ಅಥವಾ

ಒಟ್ಟು 12 ಕಡೆಗಳಲ್ಲಿ , 6 ವಚನಕಾರರು , 10 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಓದಿಸುವಣ್ಣಗಳೆನ್ನ ಮಾತಾಡ ಕಲಿಸಿದರಲ್ಲದೆ ಮನಕ್ಕೆ ಮಾತಾಡ ಕಲಿಸಲಿಲ್ಲವಯ್ಯಾ. ಧನಕ್ಕೆ ಮುನಿವರಲ್ಲದೆ, ಎನ್ನ ಮನಕ್ಕೆ ಮುನಿವರಿಲ್ಲಯ್ಯಾ. ಧನಕ್ಕೆ ಮುನಿವರಿಗೆ ಮುನಿದು, ಎನ್ನ ಮನಕ್ಕೆ ಮುನಿದ ಕೂಡಲಸಂಗಮದೇವಾ, ಮಡಿವಾಳ ಮಾಚಯ್ಯನು.
--------------
ಬಸವಣ್ಣ
ಕುಲಹೀನಶಿಷ್ಯಂಗೆ ಅನುಗ್ರಹವ ಕೊಟ್ಟು, ತನ್ನ ಪ್ರಾಣಲಿಂಗವ ನಿಕ್ಷೇಪಿಸಿ, ಕರ್ಣಮಂತ್ರವ ಹೇಳಿ, ಆ ಶ್ರೀಗುರು ಬಂದು, ಆ ಶಿಷ್ಯನ ಮನೆಯ ಹೊಗಲೊಲ್ಲದೆ, ಅಕ್ಕಿ ತುಪ್ಪವ ನೀ [ಡಿ]ಸಿಕೊಂಡುಂಬವನ ಕೇಡಿಂಗಿನ್ನೇವೆನಯ್ಯಾ ? ತನ್ನ ಪ್ರಾಣಲಿಂಗವನವರಿಗೆ ಕೊಟ್ಟು, ತಾ ಹೋಗೆನೆಂಬ ವ್ರತಗೇಡಿಗಿನ್ನೇವೆನಯ್ಯಾ ? ಅವನ ಧನಕ್ಕೆ ತಂದೆಯಾದನಲ್ಲದೆ, ಅವನ ಕುಲಕ್ಕೆ ತಂದೆಯಲ್ಲ. ಇದು ಕಾರಣ, ಮಹಾಲಿಂಗ ಕಲ್ಲೇಶ್ವರಾ, ಲಿಂಗವ ಮಾರಿಕೊಂಡುಂಬ ಭಂಗಗಾರರು ಕೆಟ್ಟ ಕೇಡನೇನೆಂಬೆನಯ್ಯಾ.
--------------
ಹಾವಿನಹಾಳ ಕಲ್ಲಯ್ಯ
ತನ್ನ ಶಿಷ್ಯ ತನ್ನ ಮಗನೆಂಬುದು ತಪ್ಪದಲಾ. ಏಕೆ? ಆತನ ಧನಕ್ಕೆ ತಂದೆಯಾದನಲ್ಲದೆ ಆತನ ಮನಕ್ಕೆ ತಂದೆಯಾದನೆ ? ಏಕೆ? ಆತನ ಮನವನರಿಯನಾಗಿ, ಆತನ ಧನಕ್ಕೆ ತಂದೆಯಾದನು. ತನ್ನಲ್ಲಿರ್ದ ಭಕ್ತಿಯ ಮಾರಿಕೊಂಡುಂಬವರು ನಿಮ್ಮ ನಿಜಭಕ್ತರಲ್ಲವಯ್ಯಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಧನಕ್ಕೆ ಮನವನೊಡ್ಡಿದಡೇನು ಮನಕ್ಕೆ ಧನವನೊಡ್ಡಿದಡೇನು ತನು, ಮನ, ಧನವ ಮೀರಿ ಮಾತಾಡಬಲ್ಲಡೆ ಆತ ನಿಸ್ಸೀಮನು, ಆತ ನಿಜೈಕ್ಯನು. ತನು, ಮನ, ಧನವನುವಾದಡೆ ಕೂಡಲಸಂಗಮದೇವನೊಲಿವ. 216
--------------
ಬಸವಣ್ಣ
ಕುಲಹೀನ ಶಿಷ್ಯಂಗೆ ಅನುಗ್ರಹವ ಕೊಟ್ಟು ತನ್ನ ಪ್ರಾಣಲಿಂಗವ ನಿಕ್ಷೇಪಿಸಿ, ಕರ್ಣಮಂತ್ರವ ಹೇಳಿ, ಆ ಗುರು ಬಂದು ಆ ಶಿಷ್ಯನ ಮನೆಯ ಹೊಗಲೊಲ್ಲದೆ ಅಕ್ಕಿ ತುಪ್ಪವನೀಸಿಕೊಂಬವನ ಕೇಡಿಂಗೆ ಇನ್ನೇವೆನಯ್ಯಾ ? ತನ್ನ ಪ್ರಾಣಲಿಂಗವನವನಿಗೆ ಕೊಟ್ಟು ತಾ ಹುಗೆನೆಂಬ ವ್ರತಗೇಡಿಯ ಇನ್ನೇನೆನಬಹುದಯ್ಯಾ ? ಅವನ ಧನಕ್ಕೆ ತಂದೆಯಾದನಲ್ಲದೆ ಅವನಿಗೆ ತಂದೆಯಾದುದಿಲ್ಲ. ಇದು ಕಾರಣ-ಕೂಡಲಚೆನ್ನಸಂಗಯ್ಯಾ ಆ ಲಿಂಗವ ಮಾರಿಕೊಂಡುಂಬ ಭಂಗಕಾರರು ಕೆಟ್ಟಕೇಡನೇನೆಂಬೆನಯ್ಯಾ !
--------------
ಚನ್ನಬಸವಣ್ಣ
ತನು, ಮನ, ಧನಕ್ಕೆ ಆಸೆಮಾಡುವಾತನ ಬಸವಣ್ಣನ ಸಂತತಿಯೆಂತೆನಬಹುದು? ವಧುವಿಂಗೆ ಆಸೆ ಮಾಡುವರನು ಬಲ್ಲಾಳನ ಸಂತತಿಯೆಂತೆನಬಹುದು? ಮಕ್ಕಳಿಗೆ ಆಸೆ ಮಾಡುವರ ಸಿರಿಯಾಳನ ಸಂತತಿಯೆಂತೆನಬಹುದು? ಎನಲಾಗದು, ಎನಿಸಿಕೊಳಲಾಗದು. ಎಂದಾತಂಗೆಯೂ ಎನಿಸಿಕೊಂಡಾತಂಗೆಯೂ ನರಕ ತಪ್ಪದು, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಲಿಂಗವಲ್ಲದೆ ಎನ್ನ ಮನಕ್ಕೆ ಸಮನಿಸದು, ಸಮನಿಸದು. ಜಂಗಮವಲ್ಲದೆ ಎನ್ನ ಧನಕ್ಕೆ ಸಮನಿಸದು, ಸಮನಿಸದು. ಪ್ರಸಾದವಲ್ಲದೆ ಎನ್ನ ತನುವಿಗೆ ಸಮನಿಸದು, ಸಮನಿಸದು. ಕೂಡಲಚೆನ್ನಸಂಗಯ್ಯಾ, ಇದು ಸತ್ಯ ನೋಡಯ್ಯಾ, ಸಕಳೇಂದ್ರಿಯಂಗಳು ಅನ್ಯಸಂಗಕ್ಕೆ ಸಮನಿಸವು, ಸಮನಿಸವು
--------------
ಚನ್ನಬಸವಣ್ಣ
ಧನಕ್ಕೆ ಮನಕ್ಕೆ ಕಾಮಿಸರು ಎನ್ನಯ್ಯಾ, ನಿಮ್ಮ ನೆನೆದು ನಿಮ್ಮ ನೋಡಿ ನಿಮ್ಮ ತೋರಿ ನಿಮ್ಮ ಚಿತ್ತದಲ್ಲಿರಿಸಾ. ಸಲೆ ನಿಮ್ಮ ಬೇಡುವ ಮನ, ದಾಸಿಮನ ಮಾಡರೆನ್ನ [ಕಪಿಲಸಿದ್ಧ] ಮಲ್ಲಿಕಾರ್ಜುನಯ್ಯ ತಂದೆ.
--------------
ಸಿದ್ಧರಾಮೇಶ್ವರ
ಮನಕ್ಕೆ ಮನ ಒಂದಾಗಿ, ಧನಕ್ಕೆ ಧನ ಒಂದಾಗಿ ನಚ್ಚಿದ ಮಚ್ಚು ಅಚ್ಚೊತ್ತಿದಂತಿರಬೇಕು. ಪ್ರಾಣಕ್ಕೆ ಪ್ರಾಣ ಒಂದಾಗಿ, ಶುಭಸೂಚನೆ ಒಂದಾಗಿರದ ನಚ್ಚು ಮಚ್ಚು ಪಾರವೈದುವುದೆ ಶಿರ ಹರಿದಡೇನು, ಕರುಳು ಕುಪ್ಪಳಿಸಿದಡೇನು ಇಂತಪ್ಪ ಸಮಸ್ತವಸ್ತುವೆಲ್ಲವೂ ಹೋದಡೇನು ಚಿತ್ತ ಮನ ಬುದ್ಧಿ ಒಂದಾದ ಮಚ್ಚು, ಬಿಚ್ಚಿ ಬೇರಾಗದಿದ್ದಡೆ ಮೆಚ್ಚುವ ನಮ್ಮ ಕೂಡಲಸಂಗಮದೇವ.
--------------
ಬಸವಣ್ಣ
ಶಿವಭಕ್ತರ ಹಾದಿಯ ಕಾಣದೆ, ಹರಗಣಂಗಳೆಲ್ಲಕ್ಕೆ ಪರಮಗುರುವಾಗಿ, ಪರಮಾರಾಧ್ಯರಾಗಿ ಸುಳಿದಿರಲ್ಲದೆ ನೀವು ಒಡಲುವಿಡಿದಿದ್ದರೆನ್ನಬಹುದೆ ? ಅದೇನು ಕಾರಣವೆಂದರೆ, ಎನ್ನ ಭವವ ಛೇದನೆಯ ಮಾಡಿದುದಕ್ಕೆ ಎನ್ನ ಮನಕ್ಕೆ ಮನವೇ ಸಾಕ್ಷಿ. ಮತ್ತೆ ಚೆನ್ನಮಲ್ಲೇಶ್ವರ ಸಾಕ್ಷಿ. ಮರವೆಯಿಂದ ಈ ಮತ್ರ್ಯದಲ್ಲಿ ಒಡಲುವಿಡಿದು ಹುಟ್ಟಿದವರು ಬ್ರಹ್ಮನಾದರೂ ಆಗಲಿ, ವಿಷ್ಣುವಾದರೂ ಆಗಲಿ, ರುದ್ರನಾದರೂ ಆಗಲಿ, ಶಿವನಾದರೂ ಆಗಲಿ, ಸದಾಶಿವನಾದರೂ ಆಗಲಿ, ಮಾಯೆವಿಡಿಸಿ ಕಾಡಿದಲ್ಲದೆ ಮಾಣದು. ಮಿಕ್ಕಿನವರ ಭವಕ್ಕೆ ಕಡೆ ಇಲ್ಲ . ಎನ್ನ ಪರಮಾರಾಧ್ಯರು ಚೆನ್ನಮಲ್ಲೇಶ್ವರ ಮಾಯೆಯ ಮಂಡೆಯ ಮೆಟ್ಟಿ, ಎನ್ನ ತನು ಮನ ಧನಕ್ಕೆ ಒಡೆಯನಾಗಿ ತನ್ಮಯನಾಗಿ ತಾನೇ ರೂಪಾದನಯ್ಯ. ನಾನೆಂಬುದಿಲ್ಲ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
-->