ಅಥವಾ

ಒಟ್ಟು 290 ಕಡೆಗಳಲ್ಲಿ , 56 ವಚನಕಾರರು , 250 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾಸಿರದಳಕಮಲವೆಂದಡೆ ಸೂಸಿಕೊಂಡಿರುವ ಮನ. ಪವನವೆಂದಡೆ ಎಲ್ಲೆಡೆಯಲ್ಲಿ ಸೂಸಿ ಆಡುವಂತಹದು. ಬಿಂದುವೆಂದಡೆ ಆಗುಮಾಡುವಂತಹದು. ಈ ಮನ ಪವನ ಬಿಂದು ಮೂರನು ಒಡಗೂಡಿ ನೋಡಲು, ಪರಂಜ್ಯೋತಿಪ್ರಕಾಶದಂತಹ ಬೆಳಗೆ ಎನ್ನ ಕಂಗಳ ಮುಂದೆ ನಿಂದಿತ್ತು. ಆ ಮಹಾಬೆಳಗನೆ ಕಂಗಳಲ್ಲಿ ಹೆರೆಹಿಂಗದೆ ನೋಡಿದಡೆ, ಎನ್ನಂಗದ ಒಳಹೊರಗೆ ಪರಿಪೂರ್ಣವಾಗಿದ್ದಿತ್ತು ಕಾಣಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ, ನಿಮ್ಮ ಪಾದಕರುಣದಿಂದ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಗಗನ ಮಂಡಳದ ಸೂಕ್ಷ್ಮನಾಳದಲ್ಲಿ `ಸೋಹಂ ಸೋಹಂ' ಎನುತ್ತಿರ್ದತ್ತದೊಂದು ಬಿಂದು, ಅಮೃತದ ವಾರಿಧಿಯ ದಣಿಯುಂಡ ತೃಪ್ತಿಯಿಂದ. ಗುಹೇಶ್ವರಾ ನಿಂದ(ನಿಮ್ಮ?)ಲ್ಲಿಯೆ ಎನಗೆ ನಿವಾಸವಾಯಿತ್ತು.
--------------
ಅಲ್ಲಮಪ್ರಭುದೇವರು
ಬಂದ ಬಟ್ಟೆಯ ನಿಂದು ನೋಡಲೊಲ್ಲೆ ಕಂದಾ, ಅದೇನು ಸೋಜಿಗವೊ ? ಬಿಂದು ಛಂದವಲ್ಲ ಬಂದ ಪರಿಯನು ಗುಹೇಶ್ವರ ಬಲ್ಲ ಕಂದಾ.
--------------
ಅಲ್ಲಮಪ್ರಭುದೇವರು
ನಡೆನುಡಿಯಿಲ್ಲದ ಘನವು ನಡೆನುಡಿಗಡಿಯಿಟ್ಟು ಬಂದರೆ ಎನ್ನ ಸಡಗರ ಹೆಚ್ಚಿತ್ತು ನೋಡಾ ! ಬಡಿವಾರದ ಬಲವಯ್ಯಾ, ಕರ್ತು ಭೃತ್ಯಕಳೆ ಉನ್ನತವಾಗಿ ಶಕ್ತಿಯನು ಮುಕ್ತಿದಾಯಕ ಮುನಿಸಿಲ್ಲದೆ ಮುಂದುವರಿ. ನಾದ ಬಿಂದು ಕಳೆ ನವೀನವಯ್ಯಾ. ಮೂದೇವರೊಡೆಯ ಶರಣು ಶರಣು ಕರುಣಾನಿದ್ಥಿ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ದ್ರವ್ಯ ನೀನು ದ್ರವ್ಯಾರ್ಥ ನೀನು; ಪದ ನೀನು, ಪದಾರ್ಥ ನೀನು. ಸಕಲ ನೀನು ನಿಷ್ಕಲ ನೀನು. ಸಕಲ ನಿಷ್ಕಲಾತ್ಮಕ ಪರಿಪೂರ್ಣ ಶಿವನಲ್ಲದೆ ಅನ್ಯ ಭಿನ್ನಭಾವ ಉಂಟೆ ? ಸಕಲ ನಿಷ್ಕಲ ತತ್ವಂಗಳು; ನಿಮ್ಮೊಳಗೆ ಸಮಾಸವನೆಯ್ದುವೆವೆಂದು ತಮ್ಮ ತಮ್ಮ ಅಂಗದ ಮೇಲೆ ಸರ್ವಪದಾರ್ಥಂಗಳ ಹೆಸರಿಟ್ಟು ಹೊತ್ತುಕೊಂಡೈದಾವೆ ನೋಡಾ ! ಅದೆಂತೆಂದಡೆ: ``ದ್ರವ್ಯಾರ್ಥಂ ಚ ಮಹಾದೇವೋ ದ್ರವ್ಯರೂಪೋ ಮಹೇಶ್ವರಃ ಇತಿ ಮೇ ಭೇದನಂ ನಾಸ್ತಿ ಸರ್ವರೂಪಸ್ಸದಾಶಿವಃ'' _ ಇಂತೆಂದುದಾಗಿ_ನಾದ ನೀನು, ಬಿಂದು ನೀನು, ಕಳೆ ನೀನು, ಕಳಾತೀತ ನೀನು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಆ ಅನಾಹತಚಕ್ರದ ದ್ವಾದಶದಳದ ಪದ್ಮವ ಪೊಕ್ಕು ಸಾದ್ಥಿಸಿ, ಅಲ್ಲಿಹ ಮಂತ್ರ-ಪದ-ವರ್ಣ-ಭುವನ-ತತ್ವ-ಕಲೆಗಳಂ ಕಂಡು, ಅಲ್ಲಿ ಕುಂಕುಮವರ್ಣವಾಗಿಹ ಜ್ಯೋತಿರ್ಮಯಲಿಂಗಮಂ ಬೆರಸಿ, ಅಗ್ನಿಯ ಪಟುಮಾಡಿ,ಮನ ಪವನ ಬಿಂದು ಸಂಯೋಗದಿಂದ ವಿಶುದ್ಧಿಚಕ್ರದ ಷೋಡಶದಳದ ಪದ್ಮವ ಹೊಕ್ಕನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಮಹಾಲಿಂಗವೆಂದುಂಟು. ಅದೆಂತಾದುದಯ್ಯಾ ಎಂದಡೆ, ಸ್ವರಾಕ್ಷರ ವಿಕಲಾಕ್ಷರ ವ್ಯಾಪಕಾಕ್ಷರವೆಂದು ಮೂರುಪ್ರಕಾರ. ಸ್ವರಾಕ್ಷರವೆಲ್ಲ ನಾದಸಂಬಂಧ. ವಿಕಲಾಕ್ಷರವೆಲ್ಲ ಬಿಂದುಸಂಬಂಧ. ವ್ಯಾಪಕಾಕ್ಷರವೆಲ್ಲ ಕಳಾಸಂಬಂಧ. ನಾದವೇ ಆಕಾರ, ಬಿಂದುವೆ ಉಕಾರ, ಕಳೆಯೆ ಮಕಾರ. ಈ ನಾದ ಬಿಂದು ಕಳೆಗಳ ಗಬ್ರ್ಥೀಕರಿಸಿಕೊಂಡಿರ್ಪುದು ಚಿತ್ತು. ಆ ಚಿತ್ ಪ್ರಣಮಸ್ವರೂಪವೆ, ಅದ್ವೆ ೈತಾನಂದದಿಂದ ಸಂಪೂರ್ಣವನುಳ್ಳ ಆದಿಮಹಾಲಿಂಗವು, ಅನುಪಮಲಿಂಗವು, ಅನಾಮಯಲಿಂಗವು, ಅದ್ವಯಲಿಂಗವು, ಪರಮಲಿಂಗವು, ಪರಾಪರಲಿಂಗವು, ಪಿಂಡಾಂಡವನೊಳಕೊಂಡ ಅಖಂಡ ಲಿಂಗವು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತ್ರೈಮೂರ್ತಿಗಳು ನಿನ್ನ ಸಾಕಾರದ ಶಾಖೆ. ತ್ರೈಮೂರ್ತಿಗಳು ನಿನ್ನ ಅಪ್ಪುವಿನ ಅಂಕುರ ಶಕ್ತಿ. ಇಂತೀ ಸರ್ವಗುಣ ಸಂಪನ್ನನಾಗಿ ಬ್ರಹ್ಮಂಗೆ ಅಂಡವ ಕೊಟ್ಟು ವಿಷ್ಣುವಿಗೆ ಪಿಂಡವ ಕೊಟ್ಟು ರುದ್ರಂಗೆ ಕಂಡೆಹವ ಕೊಟ್ಟು ಹಿಂಗಿದೆ. ನೀನಿದರಂದವನೊಲ್ಲದೆ ಅಂಗಕ್ಕೆ ಮಯ ನೀನೇ, ನಿರಂಗಕ್ಕೆ ಸಂಗ ನೀನೇ. ಹಿಂಗೂದಕ್ಕೆ ನಿನ್ನಂಗ ಅನ್ಯ ಬ್ಥಿನ್ನವಲ್ಲ. ಮುಕುರದ ಮರೆಯಲ್ಲಿ ತೋರುವ ಪ್ರತಿರೂಪಿನಂತೆ ಸಕಲದೇವರ ಚೈತನ್ಯಭಾವ ನಿನ್ನ ಉಷ್ಣ ಬಿಂದು, ಸಕಲದೇವರ ಶಾಂತಿ ನಿನ್ನ ಸಮಾನ ಬಿಂದು, ಇಂತಿವ ಹೇಳುವಡೆ ವಾಙ್ಮನಕ್ಕತೀತ ಅತ್ಯತಿಷ್ಠದ್ದಶಾಂಗುಲ ನಾರಾಯಣ ನಯನಪೂಜಿತ ಪ್ರಿಯ ರಾಮೇಶ್ವರಲಿಂಗ ನಾ ನೀನಾದೈಕ್ಯ.
--------------
ಗುಪ್ತ ಮಂಚಣ್ಣ
ಸತ್ಯಬೆಳಗ ಹೊತ್ತು ಸಮಯಸಂಪನ್ನತೆಯೊಳಗೆ ನಡೆವ ಸಧರ್ಮಿಗಳ ಕಂಡು, ಗಮನಾಗಮನವೆಂದು ನಡೆವಲ್ಲಿ ಬೆಳಗುಗತ್ತಲೆಯಪ್ಪಿ ಸುಳುಹು ಸೂಕ್ಷ್ಮಗೆಟ್ಟು, ಕಳೆ ಕಸವಗೂಡಿ ಕಷ್ಟಕಲ್ಪನೆಯೊಳಗೆ ಕಡೆಗಾಣದಾದರು. ಮತ್ತೆ ಅವರಂಗಚರಿತೆಯನರಿಯದಿರ್ದನು ಚನ್ನ ಬಿಂದು ನಾದ ಕಳೆ ಪ್ರಸನ್ನಮೂರ್ತಿ ಲಿಂಗವು ನಿಜಮಾರ್ಗ ನಿಜಮಾರ್ಗ ನಿಲುವಿನೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕ್ರೋಧವೆಂಬ ಹೊಲಗೇರಿಯ ಹೊರವಂಟು, ಭೇದವೆಂಬೈವರನತಿಗಳೆದನು. ನಾದಬಿಂದುವೆಂಬ ತೀರ್ಥವನು ಮಿಂದು, ಆದಿ ಎಂಬ ಅಷ್ಟದಳವಂ ಕಿತ್ತೆತ್ತಿ ಹೋದನು. ನಾದ ಬಿಂದು ಆದಿ ಬೋಧೆಗೆ ಒಳಗಾದ ಘನವನು ಸಾಧಿಸಿದಂ ಭೋ ಎನ್ನ ಅಜಗಣ್ಣತಂದೆ
--------------
ಮುಕ್ತಾಯಕ್ಕ
ತನ್ನಿಂದ ತಾನುದಿಸಿದ ಬಿಂದುವಿನಿಂದಾಗಿ ನಿಂದುದೊಂದು ಬಿಂದು. ಬಿಂದು ಬೇರಾಗಿ ಬೆರಸಿಕೊಂಡಲ್ಲಿ ಬಿಂದು ಬಿಚ್ಚಿ ಹಿಂದು ಮುಂದು ನಿಲಿಸಿದರೆ ಬಂಧ ಆಗ ಬಯಲಾಯಿತ್ತು. ತಂದೆಯು ನೋಡಿ ಕಂದನ ಕೈವಿಡಿದಲ್ಲಿ ಮುಂದುಗಂಡೆನು ಮೂದೇವರರಿಯದ ಬೇಹಾರವನು. ಕೊಡಲಿಲ್ಲ ಕೊಳಲಿಲ್ಲದ ಸಡಗರ ಸ್ವಯವಾದಲ್ಲಿ ಸತಿಭಾವತಪ್ಪಿ ಗುರುನಿರಂಜನ ಚನ್ನಬಸವಲಿಂಗಕಂಗವಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಾಲ ಕರ್ಮ ಬಿಂದು ಮಾಯೆ ಜೀವ ಪ್ರಕೃತಿ ಮಲ ರೋಧನ ಕಳವು ಹಿಂಸೆ ತೃಷೆ ನಿದ್ರೆ ವ್ಯಸನಕ್ಕೆ ಕ್ಲೇಶ ಕಾಮಾದಿಗಳುಳ್ಳನ್ನಕ್ಕರ ಏಕ ಭಾಜನೆವೆಲ್ಲಿಯದೊ? ಇವೆಲ್ಲವ ಕಳೆದುಳಿದಲ್ಲಿ ಸೌರಾಷ್ಟ್ರ ಸೋಮೇಶ್ವರಲಿಂಗದೊಡನೆ ಏಕಭಾಜನ, ದೊರಕೊಂಬುದು.
--------------
ಆದಯ್ಯ
ಮಾಯೆಯಿಂದಾದ ಸಂಸಾರದಡವಿಯೊಳಗೆ ತಿರಿಗಿ ತಿರಿಗಿ ಘಾಸಿಯಾಗಿ, ಈಷಣತ್ರಯವೆಂಬ ಮೋಹಿನಿಯ ಕೈವಶವಾಗಿ, ಅರಿಗಳೊಡನೆ ಪುದುವಾಳಾಗಿ, ಆಶೆಯಾಮಿಷ ತಾಮಸಂಗಳಿಂದ ನೊಂದು, ತಾಪತ್ರಯಗಳಿಂದ ಬೆಂದು, ಸಂಸಾರ ಸರ್ವಮುಖವಾಗಿ ನುಂಗಿ ಉಗುಳುತ್ತಿರಲೆಂತಕ್ಕೆ ನಿಮ್ಮ ನೆನಹೆಂಬ ಕಿಚ್ಚು ಭವಾರಣ್ಯವ ಸುಡಲು, ಕರ್ಮದ ಕೈಬೆಂದು ಮಾಯಾಪಾಶವುರಿದು, ಮಲ ನಿರ್ಮಲವಾಗಿ, ಬಿಂದು ಭುವನವ ಹೊದ್ದದೆ, ತೀರೋಧಾನ ನಿರೋಧಾನವೆಯ್ದಿ, ನಿಮ್ಮಲ್ಲಿ ಅಚ್ಚೊತ್ತಿದಂತಿರಿಸಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಗಂಬ್ಥೀರ ಗುರುವೆನ್ನ ಸಂಗಸಮರಸವ ಮಾಡಿ, ಅಂಗದೊಳಡಗಿರ್ದ ಕಂಗಳ ಬೆಳಗ ಕರುಣದಿಂದೆತ್ತಿ ಪಣೆಗಿಡಲು, ಗಣಿತಲಿಖಿತವು ಕಾಣದೋಡಿದವು, ಕಳೆ ಬಿಂದು ನಾದ ಸಂಭ್ರಮೆಯಗೊಂಡು, ನಿರಂಜನ ಚನ್ನಬಸವಲಿಂಗಕ್ಕೆ ತಲೆಯಿಡಲಮ್ಮದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸಾಸಿವೆಯ ಹಾಲು ಸಾಧಕಾಂಗರ ನಾಸಿಕದ ನೀರ ಬರಿಸಿತ್ತು. ಮೂಷಕನ ಮೀಸೆಯ ಬಿಂದು ಮೂರುಲೋಕವ ಮುಣುಗಿಸಿತ್ತು. ಕಾಸದ ನೀರು ಬಿಸಿಯಾಗಿ ಕುಡಿವರ ಮೀಸೆ ಸುಟ್ಟಿತ್ತು. ಸಾಸಿವೆಯ ಮೂಷಕನ ಮೀಸೆಯ ಬಿಸಿನೀರ ಕುಡಿವಾತನ, ಬಾಯೊತ್ತಿನ ಮೀಸೆಯಲ್ಲಿ ಹುಟ್ಟಿತ್ತು ಒಂದು ಹಾಸರೆಗಲ್ಲು. ಹಾಸರೆಗಲ್ಲಿನ ಮೇಲೆ ಕುಳಿತಿದಾತನ ಕೇಳಿಹರೆಂದು ಏತಕ್ಕಡಗಿದೆ, ಅಲೇಖಮಯ ಶೂನ್ಯ ಕಲ್ಲಿನ ಮನೆಯೊಳಗೆ.
--------------
ವಚನಭಂಡಾರಿ ಶಾಂತರಸ
ಇನ್ನಷ್ಟು ... -->