ಅಥವಾ

ಒಟ್ಟು 52 ಕಡೆಗಳಲ್ಲಿ , 26 ವಚನಕಾರರು , 44 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಿಂಗದಲ್ಲಿ ಹೊಳೆದು ಹೋಹ ಜಂಗಮವ ಕಂಡು ಬಿಟ್ಟಡೆ ಭವ ಹೊದ್ದಿತ್ತಯ್ಯಾ ಎನ್ನ ಭಕ್ತಿಗೆ. ಹಿಂದೆ ಲಿಂಗವನಗಲಿದ ಕಾರಣ ಬಂದೆನೀ ಜನ್ಮಕ್ಕೆ, ಕೂಡಲಸಂಗಯ್ಯ ತಪ್ಪಿಹೋಗದ ಮುನ್ನ ಹಿಡಿದು ತನ್ನಿ.
--------------
ಬಸವಣ್ಣ
ಬಹುಜಲವಂ ಬಿಟ್ಟು, ಚಿಲುಮೆಯ ತೆರೆಗಡದು. ನೆಲಶುದ್ಧ ಸೌಕರ್ಯವಲ್ಲದೆ ಅದು ಶೀಲವಲ್ಲ. ಉಪ್ಪ ಬಿಟ್ಟು ಸಪ್ಪೆಯನುಂಡಡದು ಮನದ ಹೇಸಿಕೆಯಿಲ್ಲದೆ ಅದು ದೃಢವ್ರತವಲ್ಲ. ವ್ರತ ನಿಶ್ಚಿಯವಾವುದೆಂದಡೆ, ಪರಸ್ತ್ರೀ ಪರಧನ ಪರದೂಷಣಯವನರಿದು ಬಿಟ್ಟಡೆ, ಅದು ಅರುವತ್ತಾರುವ್ರತವೆಂದೆ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಪರುಷಮೃಗ ಬಂದು ನಿಂದಲ್ಲಿ, ಜನ್ನ ಜಯವಾಗದೆ ಧರ್ಮಂಗೆ ? ಲಿಂಗಜಂಗಮಭಕ್ತಿ ಪ್ರಜ್ವಲಿಸದೆ ಸಿರಿಯಾಳಂಗೆ ? ಪ್ರಸಾದವ ಬಿಬ್ಬಿಬಾಚಯ್ಯ ಮೆರವುತ ಬಪ್ಪಲ್ಲಿ, ಅರಿಯದೆ ನಿಂದಿಸಿದಡೆ, ಹರಿದು ಹತ್ತದೆ ಉರಿಯ ನಾಲಗೆ ಗ್ರಾಮವ? ಹರಸಿತ್ತ ನಿರೂಪವಿಡಿ ಮಾರ್ಗದಲ್ಲಿ ಮಾರಾರಿಯ ಶರಣರು ಬಂದು ನಿಂದಲ್ಲಿ ಅರ್ಧಗೃಹಂಗಳುಳಿಯವೆ ? ಸದ್ಯೋಜಾತನ ಶರಣರ ಧರೆಯನುರಿಯ ನಾಲಗೆಯ ನೀಡಿ, ಕಲ್ಯಾಣವನಾಳುವ ಬಿಜ್ಜಳನ ಮುಟ್ಟಿನಿಂದಡೆ, ಹೋ ಹೋ! ಇದ್ದಂತೆ ಬರಬೇಕೆಂದಡೆ, ಕೋಪಾಟೋಪವಂ ಬಿಟ್ಟು ಕಳದು, ಸಾಮಾನ್ಯವಾಗದೆ ? ಶಿವನೊಲಿದ ಸಿದ್ಧರಿಗೆ ಅಂಗದ ಮೇಲೆ ಲಿಂಗವವಿಲ್ಲದವನು ಅಂಗಳವನು ಮೆಟ್ಟಲಾಗದೆಂದಡೆ, ಉರಿಯ ಜ್ವಾಲೆಯ ಬಿಟ್ಟಡೆ, ಪರಿಹರಿಸದೆ ಕುಂಚಿಗೆಯ ತುದಿಯಲ್ಲಿ? ಪರಮನೊಲಿದ ಶರಣರು ಸ್ವತಂತ್ರಮಹಿಮರು. ಅದಂತೆಂದಡೆ: ಅವರೆಂದಂತೆ ಅಹುದೆಂದಡೆ, ಅಂಗದ ಮೇಲೆ ಲಿಂಗಪ್ರತಿಷ್ಠೆಯಾಗದೆ, ಶಿವಯೋಗಿ ಸಿದ್ಧರಾಮಯ್ಯಂಗೆ ಸಕಲಧೂರ್ತದುರಿತಂಗಳು ಬಿಟ್ಟೋಡುತ್ತಿದ್ದವು, ಸಕಳೇಶ್ವರದೇವಾ, ನಿಮ್ಮ ಶರಣನ ದೇವತ್ವಕ್ಕಂಜಿ.
--------------
ಸಕಳೇಶ ಮಾದರಸ
ಸಂಸಾರಸರ್ಪನ ಹೇಳಿಗೆಯ ಬಿಡಿಸಲು ಬಾರದು, ಬಿಟ್ಟಡೆ ಕಟ್ಟಲು ಬಾರದು ನೋಡಾ. ಬಿಡಿಸುವ ಬೆಡಗಿನ್ನೆಂತೊ ! ಕಾಮಕ್ರೋಧಲೋಭಮೋಹಮದಮತ್ಸರವೆಂಬ ವಿಷದ ಹಲ್ಲಿಂಗಾವುದು ಗಾರುಡವಯ್ಯಾ, ಮಹಾದಾನಿ ಕೂಡಲಸಂಗಮದೇವಾ
--------------
ಬಸವಣ್ಣ
ಮುನ್ನೂರ ಅರುವತ್ತು ನಕ್ಷತ್ರಕ್ಕೆ ಬಾಯಿಬಿಟ್ಟುಕೊಂಡಿಪ್ಪುದೆ ಸಿಂಪು ಅದು ಸ್ವಾತಿಗಲ್ಲದೆ ಬಾಯ್ದೆರೆಯದು ಕೇಳು, ಕೇಳು ತಂದೆ. ಎಲ್ಲವಕ್ಕೆ ಬಾಯ ಬಿಟ್ಟಡೆ ತಾನೆಲ್ಲಿಯ ಮುತ್ತಪ್ಪುದು ಪರಮಂಗಲ್ಲದೆ ಹರುಷತಿಕೆಯಿಲ್ಲೆಂದು ಕರಣಾದಿ ಗುಣಂಗಳ ಮರೆದರು, ಇದು ಕಾರಣ, ಕೂಡಲಸಂಗನ ಶರಣರು ಸಪ್ತವ್ಯಸನಿಗಳಲ್ಲಾಗಿ.
--------------
ಬಸವಣ್ಣ
ನಾನು ಭೃತ್ಯನಾಗಿದ್ದಲ್ಲಿ ಕರ್ತರ ಇರವ ವಿಚಾರಿಸೂದು ಭಕ್ತರ ಇರವಲ್ಲ, ಇದು ವಿಶ್ವಾಸದ ಯುಕ್ತಿ. ಇಷ್ಟಕಂಜಿ ಬಿಟ್ಟಡೆ ಮೊದಲು ಮೋಸವಾದಲ್ಲಿ ಲಾಭಕ್ಕೆಸರಿಹುದುಗುಂಟೆ? ಶರಣರ ಮರೆ ಮನಕ್ಕೆ ವಿರೋಧವುಂಟೆ? ಮಣ್ಣಿನ ಹೊದಕೆ ಮೈ ಜಲಕ್ಕೆ ನಿರ್ಮಲವಲ್ಲದೆ ಬ್ಥಿನ್ನಭಾವವಿಲ್ಲ. ಎನ್ನ ಮಾತು ನಿನಗೆ ಅನ್ಯವೆ, ನನ್ನಿಯಲ್ಲದೆ? ಅದಕ್ಕೆ ಬ್ಥಿನ್ನ ಭಾವವಿಲ್ಲ, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಶೀಲ ಶೀಲವೆಂದು ನುಡಿವುತಿರ್ಪರೆಲ್ಲರು. ಶೀಲದ ಹೊಲಬನಾರೂ ಅರಿಯರಲ್ಲ. ಕೆರೆ ಬಾವಿ ಹಳ್ಳ ಕೊಳ್ಳ ಹೊಳೆಗಳ ನೀರ ಬಳಸದಿರ್ದಡೆ ಶೀಲವೆ ? ಕೊಡಕ್ಕೆ ಪಾವಡವ ಹಾಕಿ ಚಿಲುಮೆಯ ಶೀತಳವ ತಂದಡೆ ಶೀಲವೆ ? ಒಳ್ಳೆ ಭಂಗಿ ಉಳ್ಳೆ ನುಗ್ಗೆಯ ಬಿಟ್ಟಡೆ ಶೀಲವೆ ? ಬೆಳೆದ ಬೆಳೆಸು ಕಾಯಿಹಣ್ಣುಗಳ ಬಿಟ್ಟಡೆ ಶೀಲವೆ ? ಉಪ್ಪು ಎಣ್ಣೆ ತುಪ್ಪ ಹಾಲು ಇಂಗು ಮೆಣಸು ಅಡಿಕೆ ಬೆಲ್ಲಗಳ ಬಿಟ್ಟಡೆ ಶೀಲವೆ ? ಪರಪಾಕವ ಬಿಟ್ಟು ಸ್ವಯಪಾಕದಲ್ಲಿರ್ದಡೆ ಶೀಲವೆ ? ಅಲ್ಲಲ್ಲ. ಭವಿಕಾಣಬಾರದಂತಿರ್ದಡೆ ಶೀಲವೆ ? ಅಲ್ಲಲ್ಲ. ಅದೇನು ಕಾರಣವೆಂದೊಡೆ : ಇಂತಿವೆಲ್ಲವು ಹೊರಗಣ ವ್ಯವಹಾರವು. ಇನ್ನು ಅಂತರಂಗದ ಅರಿಷಡ್ವರ್ಗಂಗಳೆಂಬ ಭವಿಯ ಕಳೆಯಲಿಲ್ಲ. ಮಾಯಾಮೋಹವೆಂಬ ಒಳ್ಳೆ ಭಂಗಿ ಉಳ್ಳೆ ನುಗ್ಗೆಯ ಬಿಡಲಿಲ್ಲ. ಸಂಸಾರವಿಷಯರಸವೆಂಬ ಹಳ್ಳ ಕೊಳ್ಳ ಕೆರೆ ಬಾವಿಗಳ ನೀರ ನೀಗಲಿಲ್ಲ. ಅಷ್ಟಮದಂಗಳೆಂಬ ಉಪ್ಪು ಎಣ್ಣೆ ತುಪ್ಪ ಹಾಲು ಇಂಗು ಮೆಣಸು ಅಡಿಕೆ ಬೆಲ್ಲಗಳ ಬಿಡಲಿಲ್ಲ. ಸಕಲ ಕರಣಂಗಳೆಂಬ ಬೆಳಸು ಫಲಂಗಳ ಬಿಡಲಿಲ್ಲ. ಮನವೆಂಬ ಕೊಡಕ್ಕೆ ಮಂತ್ರವೆಂಬ ಪಾವಡವ ಮುಚ್ಚಿ ಚಿತ್‍ಕೋಣವೆಂಬ ಚಿಲುಮೆಯಲ್ಲಿ ಚಿದಾಮೃತವೆಂಬ ಶೀತಳವ ತಂದು ಚಿನ್ಮಯಲಿಂಗಕ್ಕೆ ಅಭಿಷೇಕವ ಮಾಡಲಿಲ್ಲ. ಇಂತೀ ಅಂತರಂಗದ ಪದಾರ್ಥಂಗಳ ಬಿಟ್ಟು ಮುಕ್ತಿಯ ಪಡೆವೆನೆಂಬ ಯುಕ್ತಿಗೇಡಿಗಳಿಗೆ ಭವಬಂಧನಂಗಳು ಹಿಂಗಲಿಲ್ಲ, ಜನನಮರಣಂಗಳು ಜಾರಲಿಲ್ಲ, ಸಂಸಾರದ ಮಾಯಾಮೋಹವ ನೀಗಲಿಲ್ಲ. ಇಂತಪ್ಪ ಅಜ್ಞಾನಜೀವಿಗಳ ವಿಧಿಯೆಂತಾಯಿತ್ತೆಂದಡೆ : ಹುತ್ತದೊಳಗಣ ಹಾವ ಕೊಲುವೆನೆಂದು ಮೇಲೆ ಹುತ್ತವ ಬಡಿದ ಅರೆಮರುಳನಂತಾಯಿತ್ತು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕಾರಣದಿಂದ ಕಾಯವ ಬಿಟ್ಟಡೆ ಶೋಕವೇಕೆ ? ಶಿವಭಕ್ತರು ಶಿವಾತ್ಮಸ್ವರೂಪು, ಎನ್ನವರು ಅನ್ಯರೆಂದುಂಟೆ ? ಇದು ಗನ್ನದ ಮಾತೆಂದೆ ಶಂಭುಜಕ್ಕೇಶ್ವರಾ.
--------------
ಸತ್ಯಕ್ಕ
ಮಾಡುವರ ಮಾಟಕ್ಕಂಜಿ ತೂತ ಬಿಟ್ಟಡೆ ಅದೇತರ ಯೋಗ? ಅದೇತರ ಪೂಜೆ? ಪರರ ಬೇಡುವ ಬಾಯಿ ತೂತ ಮುಚ್ಚಿದಡೆ ಆಸೆಗೆ ಹೊರಗು, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಹಿಡಿದು ಬಿಟ್ಟಡೆ ಮಹಾಪ್ರಮಥರಿಗೆ ದೂರ. ಬಿಡದಿರ್ದಡೆ ಮಹಾಬೆಳಗಿಂಗೆ ದೂರ. ಹಿಡಿಯಬಾರದು, ಬಿಡಬಾರದು. ಇಂತೀ ಲಿಂಗೈಕ್ಯವನಿನ್ನಾರಿಗೆ ಉಸುರುವೆ, ನಿಃಕಳಂಕ ಮಲ್ಲಿಕಾಜುನಾ ?
--------------
ಮೋಳಿಗೆ ಮಾರಯ್ಯ
ರೇತ ರಕ್ತವು ಕೂಡಿದ ಒಡಲು ಭೂತವಿಕಾರದಿಂದ ಚಲಿಸುತ್ತಿಹುದು, ಕೀಳುದೊತ್ತಿನ ಕೈಯಲಳಿವುದು. ಇದರ ತೂಳವ ಬಿಟ್ಟಡೆ ಆನಂದಸಿಂಧು ರಾಮೇಶ್ವರಲಿಂಗದ ನಿಜಪದವಪ್ಪುದು ಕಾಣಿರೇ.
--------------
ನಾಚೇಶ್ವರ
ಕಾಯ ತೊಟ್ಟಿನಲ್ಲಿ ನೀರ ಬಿಟ್ಟಡೆ ಕಾಯಿ ನಿಂದುದುಂಟೆ ಬೇರೊಣಗಿದ ಮತ್ತೆ ? ಇಂತೀ ಮೂಲಭೇದದಿಂದ ಶಾಖೆ ಪರ್ಣ ಫಲವಲ್ಲದೆ ಮೊದಲಿಗೆ ನಷ್ಟಲಾಭಕ್ಕೆ ದಿನವುಂಟೆ ? ಜ್ಞಾನಹೀನನು ಆವ ಸ್ಥಲವ ನೆಮ್ಮಿ ಮಾತನಾಡಿದಡೂ ಷಡುಸ್ಥಲದಲ್ಲಿ ಭಾವಶುದ್ಭವಾಗಿಪ್ಪನೆ ? ಇದು ಕಾರಣದಲ್ಲಿ ಗುರುವಾಜ್ಞೆಯ ಮೀರದೆ ಶಿವಲಿಂಗಪೂಜೆಯ ಮರೆಯದೆ ಜಂಗಮಸೇವೆಯಲ್ಲಿ ಸನ್ನದ್ಧನಾಗಿ ಆವುದಾನೊಂದು ವ್ರತವೆಂದು ಹಿಡಿದು ಅದ್ವೈತವನರಿದೆನೆಂದು ಬಿಡದೆ ನಿಂದನಿಂದ ಸ್ಥಲಕ್ಕೆ ನಿಬದ್ಧಿಯಾಗಿ ನಿಂದಲ್ಲಿಯೆ ಲಿಂಗಸಂಗ ಸಂಗನಬಸವಣ್ಣನ ಸಾಕ್ಷಿಯಾಗಿ ಬ್ರಹ್ಮೇಶ್ವರಲಿಂಗವನರಿದುದು.
--------------
ಬಾಹೂರ ಬೊಮ್ಮಣ್ಣ
ಹೊಲ ಬೆಳೆದಲ್ಲಿ ಹುಲ್ಲೆಗಳು ಇರಗುಡವು. ಹುಲ್ಲೆಯ ಹೊಡೆಯಬಾರದು, ಹೊಲನ ಮೇಯಬಾರದು. ಬಿಟ್ಟಡೆ ವರ್ತನಕ್ಕೆ ಭಂಗ, ಹಿಡಿದಡೆ ಜ್ಞಾನಕ್ಕೆ ಭಂಗ. ಇಂತೀ ಸಮಯವ ಜ್ಞಾನದಲ್ಲಿ ತಿಳಿಯಬೇಕಯ್ಯಾ. ಹಾವು ಸಾಯದೆ, ಕೋಲು ಮುರಿಯದೆ, ಹಾವು ಹೋಹ ಪರಿ ಇನ್ನೆಂತಯ್ಯಾ ! ಅದು ಗಾರುಡಂಗಲ್ಲದೆ ಗಾವಿಲ [ ಗಂಜದು ] . ಆ ತೆರ ಸ್ವಯಾನುಭಾವಿಗಲ್ಲದೆ ಶ್ವಾನಜ್ಞಾನಿಗುಂಟೆ ? ಮುಚ್ಚಿದಲ್ಲಿ ಅರಿದು, ತೆರೆದಲ್ಲಿ ಮರೆದು, ಇಂತೀ ಉಭಯದಲ್ಲಿ ಕುಕ್ಕುಳಗುದಿವವರಿಗುಂಟೆ , ನಿಃಕಳಂಕ ಮಲ್ಲಿಕಾರ್ಜುನನ ಸುಚಿತ್ತದ ಸುಖ?
--------------
ಮೋಳಿಗೆ ಮಾರಯ್ಯ
ಕುರುಹೆಂಬೆನೆ ಕಲ್ಲಿನಲ್ಲಿ ಹತ್ತಿದ ಹಾವಸೆ, ಅರಿವೆಂಬೆನೆ ಕಾಣಬಾರದ ಬಯಲು, ಒಂದನಹುದು ಒಂದನಲ್ಲಾಯೆಂದು ಬಿಡಬಾರದು. ಬಿಟ್ಟಡೆ ಸಮಯವಿಲ್ಲ, ಜಿಡ್ಡ ಹಿಡಿದಡೆ ಜ್ಞಾನವಿಲ್ಲ, ಉಭಯದ ಗುಟ್ಟಿನಲ್ಲಿ ಕೊಳೆವುತ್ತಿದೇನೆ ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಸರ್ವಸಂಗಪರಿತ್ಯಾಗ ಮಾಡಿದ ಶಿವಶರಣನ ಲೋಕದ ಸಂಸಾರಿಗಳೆಂತು ಮೆಚ್ಚುವರಯ್ಯಾ ? ಊರೊಳಗಿರ್ದಡೆ [ಸಂಸಾರಿ] ಎಂಬರು, ಅಡವಿಯೊಳಗಿರ್ದಡೆ ಮೃಗನೆಂಬರು ಹೊನ್ನ ಬಿಟ್ಟಡೆ ದರಿದ್ರನೆಂಬರು, ಹೆಣ್ಣ ಬಿಟ್ಟಡೆ ನಪುಂಸಕನೆಂಬರು, ಮಣ್ಣ ಬಿಟ್ಟಡೆ ಪೂರ್ವಕರ್ಮಿ ಎಂಬರು, ಮಾತನಾಡದಿರ್ದಡೆ ಮೂಗನೆಂಬರು ಮಾತನಾಡಿದಡೆ ಜ್ಞಾನಿಗೇಕಯ್ಯಾ ಮಾತೆಂಬರು ನಿಜವನಾಡಿದಡೆ ನಿಷು*ರಿಯೆಂಬರು, ಸಮತೆಯನಾಡಿದಡೆ ಅಂಜುವನೆಂಬರು. ಇದು ಕಾರಣ ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣ ಲೋಕದಿಚ್ಛೆಯ ನುಡಿಯ ಲೋಕದಿಚ್ಛೆಯ ನಡೆಯ !
--------------
ಚನ್ನಬಸವಣ್ಣ
ಇನ್ನಷ್ಟು ... -->