ಅಥವಾ

ಒಟ್ಟು 35 ಕಡೆಗಳಲ್ಲಿ , 7 ವಚನಕಾರರು , 35 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಗ್ನಿಗಿರಿಯ ಪಟ್ಟಣದ ಚಂದ್ರಗಿರಿಯ ಪಟ್ಟಣದ ನಡುವೆ ಎರಡೆಸಳ ಸ್ಥಾವರ ಗದ್ದುಗೆಯ ಕಂಡೆನಯ್ಯ. ಆ ಗದ್ದುಗೆಯ ಮೇಲೆ ಸ್ಫಟಿಕವರ್ಣದ ಮೂರ್ತಿ ನೆಲೆಯಂಗೊಂಡಿರ್ಪನು ನೋಡಾ. ಆ ಸ್ಫಟಿಕವರ್ಣದಮೂರ್ತಿಯ ಕೂಡಿ ಅಗ್ನಿಗಿರಿಯ ಪಟ್ಟಣಮಂ ಹೊಗಲು, ಅಲ್ಲಿ ಆಚಾರಲಿಂಗದೇವರು, ಗುರುಲಿಂಗದೇವರು, ಶಿವಲಿಂಗದೇವರು ನೆಲೆಯಂಗೊಂಡಿರ್ಪರು ನೋಡಾ. ಅವರಿಗೆ ಸೂಚನೆಯ ಮುಟ್ಟಿಸಲು ಆಚಾರಲಿಂಗದೇವರು ನಾಶಿಕಾಗ್ರದಲ್ಲಿ ನೆಲೆಯಂಗೊಂಡರು. ಗುರುಲಿಂಗದೇವರು ಜಿಹ್ವಾಗ್ರದಲ್ಲಿ ನೆಲೆಯಂಗೊಂಡರು. ಶಿವಲಿಂಗದೇವರು ನೇತ್ರಸ್ವಯದಲ್ಲಿ ನೆಲೆಯಂಗೊಂಡರು. ಆ ಸ್ಫಟಿಕವರ್ಣದ ಮೂರ್ತಿಯಂ ಕೂಡಿ ಚಂದ್ರಗಿರಿಯ ಪಟ್ಟಣಮಂ ಪೊಗಲು ಅಲ್ಲಿ ಜಂಗಮಲಿಂಗದೇವರು, ಪ್ರಸಾದಲಿಂಗದೇವರು, ಮಹಾಲಿಂಗದೇವರು ನೆಲೆಯಂಗೊಂಡಿರ್ಪರು ನೋಡಾ. ಅವರಿಂಗೆ ಸೂಚನೆಯಂ ಮುಟ್ಟಿಸಲು, ಜಂಗಮಲಿಂಗದೇವರು ತ್ವಕ್ಕಿನ ಸ್ವಯದಲ್ಲಿ ನೆಲೆಯಂಗೊಂಡಿರ್ಪರು. ಪ್ರಸಾದಲಿಂಗದೇವರು ಶ್ರೋತ್ರಸ್ವಯದಲ್ಲಿ ನೆಲೆಯಂಗೊಂಡಿರ್ಪರು. ಮಹಾಲಿಂಗದೇವರು ಭಾವಸ್ವಯದಲ್ಲಿ ನೆಲೆಯಂಗೊಂಡಿರ್ಪರು. ಆ ಸ್ಫಟಿಕವರ್ಣದ ಮೂರ್ತಿಯಂ ಕೂಡಿ, ಅಗ್ನಿಗಿರಿಯಪಟ್ಟಣ ಚಂದ್ರಗಿರಿಯ ಪಟ್ಟಣದ ಮುಂದಳ ದಿಕ್ಕಿನಲ್ಲಿ ಸಾವಿರೆಸಳಮಂಟಪ ಕಂಡೆನಯ್ಯ. ಆ ಮಂಟಪದೊಳಗೆ ಮಹಾಜ್ಞಾನಪ್ರಕಾಶವು ಹೊಳೆವುತಿರ್ಪುದು ನೋಡಾ. ಆ ಬೆಳಗಿನೊಳು ಕೂಡಿ ತಾನುತಾನಾಗಿರ್ಪನಯ್ಯ ಝೇಂಕಾರ ನಿಜಲಿಂಗಪ್ರಭುವೆ ನಿಮ್ಮ ಶರಣನು.
--------------
ಜಕ್ಕಣಯ್ಯ
ಐದು ತತ್ವ, ಐದು ಭೂತ, ಐದು ಅಂಗ, ಐದು ಲಿಂಗ, ಐದು ಸುಗಂಧ, ಐದರಿಂದತ್ತತ್ತ ಮಹಾಲಿಂಗದ ಬೆಳಗು. ಆ ಬೆಳಗಿನೊಳು ಕೂಡಿ ತಾನು ತಾನಾಗಿಪ್ಪ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹರಿತವರ್ಣದ ಮರಕ್ಕೆ ಶ್ವೇತವರ್ಣದ ಕೊಂಬೆಗಳು ಹುಟ್ಟಿದವು ನೋಡಾ! ಆ ಕೊಂಬೆಗೆ ಸ್ಫಟಿಕವರ್ಣದ ಕಡ್ಡಿಗಳಿಪ್ಪವು ನೋಡಾ ! ಅವಕ್ಕೆ ಸಾಸಿರದಳ ಎಲೆಗಳು ಹತ್ತಿಪ್ಪವು ನೋಡಾ ! ತುಟ್ಟತುದಿಯಲೊಂದು ಬಟ್ಟಬಯಲ ಹಣ್ಣಾಗಿಪ್ಪುದು ನೋಡಾ ! ಆ ಹಣ್ಣಿನ ಬೆಳಗಿನೊಳಗೆ ಐಕ್ಯಗಣಂಗಳು, ಶರಣಗಣಂಗಳು, ಪ್ರಾಣಲಿಂಗಿಗಣಂಗಳು, ಪ್ರಸಾದಿಗಣಂಗಳು, ಮಹೇಶ್ವರಗಣಂಗಳು, ಭಕ್ತಗಣಂಗಳು ತಿಂಥಿಣಿಯಾಗಿಪ್ಪರಯ್ಯ ಆ ಬೆಳಗಿನೊಳು ಕೂಡಿ ನಿಃಪ್ರಿಯವೆನಿಸಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ದೇವರ ನಿರೂಪದಿಂದ ದೇವಿಯ ಸಂಗವ ಮಾಡಿ ಸದಮಲ ಬೆಳಗಿನೊಳು ನಿಂದು, ದೇವಿ ದೇವ ಅನಾದಿ ಪ್ರಸಿದ್ಧನ ಆಚರಿಸುತಿಪ್ಪ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮಾಣಿಕ್ಯದ ಮಂಟಪದೊಳಗೆ ಏಳು ಚಿತ್ರಕರೊಡನೆ ಮೇಳವಿಸಿದನು ಮಹಾಮಂತ್ರಂಗಳ. ಮೂಲಮಂತ್ರದ ಮೇಲೆ ಪ್ರಾಣಲಿಂಗದ ಬೆಳಗು! ವಾರಿಕಲ್ಲಲ್ಲಿ ವಜ್ರದ ಕೀಲು ಕೂಟ ಜಾಳಾಂಧರದೊಳಗೆ ಮಾಣಿಕ್ಯದ ಪ್ರತಿಬಿಂಬ ಏಳು ರತ್ನದ ಪುತ್ಥಳಿಗಳಾಟವು, ಮಣಿಮಾಲೆಗಳ ಹಾರ, ಹೊಳೆವ ಮುತ್ತಿನ ದಂಡೆ, ಎಳೆಯ ನೀಲದ ತೊಡಿಗೆಯನೆ ತೊಟ್ಟರು, ಸುಳಿದು ಮದ್ದಳೆಗಾರರೊಳು ಮೊಳಗೆ (ದಂದ?) ಮೆನಲು ಕುಣಿವ (ಪಾಡುವ) ಬಹುರೂಪಿಗಳ ನಾಟಕ, ತಾಳಧಾರಿಯ ಮೇ? ಕಹಳೆಗಾರನ ನಾದ ಕೊಳಲ ರವದೊಳಗಾಡುತ್ತ ಒಳಹೊರಗೆ ಕಾಣಬರುತ್ತದೆ ಚಿತ್ರದ ಬೊಂಬೆ! ಫಣಿಪತಿಯ ಕೋಣೆ ಸಂದಣಿಸುತ್ತಿರಲು ಗಣಮೇ? ಕೂಡಲಚೆನ್ನಸಂಗಯ್ಯನಲ್ಲಿ ಕಳಸ (ಕಳಾಸರಿ) ಪ್ರಾಣಲಿಂಗದ ಬೆಳಗಿನೊಳು ಬೆಳಗಿತ್ತು
--------------
ಚನ್ನಬಸವಣ್ಣ
ಬೆಳಗಿನೊಳು ಮಹಾಬೆಳಗಿನ ಜ್ಯೋತಿಯ ಕಂಡೆನು, ಶತಕೋಟಿ ಮಿಂಚಿನ ಪ್ರಭೆಯ ಕಂಡೆನು, ಅನಿಲನ ಸಂಗದಲುರಿವ ಕರ್ಪುರದ ಗಿರಿಯ ಕಂಡೆನು. ಕಂಡ ಕಾರಣ, ಎನ್ನ ಪಿಂಡದೊಳಗಿಹ ಸ್ವಯಜ್ಞಾನವೆ ಪರಬ್ರಹ್ಮವೆಂದು ತಿಳಿದು ಸಂತೈಸುತಿದ್ದೆ. ಭೇದದಿಂದೆ ಪರಮಾತ್ಮ ಎನ್ನ ಮತ್ರ್ಯಕ್ಕೆ ಆಜ್ಞೆಯಿಸಿ ಕಳುಹಿ ಅಂಜದಿರೆಂದು ಅಭಯಕೊಟ್ಟು, ತಲೆದಡಹಿ, ನೀನಿದ್ದಲ್ಲಿ ನಾನಿಹೆನೆಂದು ನಿರೂಪಿಸಿ, ಆದಿಪಿಂಡವ ಮಾಡಿ, ಜಗಕ್ಕೆ ನಿರ್ಮಿಸೆ, ಹೇಮಗಲ್ಲ ಹಂಪನೆಂಬ ನಾಮವಿಡಿದು ಬಂದೆ. ಆ ಭೇದವ ಪಿಂಡಜ್ಞಾನದಿಂದಲರಿದು ಆಚರಿಸುತ್ತಿದ್ದೆನು ಎನ್ನಾಳ್ದ Wಪರಮಘೆಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಂತರಂಗದ ಬೆಳಗಿನೊಳು ನಿಂತಾತನೆ ನಿರ್ಮಳಜ್ಞಾನಿ ನೋಡಾ. ಆ ನಿರ್ಮಳಜ್ಞಾನಿಯ ಸಂಗದಿಂದ ಅಗಮ್ಯ ಅಗೋಚರ ಅಘಟಿತ ಅಪ್ರಮಾಣ ಲಿಂಗವು ತೋರಲುಪಟ್ಟಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಾಯದ ಗುಣಗಳನಳಿದು, ಮಾಯದ ಬಲೆಗೆ ಸಿಲ್ಕದೆ. ಮನೋಭಾವದೊಳು ಕೂಡಿ, ಆತ್ಮನೆಂಬ ಬೆಳಗಿನೊಳು ನಿಂದು ಬಯಲಿಂಗೆ ಬಯಲು ಇದೆಯೆಂದು ಆಚರಿಸುತಿರ್ದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆತ್ಮನೆಂಬ ಬೆಳಗಿನೊಳು ನಿರಾತ್ಮನೆಂಬ ಉದಯದೋರಿ ಅತ್ತತ್ತಲೆ ಘನಕೆ ಘನವ ತೋರಿ ನಿಂದಬಳಿಕಿನ್ನು ಎತ್ತ ಯೋಗ ಹೇಳಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗಲಿಂಗ ಸಮರಸವಾದಲ್ಲದೆ, ಸಂಗವ ಮಾಡನಯ್ಯ ನಿಮ್ಮ ಶರಣನು. ಶ್ರೋತ್ರಲಿಂಗ ಸಮರಸವಾದಲ್ಲದೆ, ಶಬ್ದಾದಿಗಳ ಕೇಳನಯ್ಯ ನಿಮ್ಮ ಶರಣನು. ತ್ವಕ್ಕುಲಿಂಗ ಸಮರಸವಾದಲ್ಲದೆ, ಸ್ಪರುಶನಾದಿಗಳ ಮಾಡನಯ್ಯ ನಿಮ್ಮ ಶರಣನು. ನೇತ್ರಲಿಂಗ ಸಮರಸವಾದಲ್ಲದೆ, ರೂಪಾದಿಗಳ ನೋಡನಯ್ಯ ನಿಮ್ಮ ಶರಣನು. ಜಿಹ್ವೆಲಿಂಗ ಸಮರಸವಾದಲ್ಲದೆ, ಷಡುರುಚಿಯ ಕೇಳನಯ್ಯ ನಿಮ್ಮ ಶರಣನು. ಪ್ರಾಣಲಿಂಗ ಸಮರಸವಾದಲ್ಲದೆ, ಗಂಧವ ಕೇಳನಯ್ಯ ನಿಮ್ಮ ಶರಣನು. ಇದು ಕಾರಣ, ಇಂತಪ್ಪ ಭೇದವನರಿತು, ಮಹಾಲಿಂಗದ ಬೆಳಗಿನೊಳು ಕೂಡಿ ಪರಿಪೂರ್ಣತ್ವದಿಂದ ಪರಾಪರಂ ನಾಸ್ತಿಯಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಲಿಂಗಬೆಳಗಿನೊಳು ಗಂಧವನಿತ್ತು ಕೊಂಬ ಮಂಗಲಮಹಿಮನ ನೋಡಾ. ಲಿಂಗಬೆಳಗಿನೊಳು ರಸವನಿತ್ತು ಕೊಂಬ ಚದುರಗುಣಯುತನ ನೋಡಾ. ಲಿಂಗಬೆಳಗಿನೊಳು ರೂಪವನಿತ್ತು ಕೊಂಬ ಸುಪ್ರಭಾಮಯನ ನೋಡಾ. ಲಿಂಗಬೆಳಗಿನೊಳು ಸ್ಪರ್ಶನವನಿತ್ತು ಕೊಂಬ ಪರುಷಮಯನ ನೊಡಾ. ಲಿಂಗಬೆಳಗಿನೊಳು ಶಬ್ದವನಿತ್ತು ಕೊಂಬ ಶುದ್ಧಪ್ರಭಾಮಯನ ನೋಡಾ. ಲಿಂಗಬೆಳಗಿನೊಳು ತೃಪ್ತಿಯನಿತ್ತು ಕೊಂಬ ಚಿತ್ಪ್ರಕಾಶಮಯನ ನೋಡಾ. ಗುರುನಿರಂಜನ ಚನ್ನಬಸವಲಿಂಗ ಬೆಳಗಿನೊಳು ಸಮರಸಪ್ರಸಾದಿಯ ಸಾವಧಾನವ ನೋಡಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆರು ಬಣ್ಣದ ಪಟ್ಟಣದೊಳಗೆ ಮೂರು ಬಣ್ಣದ ಕೊತ್ತಳವ ಕಂಡೆನಯ್ಯ. ಮೂರು ಬಣ್ಣದ ಕೊತ್ತಳದಿಂದತ್ತತ್ತ ಸಾವಿರಕಂಬದ ಶಿವಾಲಯವ ಕಂಡೆನಯ್ಯ. ಆ ಶಿವಾಲಯದೊಳಗೆ ಪರಮಾನಂದ ಲಿಂಗವು ತೊಳಗಿ ಬೆಳಗುತಿಪ್ಪುದು ನೋಡಾ. ಆ ಬೆಳಗಿನೊಳು ಕೂಡಿ ಪರಿಪೂರ್ಣವಾದ ಶರಣನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆದಿಯಾಧಾರಮಂ ಮಾಡಿ, ಅಜಕೋಟಿ ಬ್ರಹ್ಮಾಂಡಂಗಳ ಮಾಡಿ ಈರೇಳು ಭುವನಂಗಳಂ ಮಾಡಿ ಹರ ಲೀಲೆಯಾಡುವಲ್ಲಿ_ ಹರಿವಿರಿಂಚಿಗಳ ಸುರಾಸುರರ ಶಿರೋಮಾಲೆಯನಿಕ್ಕಿ ಕುಣಿದಾಡುವಲ್ಲಿ ಪಾದ ರಸಾತಳಕ್ಕಿಳಿದು ಭುವನ ಜಲಮಯವಾದಲ್ಲಿ ಹಸ್ತ ಮಕುಟ ತಾಗಿ ಸಕಲಲೋಕಂಗಳೆಲ್ಲವೂ ನಿರವಯಲಾದಲ್ಲಿ ನಿಜದ ಬೆಳಗಿನ ಬೆಳಗಿನೊಳು `ಸ್ಯೋಹಂ' ಎನಲು, ವಿಚಾರದಿಂದ ಘನಮನವಾದಂದು, ಗುಹೇಶ್ವರಾ ನೀನೆ ಲಿಂಗ, ನಾನೆ ಜಂಗಮ, ಬಸವಣ್ಣನೇ ಭಕ್ತ !
--------------
ಅಲ್ಲಮಪ್ರಭುದೇವರು
ಹೃದಯದೊಳಗಿಪ್ಪ ಪ್ರಾಣಲಿಂಗವನು ಸದಮಲ ಬೆಳಗಿನೊಳು ತಂದು ಅನಾದಿಯಲ್ಲಿ ನಿಂದು ಸಾಧಿಸಿ ಭೇದಿಸಿ ತಾನುತಾನಾಗಿಪ್ಪ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪರುಷದ ಗಿರಿಯಲ್ಲಿ ಚಿಂತಾಮಣಿ ರತ್ನದ ಕಂಡೆನಯ್ಯ. ಅದು ಅನಂತಕೋಟಿ ಸೋಮಸೂರ್ಯರ ಬೆಳಗು ನೋಡ. ಅತಿಶಯದ ಬೆಳಗಿನ ಬೆಳಗಿನೊಳು ಆನಂದಸುಖದೊಳಗೋಲಾಡುತಿರ್ದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇನ್ನಷ್ಟು ... -->