ಅಥವಾ

ಒಟ್ಟು 14 ಕಡೆಗಳಲ್ಲಿ , 9 ವಚನಕಾರರು , 13 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯಾ, ನಿಮ್ಮ ಶರಣರ ಸಂಗಸುಖವ ಏನೆಂದುಪಮಿಸುವೆನಯ್ಯಾ, ನಿಮ್ಮ ಶರಣರ ಕೂಡೆ ಸಮಗೋಷಿ*ಯ ಮಾಡುವುದನುಪಮಿಸಲಮ್ಮೆನಯ್ಯಾ. ಕೂಡಲಸಂಗಾ, ನಿಮ್ಮ ಪ್ರಮಥರೆಲ್ಲರೂ ನೆರೆದ ಗಣತಿಂಥಿಣಿಯೊಳಗೆನ್ನನೇನೆಂದರಿಯದೆ ಅಗಲದಂತಿರಿಸಯ್ಯಾ, ನಾ ನಿಮ್ಮ ಧರ್ಮದ ಕವಿಲೆ.
--------------
ಬಸವಣ್ಣ
ಲೌಕಿಕಕ್ಕೆ ದರ್ಶನ ಧರ್ಮದ ಆಚರಣೆಯಿಂದ, ಶರೀರದ ಯುಕ್ತಿಧರ್ಮ ಮನ ಅನುವನರಿತಲ್ಲಿ, ರಸಯುಕ್ತಿಕರಂಡದಂತೆ, ಒಡೆದಡೆ ಹಲವಾಗಿ, ಹೂಡಿದಲ್ಲಿ ಒಡೆದಡೆ ಭಿನ್ನವಿಲ್ಲದೆ, ಸಮಯಪದ ಅರಿವಿನ ಗುಣ ವಿವರ ಭೇದ, ಕ್ಷಾರದ್ರವ್ಯದಂತೆ ಇರಬೇಕು. ಬಂಕೇಶ್ವರಲಿಂಗವ ಒಡಗೂಡೂದಕ್ಕೆ ಇರವು.
--------------
ಸುಂಕದ ಬಂಕಣ್ಣ
ಕರ್ಮದ ಕಂಡಣಿಯ ಹರಿದು, ನಿರ್ಮಲಂಗವ ಪೊಕ್ಕು, ಧರ್ಮದ ಮಾರ್ಗದೊಳು ನಿಂದು, ಪರಿಪೂರ್ಣಲಿಂಗವನಾಚರಿಸಿ, ಪರಕೆಪರವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅನುದಿನ ಮನಮುಟ್ಟಿ ಧನ್ಯನಯ್ಯಾ, ದಮ್ಮಯ್ಯಾ! ದಮ್ಮಯ್ಯಾ! ನಿಮ್ಮ ಧರ್ಮದ ಕವಿಲೆಯಾನಯ್ಯಾ. ಕೂಡಲಸಂಗಮದೇವಯ್ಯಾ, ನಿಮ್ಮ ಶರಣರ ಮನೆಯ ಮಗ ನಾನಯ್ಯಾ. 358
--------------
ಬಸವಣ್ಣ
ನಿನ್ನಾಣತಿಗೆ ಇಂಬುಗೊಂಡು ನಿನ್ನಿಂದಾದ ಸುಖವ, ನಿನ್ನಿಂದ ನಿನಗೀಯಬೇಕೆಂದು ಬಂದ ನಿಜಾತ್ಮನಿಗೆ, ನೀನಿಟ್ಟ ತೊಡರು ಬಂಧಿಸಲೇನು ಕಾರಣವಯ್ಯಾ ? ನಿನ್ನ ಧರ್ಮದ ಗತಿಯ ನೀನಿಟ್ಟ ಮಾಯೆಯ ಕುಟಿಲವೋ ? ನೀನೇ ಬಲ್ಲೆ ನಾನೆತ್ತ ಬಲ್ಲೆನಯ್ಯಾ ! ನಿನ್ನೊಡಲ ಮೊರೆಗೊಂಡ ಮರುಳ ನಾನು ನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆದಿ ಮಧ್ಯ ಅವಸಾನವಿಲ್ಲದುದ ವೇದಿಸುವಡೆ ವೇದ್ಯಂಗರಿದು, ಸಾಧಿಸುವ ಸಾಧಕಂಗಲ್ಲದೆ. ವಾದಿಯಲ್ಲ ಪರವಾದಿಯಲ್ಲ, ಸಾಧಕನಲ್ಲ ಧರ್ಮದ ಬೋಧಕನಲ್ಲ. ಗಡಣವಿಲ್ಲದ ನುಡಿಯನು ಎಡಬಲನೆಂದರಿಯನು, ನಿಸ್ಸಂಗಿ ಶೂನ್ಯಸ್ಥಾನದಲ್ಲಿ ಸುಖಿಯಾಗಿಪ್ಪನು. ದೇವನಲ್ಲ ಮಾನವನಲ್ಲ, ಕೂಡಲಚೆನ್ನಸಂಗನಲ್ಲಿ ಸಯವಾದ ಲಿಂಗೈಕ್ಯನು.
--------------
ಚನ್ನಬಸವಣ್ಣ
ಎಂಜಲ ತಿಂಬ ಜಡದೊಳಗೆ ಹದಿನೆಂಟುಜಾತಿಯ ಎಂಜಲು ಭುಂಜಿಸಿ, ಉತ್ತಮರೆನಿಸಿಕೊಂಬ ಭವಜೀವಿಗಳು ಕೇಳಿರೊ. ಕುಂಜರನಾಗಿ ನಡೆದು ಸುಜಾತರೆನಿಸಿಕೊಂಬಿರಿ. ಅಜವಧೆ ಗೋವಧೆ ಮಾಡುವ ಅನಾಚಾರಿಗಳು ನೀವು ಕೇಳಿರೊ. ಬ್ರಾಹ್ಮಣ ವಾಕ್ಯವ ಕಲಿತು ಬ್ರಾಹ್ಮಣರೆನಿಸಿಕೊಂಬಿರಿ. ವರ್ಮವಿಡಿದು ನೋಡಹೋದಡೆ ನಿಮ್ಮಿಂದ ಕರ್ಮಿಗಳಲ್ಲ. ನಿಮ್ಮ ಧರ್ಮದ ಬಟ್ಟೆಯ ನೀವರಿಯದೆ ಹೋದಿರಿ. ಚಿತ್ತವಲ್ಲದೆ ಶಿವಭಕ್ತರ ಬುದ್ಧಿಯವಿಡಿದು ನಡೆಯಲೊಲ್ಲದೆ ಕೆಟ್ಟುಹೋದಿರಿ. ಸುಧೆಹೀನ ಶುದ್ಧವೆಂದು ಕೊಂಬಿರಿ. ಸುರೆಯ ಸೇವಿಸುವ ಬೋವರೆಂಜಲು ಎಣ್ಣೆ ಶುದ್ಧವೆಂದು ಕೊಂಬಿರಿ. ಬುದ್ದಲೆಯ ಎಂಜಲು ಹಾಲು ಮೊಸರು ಮಜ್ಜಿಗೆ ಶುದ್ಧವೆಂಬಿರಿ. ಶೂದ್ರರೆಂಜಲು ಹಾಲು ಮೊಸರು ತುಪ್ಪ ಆವ ಜಾತಿಯ ಮನೆಯಲ್ಲಿರ್ದಡೆ ಶುದ್ಧವೆಂದು ಕೊಂಬಿರಿ. ಹೊಲೆಯ ಭಕ್ಷಿಸಿ ಮಿಕ್ಕ ತೊಗಲಲ್ಲಿ ಬುದ್ದಲೆಯೊಳಗೆ ತುಪ್ಪವ ತುಂಬಿಹುದೊ ಆ ಹೊಲೆಯರ ಎಂಜಲು ತೊಗಲ ಸಗ್ಗಳೆಯಲ್ಲಿ ಉದಕವ ಕೊಂಬಿರಿ. ಹದಿನೆಂಟುಜಾತಿಗೆ ಅಧಿಕವೆನಿಸಿಕೊಂಬಿರಿ. ದ್ವಿಜರೆಲ್ಲರಿಗೆ ಲೆಕ್ಕವಿಲ್ಲದ ನರಕವೆಂದ, ಕಲಿದೇವರದೇವಯ್ಯ.
--------------
ಮಡಿವಾಳ ಮಾಚಿದೇವ
ಲಿಂಗದ ಉಂಡಿಗೆಯ ಪಶುವಾನಯ್ಯಾ, ವೇಷಧಾರಿಯಾನು, ಉದರಪೋಷಕ ನಾನಯ್ಯಾ, ಕೂಡಲಸಂಗನ ಶರಣರ ಧರ್ಮದ ಕವಿಲೆಯಾನು
--------------
ಬಸವಣ್ಣ
ದಯವಿಲ್ಲದ ಧರ್ಮವದೇವುದಯ್ಯಾ ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ. ದಯವೇ ಧರ್ಮದ ಮೂಲವಯ್ಯಾ, ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ. 247
--------------
ಬಸವಣ್ಣ
ಮತವಲ್ಲ, ಹೆಣ್ಣ ಹಿಡಿದು ತನ್ನ ಮುನ್ನಿನ ಗುರುವಂ ಬಿಟ್ಟ ಕುನ್ನಿಗಳಿರ ನೀವು ಕೇಳಿರೊ. ನಿಮಗೆ ಗುರುವಿಲ್ಲ. ಅದೇನು ಕಾರಣವೆಂದರೆ, ಅವಳಿಗೆ ಪಾದೋದಕ ಪ್ರಸಾದವಿಲ್ಲ ; ಅವಳಿಗೆ ಮತವಿಲ್ಲ ; ಧರ್ಮದ ದಾರಿಯೆಲ್ಲಾ ದುರ್ಧರ. ಆ ದುರಾಚಾರಿಯನಾಳುವ ಹೊಲೆಯರಿಗೆ ಗುರುಲಿಂಗಜಂಗಮದ ಪಾದೋದಕ ಪ್ರಸಾದವಿಲ್ಲ. ಅವನಿಗೆ ಆ ಹೆಂಡತಿಯೆ ತನ್ನ ಗುರುವೆಂದು ಮುನ್ನಿನ ತನ್ನ ಗುರುವ ಬಿಡುವ ಗನ್ನಘಾತಕ ಕುನ್ನಿ ಕುಲಹೀನರಿಗೆ ಭಕ್ತಿಮುಕ್ತಿಯೆಲ್ಲಿಯದೊ ? ಇಲ್ಲ, ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಇರಿವ ಕೈದಿಂಗೆ ದಯ ಧರ್ಮದ ಮೊನೆ ಉಂಟೆ? ಕಾಳೋರಗನ ದಾಡೆಯಲ್ಲಿ ಅಮೃತದ ಸುಧೆಯುಂಟೆ? ಕೂಟವ ಕೂಡಿ ಸಮಯ ನೊಂದಲ್ಲಿ ಅಜಾತನ ಬಲ್ಲರೆ? ಎನಗೆ ನಿಮ್ಮೊಳಗಿನ್ನೇತರ ಮಾತು? ವೇಷಧಾರಿಗಳಲ್ಲಿ ನಿಮ್ಮ ಕೂಟಕ್ಕೆ ಹೊರಗು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲಾ ಎಂದೆ.
--------------
ಘಟ್ಟಿವಾಳಯ್ಯ
ಭಕ್ತನಾಗಿ ಬಯಕೆಯ ಮಾಡಿ ನೋಡುವದು ಭಕ್ತಿಯ ಸ್ಥಲವಲ್ಲ. ಬಯಸಿ ಮಾಡುವುದೆ ಭಕ್ತಿಯ ಕೇಡು ಕೂಡಿಸಿ ಮಾಡುವುದೇ (ಕೂಟುಂಡು)? (ಸಾಯಸ)ವಿಲ್ಲದೆ ಸಮತೆಯ ಮಾಡಿ, ಬೋನವ ನೀಡಿಹೆನೆಂಬುದು ಸಜ್ಜನತ್ವದ ಕೇಡು. ಇಂಥ ಬಯಕೆಯ ಮಾಡಿ ನೀಡುವವನ ಭಕ್ತಿ ಬರಿಯ ಮಡಕೆಯನಟ್ಟು ಹೊರಗೆ ಹುಲಿಯೇದಿಸಿದಂತಾಯಿತ್ತು ? ಕಾಣಾ. ಅವನು ಭಕ್ತಿ ಜಪತಪನೇಮನಿತ್ಯ ಅನುಷಾ*ನಾರ್ಚನೆ ಷೋಡಶ ಉಪಚಾರವ ಮಾಡಿ ಮುಕ್ತಿಯ ಪಡೆದೆನೆಂದು ಗುರುವಿನಲ್ಲಿ ಆಜ್ಞೆಯ ಮಾಡಿಕೊಂಡು, ಸಮಯಾಚಾರಕ್ಕೆ ಜಂಗಮದೇವರ ತಂದು ಪ್ರಸಾದ ಕೃತ್ಯವೆಂದು ಕಟ್ಟು ಮಾಡಿ ತನ್ನಲ್ಲಿ ಇಟ್ಟುಕೊಂಡು ಆಯತದ ಅಗ್ಘವಣಿ ಆಯತವೆಂದು ಮಾಡುವನ್ನಕ್ಕ (ಶೀಲವೆರಿ) ಆ ಜಂಗಮದೇವರ ತಂದು ತನ್ನ ಮನೆಯಲ್ಲಿಟ್ಟುಕೊಂಡು, ಆ ಜಂಗಮಕ್ಕೆ ಇಚ್ಛಾಭೋಜನವ ನೀಡಿ ತೃಪ್ತಿಯಂ ಬಡಿಸಿ, ಮುಂದೆ ಕೃತ್ಯವ ಮಾಡುವುದೇ ಸತ್ಯ ಸದಾಚಾರ ಶೀಲ, ಧರ್ಮದ ನಡೆ ಧರ್ಮದ ನುಡಿ. ಇದು ತಪ್ಪದೇ ಒಪ್ಪುದು ಕಾಣಾ. ಇದರ ಅಂತುವನರಿಯದೆ ತನ್ನ ಮನೆಯ ಆಯತದ ಬೋನವಾಗುವನ್ನಕ್ಕ ಆ ಜಂಗಮದೇವರ ಹಸಿದು ಬಳಲಿಸು ಎಂದು ಆಯತವ ಕಟ್ಟಿಕೊಟ್ಟನೆ ನಿಮ್ಮ ಗುರುನಾಥನು ? ಇಂಥ ಕಟ್ಟಳೆಯ ಕಟ್ಟಿದಾತ ಗುರುವಲ್ಲ, ಕಟ್ಟಿಕೊಂಡಾತ ಭಕ್ತನಲ್ಲ, ಭವಿ. ಇಂತೀ ಗುರುವಲ್ಲ ನರನು, ಇಂತಿವರು ಭಕ್ತರಲ್ಲ. ಒಲಿದು ಭಕ್ತಿಯ ಮಾಡಿಹನೆಂದು ಭಕ್ತನ ಅಂತವನರಿಯದೆ ಮುಂದುಗಾಣದೆ ಕೃತ್ಯವ ಕಟ್ಟುವ ಗುರುವಿಗೆ ಹಿಂದೆ ಬಹ ನರಕ ಇವರಿಗೆ ಇಂದೇ ಅಘೋರನರಕ ಕಾಣಾ ಮಹಾದಾನಿ ಕೂಡಲಚೆನ್ನಸಂಗಮದೇವಯ್ಯಾ.
--------------
ಚನ್ನಬಸವಣ್ಣ
ವೈರಾಗ್ಯ ವೈರಾಗ್ಯವೆಂತೆಂದು ಹೆಸರಿಟ್ಟುಕೊಂಡು ನುಡಿವ ಅಣ್ಣಗಳಿರಾ ನೀವು ಕೇಳಿರೊ. ಆ ವೈರಾಗ್ಯದ ಭೇದವೆಂತೆಂದರೆ ಬಲ್ಲರೆ ಹೇಳಿ, ಅರಿಯದಿರ್ದಡೆ ಕೇಳಿ. ನಿಮ್ಮ ಅಂಗ ಕುಲ ಚಲ ಸೂತ್ರಕವೆಂಬ ಕಂಬವನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಕುಲದೈವ ಮನೆದೈವವೆಂಬ ಗುಡಿಯ ಹಳಿಯ ಹೊತ್ತು, ಕುಲಗುರುವೆಂಬ ಲಿಂಗದ ಪೂಜೆಯನೆ ಮಾಡಿ, ಕುಲನೀತಿಯೆಂಬ ಧರ್ಮಶಾಸ್ತ್ರವ ನೋಡಿಕೊಂಡು ಹಲವು ಜಾತಿಗಳೆಲ್ಲ ಅರಿದೆನೆಂದು, ತನ್ನ ದ್ವಾರವಟ್ಟಕ್ಕೆ ಬಂದು ನಿಂದರೆ, ತನ್ನ ಮನ ಒಲ್ಮೆಯಿಂದ ಅನ್ನವನು ನೀಡಿ, ಉಮ್ಮಾಯದಲ್ಲಿ ನಿಂದು ತನ್ನ ಮನ ವೈರಾಗ್ಯವಾದರೆ ವಾರ ತಿಥಿ ನಕ್ಷತ್ರ ಯೋಗ ಕರಣ ಇಂತಿವೈದನು ಪಂಚಾಂಗದಲ್ಲಿ ತಿಳಿದು ನೋಡಿ, ಬ್ರಹ್ಮ ಕಲ್ಯಾಣಿಯೊಳು ಪತ್ರವ ಕೊಂಡು ಇದ್ದು ನಾಳೆ ಸಂದುಹೋದೆನೆಂಬುವನು ಮುಂದಲಿತ್ತು ತನ್ನ ಕುಲಬಾಂಧವರಿಗೆ ಹೇಳಿ ಬಲಾತ್ತಾಗಿ ಹೋಗಬಲ್ಲರೆ ಆತನಿಗೆ `ವೈರಾಗ್ಯದದೇವರೆಂದು' ಎನ್ನಬಹುದು ಕಾಣಿರೊ. ಇಂತೀ ವೈರಾಗ್ಯದ ಭೇದವನರಿಯದೆ ಕಾಕುಮನುಜರು ತಮ್ಮ ಕುಲಛಲವೆಂಬುವ ಕಂಬವ ಕೈಹಿಡಿದು ಕುಲದೈವ ಮನೆದೈವವೆಂಬ ಗುಡಿಯ ಹಳಿಯ ಕೆಡವಿಬಿಟ್ಟು ಕುಲಗುರುವೆಂಬ ಲಿಂಗಪೂಜೆಯನು ಬಿಟ್ಟು ಕುಲನೀತಿಯೆಂಬ ಧರ್ಮದ ಶಾಸ್ತ್ರದ ಪತ್ರವನು ಹರಿದುಬಿಟ್ಟು ಪಾಷಂಡಿಮತದ ರಾಶಿಯೊಳಗಾದ ಮನುಜರ ಕೈಯಲ್ಲಿ ದೀಕ್ಷೆಯನು ಮಾಡಿಕೊಂಡು, ಕಾವಿ ಅರಿವೆಯ ಹೊದ್ದುಕೊಂಡು, ದೇವರೊಳಗೆ ದೇವರಾದೆನೆಂದು ಭಕ್ತರ ಕೂಡೆ ಶರಣಂಗೊಟ್ಟು, ನಾನು ವೈರಾಗ್ಯದ ದೇವರೊಳಗೆ ದೇವರೆಂದು ಹೆಸರಿಟ್ಟುಕೊಂಡು, ನುಡಿವಾಚಾರರೂಪದ ಸೂಳೆಯರು ಏನಾಯಿತ್ತು ಎಂದರೆ, ಜ್ಞಾನಶ್ರವಣರ ವಾಹನಕ್ಕೆ ಹುಟ್ಟಿದಂಥ ಕುನ್ನಿ ತೊತ್ತಿನ ಮಕ್ಕಳಾಗಿರ್ದ ವೆಂದಾತ ಸಿದ್ಧಮಲ್ಲನದಾತ ಮೇಗಣಗವಿಯ ಗುರುಸಿದ್ಧೇಶ್ವರಪ್ರಭುವೆ.
--------------
ಸಿದ್ಧಮಲ್ಲಪ್ಪ
-->