ಅಥವಾ

ಒಟ್ಟು 75 ಕಡೆಗಳಲ್ಲಿ , 34 ವಚನಕಾರರು , 73 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಗದ ಮೇಲೊಂದು ಲಿಂಗವು, ಲಿಂಗದ ಮೇಲೊಂದು ಅಂಗವು. ಆವುದು ಘನವೆಂಬೆ ? ಆವುದು ಕಿರಿದೆಂಬೆ ? ತಾಳೋಷ್ಠಸಂಪುಟಕ್ಕೆ ಬಾರದ ಘನ, ಉಭಯಲಿಂಗವಿರಹಿತವಾದ ಶರಣ. ಕೂಡಲಚೆನ್ನಸಂಗಾ ಲಿಂಗೈಕ್ಯವು.
--------------
ಚನ್ನಬಸವಣ್ಣ
ಎರದೆಲೆಯಂತೆ ಒಳಗೊಂದು ಹೊರಗೊಂದಾದಡೆ ಮೆಚ್ಚುವನೆ ಬಾರದ ಭವಂಗಳ ಬರಿಸುವನಲ್ಲದೆ ಮೆಚ್ಚುವನೆ ಅಘೋರ ನರಕವನುಣಿಸುವನಲ್ಲದೆ ಮೆಚ್ಚುವನೆ ! ಉಡುವಿನ ನಾಲಗೆಯಂತೆ ಎರಡಾದಡೆ ಕೂಡಲಸಂಗಯ್ಯ ಮೆಚ್ಚುವನೆ 102
--------------
ಬಸವಣ್ಣ
ಹುತ್ತವ ಕಂಡಲ್ಲಿ ಹಾವಾಗಿ, ನೀರ ಕಂಡಲ್ಲಿ [ಒಳ್ಳೆ]ಯಾದವನ ಮಚ್ಚುವನೆ ಬಾರದ ಭವಂಗಳಲ್ಲಿ ಬರಿಸುವನಲ್ಲದೆ ಮಚ್ಚುವನೆ ಅಘೋರನರಕವನುಣಿಸುವನಲ್ಲದೆ, ಮಚ್ಚುವನೆ ಅಟಮಟದ ಭಕ್ತರ ಕಂಡಡೆ, ಕೋಟಲೆಗೊಳಿಸುವ ಕೂಡಲಸಂಗಮದೇವ.
--------------
ಬಸವಣ್ಣ
ಉಪಮೆ ಉಪಮಿಸಲರಿಯದೆ ಉಪಮಾತೀತವೆನುತ್ತಿದ್ದಿತ್ತು. ಅರಿವು, ಅರಿವಿನ ಮರೆಯಲ್ಲಿರ್ದುದನರಿಯಲರಿಯದೆ, ಪರಾಪರವೆಂದು ನುಡಿಯುತ್ತಿದ್ದಿತ್ತು. ಧ್ಯಾನ ಧ್ಯಾನಿಸಲರಿಯದೆ, ಧ್ಯಾನರೂಪಾತೀತನೆಂದು, ತದ್ಧ್ಯಾನಗೊಂಡಿತ್ತು. ಜ್ಞಾತೃ ಜ್ಞಾನ ಜ್ಞೇಯಕ್ಕೆ ಇನ್ನಾವ ಜ್ಞಾನವೊ? ವೇದವಿಜ್ಞಾನವೆಂದುದಾಗಿ, `ತತ್ತ್ವಮಸಿ' ವಾಕ್ಯಂಗಳೆಲ್ಲವೂ ಹುಸಿಯಾಗಿ ಹೋದವು. ಸಚ್ಚಿದಾನಂದವೆಂದುದಾಗಿ ದ್ವೈತಾದ್ವೈತಿಗಳೆಲ್ಲ ಸಂಹಾರವಾಗಿ ಹೋದರು. ಬಂದೂ ಬಾರದ, ನಿಂದ ನಿರಾಳ ಗುಹೇಶ್ವರ.
--------------
ಅಲ್ಲಮಪ್ರಭುದೇವರು
ಉರಕ್ಕೆ ಜವ್ವನಗಳು ಬಾರದ ಮುನ್ನ, ಮನಕ್ಕೆ ನಾಚಿಕೆಗಳು ತೋರದ ಮುನ್ನ, ನಮ್ಮವರಂದೆ ಮದುವೆಯ ಮಾಡಿದರು; ಸಿರಿಶೈಲ ಚೆನ್ನಮಲ್ಲಿಕಾರ್ಜುನಂಗೆ. ಹೆಂಗೂಸೆಂಬ ಭಾವ ತೋರದ ಮುನ್ನ ನಮ್ಮವರಂದೆ ಮದುವೆಯ ಮಾಡಿದರು
--------------
ಅಕ್ಕಮಹಾದೇವಿ
ಕೃತ್ಯಕ್ಕೆ ಬಾರದ ಲಿಂಗವ ಕೃತ್ಯಕ್ಕೆ ತಂದವರಾರೊ ? ಅವಾಙ್ಮನಸಗೋಚರ ಲಿಂಗವ, ಬೊಬ್ಬಿಡಲು ಎಡೆದೆರಹಿಲ್ಲದ ಪರಿಪೂರ್ಣಲಿಂಗವ, ಪರಾಪರಲಿಂಗವ, ಈ ಗುರು ಕೊಟ್ಟ, ಶಿಷ್ಯ ಕೊಂಡನೆಂಬ ರಚ್ಚೆಯ ಭಂಡರ ನೋಡಾ ಕೂಡಲಚೆನ್ನಸಂಗದೇವಾ
--------------
ಚನ್ನಬಸವಣ್ಣ
ಇಂದ್ರ ನೋಡುವಡೆ ಭಗದೇಹಿ; ಚಂದ್ರ ನೋಡುವಡೆ ಗುರುಪತ್ನೀಗಮನಿ; ಉಪೇಂದ್ರ ನೋಡುವಡೆ ಬಾರದ ಭವದಲ್ಲಿ ಬಂದ ಅವತಾರಿ; ಬ್ರಹ್ಮ ನೋಡುವಡೆ ಸುಪುತ್ರೀಪತಿ ಮುನಿಗಣ ನೋಡುವಡೆ ಕುಲಹೀನರು; ಗಣಪತಿ ನೋಡುವಡೆ ಗಜಾನನ; ವೀರಭದ್ರ ನೋಡುವಡೆ ಮಹತ್ಪ್ರಳಯಾಗ್ನಿ ಸಮಕ್ರೋದ್ಥಿ; ಷಣ್ಮುಖ ನೋಡುವಡೆ ತಾರಕಧ್ವಂಸಿ. ಇವರೆಲ್ಲರು ಎಮ್ಮ ಪೂಜೆಗೆ ಬಾರರು. ನೀ ನೋಡುವಡೆ ಶ್ಮಶಾನವಾಸಿ, ರುಂಡಮಾಲಾದ್ಯಲಂಕಾರ; ನಿನ್ನ ವಾಹನ ಚಿದಂಗ ಆದಿವೃಷಭ. ನಿರೂಪಿಸಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಪ್ರಾಣಲಿಂಗವನು ಮಾಣದೆ ನೋಡಿ, ಹೂಣಿಹೋದ ಜಾಣರ ಕಾಣೆನಯ್ಯಾ ಮೂರುಲೋಕದೊಳಗೆ. ಇರ್ದು ಇಲ್ಲದ, ಬಂದು ಬಾರದ, ನಿಂದು ನಿಲ್ಲದ ಚಂದ ಚಂದದ ನಡೆಯೊಳೆಸೆಯುತ, ನುಡಿಯೊಳೊಂದಿದ ಬಿಂದು ಅಲಸದೆ ಹಿಂದು ಹಿಂದನು ಮುಂದು ಮುಂದನು ತಂದು ಆರಾದ್ಥಿಸಿ ಸುಖಿಸುವ ಗುರುನಿರಂಜನ ಚನ್ನಬಸವಲಿಂಗದಲ್ಲಿ ಅನುಭಾವಿಭಕ್ತನಲ್ಲದೆ ಮತ್ತಾರನು ಕಾಣೆನಯ್ಯಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕೃತ್ಯಕ್ಕೆ ಬಾರದ ಲಿಂಗವ ಕೃತ್ಯಕ್ಕೆ ತಂದವರಾರೊ ? ವಾಙ್ಮನಕ್ಕಗೋಚರ ಲಿಂಗ, ಬೊಟ್ಟಿಡಲೆಡೆದೆರಹಿಲ್ಲದ ಲಿಂಗ ! ಪರಾತ್ಪರಗುರು ಕೊಟ್ಟ, ಶಿಷ್ಯ ತೆಗೆದುಕೊಂಡ ಎಂಬ ರಚ್ಚೆಯ ಭಂಡರ ನೋಡಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಲಿಂಗಕ್ಕೆ ಗಿಣ್ಣಿಲ ಓಗರ, ಭಕ್ತಂಗೆ ತಳಿಗೆ ತುಂಬಿದ ಓಗರ, ಆನಿನ್ನೇವೆನಯ್ಯಾ! ಲಿಂಗವ ಕಿರಿದು ಮಾಡಿ, ಅಂಗವ ಹಿರಿದು ಮಾಡಿ, ನಾನಿನ್ನೇವೆನಯ್ಯಾ! ಲಿಂಗಕ್ಕೆ ಬಾರದ ರುಚಿ ಕೃತಕಿಲ್ಬಿಷ, ಆನಿನ್ನೇವೆನಯ್ಯಾ! ಲಿಂಗಕ್ಕೆ ಬಾರದ ಭೋಗವ ಭೋಗಿಪರ ತೋರದಿರಯ್ಯಾ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಲಿಖಿತಕ್ಕೆ ಲಿಖಿತ ಮಹಾಲಿಖಿತವುಂಟೆಂಬೆನೆ ? ಲಿಂಗ ಸಂಸಾರಿ, ಲಿಂಗವಿಲ್ಲೆಂಬೆನೆ ? ಅಂಗ ಸಂಸಾರಿ, ಇಲ್ಲಿನ್ನಾವುದ ಘನವೆಂಬೆ, ಆವುದ ಕಿರಿದೆಂಬೆ, ತಾಳಸಂಪುಟಕ್ಕೆ ಬಾರದ ಘನವ ? ಸುಖಕ್ಕೆ ಸುಖ ತಾರುಗಂಡು, ಸಮಸುಖವಾಗಿ, ಉಪಮಾತೀತ ತ್ರಿವಿಧ ಸಂಪತ್ತುಗಳೆಂಬ ವಾಯುವಾಕುದಲ್ಲಿ, ಆದಿ ಮಧ್ಯ ಅವಸಾನರಹಿತ ಅನಂತ ಶರಣ ಅಜಾತ ಕೂಡಲಚೆನ್ನಸಂಗಾ ನಿರ್ನಾಮ ಲಿಂಗೈಕ್ಯ.
--------------
ಚನ್ನಬಸವಣ್ಣ
ಒಪ್ಪದ ಕಪ್ಪೆ ಸರ್ಪನ ನುಂಗಿತ್ತ ಕಂಡೆ. ತುಪ್ಪುಳು ಬಾರದ ಮರಿ ಹೆತ್ತ ತಾಯ ನುಂಗಿತ್ತ ಕಂಡೆ. ಕೊಂಬಿನ ಮೇಲಣ ಕೋಡಗ ಕೊಂಬ ನುಂಗಿತ್ತ ನೋಡಾ. ಬೀಸಿದ ಬಲೆಯ ಮತ್ಸ್ಯ ಗ್ರಾಸವ ಕೊಂಡಿತ್ತು ನೋಡಾ. ಅರಿದೆಹೆನೆಂಬ ಅರಿವ, ಮರೆದೆಹೆನೆಂಬ ಮರವೆಯ ಕಳೆದುಳಿದ ಪರಿಯಿನ್ನೆಂತೊ ? ಅರಿವುದೆ ಮರವೆ, ಮರೆವುದೆ ಅರಿವು. ಅರಿವು ಮರವೆ ಉಳ್ಳನ್ನಕ್ಕ ಕುರಿತು ಮಾಡುವುದೇನು ? ಕುರುಹಿಂಗೆ ನಷ್ಟ, ಆ ಕುರುಹಿನಲ್ಲಿ ಅರಿದೆಹೆನೆಂಬ ಅರಿವು ತಾನೆ ಭ್ರಮೆ. ಆರೆಂಬುದ ತಿಳಿದಲ್ಲಿ, ಕೂಡಿದ ಕೂಟಕ್ಕೆ ಒಳಗಲ್ಲ ಹೊರಗಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮರಹೆಂಬುದಾವರಿಸಿದವರಾರಾದಡಾಗಲಿ, ದೇವ ದಾನವ ಮಾನವರೊಳಗಾದವರಾರಾದರೂ, ಮಾಡಬಾರದ ಕರ್ಮವ ಮಾಡಿ, ಬಾರದ ಭವದಲಿ ಬಂದು ಉಣ್ಣದ ಅಪೇಯವ ಉಂಡು, ಕುಡಿದು ಕಾಣದ ದುಃಖವ ಕಂಡು ಸಾಯದ ನಾಯ ಸಾವ ಸತ್ತು ಹೋಹರಿಗೆ ಕಡೆಯಿಲ್ಲ. ಶಿವ ಶಿವ ಮಹಾದೇವ, ನೀನು ಮಾಡಿದ ಬಿನ್ನಾಣದ ಮರವೆಯ ಕಂಡು ನಾನು ಬೆರಗಾದೆನು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ತಾಳ ಮರನ ಹಿಡಿದು ತನಿರಸವನುಂಬನ್ನಕ್ಕರ ಬಾರದ ಭವದಲ್ಲಿ ಬಪ್ಪುದು ತಪ್ಪದು ನೋಡಾ. ತಾಳಮರನ ಹಿಡಿಯದೆ ತನಿರಸವ ಮುಟ್ಟದೆ ಮೇಲಣ ಹಾಲಕುಡಿಯಬಲ್ಲರಾಗಿ ನಿಮ್ಮ ಶರಣರು ಭವವಿರಹಿತರಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕುಲ ಎಷ್ಟು ಎಂದಡೆ, ಎರಡು ಕುಲ. ಅವಾವೆಂದಡೆ : ಭವಿ ಒಂದು ಕುಲ, ಭಕ್ತ ಒಂದು ಕುಲ. ಅಷ್ಟಾವರಣವೇ ಅಂಗವಾಗಿ, ಪಂಚಾಚಾರವೇ ಪ್ರಾಣವಾಗಿಪ್ಪ ಭಕ್ತರ ಕುಲವನರಸಿದಡೆ ಬಾರದ ಭವಂಗಳಲ್ಲಿ ಬಪ್ಪುದು ತಪ್ಪುದು. ನೀರಿಂದಾದ ಮುತ್ತು ಮರಳಿ ಉದಕವಪ್ಪುದೆ ? ಆಕಾಶಕ್ಕೆ ಹೋದ ಹೊಗೆ ಹಿಂದಕ್ಕೆ ಬಪ್ಪುದೆ ? ಮಣ್ಣಿಂದಾದ ಮಡಕೆ ಮತ್ತೆ ಮಣ್ಣಪ್ಪುದೆ ? ಮತ್ತೆ ವಾಮನಮುನಿ ಹಿರಿಯ ಭಕ್ತರ ಮನೆಯ ಬಿನ್ನಹವ ಕೈಕೊಂಡು ಕುಲಕಂಜಿ ಉಣಲೊಲ್ಲದೆ ಹೋದ ನಿಮಿತ್ತದಿಂದ, ಹಾವಿನಹಾಳ ಕಲ್ಲಯ್ಯಗಳ ಮನೆಯ ಶ್ವಾನನಾಗಿ ಹುಟ್ಟಲಿಲ್ಲವೆ ? ಅದು ಕಾರಣ, ಶಿವಭಕ್ತರ ಒಕ್ಕುಮಿಕ್ಕ ಪ್ರಸಾದವ ಕೊಳಬೇಕು ಎಂದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಇನ್ನಷ್ಟು ... -->