ಅಥವಾ

ಒಟ್ಟು 60 ಕಡೆಗಳಲ್ಲಿ , 10 ವಚನಕಾರರು , 14 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನಂತರಂಗದ ಜ್ಯೋತಿಯೆ ಬಸವಣ್ಣನಯ್ಯಾ, ಎನ್ನ ಬಹಿರಂಗದ ಜ್ಯೋತಿಯೆ ಚೆನ್ನಬಸವಣ್ಣನಯ್ಯಾ, ಎನ್ನ ಸರ್ವಾಂಗದ ಜ್ಯೋತಿಯೆ ಪ್ರಭುದೇವನಯ್ಯಾ, ಇಂತಿವರ ಶ್ರೀಪಾದದಲ್ಲಿ ಉರಿ ಕರ್ಪುರ ಸಂಯೋಗದಂತೆ ಬೆರೆಸಿದೆನಯ್ಯಾ ಉಳಿಯುಮೇಶ್ವರಾ.
--------------
ಉಳಿಯುಮೇಶ್ವರ ಚಿಕ್ಕಣ್ಣ
ಸದ್ಯೋಜಾತಮುಖವೆ ಎನಗೆ ಬಸವಣ್ಣನಯ್ಯಾ, ವಾಮದೇವಮುಖವೆ ಎನಗೆ ಚೆನ್ನಬಸವಣ್ಣನಯ್ಯಾ, ಅಘೋರಮುಖವೆ ಎನಗೆ ಮಡಿವಾಳಯ್ಯನಯ್ಯಾ, ತತ್ಪುರುಷಮುಖವೆ ಎನಗೆ ಸಿದ್ಧರಾಮಯ್ಯನಯ್ಯಾ, ಈಶಾನಮುಖವೆ ಎನಗೆ ಪ್ರಭುದೇವರಯ್ಯಾ, ಹೃದಯದ ಮುಖವೆ ಎನಗೆ ಗಣಂಗಳಯ್ಯಾ. ಇಂತಿವರ ಶ್ರೀಚರಣದಲ್ಲಿ ಉರಿಯುಂಡ ಕರ್ಪುರದಂತೆ ಬೆರಸಿದೆನಯ್ಯಾ ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಭಕ್ತಿಗೆ ಭಕ್ತ ಬಸವಣ್ಣನಯ್ಯಾ. ಮುಕ್ತಿಗೆ ಯುಕ್ತ ಬಸವಣ್ಣನಯ್ಯಾ. ಮುಕ್ತಿಗೆ ಮುಕ್ತ ಬಸವಣ್ಣನಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ಎನ್ನಂತರಂಗವೆ ಬಸವಣ್ಣನಯ್ಯಾ. ಎನ್ನ ಬಹಿರಂಗವೆ ಚೆನ್ನಬಸವಣ್ಣನಯ್ಯಾ. ಎನ್ನ ಸರ್ವಾಂಗವೆ ಪ್ರಭುದೇವರಯ್ಯಾ. ಇಂತಿವರ ಕರುಣದ ಕಂದನಾಗಿ ಬದುಕಿದೆನಯ್ಯಾ, ತ್ರಿಪುರಾಂತಕ ಲಿಂಗದಲ್ಲಿ ಗಾವುದಿ ಮಾಚಯ್ಯ ಹೇಳಿದುದದಿಟವೆನ್ನಿರಣ್ಣಾ.
--------------
ಗಾವುದಿ ಮಾಚಯ್ಯ
ಶ್ರೀಗುರುಲಿಂಗದಲ್ಲಿ ಬಸವಣ್ಣನ ಕಂಡೆನು, ಬಸವಣ್ಣನಲ್ಲಿ ಶ್ರೀಗುರುಲಿಂಗವ ಕಂಡೆನು. ಶಿವಲಿಂಗದಲ್ಲಿ ಬಸವಣ್ಣನ ಕಂಡೆನು, ಬಸವಣ್ಣನಲ್ಲಿ ಶಿವಲಿಂಗವ ಕಂಡೆನು. ಜಂಗಮಲಿಂಗದಲ್ಲಿ ಬಸವಣ್ಣನ ಕಂಡೆನು. ಬಸವಣ್ಣನಲ್ಲಿ ಜಂಗಮಲಿಂಗವ ಕಂಡೆನು. ಪ್ರಸಾದದಲ್ಲಿ ಬಸವಣ್ಣನ ಕಂಡೆನು, ಬಸವಣ್ಣನಲ್ಲಿ ಪ್ರಸಾದವ ಕಂಡೆನು. ಈ ಚತುರ್ವಿಧದಲ್ಲಿ ಬಸವಣ್ಣನ ಕಂಡೆನು, ಬಸವಣ್ಣನಲ್ಲಿ ಚತುರ್ವಿಧವ ಕಂಡೆನು. ಇಂತಹ ಮಹಾಮಹಿಮರುಂಟೆ? ಶಿವ ಶಿವಾ, ಮಹಾದೇವ, ಇಂತಹ ಸದ್ಭಕ್ತರುಂಟೆ? ಇದು ಕಾರಣ, ಶ್ರೀಗುರುಲಿಂಗವೂ ಬಸವಣ್ಣನೇ, ಶಿವಲಿಂಗವೂ ಬಸವಣ್ಣನೇ, ಜಂಗಮಲಿಂಗವೂ ಬಸವಣ್ಣನೇ, ಪ್ರಸಾದಲಿಂಗವೂ ಬಸವಣ್ಣನೇ. ಇಷ್ಟಲಿಂಗವೂ ಬಸವಣ್ಣನೇ, ಪ್ರಾಣಲಿಂಗವೂ ಬಸವಣ್ಣನೇ, ಭಾವಲಿಂಗವೂ ಬಸವಣ್ಣನೇ, ಆಚಾರಲಿಂಗವೂ ಬಸವಣ್ಣನೇ, ಮಹಾಲಿಂಗವೂ ಎನಗೆ ಬಸವಣ್ಣನಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಇಂದ್ರಾದಿ ದೇವತಾ ಸಂಕುಳಕ್ಕೆ ಅಂತಪ್ಪ ಪದವನಿತ್ತಾತ ಬಸವಣ್ಣನಯ್ಯಾ. ಬ್ರಹ್ಮ-ವಿಷ್ಣು ಮೊದಲಾದ ದೇವತಾಮೊತ್ತಕ್ಕೆ ಅಂತಪ್ಪ ಪದವನಿತ್ತಾತ ಬಸವಣ್ಣನಯ್ಯಾ. ಶಿವಲಿಂಗಭಕ್ತರಿಗೆ ಚರಲಿಂಗಧಾರಣೆಯ ಪರಿಯಾಯಂದಿದಲೊರೆದಾತ ಗುರು. ಇಹಲೋಕ ಪರಲೋಕದನುಮಿಷದ ಸುದ್ದಿಯನರುಹಿದಾತ ಗುರು ಬಸವಣ್ಣನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ಎನ್ನ ಕರಸ್ಥಲವೇ ಬಸವಣ್ಣನಯ್ಯಾ. ಎನ್ನ ಮನಸ್ಥಲವೇ ಚೆನ್ನಬಸವಣ್ಣನಯ್ಯಾ. ಎನ್ನ ಭಾವಸ್ಥಲವೇ ಪ್ರಭುದೇವರಯ್ಯಾ. ಇಂತೆನ್ನ ಕರ ಮನ ಭಾವಂಗಳಲ್ಲಿ ಇಷ್ಟ ಪ್ರಾಣ ಭಾವಂಗಳು ತಲ್ಲೀಯವಾಗಿ ಮಹಾಲಿಂಗ ಗಜೇಶ್ವರಾ, ನಿಮ್ಮ ಶರಣರ ಘನವನು ಎನ್ನ ಸರ್ವಾಂಗದಲಿ ಕಂಡು ಪರಮಸುಖಿಯಾಗಿರ್ದೆನು.
--------------
ಗಜೇಶ ಮಸಣಯ್ಯ
ರತ್ನಪರೀಕ್ಷೆಯ ಮಾಡುವ ಅಣ್ಣಗಳೆಲ್ಲ ದಿಮ್ಮಿದರಯ್ಯ. ಬಲ್ಲಿದ ಬೆಲೆ ಎಂದೆಡೆ ಹುಲುಕಡ್ಡಿಯೊಳೈತೆ; ಬೆಲೆ ಇಲ್ಲದುದೆಂದಡೆ ಬಲ್ಲವರ ಮುಂದುಗೆಡಿಸುತೈತೆ. ಇದರ ಬೆಲೆಯ ಬಲ್ಲ ನಮ್ಮ ಬಸವಣ್ಣನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ
--------------
ಸಿದ್ಧರಾಮೇಶ್ವರ
ಗುರುವಿನಲ್ಲಿ ಲಿಂಗವುಂಟು, ಜಂಗಮವುಂಟೆಂದು ಗುರುಭಕ್ತಿಯ ಮಾಡೆಂದು ತೋರಿದಾತ ನಮ್ಮ ಬಸವಣ್ಣನಯ್ಯಾ. ಲಿಂಗದಲ್ಲಿ ಜಂಗಮವುಂಟೆಂದು, ಗುರುವುಂಟೆಂದು ಲಿಂಗಭಕ್ತಿಯ ಮಾಡೆಂದು ತೋರಿದಾತ ನಮ್ಮ ಬಸವಣ್ಣನಯ್ಯಾ. ಜಂಗಮದಲ್ಲಿ ಗುರುವುಂಟು, ಲಿಂಗವುಂಟು ಜಂಗಮ ಭಕ್ತಿಯ ಮಾಡೆಂದು ತೋರಿದಾತ ನಮ್ಮ ಬಸವಣ್ಣನಯ್ಯಾ. ಒಂದೇ ಮೂರ್ತಿ ಮೂರೆಂದಾತ ನಮ್ಮ ಬಸವಣ್ಣನಯ್ಯಾ. `ಏಕಮೂರ್ತಿ ತ್ರಯೋರ್ಭಾಗಾಃ' ಎಂದುದಾಗಿ, ಗುರು ಲಿಂಗಜಂಗಮವಾದಾತ ಒಬ್ಬನೆ ಶಿವನೆಂದು ಪ್ರಸಾರ ಮಾಡಿ ಭಕ್ತಿಯ ಬೆಳಸಿದಾತ ನಮ್ಮ ಬಸವಣ್ಣನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಆರೂಢದ ಮನದಲ್ಲಿ ನೀನೆ ನಿಂದ ಕಾರಣ ತೋರುವ ಶಿವಜ್ಞಾನದ ದೀಪ್ತಿ ಬಸವಣ್ಣನಯ್ಯಾ; ತೋರುವ ಬೀರುವ ಐಕ್ಯದ ಭಕ್ತಿ ಬಸವಣ್ಣನದಯ್ಯಾ, ನಿಜದಲ್ಲಿ ನಿಂದು ನಿರ್ವಯಲಾಯಿತ್ತಯ್ಯಾ ಬಸವಣ್ಣನ ಕರುಣದಿಂದ ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ಬಸವಣ್ಣನೇ ತಾಯಿ, ಬಸವಣ್ಣನೇ ತಂದೆ, ಬಸವಣ್ಣನೇ ಪರಮಬಂಧುವೆನಗೆ. ವಸುಧೀಶ ಕಪಿಲಸಿದ್ಧಮಲ್ಲಿಕಾರ್ಜುನ, ನಿಮ್ಮ ಹೆಸರಿಟ್ಟ ಗುರು ಬಸವಣ್ಣನಯ್ಯಾ.
--------------
ಸಿದ್ಧರಾಮೇಶ್ವರ
ಎನ್ನ ಬ್ರಹ್ಮರಂಧ್ರದಲ್ಲಿ ಅಖಂಡಿತನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಉತ್ತಮಾಂಗದಲ್ಲಿ ಗಂಗಾಧರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಲಲಾಟದಲ್ಲಿ ಮಹಾದೇವನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಪಶ್ಚಿಮ[ಚಕ್ರ]ದಲ್ಲಿ ಪಂಚಮುಖನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಕರ್ಣದಲ್ಲಿ ಶ್ರುತಿಪುರಾಣಪ್ರಿಯನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಕರ್ಣದಲ್ಲಿ ಪಾರ್ವತೀಪ್ರಿಯನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ ಎನ್ನ ಬಲದ ನಯನದಲ್ಲಿ ತ್ರಿಪುರಸಂಹರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ನಯನದಲ್ಲಿ ಕಾಮಸಂಹರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ನಾಸಿಕದಲ್ಲಿ ನಾಗಭೂಷಣನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಜಿಹ್ವೆಯಲ್ಲಿ ಭವಹರರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಕಂಠದಲ್ಲಿ ಲೋಕೇಶ್ವರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಭುಜದಲ್ಲಿ ಸದಾಶಿವನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಭುಜದಲ್ಲಿ ಮೃತ್ಯುಂಜಯನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ತೋಳಿನಲ್ಲಿ ಶೂಲಪಾಣಿಯೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ತೋಳಿನಲ್ಲಿ ಕೋದಂಡನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಮೊಳಕೈಯಲ್ಲಿ ಪರಬ್ರಹ್ಮಸ್ವರೂಪನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಮೊಳಕೈಯಲ್ಲಿ ವಿಶ್ವಕುಟುಂಬಿ ಎಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಮುಂಗೈಯಲ್ಲಿ ಕರೆಕಂಠನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಮುಂಗೈಯಲ್ಲಿ ಶ್ರೀಕಂಠನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಅಂಗೈಯಲ್ಲಿ ನಿಧಾಂಕನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಅಂಗೈಯಲ್ಲಿ ವೇದಾಂಕನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಹೃದಯದಲ್ಲಿ ಮಾಹೇಶ್ವರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಪಾಶ್ರ್ವದಲ್ಲಿ ದಕ್ಷಸಂಹರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಪಾಶ್ರ್ವದಲ್ಲಿ ಕಾಲಸಂಹರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬೆನ್ನಿನಲ್ಲಿ ಭೂತೇಶ್ವರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ನಾಭಿಯಲ್ಲಿ ಶಂಕರನೆಂಬ ರುದ್ರನಾಗಿ, ಬಂದು ನಿಂದಾತ ಬಸವಣ್ಣನಯ್ಯಾ, ಎನ್ನ ಗುಹ್ಯದಲ್ಲಿ ವಿಷ್ಣುಪ್ರಿಯನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಗುದದಲ್ಲಿ ಬ್ರಹ್ಮಪ್ರಿಯನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ತೊಡೆಯಲ್ಲಿ ಪ್ರಕಾಶನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ತೊಡೆಯಲ್ಲಿ ಸ್ಫಟಿಕಪ್ರಕಾಶನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಮಣಿಪಾದದಲ್ಲಿ ಫಣಿಭೂಷಣನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಮಣಿಪಾದದಲ್ಲಿ ರುಂಡಮಾಲಾಧರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಹದಡಿನಲ್ಲಿ ಕಪಾಲಧರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಹದಡಿನಲ್ಲಿ ಭಿಕ್ಷಾಟನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಅಂಗುಷ*ದಲ್ಲಿ ಭೃಂಗಿಪ್ರಿಯನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಅಂಗುಷ*ದಲ್ಲಿ ನಂದಿಪ್ರಿಯನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಬಲದ ಅರೆಪಾದದಲ್ಲಿ ಪೃಥ್ವೀಪತಿಯೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಎಡದ ಅರೆಪಾದದಲ್ಲಿ ಸಚರಾಚರಪತಿಯೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಎನ್ನ ಸರ್ವಾಂಗದಲ್ಲಿ ಸರ್ವೇಶ್ವರನೆಂಬ ರುದ್ರನಾಗಿ ಬಂದು ನಿಂದಾತ ಬಸವಣ್ಣನಯ್ಯಾ; ಇಂತೀ ಮೂವತ್ತೆಂಟು ಸ್ಥಾನಂಗಳಲ್ಲಿ, ಕೂಡಲಚೆನ್ನಸಂಗಯ್ಯಾ ಬಸವಸಾಹಿತ್ಯವಾಗಿಪ್ಪುದಯ್ಯಾ.
--------------
ಚನ್ನಬಸವಣ್ಣ
ಎನ್ನ ಹೃದಯಕಮಲವೆ ಬಸವಣ್ಣನಯ್ಯಾ. ಎನ್ನ ಕಂಠವೆ ಚನ್ನಬಸವಣ್ಣನಯ್ಯಾ. ಎನ್ನ ನಯನದ ದೃಕ್ಕೆ ಸಿದ್ಭರಾಮನಯ್ಯಾ. ಎನ್ನ ಲಲಾಟವೆ ಮಡಿವಾಳಯ್ಯನಯ್ಯಾ. ಎನ್ನ ಶಿರವೆ ಪ್ರಭುದೇವರಯ್ಯಾ. ಇಂತೀ ಐವರ ಶ್ರೀಪಾದವನು ತ್ರಿಕಾಲದಲ್ಲಿ ಅರ್ಚಿಸಿ ಪೂಜಿಸಿ ನಿಶ್ಚಿಂತನಾದೆನಯ್ಯಾ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆ.
--------------
ಪ್ರಸಾದಿ ಭೋಗಣ್ಣ
ಎನ್ನ ಸ್ಥೂಲತನುವೆ ಬಸವಣ್ಣನಯ್ಯಾ. ಎನ್ನ ಸೂಕ್ಷ್ಮತನುವೆ ಚೆನ್ನಬಸವಣ್ಣನಯ್ಯಾ. ಎನ್ನ ಕಾರಣತನುವೆ ಪ್ರಭುದೇವರಯ್ಯಾ, ಇಂತಿವರ ಕರುಣದಿಂದಲಾನು ಬದುಕಿದೆನಯ್ಯಾ ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ.
--------------
ಕದಿರರೆಮ್ಮವ್ವೆ
-->