ಅಥವಾ

ಒಟ್ಟು 25 ಕಡೆಗಳಲ್ಲಿ , 13 ವಚನಕಾರರು , 22 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವರ್ಗ ಪಟ್ಟಣದಲ್ಲಿ ಎರಡೆಂಟು ಕಳೆಗಳನು ಹದುಳ ಪಟ್ಟಣಮಾಡಿ ಒಪ್ಪಿತೋರಿ ಸಮತೆ ಅದ್ಥಿಕಾರದ ಸುಮತಿಯಾದುದು. ಗ್ರಾಮ ಭ್ರಮೆಗೆಟ್ಟುದೈ ಬಿಡು ಜ್ಯೋತಿಮತಿರ್ಮಯವೈ. ಆನಂದ ಪಾತ್ರೆಯ ಸಮತೆ ತೈಲವನೆರೆಯೆ ಬೆಳಗು ಪ್ರಭೆಯಾಗಿ ದೆಸೆದೆಸೆಗೆವರಿದು, ಅತಿಶಯದ ನಿತ್ಯ ಕಪಿಲಸಿದ್ಧಮಲ್ಲಿಕಾರ್ಜುನನ ಎಯ್ದಿದ ಬೆಳಗು ಸಮತೆಯಾದೆ.
--------------
ಸಿದ್ಧರಾಮೇಶ್ವರ
ಯತ್ರ ಯತ್ರ ಮಾಹೇಶ್ವರರಿರ್ದ ಗ್ರಾಮ ತತ್ರ ತತ್ರ ಶಿವಲೋಕ ನೋಡಾ, ಎಲೆ ಅಯ್ಯಾ. ಸತ್ಯ! ವಚನ ತಪ್ಪುವುದೆ ಅಯ್ಯಾ! ಕಪಿಲಸಿದ್ಧಮಲ್ಲಿನಾಥಾ, ನಿಮ್ಮ ಶರಣರು ಮೆಟ್ಟಿ ನಿಂದ ಧರೆ ಪಾವನವೆಂಬುದು ಇಂದೆನಗೆ ಅರಿಯಬಂದಿತ್ತಯ್ಯಾ.
--------------
ಸಿದ್ಧರಾಮೇಶ್ವರ
ಊರನಾಶ್ರಯಿಸುವನೆ ಉಪಜೀವಿಗಳಂತೆ? ಕಾಡನಾಶ್ರಯಿಸುವನೆ ಕರಡಿಯಂತೆ? ಊರನಾಶ್ರಯಿಸುವನಲ್ಲ, ಕಾಡಾನಶ್ರಯಿಸುವನೂ ಅಲ್ಲ ನೋಡಾ. ಊರಾವುದು ಕಾಡುವುದು ಎಂದರಿಯದೆ ಕಳವಳಿಸುತ್ತಿಪ್ಪರು ನೋಡಾ. ಊರೆಂದರೆ:ಮಾಯಾಸಂಬಂಧವಾದ ಪಂಚಭೌತಿಕ ಗ್ರಾಮ. ಕಾಡೆಂದರೆ:ಆ ಕಾಯವನಾಶ್ರಯಿಸಿಕೊಂಡಿಪ್ಪ ಸಕಲ ಕರಣಂಗಳು ಕಾಣಮರುಳೆ. ಕಾಯದ ಕರಣಂಗಳಿಗೆ ವಶಗತವಾಗಿರ್ದು ಊರಿಗೆ ಹೊರಗಾಗಿದ್ದೆನೆಂಬ ಉಪಜೀವಿಗಳನೇನೆಂಬೆನಯ್ಯ? ಇದುಕಾರಣ ನಿಮ್ಮ ಶರಣರು ಕಾಯವನು ಜೀವವನು ಕರಣವನು ಕೇವಲ ಪರಂಜ್ಯೋತಿಲಿಂಗದೊಳಗೆ ಬೆರಸಿ ಬೇರಿಲ್ಲದೆ ಕಾಯವನು ಜೀವವನು ಕರಣವನು ಹೊದ್ದದೆ ಮಹಾಘನಲಿಂಗಪದದೊಳಗಿಪ್ಪರಯ್ಯ ಪ್ರಾಣಲಿಂಗ ಸಂಬಂದ್ಥಿಗಳು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆನಂದಸ್ಥಳದಲ್ಲಿ ಊಧ್ರ್ವ ಕಂಜಕನ್ನಿಕೆಗೆ ಇಂದುವಿನ ಕೊಡನ ಹೊತ್ತಾಡುತ್ತೈದಾಳೆ. ಮೂಲಪಟ್ಟಣದಲ್ಲಿ ಮೂವರಿಗೆ ರತಿಯ ಹುಟ್ಟಿಸುತ್ತೈದಾಳೆ. ಅಪರಪಟ್ಟಣದಲ್ಲಿ ಹಲವರಿಗೆ ಆಶ್ರಯವಾಗಿ ಐದಾಳೆ. ಮಧ್ಯಮಪಟ್ಟಣದಲ್ಲಿ ಮಹಾಮಹೀಶ್ವರರಿಗೆ ಮಹಾದಾಶ್ರಯವಾಗಿ ಐದಾಳೆ. ಇಂತು ಪಟ್ಟಣ ಹದಿನೆಂಟಕ್ಕ ಸೀಮೆ ಇಪ್ಪತ್ತೈದು, ಗ್ರಾಮ ಮೂವತ್ತಾರು ಸಂಯೋಗವೆಂಬ ನಗರಿಯಲ್ಲಿ ನಿತ್ಯಸಾನಂದನೆಂಬಾತ ಕುಳ್ಳಿದ್ದು, ಪಟ್ಟಣ ಹನೆಂಟರ ವ್ಯಾಪ್ತಿಯ ತಳವಾರರೆಂಟು ಮಂದಿಯ ಗ್ರಾಮ ಬಂಧನೆಯ ಮಾಡಲೀಯದೆ ಸುಚಿತ್ತದಿಂ ನಡಸುತ್ತೈದಾನೆ. ನೆನೆವ ಮನಸ್ಸಿನಲ್ಲಿ ಅವಿತಥವಿಲ್ಲದೆ ಚಿತ್ತವೃತ್ತಿಯನ್ನರಿತು ಮಹಾಲೋಕದಲಿಪ್ಪ ಮೂನ್ನೂರ ಮೂವತ್ತಮೂರು ಕುಲದುರ್ಗಂಗಳಂ ಪಾಟಿಸಿ ಸುಯಿಧಾನಿಯಾಗಿರುತ್ತೈದಾನೆ. ಅಜಲೋಕದಲ್ಲಿ, ಶುದ್ಧಸಂಯೋಗ ಸಂಗಮನೆಂಬ ಗೃಹದಲ್ಲಿ, ಮೂಲಕ ಮುಕ್ತಕಾ ರುದ್ರಕ ಅನುಮಿಷಕ ಆಂದೋಳಕ ವಿಚಿತ್ರಕ ಸಕಲ ಮುಕ್ತ್ಯಕ್ಕ, ಸಾನಂದ ಸತ್ಯಕ್ಕ ಇಂತಪ್ಪ ಮಹಾಸ್ತ್ರೀಯರ ಚಿತ್ತಕ್ಕೆ ಸಗುಣವಪ್ಪುದನೊಂದನೆ ಕೂಡಿ ಭೋಗಿಸುತ್ತೈದಾನೆ. ಅವರು ಸ್ತ್ರೀಯರು, ತಾ ಪುರುಷನಾಗಿ ಕೂಡುತ್ತೈದಾನೆ, ಅವಿತಥವಿಲ್ಲದೆ ಆ ಕೂಟದ ಸುಖವನು ಶಿಶು ಬಲ್ಲ, ಶಿಶುವಿನ ಜನನವನು ಅವ್ವೆ ಬಲ್ಲಳು. ಅವ್ವೆಯ ಇಚ್ಛಾ ಮಾತ್ರದಲ್ಲಿದ್ದು ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ತೈಲಿಂಗಕ್ಕೆ ಮೂಲವಾದಳವ್ವೆ.
--------------
ಸಿದ್ಧರಾಮೇಶ್ವರ
ಗ್ರಾಮ ಪಟ್ಟಣವೈದು ಐದೈದು ನಾಯಕರು ತೋರಿಪ್ಪರದ ಕಂಡು ಪ್ರತ್ಯಯವನು. ಸೀಮೆ ಸಂಬಂಧವನು ಮೀರಿಪ್ಪ ನಾಯಕರು ತಾವು ನಿಂದರು ಗಡಿಯ ಸಂಬಂಧವ ಪರದಳವು ಬರಲಾಗಿ ಅರಿಯದೆ ಇದಿರಾಡಿ ಅರಿತು ಬಿಟ್ಟರು ವೀರದ್ಥೀರರಾಗಿ. ಅರಿವುಮರಹನೆ ನುಂಗಿ ಕುರುಹುಗೆಟ್ಟಾ ಸೀಮೆ ತೆರಹಿಲ್ಲದಾತ [ತಾ] ಪರಮಯೋಗಿ ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ತೆರಹಿನ ಪಟ್ಟಣದ ಪ್ರಭೆಯಿಂತುಟು.
--------------
ಸಿದ್ಧರಾಮೇಶ್ವರ
ಹಿಡಿದು ಬಂದು ಹೊಡದಾಡಿ ಹೊಲಬುದಪ್ಪಿ ಮಡಿದು ಹೋಗುವ ಮರುಳು ಭೂತಗಳು ಮನೆ ಗ್ರಾಮ ದೇಶಂಗಳೆಲ್ಲ ತುಂಬಿ ಸೂಸುತಲಿಪ್ಪುದು. ನಾನಿವರ ನೆರೆಹೊರೆಗಂಜಿ ಅರಸಿ ಕಂಡು ಮೊರೆಹೊಕ್ಕು ಬದುಕಿದೆ ಶಾಂತ ಐವರ್ಣಸಂಜ್ಞೆದೇವನ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಯಾಧಾರಕ್ಕೆ ಮೂಲ ತಾ ಬಸವಣ್ಣ. ಹೋದನೈ ಭಕ್ತಿಯೊಳಗೆ ಹೊಲಬುದಪ್ಪಿ. ಊರನರಿಯದ ಗ್ರಾಮ, ಹೊಲಬುದಪ್ಪಿದ ಸೀಮೆ; ಆತನಾನತದಿಂದಾನು ನೀನಾದೆನೈ. ಬಸವಣ್ಣ ಬಸವಣ್ಣ ಬಸವಣ್ಣ ಎಂಬ ನಾಮಾಕ್ಷರದೊಳಗೆ ದೆಸೆಗೆಟ್ಟೆನೈ ಗುರುವೆ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಆರು ಕೇರಿಯ ಮುಂದೆ ಮೂರು ಗ್ರಾಮವ ಕಂಡೆನಯ್ಯ. ಮೂರು ಗ್ರಾಮದ ಮುಂದೆ ಒಂದು ಲಿಂಗವ ಕಂಡೆನಯ್ಯ. ಆ ಲಿಂಗವ ನೋಡ ಹೋಗದ ಮುನ್ನ ಆರು ಕೇರಿ ಅಳಿದು, ಮೂರು ಗ್ರಾಮ ಹೋಗಿ, ಮೀರಿ ಕಂಡೆನಯ್ಯ ಆ ಲಿಂಗವನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ವೇಷಮಾತಿನ ಬಿನ್ನಾಣಿಗಳಿಗೆ ಗ್ರಾಸ ಉಂಟಲ್ಲದೆ ನಿಜವಿಲ್ಲ. ಇಂತೀ ಉಭಯವನತಿಗಳೆದ ನಿರತಿಶಯ ಲಿಂಗಾಂಗಿಗೆ ಗ್ರಾಸದಾಸೆಯಿಲ್ಲ. ಸರ್ವಸುಖದಾಲಯದ ಪಾಶದ ಕಟ್ಟಿಲ್ಲ. ಅವರವರ ಕಂಡಲ್ಲಿಯೆ ಸುಖಿ, ನಿಧಾನಿಸಿ ಕೂಡಿದಲ್ಲಿಯೆ ತೃಪ್ತ. ಆತ ತ್ರಿವಿಧಮಲದ ಹಂಗಿನವನಲ್ಲ. ಗ್ರಾಮ ನಿಳಯ ಬಂಧಂಗಳಿಲ್ಲ. ಮಾತಿನ ರಚನೆಯ ಪಾಶವನೊಲ್ಲ. ಆತ ಸರ್ವಾಂಗಲಿಂಗ ಸನ್ಮತ. ನಿಃಕಳಂಕ ಮಲ್ಲಿಕಾರ್ಜುನನ ಒಡಗೂಡಿದ ಪರಮವಿರಕ್ತನ ಭೇದ.
--------------
ಮೋಳಿಗೆ ಮಾರಯ್ಯ
ಗ್ರಾಮ ಮಧ್ಯದೊಳಗೊಂದು ಹೋಮದ ಕುಳಿಯಿದ್ದಡೆ ನೇಮವುಳ್ಳವರೆಲ್ಲ ಆಹುತಿಯನಿಕ್ಕಿದರು. ಹೊಗೆ ಜಗವಾಗಿ ಜಗ ಹೊಗೆಯಾಗಿ ನಗೆಗೆಡೆಯಾಯಿತ್ತು ನೋಡಾ! ನಗೆ ಹೊಗೆವರಿದಲ್ಲಿ ಹೊಗೆ ಜಗವಾದದೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲವೆಂದೆ.
--------------
ಘಟ್ಟಿವಾಳಯ್ಯ
ಜಲವಿಲ್ಲದ ಕೆರೆ, ಫಲವಿಲ್ಲದ ಬನ, ಭಕ್ತನಿಲ್ಲದ ಗ್ರಾಮ ಸುಡುಗಾಡಯ್ಯಾ, ಅಲ್ಲಿ ಶಿವನಿಲ್ಲ, ಪ್ರೇತಜಡಾರಣ್ಯದಲ್ಲಿ ಹೋಗಬಹುದೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಗ್ರಾಮಮಧ್ಯದ ಧವಳಾರದೊ?ಗೊಂದು ಸತ್ತ ಹೆಣನಿರುತ್ತಿರಲು, ಗ್ರಾಮ ಸುತ್ತಿ ಬರುತಿದ್ದ ರಕ್ಕಸಿ ಆ ಸತ್ತುದ ಕಂಡಳಲ್ಲಾ. ಗ್ರಾಮ ನನ್ನ ಕಾಹು, ಗ್ರಾಮದಲ್ಲಿ ನಾನಿಪ್ಪೆ, ಇದಾರೊ ಕೊಂದವರು ? ನಾನು ಕೊಲ್ಲದ ಮುನ್ನ, ಅದು ತಾನೆ ಸತ್ತಡೆ, ಎನಗಿದು ಸೋಜಿಗವು. ಸತ್ತುದು ಗ್ರಾಮವ ಕೆಡಿಸಿತ್ತು, ಇನ್ನಿದ್ದರೆ ಎನ್ನನೂ ಕೆಡಿಸಿತ್ತು. ಇಲ್ಲಿದ್ದವರಿಗುಪಟಳ ನೋಡಾ ! (ಎಂದು) ಗ್ರಾಮ ಬಿಟ್ಟು ಹೋಯಿತ್ತಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಗೃಹ ಗ್ರಾಮ ನಾಡು ದೇಶಂಗಳೆಂಬ ಭೂಮಿಯ ಆಗು_ಚೇಗೆಯ ರಾಗ_ದ್ವೇಷ, ಮರಳಿ ಭೂಮಿಯ ಆಶೆ, ಅಲ್ಪಭೂಮಿಯ ಆಶೆ. ಅಲ್ಪಭೂಮಿ ಅಲ್ಪಂಗಲ್ಲದೆ ಪಂಚಾಶತಕಕೋಟಿ ಯೋಜನ ಭೂಮಿಯನೂ ಒಳಕೊಂಡ ಬ್ರಹ್ಮಾಂಡ ಅಂತಹ ಬ್ರಹ್ಮಾಂಡವನೇಕವನೂ ಆಭರಣವ ಮಾಡಿಯಿಟ್ಟುಕೊಂಡಿಪ್ಪ, ಅಂತಹ ಆಭರಣದಿಂದ ಪೂಜೆಗೊಂಡಿಪ್ಪ, ಲಿಂಗವೇ ಪ್ರಾಣವಾಗಿ ಭೂಮಿಯಲ್ಲಿ ನಿಂದ ಲಿಂಗೈಕ್ಯಂಗೆ ಭೂಮಿಯ ಚಿಂತೆ ಇನ್ನೆಲ್ಲಿಯದೋ ? ಕಾಣೆ. ಕೋಟಿ ಕ್ಷಿತಿಪರಿಯಂತರ ಧನದಾಗುನಿರೋಧ ಆಗುಚೇಗೆಯ ನಿರೋಧಸುಖದುಃಖ ತನುಮನಧನಕಾಂಕ್ಷೆ ಅಲ್ಪಂಗಲ್ಲದೆ ಮಹಾಲಕ್ಷ್ಮಿಯೊಡೆಯನಾಗಿ, ಮಹದೈಶ್ವರ್ಯಸಂಪನ್ನನಾಗಿ, ಹಿರಣ್ಯಪತಿಯೇ ಪ್ರಾಣವಾಗಿ, ಹಿರಣ್ಯಪತಿಯೇ ಕಾಯವಾದ ಮಹಾಲಿಂಗೈಕ್ಯಂಗೆ ಧನದ ಚಿಂತೆ ಇನ್ನೆಲ್ಲಿಯದು ? ಉತ್ತಮ ಮಧ್ಯಮ ಕನಿಷ* ನಿಕೃಷ್ಟ ಹಸ್ತಿನಿ ಚಿತ್ತಿನಿ ಶಂಕಿನಿ ಪದ್ಮಿನಿಯರೆಂಬ ನಾಲ್ಕು ತೆರದ ಸ್ತ್ರೀಯರ ಸಂಗ; ಪಾತರ, ದಾಸಿ, ವೇಶ್ಯಾಗಮನ, ಪರಸ್ತ್ರೀ ಪರಸಂಗ ಅವಿಚಾರ ಅನ್ಯಜಾತಿಯ ಸಂಗ ಇವುಗಳಿಗಾಶಿಸುವ ಕ್ರೂರಾತ್ಮಂಗೆ ಹೆಣ್ಣಿನ ಚಿಂತೆಯಲ್ಲದೆ, ಇಚ್ಛಾಶಕ್ತಿ ಜ್ಞಾನಶಕ್ತಿ ಕ್ರಿಯಾಶಕ್ತಿಯ ವರ್ತನೆಯ ಮೀರಿ ಮಹಾಶಕ್ತಿ ತಾನಾಗಿ(ಹ) ಮಹಾಪುರುಷನಲ್ಲಿ ಮಹಾಸಂಗವಾದ ಮಹಾಶರಣಂಗೆ ಹೆಣ್ಣಿನ ಚಿಂತೆ ಇನ್ನೆಲ್ಲಿಯದೋ ? ವೇದಶಾಸ್ತ್ರ ಪುರಾಣಾಗಮಾದಿಯಾಗಿ ಅಷ್ಟಾದಶವಿದ್ಯಂಗಳನೋದುವ ಕೇಳುವ ವಿಚಾರಿಸುವ ತಿಳಿವ ವಿದ್ಯದ ಚಿಂತೆ ಅಲ್ಪಮತಿಯ ಅಲ್ಪಂಗಲ್ಲದೆ ವಾಗ್ದೇವತೆಗೆ ಅಧಿದೈವಮಪ್ಪ ಮಹಾವಿದ್ಯೆಯೇ ದೇಹವಪ್ಪ ವಿದ್ಯಾರೂಪ ಮಹಾದೇವನೇ ಪ್ರಾಣವಾಗಿ, ಮಹಾದೇವನೇ ಕಾಯವಾಗಿ ಮಹಾದೇವನೇ ಜಿಹ್ವೆಯಾಗಿ, ಮಹಾದೇವನೇ ಮನವಾಗಿಹ ಮಹಾಲಿಂಗೈಕ್ಯಂಗೆ ಇನ್ನುಳಿದ ಚಿಂತೆ ಇನ್ನೆಲ್ಲಿಯದೋ ? ಭಕ್ತಕಾಯ ಶಿವನಾಗಿ ಶಿವನೇ ಪ್ರಾಣವಾಗಿ ನಿಂದ ಸದ್ಭಕ್ತಂಗೆ ಆವ ಚಿಂತೆಯೂ ಇಲ್ಲ, ಆತ ನಿಶ್ಚಿಂತ, ಪರಮಸುಖಪರಿಣಾಮಿ ಸತ್ಯನು ನಿತ್ಯನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ರಾಜನ ಭೂಮಿಯಲ್ಲಿ ಗ್ರಾಮ ಕ್ಷೇತ್ರ ಪ್ರಬಲಿತವಾಗಿ ಜನರು ಸುಖಿಸಿದರೆ ಭಿನ್ನವೆಲ್ಲಿಹದೋ! ಪರಿಣಾಮವಲ್ಲದೆ ಪರಶಿವಾಂಶಿಕರು ಅಂಗವಿಡಿದು ಸರ್ವಾಚಾರಸಂಪತ್ತಿನೊಳಗಿರ್ದರೆ ಭಿನ್ನವೆಲ್ಲಿಹದೊ, ಗುರುನಿರಂಜನ ಚನ್ನಬಸವಲಿಂಗಕ್ಕೆ ಪತ್ನಿಯ ಸೌಭಾಗ್ಯಸುಖ ಪತಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗ್ರಾಮ ಚೌಗ್ರಾಮದಲಿ ಸೀಮೆಗೆಟ್ಟುತದು ಸಿದ್ಧಗ್ರಾಮವ ಮುರಿದೊತ್ತುತೈದೂದೆ ಗ್ರಾಮಬಲ ನಾಶವಾಗೆ ಸೀಮೆಗೆಡಲು, ಸಾನಂದದ ಆನಂದಕ್ಕೆ ತನ್ನನು ಕಳೆದು, ನಾನಾ ಗುಣದಲ್ಲಿ ಭಾನು ವಿಕಸ ಪ್ರಬಲವನೆಯ್ದಿದೆ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->