ಅಥವಾ

ಒಟ್ಟು 12 ಕಡೆಗಳಲ್ಲಿ , 6 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯುಗವನೊಗೆದಾತ, ಯುಗವನೆಲ್ಲವ ಮಾಡಿದಾತ ರುದ್ರನ ಜಡೆಯ ಸುತ್ತಿದ ಫಣಿಯ ಬಿಳಿದು ಮಾಡಿದಾತ ಇವನೆಲ್ಲವ ಬಿಳಿದು ಮಾಡಿ ಬಸವಣ್ಣಂಗೆ ಸೂತ್ರಧಾರಿಯಾದ ಮಡಿವಳ ಮಾಚಯ್ಯನ ನೆನೆದಾಡುತ್ತಿರ್ದೆ. ರೇಕಣ್ಣಪ್ರಿಯ ನಾಗಿನಾಥಾ ಬಸವಣ್ಣನಿಂದ ಬದುಕಿತೀ ಲೋಕವೆಲ್ಲ.
--------------
ಬಹುರೂಪಿ ಚೌಡಯ್ಯ
ಫಣಿಯ ಹೆಡೆಯ ಮೇಲೆ, ಒಂದು ಮಣಿಮಾಡದ ಮಂಟಪ. ಒಬ್ಬರಿಗಲ್ಲದೆ ಇಬ್ಬರಿಗಿಂಬಿಲ್ಲ. ಗಂಡಹಂಡೆರಿಬ್ಬರಿಗೆ ಇಹ ತೆರನಾವುದು ? ತೆರಪಿಲ್ಲದುದ ಕಂಡು, ಗಂಡನ ಮಂಡೆಯ ಮೇಲೆ ಹೆಂಡತಿ ಅಡಗಿರಲಾಗಿ, ಬಂದಬಂದವರೆಲ್ಲರೂ ಅವಳ ಕಂಡು ಮನ ಸೋತು, ಗಂಡನ ಕೊಂದು, ಅವಳ ಕೊಂಡು ಹೋಹಾಗ, ಹುದುಗು ಹಿಂಗದೆ, ಇವರೆಲ್ಲರೂ ಕೊಂದಾಡಿ ಸತ್ತರು. ಇದರ ಸಂಗವಾರಿಗೂ ಚೋದ್ಯ, ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ದೇವರಾಜ್ಯದಲ್ಲಿ, ಧಾರೆಯ ಭೋಜನ ಅರಮನೆಯ ಓಲಗದೊಳಗೆ ಹೊಂಪುಳಿವರಿವುತ್ತ ನಾಲ್ಕೂದಿಕ್ಕಿನಲ್ಲಿ ನಾಲ್ವರ ಫಣಿಯ ಬೆಳಗು. ಜಾಣಭಾಷೆಯಲ್ಲಿ ಮಧ್ಯದಲೊಬ್ಬಳು, ಆಣತಿಯ ಸರವು. ಮಹಾದೇವಿ ಗಾಂಧಾರಿಯನು ತೋರಿ, ಒದವಿಸಿದ ಮಧುಮಾಧವಿಯನು ಭೋಜ ಗದ್ಯವನೋದಲು, ಶಿವನು ಕೇಳುತ್ತಿರೆ ಬಾಣಸಿಗ ಹಡಪದವನೆ ಬಲ್ಲನು ಕಾಣಾ. ಕೊಂಕಿಲ್ಲದೆ ಶಬುದ ರಸಭೇದವನು ರಾಣಿ ಬಲ್ಲಳು. ಕುಮುದ ಪಾತ್ರವಿಧಾಂತ ಮಾವಟಿಗ ಭೇದವನು ಮೇಲೆ ಅಂಗರಿಕನು ದೀವಟಿಗೆ ಧಾರೆವಟ್ಟದ ಜಾಣನು ಅಲ್ಲಿ ಚಂಬಕನ ಕಹಳೆ ಭೋರೆಂದು ಬಾರಿಸಿ ಪ್ರತಾಪದ ಕದಳಿಗೆ ಎದೆ ದಲ್ಲಣ. ಆರುಬಣ್ಣದ ವಸ್ತುವ ಮೂರು ಬಣ್ಣಕ್ಕೆ ತಂದು, ಕೇವಣಿಸಿದನು ಕಮಠ ಸುರಥ ಕವಾಹಾರದಾರದ ಖೂಳರ ನಾಲ್ವರ ಬಯಕೆಯನು, ದೇವ ಬಳ್ಳೇಶ್ವರನ ಕನ್ನಡ ವಿಪರೀತ.
--------------
ಬಳ್ಳೇಶ ಮಲ್ಲಯ್ಯ
ಸಿದ್ಧರಾಮಯ್ಯನನುವ ನಿರ್ಬುದ್ಧಿ ಮನುಜರು ಎತ್ತಬಲ್ಲರೊ, ಸದ್ಯೋಜಾತವದನನೆ ಬಲ್ಲ. ಪಂಚಭೂತವ ಮಾಡಿದ ಘನಕ್ಕೆ ಘನವ ತೋರಿದ ಫಣಿಯ ಮಣಿಯ ತೊಡಗಿದ ಚತುರ್ದಶಭುವನದ ಹವಣನಾರು ಬಲ್ಲರೊ ? ಒಳಗು ಹೊರಗುವ ತೋರಲಿಲ್ಲ ! ಮನದ ಕೊನೆಯಲ್ಲಿ ಬೆಳಗುತಿಪ್ಪ ಗುಹೇಶ್ವರಲಿಂಗದಲ್ಲಿ ಸಿದ್ಧರಾಮಯ್ಯದೇವರು ತಾನೆ !
--------------
ಅಲ್ಲಮಪ್ರಭುದೇವರು
ಜಲ ಕೂರ್ಮ ಗಜ ಫಣಿಯ ಮೇಲೆ ಧರೆ ವಿಸ್ತರಿಸಿ ನಿಲ್ಲದಂದು, ಗಗನವಿಲ್ಲದಂದು ಪವನನ ಸುಳುಹು ಇಲ್ಲದಂದು, ಅಗ್ನಿಗೆ ಕಳೆ ಮೊಳೆದೋರದಂದು, ತರು ಗಿರಿ ತೃಣಕಾಷಾ*ದಿಗಳಿಲ್ಲದಂದು, ಯುಗಜುಗ ಮಿಗಿಲೆನಿಸಿದ ಹದಿನಾಲ್ಕು ಭುವನ ನೆಲೆಗೊಳ್ಳದಂದು, ನಿಜವನರಿದಿಹೆನೆಂಬ ತ್ರಿಜಗಾಧಿಪತಿಗಳಿಲ್ಲದಂದು_ ತೋರುವ ಬೀರುವ ಪರಿ ಇಲ್ಲದಂದು, ಆ ಭಾವದಲ್ಲಿ ಭರಿತ ಅಗಮ್ಯ ಗುಹೇಶ್ವರ ನಿರಾಳವು !
--------------
ಅಲ್ಲಮಪ್ರಭುದೇವರು
ಪಂಚಬ್ರಹ್ಮಮೂರ್ತಿ ಪ್ರಣವ ಮಂತ್ರರೂಪ ಪಂಚಮುಖ ದಶಭುಜ ಫಣಿಯ ಮಣಿಯ ಮೇಲೆ ನೋಡುತ್ತೈದಾನೆ ! ಸಮತೆ ಸಮಾಧಿಯೆಂಬ ಸಮರಸದೊಳಗೆ; ಚಂದ್ರಕಾಂತಕೊಡದಲ್ಲಿ ಅಮೃತವ ತುಂಬಿ, ಕೊಡನೊಡೆಯದೆ ಬೆಳಗುತ್ತಿದೆ, ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಯ್ಯಾ ಜಲ, ಕೂರ್ಮ, ಗಜ, ಫಣಿಯ ಮೇಲೆ ಧರೆ ವಿಸ್ತರಿಸಿ ನಿಲ್ಲದಂದು, ಗಗನವಿಲ್ಲದಂದು, ಪವನನ ಸುಳುಹಿಲ್ಲದಂದು, ಅಗ್ನಿಗೆ ಕಳೆದೋರದಂದು, ತರು ಗಿರಿ ತೃಣ ಕಾಷಾ*ದಿಗಳಿಲ್ಲದಂದು, ಯುಗ ಜುಗ, ಮಿಗಿಲೆನಿಸಿದ ಹದಿನಾಲ್ಕು ಭುವನ ನೆಲೆಗೊಳ್ಳದಂದು, ನಿಜವನರಿದೆನೆಂಬ ತ್ರಿಜಗಾಧಿಪತಿಗಳಿಲ್ಲದಂದು ತೋರುವ ಬೀರುವ ಭಾವದ ಪರಿ, ಭಾವದಲ್ಲಿ ಭರಿತ, ಆಗಮ್ಯ ಗುಹೇಶ್ವರ ನಿರಾಳವು !
--------------
ಅಲ್ಲಮಪ್ರಭುದೇವರು
ಆದಿ ಪರಶಿವನ ಜಟಾಮಗುಟದಲ್ಲಿ ಫಣಿಯ ತ್ರಿಪುರ ಸಂಗ್ರಾಮದಲ್ಲಿ ರೌದ್ರವು ಪುಟ್ಟಿ ತ್ರಿಪುರವನೆಸೆವಲ್ಲಿ ರಾಕ್ಷಸರ ಸಂಹರಿಸಲ್ಪಟ್ಟಂಥ ಶೇಷನ ನಯನವು ಸಸಿಯನು ವಿವರಿಸಿ ಪೇಳಾ ಚೆನ್ನಬಸವೇಶ್ವರಾ.
--------------
ಮಾದಾರ ಚೆನ್ನಯ್ಯ
ನೆಲೆಯಿಲ್ಲದ ಮಹಾಜಲದೊಳಗೆ ಮಲಗಿರ್ದ ಸರ್ಪನ ಫಣವ ನೋಡಲು, ಬೆಳಬೆಳಗುತ್ತಿರ್ದವು ರಜತ ಹೇಮವೆಂಬ ಎರಡು ಕುಲಗಿರಿಗಳು. ಎಡದ ಕೈಯಲ್ಲಿ ರಜತಗಿರಿಯಂ ಪಿಡಿದು ಬಲದ ಕೈಯಲ್ಲಿ ಹೇಮಾದ್ರಿಯಂ ಪಿಡಿದು ಮಹಾದಂಡಿಯ ಫಣಿಯ ಒದೆಯಲು ನೆಗಹಿತ್ತು ಈರೇಳು ಭುವನವ. ಅಲ್ಲಿಂದ ಮೇಲೆ, ಗಿರಿ ಎರಡು ವರ್ಣವಳಿದು ಅಡಗಿದವು ಚಿಕ್ಕಾಡಿನ ಹೃದಯದಲ್ಲಿ ! ಚಿಕ್ಕಾಡು ಕಂದೆರೆದು ಕಂಡಿತ್ತು ಚಿದಾಕಾಶವೆಂಬ ಶಿವಾಲಯವ ! ಅಂಗವಿಲ್ಲದ ಶೃಂಗಾರಕ್ಕೆ ಭಂಗ ಉಂಟೆ ?_ಇಲ್ಲವಾಗಿ, ಗುಹೇಶ್ವರನೆಂಬ ಶಬ್ದಬ್ರಹ್ಮಕ್ಕೆ ಮುದ್ರಿಕೆಯಾಯಿತ್ತು.
--------------
ಅಲ್ಲಮಪ್ರಭುದೇವರು
ಇಂದುವಿನ ಬೆಳಗಿನ ಸಂಪತ್ತನಿಂಬುಗೊಂಡ, ಚಕೋರನ ಧ್ಯಾನವೆಂತಿಪ್ಪದು,_ಅಂತಾಗಿದ್ದೆ ನಾನು. ಮಾತೆ ವಿಯೋಗವಾದ ಶಿಶುವಿನ ಧ್ಯಾನವೆಂತಿಪ್ಪುದು_ಅಂತಾಗಿದ್ದೆ ನಾನು. ಬಂಧನದಲ್ಲಿ ಸಿಕ್ಕಿದ ಫಣಿಯ ಧ್ಯಾನವೆಂತಿಪ್ಪುದು_ಅಂತಾಗಿದ್ದೆ ನಾನು. ರಾತ್ರಿಯೊಳು ಮುಗಿದ ಪದ್ಮದ ಭ್ರಮರನ ಧ್ಯಾನವೆಂತಿಪ್ಪುದು_ಅಂತಾಗಿದ್ದೆ ನಾನು. ಸ್ವಪ್ನದಲ್ಲಿ ದುಷ್ಟ ಕೇಸರಿಯ ಧ್ಯಾನದ ಮದಹಸ್ತಿ ಎಂತಿಪ್ಪುದು_ಅಂತಾಗಿದ್ದೆ ನಾನು. ನೋಟವಗಲಿದ ನೇಹದ ಧ್ಯಾನವೆಂತಿಪ್ಪುದು_ಅಂತಾಗಿದ್ದೆ ನಾನು. ಬ್ರಹ್ಮಪಾಶ ವಿಷ್ಣುಮಾಯವನತಿಗಳೆದ ಛಲದಲ್ಲಿ ಏನೆಂದರಿಯದಿದ್ದೆ ನಾನು. ಗುಹೇಶ್ವರಲಿಂಗವೆ ಸಂಗನಬಸವಣ್ಣನೊಳಗೆ ಲೀಯವಹ ಭರದಲ್ಲಿ ಏನೆಂದರಿಯದಿದ್ದೆ ನಾನು.
--------------
ಅಲ್ಲಮಪ್ರಭುದೇವರು
ಆಕಾಶವ ನುಂಗಿದ ಸರ್ಪನ ಫಣಿಯ ಮಣಿಯೊಳಗಣ ಕಪ್ಪೆ, ವಾಯುವನಲನ ಸಂಚವ ನುಂಗಿತ್ತದೇನೊ ? ರೂಹಿಲ್ಲದ ತಲೆಗೆ, ಮೊಲೆ ಮೂರಾಯಿತ್ತ ಕಂಡೆ ! ಉಂಡಾಡುವ ಶಿಶುವಿನ ಕೈಯಲ್ಲಿ ಮಾಣಿಕದಾರತಿಯ ಕಂಡೆ ! ಕಾಯವಿಲ್ಲದ ಹೆಣನ ವಾಯುವಿಲ್ಲದೆ ಜವನೆಳೆದೊಯ್ದನೆಂಬ ವಾಯಕ್ಕೆ ವಾಯವನೇನೆಂಬೆ ಗುಹೇಶ್ವರಾ !
--------------
ಅಲ್ಲಮಪ್ರಭುದೇವರು
ಅಸುರರ ಸುರರ ಶಿರೋಮಾಲೆಯ ಕೊರಳಲಿಕ್ಕಿ ಶಿವಕಳೆಯೆದ್ದಾಡುವಲ್ಲಿ ಅವಕಳೆಯಾಗದೆ ? ಅಸುರ ದೇವಾದಿಗಳೆಲ್ಲಿಯಯ್ಯಾ ! ನೀ ಮಾಡಿದ ಧಾರುಣಿ ರಸಾತಳಕ್ಕಿಳಿದು, ಕೂರ್ಮ ಕುಸಿದು ದಿಗುದಂತಿಗಳು ಘೀಳಿಟ್ಟು, ಫಣಿಯ ಹೆಡೆ ಮುರಿದು ನಿನ್ನ ಪಾದದ ಗುಡುಗಾಟದಿಂದ ಕೆಂಧೂಲಿ ನೆಗೆದು ನರಲೋಕ ಸುರಲೋಕ ಬ್ರಹ್ಮಲೋಕ ವಿಷ್ಣುಲೋಕ ಇಂದ್ರಲೋಕ ಸೂರ್ಯಲೋಕ ಚಂದ್ರಲೋಕ ತಾರಾಲೋಕ ಅಸುರಲೋಕಂಗಳು ಬೂದಿಯಲ್ಲಿ ಮುಸುಕಿದವಯ್ಯಾ. ಪ್ರಭುವೆದ್ದು ಹಗರಣವಾಡುತ್ತಿರಲು, ಈರೇಳು ಭುವನದೊಳಗುಳ್ಳ ಆತ್ಮಾದಿಗಳೆಲ್ಲ ದೆಸೆದೆಸೆಗೆಡಲು, ಶಶಿಧರ ನಾಟ್ಯಕ್ಕೆ, ನಿಂದಲ್ಲಿ, ಇನ್ನಾರಯ್ಯ ಸಂತೈಸುವರು ಕೂಡಲಚೆನ್ನಸಂಗಯ್ಯಾ ?
--------------
ಚನ್ನಬಸವಣ್ಣ
-->