ಅಥವಾ

ಒಟ್ಟು 60 ಕಡೆಗಳಲ್ಲಿ , 26 ವಚನಕಾರರು , 50 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಸವಣ್ಣನ ಮಗನಹುದೆಂಬುದು ಕಾಣಬಂದಿತ್ತು ನೋಡಾ; ಚನ್ನಬಸವಣ್ಣನ ಮಗನಮಗನೆಂಬುದು ಕಾಣಬಂದಿತ್ತು ನೋಡಾ; ಪ್ರಭುವಿನ ಮಗನಮಗನಮಗನೆಂಬುದು ಕಾಣ ಬಂದಿತ್ತು ನೋಡಾ; ಅವಸ್ಥಾತ್ರಯದಲ್ಲಿ ಗುರುನಿರಂಜನ ಚನ್ನಬಸವಲಿಂಗ ತಾನೆಂಬುದು ಕಂಡು ಮರೆಯಿತ್ತು ನೋಡಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಿಷ್ಕಳಂಕಾತ್ಮನು ನಿಜಪ್ರಕೃತಿವಶದಿಂ ಮನ ನೆನಹು ಭಾವದೆ ತ್ರಿವಿಧಸ್ವರೂಪವಾಯಿತ್ತು. ಆ ಮನವೊಗ್ದಿದುದೆ ನೆನಹಿಗೆ ಬಂದಿತ್ತು. ಅದೇ ಭಾವದಲ್ಲಿ ತೋರಿತ್ತು ; ಅದೇ ಪ್ರಾಣವಾಯಿತ್ತು ; ಅದೇ ಚೈತನ್ಯಸ್ವರೂಪಮಾಗಿ ತನುವನೆಳದಾಡಿತ್ತು. ಅದಕ್ಕೆ ವಾಯುವೇ ಅಂಗವಾಗಿ ಕರ್ಮಾದ್ಥೀನಮೆನಿಸಿ, ತಾನೆಂಬಹಂಕಾರದಿಂ ತನ್ನ ತಾ ಮರೆತು ತೊಳಲಿಬಳಲುತ್ತಿರಲು, ಅನೇಕಜನ್ಮ ಸಂಚಿತಕರ್ಮ ಸಮೆದು, ಗುರುಕರುಣ ನೆಲೆಗೊಂಡಲ್ಲಿ ಗಗನಾಂಗಿಯಾಗಿ, ಆ ಮನಕ್ಕೆ ತಾನೇ ಆಧಾರಮಾಗಿ, ತಾನೇ ಪರಮನಾಗಿ, ತಾನೇ ಪ್ರಸನ್ನಮಾಗಿರ್ದ ಮಹಾಜಾÕನಶಕ್ತಿಯಂ ಕಂಡದರೊಳಗೆ ಕೂಡಿ, ಸಾಧಕಕ್ಕೊಳಗಾದ ಮನವೇ ಘನವಾಯಿತ್ತು. ಆ ಘನವೇ ಲಿಂಗವಾಯಿತ್ತು, ಆ ಲಿಂಗವೇ ಪ್ರಾಣವಾಯಿತ್ತು, ಆ ಪ್ರಾಣವೇ ಪರಮಾತ್ಮಸ್ವರೂಪಮಾಗಿ ತತ್ತ್ವಮಸಿಪದದಿಂದತ್ತತ್ತ ಹಮ್ಮನಳಿದು ಸುಮ್ಮನೆಯಾದುದೆ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯ ಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಅಲ್ಲಿಯಬಹುರೂಪ ಇಲ್ಲಿಗೆ ಬಂದಿತ್ತು. ಇಲ್ಲಿಯ ಬಹುರೂಪ ಎಲ್ಲಿ ಅಡಗಿತ್ತೋ? ಎನ್ನ ಬಹುರೂಪ ಬಲ್ಲವರಾರೋ ? ನಾದ ಹರಿದು ಸ್ವರವು ಸೂಸಿದ ಬಳಿಕ ಈ ಬಹುರೂಪ ಬಲ್ಲವರಾರೋ ? ರೇಕಣ್ಣಪ್ರಿಯ ನಾಗಿನಾಥನಲ್ಲಿ ಬಸವಣ್ಣನಿಂದ ಬದುಕಿತೀ ಲೋಕವೆಲ್ಲ.
--------------
ಬಹುರೂಪಿ ಚೌಡಯ್ಯ
ತನುವಿಗೆ ರುಜೆಯಡಸಿದಲ್ಲಿ ಆತ್ಮಕ್ಕೆ ಅವಗಡೆ ಬಂದಿತ್ತು. ಅದು ಉಭಯದ ಕೇಡೊ ? ಒಂದರ ಕೇಡೊ ? ಎಂಬುದನರಿತಲ್ಲಿ , ಲಿಂಗ ಜಂಗಮದ ಪ್ರಸಾದವೊಂದೆಯಾಯಿತ್ತು. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿಯಲಾಗಿ, ಸ್ವಯಂಭವಾಯಿತ್ತು.
--------------
ಶಿವಲೆಂಕ ಮಂಚಣ್ಣ
`ಸರ್ವಂ ಶಿವಮಯಂ ಜಗತ್' ಎಂಬುದ ತಿಳಿಯದೆ ನುಡಿದವರ ನುಡಿಯಂತೆ ನಡೆಯದಿರಾ ಮನವೆ. `ಸರ್ವಂ ಶಿವಮಯಂ ಜಗತ್' ಎಂದು ತಿಳಿದು ತಿಳಿದು ಸುಖಿಯಾಗು ಮನವೆ. ಪಿಂಡ ಬ್ರಹ್ಮಾಂಡಕ್ಕೆ `ತಿಲಷೋಡಶಭಾಗೇನ ಭೇದೋ ನಾಸ್ತಿ ವರಾನನೇ' ಎಂಬುದು ಪುಸಿಯಲ್ಲ ನೋಡಾ ಮನವೆ. ಈಶ್ವರನ ಪಂಚಮುಖಂದ ಪಂಚತತ್ವಗಳುದಯಿಸಿದವು. ಈ ತತ್ವಂಗಳೊಂದೊಂದು ಕೂಡಿ ತನ್ನ ಚೈತನ್ಯ ಬೆರಸಿದಲ್ಲಿ, ಪಿಂಡ ಬ್ರಹ್ಮಾಂಡವೆನಿಸಿತ್ತು ನೋಡಾ ಮನವೆ. ತನ್ನ ತಾನರಿದು ನೋಡಿದಡೆ, `ಸರ್ವಂ ಶಿವಕಪಿಲಸಿದ್ಧಮಲ್ಲಿಕಾರ್ಜುನಮಯಂ ಜಗತ್' ಎಂದರಿದು ಬಂದಿತ್ತು ನೋಡಾ ಮನವೆ.
--------------
ಸಿದ್ಧರಾಮೇಶ್ವರ
ಒಂದ ಮಾಡಹೋದಡೆ ಮತ್ತೊಂದಾಯಿತ್ತೆಂಬುದು, ಎನಗಾಯಿತ್ತು ನೋಡಾ ಬಸವಣ್ಣಾ ಮಡಿವಾಳನ ಪೂರ್ವಾಪರವನೊರೆದು ನೋಡಿದಡೆ ನಿನ್ನ ಪೂರ್ವಾಪರ ಎನಗೆ ಅರಿಯ ಬಂದಿತ್ತು ನೋಡಾ ಬಸವಣ್ಣಾ. ನಿನ್ನ ಪೂರ್ವಾಪರಸಂಗವ ಮಾಡಬಂದಡೆ ಎನ್ನ ಪೂರ್ವಾಪರ ಎನಗೆ ಅರಿಯ ಬಂದಿತ್ತು ನೋಡಾ ಬಸವಣ್ಣಾ. ಮಹಾಜ್ಞಾನಿಗಳ ಸಂಗದಿಂದ ಉಭಯ ಸಂಗಸಿದ್ಧಿಯೆಂಬುದು ದಿಟವಾಯಿತ್ತು ನೋಡಾ ಬಸವಣ್ಣಾ. ಗುಹೇಶ್ವರನ ಶರಣ ಮಡಿವಾಳ ಮಾಚಿತಂದೆಗಳ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನು ಕಾಣಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಗುರುವಿನ ಪ್ರಾಣ ಲಿಂಗದಲ್ಲಿ ಲೀಯವಾದ ಬಳಿಕ ಆ ಲಿಂಗವೆನ್ನ ಕರಸ್ಥಲಕ್ಕೆ ಬಂದಿತ್ತು ನೋಡಾ. ಇದ್ದಾನೆ ನೋಡಾ ಎನ್ನ ಗುರು ಅನಿಮಿಷನು ಎನ್ನ ಕರಸ್ಥಲದಲ್ಲಿ. ಇದ್ದಾನೆ ನೋಡಾ ಎನ್ನ ಗುರು ಅನಿಮಿಷನು ಎನ್ನ ಜ್ಞಾನದೊಳಗೆ. ಇದ್ದಾನೆ ನೋಡಾ ಎನ್ನ ಗುರುವಿನ ಗುರು ಪರಮಗುರು ಬಸವಣ್ಣ ಎನ್ನ ಕಂಗಳ ಮುಂದೆ ! ಗುಹೇಶ್ವರ ಸಾಕ್ಷಿಯಾಗಿ, ಎನ್ನ ಮೇಲೆ ದ್ರೋಹವಿಲ್ಲ ಕಾಣಾ ಚನ್ನಬಸವಣ್ಣಾ !
--------------
ಅಲ್ಲಮಪ್ರಭುದೇವರು
ಐಗೈಮನೆ ನಾಗೈಕಂಬ ಮೂಗೈತೊಲೆ ಭೇದ ಕರವಳವ ಹಾಕಿ ನೋಡಿ ಅರಿದಡೆ ಆಯ ಬಂದಿತ್ತು. ಮಸದಡೆ ಆಯ ಹೋಯಿತ್ತು. ಮೂಗೆಯ್ಯ ಕರದಲ್ಲಿ ಇದರರಿಕೆಯಾಗಿ ಹೇಳಾ ಧಾರೇಶ್ವರ ನಿನ್ನಾಲಯಕ್ಕೆ.
--------------
ಕಾಮಾಟದ ಭೀಮಣ್ಣ
ಗುರುದೇವನೇ ಮಹಾದೇವನು; ಗುರುದೇವನೇ ಸದಾಶಿವನು ಗುರುದೇವನೇ ಪರತತ್ವವು; ಆ ಪರಶಿವ ತಾನೆ ಗುರುರೂಪಾಗಿ ವರ್ತಿಸಿದನು, ಶಿಷ್ಯದೀಕ್ಷಾಕಾರಣ. ಆ ಶ್ರೀಗುರು, ಶಿಷ್ಯನ ಮಸ್ತಕದಲ್ಲಿ ತನ್ನ ಹಸ್ತಕಮಲವನಿರಿಸಿ, ಈ ಪ್ರಕಾರವಪ್ಪ ಲಿಂಗಕಳೆಯ ಪ್ರತಿಷೆ*ಯಂ ಮಾಡಿದನಾಗಿ, ಆ ಗುರುವಿನ ಹಸ್ತದಿಂದ ಆ ಕಳೆ ಹುಟ್ಟಿ, ಅದೇ ಕರಸ್ಥಲಕ್ಕೆ ಇಷ್ಟಲಿಂಗವಾಯಿತ್ತು; ಮನಸ್ಥಲಕ್ಕೆ ಪ್ರಾಣಲಿಂಗವಾಯಿತ್ತು. ಭಾವಭರಿತವಾಗಿ ಭಾವಲಿಂಗವಾಯಿತ್ತು. ಇಷ್ಟ ಪ್ರಾಣ ಭಾವವೆಂಬ ತ್ರಿವಿಧಲಿಂಗವು ತಾನೆ ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ, ಮಹಾಲಿಂಗವೆಂದು ಆರುತೆರನಾಯಿತ್ತು. ಆಚಾರಲಿಂಗದಲ್ಲಿಯೆ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ, ಮಹಾಲಿಂಗ ಈ ಲಿಂಗಪಂಚಕವು ಗರ್ಭೀಕೃತವಾಗಿ ಆಚಾರಲಿಂಗವೆಂದು ಕ್ರಿಯಾಲಿಂಗವೆಂದು ಒಂದೇ ಪರಿಯಾಯವಾಗಿ ಕ್ರಿಯಾಲಿಂಗವೆಂದು ಇಷ್ಟಲಿಂಗವೆಂದು ಒಂದೇ ಪರಿಯಾಯವಾಗಿ ಇಂತಿವೆಲ್ಲವನೊಳಕೊಂಡು ನಿನ್ನ ಕರಸ್ಥಲಕ್ಕೆ ಬಂದಿತ್ತು ವಸ್ತು. ಈ ಕರಸ್ಥಲದ ಮಹಾಘನದ ನಿಲವನು ಹೀಗೆಂದು ಅರಿವುದೆಂದನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮಸ್ತಕವ ಮುಟ್ಟಿ ನೋಡಿದಡೆ, ಮನೋಹರದಳಿವು ಕಾಣ ಬಂದಿತ್ತು! ಮುಖಮಂಡಲವ ಮುಟ್ಟಿ ನೋಡಿದಡೆ, ಮೂರ್ತಿಯ ಅಳಿವು ಕಾಣ ಬಂದಿತ್ತು! ಕೊರಳ ಮುಟ್ಟಿ ನೋಡಿದಡೆ, ಗರಳಧರನ ಇರವು ಕಾಣ ಬಂದಿತ್ತು! ತೋಳುಗಳ ಮುಟ್ಟಿ ನೋಡಿದಡೆ, ಶಿವನಪ್ಪುಗೆ ಕಾಣ ಬಂದಿತ್ತು! ಉರಸ್ಥಲವ ಮುಟ್ಟಿ ನೋಡಿದಡೆ, ಪರಸ್ಥಲದಂಗಲೇಪ ಕಾಣ ಬಂದಿತ್ತು ಬಸಿರ ಮುಟ್ಟಿ ನೋಡಿದಡೆ, ಬ್ರಹ್ಮಾಂಡವ ಕಾಣ ಬಂದಿತ್ತು! ಗುಹ್ಯವ ಮುಟ್ಟಿ ನೋಡಿದಡೆ, ಕಾಮದಹನ ಕಾಣ ಬಂದಿತ್ತು! ಮಹಾಲಿಂಗ ತ್ರಿಪುರಾಂತಕದೇವಾ, ಮಹಾದೇವಿಯಕ್ಕನ ನಿಲುವನರಿಯದೆ ಅಳುಪಿ ಕೆಟ್ಟೆನು.
--------------
ಕಿನ್ನರಿ ಬ್ರಹ್ಮಯ್ಯ
ಅಂಬರವಿಲ್ಲದ ಮೇರು, ಅಂಬುಧಿಯಿಲ್ಲದ ಗುಂಪ ತಂದವರಿಲ್ಲದೆ ಬಂದಿತ್ತು, ನಿಜವನೊಳಕೊಂಡಿತ್ತು ಸಾಧನವಿಲ್ಲದ ಓಗರವ ಭಾಜನವಿಲ್ಲದೆ ಗಡಣಿಸಿ ಭೋಜನವಿಲ್ಲದೆ ತೃಪ್ತಿಯಾಯಿತ್ತು ನೋಡಾ. ಕ್ರಿಯಾವಿರಹಿತಯೋಗ ಫಲದಾಯಕ ಹೀನಭಕ್ತಿ, ಆಯತ ಸ್ವಾಯತವರಿಯದೆ ಹೋಯಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಆದಿಶಕ್ತಿ ಅನಾದಿಶಕ್ತಿಯೆಂಬರು ಅದನಾರು ಬಲ್ಲರಯ್ಯಾ ? `ಆದಿ' ಎಂದಡೆ ಕುರುಹಿಂಗೆ ಬಂದಿತ್ತು. `ಅನಾದಿ' ಎಂದಡೆ ನಾಮಕ್ಕೆ ಬಂದಿತ್ತು. ಆದಿಯೂ ಅಲ್ಲ ಅನಾದಿಯೂ ಅಲ್ಲ, ನಾಮವಿಲ್ಲದ ಸೀಮೆಯಿಲ್ಲದ ನಿಜಭಕ್ತಿಯೆ ಚಿಚ್ಛಕ್ತಿಯಾಯಿತ್ತು ನೋಡಾ. ಅಂತರಂಗದ ಪ್ರಭೆ ಬಹಿರಂಗವೆಲ್ಲಾ ತಾನೆಯಾಗಿ ಗುಹೇಶ್ವರಲಿಂಗದಲ್ಲಿ ಸಂದಿಲ್ಲದಿಪ್ಪ ಮಹಾದೇವಿಯಕ್ಕನ ಶ್ರೀಪಾದಕ್ಕೆ ನಮೋ ನಮೋ ಎಂಬೆನು
--------------
ಅಲ್ಲಮಪ್ರಭುದೇವರು
ಕಾಯವಿಡಿದು ಹುಟ್ಟಿದಾತ ಕಾಲಾಗ್ನಿರುದ್ರನಾಗಲಿ, ಕಾಯವಿಡಿದು ಹುಟ್ಟಿದಾತ ಕಾಮಸಂಹಾರಿಯಾಗಲಿ, ಕಾಯವಿಡಿದು ಹುಟ್ಟಿದಾತ ಅನಾದಿ ಪರಮೇಶ್ವರನಾಗಲಿ, ಅರಿವು ಸಾಧ್ಯವಾಗದು ಆರಿಗೆಯು. ಗುಹೇಶ್ವರಲಿಂಗದಲ್ಲಿ-ನೀನು ಕಾಯವಿಡಿದು ಕಲ್ಪಿತವ ಹೊದ್ದೆಯೆಂಬುದು, ಕಾಣ ಬಂದಿತ್ತು ನೋಡಾ ಚೆನ್ನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಧರೆಯ ಮೇಲಣ ಮರದಲ್ಲಿ, ಹಿರಿದಿಹ ಕೊಂಬಿನ ತುದಿಯಲ್ಲಿ, ಅರಿಬಿರಿದಿನ ಪಕ್ಷಿ ಬಂದಿತ್ತು ನೋಡಾ. ಆ ಪಕ್ಷಿಯ ವರ್ಣ, ಹಾರುವ ರಟ್ಟೆ ಕೆಂಪು, ತೋರಿಹ ರಟ್ಟೆ ಕಪ್ಪು. ಮೀರಿಹ ರಟ್ಟೆಯ ತುಟ್ಟತುದಿಯಲ್ಲಿ ನಾನಾ ವರ್ಣದ ಬಣ್ಣ. ಆ ಹಕ್ಕಿಯ ಗಳದಲ್ಲಿ ಹೇಮವರ್ಣ, ಆ ಹಕ್ಕಿಯ ತುದಿಯಲ್ಲಿ ಧವಳವರ್ಣ. ಆ ಹಕ್ಕಿಯ ಹಾರುವ ರಟ್ಟೆಯ ಕಳೆದು, ತೋರಿಹ ರಟ್ಟೆಯ ಮುರಿದು, ಮೀರಿಹ ರಟ್ಟೆ[ಯ] ಬೆಂದು, ಕೊರಳಿನ ಹಳದಿ, [ಹಾರಿ], ಕೊಕ್ಕಿನ ಬೆಳ್ಪು ನಿಃಪತಿಯಾಗಿ, ನಿಃಕಳಂಕ ಮಲ್ಲಿಕಾರ್ಜುನ ಸತ್ತನೊ.
--------------
ಮೋಳಿಗೆ ಮಾರಯ್ಯ
ಅಯ್ಯಾ, ಏನನಹುದೆಂಬೆ, ಏನನಲ್ಲಾ ಎಂಬೆ. ಕಾಯವುಳ್ಳನ್ನಕ್ಕ ಕರ್ಮ ಬಿಡದು, ಜೀವವುಳ್ಳನ್ನಕ್ಕ ಕಾರ್ಪಣ್ಯ ಕೆಡದು. ಆರ ಕೇಳಿ ಆರಿಗೆ ಹೇಳಿಹೆನೆಂದಡೂ ಭಾವದ ಭ್ರಮೆ ಬಿಡದು. ಮಹಾಸಮುದ್ರವನೀಜುವವನಂತೆ ಕರ ಕಾಲು ಆಡುವನ್ನಕ್ಕ ಜೀವಭ್ರಮೆ ನಿಂದಲ್ಲಿ ನಿಂದಿತ್ತು. ಭಾವಭ್ರಮೆ ಒಂದನರಿತು ಒಂದನರಿದೆಹೆನೆಂಬನ್ನಕ್ಕ ಬಂದಿತ್ತು ದಿನ, ಅಂಗವ ಹರಿವುದಕ್ಕೆ. ಈ ಸಂದೇಹದ ಸಂದಿಯಲ್ಲಿ ಕೆಡಹದೆ ನಿಜದಂಗವ ತೋರು ಗೋಪತಿನಾಥ ವಿಶ್ವೇಶ್ವರ ಲಿಂಗ.
--------------
ತುರುಗಾಹಿ ರಾಮಣ್ಣ
ಇನ್ನಷ್ಟು ... -->