ಅಥವಾ

ಒಟ್ಟು 17 ಕಡೆಗಳಲ್ಲಿ , 8 ವಚನಕಾರರು , 17 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಣ್ಣಿಲ್ಲದ ಗುರುವಿನ ಕೈಯಿಂದೆ ಮಣ್ಣಿಲ್ಲದ ಮಗನಾಗಿ ತಾನೊಂದು ಕಣ್ಣ ಕೊಂಡು ಕಾವ್ಯನಾದ ಬಳಿಕ ಬಣ್ಣವಿಲ್ಲದ ಧಾನ್ಯವ ತಂದು ಚೆನ್ನಾಗಿ ಪಾಕವಮಾಡಿ ಮತ್ತಾರ ಕಾಣಗೊಡದೆ, ಸತ್ಯ ಭೋಜ್ಯಗಟ್ಟಿ ನಿತ್ಯವಾಗಿ ಕೊಟ್ಟು ಕೊಂಡು ಸುಖಿಸಿದರೆ ಗುರುನಿರಂಜನ ಚನ್ನಬಸವಲಿಂಗದಲ್ಲಿ ತಥ್ಯಪ್ರಸಾದಿಯೆಂಬೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸಾಣಿಯ ಮೇಲೆ ಶ್ರೀಗಂಧವನಿಟ್ಟು, ಗಂಧ ಗಂಧವೆಂದಡೆ ಗಂಧವ ಕೊಡಬಲ್ಲುದೆ ? ಜಡಚಕ್ರದೊಳಗೆ ಧಾನ್ಯವ ನೀಡಿ ಹಿಟ್ಟೆಂದಡೆ ಹಿಟ್ಟಾಗಬಲ್ಲುದೆ ? ಗಾಣಕ್ಕೆ ಎಳ್ಳು ನೀಡಿ, ಎಣ್ಣೆ ಎಣ್ಣೆ ಎಂದಡೆ ಎಣ್ಣೆ ಬೀಳಬಲ್ಲುದೆ ? ಪಂಚಾಮೃತವ ಪಾಕವ ಮಾಡಿ ಎಡೆಯ ಬಡಿಸಿ ಮುಂದಿಟ್ಟುಕೊಂಡು, ಹೊಟ್ಟೆ ತುಂಬು ತುಂಬು ಎಂದಡೆ ಹೊಟ್ಟೆ ತುಂಬಿ ಹಸುವಡಗಬಲ್ಲುದೆ ? ಹಾಗೆ ಜಡರೂಪವಾದ ಲಿಂಗವ ಜಡಮತಿಗಳಾದ ಗುರುಮುಖದಿಂ ಪಡಕೊಂಡು ಅಂಗದ ಮೇಲೆ ಇಷ್ಟಲಿಂಗವೆಂದು ಧರಿಸಿ ಆ ಲಿಂಗಕ್ಕೆ ಮುಕ್ತಿಯ ಕೊಡು ಕೊಡು ಎಂದಡೆ, ಆ ಲಿಂಗವು ಮುಕ್ತಿಯ ಕೊಡಲರಿಯದು. ಅದೆಂತೆಂದೊಡೆ : ಚಂದನ, ಧಾನ್ಯ, ತಿಲಪಂಚಪಾಕವನು 'ಮರ್ದನಂ ಗುಣವರ್ಧನಂ' ಎಂದುದಾಗಿ, ಇಂತೀ ಎಲ್ಲವು ಮರ್ದನವಿಲ್ಲದೆ ಸ್ವಧರ್ಮಗುಣ ತೋರಲರಿಯವು. ಹಾಗೆ ಅಂತಪ್ಪ ಜಡಸ್ವರೂಪನಾದ ಲಿಂಗವನು ಜ್ಞಾನಗುರುಮುಖದಿಂ ಶಿಲಾಲಿಖಿತವ ಕಳೆದು, ಕಳಾಭೇದವ ತಿಳಿದು, ಆ ಲಿಂಗವೇ ಘನಮಹಾ ಇಷ್ಟಲಿಂಗವೆಂಬ ವಿಶ್ವಾಸ ಬಲಿದು ತುಂಬಿ ಅಂತಪ್ಪ ಇಷ್ಟಬ್ರಹ್ಮದಲ್ಲಿ ಅವಿರಳಸಂಬಂದ್ಥಿಯಾಗಿ ಆ ಇಷ್ಟಲಿಂಗದ ಸತ್ಕ್ರಿಯಾಚಾರದಲ್ಲಿ ಸರ್ವಾಂಗವನು ದಹಿಸಿದಲ್ಲದೆ ಭವಹಿಂಗದು, ಮುಕ್ತಿದೋರದು, ಮುಕ್ತಿಯ ಪಡೆಯಲರಿಯದೆ ಪ್ರಾಣಲಿಂಗಿಯಾಗಲರಿಯನು ನೋಡಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಒಡವೆ ವಸ್ತು ಧನ ಧಾನ್ಯವ ಲೋಭದಿಂದ ಗಳಿಸಿ, ಮಡದಿಮಕ್ಕಳಿಗೆಂದು ಮಡುಗಿಕೊಂಡು, ದಾನಧರ್ಮವ ಪರ ಉಪಕಾರಕ್ಕೆ ನೀಡದೆ, ಹೇಸಿಗುಣದಲ್ಲಿಪ್ಪ ಮಾನವರ ಆಯುಷ್ಯ ವ್ಯಯಿದು ಕಾಲಮೃತ್ಯು ಬಂದು ಹೊಡೆದೊಯ್ಯು[ವಾಗ], ಸುಖದಲ್ಲಿರುವಂದಿನ ಮಡದಿ-ಮಕ್ಕಳು ಒಡವೆ-ವಸ್ತು ಧನಧಾನ್ಯ ಕಾಯುವವೆ ? ಕಾಯವು. ಎರವಿನ ಸಿರಿ, ಎರವಿನ ಮನೆ, ಎರವಿನ ಮಡದೇರು, ಎರವಿನ ಮಕ್ಕಳ ನೆಚ್ಚಿಕೊಂಡು ಊರ ಸೀರಿಂಗೆ ಅಗಸ ಬಡದು ಸಾವಂತೆ, ಪರಾರ್ಥನರಕದೊಡವೆಯ ನೆಚ್ಚಿ ನನ್ನತನ್ನದೆಂದು ಲೋಭತ್ವದಿಂದ ಕೆಟ್ಟರು. ಬರುತೇನು ತರಲಿಲ್ಲ , ಹೋಗುತೇನು ಒಯ್ಯಲಿಲ್ಲ , ಹುಟ್ಟುತ್ತಲೆ ಬತ್ತಲೆ, ಹೋಗುತಲೆ ಬತ್ತಲೆ. ಈ ನಷ್ಟಸಂಸಾರವ ನಂಬಿ ಕೆಡದಿರಿ ಮನುಜರಿರ. ನಂಬಿ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವ.
--------------
ಹೇಮಗಲ್ಲ ಹಂಪ
ನಾನು ಮೆಟ್ಟುವ ಭೂಮಿಯ ಭಕ್ತನ ಮಾಡಿದಲ್ಲದೆ ಮೆಟ್ಟೆನಯ್ಯಾ. ನಾ ನೋಡುತಿಹ ಆಕಾಶದ ಚಂದ್ರಸೂರ್ಯರ ಭಕ್ತರ ಮಾಡಿದಲ್ಲದೆ ನಾ ನೋಡೆನಯ್ಯಾ. ಜಲವ ಭಕ್ತನ ಮಾಡಿದಲ್ಲದೆ ನಾನು ಬಳಸೆನಯ್ಯಾ, ನಾನು ಕೊಂಬ ಹದಿನೆಂಟು ಧಾನ್ಯವ ಭಕ್ತನ ಮಾಡಿದಲ್ಲದೆ ಕೊಳ್ಳೆನು ಕೂಡಲಚೆನ್ನಸಂಗಾ ನಿಮ್ಮಾಣೆ.
--------------
ಚನ್ನಬಸವಣ್ಣ
ಇಂತಪ್ಪ ವಿಚಾರವ ತಿಳಿಯದೆ ಹತ್ತು ಹೊನ್ನಿಗೆ ಒಂದು ಹೊಲವ ಮಾಡಿ, ಹತ್ತು ಖಂಡಗ ಧಾನ್ಯವ ಬೆಳೆದು, ಹಗೆಯ ಮೆಟ್ಟಿ ಹಗೆಯ ಹಾಕಿ, ಮುಂದೆ ಮಾರಿ ಕಡಬಡ್ಡಿಯ ಕೊಟ್ಟು ತೆಗೆದುಕೊಂಬವರು ಭಕ್ತರೆಂತಪ್ಪರಯ್ಯ ? ಇಂತಪ್ಪವರು ಭಕ್ತರೆಂದರೆ ನಗುವರಯ್ಯ ನಿಮ್ಮ ಶರಣರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಪಾದೋದಕ ಪ್ರಸಾದಗಳೆಂದೆಂಬಿರಿ, ಪಾದೋದಕ ಪ್ರಸಾದದ ಬಗೆಯ ಪೇಳ್ವೆ. ಗದ್ದುಗೆಯ ಮೇಲೆ ಗದ್ದುಗೆಯ ಹಾಕಿ, ಜಂಗಮಲಿಂಗಿಗಳ ಕರತಂದು ಕುಳ್ಳಿರಿಸಿ, ಧೂಪ ದೀಪ ಪತ್ರಿ ಪುಷ್ಪದಿಂದ ಪಾದಪೂಜೆಯ ಮಾಡಿ, ಕೆರೆ ಬಾವಿ ಹಳ್ಳ ಕೊಳ್ಳ ನದಿ ಮೊದಲಾದವುಗಳ ನೀರ ತಂದು- ಬ್ರಹ್ಮರಂಧ್ರದಲ್ಲಿರುವ ಸತ್ಯೋದಕವೆಂದು ಮನದಲ್ಲಿ ಭಾವಿಸಿ, ಆ ಜಂಗಮದ ಉಭಯಪಾದದ ಮೇಲೆರೆದು, ಪಾದೋದಕವೇ ಪರಮತೀರ್ಥವೆಂದು ಲಿಂಗ ಮುಂತಾಗಿ ಸೇವಿಸಿ, ನವಖಂಡಪೃಥ್ವಿಯಲ್ಲಿ ಬೆಳೆದ ಹದಿನೆಂಟು ಜೀನಸಿನ ಧಾನ್ಯವ ತಂದು, ಉದಕದಲ್ಲಿ ಹೆಸರಿಟ್ಟು, ಅಗ್ನಿಯಲ್ಲಿ ಪಾಕವಮಾಡಿ, ತಂದು ಜಂಗಮಕ್ಕೆ ಎಡೆಮಾಡಿ, ಜಂಗಮವು ತನ್ನ ಲಿಂಗಕ್ಕೆ ಅರ್ಪಿಸಿ ಸೇವಿಸಿದಬಳಿಕ ತಾವು ಪ್ರಸಾದವೇ ಪರಬ್ರಹ್ಮವೆಂದು ಭಾವಿಸಿ, ಕೊಂಡು ಸಲಿಸುವರಯ್ಯ. ಇಂತೀ ಕ್ರಮದಿಂದ ಕೊಂಬುದು ಪಾದೋದಕಪ್ರಸಾದವಲ್ಲ. ಇಂತೀ ಉಭಯದ ಹಂಗು ಹಿಂಗದೆ ಭವಹಿಂಗದು, ಮುಕ್ತಿದೋರದು. ಮತ್ತಂ, ಹಿಂದಕ್ಕೆ ಪೇಳಿದ ಕ್ರಮದಿಂದಾಚರಿಸಿ, ಗುರುಲಿಂಗಜಂಗಮದಲ್ಲಿ ಪಾದೋದಕ ಪ್ರಸಾದವ ಸೇವಿಸಬಲ್ಲವರಿಗೆ ಪ್ರಸಾದಿಗಳೆಂಬೆ. ಇಂತಪ್ಪವರಿಗೆ ಭವ ಹಿಂಗುವದು, ಮುಕ್ತಿಯೆಂಬುದು ಕರತಳಾಮಳಕವಾಗಿ ತೋರುವುದು. ಈ ಪಾದೋದಕದ ಭೇದವ ಬಸವಣ್ಣ ಚೆನ್ನಬಸವಣ್ಣ ಪ್ರಭುದೇವರು ಮುಖ್ಯವಾದ ಏಳುನೂರೆಪ್ಪತ್ತು ಪ್ರಮಥಗಣಂಗಳು ಬಲ್ಲರಲ್ಲದೆ ಮಿಕ್ಕಿನ ಜಡಮತಿ ಕಡುಪಾತಕರಾದ ಭಿನ್ನಭಾವ ಜೀವಾತ್ಮರೆತ್ತ ಬಲ್ಲರಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನ ಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಗುರುಲಿಂಗಜಂಗಮದಲ್ಲಿ ಅತ್ಯಂತ ಪ್ರೇಮಿಗಳೆಂದು ಪರರ ಮುಂದೆ ತಮ್ಮ ಬಿಂಕವ ತೋರುವರು. ತೋರಿದಂತೆ ಆಚರಣೆಯ ತೋರರು. ಅದೆಂತೆಂದಡೆ : ತನ್ನ ದೀಕ್ಷೋಪದೇಶವ ಮಾಡಿದಂಥ ಗುರು ಮನೆಗೆ ಬಂದರೆ ಮನ್ನಿಸರು. ನಯನುಡಿಯ ಮಾತನಾಡರು. ಒಂದು ಹೊನ್ನು ವಸ್ತ್ರವ ಬೇಡಿದರೆ ಇಲ್ಲೆಂಬರಲ್ಲದೆ ಕೊಟ್ಟು ಸಂತೋಷಪಡಿಸುವವರಿಲ್ಲ. ಗ್ರಾಮದ ಮಧ್ಯದಲ್ಲಿ ಆವನೊಬ್ಬ ಜಾತಿಹಾಸ್ಯಕಾರನು ಬಂದು, ಡೋಲು ಡಮಾಮಿಯ ಹೊಡೆದು, ಬೊಬ್ಬಿಯ ರವಸದಿಂದ ಮಣ್ಣವರಸಿ, ರಟ್ಟಿ ಮಂಡಿಯ ತಿಕ್ಕಿ, ತೊಡೆಯ ಚಪ್ಪರಿಸಿ, ಕೋ ಎಂದು ಕೂಗಿ, ಭೂಮಿಗೆ ಕೈ ಹಚ್ಚಿ, ಲಾಗದ ಮೇಲೆ ಲಾಗ ಹೊಡೆದು, ಅಂತರಪುಟಕಿಯಲ್ಲಿ ಮೂರು ಹೊರಳಿಕೆಯ ಹೊರಳಿ, ಮುಂದೆ ಬಂದು ನಿಂತು, ಮಜುರೆಯ ಮೇಲೆ ಮಜುರೆಯ ಹೊಡೆದು, ಅವರ ಹೆಸರೆತ್ತಿ ಕೊಂಡಾಡಲು, ಅವರ ಲಾಗಕ್ಕೆ ಮೆಚ್ಚಿ ಶಾಲು ಶಕಲಾತಿ ಮೊದಲಾದ ವಸ್ತ್ರವ ಕೊಟ್ಟು, ಕಾಲತೊಡರು ಮುಂಗೈಸರಪಳಿ ಛತ್ರ ಚಾಮರ ಜಲ್ಲಿ ಮೊದಲಾದ ಚಾಜವ ಕೊಟ್ಟು, ಸಂತೋಷಪಡಿಸುವರಲ್ಲದೆ ಇಲ್ಲೆಂಬರೇ? ಇಲ್ಲೆನ್ನರಯ್ಯ. ಮತ್ತಂ, ಲಿಂಗಪೂಜೆಯ ಮಾಡೆಂದಡೆ ಎನ್ನಿಂದಾಗದೆಂಬರು. ಲಿಂಗಕ್ಕೆ ಸಕಲಪದಾರ್ಥವನರ್ಪಿಸಿ ಸಲಿಸೆಂದಡೆ ಎನ್ನಿಂದಾಗದೆಂದು, ಬಂದ ಪದಾರ್ಥವ ಲಿಂಗಕ್ಕೆ ತೋರದೆ ಬಾಯಿಗೆಬಂದಂತೆ ತಿಂಬುವರು. ಜಟ್ಟಿಂಗ ಹಿರಿವಡ್ಯಾ ಲಕ್ಕಿ ದುರ್ಗಿ ಚಂಡಿ ಮಾರಿಯ ಪೂಜಿಸೆಂದಡೆ ತನುಮನವು ಹೊಳೆಯುಬ್ಬಿದಂತೆ ಉಬ್ಬಿ, ಹೊತ್ತಾರೆ ಎದ್ದು ಪತ್ರಿ ಪುಷ್ಪವ ತಂದು, ಒಂದೊತ್ತು ಉಪವಾಸ ಮಾಡಿ, ಮೈಲಿಗೆಯ ಕಳೆದು ಮಡಿಯನುಟ್ಟು, ಮನಪೂರ್ವಕದಿಂ ಪೂಜೋಪಚಾರವ ಮಾಡಿ, ಭೂಮಿಯಲ್ಲಿ ಕಾಯಕಷ್ಟವ ಮಾಡಿ ಬೆಳೆದಂಥ ಹದಿನೆಂಟು ಜೀನಸಿನ ಧಾನ್ಯವ ತಂದು ಪಾಕ ಮಾಡಿ, ಆ ದೇವತೆಗಳಿಗೆ ನೈವೇದ್ಯವ ಕೊಟ್ಟು, ಮರಳಿ ತಾವು ಉಂಬುವರಲ್ಲದೆ, ಅಂತಪ್ಪ ದೇವತೆಗಳಿಗೆ ಕೊಡದ ಮುನ್ನವೆ ಸಾಯಂಕಾಲಪರಿಯಂತರವಾದಡೂ ಒಂದು ಬಿಂದು ಉದಕ ಒಂದಗಳನ್ನವ ಕೊಳ್ಳದೆ, ತನು-ಮನ ಬಳಲಿಸುವರಯ್ಯಾ. ಮತ್ತಂ, ಜಂಗಮಲಿಂಗವು ಹಸಿವು ತೃಷೆ ಆಪ್ಯಾಯನವಾಗಿ ಮಧ್ಯಾಹ್ನ ಸಾಯಂಕಾಲದೊಳಗೆ ಭಿಕ್ಷಕ್ಕೆ ಬಂದಡೆ, ಅನುಕೂಲವಿಲ್ಲ, ಮನೆಯೊಳಗೆ ಹಡದಾರ ಗದ್ದಲುಂಟು ಮನೆಯೊಳಗೆ ಗೃಹಸ್ಥರು ಬಂದಾರೆ, ಘನಮಾಡಿಕೊಳ್ಳಿರಯ್ಯಾ ಮುಂದಕ್ಕೆ ಎಂಬರಲ್ಲದೆ, ಅಂತಪ್ಪ ಆಪ್ಯಾಯನವಾದ ಜಂಗಮವ ಕರೆದು ಅನ್ನೋದಕವ ನೀಡಿ, ತೃಪ್ತಿಯ ಬಡಿಸುವರೆ ? ಬಡಿಸುವದಿಲ್ಲ. ಊರೊಳಗೆ ಒಬ್ಬ ಜಾರಸ್ತ್ರೀಯಳು ಉಂಡು ವೀಳ್ಯವಕೊಂಡು ಸಹಜದಲ್ಲಿ ತಮ್ಮ ಗೃಹಕ್ಕೆ ಬಂದಲ್ಲಿ ಆ ಜಾರಸ್ತ್ರೀಗೆ ಮನೆಯವರೆಲ್ಲರು ಉಣ್ಣು ಏಳು ಉಂಬೇಳೆಂದು ಆಕೆಯ ಕರವ ಪಿಡಿದು ಕರೆವರಯ್ಯಾ. ಅವಳು ಎನಗೆ ಹಸುವಿಲ್ಲೆಂದು ತಮ್ಮ ಗೃಹಕ್ಕೆ ಹೋಗಲು, ಅವಳು ಹೋದಮೇಲೆ ದೇವರಿಗೆ ಎಡಿಯ ಕಳಿಸಿದಂತೆ ಕಳುಹುವರಯ್ಯ. ಇಂತಪ್ಪ ತ್ರಿವಿಧಭ್ರಷ್ಟ ಹೊಲೆ ಮಾದಿಗರಿಗೆ ಗುರು-ಲಿಂಗ-ಜಂಗಮದ ಪ್ರೇಮಿಗಳಾದ ಸದ್ಭಕ್ತರೆಂದಡೆ, ಶಿವಜ್ಞಾನಿಗಳಾದ ಶಿವಶರಣರು ಕಂಡು ತಮ್ಮೊಳಗೆ ತಾವೇ ನಕ್ಕು ಅರಿಯದವರಂತೆ ಶಬ್ದಮುಗ್ಧರಾಗಿ ಸುಮ್ಮನೆ ಇರ್ದರು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇಂತಪ್ಪಪ್ರಸಾದದ ಘನವನರಿಯದೆ ಸ್ಥಾವರಕ್ಕೆ ಕೊಟ್ಟ ದ್ರವ್ಯವು ಲಿಂಗಕ್ಕೆ ಸಲ್ಲದೆಂಬರು. ಅದೇನು ಕಾರಣವೆಂದಡೆ: ಸ್ಥಾವರವು ನಿಶ್ಶಬ್ದ, ಲಿಂಗವು ಮಂತ್ರಶಬ್ದ ಎಂಬರಯ್ಯಾ. ಎಲೆ ಮರುಳ ಮಾನವರಿರಾ, ಹದಿನೆಂಟು ಜೀನಸು ಧಾನ್ಯವು ಭೂಮಿಯಲ್ಲಿ ಬೆಳೆಯುವದು. ಆ ಭೂಮಿ ಸ್ಥಾವರವಲ್ಲವೆ? ಆ ಧಾನ್ಯವ ತಂದು ಕಲ್ಲವಳ್ಳಿಗೆ ಹಾಕಿ ಕುಟ್ಟಿ ಬೀಸಿ ಗಡಿಗೆಯೊಳಗೆ ಹಾಕಿ ಪಾಕವ ಮಾಡುವರು. ಆ ಕಲ್ಲು ಒಳ್ಳು ಗಡಿಗೆ ಸ್ಥಾವರವಲ್ಲವೆ? ಅಂತಪ್ಪ ಪಾಕವನು ಗಡಿಗೆಯೊಳಗೆ ಇದ್ದಾಗ ಬೋನವೆಂಬರು. ಹರಿವಾಣಕ್ಕೆ ಬಂದಲ್ಲಿ ನೈವೇದ್ಯವೆಂಬರು. ಜಂಗಮದ ಹಸ್ತಸ್ಪರ್ಶವಾದಾಗಲೇ ಪದಾರ್ಥದ ಪೂರ್ವಾಶ್ರಯವಳಿಯಿತೆಂಬರು. ಜಂಗಮವು ತನ್ನ ಲಿಂಗಕ್ಕೆ ತೋರಿ, ಸಲಿಸಿದ ಮೇಲೆ ಪ್ರಸಾದವಾಯಿತೆಂಬರು. ಇಂತಪ್ಪ ಪ್ರಸಾದಕ್ಕೆ 'ಅಯ್ಯಾ ಹಸಾದ ಮಹಾಪ್ರಸಾದ ಪಾಲಿಸಿರೆ'ಂದು ಕೂಳ ಚೆಲ್ಲಿದರೆ ಕಾಗಿ ನೆರೆದು ಒಂದಕ್ಕೊಂದು ಕಚ್ಚಿ ಕಡಿದಾಡುವಂತೆ, ಒಬ್ಬರಿಗೊಬ್ಬರು ನಾ ಮುಂದೆ ನೀ ಮುಂದೆಂದು ಅಡ್ಡಡ್ಡ ಬಿದ್ದು, ಆ ಜಂಗಮ ತಿಂದ ಎಂಜಲ ಪ್ರಸಾದವೆಂದು ಪಡಕೊಂಡು ತಮ್ಮ ತಮ್ಮ ಲಿಂಗಕ್ಕೆ ತೋರಿ ತೋರಿ ಆಧಾರಸ್ಥಾನ ಮೊದಲಾಗಿ ವಿಶುದ್ಧಿಸ್ಥಾನ ಪರಿಯಂತರ ತೊಗಲತಿತ್ತಿ ನೀರ ತುಂಬಿದಂತೆ ತುಂಬಿಕೊಂಡು, ಸತ್ತ ಮೊಲದಂತೆ ಕಣ್ಣ ಬಿಡುವಣ್ಣಗಳು ನಿಮ್ಮ ಶಿವಶರಣರ ಮಹಾಘನಪ್ರಸಾದವ ಈ ಕುರಿಮನುಜರೆತ್ತಬಲ್ಲರಯ್ಯ. ಅದೆಂತೆಂದಡೆ : ಲಿಂಗಕ್ಕೆ ಶಿವಕಳೆಯಿಲ್ಲ, ಭಕ್ತಂಗೆ ಗುರುಕಾರುಣ್ಯವಿಲ್ಲ, ಜಂಗಮಕ್ಕೆ ಪರಮಕಳೆಯಿಲ್ಲ. ಪ್ರಸಾದಕ್ಕೆ ಜಡರೂಪಿಲ್ಲದಾದಕಾರಣ ಹೀಗೆಂಬುದ ತಿಳಿಯದೆ ಮಾಡುವ ಮಾಟವೆಲ್ಲ, ನೀರೊಳಗೆ ಅಗ್ನಿಹೋಮವನಿಕ್ಕಿದಂತೆ ಆಯಿತು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಧರೆ ಇಲ್ಲದೆ ಬೆಳೆಯಬಹುದೆ ಧಾನ್ಯವ ? ಮಳೆ ಇಲ್ಲದೆ ನೋಡಬಹುದೆ ಬೆಳೆಗಳ ? ಒಂದು ವಸ್ತುವಿಗಾದಡೂ ದ್ವಂದ್ವವೆ ಬೇಕು. ನಮ್ಮ ಕಪಿಲಸಿದ್ಧಮಲ್ಲನ ನೋಡುವಡೆ ಲಿಂಗಪೂಜೆ ಜಂಗಮದಾಸೋಹವೆ ಬೇಕು.
--------------
ಸಿದ್ಧರಾಮೇಶ್ವರ
ಕಸವಕೊಂಡು ಹೊಸ ಧಾನ್ಯವ ಕೊಟ್ಟಡೆ, ಒಲ್ಲೆಂಬ ಚದುರರಾರು? ಜಲವ ಕೊಂಡು ಅಮೃತವ ಕೊಟ್ಟಡೆ, ಒಲ್ಲೆಂಬ ಭಾಷೆಯದಾರದು? ಎನ್ನಂತರಂಗದ ಜ್ಞಾನವ ಕೊಂಡು ಸುಜ್ಞಾನವಪ್ಪ ನಿಮ್ಮ ಕರತೇಜವ ಕೊಟ್ಟಡೆ, ಒಲ್ಲೆನೆಂಬ ಪಾತಕಿ ಯಾರು? ಕಪಿಲಸಿದ್ಧಮಲ್ಲಿಕಾರ್ಜುನ ಮಡಿವಾಳ ತಂದೆ.
--------------
ಸಿದ್ಧರಾಮೇಶ್ವರ
ಅಯ್ಯಾ ಹಾಳೂರೊಳಗೊಂದು ಹಗವ ಕಂಡೆನಯ್ಯಾ. ಹಗದ ಮೇಲೊಂದು ಬಾವಿ ಹುಟ್ಟಿತ್ತು. ಹಗದ ಬಾವಿಯ ನಡುವೆ ವಡಬಾಗ್ನಿಯೆಂಬ ಕಿಚ್ಚು ಹುಟ್ಟಿತ್ತು. ಆ ಹಗದ ಧಾನ್ಯವ ತೆಗೆತೆಗೆದು, ಬಾವಿಯ ನೀರ ಮೊಗೆಮೊಗೆದು, ವಡಬಾಗ್ನಿಯೆಂಬ ಕಿಚ್ಚಿನೊಳಗೆ ಅಡಿಗೆಯ ಮಾಡಿಕೊಂಡು, ಉಂಡು ಉಟ್ಟಾಡಬಂದರು, ಹಲಬರು ಕೆಲಬರು. ಉಂಡುಟ್ಟಾಡಿ ಗಂಡು ಗೆಲವುದ ಕಂಡು ತಾಳಲಾರದೆ, ಕುಂಡಲಿ ಅಗ್ನಿಯ ಎಬ್ಬಿಸಿ ಉರುಹಿದಡೆ, ಇವರೆಲ್ಲರೂ ದಹನವಾದರು. ಆ ಹಗವು ಬೆಂದಿತ್ತು, ಬಾವಿಯು ಬತ್ತಿತ್ತು, ವಡಬಾಗ್ನಿಯೆಂಬ ಕಿಚ್ಚು ಕೆಟ್ಟಿತ್ತು. ಇದಕಂಡು ನಾ ನಿಮ್ಮೊಳಚ್ಚೊತ್ತಿದಂತಿರ್ದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಧಾನ್ಯವ ಹೊಯ್ದಿದ್ದ ಘಟ, ಅಳತೆಗೆ ಬಪ್ಪುದೆ, ಆ ಧಾನ್ಯವಲ್ಲದೆ ? ಘಟ ಕರ್ಮವನುಂಬುದೆ, ಆತ್ಮನಲ್ಲದೆ ? ಹೆಪ್ಪಿಗೆ ರುಚಿ ಉಂಟೆ, ಮಧುರಕ್ಕಲ್ಲದೆ ? ಅವು ಒಂದೊಂದೆಡೆಯಿಪ್ಪ ಸ್ವಸ್ಥಾನವಲ್ಲವೆ ? ಆ ಸ್ವಸ್ಥಾನವ ನಿಶ್ಚಿಯಿಸಿ ಅರಿದಲ್ಲಿ ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪ್ರಾಣಲಿಂಗಿಗೆ ಚತುರ್ವಿಧಭಕ್ತಿಯಿಂದ ಗುರುವಿಗೆ ತನುವ ದಂಡಿಸಬೇಕೆಂಬ ಮಮಕಾರವುಂಟೆ ? ಪ್ರಾಣಲಿಂಗಿಗೆ ಅನ್ನ ವಸ್ತ್ರ ಧನ ಧಾನ್ಯ ಮೊದಲಾದ ಹದಿನೆಂಟು ಜೀನಸಿನ ಧಾನ್ಯವ ಜಂಗಮಕ್ಕೆ ನೀಡಿ ತೃಪ್ತಿಯಬಡಿಸಿ ಆತ್ಮನ ಬಳಲಿಸಿ, ಆ ಜಂಗಮದ ಪಾದೋದಕ ಪ್ರಸಾದವ ಸೇವಿಸಬೇಕೆಂಬ ಮಮಕಾರವುಂಟೆ ? ಇಂತೀ ತ್ರಿಮೂರ್ತಿಗಳಲ್ಲಿ ಪಾದೋದಕ, ಪ್ರಸಾದದ ಮೇಲಣ ಮಮಕಾರವನಳಿದುಳಿದಾತನೇ ಪ್ರಾಣಲಿಂಗಿ. ಮತ್ತಂ- ಅಂತಪ್ಪ ತ್ರೈಮೂರ್ತಿಗಳ ಪಾದೋದಕ ಪ್ರಸಾದದ ಮೇಲಣ ಮಮಕಾರ ನಿಮಿಷ ನಿಮಿಷಾರ್ಧವನಗಲದಿರ್ಪಾತನೇ ಅಚ್ಚ ಪ್ರಾಣಲಿಂಗಿ ನಿಜಲಿಂಗೈಕ್ಯ. ಇಂತೀ ಉಭಯದ ಭೇದವ ತಿಳಿಯಬಲ್ಲರೆ ಶಿವಜ್ಞಾನಿಗಳಾದ ಪರಶಿವಯೋಗಿಗಳೆಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನಿತ್ಯ ಚಿಲುಮೆಯ ಕೃತ್ಯವೆಂದು ಮಾಡುವಲ್ಲಿ, ಮಳಲಿನ ಮರೆಯ ನೀರ ಬಳಸದೆ, ಸಲೆ ಪೃಥ್ವಿಯಲ್ಲಿ ನೆಲೆ ಚಿಲುಮೆಯಂ ಕಂಡು ದಿನಕೃತ್ಯ ತಪ್ಪದೆ ನೇಮ ಸಲುವಂತೆ ಕಾಷ್ಠವಂ ತೊಳೆದು ಜೀವಜಂತುಗಳ ನೋಡಿ, ಉಂಡೆ ಮರನಂ ಒಡೆಯದೆ, ಜೀರ್ಣವಾದ ಕಾಷ್ಠಮಂ ಒಲೆಗಿಕ್ಕದೆ ತುಳಿಯದ ಧಾನ್ಯವಂ ಶೋಧಿಸಿ, ಲತೆ ಪರ್ಣ ಮೊದಲಾದ ಪಚ್ಚೆ ಪೈರು ಗೆಣಸು ವಿದಳ ಹುಡುಕಂ ಮುಟ್ಟದೆ, ಲಿಂಗಾವಧಾನದಲ್ಲಿ ಸ್ವಯಂ ಪಾಕವಂ ಮಾಡಿ ಸ್ವಾನುಭಾವದಿಂದ ಲಿಂಗಾರ್ಚನೆಯ ಮಾಡಿ ಬೇಡದೆ ಕಾಡದೆ ಸ್ವ ಇಚ್ಫಾಪರನಾಗಿ ಆರೈದು ನಡೆವಲ್ಲಿ, ನೀರು ನೆಲ ಬಹುಜನಗ್ರಾಮ ಗಣಸಮೂಹಸಂಪದಸಮಯಕ್ಕೆ ಸಿಕ್ಕದೆ ತ್ರಿವಿಧಕ್ಕೊಳಗಲ್ಲದೆ, ಇಂತೀ ನೇಮವೆ ತಾನಾಗಿ, ತಾನೆ ನೇಮವಾಗಿ, ಉಭಯಕ್ಕೆ ತೆರಪಿಲ್ಲದೆ ನಿಂದುದು ಆಚಾರವೆ ಪ್ರಣವಾದ ರಾಮೇಶ್ವರಲಿಂಗವು ತಾನೆ.
--------------
ಅಕ್ಕಮ್ಮ
ಹೊನ್ನು ಹೆಣ್ಣು ಮಣ್ಣಿನ ಮೇಲೆ ಮೋಹವಿಪ್ಪಂತೆ ಗುರು ಲಿಂಗ ಜಂಗಮದ ಮೇಲೆ ಮೋಹವಿಲ್ಲ. ಧನ ಧಾನ್ಯವ ಗಳಿಸುವಂತೆ ಲಿಂಗ ಜಂಗಮ ಗಳಿಸಲರಿಯರು. ಗುರು ಲಿಂಗ ಜಂಗಮ ಕಂಡರೆ, ವೈರಿಯ ಕಂಡಂತೆ ಕಾಣ್ಬರು. ಮುಂದಕ್ಕೆ ಹೋಹ ಬಿಟ್ಟು, ಹೆದರಿಸಿ ಚೆದುರಿಸಿ ನುಡಿದು ನಿಂದಿಸುವ ಪಾಪಿಯ ಕೊರಳಲ್ಲಿಪ್ಪುದು ಶಿಲೆಯಲ್ಲದೆ ಲಿಂಗವಲ್ಲ. ಅದು ಎಂತೆಂದೊಡೆ : ಆಡಿನ ಕೊರಳಲ್ಲಿ ಮೊಲೆ ಇದ್ದರೇನು ಅಮೃತವ ಕರೆಯಬಲ್ಲುದೆ ? ಕರೆಯಲರಿಯದು. ಕಡಿಯಲರಿಯದವ ಹಿಡಿದರೇನಾಯುಧವ ? ಮಡದಿ ಮಕ್ಕಳು, ಅರ್ಥಭಾಗ್ಯವ ನೆಚ್ಚಿಪ್ಪ ಪಾಪಿಗೆ ಹೊನ್ನೆ ದೈವ, ಹೆಣ್ಣೆ ದೈವ, ಮಣ್ಣೆ ದೈವ. ಅವನಿಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ಪಾದೋದಕವಿಲ್ಲ ಪ್ರಸಾದವಿಲ್ಲ , ನಿಮ್ಮ ಕೃಪೆಯೆಂಬುದು ಮುನ್ನವೆ ಇಲ್ಲ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಇನ್ನಷ್ಟು ... -->