ಅಥವಾ

ಒಟ್ಟು 66 ಕಡೆಗಳಲ್ಲಿ , 31 ವಚನಕಾರರು , 65 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಬುದಕ್ಕೆ ಮೊದಲೆ ಬಯಕೆ ಅರತು, ಕೂಡುವುದಕ್ಕೆ ಮುನ್ನವೆ ಸುಖವರತು, ಉಭಯ ನಾಮಧೇಯ ನಷ್ಟವಾದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಮಾರ್ಜಾಲನ ಹೃದಯದಲ್ಲಿ ಮೂಷಕ ಮನೆಯ ಮಾಡಿ ಇದ್ದಿತ್ತು. ಅದಕ್ಕೆ ಮಣಿಮಾಡಂಗಳಿಂದ ಆಶ್ರಯವೊಂದು ಬಾಗಿಲು ಬೇರೆ. ಅದಕ್ಕೆ ಹೋಗಿ ಆಡುವ ನಾಟಕಸಾಲೆ. ಪವನನೆಂಬ ಸೂಳೆ ಅಘಟದಿಂದ ಆಡುತ್ತಿರಲಾಗಿ, ಕಾಲುಜಾರಿ ನೆಲಕ್ಕೆ ಬಿದ್ದಳು. ಬಿದ್ದ ಘಾತಕ್ಕೆ ಯೋನಿ ಒಡೆಯಿತ್ತು, ಮೊಲೆ ಹರಿದು, ಕಿವಿ ಕಿತ್ತು, ಕಣ್ಣು ಹಿಂಚುಮುಂಚಾಯಿತ್ತು. ನೋಡುವ ಅಣ್ಣಗಳ ಬಯಕೆ ಹರಿಯಿತ್ತು. ಯೋನಿ ಕಿತ್ತಲ್ಲಿ ಕೂಟಕ್ಕೆ ಸುಖವಿಲ್ಲ, ನೋಟಕ್ಕೆ ಬೆಂಬಳಿಯಿಲ್ಲ. ಪವನನ ಅಘಟ ಹೋಯಿತ್ತು, ಕಾಲನ ಕಮಟಕ್ಕೆ. ನೀ ಅಲೇಖನಾದ ಶೂನ್ಯ, ಇವರಾಟದ ಬೆಂಬಳಿಯ ಬಿಡಿಸು, ಕಲ್ಲಿನೊಳಗಿಂದ ಇತ್ತ ಬಾರಯ್ಯಾ.
--------------
ವಚನಭಂಡಾರಿ ಶಾಂತರಸ
ಅರಸುವಂಗೆ ಅರಸುವಂಗೆ ಅರಕೆ ತಾನಹುದು, ದೇವಾ ! ಬಯಸುವಂಗೆ ಬಯಸುವಂಗೆ ಬಯಕೆ ತಾನಹುದು, ದೇವಾ ! ನೀವು ಭಾವಿಸಿದಂತಲ್ಲದೆ ಬೇರೊಂದಾಗಬಲ್ಲುದೆ ? ಈರೇಳು ಭುವನಸ್ಥಾಪ್ಯ ಪ್ರಾಣಿಗಳೆಲ್ಲ ನಿಮ್ಮಿಂದಲಾದವಾಗಿ. ನಿಮ್ಮಿಂದಲಹುದಾಗದೆಂಬ ಸಂದೇಹವುಂಟೆ ಬಸವಣ್ಣ ? ನಿಮ್ಮಡಿಗಳೆಂದಂತೆ, ನೆನೆದಂತೆ, ನೋಡಿದಂತೆ, ತಪ್ಪದು. ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ ಪ್ರಭುವಿನಾಣೆ ಕಟ್ಟು ಗುಡಿಯನು.
--------------
ಚನ್ನಬಸವಣ್ಣ
ವಿರಕ್ತನೆನಿಸುವಂಗಾವುದು ಚಿಹ್ನೆವೆಂದೊಡೆ : ವಿಷಯವಿಕಾರವ ಸುಟ್ಟಿರಬೇಕು. ಬಯಕೆ ನಿರ್ಬಯಕೆಯಾಗಿರಬೇಕು. ಸ್ತ್ವರಜತಮವೆಂಬ ತ್ರೈಗುಣಂಗಳನಿಟ್ಟೊರಸಿರಬೇಕು. ಅದೆಂತೆಂದೊಡೆ : ``ವಿಕಾರಂ ವಿಷಯಾತ್‍ದೂರಂ ರಕಾರಂ ರಾಗವರ್ಜಿತಂ | ತಕಾರಂ ತ್ರೈಗುಣಂ ನಾಸ್ತಿ ವಿರಕ್ತಸ್ಯ ಸುಲಕ್ಷಣಂ ||'' ಇಂತಪ್ಪ ವಿರಕ್ತನ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಬಯಸುವೆನಯ್ಯಾ ನಿನ್ನವರ ಸಂಗವ ಎಳಸುವೆನಯ್ಯಾ ನಿನ್ನವರ ಸಂಗಕ್ಕೆ ಬಯಕೆ ಬೇರನ್ಯಕ್ಕೆಳಸದಂತೆ ಹರುಷಿತನ ಮಾಡಯ್ಯಾ ಭಕ್ತಿಯೊಳಗೆ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಅಹಂಕಾರವರತಲ್ಲದೆ ಗುರುಭಕ್ತನಲ್ಲ, ಬಯಕೆ ಹಿಂಗಿಯಲ್ಲದೆ ಶಿವಲಿಂಗಪೂಜಕನಲ್ಲ, ತ್ರಿವಿಧ ಮಲತ್ರಯದ ಬಲುಹುಳ್ಳನ್ನಕ್ಕ ಚರಸೇವಿಯಲ್ಲ. ಇಂತೀ ಗುಣಂಗಳಲ್ಲಿ ನಿಶ್ಚಯವಾದಲ್ಲದೆ, ಅಮರೇಶ್ವರಲಿಂಗವನರಿಯಬಾರದು.
--------------
ಆಯ್ದಕ್ಕಿ ಮಾರಯ್ಯ
ಸದ್ಭಕ್ತನ ಆಚರಣೆಯ ಕ್ರೀಯೆಂತುಂಟೆಂದಡೆ: ಜಂಗಮದ ಪಾದೋದಕ ಲಿಂಗಕ್ಕೆ ಮಜ್ಜನವ ಮಾಡುವಲ್ಲಿ ಜಂಗಮದ ಕುಂದು ನಿಂದೆಯ ಕೇಳಬಾರದು. ಜಂಗಮಪ್ರಸಾದವ ಲಿಂಗಕ್ಕೆ ಕೊಡುವಲ್ಲಿ ಅರ್ಥ ಪ್ರಾಣ ಅಬ್ಥಿಮಾನವ ಮುಟ್ಟಿದಲ್ಲಿ ಚಿತ್ತದಲ್ಲಿ ಹೆಚ್ಚು ಕುಂದು ತೋರಿದಾಗಲೆ ಪ್ರಸಾದಕ್ಕೆ ದೂರ. ಇದು ಕಾರಣ, ದೇಹಭಾವವಳಿದವಂಗಲ್ಲದೆ ಪಾದೋದಕ ಪ್ರಸಾದವಿಲ್ಲಾ ಎಂದೆ. ವಿಶ್ವಾಸವುಂಟಾದಲ್ಲಿ ಕುರುಹಿನ ಮುದ್ರೆಯ ಬಯಕೆ ಉಂಟೆ ಅಯ್ಯಾ? ಅವಿಶ್ವಾಸವುಳ್ಳವಂಗೆ ಗುರುಚರದ ಮಾರ್ಗವಿಲ್ಲಾಯೆಂದೆ. ಸದಾಶಿವಮೂರ್ತಿಲಿಂಗವ ಹೀಗರಿವುದಕ್ಕೆಠಾವ ಕಾಣೆ.
--------------
ಅರಿವಿನ ಮಾರಿತಂದೆ
ಅವನು ಅವಳು ಅದು ನಾನೆಂಬ ಜ್ಯೋತಿ ಅಡಗಿತ್ತಾಗಿ ಕರ್ಮ ನಷ್ಟ. ರೂಪ ನಿರೂಪೆಂಬುದು ಕೆಟ್ಟುದಾಗಿ ಮಾಯೆ ನಷ್ಟ. ಅರಿವು ತಲೆದೋರಿತ್ತಾಗಿ ಆಣವ ನಷ್ಟ. ಶಿವಪ್ರಕಾಶವಾದ ಕಾರಣ ತಿರೋಧಾನಶಕ್ತಿ ನಷ್ಟ. ಫಲಪದವಿಗಳು ಬಯಕೆ ಹಿಂಗಿತ್ತಾಗಿ ಇಚ್ಛಾಶಕ್ತಿ ನಷ್ಟ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಬೇಡಿ ಮಾಡುವ ಭಕ್ತನ ಇರವೆಂತೆಂದಡೆ: ಆ ಗಳಿಗೆಯಲ್ಲಿ ಆ ದ್ರವ್ಯ ಸಂದು ಈಗ-ಆಗವೆಂಬ ಬೈಕೆಯ ಮರೆದು, ಸತಿಸುತರಿಗೆಂದೆನ್ನದೆ, ಇಂತೀ ಭಕ್ತಿಯೆ ಗತಿಯಾಗಿ, ಸತ್ಯವೆ ಒಡಲಾಗಿ, ಇಂತೀ ಗುಣದಲ್ಲಿ ನಿತ್ಯ-ಅನಿತ್ಯವ ಅಳಿದು ಮಾಡುವ ಸದ್ಭಕ್ತ ಬೇಡಿ[ದ]ನೆಂಬ ಭಾವವಿಲ್ಲ. ಆ ದ್ರವ್ಯ ಏಲೇಶ್ವರಲಿಂಗದ ಬೈಚಿಟ್ಟ ಬಯಕೆ.
--------------
ಏಲೇಶ್ವರ ಕೇತಯ್ಯ
ತನುವಿನಲ್ಲಿಪ್ಪ ಲೋಭವ ಮನವ ಕದ್ದು ಮಾತನಾಡಿದಡೆ ಆ ತನುವೆ ಮನೋರೂಪವಾಗಿ ಕಾಣಬರುತ್ತದೆ. ಆ ಮನದಲ್ಲಿ ಬಯಕೆ ಸಮರತಿಯಾಗದಾಗಿ; ಕಾಮ(ಯ?)ದ ಕರುಳು ಲೋಭದ ಬಯಕೆಯೊಳಗದೆ. ಅರಿದೆನೆಂದು ಬರುಮಾತ ನುಡಿದಡೆ ನಮ್ಮ ಗುಹೇಶ್ವರಲಿಂಗವು ಮೆಚ್ಚ ನೋಡಾ ಮಡಿವಾಳ ಮಾಚಯ್ಯಾ.
--------------
ಅಲ್ಲಮಪ್ರಭುದೇವರು
ಹರಿಗೆ ಇಂದ್ರನೀಲಲಿಂಗ, ಬ್ರಹ್ಮಂಗೆ ಶೈಲಲಿಂಗ, ಶಕ್ರಂಗೆ ಮಣಿಮಯಲಿಂಗ, ಸೂರ್ಯಂಗೆ ತಾಮ್ರಲಿಂಗ, ಸೋಮಂಗೆ ಮೌಕ್ತಿಕಲಿಂಗ, ಕುಬೇರಂಗೆ ಹೇಮಲಿಂಗ, ನಾಗರ್ಕಳಿಗೆ ಪವಳದ ಲಿಂಗ, ಅಷ್ಟವಸುಗಳಿಗೆ ಕಂಚಿನ ಲಿಂಗ, ವರುಣಂಗೆ ರತ್ನದ ಲಿಂಗ, ನೈರುತ್ಯಂಗೆ ಪರುಷದ ಲಿಂಗ, ವಾಯವ್ಯಗೆ ಹಿತ್ತಾಳಿಯ ಲಿಂಗ, ಕಾಮಂಗೆ ಕುಸುಮ ಲಿಂಗ, ಋಷಿಗಳಿಗೆ ಪರ್ವತದ ಲಿಂಗ, ಅಸುರರಿಗೆ ಕಬ್ಬುನದ ಲಿಂಗ, ದಶರಥಗೆ ಸುವರ್ಣದ ಲಿಂಗ, ಅಶ್ವಿನಿಗೆ ಕರಪಾತ್ರೆಯ ಲಿಂಗ, ಅಂತಕಂಗೆ ಪರಿಪರಿಯ ಲಿಂಗ, ಗಾಯತ್ರಿಗೆ ಮರಕತದ ಲಿಂಗ, ಚಾಮುಂಡಿಗೆ ವಜ್ರದ ಲಿಂಗ, ಭೂದೇವಿಗೆ ಪಚ್ಚದ ಲಿಂಗ, ದುರ್ಗಿಗೆ ಕನಕದ ಲಿಂಗ, ಸಪ್ತಮಾತೃಕೆಯರಿಗೆ ಮಳಲ ಲಿಂಗ, ಇದೆಂತೆಂದಡೆ: ಇಂದ್ರನೀಲಮಯಂ ಲಿಂಗಂ ವಿಷ್ಣುಃ ಪೂಜಯತೇ ಸದಾ ವಿಷ್ಣುತ್ವಂ ಪ್ರಾಪ್ಯತೇ ತೇನ ಸಾದ್ಭುತೈಕಂ ಸನಾತನಂ ಬ್ರಹ್ಮಾ ಪೂಜಯತೇ ನಿತ್ಯಂ ಲಿಂಗಂ ಶೈಲಮಯಂ ಶುಭಂ ತಸ್ಯ ಸಂಪೂಜನಾದೇವ ಪ್ರಾಪ್ತಂ ಬ್ರಹ್ಮತ್ವಮುತ್ತಮಂ ಶಕ್ರೋ[s]ಪಿ ದೇವ ರಾಜೇಂದ್ರೋ ಲಿಂಗಂ ಮೃಣ್ಮಯಂ ಶುಭಂ ಭಕ್ತ್ಯಾ ಪೂಜಯತೇ ನಿತ್ಯಂ ತೇನ ಶಕ್ರತ್ವಮಾಪ್ನುಯಾತ್ ತಾಮ್ರಲಿಂಗಂ ಸದಾಕಾಲಂ ಭಕ್ತ್ಯಾ ದೇವೋ ದಿವಾಕರಃ ತ್ರಿಕಾಲಂ ಯಜತೇ ತೇನ ಪ್ರಾಪ್ತಂ ಸೂರ್ಯತ್ವಮುತ್ತಮಂ ಮುಕ್ತಾಫಲಮಯಂ ಲಿಂಗಂ ಸೋಮಃ ಪೂಜಯತೇ ಸದಾ ತೇನ ಸೋಮೇನ ಸಂಪ್ರಾಪ್ತಂ ಸೋಮತ್ವಂ ಸತತೋಜ್ವಲಂ ಲಿಂಗ ಹೇಮಮಯಂ ಕಾಂತಂ ಧನದೋ[s]ರ್ಚಯತೇ ಸದಾ ತೇನ ಸಾಧನತೋ ದೇವಃ ಧನದತ್ವಮವಾಪ್ತವಾನ್ ವಸವಃ ಕಾಂಸ್ಯಕಂ ಲಿಂಗಂ ಪೂಜ್ಯ ಕಾಮಾನವಾಪ್ನುಯಾತ್ ನಾಗಾಃ ಪ್ರವಾಳಜಂ ಲಿಂಗಂ ಪೂಜ್ಯ ರಾಜ್ಯಾನಿ ಲೇಬ್ಥಿರೇ ಲಿಂಗಂ ರತ್ನಮಯಂ ಚಾರು ವರುಣೋಡಿರ್ಚಯತೇ ಸದಾ ತೇನ ತದ್ವರುಣತ್ವಂ ಹಿ ಪ್ರಾಪ್ತಂ ಭದ್ರಸಮನ್ವಿತಂ ಲಿಂಗಮಧ್ಯೇ ಜಗತ್ಸರ್ವಂ ಸರ್ವಂ ಲಿಂಗೇ ಪ್ರತಿಷ್ಠಿತಂ ತಸ್ಮಾತ್ ಸಂಪೂಜಯೇಲ್ಲಿಂಗಂ ಯದಿ ಚೇತ್ಸಿದ್ಧಿಮಾತ್ಮನಃ ಐವಂ ದೇವಾಶ್ಚ ಗಂಧರ್ವಾ ಯಕ್ಷೋರಗರಾಕ್ಷಸಾಃ ಪೂಜಯಂತಿ ಸದಾಕಾಲಮೀಶಾನಂ ಸುರನಾಯಕಂ ಬ್ರಹ್ಮಾವಿಷ್ಣುಸ್ತಥಾ ಶಕ್ರೋ ಲೋಕಪಾಲಾಶ್ಚ ದೇವತಾಃ ಲಿಂಗಾರ್ಚನರತಾ ಹ್ಯೇತೇ ಮಾನುಷೇಷು ಚ ಕಾ ಕಥಾ ? ಇಂತೆಂದುದಾಗಿ ಸುರಪ ಹರಿ ವಿರಂಚಿ ಗಂಧರ್ವ ಯಕ್ಷ ರಾಕ್ಷಸ ಋಷಿ ದೇವತೆಗಳೆಲ್ಲರೂ ಲಿಂಗವ ಪೂಜಿಸಿ ಇಷ್ಟಕಾಮ್ಯಸಿದ್ಧಿಯ ಪಡೆದು ಭವಭಾರಿಗಳಾದರು. ಸೌರಾಷ್ಟ್ರ ಸೋಮೇಶ್ವರನ ಶರಣರು ಫಲಪದಂಗಳ ಮೀರಿ ಅರಿಕೆಯರತು ಬಯಕೆ ಬರತು ಹುಟ್ಟುಗೆಟ್ಟು ಭವಹಿಂಗಿ ಅಭಂಗರಾದರು
--------------
ಆದಯ್ಯ
ಬ್ರಹ್ಮಂಗೆ ಸರಸ್ವತಿಯಾಗಿ ಕಾಡಿತ್ತು ಮಾಯೆ. ವಿಷ್ಣುವಿಂಗೆ ಲಕ್ಷ್ಮಿಯಾಗಿ ಕಾಡಿತ್ತು ಮಾಯೆ. ರುದ್ರಂಗೆ ಉಮಾದೇವಿಯಾಗಿ ಕಾಡಿತ್ತು ಮಾಯೆ. ಎನಗೆ ನಿಮ್ಮನರಿವ ಬಯಕೆ ಭವಮಾಯೆಯಾಗಿ ಕಾಡುತ್ತದೆ. ನೀನಾನುಳ್ಳನ್ನಕ್ಕ ಉಭಯವು ಮಾಯೆಯಾಗಿದೆ, ಸದಾಶಿವಮೂರ್ತಿಲಿಂಗವು ನಾ ನೀನೆಂಬುದೆ ಮಾಯೆ.
--------------
ಅರಿವಿನ ಮಾರಿತಂದೆ
ಕುಂಡಲಿಯೆಂಬ ಆಧಾರದಲ್ಲಿ ಜಲ ತೇಜ ವಾಯುವೆಂಬ ತ್ರಿವಿಧ ಕೂಡಿ ಕಮಂಡಲ ಹುಟ್ಟಿತ್ತು. ಅದಕ್ಕೆ ಬಾಯಿ ಮೂರು ಹೆಡೆಯಾರು. ಜೂಳಿಯೊಂದರಲ್ಲಿ ಉದಕವ ಕೊಳುತಿರಲಾಗಿ ಆ ಹಸುವಿನ ತೃಷೆಯಡಗಿ ಬಯಕೆ ಸಲೆ ಬತ್ತಿದಲ್ಲಿ ಮಹಾಗಣನಾಥನ ಐವತ್ತೆರಡು ಸರ ಹರಿದವು. ಮೂವತ್ತಾರು ಮಣಿ ಕೆಟ್ಟವು; ಇಪ್ಪತ್ತೈದು ಮಣಿ ಪುಂಜವಾಯಿತ್ತು. ಆರು ನಾಯಕರತ್ನ ಎಲ್ಲಿ ಅಡಗಿತ್ತೆಂದರಿಯೆ. ಮೂರು ರತ್ನವ ಕಂಡೆ: ಒಂದು ಉಲಿವುದು, ಒಂದು ಉರಿವುದು, ಒಂದು ಬೆಳಗು ನಂದಿಹುದು. ಇಂತೀ ತ್ರಿವಿಧಂಗವ ಕಂಡು ಈ ಅಂಗದ ಮಣಿಯ ಒಂದೊಂದ ಪೋಣಿಸಲಾರದೆ ಈ ದಿನಮಣಿಯ ವಿರಳವ ತೋರಿಸಾ ಗೋರಕ್ಷಪಾಲಕ ಮಹಾಪ್ರಭು ಸಿದ್ಧಸೋಮನಾಥಲಿಂಗವೆ.
--------------
ಗೋರಕ್ಷ / ಗೋರಖನಾಥ
ಉತ್ತರ, ದಕ್ಷಿಣ , ಪೂರ್ವ, ಪಶ್ಚಿಮ ನಾಲ್ಕು ಪಥವನು ಏಕವ ಮಾಡಿ, ಊಧ್ರ್ವಮುಖವ ಮಾಡಿ, ಈಡಾ ಪಿಂಗಳ ನಾಳಮಂ ಕಟ್ಟಿ, ಸುಷಮ್ನನಾಳವಂ ಎತ್ತಿ , ಮನ ಪವನ ಬಿಂದು ಒಡಗೂಡಿ, ಚಂದ್ರ ಸೂರ್ಯ ಶಿಖಿಯರಂ ಮುಪ್ಪುರಿಯ ಮಾಡಿ, ಒಡಗೂಡಿ ಏಕವಾಗಿ ಹುರಿಗೂಡಿ, ಮತ್ರ್ಯಲೋಕವ ಬಿಟ್ಟು, ದೇವಲೋಕವ ಮೆಟ್ಟಿನಿಂದು, ಭಾವ ಬಯಲಾಗಿ, ಬಯಕೆ ಸವೆದು, ಇನ್ನು ಈ ಲೋಕದೊಳಗೆ ಬಂದು ಬದುಕಿದೆನೆಂಬುದನಕ್ಕೆ ಹೇಯ ಹುಟ್ಟಿ, ಇದಾವುದನೂ ಒಲ್ಲದಿರ್ಪರು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಸತ್ತ ಹೆಣ ಕೂಗಿದುದುಂಟು, ಬೈತಿಟ್ಟ ಬಯಕೆ ಕರೆದುದುಂಟು, ಹೆಪ್ಪಿಟ್ಟ ಹಾಲು ಗಟ್ಟಿಗೊಂಡು ಸಿಹಿಯಾದುದುಂಟು. ಇದ ನಿಶ್ಚೈಸಿ ನೋಡಿ ಚೆನ್ನಮಲ್ಲಿಕಾರ್ಜುನದೇವರಲ್ಲಿ.
--------------
ಅಕ್ಕಮಹಾದೇವಿ
ಇನ್ನಷ್ಟು ... -->