ಅಥವಾ

ಒಟ್ಟು 66 ಕಡೆಗಳಲ್ಲಿ , 36 ವಚನಕಾರರು , 62 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾತಕ ಹೊಲೆಯೆಂದರಿದು ಬಿಟ್ಟಲ್ಲಿ, ಮತ್ತಾ ಗುಣ ಸ್ವೀಕರಿಸಬಹುದೆ ? ಇವೆಲ್ಲ ಅಲ್ಲಾ ಎಂದು ಬಲ್ಲತನವ ತಾನರಿದು, ಮತ್ತೆಲ್ಲರಲ್ಲಿ ಬೆರಸಬಹುದೆ ? ಒಡೆದ ಹಂಚಿಂಗೆ, ಹಿಡಿದು ಬಿಟ್ಟ ವ್ರತಕ್ಕೆ, ಮತ್ತಿವ ಒಡಗೂಡಬಹುದೆ ? ಇಂತೀ ಬಿಡುಗಡೆಯನರಿದಲ್ಲಿ, ಅನುಸರಣೆಯ ಮಾಡಿದಡೆ, ಎನ್ನೊಡೆಯ ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವಾದಡೂ ಹರಶರಣರಿಗೆ ದೂರ.
--------------
ಶಿವಲೆಂಕ ಮಂಚಣ್ಣ
ಆಗರದಲ್ಲಿ ಅಡಕೆ ಸಣ್ಣಾದಾಗ ತೋಟದ ಎಲೆ ಉದುರಿತ್ತು. ಉದುರುವುದಕ್ಕೆ ಮೊದಲೆ ಸುಣ್ಣವ ಸುಡುವವ ಸತ್ತ. ಇವರ ಮೂವರ ಹಂಗಿಗತನ ಬಿಟ್ಟಿತ್ತು, ಬಾಯ ಹಂಬಲಿಲ್ಲದೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು ಮೂರರ ಹಂಗ ಬಿಟ್ಟ ಕಾರಣ.
--------------
ಸಗರದ ಬೊಮ್ಮಣ್ಣ
ಹಣ್ಣ ಮೆದ್ದ ಬಳಿಕ ಆ ಮರನನಾರು ತರಿದಡೇನು ? ಹೆಣ್ಣ ಬಿಟ್ಟ ಬಳಿಕ ಆಕೆಯನಾರು ಕೂಡಿದಡೇನು ? ಮಣ್ಣ ಬಿಟ್ಟ ಬಳಿಕ ಆ ಕೆಯ್ಯನಾರು ಉತ್ತಡೇನು ? ಚೆನ್ನ ಮಲ್ಲಿಕಾರ್ಜುನನರಿಯದ ಬಳಿಕ ಆ ಕಾಯವ ನಾಯಿ ತಿಂದಡೇನು, ನೀರು ಕುಡಿದಡೇನು?
--------------
ಅಕ್ಕಮಹಾದೇವಿ
ಊರದ ಚೇಳಿನ ಏರದ ಬೇನೆಯಲ್ಲಿ, ಮೂರುಲೋಕವೆಲ್ಲಾ ನರಳಿತ್ತು ! ಹುಟ್ಟದ ಗಿಡುವಿನ ಬಿಟ್ಟ ಎಲೆಯ ತಂದು ಮುಟ್ಟದೆ ಹೂಸಲು; ಮಾಬುದು_ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಅಪ್ಪು ಲವಣವೆಲ್ಲವು ಸರಿ, ಪರಿಪಾಪಕವೆಲ್ಲವು ಸರಿ. ಇವೆಲ್ಲಾಯೆಂದು ಬಿಟ್ಟ ಮತ್ತೆ, ಲೌಕಿಕಕ್ಕೆ ದೂರಸ್ತನಾಗಿ, ಪರಮಾರ್ಥಕ್ಕೆ ಸಂಪದನಾಗಿ, ತನಗೆ ಕರ್ತುವಾದ ಗುರುಚರದಲ್ಲಿ ಭೃತ್ಯನಾಗಿರಬೇಕು. ಗೆಲ್ಲಸೋಲಕ್ಕೆ ಹೊತ್ತುಹೋರದೆ, ಶರಣರ ಸಮೂಹದಲ್ಲಿ ಅಲ್ಲ ಅಹುದೆನದಿಪ್ಪುದೆ ? ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ನೇಮ ಸಂದಿತ್ತು.
--------------
ಶಿವಲೆಂಕ ಮಂಚಣ್ಣ
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ ವಾಙõïಮಾನಸಾಗೋಚರವೆಂದು ಹೇಳುತ್ತೈದಾವೆ ವಾಕ್ಯಂಗಳು. ಅದಂತಿರಲಿ, ಐತಿಹಾಸಿಕರು ಪೌರಾಣಿಕರು ಆಗಮಿಕರು ಅರಿದರಾದಡೆ ದೃಶ್ಯನೆಂಬರೆ ಶಿವನನು? ಅದೃಶ್ಯನೆಂಬರೆ ಶಿವನನು? ವಾಙõïಮಾನಸಾಗೋಚರನೆಂಬರೆ ಶಿವನನು? `ಅತ್ಯತಿಷ್ಠದ್ದಶಾಂಗುಲಂ `ಏಕ ಏವ ಪುರುಷಃ ಎಂಬ ಶ್ರುತಿಯಿರಲು ಮತ್ತಚಿತ್ತನೆ ಶರಣನು? ಅಣುವಿನೊಳಗಣುವಾಗಿ, ಮಹತ್ತಿನೊಳಗೆ ಮಹತ್ತಾಗಿ, ಇಹಪರವೆಂಬ ಸಂದ ಹರಿದು, ಅಧ್ಯಕ್ಷತನಕ್ಕೆ ಕಾರಣಿಕನಾಗಿ ಇಹಲೋಕವೆ ಪರ, ಪರವೆ ಇಹಲೋಕ. ಅದು ಹೇಗೆಂದಡೆ: ನಿತ್ಯಂ ಲಿಂಗಾರ್ಚನಂ ಯಸ್ಯ ನಿತ್ಯಂ ಜಂಗಮಪೂಜನಂ ನಿತ್ಯಂ ಗುರುಪದಧ್ಯಾನಂ ನಿತ್ಯಂ [ನಿತ್ಯಂ]ನ ಸಂಶಯಃ ಎಂಬ ಆಗಮವಾಕ್ಯವನರಿದು, ಗುರುವಿಂಗೆ ತನುಮುಟ್ಟಿ, ತ್ರಿವಿಧಲಿಂಗಕ್ಕೆ ಮನಮುಟ್ಟಿ, ತ್ರಿವಿಧಜಂಗಮಕ್ಕೆ ಧನಮುಟ್ಟಿ, ತ್ರಿವಿಧ ನಿವೇದಿಸಿ, ಆ ಗುರುವಿಂ ಶುದ್ಧ[ಪ್ರಸಾದವ] ಆ ಲಿಂಗದಿಂ ಸಿದ್ಧನಪ್ರಸಾದವಫ ಅ ಜಂಗಮದಿಂ ಪ್ರಸಿದ್ಧ[ಪ್ರಸಾದವ]ನವಗ್ರಹಿಸಿ ಈ ಲಿಂಗಾರ್ಚನೆಯ ಸ್ವಾನುಭಾವದಿಂದೇಕವ ಮಾಡಿ ಅರ್ಚಿಸಲಲ್ಲಿ ಶರಣರು ಸ್ವತಂತ್ರರು. ಅಂಗದಾಸೆಯಲ್ಲಿ ಹರಿವುದ ಬಿಟ್ಟ ನಿಸ್ಸಂಗಿಗಳು. ಶ್ರೋತ್ರ ನೇತ್ರ ತ್ವಕ್ಕು ಜಿಹ್ವೆ ಘ್ರಾಣ ಪಂಚೇಂದ್ರಿಯಂಗಳ ಶಿವನ ಮುಖವೆಂದರಿದು ಅನ್ಯಸಂಗಂಗಳಿಗೆ ಎಳಸಿ ಬಳಸಿ ಬಣ್ಣಕರಪ್ಪರೆ ಶರಣರು? ಲಿಂಗಾರ್ಚನವಿಹೀನಸ್ತು ದ್ವಿಜೋ[s]ಪಿ ಶ್ವಪಚಾಧಮಃ ಲಿಂಗಾರ್ಚನಪರೋ ನಿತ್ಯಂ ಶ್ವಪಚೋ[s]ಪಿ ದ್ವಿಜೋತ್ತಮಃ ಎಂದುದಾಗಿ, ಅಮ್ಮ ಶರಣರಿಗೆ ಸರಿ ಉಂಟೆ ಲೋಕದೊಳಗೆ? ಶೂನ್ಯವೆನಿಸುವ ವಸ್ತುವ ರೂಹಿಂಗೆ ತಂದು ನೆರೆದು ತಾನೆ ರೂಪಾಗಬಲ್ಲ ಶರಣನು. ಆತನ ಮಹಾಮಹಿಮೆಗೆ ನಮೋ ನಮೋ ಎಂಬೆನು ಕಾಣಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಕಾಯವಿಹನ್ನಕ್ಕ ಕರ್ಮವ ಬಿಟ್ಟ ಪರಿ ಇನ್ನೆಂತೊ ? ಜೀವವಿಹನ್ನಕ್ಕ ಅರ್ಪಿಸದೆ ತಾನುಂಬ ಪರಿ ಇನ್ನೆಂತೊ ? ಕೋಳದೊಳಗೆ ಕಾಲಿದ್ದು ಕೋಲಹಿಡಿದು ಸಾಧನೆಯ ಮಾಡುವನ ತೆರನಂತೆ, ಕರ್ಮಕಾಂಡಿಯಾಗಿ ತಾನಿರುತ್ತ ಇದಿರಿಗೆ ವರ್ಮವ ಬೋಧಿಸಲೇತಕ್ಕೆ ? ಇದು ನನ್ನಿಯ ಇರವಲ್ಲ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನು ಅವರಿಗೆ ಅನ್ಯನಾಗಿಪ್ಪನು.
--------------
ಮೋಳಿಗೆ ಮಹಾದೇವಿ
ಜೇನುತುಪ್ಪದೊಳು ಬಿದ್ದ ನೊಣವಿನಂತೆ, ಕಾನನದೊಳು ಕಣ್ಣಕಟ್ಟಿ ಬಿಟ್ಟ ಮರುಳನಂತೆ, ಎಲುವ ಕಡಿವ ಶ್ವಾನನಂತೆ, ಮಲವ ಭುಂಜಿಸುವ ಸೂಕರನಂತೆ, ಮಾನಿನಿಯರಿಗೆ ಮೆಚ್ಚಿ ಕೆಡದಿರು ಮನವೆ; ಅಬ್ಥಿಮಾನಹಾನಿ. ಲಿಂಗ ಅಬ್ಥಿಮಾನಿಯಾಗಿರು ಕಂಡ್ಯಾ ಮನವೆ ನಿತ್ಯ ಮುಕ್ತಿ ಬೇಕಾದಡೆ. ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಒಡೆದ ಮಡಕೆಗೆ ಸರಿಯಿಂದ ಸಂದು ಕೂಡುವುದೆ? ದಗ್ಧವಾದ ಪಟ ಅಗಸರ ಕಲ್ಲಿಗೆ ಹೊದ್ದುವುದೆ? ಬದ್ಧ ಭವಿಗಳೆಂದು ಬಿಟ್ಟ ಮತ್ತೆ ಸಮಯದ ಹೊದ್ದಿಗೆ ಏಕೆ? ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ಹೊತ್ತಾಡಿದ ಚೋಹವ ಮತ್ತೆ ತೊಟ್ಟು ಬಂದಡೆ ಮೆಚ್ಚರಯ್ಯಾ ಜಗದವರು. ಬಿಟ್ಟ ಹೊನ್ನು ಹೆಣ್ಣು ಮಣ್ಣು ಮತ್ತೆ ಕಚ್ಚಿದಡೆ ಅದು ಸತ್ಯಕ್ಕೆ ದೂರ. ತ್ರಿಪುರಾಂತಕ ಲಿಂಗದಲ್ಲಿ ಗಾವುದಿ ಮಾಚಯ್ಯ ಹೇಳಿದುದ ಸತ್ಯವೆನ್ನಿರಣ್ಣಾ.
--------------
ಗಾವುದಿ ಮಾಚಯ್ಯ
ಕಟೆದ ಕಲ್ಲ ಲಿಂಗವ ಮಾಡಿಕೊಟ್ಟಾತ ಗುರುವೆಂಬರು; ಆ ಂಗವ ಧರಿಸಿದಾತ ಶಿಷ್ಯನೆಂಬರು. ಕೊಟ್ಟ ಗುರು ದೇಶಪಾಲಾದ; ಕೊಟ್ಟ ಕಲ್ಲು ಲಿಂಗವೊ? ಕಲ್ಲಿನ ಕಲ್ಲು ಕಲ್ಲೆಂಬಡೆ, ಲಿಂಗವ ಮಾಡಿ ಕೊಟ್ಟ; ಲಿಂಗವೆಂದಡೆ ಪೂಜಾವಿರಹಿತವಾಯಿತ್ತು. ಪೂಜೆಯಿಲ್ಲದ ಲಿಂಗ ಪಾಷಾಣ. ಹೋದ ಗುರುವಿನ ಲಿಂಗ ಪಾಷಾಣಭೇದಿ; ಭೇದಿಸಿದಡೆ ಹುರುಳಿಲ್ಲ. ನದಿಯ ದಾಟುವಲ್ಲಿ ಭೈತ್ರವ ಹಿಡಿದು, ದಾಂಟಿದಂತ್ಯದಲಿ ಬಿಟ್ಟುಹೋದರು. ಬಿಟ್ಟ ನಾವೆ ಮತ್ತೊಬ್ಬರಿಗೆ ಲೇಸು, ಈ ಲಿಂಗ ಬರದು ಆರಿಗೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಮನ ಮಹದಲ್ಲಿ ನಿಂದು, ತನುವಿನ ವಿಕಾರವ ಬಿಟ್ಟ ಮತ್ತೆ ಭವ ಬಂಧದವರ ಒಲವರವೇಕೆ ? ಅದು ಸಲೆ ನೆಲೆಯಲ್ಲ, ಅರ್ಕೇಶ್ವರಲಿಂಗವನರಿವುದಕ್ಕೆ.
--------------
ಮಧುವಯ್ಯ
ತಾನರಿಯದುದನರಿದಾಗವೆ ಭರಿತಾರ್ಪಣ. ತಾ ಕೆಡಿಸಿದುದ ಕಂಡಲ್ಲಿಯೆ ಭರಿತಾರ್ಪಣ. ತ್ರಿವಿಧಮಲದಿಂದ ಕಟ್ಟೊತ್ತರ ಬಂದಲ್ಲಿ ತೊಟ್ಟು ಬಿಟ್ಟ ಹಣ್ಣಿನಂತಿದ್ದಾಗವೆ ಭರಿತಾರ್ಪಣ. ತಾ ಹೇಳಿದ ವ್ರತ ನೇಮ ನಿತ್ಯ ಕೃತ್ಯಂಗಳಲ್ಲಿ ಅನುಸರಣೆಯಿಂದ ತನು ಸೋಂಕಿದಾಗವೆ ಭರಿತಾರ್ಪಣ. ಪಡಿಪುಚ್ಚವಿಲ್ಲದ ನುಡಿಗೆಡೆಯಾಗದೆ ಲಿಂಗದಲ್ಲಿ ಒಡಗೂಡೂದೆ ಭರಿತಾರ್ಪಣ. ಇದು ಕ್ಷುತ್ತಿನ ಆಗಲ್ಲ, ಸಂಸಾರಘಟವ ಮೆತ್ತುವ ಬುತ್ತಿಯಲ್ಲ. ನಿತ್ಯಾನಿತ್ಯವ ತಿಳಿದು, ನಿಶ್ಚಯವನರಿದಲ್ಲಿ ಭರಿತಾರ್ಪಣ. ಇದು ಸತ್ಯವಂತರ ಹೊಲ, ಮುಕ್ತಿವಂತರ ಬೆಳೆ. ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗದ ಸಂಗ.
--------------
ಭರಿತಾರ್ಪಣದ ಚೆನ್ನಬಸವಣ್ಣ
ಅರಿದು ಮರೆದು ಎಚ್ಚತ್ತೆನೆಂಬಲ್ಲಿ ಅರಿವುಂಟೆ ? ತೊಳಗಿ ಬೆಳಗಿ ಪ್ರಜ್ವಲಿಸಿ ಉರಿವ ಬೆಳಗು ಕೆಡುವಲ್ಲಿ, ಉಡುಗುತ್ತಿದ್ದೇನೆ ಎಂದು ನುಡಿಯಿತ್ತೆ ? ಇಂತಿವ ಹಿಡಿವಲ್ಲಿ, ಬಿಡುವಲ್ಲಿ, ಮಿಕ್ಕಾದವ ಒಡಗೂಡುವಲ್ಲಿ, ಅಡಿಯೇರಿದ ಮತ್ತೆ ಪುನರಪಿ ಅಡಿ ಉಂಟೆ ? ತೊಟ್ಟು ಬಿಟ್ಟ ಹಣ್ಣಿಂಗೆ ಮತ್ತಾ ಬುಡದಾಸೆಯೇಕೆ ? ನಿಶ್ಚಯವೆಂಬುದು ನಷ್ಟವಾದಲ್ಲಿ, ಕಾಮಧೂಮ ಧೂಳೇಶ್ವರನೆಂಬ ಲಕ್ಷವೇತಕ್ಕೆ ?
--------------
ಮಾದಾರ ಧೂಳಯ್ಯ
ಊರೊಳಗಣ ಉಡು ಕೇರಿಯ ನುಂಗಿತ್ತು. ಜಾಗಟದೊಳಗಣ ಧ್ವನಿ ಆ ಜಾಗಟವ ನುಂಗಿತಹತಹತ್ತು. ಸಾರಬಂದ ಧೀರನ ಬಾರಿಕ ಕೊಂದ. ನಾಡು ಹಾಳಾಯಿತ್ತು, ಪಟ್ಟಣ ಸೂರೆಹೋಯಿತ್ತು. ಕಟ್ಟರಸು ಸಿಕ್ಕಿದ, ಪ್ರಧಾನ ತಪ್ಪಿದ. ಎಕ್ಕಟಿಗನ ಮಕ್ಕಳು ಕೆಟ್ಟೋಡಿದರು. ತಪ್ಪಿದ ಪ್ರಧಾನ ಒಪ್ಪವಿಟ್ಟ ರಾಜ್ಯವ, ಸಿಕ್ಕಿದರಸ ಬಿಡಿಸಿ, ಎಕ್ಕಟಿಗನ ಮಕ್ಕಳ ಸಂತೈಸಿ, ಹಿರಿಯರಸನ ಕೈಸೆರೆಯ ಬಿಡಿಸಿ, ತಾ ಕೈಯೊಳಗಾಗಿ ಕೆಟ್ಟ ಪ್ರಧಾನಿ, ಸಿಕ್ಕದ ಕೆಟ್ಟ ಅರಸು. ಇವರೆಲ್ಲರು ಕೆಟ್ಟ ಕೇಡ ನೋಡಿ ತಪ್ಪಿದೆನಯ್ಯಾ. ಈ ಮಾಟಕೂಟದ ಹೋರಟೆಗಂಜಿ ಬಿರಿದ ಬಿಟ್ಟ ಮೇಲೆ, ಅಲಗಿನ ಹಂಗೇಕೆ? ನಾಡಬಿಟ್ಟು ತೊಲಗಿದವಂಗೆ, ಒಂದೂರ ಸುದ್ದಿಯೇಕೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->