ಅಥವಾ

ಒಟ್ಟು 18 ಕಡೆಗಳಲ್ಲಿ , 10 ವಚನಕಾರರು , 18 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸ್ಥೂಲ ಬ್ರಹ್ಮನ ಮಗ, ಸೂಕ್ಷ್ಮ ವಿಷ್ಣುವಿನ ಮಗ, ಕಾರಣ ರುದ್ರನ ಮಗ. ಘನಮಹಿಮ ನಿಮ್ಮನರಿವುದಕ್ಕೆ ಎನಗಿನ್ನಾವುದು ಮನ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ತನುವ ಬೇಡಿದಡೀವೆ, ಮನವ ಬೇಡಿದಡೀವೆ, ಧನವ ಬೇಡಿದಡೀವೆ ನಿಮ್ಮ ಶರಣಂಗೆ. ಎನಗೆ ಬೇಕೆಂಬ ಭಾವ ಮನದಲ್ಲಿ ಹೊಳೆದಡೆ ಘನಮಹಿಮ, ನಿಮ್ಮ ಪಾದದಾಣೆ. ಮನ ವಚನ ಕಾಯದಲ್ಲಿ ನೀವಲ್ಲದೆ ಮತ್ತೊಂದನರಿದಡೆ ಕೂಡಲಸಂಗಮದೇವಾ, ಭವ ಘೋರದಲ್ಲಿಕ್ಕಯ್ಯಾ.
--------------
ಬಸವಣ್ಣ
ಅರಿಯಬಾರದ ಘನವನರಿದು ಸಾದ್ಥಿಸಿ ಗೆದ್ದ ಘನಮಹಿಮ ಶರಣರ ಮುಂದೆ ಎನ್ನ ಪ್ರತಾಪ ನಿಲುಕುವುದೆ? ಅವರಿಪ್ಪರು ಲಂಗಪ್ರಭೆಯೊಳಗೆ; ನಾನಿಪ್ಪೆನು ಅಹಂಕಾರ ಪಂಜರದೊಳಗೆ ಎನ್ನ ನೊಸಲ ಕಣ್ಣಿನ ಕಿಚ್ಚುಡುಗಿ ಲಜ್ಜಿತವಾಗಿ ಮರಳಿ ಬಂದೆನ್ನ ಸ್ತುತಿ ಮುತ್ತಿತ್ತು ನಾನು ಶರಣೆಂಬ ಗುರುವಚನವಿದಿರೆದ್ದು ಕೊಲುವಡೆ, ಕಪಿಲಸಿದ್ಧಮಲ್ಲಿನಾಥನೊಳಗೆ ಅಳಿವೆನಲ್ಲದೆ ಉಳಿವನಲ್ಲ.
--------------
ಸಿದ್ಧರಾಮೇಶ್ವರ
ಎನ್ನ ತನು ಶುದ್ಧವಾಯಿತ್ತು ಬಸವಣ್ಣನ ಶುದ್ಧಪ್ರಸಾದವ ಕೊಂಡೆನಾಗಿ. ಎನ್ನ ಮನ ಶುದ್ಧವಾಯಿತ್ತು. ಬಸವಣ್ಣನ ಸಿದ್ಧಪ್ರಸಾದವ ಕೊಂಡೆನಾಗಿ. ಎನ್ನ ಭಾವ ಶುದ್ಧವಾಯಿತ್ತು ಬಸವಣ್ಣನ ಪ್ರಸಿದ್ಧಪ್ರಸಾದವ ಕೊಂಡೆನಾಗಿ. ಇಂತೆನ್ನ ತನುಮನಭಾವಂಗಳು ಶುದ್ಧಸಿದ್ಧಪ್ರಸಿದ್ಧಪ್ರಸಾದದಲ್ಲಿ ಶುದ್ಧವಾದವು ಕಲಿದೇವಾ, ನಿಮ್ಮ ಶರಣ ಬಸವನಿಂತಹ ಘನಮಹಿಮ ನೋಡಯ್ಯಾ.
--------------
ಮಡಿವಾಳ ಮಾಚಿದೇವ
ಮನದೊಳಗೆ ಘನ ವೇದ್ಯವಾಗಿ, ಘನದೊಳಗೆ ಮನ ವೇದ್ಯವಾದ ಬಳಿಕ ಪುಣ್ಯವಿಲ್ಲ ಪಾಪವಿಲ್ಲ, ಸುಖವಿಲ್ಲ ದುಃಖವಿಲ್ಲ, ಕಾಲವಿಲ್ಲ ಕರ್ಮವಿಲ್ಲ, ಜನನವಿಲ್ಲ ಮರಣವಿಲ್ಲ. ಗುಹೇಶ್ವರಾ ನಿಮ್ಮ ಶರಣನು ಘನಮಹಿಮ ನೋಡಯ್ಯಾ.
--------------
ಅಲ್ಲಮಪ್ರಭುದೇವರು
ಘನಮಹಿಮ ಶರಣರು ತನ್ನ ಮನೆಗೆ ಗಮನಿಸಿ ಬಂದರೆ, ಅನುವರಿದು ಅವರವರ ಒಡವೆಯ ಅವರವರಿಗಿತ್ತು ವಿನಯ ಮುಂದುಗೊಂಡಿಪ್ಪುದೇ ಸಹಜ. ಒರೆದು ನೋಡಬಂದ ಹಿರಿಯರ ಗರ್ಜನೆಯನು ಸೈರಣೆಯೊಳರ್ಚಿಸಿ, ಸಾವಧಾನಸಖತನ ಮುಂದುಗೊಂಡಿಪ್ಪುದೇ ನಿಜಭಕ್ತಿ. ಕೊಂಡು ಮಾಡಬಲ್ಲ ಪ್ರಚಂಡ ಒಡೆಯರಡಿಯಿಟ್ಟು ಬಂದರೆ ತಡವಿಲ್ಲದರಿದು, ಒಡನಿರ್ದ ಧನವ ವಂಚನೆಯನರಿಯದೆ ಈವುದು ಗುರುನಿರಂಜನ ಚನ್ನಬಸವಲಿಂಗಕ್ಕೆ ಅಭಿನ್ನಭಕ್ತಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಲಿಯ ಕೊನೆಯಲ್ಲಿ ಬೆಳೆದ ಹಾಲೆ ಬಾಲೆಯರನೆ ಬಯಸುತ್ತಿಪ್ಪುದು ನೋಡಾ. ಆಲಿಯ ಕೊನೆಯ ಹಾಲೆಯ ಹರಿದು ಬಾಲೇಂದುಮೌಳಿ ತಾನಾದ ಲಿಂಗೈಕ್ಯವನೇನ ಹೇಳುವೆನಯ್ಯ? ನೇತ್ರಕ್ಕೆ ಪ್ರತ್ಯಕ್ಷ ಘನಮಹಿಮ ತಾನಾದ ನಿಲವ ಚೆನ್ನಬಸವಣ್ಣ ಬಲ್ಲ. ಚೆನ್ನಬಸವಣ್ಣನ ಪಾದಕ್ಕೆ ನಮೋ ನಮೋಯೆನುತಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಯೋಗದ ಹೊಲಬ ಸಾಧಿಸಬಾರದು. ಯೋಗವೆಂಟರ ಹೊಲಬಲ್ಲ. ಯೋಗ ಒಂಬತ್ತರ ನಿಲವಲ್ಲ. ಯೋಗವಾರರ ಪರಿಯಲ್ಲ. ಧರೆಯ ಮೇಲಣ ಅಗ್ನಿ ಮುಗಿಲ ಮುಟ್ಟದಿಪ್ಪಡೆ ಯೋಗ. ಮನದ ಕಂಗಳ ಬೆಳಗು ಸಸಿಯ ಮುಟ್ಟಿದೆನೆನ್ನದೆ ಘನವ ಮನವನೊಳಕೊಂಡಡದು ಯೋಗ. ವನಿತೆಯರರಿವರನು ಪತಿಯೊಮ್ಮೆ ಕೂಡಿ ತಳುವಳಿದಿರಬಲ್ಲಡದು ಯೋಗ. ಘನಮಹಿಮ ಪ್ರಭುವಿನ ಸಮರಸ ಯೋಗವ ಕಂಡು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದನು.
--------------
ಘಟ್ಟಿವಾಳಯ್ಯ
ಅನುಪಮ ಶರಣನ ನೆನಹಿನ ಕೊನೆಯಲ್ಲಿ ಘನಲಿಂಗವು. ಆ ಘನಲಿಂಗದ ನೆನಹಿನ ಕೊನೆಯಲ್ಲಿ ನಿರವಯವು. ಆ ನಿರವಯದ ನೆನಹಿನ ಕೊನೆಯಲ್ಲಿ ನಿರಾಲಂಬವು. ಆ ನಿರಾಲಂಬದ ನೆನಹಿನ ಕೊನೆಯಲ್ಲಿ ನಿರಾಳವು. ಆ ನಿರಾಳದ ನೆನಹಿನ ಕೊನೆಯಲ್ಲಿ ಆದಿಮಹಾಲಿಂಗವು. ಆ ಆದಿ ಮಹಾಲಿಂಗದ ನೆನಹಿನ ಕೊನೆಯಲ್ಲಿ ಚಿತ್‍ಶಕ್ತಿ. ಆ ಚಿತ್‍ಶಕ್ತಿಯ ನೆನಹಿನ ಕೊನೆಯಲ್ಲಿ ಪರಮೇಶ್ವರನು. ಆ ಪರಮೇಶ್ವರನ ನೆನಹಿನ ಕೊನೆಯಲ್ಲಿ ಪರಾಶಕ್ತಿ. ಆ ಪರಾಶಕ್ತಿಯ ನೆನಹಿನ ಕೊನೆಯಲ್ಲಿ ಸದಾಶಿವನು. ಆ ಸದಾಶಿವನ ನೆನಹಿನ ಕೊನೆಯಲ್ಲಿ ಆದಿಶಕ್ತಿ. ಆ ಆದಿಶಕ್ತಿಯ ನೆನಹಿನ ಕೊನೆಯಲ್ಲಿ ಈಶ್ವರನು. ಆ ಈಶ್ವರನ ನೆನಹಿನ ಕೊನೆಯಲ್ಲಿ ಇಚ್ಛಾಶಕ್ತಿ. ಆ ಇಚ್ಛಾಶಕ್ತಿಯ ನೆನಹಿನ ಕೊನೆಯಲ್ಲಿ ಮಹೇಶ್ವರನು. ಆ ಮಹೇಶ್ವರನ ನೆನಹಿನ ಕೊನೆಯಲ್ಲಿ ಜ್ಞಾನಶಕ್ತಿ. ಆ ಜ್ಞಾನಶಕ್ತಿಯ ನೆನಹಿನ ಕೊನೆಯಲ್ಲಿ ಶ್ರೀರುದ್ರಮೂರ್ತಿ. ಆ ಶ್ರೀರುದ್ರಮೂರ್ತಿಯ ನೆನಹಿನ ಕೊನೆಯಲ್ಲಿ ವಿಷ್ಣುವು. ಆ ವಿಷ್ಣುವಿನ ನೆನಹಿನ ಕೊನೆಯಲ್ಲಿ ಮಹಾಲಕ್ಷ್ಮಿ. ಆ ಮಹಾಲಕ್ಷ್ಮಿಯ ನೆನಹಿನ ಕೊನೆಯಲ್ಲಿ ಬ್ರಹ್ಮನು. ಆ ಬ್ರಹ್ಮನ ನೆನಹಿನ ಕೊನೆಯಲ್ಲಿ ಸರಸ್ವತಿ. ಆ ಸರಸ್ವತಿಯ ನೆನಹಿನ ಕೊನೆಯಲ್ಲಿ ಸಕಲ ಚರಾಚರಂಗಳು. ಇಂತಿವೆಲ್ಲವು ಶರಣನ ನೆನಹುದೋರಿದಲ್ಲಿಯೇ ತೋರುತಿರ್ಪವು, ಆ ಶರಣನ ನೆನಹು ನಿಂದಲ್ಲಿಯೇ ಅಡುಗುತಿರ್ಪುವಾಗಿ, ಅಖಂಡೇಶ್ವರಾ, ನಿಮ್ಮ ಶರಣನು ಘನಕ್ಕೆ ಘನಮಹಿಮ, ವಾಙ್ಮನಕ್ಕಗೋಚರನು, ಉಪಮೆಗೆ ಉಪಮಾತೀತನು ನೋಡಾ.
--------------
ಷಣ್ಮುಖಸ್ವಾಮಿ
ಹೀನಜಾತಿಯಲ್ಲಿ ಹುಟ್ಟಿದ ಮಾನವನಾದಡಾಗಲಿ ಶಿವಧ್ಯಾನದಿಂದ ನೊಸಲಲ್ಲಿ ಶ್ರೀ ವಿಭೂತಿಯ ಧರಿಸಿದಾತನ ಏನೆಂದು ಉಪಮಿಸಬಹುದಯ್ಯ ? ಆತನಲ್ಲಿ ಜ್ಞಾನಪರೀಕ್ಷೆಯ ಮಾಡಲಾಗದು. ಆತನಲ್ಲಿ ವ್ರತದ ಪರೀಕ್ಷೆಯ ಮಾಡಲಾಗದು. ಆತನು ಮಹಾಪೂಜ್ಯನು ನೋಡಾ ! ಅದೆಂತೆಂದೊಡೆ : ``ತಸ್ಮಿನ್ ಜ್ಞಾನಂ ಪರೀಕ್ಷೇತ ನ ಕುಲಂ ನ ವ್ರತಂ ತಥಾ | ತ್ರಿಪುಂಡ್ರಾಂಕಿತಭಾಲೇನ ಪೂಜ್ಯ ಏವ ಹಿ ನಾರದ ||'' ಎಂದುದಾಗಿ, ಆ ಘನಮಹಿಮ ಇಹಪರಕೆ ಶ್ರೇಷ*ನು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಂಗದ ಕಳೆ ಲಿಂಗದಲ್ಲಿ; ಲಿಂಗದ ಕಳೆ ಅಂಗದಲ್ಲಿ, ಅಂಗಕಳೆ ಲಿಂಗಕಳೆ ಎಂಬುಭಯವಳಿದು ಆತನ ಅಂಗವೆಲ್ಲವು ಲಿಂಗಮಯವಾಗಿ ಅಂಗಲಿಂಗ ಪದಸ್ಥನಯ್ಯ ಶರಣನು. ಮನದಲ್ಲಿ ಲಿಂಗ; ಲಿಂಗದಲ್ಲಿ ಮನಬೆರಸಿ ಮನವು ಮಹಾಘನವನಿಂಬುಗೊಂಡಿಪ್ಪುದಾಗಿ ಪ್ರಪಂಚುಪದಂಗಳನರಿಯನಯ್ಯ ಶರಣನು. ಮನಲಿಂಗ ಪದಸ್ಥನಾದ ಕಾರಣ ಪ್ರಾಣದೊಡನೆ ಲಿಂಗ; ಲಿಂಗದೊಡನೆ ಪ್ರಾಣ ಕೂಡಿ ಪ್ರಾಣನ ಗುಣವಳಿದು ಪ್ರಾಣಲಿಂಗ ಪದಸ್ಥನಯ್ಯ ಶರಣನು. ಭಾವ ಬ್ರಹ್ಮವನಪ್ಪಿ ಜಾಗ್ರ ಸ್ವಪ್ನ ಸುಷುಪ್ತಿಯೆಂಬ ಸರ್ವಾವಸ್ಥೆಯನಳಿದ ಪರಮಾವಸ್ಥನಯ್ಯ ಶರಣನು. ಎಲ್ಲಾ ಪದಂಗಳ ಮೀರಿ ಮಹಾಘನವನಿಂಬುಗೊಂಡ ಘನಲಿಂಗ ಪದಸ್ಥನಯ್ಯ ಶರಣನು. ಇಂತಪ್ಪ ಘನಮಹಿಮ ಶರಣಂಗೆ ಅವಲೋಕದಲ್ಲಿಯೂ ಇನ್ನಾರು ಸರಿಯಿಲ್ಲ; ಪ್ರತಿಯಿಲ್ಲ ಅಪ್ರತಿಮ ಶರಣಂಗೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಎನ್ನ ಕಾಯದ ಕಳವಳವ ನಿಲಿಸಿ, ಗುರುಲಿಂಗವ ತೋರಿದ, ಎನ್ನ ಮನದ ವ್ಯಾಕುಳವ ನಿಲಿಸಿ, ಜಂಗಮಲಿಂಗವ ತೋರಿದ, ಇಂತು ಅಂತರಂಗ ಬಹಿರಂಗದಲ್ಲಿ ತಾನೆಯಾಗಿ, ಎನ್ನ ಪಾವನವ ಮಾಡಿದ, ಅಮರಗಣಂಗಳು ಮುನಿದು ಎನ್ನ ಕೈಲಾಸಕ್ಕೆ ಒಯ್ದಡೆ, ಸದ್ಯೋನ್ಮುಕ್ತಿಯ ತೋರಲೆಂದು ಮತ್ರ್ಯಕ್ಕೆ ಮರಳಿ ತಂದ ಸಂಗನಬಸವಣ್ಣನೆ ಗುರುವೆನಗೆ, ಸಂಗನಬಸವಣ್ಣನೆ ಪರವೆನಗೆ. ಸಂಗನಬಸವಣ್ಣನ ಕರುಣದಿಂದ, ಘನಕ್ಕೆ ಘನಮಹಿಮ ಅಲ್ಲಮಪ್ರಭುವಿನ ಶ್ರೀಪಾದವ ಕಂಡು ಬದುಕಿದೆನು ಕಾಣಾ, ಗವರೇಶ್ವರಾ.
--------------
ಮೇದರ ಕೇತಯ್ಯ
ಕಣ್ಣಿನಲ್ಲಿ ನೋಡಿ ಕಂಡೆಹೆನೆಂದಡೆ ರೂಪಿಂಗೊಡಲಿಲ್ಲ. ಕೈಯಲ್ಲಿ ಮುಟ್ಟಿ ಕಂಡೆಹೆನೆಂದಡೆ ನೆಟ್ಟಗೂಟವಲ್ಲ. ಮನದಲ್ಲಿ ನೆನೆದು ಕಂಡೆಹೆನೆಂದಡೆ ಅನುವಿಂಗಗೋಚರ, ಈ ಅನುಪಮಲಿಂಗವಾರಿಗೂ ಸಾಧ್ಯವಿಲ್ಲ. ಘನಮಹಿಮ ನೀವೆ ಬಲ್ಲಿರಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪ್ರಥಮಕಾಲದಲ್ಲಿ ದೇವಗಣ, ಮಹಾಗಣ, ಕಿನ್ನರಗಣ, ಆಳಾಪಗಣಸಹಿತ ಸಂಗನಬಸವಣ್ಣ. ಗಣಪ್ರಸಾದಿಯಾಗಿ ಮತ್ರ್ಯಲೋಕಕ್ಕೆ ಮಹವ ತಂದು, ಶಿವಗಣಂಗಳ ಮಾಡಿದಾತ ಬಸವಣ್ಣ. ಸ್ವರೂಪ ಸಾರಾಯವ ಪದಾರ್ಥವೆಂದಾತ ಬಸವಣ್ಣ. ಕಲಿದೇವಯ್ಯ, ನಿಮ್ಮ ಶರಣನಿಂತಹ ಘನಮಹಿಮ, ನೋಡಯ್ಯಾ.
--------------
ಮಡಿವಾಳ ಮಾಚಿದೇವ
ಆದಿ ಅನಾದಿಯಿಂದತ್ತತ್ತಲಾದ ಮಹಾಘನಾನಂದಪ್ರಕಾಶಪ್ರಸಾದವ ಕಂಡ ಶರಣಂಗೆ, ಬ್ರಹ್ಮ ವಿಷ್ಣು ಇಂದ್ರಾದಿ ಮನುಮುನಿಗಳ ಅನಿತ್ಯಪದವೊಂದು ತೃಣವಾಗಿಪ್ಪುದು. ಅದೇನು ಕಾರಣವೆಂದೊಡೆ : ಅನಂತ ಗುಣಧರ್ಮದಿಂದಾದ ಸಕಲ ಸಂಭ್ರಮವು, ಅಂತಪ್ಪ ಶರಣ ತನ್ನ ವಿನೋದಕಾರಣ ಲೀಲೆಯನವಧರಿಸಿದನಲ್ಲದೆ, ಮಲಬದ್ಧ ಮೂಢ ವೇಷಧಾರಿ ಪಾಷಂಡಿಗಳಂತೆ ಹೊನ್ನೇ ಪ್ರಾಣ, ಮಣ್ಣೇ ಪ್ರಾಣವಾಗಿ, ಸುಂಬಳದಲ್ಲಿ ಸಿಗಬಿದದ ಮಕ್ಷುಕನಂತೆ ಬಿದ್ದು ಹೋಗಬಂದವನಲ್ಲ. ಮತ್ತೆಂತೆದೊಡೆ : ತನ್ನಂಶೀಭೂತರನರಸುತ್ತ ಅಡಿಗೆರಗಿನಿಂದವರಿಗೆ ಅನುವ ತೋರುತ್ತ, ಘನಮಹಿಮ ಗುರುಚರಶೇಷಾಮೃತವ ಸೇವಿಸುತ್ತ ತನತನಗೆ ಸುಜ್ಞಾನ ಸದ್ಭಕ್ತಿಯಿಂದರಿದು ಬಂದುದ ನೋಡಿ ಪರಮವೈರಾಗ್ಯದಿಂದೆ ಕೈಕೊಂಡು ಪಾವನಸ್ವರೂಪನಾಗಿ ಚರಿಸುವ ನಮ್ಮ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->