ಅಥವಾ

ಒಟ್ಟು 21 ಕಡೆಗಳಲ್ಲಿ , 12 ವಚನಕಾರರು , 15 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಶಿಷ್ಯ ಸಂಬಂಧವನರಸುವ ಮಹಂತರ ನಾನೇನೆಂಬೆನಯ್ಯಾ; ಶಿಷ್ಯಂಗೆ ಗುರು ಶಿವಸೋದರ, ಗುರುವಿಂಗೆ ಲಿಂಗ ಶಿವಸೋದರ, ಲಿಂಗಕ್ಕೆ ಜಂಗಮ ಶಿವಸೋದರ, [ಜಂಗಮಕ್ಕೆ ಪ್ರಸಾದ ಶಿವಸೋದರ] ಪ್ರಸಾದಕ್ಕೆ ಪರಿಣಾಮವೆ ಶಿವಸೋದರ, ಇದು ಕಾರಣ, ಗುರುವಿನಲ್ಲಿ ಗುಣವ, ಲಿಂಗದಲ್ಲಿ ಸ್ಥಲವ (ಶಿಲೆಯ?) ಜಂಗಮದಲ್ಲಿ ಕುಲವ, ಪ್ರಸಾದದಲ್ಲಿ ರುಚಿಯ, ಪರಿಣಾಮದಲ್ಲಿ ಕುರುಹನರಸುವ ಪಾತಕರ ತೋರದಿರು ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಹಲವು ಲೀಲೆಯೊಳಗೆ ಗುರುಶಿಷ್ಯ ಎರಡಾದ ವಿನೋದವೇನೆಂಬೆ ? ಎನ್ನ ಶ್ರೀಗುರು ಬಸವೇಶ್ವರನು ಎನ್ನ ಶಿಕ್ಷಿಸಿ ದೀಕ್ಷೆಯನೆಸಗಿ ಮೋಕ್ಷದಖಣಿಯಮೂರ್ತಿಯತಂದು, ತನ್ನ ಗುರು ತನ್ನ ಗುರ್ತವ ತೋರಿದಾ. ಆ ಗುರ್ತವ ಎನ್ನ ಕೈಯಲ್ಲಿಟ್ಟು ಈ ಮಹಾಂತನ ಪೂಜಿಸಿ ಮುಕ್ತಿಯ ಪಡಿಯೆಂದು ನಿರೂಪಿಸಲು, ಆ ಗುರುನಿರೂಪವ ಕೈಕೊಂಡು ಮಹಾಂತನ ಮುಂದಿಟ್ಟುಕೊಂಡು ಈ ಮಹಾಂತ ಎನ್ನ ಗುರುವಿನಗುರು ಎನಗೆ ಪರಮಾರಾಧ್ಯ ತಾ ಲಿಂಗವಾಗಿ ಬಂದಕಾರಣವೇನೆಂದು ತನ್ನೊಳಗೆ ತಾನೆ ವಿಚಾರಿಸಲು, ಅಲ್ಲಿ ಹೊಳೆದುದು ನೀನು ನನಗೆ ಪರಮಾರಾಧ್ಯ, ಒಂದೇ ಲಿಂಗವೇ ಹಲವರಾಗಿ ತೋರಿದಿರಿ. ಅದೆಂತೆಂದಡೆ : ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಪಂಚಾಕ್ಷರಿಯಮಂತ್ರ ಮತ್ತು ಶಿಕ್ಷಾಗುರು ದೀಕ್ಷಾಗುರು ಮೋಕ್ಷಾಗುರು ಗುರುವಿನಗುರು ಪರಮಗುರು ಪರಮಾರಾಧ್ಯ ಮಹಾಂತದೇವರ ದೇವ ನೀನೇ ಆದಿ. ನೀವು ಹೀಂಗಾದ ಪರಿಯೆಂತೆಂದಡೆ : ಮೊದಲೇ ಶಿಕ್ಷಾಗುರು ಶಿಖಾಮಣಿಸ್ವಾಮಿಯೆನಿಸಿದಿರಿ, ದೀಕ್ಷಾಗುರು ಗುರುಬಸವಸ್ವಾಮಿಯೆನಿಸಿದಿರಿ, ಮೋಕ್ಷಾಗುರು ಶ್ರೀಮನ್‍ಮಹಾಮುರಘೆಯಸ್ವಾಮಿಗಳ ಚರಮೂರ್ತಿ ಸಿರಿವಾಸ ಚನ್ನಬಸವೇಶ್ವರರೆನಿಸಿದಿರಿ. ಗುರುವಿನಗುರು ಹಳಪ್ಯಾಟಿ ಬಸವಯ್ಯನೆನಿಸಿದಿರಿ. ಪರಮಗುರು ಭಂಗೀಪರ್ವತದೇವರೆನಿಸಿದಿರಿ. ಪರಮಾರಾಧ್ಯ ಗೊಬ್ಬೂರ ಸದಾಶಿವದೇವರೆನಿಸಿದಿರಿ. ಸರ್ವದೇವರು ಮಹೇಶ್ವರರು ಎನಗೆ ಮಹಾಮಹಾಂತನೆನಿಸಿದಿರಿ. ಎನ್ನ ದೇವರದೇವ ಸರ್ವವು ನೀನೇ ಆಗಿರ್ದು, ನೀನು ಒಂದೇ ಪರಮಾರಾಧ್ಯರೆನಲುಂಟೆ ? ಒಂದೇ ನೀ ಎನಗೆ ಲಿಂಗವಾದನೆನಲುಂಟೆ ? ಲಿಂಗವಾದಾತನು ನೀನೆ, ಪರಮಾರಾಧ್ಯನಾದಾತನು ನೀನೆ, ಗುರುವಾದಾತನು ನೀನೆ, ಅರುವಾದಾತನು ನೀನೆ, ನೀನಲ್ಲದೆ ಮತ್ತೊಂದು ಬ್ಯಾರೆ ಭಾವಿಸಲುಂಟೆ ? ಎನ್ನ ಹುಟ್ಟಿಸಿದ ಮಹಾಂತನು ನೀನೆ, ಎನ್ನ ಬೆಳಸಿದ ಶರಣಬಸವಪ್ಪನು ನೀನೆ ಎನ್ನ ಮನ್ನಿಸಿದ ಘನಸಿದ್ದಪ್ಪನು ನೀನೆ, ಎನ್ನ ನಿಂದಿಸಿದ ಹಳಪ್ಯಾಟಿ ಬಸಯ್ಯನು ನೀನೆ, ಉಣಿಸುವ ಉಡಿಸುವ ಹಾಸುವ ಹೊಚ್ಚುವ ಮುಚ್ಚುವ ಚುಚ್ಚುವ ಹಳಿವ ಮುಳಿವ ಸರ್ವವೂ ಎನಗೆ ನೀನಲ್ಲದೆ ಮತ್ತೊಬ್ಬರಿಲ್ಲ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಮಾತಿನ ಮಾಲೆಯ ಕಲಿತು ಹೋರುವಾತ ಗುರುವಲ್ಲ; ಘಾತಕತನದಿಂದ ಮಾಡುವಾತ ಶಿಷ್ಯನಲ್ಲ. ಅಂಗದ ತಿಮಿರವ ಆತ್ಮನರಿದು ಕರದಲ್ಲಿ ಪರಿಹರಿಸುವಂತೆ, ಆರಿಂದ ಬಂದಡೂ ಉಭಯದ ಕೇಡು. ಗುರುಶಿಷ್ಯ ಶುದ್ಧತೆಯಾಗಿಲ್ಲದೆ ಸದಾಶಿವಮೂರ್ತಿಲಿಂಗವನರಿಯಬಾರದು.
--------------
ಅರಿವಿನ ಮಾರಿತಂದೆ
ಅತ್ತಲಿಂದ ಒಂದು ಪಶುವು ಬಂದು, ಇತ್ತಲಿಂದ ಒಂದು ಪಶುವು ಬಂದು, ಒಂದರ ಮೋರೆಯನೊಂದು ಮೂಸಿ ನೋಡಿದಂತೆ, ಗುರುವು ಗುರುವಿನೊಳಗೆ ಸಂಬಂಧವಿಲ್ಲ ಶಿಷ್ಯರು ಶಿಷ್ಯರೊಳಗೆ ಸಂಬಂಧವಿಲ್ಲ, ಭಕ್ತರಲಿ ಭಕ್ತರಲಿ ಸಂಬಂಧವಿಲ್ಲ. ಈ ಕಲಿಯುಗದೊಳಗುಪದೇಶವ ಮಾಡುವ ಹಂದಿಗಳಿರಾ ನೀವು ಕೇಳಿರೊ, ಗಂಡಗೆ ಗುರುವಾದಡೆ ಹೆಂಡತಿಗೆ ಮಾವನೆ ? ಹೆಂಡತಿಗೆ ಗುರುವಾದಡೆ ಗಂಡಂಗೆ ಮಾವನೆ ? ಗಂಡ ಹೆಂಡತಿಗೆ ಗುರುವಾದಡೆ ಇವರಿಬ್ಬರೇನು ಒಡಹುಟ್ಟಿದರೆ ? ಈ ಭೇದವನರಿಯದೆ ದೀಕ್ಷೆ ಕಾರಣವ ಮಾಡುವಾತ ಗುರುವಲ್ಲ. ಈ ಕಳೆಯ ಕುಲವನರಿಯದಾತ ಶಿಷ್ಯನಲ್ಲ. ಈ ಭೇದವನರಿದು ಕಾರಣವ ಮಾಡುವ ಗುರುಶಿಷ್ಯ ಸಂಬಂಧವೆಲ್ಲ ಉರಿ ಕರ್ಪುರ ಸಂಯೋಗದಂತಹುದು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಗುರುಶಿಷ್ಯ ಸಂಬಂಧವನು ಏನೆಂದುಪಮಿಸುವೆನಯ್ಯ! ಒಂದಾಗಿ ಹೋಗಲುಬಾರದು, ಅವರಿದ್ದೂರಲಿರಲಾಗದು. ಗಣತಿಂಥಿಣಿಯಲ್ಲಿ ಕುಳ್ಳಿರಲಾಗದು, ಅವರ ಸಹಪಙ್ತಯಲ್ಲಿ ಲಿಂಗಾರ್ಚನೆಯ ಮಾಡಲಾಗದು, ಅವರಂಥವರಿಂಥವರೆಂದು ಕನಸಿನಲ್ಲಿ ಮನಸಿನಲ್ಲಿ ನೆನೆದಡೆ ಅಘೋರನರಕ ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಗುರುಶಿಷ್ಯ ಸಂಬಂಧದಿರವ ಇನ್ನಾರು ಬಲ್ಲರು ? ನೆರೆದ ನೆರವಿಗೆ ಹೇಳಲುಂಟೆ ಈ ಮಾತ ? ಸ್ತ್ರೀಪುರುಷರ ಸ್ನೇಹಕೂಟವ ಮತ್ತೊಬ್ಬರಿಗೆ ಅರುಹಬಾರದು. ಗುರುಶಿಷ್ಯ ಸಂಬಂಧವನಿನ್ನಾರು ಬಲ್ಲರು, ಕಲಿದೇವಯ್ಯ ?
--------------
ಮಡಿವಾಳ ಮಾಚಿದೇವ
ಗುರುಶಿಷ್ಯ ಸಂಬಂಧವಾದುದಕ್ಕೆ ಇದು ಚಿಹ್ನ; ಹಿಂದ ಬಿಟ್ಟು ಮುಂದ ಹಿಡಿಯಲೇಬೇಕು. ಕೂಡಲಸಂಗಮದೇವ ಕೇಳಯ್ಯಾ, ಕಿಚ್ಚಿನೊಳಗೆ ಕೋಲ ಬೈಚಿಟ್ಟಂತಿರಬೇಕು.
--------------
ಬಸವಣ್ಣ
ಭಕ್ತನೆಂಬ ನಾಮಧಾರಕಂಗೆ ಆವುದು ಪಥವೆಂದರೆ: ಗುರುಭಕ್ತನಾದರೆ ಜಂಗಮವನಾರಾಧಿಸುವುದು, ಗುರುಶಿಷ್ಯರಿಬ್ಬರ ಗುರುತ್ವ ಮಾಡಿದನಾಗಿ, ಆಚಾರಭಕ್ತನಾದರೆ ಜಂಗಮನಾರಾಧಿಸುವುದು. ಗುರುಶಿಷ್ಯರಿಬ್ಬರ ಸದಾಚಾರದಲ್ಲಿ ನಿಲಿಸಿದನಾಗಿ, ಲಿಂಗಭಕ್ತನಾದರೆ ಜಂಗಮವನಾರಾಧಿಸುವುದು. ಗುರು ತನ್ನ ಲಿಂಗವ ಶಿಷ್ಯಂಗೆ ಕೊಟ್ಟು ವ್ರತಗೇಡಿಯಾಗಿ ಹೋಹಲ್ಲಿ ಆ ಗುರು ಸಹಿತ ಶಿಷ್ಯಂಗೆ ಸ್ವಾಯತವ ಮಾಡಿದನಾಗಿ. ಪ್ರಸಾದಭಕ್ತನಾದರೆ ಜಂಗಮನಾರಾಧಿಸುವುದು, ಗುರುಶಿಷ್ಯ ಸಂಬಂಧದಲ್ಲಿ ಪ್ರಸಾದೋದ್ಭವವ ತೋರಿದನಾಗಿ. ಇಂತು ಆವ ಪ್ರಕಾರದಲ್ಲಿಯೂ ಜಂಗಮವೆ ಅಧಿಕವೆಂಬ ಉತ್ತರಕ್ಕೆ ಆವುದು ಸಾಕ್ಷಿಯೆಂದರೆ, ಶಿವವಾಕ್ಯವು ಪ್ರಮಾಣು: ಲಿಂಗದ್ವಯಂ ಸಮಾಖ್ಯಾತಂ ಚರಂ ಚಾಚರಮೇವ ಚ ಅಚರಂ ಮಂತ್ರಸ್ಥಾಪ್ಯಂ ಹಿ ಚರೇ ನಿತ್ಯಂ ಸದಾಶಿವಃ ಲಿಂಗಾರ್ಪಿತಂ ನ ಕರ್ತವ್ಯಂ ಕರ್ತವ್ಯಂ ಜಂಗಮಾರ್ಪಿತಂ ! ಲಿಂಗಾಚಾರಂ ಸಮಾಖ್ಯಾತಂ ಜಂಗಮಸ್ಯ ವಿಶೇಷತಃ ಇಂತು ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯಂಗೆ ಜಂಗಮಸಹಿತ ಮಾಡುವುದು ಸದಾಚಾರ, ಜಂಗಮ ವಿರಹಿತ ಅನಾಚಾರ. ಇಂತು ಶಿವನಲ್ಲಿ ಏಕಾರ್ಥವಾದ ಕಾರಣ ಜಂಗಮಪ್ರಾಣಿಯಾದ ಜಂಗಮಪ್ರಸಾದಿಯಾದ ಬಸವಣ್ಣ. ಆ ಬಸವಣ್ಣನ ಪ್ರಸಾದದಿಂದ ಬದುಕಿದೆ ಕಾಣಾ ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಗುರುಶಿಷ್ಯ ಸಂಬಂಧವೆಂದು ನುಡಿಯುತಿರ್ಪರೆಲ್ಲರು; ಗುರುಶಿಷ್ಯ ಸಂಬಂಧವನಾರೂ ಅರಿಯರಲ್ಲ ! ಗುರುಶಿಷ್ಯ ಸಂಬಂಧವೆಂತೆಂದೊಡೆ ಹೇಳಿಹೆವು ಕೇಳಿರೋ ಸದ್ಭಕ್ತ ಶರಣಜನಂಗಳೆಲ್ಲರು. ಶ್ರೀಗುರು ಶಿಷ್ಯಂಗೆ ಉಪದೇಶವ ಮಾಡುವ ಕಾಲದಲ್ಲಿ ಆ ಶಿಷ್ಯನ ಸ್ಥೂಲತನು ಸೂಕ್ಷ್ಮತನು ಕಾರಣತನುವೆಂಬ ತನುತ್ರಯಂಗಳಲ್ಲಿ ಮುಸುಕಿದ ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ ಮಲತ್ರಯಂಗಳ ಕಳೆದು, ಮಾಯಾಪ್ರಕೃತಿಕಾಯದ ಪೂರ್ವಾಶ್ರಯವನು ಚಿದಗ್ನಿಯಿಂದೆ ಸುಟ್ಟು ಚಿತ್ಕಾಯವೆಂದೆನಿಸಿ, ಆ ಚಿತ್ಕಾಯಸ್ವರೂಪವಾದ ಶಿಷ್ಯನ ಮಸ್ತಕದ ಮೇಲೆ ಹಸ್ತವನಿರಿಸಿ ಮಥನವ ಮಾಡಿ, ಶಿಷ್ಯನ ಭಾವದ ಘಟ್ಟಿಯನೆ ಕರದಲ್ಲಿ ಕೊಡುವುದು. ಅದೆಂತೆಂದೊಡೆ : ``ಜ್ವಲತ್ಕಾಲಾನಲಾಭಾಸಾ ತಟಿತ್ಕೋಟಿ ಸಮಪ್ರಭಾ | ತಚ್ಚೋಧ್ರ್ವಂತು ಶಿಖಾ ಸೂಕ್ಷ್ಮಾ ಚಿದ್ರೂಪಾ ಪರಮಾ ಕಳಾ || ಯಥಾಕಲಾಸ್ತಥಾಭಾವೋ ಯಥಾಭಾವಸ್ತಥಾ ಮನಃ | ಯಥಾಮನಸ್ತಥಾ ದೃಷ್ಟಿಃ ಯಥಾದೃಷ್ಟಿಸ್ತಥಾ ಸ್ಥಲಂ || ಏವಂ ಭೇದಾಃ ಕಳಾದೇವಿ ಸದ್ಗುರುಶಿಷ್ಯಮಸ್ತಕೇ | ಹಸ್ತಾಬ್ಜಮಥನಗ್ರಾಹ್ಯಂ ತಸ್ಯ ಭಾವಃ ಕರೋದಿತಃ || ಏತೇ ಗುರುಕರಾಜಾಜತಾಃ ಲಿಂಗಭಕ್ತಾ ವಿಭೇದತಃ | ನಾದಬಿಂದುಕಳಾತೀತಂ ಗುರೂಣಾಂ ಲಿಂಗಮುದ್ಭವಂ ||'' -ಪರಮರಹಸ್ಯ ಎಂಬ ಶಿವಾಗಮೋಕ್ತವಾಗಿ, ಆ ಶಿಷ್ಯನ ಪಶ್ಚಿಮದಿಶೆಯಲ್ಲಿ ಬೆಳಗುತಿರ್ಪ ನಿತ್ಯನಿರಂಜನ ಪರಮಕಳೆಯ ಧ್ಯಾನಿಸಿ ಭಾವಸ್ಥಲಕ್ಕೆ ತಂದು, ಆ ಭಾವಸ್ಥಲದಿಂದೆ ಮನಸ್ಥಲಕ್ಕೆ ತಂದು, ಆ ಮನಸ್ಥಲದಿಂದೆ ದೃಷ್ಟಿಸ್ಥಲಕ್ಕೆ ತಂದು, ಆ ದೃಷ್ಟಿಸ್ಥಲದಿಂದೆ ಕರಸ್ಥಲಕ್ಕೆ ತಂದು, ಸಾಕಾರಲಿಂಗಮೂರ್ತಿಯಲ್ಲಿ ತುಂಬಿ ಇಷ್ಟಲಿಂಗವೆನಿಸಿ ಕರಸ್ಥಲದಲ್ಲಿ ಮೂರ್ತಿಗೊಳಿಸಿ ಆ ಲಿಂಗಕ್ಕೆ ಜಂಗಮದ ಪಾದತೀರ್ಥ ಪ್ರಸಾದವನೆ ಪ್ರಾಣಕಳೆಯೆಂದರ್ಪಿಸಿ, ಮತ್ತಂ, ಆ ಇಷ್ಟಲಿಂಗವೆ ಅನಿಷ್ಟಪಂಚಕಂಗಳೆಂಬ ಕತ್ತಲೆಯನೋಡಿಸುವುದಕ್ಕೆ ಚಿತ್ಸೂರ್ಯನೆಂದು ನಂಬುಗೆಯನಿಂಬುಗೊಳಿಸಿ, ಮತ್ತಮಾಲಿಂಗದಲ್ಲಿ ವೃತ್ತ ಕಟಿ ವರ್ತುಳ ಗೋಮುಖ ನಾಳ ಗೋಳಕವೆಂಬ ಆರು ಸ್ಥಾನಂಗಳ ತೋರಿ, ಆ ಆರು ಸ್ಥಾನಂಗಳಲ್ಲಿ ನಕಾರ ಮಕಾರ ಶಿಕಾರ ವಕಾರ ಯಕಾರ ಓಂಕಾರ ಎಂಬ ಆರು ಪ್ರಣವಂಗಳನೆ ಬೋಧಿಸಿ, ಆ ಆರು ಪ್ರಣವಂಗಳನೆ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಎಂಬ ಆರು ಲಿಂಗಗಳೆಂದರುಹಿ, ಆ ಆರು ಲಿಂಗಂಗಳಿಗೆ ಘ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಹೃದಯ ಎಂಬ ಆರು ಇಂದ್ರಿಯಂಗಳನೆ ಆರು ಮುಖಗಳೆಂದು ತಿಳುಹಿ, ಆ ಆರು ಮುಖಂಗಳಿಗೆ ಗಂಧ ರುಚಿ ರೂಪು ಸ್ಪರ್ಶನ ಶಬ್ದ ತೃಪ್ತಿ ಎಂಬ ಆರು ಪದಾರ್ಥಂಗಳನು ಶ್ರದ್ಧೆ ನಿಷೆ* ಸಾವಧಾನ ಅನುಭಾವ ಆನಂದ ಸಮರಸ ಎಂಬ ಆರು ಭಕ್ತಿಗಳಿಂದರ್ಪಿಸುವ ಸಕೀಲದ ವಿವರವ ತೋರಬಲ್ಲಾತನೇ ಗುರು. ಆ ಗುರುವಿನ ಕರುಣದಿಂದೆ ಪಡೆದ ಇಷ್ಟಲಿಂಗವನು ಕರಸ್ಥಲ ಮನಸ್ಥಲ ಭಾವಸ್ಥಲಮಂಟಪದಲ್ಲಿ ಮೂರ್ತಿಗೊಳಿಸಿ, ಸಗುಣಪೂಜೆ ನಿರ್ಗುಣಪೂಜೆ ಕೇವಲ ನಿರ್ಗುಣಪೂಜೆಯ ಮಾಡಿ, ಆ ಲಿಂಗದ ಮಹಾಬೆಳಗಿನೊಳಗೆ ತನ್ನಂಗದ ಕಳೆಯನಡಗಿಸಿ, ಉರಿ-ಕರ್ಪುರ ಸಂಯೋಗದಂತೆ ಅವಿರಳ ಸಮರಸವಾಗಿರ್ಪಾತನೆ ಶಿಷ್ಯನು. ಇಂತೀ ಅರುಹು ಆಚಾರಸನ್ನಿಹಿತ ಗುರುಶಿಷ್ಯರಿಬ್ಬರು ಬಯಲು ಬಯಲ ಬೆರದಂತೆ ನಿರವಯಲ ಪರಬ್ರಹ್ಮದಲ್ಲಿ ನಿಷ್ಪತ್ತಿಯನೈದಿರ್ಪರು ನೋಡಾ ! ಇಂತೀ ಅರುಹಿನ ವಿಚಾರವನರಿಯದೆ ಮಾಡುವ ಮಾಟವೆಲ್ಲ ಅಜ್ಞಾನಗಡಣದೊಳಗು. ಈ ಅಜ್ಞಾನಗುರುಶಿಷ್ಯರ ವಿಧಿಯೆಂತಾಯಿತ್ತೆಂದಡೆ, ಹುಟ್ಟುಗುರುಡನ ಕೈಯ ಕೆಟ್ಟಗಣ್ಣವ ಹಿಡಿದು ಬಟ್ಟೆಯ ಕಾಣದೆ ಕಮರಿಯ ಬಿದ್ದು ಸತ್ತಂತಾಯಿತ್ತು ಕಾಣಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಗುರುಶಿಷ್ಯ ಸಂಬಂಧಕೆ ಹೋರಾಡಿ, ಧರೆಯೆಲ್ಲ ಬಂಡಾದರು ನೋಡಾ. ಗುರುವಿನ ಭವವ ಶಿಷ್ಯನರಿಯ, ಶಿಷ್ಯನ ಭವವ ಗುರುವರಿಯ. ಜ್ಞಾನಹೀನ ಗುರುವಿಂಗೆ ಜ್ಞಾನಹೀನ ಶಿಷ್ಯನಾದರೆ ಅವರ ಪಾತಕಕೆ ಕಡೆ ಏನಯ್ಯಾ ? ಸಾಕ್ಷಿ :``ಜ್ಞಾನಹೀನಗುರೋ ಪ್ರಾಪ್ತಂ ಶಿಷ್ಯಜ್ಞಾನಂ ನ ಸಿದ್ಧತಿ | ಮೂಲಚ್ಛಿನ್ನೇ ಯಥಾವೃಕ್ಷೇ ಗಂಧಃ ಪುಷ್ಪಂ ಫಲಂ ತಥಾ ||'' ಎಂದುದಾಗಿ, ಹೀಗೆಂಬುದನರಿಯದೆ, ಹೊನ್ನು ವಸ್ತ್ರದಾಸೆಗೆ ಲಿಂಗವ ಮಾರಿಕೊಂಡುಂಬ ಗುರು ಶಿವದ್ರೋಹಿ, ಲಿಂಗವ ಕೊಂಬ ಶಿಷ್ಯ ನರದ್ರೋಹಿ. ಇಂತಪ್ಪ ಗುರು ಶಿಷ್ಯ ಸಂಬಂಧವ ನೋಡಿ ನೋಡಿ ನಗುತಿದ್ದ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ತೆರೆಯಡಗಿದ ಸಾಗರದೊಳಗೆ ಆಕಾಶ ಬಿಂಬಿಸಿ ಅಂಬರ ಜಲವನೊಳಕೊಂಡಂತೆ, ದಿನಮಣಿ ಮಣಿಮುಕುರದಲ್ಲಿ ಹೊಳೆಯಲು ಮುಕುರವೇ ರವಿಯಾಗಿಪ್ಪಂತೆ, ಗುರುಶಿಷ್ಯ ಸಂಬಂಧ ಅಭಿನ್ನಸೇವ್ಯವಾದ ಬಳಿಕ ಗುರವೆಂದನಲುಂಟೆ ಶಿಷ್ಯಂಗೆ? ಶಿಷ್ಯನೆನಲುಂಟೆ ಗುರುವಿಂಗೆ? ಇಂತು ಉಭಯನಾಸ್ತಿಯಾದ ಉಪದೇಶ ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ಸ್ವಯವಾಯಿತ್ತು.
--------------
ಆದಯ್ಯ
ಗುರುಶಿಷ್ಯ ಸಂಬಂಧ, ಕಮಠನ ಶಿಶುವಿನ ಕೂರ್ಮೆಯಂತಿರಬೇಕು. ಗುರುಶಿಷ್ಯ ಸಂಬಂಧ, ಬಿತ್ತಳಿದ ಕಾರ್ಪಾಸದ ಪಾವಕನ ಸಂಗದಂತಿರಬೇಕು. ಗುರುಶಿಷ್ಯ ಸಂಬಂಧ, ಪಯದ ಅಪ್ಪುವಿನ ಸಂಗದಂತಿರಬೇಕು. ಗುರುಶಿಷ್ಯ ಸಂಬಂಧ, ಲೆಕ್ಕಣಿಕೆಯೊಳಡಗಿದ ಸುರೇಖೆಯಂತಿರಬೇಕು. ಹೀಂಗಲ್ಲದೆ ಹಸ್ತಮಸ್ತಕಸಂಯೋಗವ ಮಾಡಿದ ಗುರುವಿನ ಇರವು. ಒಡೆದ ಗಡಿಗೆಯಲ್ಲಿ ಸುಧೆಯ ತುಂಬಿ ಅದಿರಬೇಕೆಂದಡೆ, ಪಡಿಗೆ ತೆರಹಿಲ್ಲ ಎಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇಂತಪ್ಪ ವಿಚಾರವ ತಿಳಿದು ಉಪದೇಶವ ಮಾಡಬಲ್ಲಾತನೇ ಗುರುವೆಂಬೆ. ಇಂತೀ ಭೇದವ ತಿಳಿದು ಉಪದೇಶವ ಕೊಳಬಲ್ಲಡಾತನೇ ಶಿಷ್ಯನೆಂಬೆ. ಇಂತಪ್ಪ ನಿರ್ಣಯವ ತಿಳಿದು ಪಾದೋದಕ ಪ್ರಸಾದವ ಕೊಡಬಲ್ಲಡಾತನೇ ಜಂಗಮಲಿಂಗಿಯೆಂಬೆ. ಇಂತೀ ವಿಚಾರವನಳವಡಿಸಿಕೊಂಡು ಪಾದೋದಕ ಪ್ರಸಾದವ ಕೊಳಬಲ್ಲಡಾತನೇ ಭಕ್ತನೆಂಬೆ. ಇಂತಪ್ಪ ಶಿವಾಚಾರದ ಬಗೆಯನು ತಿಳಿಯದೆ ಮಾಡುವ ಮಾಟವೆಲ್ಲಾ ಹೊಳ್ಳಕುಟ್ಟಿ, ಕೈ ನೊಂದು ಗಾಳಿಗೆ ತೂರಿದಂತಾಯಿತಯ್ಯಾ. ಈ ಲೋಕದೊಳಗೆ ಗುರುಶಿಷ್ಯ, ದೇವ ಭಕ್ತರೆಂಬುಭಯರ ಮೇಳಾಪವ ನೋಡೆಂದ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಭಕ್ತನೆಂಬ ನಾಮಧಾರಕಂಗೆ ಅವುದು ಪಥ್ಯ ವೆಂದಡೆ : ಗುರುಭಕ್ತನಾದಡೂ ಜಂಗಮವನಾರಾಧಿಸೂದು, ಗುರುಶಿಷ್ಯರಿಬ್ಬರ ಗುರುತ್ವವ ಮಾಡಿದವನಾಗಿ, ಆಚಾರಭಕ್ತನಾದಡೂ ಜಂಗಮವನಾರಾಧಿಸೂÀದು, ಆ ಗುರುಶಿಷ್ಯರಿಬ್ಬರನೂ ಸದಾಚಾರದಲ್ಲಿ ನಿಲಿಸಿ ತೋರಿದನಾಗಿ. ಪ್ರಸಾದಭಕ್ತನಾದಡೆಯೂ ಜಂಗಮವನಾರಾಧಿಸೂದು, ಆ ಗುರುಶಿಷ್ಯ ಸಂಬಂಧದಲ್ಲಿ ಪ್ರಸಾದದುದ್ಭವವ ನಿರೂಪಿಸಿ ತೋರಿದನಾಗಿ. ಲಿಂಗಭಕ್ತನಾದಡೂ ಜಂಗಮವನಾರಾಧಿಸೂದು, ಗುರು ತನ್ನ ಲಿಂಗವನು ಆ ಶಿಷ್ಯಂಗೆ ಕೊಟ್ಟು ತಾನು ವ್ರತಗೇಡಿಯಾಗಿ ಹೋಹಲ್ಲಿ, ಆ ಗುರುವಿಂಗೆ ಆ ಲಿಂಗಸಹಿತವೆ ಅ ಶಿಷ್ಯನೆ ಸಾಹಿತ್ಯವ ಮಾಡಿ ತೋರಿದನಾಗಿ. ಇಂತು ಆವ ಪ್ರಕಾರದಲ್ಲಿಯೂ ಜಂಗಮವೆ ಅಧಿಕವೆಂಬ ಉತ್ತರಕ್ಕೆ ಇನ್ನಾವುದು ಸಾಕ್ಷಿಯೆಂದಡೆ : ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣನೈಕ್ಯ. ಇಂತು ಷಟ್‍ಸ್ಥಲವಿಡಿದು ನಡೆವ ಭಕ್ತಂಗೆ ಅನುಭವವಿಡಿದು ಮಾಡುವ ಸದಾಚಾರವೆ ಸದಾಚಾರ. ಅನುಭವಕ್ಕೆ ಬಾರದೆ ಮಾಡುವ ಸದಾಚಾರವೆ ಅನಾಚಾರ. `ಜ್ಞಾನಹೀನಾ ಕ್ರಿಯಾಸ್ಸರ್ವೇ ನಿಷ್ಫಲಾಃ ಶ್ರುಣು ಪಾರ್ವತಿ' ಎಂದುದಾಗಿ, ಇದು ಕಾರಣ, ಶಿವನಲ್ಲಿ ಏಕಾಂತದಿಂದ ಜಂಗಮಪ್ರಸಾದವ ಕೊಂಡು, ಬಸವಣ್ಣನ ಪ್ರಸಾದವ ಕರುಣಿಸಿ ಕಾರುಣ್ಯವ ಮಾಡು, ಮಹಾಲಿಂಗ ಕಲ್ಲೇಶ್ವರಾ.
--------------
ಹಾವಿನಹಾಳ ಕಲ್ಲಯ್ಯ
ಅರ್ಪಿತವೆಂದರೆ ಅನರ್ಪಿತವಾಯಿತ್ತು, ಅನರ್ಪಿತವೆಂದರೆ ಅರ್ಪಿತವಾಯಿತ್ತು. ಗುರುವೆಂದರೆ ಶಿಷ್ಯನಾಯಿತ್ತು, ಶಿಷ್ಯನೆಂದರೆ ಗುರುವಾಯಿತ್ತು. ಗುರುಶಿಷ್ಯ ಸಂಬಂಧ ಕ್ರೀ ಪ್ರತಿಭಾವವುಳ್ಳನ್ನಕ್ಕ, ಘನಲಿಂಗೈಕ್ಯವೆಲ್ಲಿಯದೊ ? ಕೂಡಲಚೆನ್ನಸಂಗಮದೇವಾ ?
--------------
ಚನ್ನಬಸವಣ್ಣ
-->