ ಪ್ರಾಣವೇ ಶಿಷ್ಯ; ಶಿಷ್ಯನ ಪ್ರಾಣವೇ ಗುರು. ಈ ಗುರುಶಿಷ್ಯಸಂಬಂಧ ಒಂದಾದ ಬಳಿಕ ಗುರು ಶಿಷ್ಯರೆಂದು ಬೇರಿಟ್ಟು ನುಡಿವ ಭ್ರಷ್ಟರನೇನೆಂಬೆನಯ್ಯಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕಾಯದಲ್ಲಿ ಸೋಂಕ ಅಳಿದು, ಕೊಂಬುದು ಶುದ್ಧಪ್ರಸಾದಿಯ ಅಂಗ. ಕರಣಂಗಳಿಚ್ಫೆಯಿಲ್ಲದೆ ಕೊಂಬುದು ಸಿದ್ಧಪ್ರಸಾದಿಯ ಅಂಗ. ಭಾವ ತಲೆದೋರದೆ ಜನನ ಮರಣಾದಿಗಳಲ್ಲಿ ನಾಮ ರೂಪು ಕ್ರೀಗೆ ಬಾರದೆ ನಿಶ್ಚಯ ನಿಜಾಂಗಲೇಪವಾಗಿ ಕೊಂಬುದು ಪ್ರಸಿದ್ಧಪ್ರಸಾದಿಯ ಅಂಗ. ಇಂತೀ ತ್ರಿವಿಧಪ್ರಸಾದಿಗಳಲ್ಲಿ ಹೊರಗೆ ವಿಚಾರಿಸಿ, ಒಳಗ ಕಂಡು ಒಳಗಿನ ಗುಣದಲ್ಲಿ ಕಳೆ ನಿಂದು ನಿಃಪತಿಯಾಗಿ ದೃಷ್ಟ ತನ್ನಷ್ಟವಾದುದು ಸ್ವಯಂಪ್ರಸಾದಿಯ ಅಂಗ. ಇಂತಿವರಲ್ಲಿ ತಿಳಿದುಳಿದವಂಗಲ್ಲದೆ ಜಂಗಮಪ್ರಸಾದವ ಲಿಂಗಕ್ಕೆ ಕೊಟ್ಟಿಹೆನೆಂಬುದು ದೃಷ್ಟಾಂತವಲ್ಲ. ಕೊಟ್ಟು ಕೊಂಡೆಹೆನೆಂದಡೆ ಆ ಗುರುವಿಗೂ ಲಿಂಗವೆಂಬುದೊಂದು ಕುರುಹು. ಜಂಗಮಕ್ಕೂ ಲಿಂಗವೆಂಬುದೊಂದು ಕುರುಹು. ಕೊಟ್ಟು ಕೊಂಡೆಹೆನೆಂಬ ಭಕ್ತಂಗೂ ಲಿಂಗವೆಂಬುದೊಂದು ಕುರುಹು. ಇಂತೀ ಬೀಜ, ಆ ಬೀಜದಿಂದಂಕುರ. ಆ ಅಂಕುರದಿಂದ ಪತ್ರ ಕುಸುಮ ಫಲಭೋಗ. ಆ ಫಲಭೋಗದಿಂದ ಮತ್ತೆ ಬೀಜವಪ್ಪುದರಿಂದ ಕಂಡು ಇಂತೀ ತ್ರಿವಿಧಗುಣ ಲಿಂಗ ಸೋಂಕೆಂಬುದ ಕಂಡು ಒಂದರಿಂದೊಂದು ಗುಣವನರಿದೆಹೆನೆಂದಡೆ ಸಂದನಳಿದ ಸದಮಲಾನಂದವೊಂದು ಸೂತಕವೆಂದಳಿದು ಕೊಡಲಿಲ್ಲ. ಎರಡು ಸೂತಕವೆಂದು ಮುಟ್ಟಿ ಅರ್ಪಿಸಲಿಲ್ಲ. ಮೂರನೊಡಗೂಡಿ ಪ್ರಸಾದವಿದೆಯೆಂದು ಬೇರೆ ಅರ್ಪಿಸಿಕೊಂಬವರಿನ್ನಾರೊ ? ಇಂತೀ ಪ್ರಸಾದಿಯ ಪ್ರಸನ್ನವ ತಿಳಿದಲ್ಲಿ ದಹನ ಚಂಡಿಕೇಶ್ವರಲಿಂಗವು ಪ್ರಸನ್ನಪ್ರಸಾದಿಕಾಯನು.
--------------
ಪ್ರಸಾದಿ ಲೆಂಕಬಂಕಣ್ಣ
ಗುರುವಿಂಗೂ ಲಿಂಗಕ್ಕೂ ಜಂಗಮಕ್ಕೂ ಭಕ್ತನಂಗವೆ ಮಂದಿರವಾಗಿ, ಮನದ ವಿಶ್ರಾಂತಿಯೆ ಸುಖಭೋಜನ ಭೋಗಂಗಳಾಗಿ ತಾಳುವ ಕಾರಣ, ಭಕ್ತನಂಗವೆ ಸದಾಶಿವಮೂರ್ತಿಲಿಂಗದ ಅಂಗ.
--------------
ಅರಿವಿನ ಮಾರಿತಂದೆ
ಸರ್ವಶೀಲದ ವ್ರತದಾಯತವೆಂತುಟೆಂದಡೆ ತನ್ನ ವ್ರತವಿಲ್ಲದ ಗುರುವ ಪೂಜಿಸಲಾಗದು. ವ್ರತವಿಲ್ಲದ ಜಂಗಮದ ಪ್ರಸಾದವ ಕೊಳಲಾಗದು. ವ್ರತವಿಲ್ಲದವರ ಅಂಗಳವ ಮೆಟ್ಟಲಾಗದು. ಅದೆಂತೆಂದಡೆ ಗುರುವಿಗೂ ಗುರು ಉಂಟಾಗಿ, ಲಿಂಗಕ್ಕೂ ಉಭಯಸಂಬಂಧ ಉಂಟಾಗಿ. ಆ ಜಂಗಮಕೂ ಗುರುಲಿಂಗ ಉಭಯವುಂಟಾಗಿ ಜಂಗಮವಾದ ಕಾರಣ. ಇಂತೀ ಗುರುಲಿಂಗಜಂಗಮಕ್ಕೂ ಪಂಚಾಚಾರ ಶುದ್ಧವಾಗಿರಬೇಕು. ಪುರುಷನ ಆಚಾರದಲ್ಲಿ ಸತಿ ನಡೆಯಬೇಕಲ್ಲದೆ ಸತಿಗೆ ಸ್ವತಂತ್ರ ಉಂಟೆ ? ಇಂತೀ ಉಭಯದ ವ್ರತವೊಡಗೂಡಿದಲ್ಲಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ವ್ರತವೆ ವಸ್ತು.
--------------
ಅಕ್ಕಮ್ಮ
ಸಾರಿದುದ ಕಂಡು, ಕೇಳಿ ಮೀರಿ ನಡೆದಡೆ, ಅವನ ಗಾರುಮಾಡಿದಡೆ, ಕೇಡುಂಟೆ ಅಯ್ಯಾ ? ದೃಷ್ಟದಿಂದ, ಶರಣರ ಸಂಗದಿಂದ, ಶ್ರುತಿಸ್ಮೃತಿತತ್ವಂಗಳಿಂದ, ಪಾಪಪುಣ್ಯಗಳೆಂಬುದನರಿದು ಮರೆಯಬಹುದೆ ? ಗುರುವಿಗೂ ಆಚರಣೆ, ಲಿಂಗಕ್ಕೂ ಆಚರಣೆ, ಜಂಗಮಕ್ಕೂ ಆಚರಣೆ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೂ ಆಚರಣೆ,
--------------
ಶಿವಲೆಂಕ ಮಂಚಣ್ಣ
ಗುರುಪ್ರಸಾದವ ಲಿಂಗಕ್ಕೆ ಕೊಡಲಿಲ್ಲ, ಜಂಗಮಪ್ರಸಾದವ ಲಿಂಗಕ್ಕೆ ಕೊಡಲಿಲ್ಲ. ಅದೆಂತೆಂಡಡೆ : ಆ ಗುರುವಿಗೂ ಲಿಂಗಪ್ರಾಣ, ಆ ಜಂಗಮಕ್ಕೂ ಲಿಂಗಪ್ರಾಣ. ಆ ಲಿಂಗಬಾಹ್ಯವಾಗಿ ಗುರುವಾಗಬಲ್ಲಡೆ, ಆ ಲಿಂಗಬಾಹ್ಯವಾಗಿ ಜಂಗಮವಾಗಬಲ್ಲಡೆ, ಉಭಯಪ್ರಸಾದವ ಲಿಂಗಕ್ಕೆ ಕೊಡಬಹುದು. ಇದನರಿಯದೆ ಉದೇಶಿಸಿ ನುಡಿವ ಭೇದಹೀನರಿಗೆ ತ್ರಿವಿಧವಿಲ್ಲಾ ಎಂದೆ. ಅವರು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ದೂರ.
--------------
ಶಿವಲೆಂಕ ಮಂಚಣ್ಣ
ಕೂಳ ಪ್ರಸಾದವೆಂದು ನುಡಿವ ಜಾಳು ಮಾತ ಕೇಳಿ, ಕೂಳಿಂಗೆ ಆಳಾಗಿ ಬೇಳಾದ ಬೇಳುವೆಯಲಾಳಿದವಂಗೇಕೊ ಗುರುಲಿಂಗಜಂಗಮಪ್ರಸಾದದ ನೆನಹು? ಪ್ರಸಾದದಲ್ಲಿ ಪ್ರಸನ್ನವಾದ ಪ್ರಸಾದಲಿಂಗಪ್ರಸನ್ನತೆಯ ಪ್ರಸಾದದಿಂದ ಜನಿಸಿದಾತ ಜಂಗಮ. ಆ ಜಂಗಮಮುಖದಿಂದ ತೋರಿತ್ತು ಪ್ರಸಾದ. ಇದು ಕಾರಣ ಗುರುವಿಂಗೂ ಜಂಗಮಪ್ರಸಾದ, ಲಿಂಗಕ್ಕೂ ಜಂಗಮಪ್ರಸಾದ, ಚತುರ್ದಶಭುವನಕ್ಕೂ ಜಂಗಮಪ್ರಸಾದ. ಇದಕ್ಕೆ ಶ್ರುತಿ: ಗುರುಣಾ ಲಿಂಗಸಂಬಂಧಃ ತಲ್ಲಿಂಗಂ ಜಂಗಮಸ್ಥಿತಂ ಜಂಗಮಸ್ಯ ಪ್ರಸಾದೇನ ತ್ರೈಲೋಕ್ಯಮುಪಜೀವಿತಂ ಇಂತೆಂದುದಾಗಿ ಪ್ರಸಾದವನರಿತು ಪ್ರಸಾದವೆ ಪ್ರಾಣವಾಗಿರಬಲ್ಲಡೆ ಸೌರಾಷ್ಟ್ರ ಸೋಮೇಶ್ವರಲಿಂಗವೆಂಬೆನು.
--------------
ಆದಯ್ಯ
ಮಹಾಜ್ಞಾನ ಗುರುವಿನಲ್ಲಿ ಸ್ವಾಯತವಾಯಿತ್ತು, ಸುಜ್ಞಾನ ಶಿಷ್ಯನಲ್ಲಿ ಸ್ವಾಯತವಾಯಿತ್ತು; ಜ್ಞಾನ ಲಿಂಗದಲ್ಲಿ ಸ್ವಾಯತವಾಯಿತ್ತು.- ಇಂತು ಜ್ಞಾನ ಸುಜ್ಞಾನ ಮಹಾಜ್ಞಾನವೆಂಬವು, ಜಂಗಮ ಲಿಂಗದಲ್ಲಿ ಸ್ವಾಯತವಾಗಿಪ್ಪುವಾಗಿ! - ಅದು ಕಾರಣ, ಲಿಂಗಕ್ಕೆ ಮಜ್ಜನಕ್ಕೆರೆಯಲಾಗದು; ಅದೇನು ಕಾರಣವೆಂದಡೆ- ಗಮನಿಸಿ ಬಂದ ಜಂಗಮಲಿಂಗವು ಪಾದಾರ್ಚನೆಯ ಮಾಡಿ[ಕೊಂಬು]ದಾಗಿ. ಲಿಂಗಕ್ಕೆ ವಸ್ತ್ರವ ಕೊಡಲಾಗದು, ಅದೇನು ಕಾರಣವೆಂದಡೆ- ಚರವೆಂಬ ಜಂಗಮಲಿಂಗವು ವಸ್ತ್ರಾಲಂಕಾರವ ಮಾಡಿಕೊಳ್ಳ[ಬಲ್ಲು]ದಾಗಿ. ಲಿಂಗಕ್ಕೆ ಗಂಧವ ಪೂಸಲಾಗದು, ಅದೇನು ಕಾರಣವೆಂದಡೆ- ಚರವೆಂಬ ಜಂಗಮಲಿಂಗವು ಗಂಧವ ಲೇಪಿಸಿಕೊಳ್ಳ[ಬಲ್ಲು]ದಾಗಿ ಲಿಂಗಕ್ಕೆ ಅಕ್ಷತೆಯ ಕೊಡಲಾಗದು, ಅದೇನು ಕಾರಣವೆಂದಡೆ- ಚರವೆಂಬ ಜಂಗಮವು ಲಲಾಟದಲ್ಲಿ ಧರಿಸಿಕೊಳ್ಳ[ಬಲ್ಲು]ದಾಗಿ. ಲಿಂಗಕ್ಕೆ ಪುಷ್ಪವ ಕೊಡಲಾಗದು, ಅದೇನು ಕಾರಣವೆಂದಡೆ - ಚರವೆಂಬ ಜಂಗಮಲಿಂಗವು, ತಮ್ಮ ಸಿರಿಮುಡಿಯಲ್ಲಿ ತುರುಬಿಕೊಳ್ಳ[ಬಲ್ಲು]ದಾಗಿ. ಲಿಂಗಕ್ಕೆ ಧೂಪಾರತಿಯ ಕೊಡಲಾಗದು, ಅದೇನು ಕಾರಣವೆಂದಡೆ- ಚರವೆಂಬ ಜಂಗಮಲಿಂಗವು, ನಾಸಿಕದಲ್ಲಿ ಪರಮಳವ ಕೊಳ್ಳ[ಬಲ್ಲು]ದಾಗಿ. ಲಿಂಗಕ್ಕೆ ದೀಪಾರತಿಯ ಬೆಳಗಲಾಗದು, ಅದೇನು ಕಾರಣವೆಂದಡೆ - ಚರವೆಂಬ ಜಂಗಮಲಿಂಗವು, ದೃಷ್ಟಿಯಲ್ಲಿ ನೋಡಿ ಪರಿಣಾಮಿಸ[ಬಲ್ಲು]ದಾಗಿ. ಲಿಂಗಕ್ಕೆ ನೈವೇದ್ಯವ ಕೊಡಲಾಗದು, ಅದೇನು ಕಾರಣವೆಂದಡೆ - ಚರವೆಂಬ ಜಂಗಮಲಿಂಗವು ಜಿಹ್ವೆಯಲ್ಲಿ ಸಕಲರುಚಿಗಳ ರುಚಿಸ[ಬಲ್ಲು]ದಾಗಿ. ಲಿಂಗಕ್ಕೆ ಹಸ್ತಮಜ್ಜನಕ್ಕೆ ಸಿತಾಳವ ನೀಡಲಾಗದು, ಅದೇನು ಕಾರಣವೆಂದಡೆ- ಚರವೆಂಬ ಜಂಗಮಲಿಂಗವು, ಹಸ್ತಮಜ್ಜನವ ಮಾಡಿಕೊಳ್ಳ[ಬಲ್ಲು]ದಾಗಿ. ಲಿಂಗಕ್ಕೆ ತಾಂಬೂಲವನರ್ಪಿಸಲಾಗದು, ಅದೇನು ಕಾರಣವೆಂದಡೆ- ಚರವೆಂಬ ಜಂಗಮಲಿಂಗವು, ಶ್ರೀಮುಖದಲ್ಲಿ ತಾಂಬೂಲವನರ್ಪಿಸಿಕೊಳ್ಳ[ಬಲ್ಲು]ದಾಗಿ. ಲಿಂಗಕ್ಕೆ ಸುಖಾಸನವನಿಕ್ಕಲಾಗದು, ಅದೇನು ಕಾರಣವೆಂದಡೆ- ಚರವೆಂಬ ಜಂಗಮಲಿಂಗವು ಸುಖಾಸನದಲ್ಲಿ ಕುಳ್ಳಿರ[ಬಲ್ಲು]ದಾಗಿ. ಲಿಂಗಕ್ಕೆ ಸ್ತೋತ್ರ, ಮಂತ್ರ, ಗೀತ, ವಾದ್ಯ, ನೃತ್ಯಂಗಳನಾಗಿಸಲಾಗದು, ಅದೇನು ಕಾರಣವೆಂದಡೆ- ಚರವೆಂಬ ಜಂಗಮಲಿಂಗವು ನೇತ್ರ ಶ್ರೋತ್ರ ಹಸ್ತಂಗಳಿಂದ ಸ್ತೋತ್ರ ಮಂತ್ರ ವಾದ್ಯ ನೃತ್ಯಂಗಳ ಕೇಳಿ ನೋಡಿ ತಣಿದು ಪರಿಣಾಮಿಸ[ಬಲ್ಲು]ದಾಗಿ. ಲಿಂಗಕ್ಕೆ ಭೂಷಣಲಂಕಾರವ ಮಾಡಲಾಗದು, ಅದೇನು ಕಾರಣವೆಂದಡೆ- ಚರವೆಂಬ ಜಂಗಮಲಿಂಗವು ಕರ ಶಿರ ಚರಣಾದ್ಯವಯವಂಗಳಲ್ಲಿ ಆಭರಣಂಗಳನಲಂಕರಿಸ[ಬಲ್ಲು]ದಾಗಿ. ಲಿಂಗಕ್ಕೆ ವಾಹನಂಗಳನರ್ಪಿಸಲಾಗದು, ಅದೇನು ಕಾರಣವೆಂದಡೆ- ಚರವೆಂಬ ಜಂಗಮಲಿಂಗವು ವಾಹನಂಗಳ ಮೇಲೆ ಕುಳಿತು ಚಲಿಸ[ಬಲ್ಲು]ದಾಗಿ. ಇಂತೀ ಹದಿನಾರು ತೆರದ ಭಕ್ತಿಯನು ಚರಲಿಂಗವೆಂಬ ಜಂಗಮಲಿಂಗಕ್ಕೆ ದಾಸೋಹವ ಮಾಡಿ ಪ್ರಸಾದವ ಕೊಂಬ ಭಕ್ತಂಗೆ ಗುರುವುಂಟು, ಲಿಂಗವುಂಟು ಜಂಗಮವುಂಟು, ಪಾದೋದಕ ಪ್ರಸಾದವುಂಟು. ಆಚಾರವುಂಟು ಸದ್ಭಕ್ತಿಯುಂಟು. ಇಂತೀ ಎಲ್ಲವನು ಜಂಗಮಕ್ಕೆ ದಾಸೋಹವ ಮಾಡದೆ ತನ್ನ ಗುರುವಿಗೂ ಲಿಂಗಕ್ಕೂ ಆರು ಕೆಲಂಬರು ಭಕ್ತಿಯ ಮಾಡುವರು ಅವರಿಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ಪಾದೋದಕ ಪ್ರಸಾದವಿಲ್ಲ. ಇಂತೀ ಪಂಚಾಚಾರವಿಲ್ಲವಾಗಿ ಅವರು ವ್ರತಗೇಡಿಗಳು. ಅವರ ಮುಖವ ನೋಡಲಾಗದು, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಜ್ಞಾನಪಾದೋದಕದಲ್ಲಿ ಮೂರು ಸಂಬಂಧವಾಗುವವು, ಅದೆಂತೆಂದಡೆ: ಮಹಾಂತನ ಪಾದವನ್ನು ಪಡೆದುಕೊಂಬಂತಹ ಭಕ್ತನು ಆ ಮಹೇಶ್ವರನ ಉನ್ನತಾಸನದಲ್ಲಿ ಮೂರ್ತಗೊಳಿಸಿ ಪಾದಪ್ರಕ್ಷಾಲನೆಯ ಮಾಡಿದ ನಂತರದಲ್ಲಿ ದೀಕ್ಷಾಪಾದೋದಕವ ಮಾಡಿ, ಶುಭ್ರವಸ್ತ್ರದಿಂದ ದ್ರವವ ತೆಗೆದು ಅಷ್ಟವಿಧಾರ್ಚನೆಯಿಂದ ಲಿಂಗಪೂಜೆಯ ಮಾಡಿಸಿ ಮರಳಿ ತಾನು ಚೈತನ್ಯಂ ಶಾಶ್ವತಂ ಶಾಂತಂ ವ್ಯೋಮಾತೀತಂ ನಿರಂಜನಂ ನಾದಬಿಂದು ಕಲಾತೀತಂ ತಸ್ಮೈ ಶ್ರೀಗುರವೇ ನಮಃ ಎಂದು ಅಷ್ಟಾಂಗಯುಕ್ತನಾಗಿ ವಂದನಂಗೈದು ಪಾದಪೂಜೆಗೆ ಅಪ್ಪಣೆಯ ತೆಗೆದುಕೊಂಡು, ಅವರ ಸಮ್ಮುಖದಲ್ಲಿ ಗದ್ದುಗೆಯ ಹಾಕಿಕೊಂಡು, ಅದರ ಮೇಲೆ ಮೂರ್ತವ ಮಾಡಿಕೊಂಡು, ತನ್ನ ಲಿಂಗವ ನಿರೀಕ್ಷಿಸಿ, ವಾಮಹಸ್ತದಲ್ಲಿ ನಿರಂಜನ ಪ್ರಣವವ ಲಿಖಿಸಿ ಪೂಜೆಯ ಮಾಡಿ, ಆಮೇಲೆ ಜಂಗಮದ ಪಾದವ ಹಿಡಿದು ಪೂಜೆಯ ಮಾಡಿ ಆ ಪೂಜೆಯನಿಳುಹಿ, ಅದೇ ಉದಕದ ಪಾತ್ರೆಯಲ್ಲಿ ಶಿಕ್ಷಾಪಾದೋದಕವ ಮಾಡಿ, ಪಾದದ್ರವವ ತೆಗೆದು ಐದಂಗುಲಿಗಳಲ್ಲಿ ಪಂಚಾಕ್ಷರವ ಲೇಖನವ ಮಾಡಿ, ಮಧ್ಯದಲ್ಲಿ ಮೂಲಪ್ರಣವವ ಬರೆದು, ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ ಪೂಜೆಯ ಮಾಡಬೇಕು. ಶಿವಧರ್ಮೋತ್ತರೇ: ಲಿಂಗಾರ್ಪಿತಪ್ರಸಾದಂ ಚ ನ ದದ್ಯಾಚ್ಚರಲಿಂಗಕೇ ಚರಾರ್ಪಿತಪ್ರಸಾದಂ ಚ ದದ್ಯಾಲ್ಲಿಂಗಾಯ ವೈ ಶುಭಂ ಶಿವರಹಸ್ಯೇ : ಅನಾದಿಜಂಗಮಶ್ಚೈವ ಆದಿಲಿಂಗಸ್ಥಲಂ ಭವೇತ್ ಅನಾದಿಜಂಗಮಾಯೈವಂ ಇಷ್ಟೋಚ್ಛಿಷ್ಟಂ ತು ಕಿಲ್ಬಿಷಂ ಎಂದುದಾಗಿ ಲಿಂಗಕ್ಕೆ ತೋರಿ ಪಾದವ ಪೂಜಿಸಲಾಗದು. ಅದೆಂತೆಂದಡೆ: ಗುರುವಿಗೂ ಲಿಂಗಕ್ಕೂ ಚೈತನ್ಯಸ್ವರೂಪ, ಜಂಗಮವಾದ ಕಾರಣ, ಆ ಜಂಗಮದ ಪ್ರಸಾದವ ಲಿಂಗಕ್ಕೆ ತೋರಬೇಕಲ್ಲದೆ ಲಿಂಗಪ್ರಸಾದವ ಪಾದಕ್ಕೆ ತೋರಲಾಗದು. ಅದೇನು ಕಾರಣವೆಂದಡೆ: ಗುರುಲಿಂಗಜಂಗಮಕ್ಕೆ ಅನಾದಿಜಂಗಮವೆ ಚೈತನ್ಯಸ್ವರೂಪವಾದ ಕಾರಣ, ಆ ಜಂಗಮವೆ ಮುಖ್ಯಸ್ವರೂಪು. ಇಂತಪ್ಪ ಜಂಗಮಪಾದವೆ ಪರಬ್ರಹ್ಮಕ್ಕೆ ಆಧಾರವಾಗಿಪ್ಪುದು. ಆ ಪಾದವ ಬಿಟ್ಟು ಪರವ ಕಂಡುದಿಲ್ಲವೆಂದು ಶ್ರುತಿಗಳು ಪೊಗಳುತಿರ್ದ ಕಾರಣ, ಇಂತಪ್ಪ ಚರಮೂರ್ತಿಯ ಪಾದವನು ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ ಅರ್ಚಿಸಿದಂತಹುದೆ ಲಿಂಗಪೂಜೆ. ಆಮೇಲೆ ಆ ಮೂರ್ತಿಯ ಉಭಯಪಾದಗಳ ಹಿಮ್ಮಡ ಸೋಂಕುವಂತೆ ಹಸ್ತವ ಮಡಗಿ ಲಲಾಟವ ಮುಟ್ಟಿ ನಮಸ್ಕರಿಸಿ ಆ ಪೂಜೆಯನಿಳುಹಿ, ಆ ಶಿಕ್ಷಾಪಾದೋದಕವನು ಬಲದಂಗುಷ* ಮೇಲೆ ಷಡಕ್ಷರಮಂತ್ರವ ಆರುವೇಳೆ ಸ್ಮರಿಸುತ್ತ ನೀಡಿ, ಅಲ್ಲಿ ಇಷ್ಟಲಿಂಗವೆಂದು ಭಾವಿಸಿ, ಎಡದಂಗುಷ*ದ ಮೇಲೆ ಪಂಚಾಕ್ಷರೀಮಂತ್ರವ ಐದುವೇಳೆ ಸ್ಮರಿಸುತ್ತ ನೀಡಿ, ಅಲ್ಲಿ ಪ್ರಾಣಲಿಂಗವೆಂದು ಭಾವಿಸಿ, ಮಧ್ಯದಲ್ಲಿ `ಓಂ ಬಸವಾಯ ನಮಃ ಎಂದು ಒಂದುವೇಳೆ ಒಂದು ಪುಷ್ಪವ ಧರಿಸಿ ಸ್ಮರಿಸುತ್ತ ನೀಡಿ, ಅಲ್ಲಿ ಭಾವಲಿಂಗವೆಂದು ಭಾವಿಸಿ, ನೀಡಿದ ಉದಕವೆ ಬಟ್ಟಲಲಿ ನಿಂದು ಮಹತ್ಪಾದವೆಂದೆನಿಸುವುದು, ಈ ಮಹತ್ಪಾದದಲ್ಲಿ ದ್ರವವ ತೆಗೆದು ಮತ್ತೆ ಪೂಜಿಸಬೇಕಾದಡೆ, ಬಹುಪುಷ್ಪವ ಧರಿಸದೆ ಒಂದೆ ಪುಷ್ಪವ ಧರಿಸಬೇಕು. ಅದೇನು ಕಾರಣವೆಂದಡೆ; ಪಶ್ಚಿಮಚಕ್ರದಲ್ಲಿ ಸಂಬಂಧವಾದ ನಿರಂಜನ ಜಂಗಮಕ್ಕೆ ಏಕದಳವನುಳ್ಳ ಒಂದೆ ಪುಷ್ಪವು ಮುಖ್ಯವಾದ ಕಾರಣ, ಏಕಕುಸುಮವನೆ ಧರಿಸಿ ಪೂಜೆಯಮಾಡಿ ನಮಸ್ಕರಿಸುವುದೆ ಜಂಗಮಪೂಜೆ. ಆ ಪೂಜೆಯ ತೆಗೆದ ಶಿಷ್ಯನು `ಶರಣಾರ್ಥಿ ಸ್ವಾಮಿ ಎಂದು ಬಟ್ಟಲವನೆತ್ತಿಕೊಟ್ಟಲ್ಲಿ, ಕರ್ತೃವಾದ ಜಂಗಮವು ಆ ಬಟ್ಟಲಲ್ಲಿರ್ದ ತೀರ್ಥವನು ತಮ್ಮ ಪಂಚಾಂಗುಲಿಗಳ ಪಂಚಪ್ರಾಣವೆಂದು ಭಾವಿಸಿ, ಮೂಲಮಂತ್ರದಿಂದ ಮೂರುವೇಳೆ ಪ್ರದಕ್ಷಿಣವ ಮಾಡಿ ನಮಸ್ಕರಿಸಿ, ಲಿಂಗದ ಮಸ್ತಕದ ಮೇಲೆ ಮೂರುವೇಳೆ ಚತುರಂಗುಲ ಪ್ರಮಾಣಿನಲ್ಲಿ ಲಿಂಗವ ಮುಟ್ಟದೆ ನೀಡಿ, ಆ ಪಂಚಾಂಗುಲಿಗಳ ತಮ್ಮ ಜಿಹ್ವೆಯಲ್ಲಿ ಸ್ವೀಕರಿಸುವಲ್ಲಿ ಗುರುಪಾದೋದಕವೆನಿಸುವುದು; ಅದೇ ದೀಕ್ಷಾಪಾದೋದಕ. ತಾವು ಲಿಂಗವನೆತ್ತಿ ಸಲಿಸಿದುದೆ ಲಿಂಗಪಾದೋದಕವೆನಿಸುವುದು; ಅದೇ ಶಿಕ್ಷಾಪಾದೋದಕ. ಬಟ್ಟಲನೆತ್ತಿ ಸಲ್ಲಿಸಿದಲ್ಲಿ ಜಂಗಮಪಾದೋದಕವೆನಿಸುವುದು; ಅದೇ ಜ್ಞಾನಪಾದೋದಕ. ಈ ರೀತಿಯಲ್ಲಿ ಮಾಹೇಶ್ವರನು ಸಲಿಸಿದ ಬಳಿಕ `ಶರಣಾರ್ಥಿ ಎಂದು ಶಿಷ್ಯೋತ್ತಮನು ಎದ್ದು, ಲಲಾಟಂ ಚ ಭುಜದ್ವಂದ್ವಂ ಪಾಣಿಯುಗ್ಮಮುರಸ್ತಥಾ ಅಂಗುಷ*ಯುಗಲಂ ಪ್ರೋಕ್ತಂ ಪ್ರಣಾಮೋ[s]ಷ್ಟಾಂಗಮುಚ್ಯತೇ ಎಂದು ಭೃತ್ಯೋಪಚಾರಗಳಿಂದ ಪ್ರಣತಿಂಗೈದು ಅಪ್ಪಣೆಯ ಪಡೆದುಕೊಂಡು ಬಂದು, ಆ ಜಂಗಮದ ಮರ್ಯಾದೆಯಲ್ಲಿಯೆ ತಾನು ಸ್ವೀಕರಿಸುವುದು. ಇದೇ ರೀತಿಯಲ್ಲಿ ಗುರುಶಿಷ್ಯರಿರ್ವರು ಸಮರಸಭಾವದಿಂದ ಸೇವನೆ ಮಾಡಿದಲ್ಲಿ, ಆ ಶಿಷ್ಯೋತ್ತಮನೆ ನಿಜಶಿಷ್ಯನಾದ ಕಾರಣ, ಗುರುವೆ ಶಿಷ್ಯ, ಶಿಷ್ಯನೆ ಗುರು. ಈ ಎರಡರ ಮರ್ಮವು ಆದ ಬಗೆ ಹೇಗೆಂದಡೆ: ಆ ಶಿಷ್ಯನು ಪಡೆದುಕೊಂಡ ಪಾದೋದಕವ ಆ ಗುರು ಭಕ್ತಿಮುಖದಿಂದ ತೆಗೆದುಕೊಂಡಲ್ಲಿ ಗುರುವೆ ಶಿಷ್ಯನಾಗಿಪ್ಪನು. ಆ ಗುರು ಸೇವನೆಯ ಮಾಡಿ ಉಳಿದ ಉದಕವ ಶಿಷ್ಯ ಭಕ್ತಿಭಾವದಿಂದ ಸೇವನೆ ಮಾಡಿದಲ್ಲಿಗೆ ತಚ್ಛಿಷ್ಯನಾದಹನು. ಈ ಮರ್ಮವ ತಿಳಿದು ಗುರುಶಿಷ್ಯರೀರ್ವರು ಸಲಿಸಿದ ಬಳಿಕ ಕೆಲವು ಭಕ್ತಮಾಹೇಶ್ವರರು ಸಲ್ಲಿಸುವುದು. ಇನ್ನು ನಿಚ್ಚಪ್ರಸಾದಿಗಳಿಗೆ, ಸಮಯಪ್ರಸಾದಿಗಳಿಗೆ ಆಯಾಯ ತತ್ಕಾಲದಲ್ಲಿ ತ್ರಿವಿಧೋದಕವಾಗಿಪ್ಪುದು; ಇದೇ ಆಚರಣೆ. ಇದನರಿಯದಾಚರಿಸುವವರಿಗೆ ನಿಮ್ಮ ನಿಲವರಿಯಬಾರದು ಕಾಣಾ, ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಮಣ್ಣು ನೀರಿನಂತೆ ಆದಾಗವೆ ಭಕ್ತನ ಭಕ್ತಸ್ಥಲ. ಬಂಗಾರ ಬಣ್ಣ ಆದಂತೆ ಮಹೇಶ್ವರನ ಮಾಹೇಶ್ವರಸ್ಥಲ. ಅನಲ ಅನಿಲನಂತಾದಾಗವೆ ಪ್ರಸಾದಿಯ ಪ್ರಸಾದಿಸ್ಥಲ. ದೀಪವೊಂದರಲ್ಲಿ ಉದಯಿಸಿ ಪ್ರತಿಜ್ಯೋತಿ ಪ್ರಮಾಣಿಸಿದಾಗವೆ, ಪ್ರಾಣಲಿಂಗಿಯ ಪ್ರಾಣಲಿಂಗಿಸ್ಥಲ. ಶ್ರುತವ ಕೇಳಿ, ದೃಷ್ಟಾದೃಷ್ಟವ ಕಂಡು, ಅನುಮಾನ ಅನುಮಾನವನರಿದು, ಸುಮ್ಮಾನ ತಲೆದೋರದಿದ್ದಾಗವೆ, ಶರಣನ ಶರಣಸ್ಥಲ. ವಾರಿ ಶಿಲೆಯ[ಂತೆ] ಮಣಿಯ ದಾರದಂತೆ, ಬುದ್ಬುದ[ದ] ನೀರಿನ[ಂತೆ] ಮಣಿಯ ವಜ್ರದ ಬಂಧದಂತೆ, ಮರೀಚಿಕಾಜಲವ ತುಂಬಿ ತಂದ ಕುಂಭದಂತೆ, ಸಾಕಾರವಳಿದು ನಿರಾಕಾರ ಉಳಿದಲ್ಲಿ ಐಕ್ಯನ ಐಕ್ಯಸ್ಥಲ. ಇಂತೀ ತ್ರಿವಿಧ ಭಕ್ತಸ್ಥಲ. ಇಂತೀ ತ್ರಿವಿಧ ಮಾಹೇಶ್ವರಸ್ಥಲ. ಇಂತೀ ತ್ರಿವಿಧ ಪ್ರಸಾದಿಸ್ಥಲ, ಇಂತೀ ತ್ರಿವಿಧ ಪ್ರಾಣಲಿಂಗಿಸ್ಥಲ, ಇಂತೀ ತ್ರಿವಿಧ ಶರಣಸ್ಥಲ, ಇಂತೀ ತ್ರಿವಿಧ ಐಕ್ಯಸ್ಥಲ. ಇಂತೀ ಷಟ್ಸ್ಥಲ, ದ್ವಾದಶಂಗಳಾಗಿ ಕೂಡುವಲ್ಲಿ ತ್ರಯೋದಶಭಾವವಾಯಿತ್ತು. ಉಭಯವನೇಕೀಕರಿಸುವಲ್ಲಿ ಒಂದೊಡಲಾದುದಾಗಿ, ರೂಪು ರೂಪಿನಲ್ಲಿದ್ದು ನಿರೂಪನ ಕೂಡಬೇಕೆಂಬ ಕೂಟ. ತ್ರಿವಿಧದ ಆಟವಾಯಿತ್ತು. ಗುರುವಿಂಗೂ ಗುರುವುಂಟೆಂಬ ಭಾವ. ಲಿಂಗಕ್ಕೆ ಆಶ್ರಯವುಂಟೆಂಬುದೊಂದು ವಾಸ. ಜಂಗಮಕ್ಕೂ ರುದ್ರನ ಪಾಶವ ಕೂಡಬೇಕೆಂಬುದೊಂದು ಆಸೆ. ಇಂತೀ ಮೂರರ ಮೂರು ಈರಾರರ ಭಂಡ, ಇಪ್ಪತ್ತೈದರ ಅಗ್ಗದಲ್ಲಿ ಕೊಂಡು, ದಶಹತ್ತರಲ್ಲಿ [ಮಾರಿ] ಒಂದೇ ಲಾಭವಾಯಿತ್ತು. ಆ ಲಾಭವ ಮೊದಲಿನಲ್ಲಿ ಸರ್ವಭಕ್ತಿ ಸಂಪೂರ್ಣನಾಗಿ, ಭಕ್ತಿಯನರಿವುದಕ್ಕೆ ಬಸವಣ್ಣನಾಗಿ, ನಿತ್ಯಾನಿತ್ಯವನರಿವುದಕ್ಕೆ ಚೆನ್ನಬಸವಣ್ಣನಾಗಿ, ಆಕಾರ ನಿರಾಕಾರಗಳಲ್ಲಿ ಭಕ್ತಿ ವಿರಕ್ತಿಯ ತಾಳ್ದ ಚೇತನಮೂರ್ತಿಗಳಲ್ಲಿ ಅವಿರಳನಾಗಿ, ನಿಜವನೆಯ್ದಿದ ಪ್ರಭುದೇವರು ಮುಂತಾದ ಸಕಲ ಪ್ರಮಥರ ಪ್ರಸಾದವೇ ಎನಗೆ ಷಟ್ಸ್ಥಲ. ಇಂತಿವರೊಳಗಾದ ಏಕೋತ್ತರಶತಸ್ಥಲ ಮೊದಲಾದ ಭಾವವೂ ನಿಮ್ಮಲ್ಲಿಯೆಂದು ಅರಿದ ಮತ್ತೆ ಅದನೇನೆಂದುಪಮಿಸುವೆ ? ಅದು ಭಾವವಿಲ್ಲದ ಬಯಲು, ನಾಮವಿಲ್ಲದ ನಿರ್ಲೇಪ, ನಿಜ ನೀನೆ ಎನ್ನುತ್ತಿದ್ದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಗುರುವಿಂಗೂ ಶಿಷ್ಯಂಗೂ,_ ಆವುದು ದೂರ ? ಆವುದು ಸಾರೆ ? ಎಂಬುದನು, ಆರುಬಲ್ಲರು ? ಗುರುವೆ ಶಿಷ್ಯನಾದ ತನ್ನ ವಿನೋದಕ್ಕೆ, ಶಿಷ್ಯನೆ ಗುರುವಾದ ತನ್ನ ವಿನೋದಕ್ಕೆ. ಕರ್ಮವೆಂಬ ಕೌಟಿಲ್ಯ ಎಡೆವೊಕ್ಕ ಕಾರಣ, ಭಿನ್ನವಾಗಿ ಇದ್ದಿತ್ತೆಂದಡೆ, ಅದು ನಿಶ್ಚಯವಹುದೆ ? ಆದಿ ಅನಾದಿಯಿಂದತ್ತತ್ತ ಮುನ್ನಲಾದ ಪರತತ್ವಮಂ ತಿಳಿದು ನೋಡಲು, ನೀನೆ ಸ್ವಯಂ ಜ್ಯೋತಿಪ್ರಕಾಶನೆಂದರಿಯಲು, ನಿನಗೆ ನೀನೆ ಗುರುವಲ್ಲದೆ ನಿನ್ನಿಂದಧಿಕವಪ್ಪ ಗುರುವುಂಟೆ ? ಇದು ಕಾರಣ ಗುಹೇಶ್ವರಲಿಂಗವು ತಾನೆ ಎಂಬುದನು ತನ್ನಿಂದ ತಾನೆ ಅರಿಯಬೇಕು ನೋಡಾ.
--------------
ಅಲ್ಲಮಪ್ರಭುದೇವರು
-->