ಅಥವಾ

ಒಟ್ಟು 26 ಕಡೆಗಳಲ್ಲಿ , 13 ವಚನಕಾರರು , 22 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಗಳ ತಿರುಳನುರುಹಿ, ಆದಿಯ ಬೀಜವ ವೇದವರಿಯಲ್ಲಿ ಸುಟ್ಟು, ಆ ಭಸ್ಮವ ಹಣೆಯಲ್ಲಿ ಧರಿಸಿ, ಅರಳಿಯ ಮರದೊಳಗಾಡುವ ಗಿಳಿಯ ಎಲೆ ನುಂಗಿತ್ತ ಕಂಡೆ. ಅರಳಿ ಹೂವಾಯಿತ್ತು, ಫಲ ನಷ್ಟವಾಯಿತ್ತು ನೋಡಾ. ಎಲೆ ಉದುರಿತ್ತು, ಆ ಮರದ ಮೊದಲಲ್ಲಿಗೆ ಕಿಚ್ಚನಿಕ್ಕಿ, ಬ್ರಹ್ಮನ ತಲೆಯಲ್ಲಿ ಬೆಣ್ಣೆಯ ಬೆಟ್ಟ ರುದ್ರಲೋಕಕ್ಕೆ ದಾಳಿ ಮಾಡಿ, ಗ್ರಾಮದ ಮಧ್ಯದೊಳಗೊಂದು ಕೊಂಡವ ಸುಟ್ಟು, ಯಜ್ಞ ಪುರುಷನ ಹಿಡಿದು, ಕೈ ಸಂಕಲೆಯನಿಕ್ಕಿ, ಗಂಗೆವಾಳುಕರಿಗೆ ಕೈವಲ್ಯವನಿತ್ತು, ಅಷ್ಟಮೂರ್ತಿಯೆಂಬ ನಾಮವ ನಷ್ಟವ ಮಾಡಿ, ವಿಶ್ವಮೂರ್ತಿಯ ಪಾಶವಂ ಪರಿದು, ಮುಕ್ತಿ ರಾಜ್ಯಕ್ಕೆ ಪಟ್ಟಮಂ ಕಟ್ಟಿ, ರುದ್ರಲೋಕಕ್ಕೆ ದಾಳಿ ಮಾಡಿ, ಆ ಮೂರ್ತಿಗಣೇಶ್ವರರಿಗೆ ಐಕ್ಯಪದವನಿತ್ತು, ಬಟ್ಟಬಯಲ ಕಟ್ಟಕಡೆಯೆನಿಪ ಸಿದ್ಭ ನಿಜಗುರು ಭೋಗಸಂಗನಲ್ಲಿ ಸಯವಾದ ಅಲ್ಲಮ ಅಜಗಣ್ಣ ಚೆನ್ನಬಸವ ಬಸವರಾಜ ಮುಖ್ಯವಾದ ಲಿಂಗಾಂಗಿಗಳ ಪಾದಕ್ಕೆ ನಮೋ ನಮೋ ಎಂದು ಬದುಕಿದೆ.
--------------
ಭೋಗಣ್ಣ
ಸೋಮವಾರ, ಹುಣ್ಣಿಮೆ, ಅಮವಾಸ್ಯೆ ಎಂದು ಉಪವಾಸವಿರ್ದು ಶಿವನಿಗೆ ಅರ್ಪಿತ ಎಂದು ನುಡಿವರು. ಕಾಮ ಕ್ರೋಧ [ಲೋಭ] ಮೋಹ ಮದ ಮತ್ಸರವನಳಿಯರು. ಶಿವನ ನೆಲೆಯನರಿಯದೆ, ಎನಗೆ ಗತಿಕೊಡುವ ಲಿಂಗವಿದೇ ಎಂದು ತಿಳಿಯದೆ, ಗ್ರಾಮದ ಹೊರತಾಯದಲ್ಲಿರುವ ದೇವರುಗಳು ಅದ್ಥಿಕವೆಂದು ಪೂಜಿಸಿ, ಅವಕಿಕ್ಕಿದ ಕೂಳ ತಾ ತಿಂಬುವನು. ಇನ್ನು ಸೋಮಧರಗರ್ಪಿತವೆಂದು ಭುಂಜಿಸುವವರ ತೆರನಂತೆ ದೊಡ್ಡ ಗ್ರಾಮದ ಸೂಕರನು ಗಂಗೆಯಲ್ಲಿ ಮಿಂದು ಬಂದು ಅಮೇಧ್ಯವ ಭುಂಜಿಸಿದ ತೆರನಾಯಿತೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಐದು ಕೇರಿಯ ಮುಂದೆ ಒಂದು ಗ್ರಾಮವ ಕಂಡೆನಯ್ಯ, ಆ ಗ್ರಾಮದ ಮುಂದೆ ಒಂದು ಗುಡಿಯ ಕಂಡೆನಯ್ಯ. ಆ ಗುಡಿಯೊಳಗೊಬ್ಬ ಪುರುಷನು ಲಿಂಗಾರ್ಚನೆಯ ಮಾಡುತಿರ್ಪನು ನೋಡಾ ! ಆ ಪುರುಷನ ಸರ್ಪ ನುಂಗಿ, ಆ ಸರ್ಪನ ಕಪ್ಪೆ ನುಂಗಿ ನಿರ್ವಯಲಾದುದ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇಪ್ಪತ್ತೈದು ಗ್ರಾಮದ ಮೇಲೆ ಸುಳಿದಾಡುವ ಪುಷ್ಪದತ್ತನ ಕಂಡೆನಯ್ಯ. ಆ ಪುಷ್ಪದತ್ತನ ಕರಕಮಲದಲ್ಲಿ ಸಾವಿರೆಸಳ ಪುಷ್ಪವಿಪ್ಪುದು ನೋಡಾ. ಆ ಪುಷ್ಪದ ಪರಿಮಳವ ಅರುಹುವ ಹಿರಿಯರ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆರು ಕೇರಿಯ ಮುಂದೆ ಮೂರು ಗ್ರಾಮವ ಕಂಡೆನಯ್ಯ. ಮೂರು ಗ್ರಾಮದ ಮುಂದೆ ಒಂದು ಲಿಂಗವ ಕಂಡೆನಯ್ಯ. ಆ ಲಿಂಗವ ನೋಡ ಹೋಗದ ಮುನ್ನ ಆರು ಕೇರಿ ಅಳಿದು, ಮೂರು ಗ್ರಾಮ ಹೋಗಿ, ಮೀರಿ ಕಂಡೆನಯ್ಯ ಆ ಲಿಂಗವನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಗ್ರಾಮದ ಪಥಗತಿಯನರಿಯರು, ಗ್ರಾಮಕ್ಕೆ ಗುರುವಾವುದೆಂದರಿಯರು, ಗ್ರಾಮದ ಕರಣವಿಡಿದಲ್ಲಿ ನಿಚ್ಚಾಟವಾವುದೆಂದರಿಯರು. ಇವನರಿದು ಮರೆದು ನಿಂದರೆ ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯವು.
--------------
ಚನ್ನಬಸವಣ್ಣ
ಖೇಚರಪವನದಂತೆ ಜಾತಿಯೋಗಿಯ ನಿಲುವು ! ಮಾತಿನೊಳು ಧಾತು ನುಂಗಿ ಉಗುಳದಿನ್ನೆಂತೊ ? ಭೂಚಕ್ರವಳಯವನು ಆಚಾರ್ಯ ರಚಿಸಿದ. ಗ್ರಾಮವೆಲ್ಲವ ಸುಟ್ಟು, ನೇಮ ನಾಮವ ನುಂಗಿ ಗ್ರಾಮದ ಪ್ರಭುವನೆ ನುಂಗಿ, `ಗುಹೇಶ್ವರ ಗುಹೇಶ್ವರ' ಎನುತ ನಿರ್ವಯಲಾಗಿತ್ತು.
--------------
ಅಲ್ಲಮಪ್ರಭುದೇವರು
ಕಾಯದ ಜೀವದ ಮಧ್ಯದಲ್ಲೊಂದೂರ ಬಾಗಿಲಲ್ಲಿ ಮೂವರು ಹೊಲೆಯರ ಕಾವಲು. ಒಬ್ಬ ಜಾತಿಸೂತಕ, ಒಬ್ಬ ಜನನಸೂತಕ, ಒಬ್ಬ ಪ್ರೇತಸೂತಕ. ಇಂತೀ ಗ್ರಾಮದ ಹೊಲೆಯರು ಕೊಂಡಾಡುತ್ತಿದ್ದರು. ಒಬ್ಬಂಗೆ ಅಂಡೊಡೆದು, ಒಬ್ಬಂಗೆ ಅಂಗ ಭಿನ್ನವಾಗಿ, ಒಬ್ಬಂಗೆ ಶಿರಚ್ಛೇದನವಾಗಿ, ಗ್ರಾಮದ ಬಾಗಿಲು ಬಟ್ಟಬಯಲಾಯಿತ್ತು. ಬಂಕೇಶ್ವರಲಿಂಗವನರಿಯಿರಣ್ಣಾ.
--------------
ಸುಂಕದ ಬಂಕಣ್ಣ
ಹೇಮದ ಬೆಂಬಳಿಯ ಸ್ವರೂಪದಂತೆ, ಗ್ರಾಮದ ಬೆಂಬಳಿಯ ಬಟ್ಟೆಯಂತೆ. ಹೇಮದ ರೂಪವಳಿದು ಸ್ವರೂಪವಡಗಿದಲ್ಲಿ ಕುಶಲಚಿತ್ರವೆಲ್ಲಿದ್ದಿತ್ತು ? ಬಟ್ಟೆಯ ಮೆಟ್ಟಿ ಹೋಗಿ ಪುನರಪಿಯಾಗಿ ತಿರುಗಿದಲ್ಲಿ, ಊರ ಬಾಗಿಲ ಬಟ್ಟೆಯ ಒಂದರಲ್ಲಿ ಹೋಗಬೇಕು. ಇದು ದೃಷ್ಟಕ್ಕೆ ಕೊಟ್ಟ ಇಷ್ಟ ಆ ಇಷ್ಟ ಚಿತ್ತದಲ್ಲಿ ಅಚ್ಚೊತ್ತಿದ ಮತ್ತೆ, ಆ ನಿಶ್ಚಯ ಉಭಯವ ತಿಳಿದಲ್ಲಿ, ಕಾಯಕ್ಕೆ ಕೈಲಾಸವೆಂಬುದಿಲ್ಲ, ಭಾವಕ್ಕೆ ಬಯಲೆಂಬುದಿಲ್ಲ. ಅನಲನಲ್ಲಿ ಅರತ ದ್ರವ್ಯದಂತೆ ಅದು ಅಮೂರ್ತಿಭಾವ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ.
--------------
ಮೋಳಿಗೆ ಮಹಾದೇವಿ
ಗುರುಲಿಂಗಜಂಗಮದಲ್ಲಿ ಅತ್ಯಂತ ಪ್ರೇಮಿಗಳೆಂದು ಪರರ ಮುಂದೆ ತಮ್ಮ ಬಿಂಕವ ತೋರುವರು. ತೋರಿದಂತೆ ಆಚರಣೆಯ ತೋರರು. ಅದೆಂತೆಂದಡೆ : ತನ್ನ ದೀಕ್ಷೋಪದೇಶವ ಮಾಡಿದಂಥ ಗುರು ಮನೆಗೆ ಬಂದರೆ ಮನ್ನಿಸರು. ನಯನುಡಿಯ ಮಾತನಾಡರು. ಒಂದು ಹೊನ್ನು ವಸ್ತ್ರವ ಬೇಡಿದರೆ ಇಲ್ಲೆಂಬರಲ್ಲದೆ ಕೊಟ್ಟು ಸಂತೋಷಪಡಿಸುವವರಿಲ್ಲ. ಗ್ರಾಮದ ಮಧ್ಯದಲ್ಲಿ ಆವನೊಬ್ಬ ಜಾತಿಹಾಸ್ಯಕಾರನು ಬಂದು, ಡೋಲು ಡಮಾಮಿಯ ಹೊಡೆದು, ಬೊಬ್ಬಿಯ ರವಸದಿಂದ ಮಣ್ಣವರಸಿ, ರಟ್ಟಿ ಮಂಡಿಯ ತಿಕ್ಕಿ, ತೊಡೆಯ ಚಪ್ಪರಿಸಿ, ಕೋ ಎಂದು ಕೂಗಿ, ಭೂಮಿಗೆ ಕೈ ಹಚ್ಚಿ, ಲಾಗದ ಮೇಲೆ ಲಾಗ ಹೊಡೆದು, ಅಂತರಪುಟಕಿಯಲ್ಲಿ ಮೂರು ಹೊರಳಿಕೆಯ ಹೊರಳಿ, ಮುಂದೆ ಬಂದು ನಿಂತು, ಮಜುರೆಯ ಮೇಲೆ ಮಜುರೆಯ ಹೊಡೆದು, ಅವರ ಹೆಸರೆತ್ತಿ ಕೊಂಡಾಡಲು, ಅವರ ಲಾಗಕ್ಕೆ ಮೆಚ್ಚಿ ಶಾಲು ಶಕಲಾತಿ ಮೊದಲಾದ ವಸ್ತ್ರವ ಕೊಟ್ಟು, ಕಾಲತೊಡರು ಮುಂಗೈಸರಪಳಿ ಛತ್ರ ಚಾಮರ ಜಲ್ಲಿ ಮೊದಲಾದ ಚಾಜವ ಕೊಟ್ಟು, ಸಂತೋಷಪಡಿಸುವರಲ್ಲದೆ ಇಲ್ಲೆಂಬರೇ? ಇಲ್ಲೆನ್ನರಯ್ಯ. ಮತ್ತಂ, ಲಿಂಗಪೂಜೆಯ ಮಾಡೆಂದಡೆ ಎನ್ನಿಂದಾಗದೆಂಬರು. ಲಿಂಗಕ್ಕೆ ಸಕಲಪದಾರ್ಥವನರ್ಪಿಸಿ ಸಲಿಸೆಂದಡೆ ಎನ್ನಿಂದಾಗದೆಂದು, ಬಂದ ಪದಾರ್ಥವ ಲಿಂಗಕ್ಕೆ ತೋರದೆ ಬಾಯಿಗೆಬಂದಂತೆ ತಿಂಬುವರು. ಜಟ್ಟಿಂಗ ಹಿರಿವಡ್ಯಾ ಲಕ್ಕಿ ದುರ್ಗಿ ಚಂಡಿ ಮಾರಿಯ ಪೂಜಿಸೆಂದಡೆ ತನುಮನವು ಹೊಳೆಯುಬ್ಬಿದಂತೆ ಉಬ್ಬಿ, ಹೊತ್ತಾರೆ ಎದ್ದು ಪತ್ರಿ ಪುಷ್ಪವ ತಂದು, ಒಂದೊತ್ತು ಉಪವಾಸ ಮಾಡಿ, ಮೈಲಿಗೆಯ ಕಳೆದು ಮಡಿಯನುಟ್ಟು, ಮನಪೂರ್ವಕದಿಂ ಪೂಜೋಪಚಾರವ ಮಾಡಿ, ಭೂಮಿಯಲ್ಲಿ ಕಾಯಕಷ್ಟವ ಮಾಡಿ ಬೆಳೆದಂಥ ಹದಿನೆಂಟು ಜೀನಸಿನ ಧಾನ್ಯವ ತಂದು ಪಾಕ ಮಾಡಿ, ಆ ದೇವತೆಗಳಿಗೆ ನೈವೇದ್ಯವ ಕೊಟ್ಟು, ಮರಳಿ ತಾವು ಉಂಬುವರಲ್ಲದೆ, ಅಂತಪ್ಪ ದೇವತೆಗಳಿಗೆ ಕೊಡದ ಮುನ್ನವೆ ಸಾಯಂಕಾಲಪರಿಯಂತರವಾದಡೂ ಒಂದು ಬಿಂದು ಉದಕ ಒಂದಗಳನ್ನವ ಕೊಳ್ಳದೆ, ತನು-ಮನ ಬಳಲಿಸುವರಯ್ಯಾ. ಮತ್ತಂ, ಜಂಗಮಲಿಂಗವು ಹಸಿವು ತೃಷೆ ಆಪ್ಯಾಯನವಾಗಿ ಮಧ್ಯಾಹ್ನ ಸಾಯಂಕಾಲದೊಳಗೆ ಭಿಕ್ಷಕ್ಕೆ ಬಂದಡೆ, ಅನುಕೂಲವಿಲ್ಲ, ಮನೆಯೊಳಗೆ ಹಡದಾರ ಗದ್ದಲುಂಟು ಮನೆಯೊಳಗೆ ಗೃಹಸ್ಥರು ಬಂದಾರೆ, ಘನಮಾಡಿಕೊಳ್ಳಿರಯ್ಯಾ ಮುಂದಕ್ಕೆ ಎಂಬರಲ್ಲದೆ, ಅಂತಪ್ಪ ಆಪ್ಯಾಯನವಾದ ಜಂಗಮವ ಕರೆದು ಅನ್ನೋದಕವ ನೀಡಿ, ತೃಪ್ತಿಯ ಬಡಿಸುವರೆ ? ಬಡಿಸುವದಿಲ್ಲ. ಊರೊಳಗೆ ಒಬ್ಬ ಜಾರಸ್ತ್ರೀಯಳು ಉಂಡು ವೀಳ್ಯವಕೊಂಡು ಸಹಜದಲ್ಲಿ ತಮ್ಮ ಗೃಹಕ್ಕೆ ಬಂದಲ್ಲಿ ಆ ಜಾರಸ್ತ್ರೀಗೆ ಮನೆಯವರೆಲ್ಲರು ಉಣ್ಣು ಏಳು ಉಂಬೇಳೆಂದು ಆಕೆಯ ಕರವ ಪಿಡಿದು ಕರೆವರಯ್ಯಾ. ಅವಳು ಎನಗೆ ಹಸುವಿಲ್ಲೆಂದು ತಮ್ಮ ಗೃಹಕ್ಕೆ ಹೋಗಲು, ಅವಳು ಹೋದಮೇಲೆ ದೇವರಿಗೆ ಎಡಿಯ ಕಳಿಸಿದಂತೆ ಕಳುಹುವರಯ್ಯ. ಇಂತಪ್ಪ ತ್ರಿವಿಧಭ್ರಷ್ಟ ಹೊಲೆ ಮಾದಿಗರಿಗೆ ಗುರು-ಲಿಂಗ-ಜಂಗಮದ ಪ್ರೇಮಿಗಳಾದ ಸದ್ಭಕ್ತರೆಂದಡೆ, ಶಿವಜ್ಞಾನಿಗಳಾದ ಶಿವಶರಣರು ಕಂಡು ತಮ್ಮೊಳಗೆ ತಾವೇ ನಕ್ಕು ಅರಿಯದವರಂತೆ ಶಬ್ದಮುಗ್ಧರಾಗಿ ಸುಮ್ಮನೆ ಇರ್ದರು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನಾಲ್ಕು ಗ್ರಾಮದ ಪಟ್ಟಣಕ್ಕೆ ಪಂಚೈವರ ಕಾಹು. ಅವರ ಸಂಚವಿಡಿದು ಲಿಂಗಾರ್ಚನೆಯ ಮಾಡಿದರೆ ಲೋಕದ ಬಳಕೆ ಕಂಡಯ್ಯಾ. ಪಂಚೈವರ ಪಂಚಸ್ಥಳವಳಿದು ಏಕಸ್ಥಳವಾಗಿ ನವನಾಳದ ಭೇದದ ಪರಿಯರಿದಡೆ ಲಿಂಗೈಕ್ಯ ನೋಡಾ. ನಾಳ ಮಧ್ಯದಲಿಪ್ಪ ಜೀವಪ್ರಾಣನ ನೆಲೆಯನರಿದಡೆ ಕೂಡಲಚೆನ್ನಸಂಗನೊಬ್ಬ ಸಾಹಿತ್ಯವಾಗಿಹನು.
--------------
ಚನ್ನಬಸವಣ್ಣ
ಪಾದಪೂಜೆಯೆಂಬುವುದು ಅಗಮ್ಯ-ಅಗೋಚರ- ಅಪ್ರಮಾಣ ! ಶ್ರೀಗುರುಬಸವೇಶ್ವರದೇವರು ತಮ್ಮ ಅಂತರಂಗದಲ್ಲಿರ್ದ ತೀರ್ಥಪ್ರಸಾದಮಂ ಗಣಸಮೂಹಕ್ಕೆ ಸಲ್ಲಲೆಂದು ನಿರ್ಮಿಸಿ ಭಕ್ತಿ ತೊಟ್ಟು ಮೆರದರು. ಇಂತಪ್ಪ ತೀರ್ಥಪ್ರಸಾದವ ಸೇವಿಸುವ ಕ್ರಮವೆಂತೆಂದಡೆ- ಗ್ರಾಮದ ಮಠದಯ್ಯ, ಮಠಪತಿ, ಓದಿಸುವ ಜಂಗಮ, ಹಾಡುವ ಜಂಗಮ, ಆಡುವ ಜಂಗಮ, ಬಾರಿಸುವ ಜಂಗಮ, ಅಗಹೀನ, ಅನಾಚಾರಿ, ಕಂಬಿಕಾರ, ಓಲೆಕಾರನಾಗಿಹ, ವಾದಿಸುವನು, ಗರ್ವಿಸುವವನು, ಅಹಂಕಾರಿ, ದಲ್ಲಾಲ, ವೈದಿಕ, ಧನಪಾಲ, ಉದ್ಯೋಗಿ, ನಾನಾ ವಿಚಾರವ ಹೊತ್ತು, ಕಾಣಿಕಿಗೆ ಒಡೆಯರಾಗಿ ಚೆಂಗಿತನದವರು, ಪರಿಹಾಸಕದವರು, ಮರುಳು ಮಂಕುತನ ಮಾಡುವ[ವರು], ಪಟ್ಟಾಧಿಪತಿಯೆಂದೆನಿಸಿ, ಚರಮೂರ್ತಿಯೆಂದೆನಿಸಿ, ವಿರಕ್ತರೆಂದೆನಿಸಿ, ನಾಸಿ, ತೊಂಬಾಕ, ಭಂಗಿ, ಮಾಜೂಮ, ಗಂಜಿ ಅರವಿ, ಅಪು ಹೊದಿಕೆ[ಯವರು], ಹಲ್ಲುಮುರುಕ, ಉದ್ದೇಶಹೀನ, ಬೆಚ್ಚಿದವ, ಚುಚ್ಚಿದವ, ಕಚ್ಚಿದವ, ಬೆಳ್ಳಿಬಂಗಾರ ಹಲ್ಲಣಿಸಿಕೊಂಡ ಭವಿಸಂಗ, ಕರ್ಣಹೀನ, ಮೂಕ, ನಪುಂಸಕ, ವೀರಣ್ಣ, ಬಸವಣ್ಣ, ಸ್ಥಾವರದೈವಂಗಳಿಗೆ ತೀರ್ಥಕುಡುವ, ಉಡಕಿ, ಸೋಹಿ ಬಯಲಾದ ಜಂಗಮಕ್ಕೆ ಕಟಕಟೆಯಿಟ್ಟು ಹಾವಿಗೆಯಿಟ್ಟು ಧೂಳತಿಟ್ಟು ಗೊರವನಂತೆ ಪೂಜೆ ಮಾಡಿಸುವ- ಇಂತಿಷ್ಟು ಅಜ್ಞಾನಿಜಂಗಮರಲ್ಲಿ ಪಾದೋದಕ ಪ್ರಸಾದವ ಕೊಳಲಾಗದು ! ಅಥವಾ ಕೊಂಡಡೆ ಕೊಟ್ಟಾತಂಗೆ ದೋಷ, ಕೊಂಡಾತಂಗೆ ಪಾಪ ! ತ್ರಿನೇತ್ರವಿರ್ದಡು ಕೊಳಲಾಗದು ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಒಡಲೆಂಬಾರಣ್ಯದ ಪಡುವಣ ಕಾಳುಗಟ್ಟದ ಗಹ್ವರದ ನವದ್ವಾರದೊಳಗೆ ಅಡಗಿಪ್ಪ ಐವರ ಕಳ್ಳರ ತಿಳಿದು ನೋಡಿರಯ್ಯಾ. ಆ ಕಳ್ಳರು ಇಹನ್ನಕ್ಕರ ಊರಿಗುಪಟಳ ಮನೆಗೆ ಮಾರಿ, Zõ್ಞಕ ಗ್ರಾಮದ ಮಧ್ಯದವರಿಗುಳುಹಿಲ್ಲ. ತನುಪ್ರಪಂಚಿಗಳು ಮನಪ್ರಪಂಚಿಗಳು ಧನಪ್ರಪಂಚಿಗಳು ವಾದಿಗಳು ತರ್ಕಿಗಳು ನಾನಾ ಕುಟಿಲ ಕುಹಕ ಬಹುಪಾಪಿಗಳೆಲ್ಲ ನೆರೆದು, ಆ ಕ?್ಳರ ಹಿಡಿದಿಹೆವೆನುತ್ತಿಹರಯ್ಯಾ. ಅದಕ್ಕೆಂಟು ಬೀದಿ ಒಂಬತ್ತು ಓಡುಗಂಡಿ ಕಾಣಬಾರದ ಕತ್ತಲೆ, ಹೆಜ್ಜೆಯ ಹೊಲಬ ಕಂಡೆಹೆನೆಂಬನು ಭ್ರಾಂತ ನೋಡಾ ! ಓಂ ಬ್ರಹ್ಮಸ್ನಾನಂ ಪವನಜ್ಞಾನಂ ಲಿಂಗಧ್ಯಾನಂ ಸುಜ್ಞಾನದರ್ಶನಂ ಪ್ರಭಾಕರಂ ದಿವಾಕರಂ ಇಂತೀ ಶ್ರುತಿಮತದಲ್ಲಿ ತಿಳಿದು ನೋಡಲಿಕೆಯಾಗಿ ಆ ಹೆಜ್ಜೆ ಹೋಯಿತು ! ಅಂಗಸಂಗನ ಹಳ್ಳಿಯ ಒಳಗೆರೆಯ ಒಸರುಬಾವಿಯ ಲಿಂಗಗೂಡಿನ ಶಿವಪುರದ ಸೀಮೆಯ, ನಿಟಿಲಪುರದ ತಲೆವಲದಲ್ಲಿ ಸಿಕ್ಕಿದ ಕ?್ಳರ ಅಂಗದ ಮೇಲೆ ಕಟ್ಟಿತಂದು ಎನ್ನೊಡೆಯ ಪ್ರಭುರಾಯಂಗೊಪ್ಪಿಸಲು ಆ ಪ್ರಭುರಾಯ ತನ್ನವರೆಂದು ಒಕ್ಕುದ ಮಿಕ್ಕುದನಿಕ್ಕಿ ರಕ್ಷಿಸುವ ಕಾಣಿರೆ ! ಇಂತಪ್ಪ ಘಟ ಪಂಚಭೂತಂಗ? ಕಟ್ಟಿ ನಿಲಿಸಿ, ಆತ್ಮಜ್ಞಾನ ಭಕ್ತಿರಸಾಮೃತಸಾರಾಯವನುಣಬಲ್ಲವರಾರೆಂದಡೆ ಪ್ರಭುವಿನ ಬಳಿಯ ಬಸವಸಂತತಿಗಲ್ಲದೆ ಅ?ವಡದು ಮಿಕ್ಕಿನ ಪ್ರಪಂಚಿಗಳಿಗೆ ಅಸಾಧ್ಯ ಕಾಣಾ ಕೂಡಲಚೆನ್ನಸಂಗಮದೇವಯ್ಯಾ.
--------------
ಚನ್ನಬಸವಣ್ಣ
ಎರಡೆಂಟು ಗ್ರಾಮದ ಚೌಮಠವ ಮನ್ನಿಸಿ ಆನಂದದಿಂದವರು ನಿತ್ಯರಯ್ಯಾ. ಧ್ಯಾನಸಮಾಧಿ ತಾನು ರೂಪಾದೊಡೆ ಅವರ ನೀನು ನೀನೆಯೆಂಬೆ ಕಾಣಾ, ಕಪಿಲಸಿದ್ಧ ಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
ಈ ಲೌಕಿಕದ ಮಧ್ಯದಲ್ಲಿ ಜೀವಾತ್ಮರು ದಿನಚರಿ, ವಾರ, ಮಾಸ, ಚತುದರ್ಶಿಯಲ್ಲಿ ಉಪವಾಸ ಮಾಡುವ ಕ್ರಮವ ಪೇಳ್ವೆ. ಅದೆಂತೆಂದಡೆ : ದಿನಚರಿ ವಾರದೊಳಗೆ ಸೋಮವಾರ ವ್ರತವುಳ್ಳವರು ಆ ದಿವಸ ಉದಯದಿಂ ಮೂರುಪ್ರಹರ ವೇಳೆ ಪರಿಯಂತರವಾಗಿ ಉಪವಾಸವ ಮಾಡಿ ಆ ದಿವಸಕ್ಕಿಂತು ಆ ವಾರ ದಿವಸ ಆವ ಪದಾರ್ಥವಾದಡೆಯು ನಿರ್ಮಳ ಪಾಕವ ಮಾಡಿಸಿ ಕೆರೆ, ಬಾವಿ, ಹಳ್ಳ, ಹೊಳೆಗಳಿಗೆ ಹೋಗಿ, ಮಜ್ಜನವ ನೀಡಿ ಪತ್ರಿಪುಷ್ಪವ ತಂದು ತನ್ನ ಲಿಂಗಪೂಜೆಯ ಮಾಡಿ, ಗ್ರಾಮದ ಹೊರಗೆ ಒಂದು ಸ್ಥಾವರಲಿಂಗದ ದೇವಾಲಯಕ್ಕೆ ಹೋಗಿ ನಮಸ್ಕಾರವ ಮಾಡಿ, ಮರಳಿ ತಮ್ಮ ಗ್ರಹಕ್ಕೆ ಬಂದು ಆ ಸ್ಥಾವರಲಿಂಗಕ್ಕೆ ನೈವೇದ್ಯವ ಕಳಿಸಿ ಆ ಮೇಲೆ ಜಂಗಮವ ಕರಿಸಿ ಅರ್ಚಿಸಿ, ಪಾದೋದಕ ಸೇವಿಸಿ, ಆ ಜಂಗಮಕ್ಕೆ ಉತ್ತಮವಾದ ಪದಾರ್ಥವ ಸ್ವಲ್ಪ ಎಡೆ ಮಾಡಿಸಿ ತನ್ನ ಹರಿವಾಣದಲ್ಲಿ ಅರಲು ತುಂಬಿದ ಹೆಡಿಗೆಯಂತೆ ಒಟ್ಟಿಸಿಕೊಂಡು ಮನಬಂದಪರಿಯಲ್ಲಿ ಎರಡು ವೇಳ್ಯದಾಹಾರ ಒಂದುವೇಳೆಯಲ್ಲಿ ರಣವೀರರಂತೆ ತಿಂದು ತಿಂದು ಒಡಲ ತುಂಬಿಕೊಂಡು ನಾವು ಸೋಮವಾರ ಒಂದೊತ್ತು ಉಪವಾಸವ್ರತವುಳ್ಳವರೆಂದು ಪರರಮುಂದೆ ಬೊಗಳುವರಯ್ಯ. ಇಂತಪ್ಪ ವ್ರತಭ್ರಷ್ಟವುಳ್ಳ ಮಂಗಮನುಜರಿಗೆ ವೀರಮಾಹೇಶ್ವರರೆಂದಡೆ ಮೆಚ್ಚರಯ್ಯಾ ನಿಮ್ಮ ಶಿವಜ್ಞಾನಿಗಳಾದ ಶಿವಶರಣರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇನ್ನಷ್ಟು ... -->