ಅಥವಾ

ಒಟ್ಟು 15 ಕಡೆಗಳಲ್ಲಿ , 7 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋವಿನ ಹೊಟ್ಟೆಯಲ್ಲಿ ಘೃತವಿದ್ದಡೇನೊ ಆ ಗೋವು ದಿನದಿನಕ್ಕೆ ಪುಷ್ಟವಾಗಬಲ್ಲುದೆ ? ಅದು ಕಾರಣ_ ಆ ಗೋವ ಪೋಷಿಸಿ ಕರೆದು ಕಾಸಿ, ಘೃತವ ಮಾಡಿ ಆ ಗೋವಿಂಗೆ ಕುಡಿಯಲೆರೆದಡೆ ಆ ಗೋವು ದಿನದಿನಕ್ಕೆ ಪುಷ್ಟವಹುದು. ಹಾಂಗೆ, ತನ್ನಲ್ಲಿ ವಸ್ತುವಿದ್ದಡೇನೊ ? ವಸ್ತುವ ಗುರುಮುಖದಿಂದ ಕರಸ್ಥಲಕ್ಕೆ ಪಡೆದು, ಸತ್ಕ್ರಿಯೆಯಿಂದ ಪ್ರಾಣಕ್ಕೆ ವೇಧಿಸಿದಲ್ಲದೆ ಪ್ರಾಣಲಿಂಗವಾಗದು. ಕೂಡಲಚೆನ್ನಸಂಗಯ್ಯನಲ್ಲಿ, ಇಷ್ಟಲಿಂಗವ ಸತ್ಕ್ರಿಯೆಯಿಂದ ಪ್ರಾಣಕ್ಕೆ ವೇದ್ಥಿಸಿ, ತಾನೆಂಬ ಅನಿಷ್ಟವ ತೊಲಗಿಸಿದಲ್ಲದೆ ಪ್ರಾಣಲಿಂಗಸಂಬಂಧವಾಗಬಾರದು
--------------
ಚನ್ನಬಸವಣ್ಣ
ಗುರುಪ್ರಸಾದಿ ಆ ಪ್ರಸಾದವ ಲಿಂಗಕ್ಕೆ ಅರ್ಪಿಸಲಾಗದು, ಲಿಂಗಪ್ರಸಾದಿ ಆ ಪ್ರಸಾದವ ಜಂಗಮಪ್ರಸಾದದಲ್ಲಿ ಕೂಡಲಾಗದು. ಇಂತೀ ತ್ರಿವಿಧಪ್ರಸಾದವ ತಾ ಸ್ವೀಕರಿಸುವಲ್ಲಿ ತನ್ನ ದೃಷ್ಟದ ಇಷ್ಟಕ್ಕೆ ಅರ್ಪಿಸದೆ ಮುಟ್ಟಲಾಗದು. ಇಂತೀ ಭಾವ ಅಮೃತದಲ್ಲಿ ವಿಷ ಬೆರೆದಂತೆ: ಅಮೃತವ ಚೆಲ್ಲಬಾರದು, ವಿಷವ ಮುಟ್ಟಬಾರದು. ಗೋವು ಮಾಣಿಕವ ನುಂಗಿದಂತೆ: ಗೋವ ಕೊಲ್ಲಬಾರದು, ಮಾಣಿಕವ ಬಿಡಬಾರದು. ಗೋವು ಸಾಯದೆ ಮಾಣಿಕ ಕೆಡದೆ ಬಹ ಹಾದಿಯ ಬಲ್ಲಡೆ ಆತ ತ್ರಿವಿಧ ಪ್ರಸಾದಿಯೆಂಬೆ. ಆ ಗುಣ ಏಲೇಶ್ವರಲಿಂಗಕ್ಕೂ ಅಸಾಧ್ಯ ನೋಡಾ!
--------------
ಏಲೇಶ್ವರ ಕೇತಯ್ಯ
ಗೋವು ಮೊದಲು ಚತುಃಪಾದಿ ಜೀವಂಗಳು ತಾವು ಬಂದ ಹಾದಿಯ ಮೂಸಿ ನೋಡಿ ತಮ್ಮಯ ಬೀಡಿಂಗೆ ಹೋಹಂತೆ, ಆ ಪರಿ ನಿನಗಿಲ್ಲ, ಪಶುವಿನ ಮತಿಯಷ್ಟು ಗತಿಯಿಲ್ಲ. ಬಂದುದ ಮರೆದ ಬಂಧಜೀವಿಗ ನಾನಾಗಿ ಜೀವಕಾಯದ ಸಂದ ಬಿಡಿಸು. ಬಿಂದು ನಿಲುವ ಅಂದವ ಹೇಳು, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಸುಜ್ಞಾನ ಅಜ್ಞಾನವೆಂಬ ಉಭಯದ ಭೇದ, ದೀಪದ ಕುಡಿವೆಳಗಿನ ಧೂಮದ ಪರಿಯಂತೆ. ಅರಿವು ಮರವೆ ಬೇರೆ ಎಡೆದೆರಪಿಲ್ಲದೆ ಪುದಿದು, ಆತ್ಮನಲ್ಲಿ ಎಡೆಬಿಡುವಿಲ್ಲದಿಪ್ಪುದು, ಹೆರೆಹಿಂಗುವ ಪರಿಯಿನ್ನೆಂತೊ ? ಪಂಕ ಸಲಿಲದಂತೆ, ಪಾಷಾಣ ಪಾವಕನಂತೆ, ತೈಲ ರಜ್ಜುವಿನ ಯೋಗದಂತೆ ಹೆರೆಹಿಂಗಿದಡೆ ಅರಿಯಬಾರದು. ಕೂಡಿದ್ದಡೆ ಅರಿವಿಂಗೆ ವಿರೋಧ. ಗೋವು ಮಾಣಿಕವ ನುಂಗಿದಂತೆ. ಇದಾರಿಗೂ ಅಸಾಧ್ಯ, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ ಅವನರಿದವಂಗಲ್ಲದಿಲ್ಲ.
--------------
ಮನುಮುನಿ ಗುಮ್ಮಟದೇವ
ಸಕಲಮೂರ್ತಿಯಾಗಿ ಇಷ್ಟಲಿಂಗವಾಯಿತ್ತು. ನಿಷ್ಕಲಮೂರ್ತಿಯಾಗಿ ಪ್ರಾಣಲಿಂಗವಾಯಿತ್ತು. ಕೇವಲ ನಿರವಯಮೂರ್ತಿಯಾಗಿ ಭಾವಲಿಂಗವಾಯಿತ್ತು. ಸಕಲಮೂರ್ತಿಗೆ ಕ್ರಿಯೆ, ನಿಷ್ಕಲಮೂರ್ತಿಗೆ ಜ್ಞಾನ, ಕೇವಲ ನಿರವಯಮೂರ್ತಿಗೆ ಆನಂದ, ಸ್ಥೂಲವೇ ಕಾಯ, ಸೂಕ್ಷ್ಮವೇ ಪ್ರಾಣ, ಕಾರಣವೇ ವಸ್ತು. ಘ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಹೃದಯವೆಂಬವು ಸೂಕ್ಷ್ಮದ ಷಡ್ವಿಧಲಿಂಗವು. ಇವಕ್ಕೆ `ಓಂ ನಮಃಶಿವಾಯ' ಎಂಬುದೇ ತೃಪ್ತಿ. ಸಂತೋಷವೇ ಕಾರಣ, ಮಹಾಕಾರಣವೇ ಪರಿಣಾಮ. ತೂರ್ಯಾತೀತವಾಗಿ ಸರ್ವಕೇಳಿಕೆಯಂ ಕೇಳಿ ನಿಜಾನಂದವಾಗಿಹುದು. ವಿರಾಟವೇ ಸುನಾದವಾಗಿ ಹೊರಬಿದ್ದು ನುಡಿದು ಭೇರಿನಾದದಂತೆ ಆಕಾಶಧ್ವನಿಯಂತೆ ತನಗೆ ತಾನೇ ಕೇಳುವುದು. ಹಿರಣ್ಯಗರ್ಭಬಿಂದುವಿನ ಮನೆಯಲ್ಲಿ ಗಾಳಿಪಟಕ್ಕೆ ಬೇರಬಿರಿಕೆಯ ಕಟ್ಟಿ ನುಡಿಸುವ ತೆರದಂತೆ ತೇಜವಾಗಿ ಶಂಖದ ಧ್ವನಿಯಂತೆ ತೋರುತಿರ್ಪ ಸುನಾದಕ್ಕೆ ಎರಡಂಗುಲದ ಮೇಲೆ ತೇಜವಿಹುದು. ಅದು ತುಂಬಿದ ಹುಣ್ಣಿಮೆಯ ಬೆಳದಿಂಗಳಂತೆ, ಚಂದ್ರಜ್ಯೋತಿಯ ಪ್ರಭೆಯಂತೆ, ಹೂಬಿಸಿಲಿನಂತೆ ತೋರುತಿರ್ಪುದು. ಕಳೆಯ ಮನೆಯಲ್ಲಿ ಎರಡಂಗುಲ ಪ್ರಮಾಣ. ಮೂಲಪ್ರಕೃತಿ ಮೂಗಿನಮೇಲೆ ಭ್ರೂಮಧ್ಯ ಪ್ರಣವದಲ್ಲಿ ಓಂಕಾರಧ್ವನಿಯ ಝೇಂಕಾರದಂತೆ, ಘಂಟೆಯ ಬಾರಿಸಿದಂತೆ, ತಟತಟನೆ ಹಾರಿ ಅದು ಭ್ರೂಮಧ್ಯಸ್ಥಾನದಲ್ಲಿ ತೋರುವುದು. ನಾದವೇ ಶಬ್ದ, ನಿಃಶಬ್ದವೇ ಬಿಂದುಮಯ. ನಾದದೊಳಗಿರ್ದ ನಾದವೇ ಓಂಕಾರ. ಚಿಜ್ಜ್ಯೋತಿಯ ಪ್ರಕಾಶ ಭ್ರೂಮಧ್ಯದ ಪಣೆಯ ಮೇಲೆ ಎರಡಂಗುಲದಲ್ಲಿ ಕಾಣಿಸುತ್ತಿಹುದು. ಅದು ಮನದಿಂದೆ ಕಂಡಿತೋ ಕಣ್ಣಿನಿಂದ ಕಂಡಿತೋ ಎಂದಡೆ, ನೆನಹು ಎಂಬ ಅಂತಃಕರಣ ಓಂ ನಮಃಶಿವಾಯ ಎಂಬ ಪ್ರಣವಜ್ಯೋತಿಯ ತೋರಿತ್ತು. ಚಿತ್ತದ ತೋರಿಕೆ ಅರವತ್ತಾರುಕೋಟಿ ಪ್ರಣವಜ್ಯೋತಿಯ ಕಿರಣದಲ್ಲಿ ತೇರಿನ ಬದಿಯ ಬಿರಿಸಿನೋಪಾದಿಯ ನೆನಹು ಮಾತ್ರಕ್ಕೆ ತೋರುತ್ತಿಹುದು. ಹೊರದೃಷ್ಟಿಯ ಒಳಗಿಟ್ಟು, ಒಳದೃಷ್ಟಿಯ ಹೊರಗಿಟ್ಟು ಪರಿಪೂರ್ಣವಾಗಲು, ಒಳಹೊರಗೆ ನೋಡುವ ಶಿವಶರಣರ ಮನ ಭಾವಕ್ಕೆ ಆನಂದವೇ ತೋರುತ್ತಿಹುದು. ದಿನಕರನ ಕಾಂತಿ, ಮಧ್ಯಾಹ್ನದ ಬಿಸಿಲು, ಅಂತರಂಗದ ಛಾಯೆಯಂತೆ, ನಿರ್ಮಲವಾದ ದರ್ಪಣದ ಪ್ರತಿಬಿಂಬದಂತೆ, ತನ್ನ ರೂಪಂಗಳ ತಾನೆ ನೋಡಿದಾತನು ಜೀವನ್ಮುಕ್ತನು. ಆತ ಭವದಬಳ್ಳಿಯ ಹರಿದು ನಿತ್ಯಾನಂದ ನಿರ್ಮಳ ನಿರಾವರಣ ನಿಜ ಚಿನ್ಮಯನಾಗಿಹನು. ಇನ್ನು `ಓಂ ನಮಃಶಿವಾಯ' ಎಂಬ ಊಧ್ರ್ವಪ್ರಣವ. ಅಳ್ಳನೆತ್ತಿಯ ಸ್ಥಾನದಲ್ಲಿ ಅರುಹಿನ ಮನೆಯುಂಟು. ಅದಕ್ಕೆ ತಟಿಮಂತ್ರ. ಅಂತರಂಗದ ಬಾಯಲ್ಲಿ ಎಡಬಲವು ಎರಡು ಕರ್ಣದ್ವಾರಂಗಳಲ್ಲಿ ನುಡಿಯ ಕೇಳಿದಡೆ ಸುನಾದವಾಯಿತ್ತು. ಅದು ದಶನಾದಂಗಳಿಂದೆ ಶರಧಿ ನಿರ್ಝರ ಮೇಘ ಮುರಜ ಭೇರಿ ಕಹಳೆ ಘಂಟೆ ಶಂಖ ವೀಣೆ ಭ್ರಮರನಾದಂಗಳೆಂಬ ದಶನಾದಂಗಳನು ಗುರುಮುಖದಿಂದರಿತು ಹಗಲಿರುಳು ಆ ದಶನಾದಂಗಳೊಳಗಾದ ಸುನಾದವನು ಎಡೆದೆರಹಿಲ್ಲದೆ ಲಾಲಿಸಿ ಕೇಳುವುದು ಶಿವಯೋಗೀಶ್ವರರು. ಅದು ಪ್ರಸಾದಲಿಂಗಸ್ಥಲ, ವಿಶುದ್ಧಿಯ ಮನೆ ; ಶರಣಸ್ಥಲ. ಆ ಸ್ಥಲದಲ್ಲಿ ನಾದವ ಕೇಳಿದವರಿಗೆ ಜಾಗ್ರ ಸ್ವಪ್ನ ಸುಷುಪ್ತಿಗಳೆಂಬ ಮೂರವಸ್ಥೆಗಳು, ತನುತ್ರಯಂಗಳು ತೂರ್ಯದಲ್ಲಿ ಹರಿದುಹೋಗುವವು. ಸುನಾದದಲ್ಲಿ ಮನಸ್ಸಿಟ್ಟಡೆ ಓಂ ನಮಃಶಿವಾಯ ಎಂಬ ಪ್ರಣವನಾದವ ಕೇಳಿದವರಿಗೆ ಸ್ವಪ್ನವು ಎಂದಿಗೂ ತೋರದು. ಇರುಹೆ ಸುಳಿದಡೆ ಎಚ್ಚರಿಕೆ, ದಿಗಿಲುಭುಗಿಲೆಂದಡೆ ನೀನಾರೆಲಾ ಎಂದು ಮಾತನಾಡಿಸಿಬಿಡುವನು. ಆ ಪ್ರಣವಘೋಷ ಸತ್ತೆನೆಂಬಂತೆ ದಿವಸ ಹನ್ನೆರಡು ತಾಸಿನೊಳಗೆ ತನುವ ಬಿಡುವ ಸಮಯದಲ್ಲಿ, ಆ ಘೋಷ ನಿರ್ಘೋಷವಾಗಿ ನಾದ ನುಡಿಯದು. ಅದು ಲಕ್ಷವಿಟ್ಟು ನೋಡಿದಡೆ ತೋರುವುದು. ಅಂಗುಲ ಪ್ರಮಾಣವಾಗಿ ವಸ್ತುವು ಅಂಗುಷ್ಟಕ್ಕೆ ಬರುವುದು. ವೃಕ್ಷವನೇರಿದ ಸರ್ಪನಂತೆ ಬ್ರಹ್ಮರಂಧ್ರದ ಕೊನೆಗೇರುವುದು. ಹೆದ್ದುಂಬಿಯ ಕೊಳವಿಯೋಪಾದಿಯಲ್ಲಿ ವಸ್ತುವು ಅಳ್ಳಿನೆತ್ತಿಯ ಸ್ಥಾನದಲ್ಲಿ ಏರಿ ಹೋಗುವುದು. ಈ ಮನೆಯ ಶಿವಶರಣ ಬಲ್ಲ. ಇದು ಹನ್ನೆರಡು ತಾಸು ಪುರಸತ್ತಿಗೆಯ ಹೇಳಿದ ಅರುಹು. ಇಂತಪ್ಪ ವಸ್ತುವಿನ ನಿಲುಕಡೆಯ ಬಲ್ಲ ಶರಣನು. ತನ್ನವಸಾನಕಾಲದ ಎಚ್ಚರಿಕೆಯನರಿದು, ಗೋವು ಮಲಗುವಷ್ಟು ಧರಣಿಯ ಸಾರಣಿಯ ಮಾಡುವುದು. ಗೋಮಯ ಗೋಮೂತ್ರ ಗೋಕ್ಷೀರ ಗೋದಧಿ ಗೋಘೃತ ಗೋರೋಚನ ಎಂಬ ಷಡುಸಮ್ಮಾರ್ಜನೆಯ ಮಾಡುವುದು. ಶಿವಜಂಗಮದ ಧೂಳಪಾದಾರ್ಚನೆಯ ಉದಕಮಂ ನೀಡಿ ಸಮ್ಮಾರ್ಜನೆಯ ಮಾಡುವುದು. ರಂಗವಲ್ಲಿಯ ತುಂಬುವುದು, ಭಸ್ಮವ ತಳೆವುದು. ಪಾದೋದಕ ಪ್ರಸಾದಮಂ ಸಲಿಸಿ, ಶಿವಗಣಂಗಳಿಗೆ ವಂದನೆಯ ಮಾಡಿ, ಆ ಸಮ್ಮಾರ್ಜನೆಯ ಮಾಡಿದ ಗದ್ಗುಗೆಯ ಮೇಲೆ ಮುಹೂರ್ತವ ಮಾಡಿ, `ಓಂ ನಮಃಶಿವಾಯ' ಎಂಬ ಪ್ರಣವಸ್ಮರಣೆಯ ಮಾಡುವುದು. ಹಸ್ತದಲ್ಲಿ ಇಷ್ಟಲಿಂಗವ ಹಿಡಿದುಕೊಂಡು ಇರವಂತಿಗೆ ಸೇವಂತಿಗೆ ಮೊಲ್ಲೆ ಮಲ್ಲಿಗೆ ಜಾಜಿ ಕರವೀರ ಸುರಹೊನ್ನೆ ಸಂಪಿಗೆ ಮರುಗ ಪಚ್ಚೆ ದವನ ಬಿಲ್ವಪತ್ರೆ ಮೊದಲಾದ ಸಮಸ್ತ ಪುಷ್ಪ ಪತ್ರೆಗಳ ಧರಿಸಿ, ಆ ಶಿವಲಿಂಗವನು ಮನವೊಲಿದು ಕಂಗಳ ತುಂಬಿ ನೋಡುತ್ತ, ದೇವಭಕ್ತರು ಬಂದಡೆ ಶರಣಾರ್ಥಿ ಎಂದು, ಮಜ್ಜನವ ನೀಡಿಸಿ, ವಿಭೂತಿಯ ಧರಿಸಿ, ಪುಷ್ಪಪತ್ರೆಗಳ ಧರಿಸಿ ಎಂದು ಅವರ ಪಾದವಿಡಿದು, ಶರಣಾರ್ಥಿ ಸ್ವಾಮಿಗಳಿಗೆ ಎಂದು ಹೇಳಿ, ಶಿವಾರ್ಪಣವ ಮಾಡಿ ಎಂದು ಬಿನ್ನಹವ ಮಾಡುವುದು. ಮದುವೆ ಮಾಂಗಲ್ಯ ಅರ್ತಿ ಉತ್ಸಾಹ ಶಿಶುವಿನ ಹೆಸರಿಡುವ ಹಾಗೆ ಹರುಷ ಪರುಷ ಧೈರ್ಯವೇ ಭೂಷಣವಾಗಿ ನಿರೋಧಂಗಳ ಮಾಡದೆ ``ಓಂ ನಮಃಶಿವಾಯ' ಎಂಬ ಮಂತ್ರ ಭೋರ್ಗರೆಯೆ ನಿರ್ಮಲ ನೈಷಿ*ಕದಿಂದೆ ಶಿವಜಂಗಮದ ಪಾದವನು ಮಸ್ತಕದ ಮೇಲೆ ಇಡಿಸುವುದು. ಹಿತವಂತರಾದವರು ವೀರಶೈವ ಪರಮವಚನಂಗಳಂ ಕೇಳಿಸುವುದು. ಎಡಬಲದಲ್ಲಿರ್ದ ಸಕಲ ಭಕ್ತರು ಮಹೇಶ್ವರರು `ಓಂ ನಮಃಶಿವಾಯ' ಎಂಬ ಶಿವಮಂತ್ರವನ್ನು ಆ ಶರಣನ ಕರ್ಣಂಗಳಲ್ಲಿ ಉಚ್ಚರಿಸುವುದು. ಈ ಹಡಗದ ಹಗ್ಗವ ಮತ್ತೊಂದು ಹಡಗಕ್ಕೆ ಹಾಕಿ ಬಿಗಿದಡೆ, ಹಡಗಕ್ಕೆ ಹಡಗ ಕೂಡಿ, ಸಮುದ್ರದ ತೆರೆಯೋಪಾದಿಯಲ್ಲಿ ಹಡಗವ ಬಿಟ್ಟು ಪ್ರತಿಹಡಗದೊಳಗೆ ಮೂರ್ತವ ಮಾಡಿದಂತೆ, ಮಂತ್ರಮಂತ್ರವು ಸಂಬಂಧವಾಗಿ, ಉರಿ ಕರ್ಪುರ ಕೊಂಡಂತಾಯಿತ್ತು ಶರಣನ ದೇಹಪ್ರಾಣವು. ಇದು ಗುಹ್ಯಕ್ಕೆ ಗುಹ್ಯ, ಗೋಪ್ಯಕ್ಕೆ ಗೋಪ್ಯ, ರಹಸ್ಯಕ್ಕೆ ಅತಿ ರಹಸ್ಯ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಗೋವ ಕುದುರೆಯ ಕಾಣದೆ, ಗೊಲ್ಲ ಕುರಿಯ ಕಾಣದೆ, ಗೋವಳ ಗೋವ ಕಾಣದೆ, ಗೊಲ್ಲನ ಕೇಳೆ, ಗೊಲ್ಲ ಗೋವನ ಕೇಳೆಂದು ಬೆಸಸೆ, ಕುರಿ, ಕುದುರೆ, ಗೋವು ತಮ್ಮಡಿಯಲ್ಲಿ ನಿಂದುವೆಂದು ಹೇಳೆ, ಚೋದ್ಯವಾಯಿತ್ತೆಂದು ಅಡಗಿದ. ಸಗರದ ಬೊಮ್ಮನೊಡೆಯ ತನುವಿನ ಮಧ್ಯದಲ್ಲಿ ನಿಸ್ಸಂಗ ಸಂಗಮೇಶ್ವರನಾದ.
--------------
ಸಗರದ ಬೊಮ್ಮಣ್ಣ
ಸಚ್ಚಿದಾನಂದ ಪರಶಿವನ ಸದ್ಯೋಜಾತಮುಖದಿಂದ ಪೃಥ್ವಿತತ್ತ್ವ ಪುಟ್ಟಿತ್ತು. ಆ ತತ್ವದಿಂದೆ ನಿವೃತ್ತಿ ಎಂಬ ಕಲೆ ಪುಟ್ಟಿತ್ತು. ಆ ಕಲೆಯಿಂದೆ ಕಪಿಲವರ್ಣದ ನಂದಿನಿಯೆಂಬ ಗೋವು ಪುಟ್ಟಿತ್ತು. ಆ ಗೋವಿನ ಗೋಮಯದಿಂದೆ ಮಹದೈಶ್ವರ್ಯವನ್ನುಂಟುಮಾಡುವಂಥ ಭೂತಿ ಎಂಬ ವಿಭೂತಿ ಪುಟ್ಟಿತ್ತು. ಮತ್ತಂ, ಸಚ್ಚಿದಾನಂದ ಪರಶಿವನ ವಾಮದೇವಮುಖದಿಂದೆ ಅಪ್ಪುತತ್ವ ಪುಟ್ಟಿತ್ತು. ಆ ತತ್ವದಿಂದೆ ಪ್ರತಿಷೆ*ಯೆಂಬ ಕಲೆ ಪುಟ್ಟಿತ್ತು. ಆ ಕಲೆಯಿಂದೆ ಕೃಷ್ಣವರ್ಣದ ಭದ್ರೆಯೆಂಬ ಗೋವು ಪುಟ್ಟಿತ್ತು. ಆ ಗೋವಿನ ಗೋಮಯದಿಂದೆ ದಿವ್ಯಪ್ರಕಾಶದಿಂ ಬೆಳಗುವಂಥ ಭಸಿತವೆಂಬ ವಿಭೂತಿ ಪುಟ್ಟಿತ್ತು. ಮತ್ತಂ, ಸಚ್ಚಿದಾನಂದ ಪರಶಿವನ ಅಘೋರಮುಖದಿಂದೆ ಅಗ್ನಿತತ್ವ ಪುಟ್ಟಿತ್ತು. ಆ ತತ್ವದಿಂದೆ ವಿದ್ಯೆಯೆಂಬ ಕಲೆ ಪುಟ್ಟಿತ್ತು. ಆ ಕಲೆಯಿಂದೆ ರಕ್ತವರ್ಣದ ಸುರಭಿಯೆಂಬ ಗೋವು ಪುಟ್ಟಿತ್ತು. ಆ ಗೋವಿನ ಗೋಮಯದಿಂದೆ ಸಮಸ್ತ ಪಾತಕಂಗಳ ಭಕ್ಷಿಸುವಂಥ ಭಸ್ಮವೆಂಬ ವಿಭೂತಿ ಪುಟ್ಟಿತ್ತು. ಮತ್ತಂ, ಸಚ್ಚಿದಾನಂದ ಪರಶಿವನ ತತ್ಪುರುಷಮುಖದಿಂದೆ ವಾಯುತತ್ವ ಪುಟ್ಟಿತ್ತು. ಆ ತತ್ವದಿಂದೆ ಶಾಂತಿಯೆಂಬ ಕಲೆ ಪುಟ್ಟಿತ್ತು. ಆ ಕಲೆಯಿಂದೆ ಶ್ವೇತವರ್ಣದ ಸುಶೀಲೆಯೆಂಬ ಗೋವು ಪುಟ್ಟಿತ್ತು. ಆ ಗೋವಿನ ಗೋಮಯದಿಂದೆ ಸಕಲ ವ್ಯಾಧಿಗಳ ಕೆಡಿಸುವಂಥ ಕ್ಷಾರವೆಂಬ ವಿಭೂತಿ ಪುಟ್ಟಿತ್ತು. ಮತ್ತಂ, ಸಚ್ಚಿದಾನಂದ ಪರಶಿವನ ಈಶಾನ್ಯಮುಖದಿಂದೆ ಆಕಾಶತತ್ವ ಪುಟ್ಟಿತ್ತು. ಆ ತತ್ವದಿಂದೆ ಶಾಂತ್ಯತೀತವೆಂಬ ಕಲೆ ಪುಟ್ಟಿತ್ತು. ಆ ಕಲೆಯಿಂದೆ ಚಿತ್ರವರ್ಣದ ಸುಮನೆಯೆಂಬ ಗೋವು ಪುಟ್ಟಿತ್ತು. ಆ ಗೋವಿನ ಗೋಮಯದಿಂದೆ ಭೂತ ಪ್ರೇತ ಪಿಶಾಚಿ ಬ್ರಹ್ಮರಾಕ್ಷಸ ಚೋರ ಸರ್ವವ್ಯಾಘ್ರಾದಿಗಳ ಭಯವ ಕೆಡಿಸುವ ರಕ್ಷೆಯೆಂಬ ವಿಭೂತಿ ಪುಟ್ಟಿತ್ತು. ಅದೆಂತೆಂದೊಡೆ :ಜಾಬಾಲೋಪನಿಷದಿ : `` ಸದ್ಯೋಜಾತಾತ್ ಪೃಥಿವೀ ತಸ್ಯಾಃ ನಿವೃತ್ತಿಃ ತಸ್ಯಾಃ ಗೋಮಯೇನ ವಿಭೂತಿರ್ಜಾತಾ || ವಾಮದೇವಾದುದಕಂ ತಸ್ಮಾತ್ ಪ್ರತಿಷಾ* ತಸ್ಯಾಃ ಕೃಷ್ಣವರ್ಣಾ ಭದ್ರಾ ತಸ್ಯಾಃ ಗೋಮಯೇನ ಭಸಿತಂ ಜಾತಂ || ಅಘೋರಾದ್ ವಹ್ನಿಃ ತಸ್ಮಾತ್ ವಿದ್ಯಾ ತಸ್ಯಾಃ ರಕ್ತವರ್ಣಾ ಸುರಭೀ ತಸ್ಯಾಃ ಗೋಮಯೇನ ಭಸ್ಮ ಜಾತಂ|| ತತ್ಪುರುಷಾದ್ ವಾಯುಃ ತಸ್ಮಾತ್ ಶಾಂತಿಃ ತಸ್ಯಾಃ ಶ್ವೇತವರ್ಣಾ ಸುಶೀಲಾ ತಸ್ಯಾಃ ಗೋಮಯೇನ ಕ್ಷಾರಂ ಜಾತಂ|| ಈಶಾನಾದಾಕಾಶಃ ತಸ್ಮಾತ್ ಶಾಂತ್ಯತೀತಾ ತಸ್ಯಾಶ್ಚಿತ್ರವರ್ಣಾ ಸುಮನಾ ತಸ್ಯಾಃ ಗೋಮಯೇನ ರಕ್ಷಾ ಜಾತಾ||'' `` ವಿಭೂತಿರ್ಭಸಿತಂ ಭಸ್ಮ | ಕ್ಷಾರಂ ರಕ್ಷೇತಿ ಭಸ್ಮನಃ| ಭವಂತಿ ಪಂಚನಾಮಾನಿ| ಪಂಚಭಿರ್ನಾಮಭಿರ್ಭೃಶಮ್||'' `` ಐಶ್ವರ್ಯಕಾರಣಾದ್ಭೂತಿರ್ಭಾಸನಾದ್ಭಸಿತಂ ತಥಾ ಸರ್ವಾಘಭಕ್ಷಣಾದ್ಭಸ್ಮ ಆಪದಾಂ ಕ್ಷಾರಣಾತ್ ಕ್ಷಾರಂ ಭೂತ-ಪ್ರೇತ-ಪಿಶಾಚ ಬ್ರಹ್ಮರಾಕ್ಷಸಾಪಸ್ಮಾರ ಭವಭೀತಿಭ್ಯೋýಭಿರಕ್ಷಣಾತ್ ರಕ್ಷೇತಿ'' ಎಂದುದಾಗಿ, ಇಂತಪ್ಪ ಶ್ರೀ ವಿಭೂತಿಯ ನಿರಂತರ ಸಾವಧಾನಭಕ್ತಿಯಿಂದ ನಾನು ಸರ್ವಾಂಗದಲ್ಲಿ ಧರಸಿ ಶುದ್ಧನಿರ್ಮಲ ಪರಮಪವಿತ್ರ ಕಾಯನಾದೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಡವಿಯಲ್ಲಿರ್ದ ಗೋವು ಮನೆಯಲ್ಲಿರ್ದ ಕರುವಿಂಗೆ ಚಿಂತಿಸಿ ಬಂದು ಹಾಲನೂಡಿ ಮೋಹಮಾಡುವುದಲ್ಲದೆ, ಆ ಕರುವೆತ್ತ ಬಲ್ಲುದಯ್ಯ ! ನಾನು ಕರ್ಮದೇಹವಿಡಿದು ಪರಿಭವದಲ್ಲಿ ತೊಳಲುತ್ತಿರಲು, ನೀನು ದಯಹುಟ್ಟಿ ಎನ್ನ ಮರವೆಯ ಸಂಸಾರವ ತೊಲಗಿಸಿ ಕರುಣದಿಂದ ಸಲಹಬೇಕೆಂಬ ಚಿಂತೆ ನಿನಗಲ್ಲದೆ ನಾನೇನಬಲ್ಲೆನಯ್ಯ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಅಯಃಕಾಂತದ ಶಿಲೆ ಲೋಹಕ್ಕೆ ಬಾಯ ಕಂಡಲ್ಲಿ ವೇದ ಸಿದ್ಧಾಂತಿ. ಲೋಹ ಸುವರ್ಣವ ಏಗೆಯ್ದುಯೆತ್ತುವಲ್ಲಿ ಆ ಭೇದವ ಬಲ್ಲಡೆ ಶಾಸ್ತ್ರಸಂಪದನು. ಮರಾಳ ಕ್ಷೀರವನೀಂಟಿ ಜಲವನುಳುಹಿದ ಭೇದವ ಬಲ್ಲಡೆ ಪುರಾಣಸಂಬಂಧಿ. ಗೋವು ಅಜ ಮುಂತಾದವು ತೃಣ ಪರ್ಣ ಗ್ರಾಸವ ಕೊಂಡು ಪುನರಪಿಯಾಗಿ ಸವಿದಿಳಿವ ಭೇದವ ಬಲ್ಲಡೆ ಆಗಮಯುಕ್ತ. ಇಂತೀ ಭೇದಂಗಳಲ್ಲಿ ಭೇದಿಸಿ, ಅಭೇದ್ಯವಪ್ಪ ಲಿಂಗವ ಸಾಧಿಸಿ ಕ್ರೀಗೆ ಮಾರ್ಗ, ಅರಿವಿಂಗೆ ಆಚರಣೆ ಉತ್ತರ ಪೂರ್ವವ ನಿಶ್ಚೈಸಿ, ನಿಜನಿಶ್ಚಯದಲ್ಲಿ ನಿಂದ ಶರಣಂಗೆ ಮುಕ್ತ ನಿರ್ಮುಕ್ತನೆಂಬುದಿಲ್ಲ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗ ತಾನಾಗಿ.
--------------
ಪ್ರಸಾದಿ ಭೋಗಣ್ಣ
-->