ಅಥವಾ

ಒಟ್ಟು 55 ಕಡೆಗಳಲ್ಲಿ , 15 ವಚನಕಾರರು , 46 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುತ್ತೈದೆ ಸತ್ಯಕ್ಕಗಳಿರಾ ! ನಿತ್ಯರೆನ್ನ ಮನೆಗೆ ಕರ್ತುವಾಗಿ ಬಂದರೆ ಅರ್ಥವನೀವೆ. ಅವರಿರತಕ್ಕ ಇಚ್ಫೆ ಬಾರದಮುನ್ನ ಎಚ್ಚರವನೀವುತ ಬನ್ನಿರೆ. ಪಂಚವರ್ಣದಾಭರಣವ ನಿಮ್ಮ ಕೈಯಿಂದೆ ಕೊಡಿಸುವೆ, ನಾನಚ್ಚತಗೊಂಬೆ ಎನ್ನ ಬಯಕೆಯನೊಯ್ದೊಪ್ಪಿಸಿ ಅವರ ಸಮರಸಾನಂದವೆನಗಿತ್ತಡೆ ನಿಮ್ಮ ಕೈಯಲ್ಲಿ ನಿರಂತರ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಡೆನುಡಿಯಿಲ್ಲದ ಘನವು ನಡೆನುಡಿಗಡಿಯಿಟ್ಟು ಬಂದರೆ ಎನ್ನ ಸಡಗರ ಹೆಚ್ಚಿತ್ತು ನೋಡಾ ! ಬಡಿವಾರದ ಬಲವಯ್ಯಾ, ಕರ್ತು ಭೃತ್ಯಕಳೆ ಉನ್ನತವಾಗಿ ಶಕ್ತಿಯನು ಮುಕ್ತಿದಾಯಕ ಮುನಿಸಿಲ್ಲದೆ ಮುಂದುವರಿ. ನಾದ ಬಿಂದು ಕಳೆ ನವೀನವಯ್ಯಾ. ಮೂದೇವರೊಡೆಯ ಶರಣು ಶರಣು ಕರುಣಾನಿದ್ಥಿ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಯ್ಯಾ, ಕಾಲತೊಳೆದುಕೊಂಡು ಬಂದರೆ ಕಣ್ಣಮುಂದೆ ನಿಂದೆ. ಕೈಯ ತೊಳೆದುಕೊಂಡು ಬಂದರೆ ಮನದ ಮುಂದೆ ನಿಂದೆ. ತಲೆಯ ತೊಳೆದುಕೊಂಡು ಬಂದರೆ ಭಾವದ ಮುಂದೆ ನಿಂದೆ. ಸಂದು ಸಂಶಯ ಕುಂದು ಕಲೆಯ ಕಳೆದುಳಿದು ಬಂದರೆ ಸರ್ವಾಂಗಸನ್ನಿಹಿತನಾಗಿ ನಿಂದೆ. ಬಂದ ಬರವು ಚಂದವಾಗಿ ನಿಂದರೆ ಅಂದಂದಿಗೆ ಅವಧರಿಸು ಮುಂದುವರಿವೆನು ಮುದದಿಂದೆ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹರಗುರುವಾಕ್ಯ ಪ್ರಮಾಣವರಿಯದೆ ಅಜ್ಞಾನವಾವರಿಸಿ ವಾರ ತಿಥಿಯೆಂದು, ಸಂಕ್ರಾಂತಿ ಅಮವಾಸ್ಯೆಯೆಂದು ನೇಮಿಸಿ, ಮಾಡಿ ನೀಡಿ ಕರ್ಮ ಕಳೆದೆನೆಂಬ ವರ್ಮಗೇಡಿಗಳ ನೋಡಾ! ಮತ್ತೊಂದು ವೇಳೆ ಜಂಗಮ ಮನೆಗೆ ಬಂದರೆ ಅಡ್ಡಮೋರೆಯಿಕ್ಕುವ ಗೊಡ್ಡು ಮಾದಿಗರ ಶಿವಭಕ್ತರೆಂದರೆ ಅಘೋರ ನರಕವೈ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಜನಿತವಿಲ್ಲದೆ ಜನಿಸಿ ಸ್ವಯವಾದ ಹರನೇ ನೀನು ನಿರೂಪನೇರಿ ಜನಿಸಿ ಜನಿತವ ಬಗೆಯರಾಗಿ ಎಮ್ಮ ಪುರಾತನರೇ ನಿರೂಪರು, ಕುಲದಲ್ಲಿ ಹುಟ್ಟಿ ಕುಲವ ಬೆರೆಸರಾಗಿ ಎಮ್ಮ ಪುರಾತನರೇ ಕುಲಜರು. ಆದಿಲಿಂಗ ಅನಾದಿಶರಣ. ಹೆಸರಿಲ್ಲದ ದೆಶೆಗೇಡಿ ಲಿಂಗವ ವಶಕ್ಕೆ ತಂದು ಹೆಸರಿಟ್ಟು ಕರೆದರೆ ನೀನು ಸುಲಭನೇ? ಅಲ್ಲ. ನೀನು ಕುಲಗೇಡಿ, ನಿನ್ನನಾರು ಬಲ್ಲರು? ನೀನಗೋಚರ. ಹರನೇ, ನೀ ಬೇಡಿತ್ತ ಕೊಟ್ಟು ನೀ ಬಂದರೆ ನಿನ್ನನಾಗುಮಾಡಿದರಲ್ಲದೆ ಎಮ್ಮ ಪುರಾತನರು ನಿಮ್ಮಲ್ಲಿಗೆ ಬಂದು ದೈನ್ಯಬಟ್ಟು ಬೇಡಿದರಲ್ಲೈ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಒಂದೇ ವೇಳೆ ಪುರುಷಾಹಾರ ಪ್ರಮಾಣಿನಲ್ಲಿ ಗಡಣಿಸಿಕೊಂಡು ಲಿಂಗಕ್ಕೆ ಕೊಟ್ಟು ಲಿಂಗವನವಧರಿಸಿಕೊಂಬಿರಿ. ಮತ್ತೊಂದು ಪದಾರ್ಥ ಬಂದರೆ ಮುಟ್ಟಿ ಅರ್ಪಿಸಲಮ್ಮರು. ಅದೇನು ಕಾರಣ? ಕೈಯೇನು ಎಂಜಲೆ? ಕೈಯೆಂಜಲಾದವಂಗೆ ಮೈಯೆಲ್ಲಾಯೆಂಜಲು. ಎಂಜಲೆಂದರೆ ಅಮೇಧ್ಯ. ಅಪವಿತ್ರಕಾಯದಮೇಲೆ ಲಿಂಗವ ಧರಿಸಿಕೊಂಡಿಪ್ಪಿರೆ? ಇಂತಪ್ಪ ಸಂದೇಹಿ ಮಾನವರ ನಿಮ್ಮ ಪ್ರಸಾದಿಗಳು ಮೆಚ್ಚರಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕಣ್ಗೆಡಿಸಿತ್ತು ಮಾಯಾಕಾವಳ, ಕಾಲ್ಗೆಡಿಸಿತ್ತು ಮಾಯಾಕಾವಳ, ತನುಗೆಡಿಸಿತ್ತು ಮಾಯಾಕಾವಳ. ದಿನಕ್ಕೊಮ್ಮೆ ಕತ್ತಲೆಗವಿದರೆ, ಎನಗೆ ಗಳಿಗೆ ಗಳಿಗೆಗೆ ಮಾಯಾತಮಂಧ ಕತ್ತಲೆ. ಸಮುದ್ರಕ್ಕೆ ದಿನಕ್ಕೊಮ್ಮೆ ತೆರೆ ಬಂದರೆ, ಎನ್ನ ಮನವಿಕಾರದ ತೆರೆ ವೇಳೆವೇಳೆಗೆ ಕವಿದವು. ವರುಷವರುಷಕೊಂದು ಜೋಳದ ಬೆಳೆಯಾದರೆ ಎನ್ನ ತನುವಿಕಾರದ ಚಿಂತೆ ಕರ್ಮದ ಬೆಳೆಯು ಸದಾ ಬೆಳೆಯುತಿಪ್ಪುದು. ಈ ಮಾಯಾತಮಂಧವೆಂಬ ವಿದ್ಥಿಗೆನ್ನ ಗುರಿಮಾಡಿ ಬಿಟ್ಹೋಗದಿರು, ತೊಲಗದಿರು. ಕಾಳಿ ಹೊಲೆಯನದಾದಡೇನು, ಬಿರಿದು ಒಡೆಯನದು. ಕರ್ಮದ ಬಾಯಿ ಹೊಲೆಯಾದಡೇನು ಸುಜ್ಞಾನದ ಮರ್ಮವನಿತ್ತು ಸಲಹಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ದಿವದಿವಸಾನು ಅವಸ್ಥಾತ್ರಯದೊಳಾಲೋಚನೆಯಂಗೆಯ್ಯುತಿರ್ದೆನವ್ವಾ. ಕೆಳದಿಯರೊಂದಾಗಿ ಬೆಳುದಿಂಗಳೊಳು ನಿಂದು ಕಳವಳಗೊಂಡು ಸುಳುಹನಾಲಿಸುತಿರ್ದೆನವ್ವ, ಎನ್ನಂಗಳ ಮುಂದೆ ಆತ ಸನ್ನಿಹಿತ ಬಂದರೆ ನೋತ ಫಲ ಸಂಭವಿಸಿತ್ತೆನಗವ್ವ. ಕಾಯದಣಿವಂತೆ ಮಾಡಿ ಮುಂದುಗೊಂಡಿಪ್ಪೆ, ಮನದಣಿವಂತೆ ನೋಡಿ ಮುಂದುಗೊಂಡಿಪ್ಪೆ, ಪ್ರಾಣದಣಿವಂತೆ ನೀಡಿ ಮುಂದುಗೊಂಡಿಪ್ಪೆನವ್ವ. ಭಾವದಣಿವಂತೆ ಸಮಸುಖಾನಂದದೊಳೋಲಾಡುತ್ತ ಮುಂದುಗೊಂಡಿಪ್ಪೆ. ಗುರುನಿರಂಜನ ಚನ್ನಬಸವಲಿಂಗ ಶರಣರೆನ್ನ ಮನೆಗೆ ಬರುವಂತೆ ಮಾಡಾ ಎಲೆ ಅವ್ವಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆರು ಚಕ್ರದಲ್ಲಿ ಅರಿತೆನೆಂದು ನುಡಿವ ಅರಿವುಗೇಡಿಗಳು ನೀವು ಕೇಳಿರೋ. ಆಧಾರಚಕ್ರ ಪೃಥ್ವಿಗೆ ಸಂಬಂಧ ; ಅಲ್ಲಿಗೆ ಬ್ರಹ್ಮ ಅದ್ಥಿದೇವತೆ, ಆಚಾರಲಿಂಗವಿಡಿದು ಯೋಗಿಯಾಗಿ ಸುಳಿದ. ಸ್ವಾದ್ಥಿಷ್ಠಾನಚಕ್ರ ಅಪ್ಪುವಿಗೆ ಸಂಬಂಧ: ಅಲ್ಲಿಗೆ ವಿಷ್ಣು ಅದ್ಥಿದೇವತೆ, ಶ್ರೀಗುರುಲಿಂಗವ ಪಿಡಿದು ಜೋಗಿಯಾಗಿ ಸುಳಿದ. ಮಣಿಪೂರಕ ಚಕ್ರ ಅಗ್ನಿಗೆ ಸಂಬಂಧ ; ಅಲ್ಲಿಗೆ ರುದ್ರನದ್ಥಿದೇವತೆ, ಜಂಗಮಲಿಂಗವ ಪಿಡಿದು ಶ್ರಾವಣಿಯಾಗಿ ಸುಳಿದ. ವಿಶುದ್ಧಿಚಕ್ರ ವಾಯುವಿಗೆ ಸಂಬಂಧ ; ಅಲ್ಲಿಗೆ ಸದಾಶಿವನದ್ಥಿದೇವತೆ, ಪ್ರಸಾದಲಿಂಗವ ಪಿಡಿದು ಕಾಳಾಮುಖಿಯಾಗಿ ಸುಳಿದ. ಆಜ್ಞಾಚಕ್ರಕ್ಕೆ ಪರತತ್ವದ ಸಂಬಂಧ ; ಅಲ್ಲಿಗೆ ಪರಶಿವನದ್ಥಿದೇವತೆ, ಮಹಾಲಿಂಗವಪಿಡಿದು ಪಶುಪತಿಯಾಗಿ ಸುಳಿದ. ಇಂತೀ ಆರು ದರುಶನಕ್ಕೆ ಬಂದರೆ ಅಂಗಳ ಪೊಗಿಸಿರಿ. ಆ ಲಿಂಗವು ನಿಮಗೆ ತಪ್ಪಿದವು, ಮುಂದಿರ್ದ ಗುರುಲಿಂಗಜಂಗಮದ ಭೇದವನರಿಯದೆ ಆರು ಸ್ಥಲದಲ್ಲಿ ತೃಪ್ತಿಯಾಯಿತ್ತೆಂಬವರ ಕಂಡು ನಾಚಿತ್ತು ಎನ್ನ ಮನವು ಗೊಹೇಶ್ವರಪ್ರಿಯ ನಿರಾಳಲಿಂಗಾ
--------------
ಗುಹೇಶ್ವರಯ್ಯ
ಭೂತಪ್ರಾಣಿಯ ಕಳೆದು ಲಿಂಗಪ್ರಾಣಿಯ ಮಾಡಿದ ಬಳಿಕ ಆ ಶಿಷ್ಯನೆ ಜಂಗಮವಾಗಿ ಗುರುವಿನ ಮಠಕ್ಕೆ ನಡೆದು ಬಂದರೆ ಗುರುವೆಂಬ ಹಮ್ಮಿಲ್ಲದೆ ಪರಮಗುರುವೆಂದು ಪಾದಾರ್ಚನೆಯಂ ಮಾಡೂದು ಆಚಾರ, ನಾಚಿ ಮಾಡದಿದ್ದರೆ ನಾಯಕ ನರಕ. ಆ ಜಂಗಮ ಶಂಕೆಯಿಲ್ಲದೆ ಪಾದಾರ್ಚನೆಯ ಮಾಡಿಸಿಕೊಂಬುದೆ ಕರ್ತೃತ್ವ, ಶಂಕೆಗೊಂಡಡೆ ಪಂಚಮಹಾಪಾತಕ. ಹೀಂಗಲ್ಲದೆ ಗುರುವೆಂಬ ಹಮ್ಮು, ಶಿಷ್ಯನೆಂಬ ಶಂಕೆಯುಳ್ಳನ್ನಬರ ರೌರವನರಕದಲ್ಲಿಕ್ಕುವ ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ನುಡಿನಡೆಯಿಂದ ಪಡೆದರು ಮೃಡನ ಸದ್ಭಕ್ತರು. ಕೊಡುವೆಡೆಗೆ ಕೊಂಬೆಡೆಗೆ ಆಸ್ಕರಿಸರು ವೇಷವಂ ತಾಳರು. ಬಡತನ ಬಂದರೆ ಅನುಭವಿಸಿ, ಬಾರದ ಬಯಸರು. ಹಿಡಿದ ವ್ರತವ ಬಿಡದೆ ನಡೆದು ಕೈವಲ್ಯವ ಪಡದರು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ಭಕ್ತಿ ಭಕ್ತಿಯೆಂದೇನು ತುತ್ತಿಡುವನ್ನಕ್ಕವೆ ? ಗುರು ಗುರುವೆಂದೇನು ಪರಕೆ ಹೆಸರ ಹೇಳುವನ್ನಕ್ಕವೆ ? ಲಿಂಗ ಲಿಂಗವೆಂದೇನು ಅಂಗ ಬೀಳುವನ್ನಕ್ಕವೆ ? ಜಂಗಮ ಜಂಗಮವೆಂದೇನು ಮುಂದಿದ್ದ ಧನವೆಲ್ಲಾ ಸವೆವನ್ನಕ್ಕವೆ ? ಪಾದೋದಕ ಪಾದೋದಕವೆಂದೇನು ಇವೆಲ್ಲಾ ಜಲವ ಕೂಡಿ ಹೋಹನ್ನಕ್ಕವೆ ? ಪ್ರಸಾದ ಪ್ರಸಾದವೆಂದೇನು ಉಂಡುಂಡು ತನು ಕಳಚಿ ಪ್ರಳಯಕ್ಕೊಳಗಹನ್ನಕ್ಕವೆ ? ಅಲ್ಲಿ ನಿಂದಿರದಿರಾ ಮನವೆ, ನಿಂದಿದ್ದರೆ ನೀ ಕೆಡುವೆ, ಬಂದರೆ ನಾ ಕೆಡುವೆ, ಎನ್ನ ತಂದೆ ಕೂಡಲಚೆನ್ನಸಂಗಯ್ಯಾ, ಈ ಅನುವ ಬಸವಣ್ಣ ತೋರಿದನಾಗಿ, ಆನು ಬದುಕಿದೆನು.
--------------
ಚನ್ನಬಸವಣ್ಣ
ಘನಮಹಿಮ ಶರಣರು ತನ್ನ ಮನೆಗೆ ಗಮನಿಸಿ ಬಂದರೆ, ಅನುವರಿದು ಅವರವರ ಒಡವೆಯ ಅವರವರಿಗಿತ್ತು ವಿನಯ ಮುಂದುಗೊಂಡಿಪ್ಪುದೇ ಸಹಜ. ಒರೆದು ನೋಡಬಂದ ಹಿರಿಯರ ಗರ್ಜನೆಯನು ಸೈರಣೆಯೊಳರ್ಚಿಸಿ, ಸಾವಧಾನಸಖತನ ಮುಂದುಗೊಂಡಿಪ್ಪುದೇ ನಿಜಭಕ್ತಿ. ಕೊಂಡು ಮಾಡಬಲ್ಲ ಪ್ರಚಂಡ ಒಡೆಯರಡಿಯಿಟ್ಟು ಬಂದರೆ ತಡವಿಲ್ಲದರಿದು, ಒಡನಿರ್ದ ಧನವ ವಂಚನೆಯನರಿಯದೆ ಈವುದು ಗುರುನಿರಂಜನ ಚನ್ನಬಸವಲಿಂಗಕ್ಕೆ ಅಭಿನ್ನಭಕ್ತಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕೆರೆಯಲ್ಲಿ ಕಂಡರೆ ಉದಕವೆಂಬೆ, ಮನೆಗೆ ಬಂದರೆ ಅಗ್ಘವಣಿಯೆಂಬೆ. ಅಂಗಡಿಯಲ್ಲಿ ಕಂಡರೆ ಭತ್ತವೆಂಬೆ, ಮನೆಗೆ ಬಂದರೆ ಸಯದಾನವೆಂಬೆ ಮಾಡುವೆ ನೀಡುವೆ, ನೀಡುವಲ್ಲಿ ಬೋನವೆಂಬೆ. ಪ್ರಸಾದವೆಂದು ಅಂಜಿ ಎಂಜಲೆಂದರೆ ಅಂದೇ ವ್ರತಗೇಡಿ ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಕಟ್ಟಿಹೆ ಬಿಟ್ಟಿಹೆನೆಂಬ ದಂದುಗ ನಿಮಗೇಕೆ ? ತೆರನನರಿಯದೆ ಹಲವು ತಪ್ಪಲ ತರಿ ತಂದು ಮೇಲೊಟ್ಟಲೇಕೆ ? ಜಂಗಮ ಬಂದರೆ ತೆರನರಿತು ಅರ್ಪಿಸಬಲ್ಲಡಲ್ಲಿ ತಾನೆ ಶಿವನು ತೆರಹಿಲ್ಲದಿಪ್ಪನೆಂದಾತ ನಮ್ಮಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಇನ್ನಷ್ಟು ... -->