ಅಥವಾ

ಒಟ್ಟು 17 ಕಡೆಗಳಲ್ಲಿ , 6 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀರೊಳಗಣ ಜ್ಯೋತಿ ಮೇರುವ ನುಂಗಿತ್ತು. ದೂರ[ದ] ಧಾತು ಸಾರಾಯದೊಳಡಗಿತ್ತು. ಪುರದೊಳಗೈವರ ಶಿರವರಿದು, ಪರಿಮಳದೋಕುಳಿಯನಾಡಿತ್ತ ಕಂಡೆ. ಸಾರಿರ್ದ ಬ್ರಹ್ಮನ ಓಲಗ ಹರೆಯಿತ್ತು, ಘೋರ ರುದ್ರನ ದಳ ಮುರಿಯಿತ್ತು_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಕಪಿಲವರ್ಣ ನೀಲವರ್ಣ ಮಾಂಜಿಷ್ಟವರ್ಣ ಪೀತವರ್ಣ ಕಪ್ಪುವರ್ಣ ಶ್ವೇತವರ್ಣ ಗೌರವರ್ಣವೆಂಬ ಸಪ್ತಧಾತುಗಳು. ಇವಕ್ಕೆ ವಿವರ : ಕಪಿಲವರ್ಣದ ಧಾತು ಪೃಥ್ವಿ ಅಂಶ, ದೇಹವ ಅಳುುಕುತ್ತಿಹುದು. ನೀಲವರ್ಣದ ಧಾತು ಅಪ್ಪುವಿನ ಅಂಶ, ದೇಹವ [ನಡುಗುತ್ತಿಹುದು]. ಮಾಂಜಿಷ್ಟವರ್ಣದ ಧಾತು ಅಗ್ನಿ ಅಂಶ, ದೇಹ ಕನಸ ಕಾಣುತಿಹುದು. ಪೀತವರ್ಣದ ಧಾತು ವಾಯು ಅಂಶ, ದೇಹವತ್ತರ ಒತ್ತುತ್ತಿಹುದು. ಕಪ್ಪವರ್ಣದ ಧಾತು ಆಕಾಶದ ಅಂಶ, ಎತ್ತರ ತತ್ತರಗೆಡಹುತಿಹುದು. ಶ್ವೇತವರ್ಣದ ಧಾತು ಚಂದ್ರನ ಅಂಶ, ದೇಹ ಕಳವಳಿಸುತಿಹುದು. ಗೌರವರ್ಣದ ಧಾತು ಸೂರ್ಯನ ಅಂಶ, ಶರೀರ ಸಂಚಲಿಸುತಿಹುದು. ಇಂತೀ ಸಪ್ತಧಾತುಗಳ ಸ್ವಸ್ಥಾನವಂ ಮಾಡಿ ಲಿಂಗಾರ್ಚನೆಯ ಮಾಡಬಲ್ಲಡೆ ಕೂಡಲಚೆನ್ನಸಂಗಯ್ಯನಲ್ಲಿ ಶರಣನೆನಿಸುತಿಹನು
--------------
ಚನ್ನಬಸವಣ್ಣ
ಮುನ್ನಾಯ ಮೂರು ಸನ್ನುತದ ಕಳೆ ಆರು ಪನ್ನಗಾಂಗಗೆ ಭೀತಿ ಧಾತು ಹಲವು. ಎನ್ನ ಪರಸ್ಥಾನದಲ್ಲಿರಿಸಿ ಸೊಲ್ಲನಿರಿಸಿದನವ ಶ್ರೀ ಗುರು ಕಪಿಲಸಿದ್ಧ ಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಖೇಚರಪವನದಂತೆ ಜಾತಿಯೋಗಿಯ ನಿಲುವು ! ಮಾತಿನೊಳು ಧಾತು ನುಂಗಿ ಉಗುಳದಿನ್ನೆಂತೊ ? ಭೂಚಕ್ರವಳಯವನು ಆಚಾರ್ಯ ರಚಿಸಿದ. ಗ್ರಾಮವೆಲ್ಲವ ಸುಟ್ಟು, ನೇಮ ನಾಮವ ನುಂಗಿ ಗ್ರಾಮದ ಪ್ರಭುವನೆ ನುಂಗಿ, `ಗುಹೇಶ್ವರ ಗುಹೇಶ್ವರ' ಎನುತ ನಿರ್ವಯಲಾಗಿತ್ತು.
--------------
ಅಲ್ಲಮಪ್ರಭುದೇವರು
ಹೀನಬುದ್ಧಿಯ ಕರ್ಮದ ಕ್ಷೀಣ ಬಣ್ಣವ ಬಿಟ್ಟು ಪ್ರಾಣಸಂಗತವಾದ ಧಾತು ಬಣ್ಣ ವೇಳಕ್ಕೆ ಜ್ಞಾತೃ ಬಣ್ಣದಾಣಿಯನಿಕ್ಕಿ ಕಳೆದು ಜ್ಞಾನ ಕರ್ಮದ ಬಣ್ಣ ಹತ್ತಕ್ಕೆ ಜ್ಞೇಯ ಬಣ್ಣವ ಶಕವನಿಕ್ಕಿ ಕಳೆದು ಕ್ರಿಯಾ ಬಣ್ಣದ ಹಲವು ಬಣ್ಣವ ಕೊಡದೆ ಶುದ್ಧಾಶುದ್ಧ ಬಣ್ಣಕ್ಕೆ ಮುಖ್ಯ ಬಣ್ಣದಲ್ಲಿ ಚಿದ್ಬಣ್ಣವ ಕೂಡಲು ಇದಾವ ಬಣ್ಣವೆಂದರಿಯಬಾರದೆ ವರ್ಣಾತೀತವಾಯಿತ್ತು. ಇದಕ್ಕೆ ಶ್ರುತಿ: ವರ್ಣಾತೀತಂ ಮನೋತೀತಂ ಭಾವಾತೀತಂ ತು ತತ್ಪದಂ ಜ್ಞಾನಾತೀತಂ ನಿರಂಜನಂ ತತ್ಕಲಾ ಸೂಕ್ಷ್ಮಭಾವತಃ ಇಂತೆಂದುದಾಗಿ, ಸೌರಾಷ್ಟ್ರ ಸೋಮೇಶ್ವರ ಲಿಂಗದ ಬಣ್ಣ ಅಂತರ್ಬಾಹ್ಯ ಗಮ್ಯಾಗಮ್ಯ ಭಾವಾಭಾವತೀತಾತೀತವಲ್ಲದೆ ನಿಂದಿತ್ತು.
--------------
ಆದಯ್ಯ
ಧಾತು ಮಾತು ಪಲ್ಲಟಿಸಿದರೆ, ಗಮನವಿನ್ನೆಲ್ಲಿಯದೊ? ಧ್ಯಾನ ಮೌನವೆಂಬುದು ತನುಗುಣ ಸಂದೇಹವಯ್ಯಾ. ಸುಜ್ಞಾನಭರಿತ, ಅನುಪಮಸುಖಿ_ಗುಹೇಶ್ವರಾ ನಿಮ್ಮ ಶರಣನು.
--------------
ಅಲ್ಲಮಪ್ರಭುದೇವರು
ಯೋಗಮೂರುತಿ ಸಮತೆ, ನಾದಬ್ರಹ್ಮದ ಸಮತೆ, ಆದಿಯಾಧಾರಕ್ಕೆ ಮಾತೆ ಸಮತೆ. ಮೂದೇವರಿಗೆ ಕುಲಗುರು ತಾನು. ಸಮತೆಯನು ಭೇದಿಸಿದ ಸಿದ್ಧ ಸುಮತಿಯ ಸಂಗಮಾ ಆಯಕ್ಷರದಲ್ಲಿ ಆಮೋದ ಬಿಂದುವಿನ ಆನಂದ ಧಾತು ತಾ ಸಮತೆರೂಪು. ಸುಜ್ಞಾನಭರಿತನು ಕಪಿಲಸಿದ್ಧಮಲ್ಲೇಶ್ವರನ ರೂಪು ಮಾಡಿದ ಗುರು ಸಮತೆ ರೂಪು.
--------------
ಸಿದ್ಧರಾಮೇಶ್ವರ
ನಾನು ನೀನೆಂಬ ಉಭಯವ ಭೇದಿಸಿ ಹೋರಲೇಕೆ, ವಸ್ತು ತಾನಾದ ಮತ್ತೆ ? ಇಷ್ಟವನರಿಯದೆ ಆತ್ಮತೇಜಕ್ಕೆ, ಮಾತಿನ ಘಾತಕಕ್ಕೆ, ತಮ್ಮ ಪ್ರಖ್ಯಾತದ ಧಾತು ಕುಂದಿಹಿತೆಂದು ಮಾತಿಗೆ ಮಾತ ನುಡಿದು, ಗೆದ್ದೆಹೆನೆಂಬ ಪಾಷಂಡಿಗಳಿಗೇಕೆ ಸುಚಿತ್ತ ಸಮ್ಯಜ್ಞಾನ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಹಿಂದಳದನೊಂದು ಮಾಡಿ ಸಂದು ಸಂಶಯವಿಲ್ಲದೆ ನಿಂದ ನೆಲವ ತೋರುವ ಬಸವಣ್ಣನ ಪರಿಯ ನೋಡಾ ಮುಂದಿರ್ದ ಕೂಸಿನ ಸಂದ ಸರ ಒಂದಾಗಿ ಎರಡೊಂದಾದ ಘನಮಹಿಮ ಬಸವಣ್ಣನನೇನೆನ್ನಲಿ ? ಮೂರು ಮೂರನೆ ಮಾಡಿ, ಆರು ಆರನೆ ತಂದು, ಬೇರೆ ಮತ್ತಿಲ್ಲದ ಬಸವಣ್ಣನ ಪರಿಯ ನೋಡಾ! ಹತ್ತು ಹತ್ತನೆ ಕೂಡಿ ಧಾತು ಧಾತುವ ಬೆರೆಸಿ ಕಳೆಕಳೆಗಳೊಂದಾದ ಬಸವಣ್ಣನ ಪರಿಯ ನೋಡಾ! ಕೃತಯುಗ ತ್ರೇತಾಯುಗ ದ್ವಾಪರಯುಗವಿಲ್ಲದಂದು ಲಿಂಗಸ್ಥಲ ಜಂಗಮಸ್ಥಲ ಪ್ರಸಾದಸ್ಧಲವಿಲ್ಲದಂದು; ಇಂತೀ ತ್ರಿವಿಧವು ಬಸವಣ್ಣನ ಕೈಯಲ್ಲಿ ನಿಕ್ಷೇಪವಯ್ಯಾ! ಅಂದು ಲಿಂಗದಲಿ ಅನಿಮಿಷ, ಇಂದು ಜಂಗಮದಲಿ ಅನಿಮಿಷ ಬಸವಣ್ಣ ಅಂದಾದ ಗುರುವೆಂದರಿದೆನಾಗಿ ಗುಹೇಶ್ವರಾ ಅಮಳೋಕ್ಯ ಸಂಗನಬಸವಿದೇವನ ಶ್ರೀಪಾದಕ್ಕೆ ಶರಣು ಶರಣು.
--------------
ಅಲ್ಲಮಪ್ರಭುದೇವರು
ಜ್ಞಾತೃ ಜ್ಞಾನ ಜ್ಞೇಯವೆಂಬ ಮಾತಿನ ಮಾತಿಲ್ಲದೆ ಇದರ ಧಾತು ಕುಳಿದುತ್ಪತ್ತಿಯನಾರು ಬಲ್ಲರೊ? ಮನದ ಸಂಚಲವೆ ಜ್ಞಾತೃ, ಪ್ರಾಣನ ಸಂಚಲವೆ ಜ್ಞಾನ, ಭಾವದ ಸಂಚಲವೆ ಜ್ಞೇಯ. ಇಂತೀ ಮನ ಪ್ರಾಣ ಭಾವಂಗಳು ಭೂತಧಾತುವಿನುತ್ಪಿತ್ತಿ, ಮೊದಲುಗೆಟ್ಟಲ್ಲಿಯೆ ತುದಿಗೆ ಲಯ, ನಡುವೆ ತೋರುವುದಾವುದೊ? ಇದು ಕಾರಣ ಅರಿಯಲಿಲ್ಲದೆ ಇರವೆ ಅರಿವಿಂಗೆ ಅರಿವಾಗಿ ಕುರುಹಿಂಗೆ ತೆರಪಾಗಿರ್ದುದನರಿವ ಪರಿ ಇನ್ನೆಂತೊ? ಇದನರಿದೆವೆಂಬ ಅರೆಮರುಳುಗಳ ಅರಿವಿಂಗೆ ಅಭೇದ್ಯನಾದ ನಿಜಗುಣ ನೀನೇ, ಸಿಮ್ಮಲಿಗೆಯ ಚೆನ್ನರಾಮಾ
--------------
ಚಂದಿಮರಸ
.......................ನುಂಗಿತ್ತು. ದೂರ ಧಾತು ಸಾರಾಯದೊಳಡಗಿತ್ತು. ಪುರದೊಳಗೈವರ ಶಿರ ಹರಿದು............ಮಳದೋಕುಳಿಯಾಗಿತ್ತ ಕಂಡೆ. ಸಾರಿದ್ದ ಬ್ರಹ್ಮನ ಓಲಗ ಸೂರೆಯಾಯಿತ್ತು. ಘೋರ ರುದ್ರನ ದಳ ಮುರಿಯಿತ್ತು ಗುಹೇಶ್ವರಾ
--------------
ಅಲ್ಲಮಪ್ರಭುದೇವರು
-->