ಅಥವಾ

ಒಟ್ಟು 36 ಕಡೆಗಳಲ್ಲಿ , 19 ವಚನಕಾರರು , 33 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಥಮಪಾದದಲ್ಲಿ ಒಂಕಾರಕ್ಕೆ ನಕಾರ ಬೀಜಾಕ್ಷರ. ಆ ನಕಾರ ಉಭಯ ಕೂಡಿದ ಮತ್ತೆ ಮಕಾರ ಬೀಜಾಕ್ಷರ. ಇಂತೀ ತ್ರಿವಿಧಾಕ್ಷರ ಒಡಗೂಡಿ ಒಡಲಾದ ಮತ್ತೆ ಶಿಕಾರ ಬೀಜಾಕ್ಷರ. ಇಂತೀ ಶಿಕಾರ ಮೂರನೊಡಗೂಡಿ ನಾಲ್ಕೆಂಬಲ್ಲಿಗೆ ಯಕಾರ ಬೀಜಾಕ್ಷರ. ಇಂತೀ ಪಂಚಾಕ್ಷರಿಯ ಮೂಲಮಂತ್ರ ಸಂಬಂಧವಾಗಲಾಗಿ ಪ್ರಣಮದ ಬೀಜ. ಆ ಪ್ರಣಮವು `ಒಂ ಭರ್ಗೋ ದೇವಃ' ಜಗಕ್ಕೆ ಕರ್ತೃ ನೀನಲಾ ಎಂದು. ಸಾಮ ಅರ್ಥವಣ ಯಜಸ್ಸು ಋಕ್ಕು ಉತ್ತರ ಖಂಡನ. ಇಂತೀ ಪಂಚವೇದಂಗಳಲ್ಲಿ ಚತುರ್ವೇದಿಗಳಪ್ಪರಲ್ಲದೆ, ಐಕ್ಯೋತ್ತರ ಚಿಂತನೆಯನೀ ವಿಪ್ರಕುಲ ಮಿಥ್ಯವಂತರು ಬಲ್ಲರೆ ? ಕಣ್ಣಿನಲ್ಲಿ ನೋಡುತ್ತ ಕಣ್ಗಾಣೆನೆಂಬವನಂತೆ ಶಾಪಹತರಿಗೆಲ್ಲಕ್ಕೂ ಲಲಾಮಬ್ಥೀಮಸಂಗಮೇಶ್ವರಲಿಂಗವು ಅಸಾಧ್ಯ ನೋಡಾ.
--------------
ವೇದಮೂರ್ತಿ ಸಂಗಣ್ಣ
ಅಕ್ಕಿ ಬೇಳೆ ಬೆಲ್ಲ ಉಪ್ಪು ಮೆಣಸು ಅಡಕೆ ಫಲ ರಸ ದ್ರವ್ಯ ಮುಂತಾದ ದ್ರವ್ಯಕ್ಕೆ ವ್ರತವೊ ? ಮುಟ್ಟುವ ತಟ್ಟುವ ಸೋಂಕುವ ಚಿತ್ತಕ್ಕೆ ವ್ರತವೊ ? ಇವು ಬಾಹ್ಯದಲ್ಲಿ ಮಾಡುವ ಸೌಕರಿಯವಲ್ಲದೆ ವ್ರತಕ್ಕೆ ಸಲ್ಲ. ವ್ರತವಾವುದೆಂದಡೆ ತನ್ನಯ ಸ್ವಪ್ನದಲ್ಲಿ ತನಗಲ್ಲದುದ ಕಂಡಡೆ, ತಾ ಮುಟ್ಟದುದ ಮುಟ್ಟಿದಡೆ, ತಾ ಕೊಳ್ಳದುದ ಕೊಂಡಡೆ, ಆ ಸೂಕ್ಷ್ಮತನುವಿನಲ್ಲಿ ಆ ತನುವಂ ಬಿಟ್ಟು ನಿಂದುದು ವ್ರತ. ಸ್ಥೂಲತನುವಿನಲ್ಲಿ ಸರ್ವರ ನಿಂದೆಗೊಡಲಾಗದೆ, ಮಾಡಿಕೊಂಡ ನೇಮಕ್ಕೆ ಕೇಡುಬಂದಲ್ಲಿ ಆ ಅಂಗಕ್ಕೆ ಓಸರಿಸದೆ ನಿಂದುದು ಆಚಾರ. ಇಂತೀ ಅಂತರಂಗದಲ್ಲಿ ವ್ರತ, ಬಹಿರಂಗದಲ್ಲಿ ಆಚಾರ, ಇಂತೀ ಉಭಯ ಸಿದ್ಭವಾಗಿ ನಡೆವುದೆ ವ್ರತ ಆಚಾರz ಇಂತಿವನರಿದು ಮರೆದಲ್ಲಿ, ತಾ ಮಾಡಿಕೊಂಡ ಕುತ್ತಕ್ಕೆ ಹಾಡಿ ಮದ್ದನರೆದಂತೆ, ಜಗಕ್ಕೆ ಭಕ್ತನಾಗಿ ಆತ್ಮಂಗೆ ಅನುಸರಣೆಯಾದಲ್ಲಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ.
--------------
ಅಕ್ಕಮ್ಮ
ಉದಯ, ಮಧ್ಯಾಹ್ನ, ಅಸ್ತಮಯ, ಕತ್ತಲೆ ಬೆಳಗು, ದಿನ ವಾರ ಲಗ್ನತಿಥಿ ಮಾಸ ಸಂವತ್ಸರ ಹೋಗುತ್ತ ಬರುತ್ತಲಿವೆ. ಇವ ನೋಡಿದವರೆಲ್ಲ ಇದರೊಳಗೆ ಹೋಗುತ್ತ ಬರುತ್ತ ಇದ್ದಾರೆ. ಜಗಕ್ಕೆ ಇವೀಗ ಇಷ್ಟವಾಗಿಪ್ಪವು. ಎನ್ನ ದೇವಂಗೆ ಇವೊಂದೂ ಅಲ್ಲ. ದಿನಕಾಲ ಯುಗಜುಗ ಪ್ರಳಯಕ್ಕೆ ಹೊರಗಾದ ಆ ದೇವನ, ಅಂಗವಿಸಿ ಮುಟ್ಟಿ ಹಿಡಿದ ಕಾರಣ, ಎಮ್ಮ ಶರಣರು ಪ್ರಳಯಕ್ಕೆ ಹೊರಗಾದರು. ಇದನರಿದು, ಅಂತಪ್ಪ ಶರಣರ ಪಾದವ ನಂಬಿ, ಕೆಟ್ಟು ಬಟ್ಟಬಯಲಾದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಅರಿದ ಶರಣಂಗೆ ಆಚಾರವಿಲ್ಲ, ಆಚಾರವುಳ್ಳವಂಗೆ ಲಿಂಗವಿಲ್ಲ. ಲಿಂಗವಿಲ್ಲದ ಶರಣನ ಸುಳುಹು ಜಗಕ್ಕೆ ವಿಪರೀತ, ಚರಿತ್ರವದು ಪ್ರಕಟವಲ್ಲ ನೋಡಾ ! ಸಂಸಾರಿ ಬಳಸುವ ಬಯಕೆಯನೆಂದೂ ಹೊದ್ದನು. ಸಟೆಯ ಹಿಡಿದು ದಿಟವ ಮರೆದು, ಇಲ್ಲದ ಲಿಂಗವನು ಉಂಟೆಂದು ಪೂಜಿಸುವರಾಗಿ ಆಚಾರವುಂಟು, ಆಚಾರವುಳ್ಳವಂಗೆ ಗುರುವುಂಟು, ಗುರುವುಳ್ಳವಂಗೆ ಲಿಂಗವುಂಟು, ಲಿಂಗಪೂಜಕಂಗೆ ಭೋಗವುಂಟು. ಈ ಬರಿಯ ಬಾಯ ಬಣ್ಣಕರೆಲ್ಲರೂ ಪೂಜಕರಾದರು. ಗುಹೇಶ್ವರಲಿಂಗವು ಅಲ್ಲಿ ಇಲ್ಲವೆಂಬುದನು; ಈ ವೇಷಲಾಂಛನರೆತ್ತಬಲ್ಲರು ಹೇಳಾ ಸಂಗನಬಸವಣ್ಣ.
--------------
ಅಲ್ಲಮಪ್ರಭುದೇವರು
ಶಿವಲೋಕಕ್ಕೆ ಸರಿ ಬೇರೆ ಲೋಕವಿಲ್ಲ, ಶಿವಮಂತ್ರಕ್ಕೆ ಸರಿ ಬೇರೆ ಮಂತ್ರವಿಲ್ಲ. ಜಗಕ್ಕೆ ಇಕ್ಕಿದೆ ಮುಂಡಿಗೆಯನೆತ್ತಿಕೊಳ್ಳಿ; ಕೂಡಲಸಂಗಯ್ಯನೊಬ್ಬನೆ ದೈವವೆಂದು.
--------------
ಬಸವಣ್ಣ
ಬೆಳಗಿನೊಳು ಮಹಾಬೆಳಗಿನ ಜ್ಯೋತಿಯ ಕಂಡೆನು, ಶತಕೋಟಿ ಮಿಂಚಿನ ಪ್ರಭೆಯ ಕಂಡೆನು, ಅನಿಲನ ಸಂಗದಲುರಿವ ಕರ್ಪುರದ ಗಿರಿಯ ಕಂಡೆನು. ಕಂಡ ಕಾರಣ, ಎನ್ನ ಪಿಂಡದೊಳಗಿಹ ಸ್ವಯಜ್ಞಾನವೆ ಪರಬ್ರಹ್ಮವೆಂದು ತಿಳಿದು ಸಂತೈಸುತಿದ್ದೆ. ಭೇದದಿಂದೆ ಪರಮಾತ್ಮ ಎನ್ನ ಮತ್ರ್ಯಕ್ಕೆ ಆಜ್ಞೆಯಿಸಿ ಕಳುಹಿ ಅಂಜದಿರೆಂದು ಅಭಯಕೊಟ್ಟು, ತಲೆದಡಹಿ, ನೀನಿದ್ದಲ್ಲಿ ನಾನಿಹೆನೆಂದು ನಿರೂಪಿಸಿ, ಆದಿಪಿಂಡವ ಮಾಡಿ, ಜಗಕ್ಕೆ ನಿರ್ಮಿಸೆ, ಹೇಮಗಲ್ಲ ಹಂಪನೆಂಬ ನಾಮವಿಡಿದು ಬಂದೆ. ಆ ಭೇದವ ಪಿಂಡಜ್ಞಾನದಿಂದಲರಿದು ಆಚರಿಸುತ್ತಿದ್ದೆನು ಎನ್ನಾಳ್ದ Wಪರಮಘೆಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಗತಿವಿರಹಿತನೇನೆಂಬೆ, ಎಂತೆಂಬೆ ? ಅಘಟಿತಘಟಿತ ಅಖಂಡಿತಮಹಿಮನನೇನೆಂಬೆನೇನೆಂಬೆ ? ಆದಿಯಿಂದತ್ತತ್ತ ಗುಹೇಶ್ವರ ! ಅಲ್ಲಯ್ಯನ ಸುಳುಹು ಜಗಕ್ಕೆ ಪಾವನ.
--------------
ಅಲ್ಲಮಪ್ರಭುದೇವರು
ಅಘಟಿತ ಘಟಿತನ ಒಲವಿನ ಶಿಶು ಕಟ್ಟಿದೆನು ಜಗಕ್ಕೆ ಬಿರಿದನು. ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಂಗಳಿಗೆ ಇಕ್ಕಿದೆನು ಕಾಲಲಿ ತೊಡರನು. ಗುರುಕೃಪೆಯೆಂಬ ತಿಗುರನಿಕ್ಕಿ ಮಹಾಶರಣೆಂಬ ತಿಲಕವನಿಕ್ಕಿ ನಿನ್ನ ಕೊಲುವೆ ಗೆಲುವೆ ಶಿವಶರಣೆಂಬ ಅಲಗ ಕೊಂಡು. ಬಿಡು ಬಿಡು ಕರ್ಮವೆ, ನಿನ್ನ ಕೊಲ್ಲದೆ ಮಾಣೆನು. ಕೆಡಹಿಸಿಕೊಳ್ಳದೆನ್ನ ನುಡಿಯ ಕೇಳಾ. ಕೆಡದ ಶಿವಶರಣೆಂಬ ಅಲಗನೆ ಕೊಂಡು ನಿನ್ನ ಕೊಲುವೆ ಗೆಲುವೆ ನಾನು. ಬ್ರಹ್ಮಪಾಶವೆಂಬ ಕಳನನೆ ಸವರಿ, ವಿಷ್ಣು ಮಾಯೆಯೆಂಬ ಎಡೆಗೋಲನೆ ನೂಕಿ, ಎನ್ನೊಡೆಯ ಚೆನ್ನಮಲ್ಲಿಕಾರ್ಜುನಯ್ಯ ತಲೆದೂಗಲಿ ಕಾದುವೆನು ನಾನು.
--------------
ಅಕ್ಕಮಹಾದೇವಿ
ಅಯ್ಯಾ, ನಾನೀಜಗ ಹುಟ್ಟುವಂದು ಹುಟ್ಟಿದವನಲ್ಲ. ನಾನೀಜಗ ಬೆಳೆವಲ್ಲಿ ಬೆಳೆದವನಲ್ಲ. ನಾನೀಜಗವಳಿವಲ್ಲಿ ಅಳಿವವನಲ್ಲ. ಆಗು ಹೋಗಿನ ಜಗಕ್ಕೆ ಸಾಕ್ಷಿ ಚೈತನ್ಯನು, ನನ್ನಾಧಾರದಲ್ಲಿ ಜಗವಿದೆ. ಈ ಜಗದುತ್ಪತ್ತಿ ಸ್ಥಿತಿಲಯಕ್ಕೆ ನಾನಾಶ್ರಯನು. ಅಯ್ಯಾ, ನನಗೂ ನಿನಗೂ ಸಂಬಂಧವಲ್ಲದೆ ಜಗಕ್ಕೂ ಎನಗೂ ಸಂಬಂಧವಿಲ್ಲ. ನಾ ನಿಮ್ಮಲ್ಲಿ ಹುಟ್ಟಿದ ಕಾರಣ, ನಾ ನಿಮ್ಮಂತೆ ತೋರುವೆನು. ಜಗ ಮಾಯೆಯಲ್ಲಿ ಹುಟ್ಟಿದ ಕಾರಣ, ಜಗ ಮಾಯೆಯಂತೆ ತೋರುವುದು. ಅದು ಕಾರಣ ಈ ದೇಹೇಂದ್ರಿಯಗಳು ನನ್ನವಲ್ಲ. ನಿನ್ನವಲ್ಲವೆಂದರಿದ ಕಾರಣ ಬೇರಾದವು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಜಗವ ಸುತ್ತಿಪ್ಪುದು ನಿನ್ನ ಮಾಯೆಯಯ್ಯಾ, ನಿನ್ನ ಸುತ್ತಿಪ್ಪುದು ಎನ್ನ ಮನ ನೋಡಯ್ಯಾ. ನೀನು ಜಗಕ್ಕೆ ಬಲ್ಲಿದನು, ಆನು ನಿನಗೆ ಬಲ್ಲಿದನು, ಕಂಡಯ್ಯಾ. ಕರಿಯು ಕನ್ನಡಿಯೊಳಗಡಗಿದಂತಯ್ಯಾ, ಎನ್ನೊಳಗೆ ನೀನಡಗಿದೆ ಕೂಡಲಸಂಗಮದೇವಾ.
--------------
ಬಸವಣ್ಣ
ಚತುರ್ವೇದಿಯಾದಡೇನು! ಲಿಂಗವಿಲ್ಲದವನೆ ಹೊಲೆಯ! ಶ್ವಪಚನಾದಡೇನು ಲಿಂಗವಿದ್ದವನೆ ವಾರಣಾಸಿ ! ಆತನ ನುಡಿಗಡಣ ಲೇಸು, ಆತ ಜಗಕ್ಕೆ ಪಾವನ, ಆತನ ಪ್ರಸಾದವೆನಗೆ ಅಮೃತಸೇವನೆ. ನ ಮೇ ಪ್ರಿಯಶ್ಚತುರ್ವೇದೀ ಮದ್ಭಕ್ತಃ ಶ್ವಪಚೋಪಿ ವಾ| ತಸ್ಮೈ ದೇಯಂ ತತೋ ಗ್ರಾಹ್ಯಂ ಸ ಚ ಪೂಜ್ಯೋ ಯಥಾಹ್ಯಹಂ|| ಎಂಬುದಾಗಿ ಕೂಡಲಸಂಗಮದೇವರನರಿದು ಪೂಜಿಸಿದಾತ ಷಡುದರುಶನಕ್ಕಧಿಕ, ಜಗಕ್ಕೆ ಪಾವನ ನೋಡಾ.
--------------
ಬಸವಣ್ಣ
ನಾಲ್ಕು ವೇದವನೋದಿದ ವಿಪ್ರರ ಮನೆಯ ಎಣ್ಣೆಹೊಳಿಗೆ ತುಪ್ಪ ಸಕ್ಕರೆ ಎಂದಡೆ ನಮ್ಮ ಶಿವಭಕ್ತರ ಮನೆಯ ಶ್ವಾನ, ಮೂಸಿನೋಡಿ ಒಲ್ಲದೆ ಹೋಯಿತ್ತು. ಅದೆಂತೆಂದಡೆ:ಸಾಮವೇದಿ ಹೋಗುತ್ತಿರಲು ಶ್ವಪಚಯ್ಯಗಳು, ತಮ್ಮ ಪಾಕಕ್ಕೆ ಪಾದರಕ್ಷೆಯ ತೆರೆಯ ಹಿಡಿದಿದ್ದರಾಗಿ. ಆ ಶ್ವಾನನೆ ಶುಚಿಯೆಂದು ಹಾಕಿದ ಮುಂಡಿಗೆಯ ಆರಾದಡೂ ಎತ್ತುವಿರೊ, ಜಗದ ಸಂತೆಯ ಸೂಳೆಯ ಮಕ್ಕಳಿರಾ ? ಜಗಕ್ಕೆ ಪಿತನೊಬ್ಬನೆ ಅಲ್ಲದೆ ಇಬ್ಬರೆಂದು ಬಗಳುವನ ಬಾಯಲ್ಲಿ ನಮ್ಮ ಪಡಿಹಾರಿ ಉತ್ತಣ್ಣಗಳ ಎಡದ ಪಾದರಕ್ಷೆಯ ಅವನಂಗಳ ಮೆಟ್ಟಿಕ್ಕುವೆನೆಂದ_ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಕ್ಷತ್ರಿಯ ಮಂತ್ರಿ ಜಗಕ್ಕೆ ರಾಜಾಂಗವೆ ? ಸಪ್ತಾಂಗ ಸನ್ನಾಹವೆಂಬುದು ಸಂಭ್ರಮ ಸಹಿತ ಉನ್ಮದನ ಮೋಹಿನಿಗಳೆಲ್ಲಾ ಅನುದಪ್ಪಿ ಹೋದರಾಗಿ ಅಂತಃಕರಣ ಘನವೇದಿಸಿ ಶಬ್ದನಿಷ್ಪತ್ತಿಗಳಿಗಲ್ಲದೆ ಸಹಭೋಜನವಳವಡದು ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಕಂಡೆ, ಆಕಾಶದಲ್ಲಿ ಒಂದು ಉಡುಪತಿಯ. ಅದು ಅರ್ಧ ನಿಜರೂಪು, ಅರ್ಧ ತಮರೂಪು. ಅದು ಜಗಕ್ಕೆ ಉಡುಪತಿ, ಎನಗದು ಸಮಧಿಪತಿ. ಅದರ ತೊಡಿಗೆಯ ಗಡಣ ಉಭಯಮಾರ್ಗ. ಅದರಸುವಿನ ಉಡುವ ಗಡಣವನರಿ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
`ಏಕೋ ದೇವೋ ನ ದ್ವಿತೀಯಃ' ಎಂದೆನಿಸುವ ಶಿವನೊಬ್ಬನೆ, ಜಗಕ್ಕೆ ಗುರುವೆಂಬುದನರಿಯದೆ, ವಿಶ್ವಕರ್ಮ ಜಗದ ಗುರುವೆಂದು ನುಡಿವ ದುರಾಚಾರಿಯ ಮುಖವ ನೋಡಲಾಗದು. ಪ್ರಥಮದಲ್ಲಿ ಹುಟ್ಟಿದಾಗ ವಿಶ್ವಕರ್ಮಂಗೆ ತಾಯಿತಂದೆಗಳಾರು ? ಅವನು ಹುಟ್ಟಿದಾಗ ಹೊಕ್ಕಳನಾಳವ ಕೊಯ್ವ ಕತ್ತಿಯ ಮಾಡಿದರಾರು ? ಅವಂಗೆ ತೊಟ್ಟಿಲವ ಕಟ್ಟಿದರಾರು ? ಅವಂಗೆ ಹಾಲು ಬೆಣ್ಣೆ ಬಿಸಿನೀರು ಇಡುವುದಕೆ ಮಡಕೆಯ ಮಾಡಿದರಾರು ? ಅವಂಗೆ ವಿದ್ಯಾಬುದ್ಧಿಯ ಕಲಿಸಿದರಾರು ? ಅವಂಗೆ ಅರುಹು ಮರಹು ಹುಟ್ಟಿಸಿದರಾರು ? ಅವಂಗೆ ಇಕ್ಕುಳ, ಅಡಿಗಲ್ಲು, ಚಿಮ್ಮಟಿಗೆ, ಮೊದಲಾದ ಸಂಪಾದನೆಗಳ ಕೊಟ್ಟವರಾರು ? ಇನಿತನು ವಿಚಾರಿಸದೆ ತಾನು ವೆಗ್ಗಳವೆಂದು ಗಳಹುವನ ದುರಾಚಾರಿಯೆಂದು ಭಾವಿಸುವುದು. ಸರ್ವಜಗದ ಜೀವದ ಪ್ರವರ್ತನೆಯ ಚಾರಿತ್ರಂಗಳ ನೆನಹು ಮಾತ್ರದಿಂದ ಶಿವನು ಒಂದೇ ವೇಳೆಯಲ್ಲಿ ನಿರ್ಮಿಸಿದನು. ಅದೆಂತೆಂದಡೆ; ಅರಣ್ಯಗಿರಿಯ ಕನ್ನಡಿಯೊಳು ನೋಡಿದಂತೆ, ಗಿಡವೃಕ್ಷಂಗಳು ಎಳೆಯದು ಹಳೆಯದು ಒಂದೆ ವೇಳೆ ಕಾಣಿಸಿದಂತೆ, ಒಂದೆ ವೇಳೆಯಲಿ ಬೀಜವೃಕ್ಷನ್ಯಾಯದಲ್ಲಿ, ದಿವಾರಾತ್ರಿನ್ಯಾಯದಲ್ಲಿ ಹಿಂಚು ಮುಂಚು ಕಾಣಲೀಯದೆ, ಸರ್ವಜೀವವ ಹುಟ್ಟಿಸಿ, ರಕ್ಷಿಸಿ, ಸಂಹರಿಸಿ, ಲೀಲಾವಿನೋದದಿಂದಿಪ್ಪ ಶಿವನೊಬ್ಬನೆ ಸಕಲ ಜಗಕ್ಕೆ ಗುರುಸ್ವಾಮಿ. ``ಮನ್ನಾಥಸ್ತ್ರಿಜಗನ್ನಾಥೋ ಮದ್ಗುರುಸ್ತ್ರಿಜಗದ್ಗುರುಃ ಸರ್ವಮಮಾತ್ಮಾ ಭೂತಾತ್ಮಾ ತಸ್ಮೈ ಶ್ರೀಗುರವೇ ನಮಃ ಎಂದುದಾಗಿ ಅರಿತರಿತು ಅನಾಚಾರವ ಗಳಹಿ, ಗುರುಲಿಂಗಜಂಗಮವೆ ಘನವೆಂದು ಅರಿಯದ ಶಿವಭಕ್ತಿಶೂನ್ಯ ಪಾತಕನ ಹಿರಿಯನೆಂದು ಸಂಭಾಷಣೆಯ ಮಾಡಿ ಅವನ ಚಾಂಡಾಲ ಬೋಧೆಯ ಕೇಳ್ವ ಪಂಚಮಹಾಪಾತಕನ ರೌರವನರಕದಲ್ಲಿ ಹಾಕಿ ಮೆಟ್ಟಿಸುತಿಪ್ಪ, ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಇನ್ನಷ್ಟು ... -->