ಅಥವಾ

ಒಟ್ಟು 49 ಕಡೆಗಳಲ್ಲಿ , 28 ವಚನಕಾರರು , 47 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಶ್ಚಯಿಸಿಕೊಂಡಲ್ಲಿಯೆ ನಿಜತತ್ವ. ಉತ್ತರ ಪೂರ್ವ ಉಭಯದ ಕಕ್ಷೆಯ ಬಿಟ್ಟಲ್ಲಿಯೆ ನಿತ್ಯತ್ವ. ಅನಿತ್ಯತ್ವವೆಂಬ ಗೊತ್ತ ಮರೆದಲ್ಲಿಯೆ, ಕಾಮಧೂಮ ಧೂಳೇಶ್ವರನು ಸಚ್ಚಿದಾನಂದ.
--------------
ಮಾದಾರ ಧೂಳಯ್ಯ
ಇಷ್ಟಗುಟ್ಟೆಂಬುದು, ನಿಶ್ಚಯ ವಸ್ತುವೆಂಬುದು, ಆತ್ಮನೇಕವೆಂಬುದು, ಇಂದ್ರಿಯಂಗಳು ಹಲವೆಂಬುದು, ಅರಿವು ಹಿಂಗಲಿಕೆ ಒಂದೆಂಬುದು, ಅಣೋರಣೀಯಾನ್ಮಹತೋ ಮಹೀಯಾನ್ ಎಂಬುದು, ಎಲ್ಲಾ ದೃಷ್ಟದ ಲಕ್ಷದಲ್ಲಿ ಉಂಟೆಂಬುದು, ಉಭಯಭಾವದಲ್ಲಿ ತೋರಿ ಹರಿದಾಡುವುದು, ಅದು ಚಿತ್ತೋ, ಚಿದಾದಿತ್ಯನೋ, ವಸ್ತು ಭಾವವೋ ? ಇಂತೀ ಲಕ್ಷ ಅಲಕ್ಷಂಗಳೆಂಬ ಗೊತ್ತ ಮೆಟ್ಟಿ, ಬಟ್ಟಬಯಲಾದ ಕಾಮಧೂಮ ಧೂಳೇಶ್ವರನೊಳಗಾದೆ, ಆಗೆನೆಂಬ ಭಾವ ನಿಂದಲ್ಲಿ.
--------------
ಮಾದಾರ ಧೂಳಯ್ಯ
ಗುರುಸ್ಥಲವೆಂದು ಬಂದೆ, ಆಚಾರ್ಯನಾಗಿ. ಲಿಂಗಸ್ಥಲವೆಂದು ಬಂದೆ, ಆರೋಹ ಅವರೋಹಂಗಳ ಪರಿಹರಿಸಿಹೆನೆಂದು. ಶರಣನಾಗಿ ಬಂದೆ, ಭಕ್ತಿಜ್ಞಾನ ವೈರಾಗ್ಯ ತ್ರಿವಿಧದ ಗೊತ್ತ ಮುಕ್ತಿಯ ಮಾಡಿಹೆನೆಂದು. ದುತ್ತೂರಕ್ಕೆ, ಕಲ್ಪತರುವಿಂಗೆ ಮತ್ತಾವ ವೃಕ್ಷಫಲಾದಿಗಳಿಗೆ ಅಪ್ಪುವೊಂದು, ಹಲವು ವೃಕ್ಷಂಗಳು ತಮ್ಮ ತಮ್ಮ ಸಶ್ಚಿತ್ತದ ಸವಿಯಾದಂತೆ, ನಾನಾ ಸ್ಥಲಕ್ಕೆ ದೇವನೊಬ್ಬನೆ. ಊರೊಳಗಾದಲ್ಲಿ ಅರಸು ಆಳಿನೊಳಗಾದಂತೆ ಆದೆಯಲ್ಲಾ. ಕ್ರೀಗೆ ತುತ್ತಾಗಿ ಸಿಕ್ಕಿದೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮನವಿಕಾರದಲ್ಲಿ ತೋರುವ ಸುಳುಹು ತನುವಿಕಾರದಲ್ಲಿ ಕಾಣಿಸಿಕೊಂಡ ಮತ್ತೆ ಅರಿವಿನ ಭೇದ ಎಲ್ಲಿ ಅಡಗಿತ್ತು ? ಅರಿದು ತೋರದ ಮತ್ತೆ ನೆರೆ ಮುಟ್ಟಬಲ್ಲುದೆ ತ್ರಿವಿಧದ ಗೊತ್ತ ? ಇಂತೀ ಭಗಧ್ಯಾನರನೊಪ್ಪ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು.
--------------
ಪ್ರಸಾದಿ ಭೋಗಣ್ಣ
ಕಲ್ಲನೊಡೆದು ಕಲ್ಲು ಒಡಗೂಡುವಂತಾಗಬಲ್ಲಡೆ ಇಷ್ಟಲಿಂಗಸಂಬಂದ್ಥಿ. ಮಣ್ಣಿನಲ್ಲಿ ಸುಟ್ಟ ಓಡು ಮನ್ನಿನಂತಾಗಬಲ್ಲಡೆ ಭಾವಲಿಂಗಸಂಬಂದ್ಥಿ. ಇಷ್ಟಭಾವವನರಿವ ಆ ಚಿತ್ತ ದೃಷ್ಟವನರಿವುದಕ್ಕೆ ಶ್ರುತದೃಷ್ಟವೆಂತುಟೆಂದಡೆ: ವಾರಿಕಲ್ಲು ನೋಡ ನೋಡಲಿಕ್ಕೆ ನೀರಾದಂತೆ. ಇಷ್ಟ ಭಾವ ಕರಿಗೊಂಡು, ನಿಶ್ಚಯಪದವೆಂಬ ಗೊತ್ತ ಮುಟ್ಟದೆ, ಅದು ಸಶ್ಚಿತ್ತವಾದಲ್ಲಿ, ಪ್ರಾಣಲಿಂಗಸಂಬಂದ್ಥಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕಂಡು ಅರ್ಪಿಸುವುದು ಬ್ರಹ್ಮತತ್ವ. ಸಂದೇಹದಲ್ಲಿ ಅರ್ಪಿಸುವುದು ವಿಷ್ಣುತತ್ವ. ಬಂಧಮೋಕ್ಷಕರ್ಮಗಳಿಲ್ಲವೆಂದು ಅರ್ಪಿಸುವುದು ರುದ್ರತತ್ವ. ತತ್ವಂಗಳ ಗೊತ್ತ ಮುಟ್ಟದೆ ನಿಶ್ಚಯವಾದ ಪರಿಪೂರ್ಣಂಗೆ ಉತ್ಪತ್ತಿ ಸ್ಥಿತಿ ಲಯವೆಂಬುದು ಇತ್ತಲೇ ಉಳಿಯಿತ್ತು, ಕಾಮಧೂಮ ಧೂಳೇಶ್ವರನ ಮುಟ್ಟಲಿಲ್ಲವಾಗಿ.
--------------
ಮಾದಾರ ಧೂಳಯ್ಯ
ಅಂಬರದಲ್ಲಿ ತೋರುವ ಚಾಪದ ಬಹುವರ್ಣದ ಸಂಭ್ರಮ ಕುಂಬ್ಥಿನಿಯ ಜಲದಲ್ಲಿ ತೋರುತ್ತಿರೆ ಉಭಯದಲ್ಲಿಯೂ ಬಯಲು. ಆ ರಂಜನೆಯಂತೆ ಚಿತ್ತದ ಕಲೆ ಚಿತ್‍ಶಕ್ತಿಯ ಅರಿವು ಮತ್ರ್ಯರಿಗೆ ಅಗೋಚರ. ಚಿತ್ತಜನ ಬಿಲ್ಲನೆತ್ತುವಾತ ಅನಿತ್ಯದ ಗೊತ್ತಿನಲೈದಾನೆ. ನಿತ್ಯದ ಗೊತ್ತ ಮುಟ್ಟಿ, ಉಭಯದ ಗೊತ್ತ ಬಚ್ಚಬಯಲಾಯಿತ್ತು. ಬಯಲ ಬೆಳಗಿನಲ್ಲಿ ಹೊಳಹುದೋರುತ್ತದೆ, ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಪ್ರಮಥಗಣಂಗಳ ಪ್ರಸಾದಕೊಂಡದಲ್ಲಿ ಅಡಗಿದ ಗೊತ್ತ ಆರೂ ಅರಿಯರಲ್ಲ, ಬಸವಣ್ಣಂಗೆ ಪ್ರಭುದೇವರು ತೋರಿ ಕೊಟ್ಟನು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಂಗಕ್ಕೆ ಲಿಂಗವ ಕೊಟ್ಟವ ಆಚಾರ್ಯನಾದ. ಮನಕ್ಕರಿವ ತೋರಿದಾತ ಮೋಕ್ಷ ಆಚಾರ್ಯನಾದ. ಮೋಕ್ಷ ವಿಮೋಕ್ಷವಾಗಿ ಉಭಯದ ಗೊತ್ತ ತೋರಿ, ಕಾಯದ ಕರ್ಮವ ಕೆಡಿಸಿ, ಜೀವನ ಭವವ ಛೇದಿಸಿ, ತದ್ರೂಪ ತೋರಿದ ಜ್ಞಾನಗುರು. ಆತ ಪ್ರಕಾಶ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ತಾನೆ.
--------------
ಶಿವಲೆಂಕ ಮಂಚಣ್ಣ
ಷಡಾಧಾರದಲ್ಲಿ ಅಡಿಗದಿ ಹೋಹವರ ಕಂಡೆ. ತತ್ವಂಗಳ ಗೊತ್ತ ಹೇಳಿ ಮುಟ್ಟದೆ ಹೋಹವರ ಕಂಡೆ. ಮಾತಿನ ಬ್ರಹ್ಮವನಾಡಿ ವಸ್ತುವನರಿಯದೆ, ಭ್ರಾಂತರಾಗಿ ಕೆಟ್ಟವರ ಕಂಡೆ. ಅಷ್ಟಾಂಗಯೋಗವನರಿತೆಹೆವೆಂದು ಘಟ ಕೆಟ್ಟು ನಷ್ಟವಾದವರ ಕಂಡೆ. ಇಂತಿವನರಿದು ಕರ್ಮಯೋಗವ ಮಾಡದೆ, ವರ್ಮಂಗಳನರಿದು ಸರ್ವಗುಣಸಂಪನ್ನನಾಗಿ, ತನ್ನ ತಾನರಿದ ಮತ್ತೆ ಮಹಾತ್ಮಂಗೆ, ತನಗೆ ಏನೂ ಅನ್ಯಭಿನ್ನವಿಲ್ಲ, ಪ್ರಸನ್ನ ಕಪಿಲಸಿದ್ಧ ಮಲ್ಲಿಕಾರ್ಜುನಲಿಂಗವು ತಾನಾದವಂಗೆ.
--------------
ಸೂಜಿಕಾಯಕದ ಕಾಮಿತಂದೆ
ತತ್ವಂಗಳ ಗೊತ್ತ ಗುಟ್ಟೆಂದು ಬಿಡಬಾರದು ಇಷ್ಟಲಿಂಗದ ಪೂಜೆಯ ಆತ್ಮನ ಗೊತ್ತನರಿತೆನೆಂದು ಮರೆಯಲಾಗದು ಪಾಪ ಪುಣ್ಯವಿಲ್ಲಾ ಎಂದು ನೀಕರಿಸಿ ನಡೆಯಲಾಗದು. ಈ ಗುಣ ಅಂಗವನರಿವನ್ನಕ್ಕ ಒಂದೂ ಇಲ್ಲಾ ಎಂದು ಬಿಡಬಹುದೆ? ನಾನೆಂಬುದ ಇದೇನೆಂದು ಅರಿವನ್ನಕ್ಕ ಶ್ರುತಕ್ಕೆ ದೃಷ್ಟ, ದೃಷ್ಟಕ್ಕೆ ಅನುಮಾನ, ಅನುಮಾನಕ್ಕೆನಿಶ್ಚಯ. ನಿಶ್ಚಯ ನಿಜವಾದಲ್ಲಿ, ಗೋಪತಿನಾಥ ವಿಶ್ವೇಶ್ವರಲಿಂಗನ ಕ್ರಿಯಾನಿರ್ವಾಹ.
--------------
ತುರುಗಾಹಿ ರಾಮಣ್ಣ
ಧಾರೆ ಮೊನೆ ಕಟ್ಟಿದಂತೆ, ಮೀರಿ ತಾಗಬಲ್ಲುದೆ ಅಸಿಕೂರಲಗು ? ನಿಪುಣ ಕ್ರೀಭಾವ ಶುದ್ಧವಾಗಿಯಿದ್ದವಂಗೆ ಬೇರೆ ಇಂದ್ರಿಯಂಗಳು ಗತಿಗೆಡಿಸಬಲ್ಲವೆ ? ಅವು, ಅರ್ಕೇಶ್ವರಲಿಂಗನ ಗೊತ್ತ ಮುಟ್ಟಲರಿಯವು.
--------------
ಮಧುವಯ್ಯ
ಅಯ್ಯ, ಕೇಳ, ಪ್ರಮಥಗಣಂಗಳೆಲ್ಲ ಷಡ್ವಿಧಭಕ್ತಿಯೆಂಬ ಪರಮಾಮೃತವ ಸೇವಿಸಿ, ಪ್ರವೃತ್ತಿಮಾರ್ಗದಲ್ಲಿ ಚರಿಸುವ ಆರು ವೈರಿಗಳ ಸಂಗವ ತ್ಯಜಿಸಿ, ನಿವೃತ್ತಿ ಮಾರ್ಗದಲ್ಲಿ ಚರಿಸುವ ಷಡ್ಗುಣಗಳ ಸಂಗವ ಸಾಧಿಸಿ, ಜಂಗಮದ ಆಚಾರ ವಿಚಾರವ ತಿಳಿದು, ಷಟ್‍ಸ್ಥಲಮಾರ್ಗದಲ್ಲಿ ನಿಂದು, ಭಕ್ತಿ-ಜ್ಞಾನ-ವೈರಾಗ್ಯದಲ್ಲಾಚರಿಸಿದ ವಿಚಾರವೆಂತೆಂದಡೆ : ಅನಾದಿನಿರಂಜನ-ಅಕಾಯಚರಿತ್ರ-ನಿರಾಲಂಬ-ಪರಶಿವಮೂರ್ತಿ ಸಾಕ್ಷಾತ್ ಶ್ರೀಗುರುದೇವನಿಂದ ಏಕವಿಂಶತಿ ವೇಧಾ-ಮಂತ್ರ-ಕ್ರಿಯಾದೀಕ್ಷೆಯ ಪಡದು, ತನ್ನ ತಾನರ್ಚಿಸಿ, ಆ ಶ್ರೀಗುರುದೇವನ ಲಿಂಗಜಂಗಮಲೀಲೆ ಹೇಗುಂಟೋ ಹಾಂಗೆ, ಭಕ್ತಿಯ ಮಾಡಿ, ಶ್ರೀಗುರು-ಲಿಂಗ-ಜಂಗಮದಂತಃಕರಣವೆಂಬ ಪರಮಾತೃತಸುಧೆಯೊಳಗೆ ಲೋಲುಪ್ತರಾಗಿ, ನಿರಾವಯ ಸಮಾಧಿಯಲ್ಲಿ ಬಯಲಾದರು ನೋಡ. ಅದರ ವಿಚಾರವೆಂತೆಂದಡೆ : ಭಕ್ತಿಸ್ಥಲಕ್ಕೆ ಕಾರಣವಾದ ಬಸವಣ್ಣನೆ ಲಿಂಗಲಾಂಛನಗಳ ನೋಡಿ, ತನು-ಮನ-ಧನವನೊಪ್ಪಿಸಿ ಶರಣೆಂದರಯ್ಯ ! ಮಹೇಶಸ್ಥಲಕ್ಕೆ ಕಾರಣವಾದ ಮಡಿವಾಳದೇಶಿಕೇಂದ್ರನೆ ಲಿಂಗಲಾಂಛನ-ವಿಭೂತಿ-ರುದ್ರಾಕ್ಷೆ-ಪಂಚಾಚಾರವ ನೋಡಿ ತನುಮನಧನವನೊಪ್ಪಿಸಿ ಶರಣೆಂದರಯ್ಯ. ಪ್ರಸಾದಿಸ್ಥಲಕ್ಕೆ ಕಾರಣವಾದ ಮರುಳಶಂಕರದೇವನೆ ಲಿಂಗಲಾಂಛನ-ವಿಭೂತಿ-ರುದ್ರಾಕ್ಷೆ-ಮಂತ್ರ ಪಂಚಾಚಾರದಾಚರಣೆ, ಸಪ್ತಾಚಾರದ ಸಂಬಂಧದ ನಡೆನುಡಿಯ ವಿಚಾರಿಸಿ, ತನುಮನಧನವನೊಪ್ಪಿಸಿ ಶರಣೆಂದರಯ್ಯ. ಪ್ರಾಣಲಿಂಗಿಸ್ಥಲಕ್ಕೆ ಕಾರಣವಾದ ಸಿದ್ಧರಾಮೇಶ್ವರನೆ ಲಿಂಗಲಾಂಛನ, ಶ್ರೀವಿಭೂತಿ, ರುದ್ರಾಕ್ಷೆ, ಪಂಚಮಂತ್ರ, ದ್ವಾದಶಾಚಾರ ಮೊದಲಾದ ಸರ್ವಾಚಾರ ಸಂಪತ್ತಿನಾಚರಣೆ ಸರ್ವಾಂಗದಲ್ಲಿ ನೂನು ಕೂನುಗಳಿಲ್ಲದೆ, ನಡೆನುಡಿಗಳು ಹೊದ್ದಲ್ಲದೆ, ನಿರಾಭಾರಿ ವೀರಶೈವವ ನೋಡಿ ಇದೆ ಪರವಸ್ತುವೆಂದು ತನುಮನಧನವನೊಪ್ಪಿಸಿ ಶರಣೆಂದರಯ್ಯ. ಶರಣಸ್ಥಲಕ್ಕೆ ಕಾರಣವಾದ ಚೆನ್ನಬಸವೇಶ್ವರನೆ ಇಂತು ಚತುರ್ವಿಧಮೂರ್ತಿಗಳು ವಿಚಾರಿಸಿದ ಆಚರಣೆಯ ನೋಡಿ, ಗುರು-ಸೂತ್ರ-ಗೋತ್ರ-ಸಂಪ್ರದ ದೀಕ್ಷೆಯ ವಿಚಾರಿಸಿ, ಲಿಂಗಾಂಗ ಷಟ್ಸ್ಥಾನಂಗಳ ನೋಡಿ, ಗುರುಮಾರ್ಗಾಚಾರ ನಡೆನುಡಿಗಳ ವಿಚಾರಿಸಿ, ಸ್ವಾನುಭಾವ ಸಕೀಲದ ಗೊತ್ತ ತಿಳಿದು, ಲಾಂಚನವ ನೋಡಿ ಮನ್ನಿಸಿ, ತನುಮನಧನವನೊಪ್ಪಿಸಿ ಶರಣೆಂದರಯ್ಯ. ಐಕ್ಯಸ್ಥಲಕ್ಕೆ ಕಾರಣವಾದ ಅಜಗಣ್ಣಗಳೆ ಬಸವ, ಮಡಿವಾಳ, ಮರುಳುಶಂಕರ, ಸಿದ್ಧರಾಮ, ಚೆನ್ನಬಸವ ಮೊದಲಾದ ಮಹಾಗಣಂಗಳು ಅರ್ತಿ-ಉತ್ಸಾಹದಿಂದ ಭಕ್ತಿಯ ಮಾಡಿದ ಜಂಗಮವೆ ನನಗೆ ಮಹಾಪ್ರಸಾದವೆಂದು ಅವರಡಿಗಳಿಗೆ ವಂದಿಸಿ, ತನು-ಮನ-ಧನವನೊಪ್ಪಿಸಿ ಶರಣೆಂದರಯ್ಯ. ನಿರವಯಸ್ಥಲಕ್ಕೆ ಕಾರಣವಾದ ಪ್ರಭುದೇವನೆ ಆವ ಮತವೆಂದು ನೋಡದೆ, ಬಾಲಬ್ರಹ್ಮಿ-ಬಳಸಿಬ್ರಹ್ಮಿಯೆಂಬ ಸಂಸಾರ ಸಂಕಲ್ಪಸೂತಕವನೆಣಿಸದೆ, ಸರ್ವಾಂಗದವಯವಂಗಳ ನೋಡಿ, ಸರ್ವಸಂಗಪರಿತ್ಯಾಗದಿಂದ, ದ್ವಾದಶ ಮಲಂಗಳ ತ್ಯಜಿಸಿ, ಭಕ್ತಿ-ಜ್ಞಾನ-ವೈರಾಗ್ಯದಿಂದ ಸಮಸ್ತವಾದ ಭೋಗಯೋಗಾದಿಗಳಿಗೆ ಹೇವರಿಸಿ, ನಿರಾಸಕತ್ವದಿಂದ ಶಿವಧೋ ಎಂದು ಗುರೂಪಾವಸ್ತೆಯಂ ಮಾಡುವ ಜ್ಞಾನಕಲಾತ್ಮಂಗೆ ಜಂಗಮಾಕೃತಿಯಿಂದ ಪ್ರತ್ಯಕ್ಷವಾಗಿ, ಆ ಜ್ಞಾನಕಲಾತ್ಮನ ಉಪಾವಸ್ತೆಯನೊಂದಿಸಿ, ಆತಂಗೆ ಅಂಜಬೇಡವೆಂದು ಅಭಯಹಸ್ತವನಿತ್ತು. ರೇವಣಸಿದ್ಧೇಶ್ವರ ಮೊದಲಾದ ಗಣಾಚಾರ್ಯರ ಮಧ್ಯದಲ್ಲಿ ಈ ಜ್ಞಾನಕಲಾತ್ಮನನೊಪ್ಪಿಸಿ, ಅವರಿಂದ ನಿರಾಕಾರವಾದ ಪ್ರಾಣಲಿಂಗವ ಬಷ್ಕರಿಸಿ, ಪಂಚಕಲಶಸೂತ್ರದಿಂದ ಪ್ರಮಥಗಣ ಸಾಕ್ಷಿಯಾಗಿ ಆತನ ಷಡ್ವಿಧಸ್ಥಾನದಲ್ಲಿ ಸ್ಥಿರಗೊಳಸಿ, ಅಂತರಂಗ ಬಹಿರಂಗದಲ್ಲಿ ಅಷ್ಟವಿಧಾರ್ಚನೆ, ಷೋಡಶೋಪಚಾರ ಭಕ್ತಿಗಳನರುಪಿ, ಆ ಪರಶಿವಲಿಂಗದಲ್ಲಿ ನೈಷೆ*ಯ ನೋಡಿ, ಪ್ರಮಥಗಣರಾಧ್ಯ ಭಕ್ತ ಮಹೇಶ್ವರರೊಡಗೂಡಿ, ಏಕವಿಂಶತಿ ದೀಕ್ಷೆ ಮೊದಲಾಗಿ, ಪ್ರಮಥರು ನುಡಿದ ಎರಡೆಂಬತ್ತು ಕೋಟಿ ವಚನಾನುಭಾವದ ಉದಾಹರಣೆಯ ಬೋಧಿಸಿ, ಸ್ವಸ್ವರೂಪು ನಿಲುಕಡೆಯ ಬೋಧಿಸಿ, ನಾನು ನೀನು ಎಂಬ ಭಿನ್ನಭಾವವನಳಿದು, ಏಕಸ್ವರೂಪವೆಂಬ ಅಭಿನ್ನಲೀಲೆಯಿಂದ ಪಾದೋದಕ ಪ್ರಸಾದದಲ್ಲಿ ಏಕಭಾಜನವ ಮಾಡಿದಮೇಲೆ, ಶ್ರೀಗುರು ಬಸವ ಮೊದಲಾದ ಸಕಲಪ್ರಮಥಗಣಾರಾಧ್ಯರ ಕರದು, ಇಲ್ಲೊಂದು ನಿಜವಸ್ತು ಉಂಟೆಂದು ಹೇಳಿ, ತಾವು ಮೊದಲು ಶರಣು ಹೊಕ್ಕು, ತಮ್ಮ ಹಿಂದೆ ಶರಣಗಣಂಗಳೆಲ್ಲ ಶರಣುಹೊಕ್ಕು. ಅಡಿ ಮುಡಿಯಿಂದ ವಸ್ತುವ ಬೆಸಗೊಂಡು ಆ ಲಿಂಗಜಂಗಮದೇವರೂಪಡಗೂಡಿ ಬಯಲೊಳಗೆ ಮಹಾಬಯಲಾದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಪ್ಪು ಉಳ್ಳನ್ನಕ್ಕ ತೊಪ್ಪೆ ಕಿಚ್ಚಿಗೊಳಗಪ್ಪುದೆ ? ಅಪ್ಪುವಾರಿ, ಕಿಚ್ಚು ಮುಟ್ಟಿದ ಮತ್ತೆ ತೊಪ್ಪೆಯೆಂಬ ನಾಮ ಎತ್ತಹೋಯಿತ್ತು ? ಈ ಕಷ್ಟವ ಮುಟ್ಟಿದ್ದ ತನು, ದೃಷ್ಟವ ಕಂಡಿದ್ದ ಚಿತ್ತ, ಈ ಉಭಯದ ಗೊತ್ತ ಕಂಡು, ಈ ಗುಣ ಮುಕ್ತಿಯಹ ಭೇದವೆಂದು ಅರಿದ ಮತ್ತೆ, ಕಟ್ಟಿ ಬಿಟ್ಟು ನೋಡಿ, ವಸ್ತುವ ಕಂಡೆಹೆನೆಂಬುದು ಎತ್ತಣ ಶುದ್ಧಿ ಹೇಳಾ, ಕಾಮಧೂಮ ಧೂಳೇಶ್ವರಾ ?
--------------
ಮಾದಾರ ಧೂಳಯ್ಯ
ಅರಿವಿಂಗೂ ಮರವೆಯ ದೆಸೆಯಲ್ಲಿ ಓಲಾಡುವ ಇಂದ್ರಿಯಂಗಳ ಸಮೂಹ. ಈ ಉಭಯವೂ ಕೂಡಿ, ಮಹವೊಡಗೂಡಿದಲ್ಲಿ ಭರಿತಾರ್ಪಣ. ಅರಿವುಳ್ಳವನೆಂದು, ನಿಬ್ಬೆರಗು ಕರಿಗೊಂಡವನೆಂದು, ಸರ್ವಸಂಗಪರಿತ್ಯಾಗಿಯೆಂದು ತಾನರಿಯದೆ, ಉಳಿದರ ಕೈಯಿಂದ, ಪರಾಧೀನರಿಗೊರೆಯದೆ, ಅಮೃತ ಸುಧೆಯಂತೆ, ಪರಿಪೂರ್ಣ ಕಳೆದಂತೆ, ಅರಿದರಿಯದಂತಿದ್ದುದು ಭರಿತಾರ್ಪಣ. ಹೀಂಗಲ್ಲದೆ ಅಜಯಾಗವ ಮಾಡುವ ವಿಪ್ರನ ಕರ್ಮದಂತೆ ನಾನಲ್ಲ ನೇಣು ಕೊಂದಿತ್ತೆಂದು ದಾಯಗಾರಿಕೆಯಲ್ಲಿ ಹೋಹ ದರ್ಶನ ಢಾಳಕವಂತಂಗೆ, ತನ್ನ ಕಾಲ ವೇಳೆಗೆ ತಕ್ಕಹಾಗೆ ಭಕ್ತಿಯ ಮರೆದು, ಸತ್ಯವ ತೊರೆದ ದುರ್ಮತ್ತಂಗೆ ಭರಿತಾರ್ಪಣದ ಕಟ್ಟುಂಟೆ ? ಇಂತೀ ಭೇದಂಗಳ ಯುಕ್ತಿಯಲ್ಲಿ ಸತ್ತು ಚಿತ್ತು ಆನಂದವೆಂಬ ಗೊತ್ತ ಮುಟ್ಟದೆ, ಮನ ಘನದಲ್ಲಿ ನಿಂದು ಉಭಯದೆಡೆಗೆಟ್ಟುದು ಭರಿತಾರ್ಪಣ. ಈ ಗುಣ ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗ ಸಂಗ.
--------------
ಭರಿತಾರ್ಪಣದ ಚೆನ್ನಬಸವಣ್ಣ
ಇನ್ನಷ್ಟು ... -->