ಅಥವಾ

ಒಟ್ಟು 73 ಕಡೆಗಳಲ್ಲಿ , 33 ವಚನಕಾರರು , 63 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನು ಆ ಆತ್ಮನು ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಪಂಚಭೂತಂಗಳಂ ಪಂಚಭೂತಾಂಶಿಕಮಂ ಕೂಡಿಕೊಂಡು ದೇಹವಾಗಿ ಬೆಳೆದು, ಆಧ್ಯಾತ್ಮಿಕ, ಆದ್ಥಿದೈವಿಕ, ಆದ್ಥಿಭೌತಿಕವೆಂಬ ತಾಪತ್ರಯಂಗಳಿಂದ ನೊಂದು ಬೆಂದು ಪುಣ್ಯಪಾಪ ವಶದಿಂದ ಜೀವನಾಗಿ, ಅಂಡಜ, ಸ್ವೇದಜ, ಉದ್ಬಿಜ, ಜರಾಯುಜವೆಂಬ ಚೌರಾಶಿಲಕ್ಷ ಜೀವಜಂತುಗಳ ಯೋನಿಯಲ್ಲಿ ಬಂದು, ಹುಟ್ಟದ ಯೋನಿಯಿಲ್ಲ, ಮೆಟ್ಟದ ಭೂಮಿಯಿಲ್ಲ, ಉಣ್ಣದ ಆಹಾರವಿಲ್ಲ, ಕಾಣದ ಸುಖದುಃಖವಿಲ್ಲ. ಇದಕ್ಕೆ ಈಶ್ವರ ಉವಾಚ : ``ನಾನಾಯೋನಿಸಹಸ್ರಾಣಿ ಗತ್ವಾ ಚೈವಂತು ಮಾಯಯಾ | ಆಹಾರಂ ವಿವಿಧಂ ಭುಕ್ತ್ವಾ ಪೀತ್ವಾ ಚ ವಿವಿಧಸ್ತನಾನ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಂಸಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಕಾಯದ ಕಣ್ದೆರೆಯಿಂದುದಯವಾದ ಧಾವತಿ ಎರಡು ನೋಡಯ್ಯಾ : ಅಯ್ಯಾ ಭ್ರಾಂತಿಯತ್ತಲೊಂದೆಳವುತ್ತಲದೆ ದೇವಾ ನಿಮ್ಮತ್ತಲೊಂದೆಳವುತ್ತಲದೆ. ಒಂದರ ಸಹಜವನೊಂದು ಗೆಲಲರಿಯದು. ಮುಂದೆ ಸತ್ಪಥಕ್ಕೆಂತಡಿಯಿಡುವೆನಯ್ಯಾ ನಾನು ? ಕಾಲಚಕ್ರದಲ್ಲಿ ಹುಟ್ಟಿ, ಕರ್ಮಚಕ್ರದಲ್ಲಿ ಬೆಳೆದು ಕಲ್ಪಿತದಿಂದವೆ ದಿನಂಗಳು ಸವೆವುತ್ತವೆಯಯ್ಯಾ. ತಲೆಯೆರಡರ ಪಕ್ಷಿ ವಿಷ ನಿರ್ವಿಷವ ಮೆಲಿದಂತಾಯಿತ್ತೆನಗಯ್ಯಾ. ಅಂದಂದಿನರಿವು ಅಂದಂದಿನ ಮರವೆಗೆ ಸರಿಯಯ್ಯಾ. ತಂದೆ ಈ ದಂದುಗವ ಮಾಣಿಸಿ ನಿಮ್ಮ ನಿಜಾನಂದಭಕ್ತಿಯೆನಗೆ ಕರುಣಿಸಯ್ಯಾ ಅಮರಗುಂಡದ ಮಲ್ಲಿಕಾರ್ಜುನಾ.
--------------
ಪುರದ ನಾಗಣ್ಣ
ವೇದವೆಂಬುದು ವೇದ್ಯರಿಗಲ್ಲದೆ ಸಾಧ್ಯವಲ್ಲ. ಅದೆಂತೆಂದಡೆ : ಬಿಂದು ವ್ಯಂಜನ ಗುರು ಲಘು ಸಮಾಸ ವಿಭಕ್ತಿಯ ನೇಮ ಬೀಜಾಕ್ಷರ ಐವತ್ತೆರಡರ ಭೇದದೊಳಗಲ್ಲದೆ, ಇಂತಿವೆಲ್ಲವೂ ಒಂದರಲ್ಲಿ ಹುಟ್ಟಿ, ಒಂದರಲ್ಲಿ ಬೆಳೆದು, ಒಂದರಲ್ಲಿ ಲಯವಹ ಕಾರಣ, ಇಂತೀ ವೇದಿಗಳೆಲ್ಲರೂ ವೇದಾಂತ ಸಿದ್ಧಾಂತದನುವನರಿಯದೆ, ಯಾಗವ ಮಾಡಿಹೆವೆಂದು ತಿಲ ಘೃತ ಸಮಿದೆ ಮೊದಲಾದ ಅಜಹತ ದಿಗ್ಭಂಧನಂಗಳಲ್ಲಿ ಪ್ರವರ್ತನ ಗ್ರಹಂಗಳಲ್ಲಿ ಕರ್ಮವ ಮಾಡಿ, ಅಗ್ನಿಗಾಹುತಿ ಕೊಟ್ಟಲ್ಲಿ , ಆತ ವೇದಾಂತನೆ ಬಲುರೋಗಾಂತನಲ್ಲದೆ ? ಇನ್ನು ವೇದಾಂತಸಿದ್ಧಿಯ ಕೇಳಿರೊ : ಪೂರ್ವದಲ್ಲಿ ಹುಟ್ಟುವದನರಿದು, ಮಧ್ಯದಲ್ಲಿ ಬೆಳೆವುದ ನಿಧಾನಿಸಿ, ಉತ್ತರದಲ್ಲಿ ಕಟ್ಟಕಡೆ ಎಂಬುದ ವಿಚಾರಿಸಿ ಲಕ್ಷಿಸಿ, ಇಂತೀ ತ್ರಿವಿಧದ ಭೇದವ ಕಿತ್ತುಹಾಕಿ, ಒಂ ಎಂಬ ಅರ್ಥವ ತಿಳಿದು, ನಯೆಂಬ ನಕಾರಮಂ ತಿಳಿದು, ನಾನಾರೆಂಬುದ ಭಾವಿಸಿ, ಮಯೆಂಬ ಮದರೂಪಂ ವರ್ಜಿಸಿ, ಶಿಯೆಂಬ ಶಿಕಾರವ ಸ್ವೀಕರಿಸಿ, ಯಯೆಂಬ ಯಕಾರವ ನಾಲ್ಕರಲ್ಲಿ ಏಕೀಕರಿಸಿದ ಮತ್ತೆ , ವೇದವೇದ್ಯನು ನೋಡಾ, ಲಲಾಮಬ್ಥಿಮಸಂಗಮೇಶ್ವರಲಿಂಗವು.
--------------
ವೇದಮೂರ್ತಿ ಸಂಗಣ್ಣ
ಮುತ್ತು ನೀರೊಳಗೆ ಹುಟ್ಟಿ ಮರಳಿ ನೀರಾಗದಂತೆ, ತಿಳಿಯ ಕಾಸಿದ ತುಪ್ಪ ಕ್ಷೀರವಾಗದಂತೆ, ತೊಟ್ಟುಬಿಟ್ಟ ಹಣ್ಣು ಹೂಮಿಡಿಯಾಗದಂತೆ, ಸಂಸಾರದಲ್ಲಿ ಹುಟ್ಟಿ ಅದ ಹೊದ್ದದೆ, ಸ್ವಯಂಪ್ರಕಾಶ ಲಿಂಗದ ಬೆಳಗಿನಲ್ಲಿ ಬೆಳೆದು, ತಲ್ಲೀಯವಾಗಿರ್ದರಯ್ಯಾ ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರು.
--------------
ಆದಯ್ಯ
ಅಲ್ಲಿಯೇ ಹುಟ್ಟಿ ಅಲ್ಲಿಯೇ ಬೆಳೆದು ಅಲ್ಲಿಯೇ ಮುಳುಗಿಹೋಗುವುದೇ ಲೋಕದಗತಿ. ಅಲ್ಲಿಯೇ ಹುಟ್ಟಿ ಅಲ್ಲಿಯೇ ಬೆಳೆದು ಅಲ್ಲಿಯೇ ಮುಳುಗಿಹೋಗುವುದೇ ಪಾರಮಾರ್ಥಗತಿ. ಇದು ಕಾರಣ ನೋಡಿ ಬಾ ಗುರುನಿರಂಜನ ಚನ್ನಬಸವಲಿಂಗದೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗುರುವರನಿಂದುದಿಸಿ, ಜಂಗಮಪಾದೋದಕಪ್ರಸಾದದಿಂದೆ ಬೆಳೆದು, ಪರಮಲಿಂಗೈಕ್ಯವು ನಮಗುಂಟೆಂದು ನುಡಿವ ನಾಲಿಗೆ ನೀಟಾಗಿಹುದು; ಗುರುವಿಗಿತ್ತ ತನುವು ನೀಟಾಗಿಹುದು. ಲಿಂಗದ ಮನ ಚೆಲುವಾಗಿಹುದು. ಜಂಗಮದ ಧನ ಸ್ವಚ್ಛವಾಗಿಹುದು. ಆಡಿರ್ದಂತೆ ಆಚರಿಸಿ ಅರ್ಪಿತವಾಗಲರಿಯದೆ ನಾಲಿಗೆ ಮರಳಿದರೆ ಕೀಳರೆ? ತನು ವಂಚಿಸಿ ಬಿದ್ದರೆ ದುರ್ಗತಿಗೆ ಎಳೆದುಹಾಕರೆ? ಮನಸ್ಸು ಮರಳಿ ಬಿದ್ದರೆ ನಾಚಿಕೆಯ ಕೊಳ್ಳರೆ? ದ್ರವ್ಯವ ಮರಳಿ ಸುಖಿಸಿದರೆ ವೈತರಣಿಯೊಳು ದುಃಖಬಡಿಸರೆ? ಇದು ಕಾರಣ ನಿಮ್ಮ ನಡತೆ ಯಮನಿಗೆ ಹಿಡಿತ ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬಯಲಿಂದಲೆ ಹುಟ್ಟಿ, ಬಯಲಿಂದಲೆ ಬೆಳೆದು, ಬಯಲಾಮೃತವನೆ ಉಂಡು, ಬಯಲನೆ ಉಟ್ಟು, ಬಯಲನೆ ತೊಟ್ಟು, ಬಯಲು ಬಯಲೊಳಗೆ ಬೆರೆದ ಭೇದವ, ಈ ಭುವನದೊಳಗೆ ಇಪ್ಪ ಭವಭಾರಿಗಳು ಎತ್ತಬಲ್ಲರು, ಭವವಿರಹಿತ ಶರಣರ ನಿಲವ, ಬಸವಪ್ರಿಯ ಕೂಡಲಚನ್ನಬಸವಣ್ಣಾ ?
--------------
ಹಡಪದ ಅಪ್ಪಣ್ಣ
ಮೊದಲು ರೂಪಾದ ಬಿತ್ತು, ಭೂಮಿಯಲ್ಲಿ ಬಿತ್ತಿ, ಅದು ಬೀಜ ನಾಮ ನಿಂದು, ಸಸಿಯೆಂಬ ನಾಮವಾಯಿತ್ತು. ಸಸಿ ಬಲಿದು ಬೆಳೆದು, ಉಂಡಿಗೆಯ ಬೀಜವೆಂಬ ಉಭಯನಾಮವ ತಾಳಿದುದು. ಬೀಜ ಒಂದೋ, ಎರಡೋ ? ಎಂಬುದನರಿದಲ್ಲಿ, ಕ್ರೀ ಶೂನ್ಯವೆಂಬ ಉಭಯನಾಮವಡಗಿತ್ತು. ಐಘಟದೂರ ರಾಮೇಶ್ವರಲಿಂಗ[ದ] ಉಭಯನಾಮ ನಿಂದಿತ್ತು.
--------------
ಮೆರೆಮಿಂಡಯ್ಯ
ಹುಳಿ ಬೆಳೆದು ಸಿಹಿಯಹ ತೆರನುಂಟು. ಸಿಹಿ ಬಲಿದು ಹುಳಿಯಹ ತೆರನುಂಟು. ಇಂತೀ ಉಭಯಸ್ಥಲಭೇದ ತದ್ಭಾವವಲ್ಲದೆ ಅನ್ಯವಲ್ಲ, ಏಣಾಂಕಧರ ಸೋಮೇಶ್ವರಲಿಂಗಕ್ಕೆ.
--------------
ಬಿಬ್ಬಿ ಬಾಚಯ್ಯ
ಗುರುಹಸ್ತದಲ್ಲಿ ಉತ್ಪತ್ಯವಾಗಿ, ಜಂಗಮಾನುಭವ ಶರಣರ ಸಂಗದಲ್ಲಿ ಬೆಳೆದು, ನಿಜಲಿಂಗದಲ್ಲಿ ಲೀಯವಾದ ಗುರುಚರ ಭಕ್ತರು ತಮ್ಮ ಸ್ಥೂಲಕಾಯವೆಂಬ ನರಕಂಥೆಯ ಕಳೆದರೆ, ಭಕ್ತ ಬಂಧುಗಳಾದ ಆಪ್ತ ಗಣಂಗಳು ಬಂದು ಸಮಾಧಿಯಂ ತೆಗೆದು, ಆ ಕಾಯವೆಂಬ ಕಂಥೆಯ ನಿಕ್ಷೇಪವಂ ಮಾಡುವುದೆ ಸದಾಚಾರ. ಇಂತಲ್ಲದೆ ಮೃತವಾದನೆಂದು ಗೂಟವಂ ಬಲಿದು, ಗುಂಟಿಕೆಯನಿಕ್ಕಿ, ಶೋಕಂಗೆಯ್ದು, ಪ್ರೇತಸೂತಕ ಕರ್ಮವಿಡಿದು, ತದ್ದಿನವಂ ಮಾಡುವದನಾಚಾರ, ಪಂಚಮಹಾಪಾತಕ. ಅವಂಗೆ ಗುರು ಲಿಂಗ ಜಂಗಮ ಪ್ರಸಾದವಿಲ್ಲ ಅದೆಂತೆಂದೊಡೆ: ``ಯೋ ಗುರುಂ ಮೃತಭಾವೇನ ತದ್ದಿನಂ ಯಸ್ಯ ಶೋಚ್ಯತೇ ಗುರುಲಿಂಗಪ್ರಸಾದಂ ಚ ನಾಸ್ತಿ ನಾಸ್ತಿ ವರಾನನೇ ಎಂದುದಾಗಿ, ಪ್ರೇತಸೂತಕದ ಪಾತಕರಿಗೆ ಅಘೋರನರಕ ತಪ್ಪದು. ಇಂತಪ್ಪ ಅಘೋರನರಕಿಗಳ ಮುಖವ ನೋಡಲಾಗದು ಕಾಣಾ ಕೂಡಲಚೆನ್ನಸಂಗಯ್ಯ.
--------------
ಚನ್ನಬಸವಣ್ಣ
ಧರೆಯನು ಧೂಳದಲ್ಲಿ ಬೆಳಗಿ, ನೀರನು ಜಲದಲ್ಲಿ ತೊಳೆದು, ಕಿಚ್ಚನು ಕೆಂಡದಲ್ಲಿ ಸುಟ್ಟು, ಗಾಳಿಯನು ವಾತದಲ್ಲಿ ತಿರುಹಿ, ಆಕಾಶವನು ಬಯಲಲ್ಲಿ ಬಗೆದು, ತನ್ನನು ತನ್ನಲ್ಲಿ ನೋಡಿ ಮಾಡಿ ಪೂಜಿಸಿ ಸುಖಿಸಲರಿಯದೆ ಪಂಚ ಪಂಚವರ್ತನಾಭಾವದ ಕಳೆಯಲ್ಲಿ ಬೆಳೆದು ತೋರಿ ಮಾಡಿ, ಮಾಟಕೂಟದ ಕೋಟಲೆಯೊಳಗೆ ಭಂಗಿತರಾದರು. ಅದು ಕಾರಣ ಚನ್ನ ಬಿಂದು ನಾದ ಕಳೆ ಪ್ರಸನ್ನಮೂರ್ತಿ ಲಿಂಗವು ಅಲ್ಲಿಯೇ ಹಿಂಗಿರ್ದನು ನಿರ್ಮಲಹೃದ್ಬೆಳಗಿನಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಒಮ್ಮೆ ನೆಲದಲ್ಲಿ ಬಿತ್ತಿದ ಬಿತ್ತುವ ಕಿತ್ತಿ ಕಿತ್ತಿ ಮತ್ತೆ ಬಿತ್ತುತ್ತ ಹೋದಡೆ, ಆ ಬಿತ್ತು ಮೊಳೆತು ಕಳೆಯೇರಿ ಬೆಳೆದು ಬೆಳಸನೀವ ಪರಿಯಿನ್ನೆಂತೊ, ಮರುಳು ಮಾನವಾ ? ಗುರುವಿತ್ತ ಲಿಂಗವ ತೊರೆ ತೊರೆದು ಮರಳಿ ಮರಳಿ ಧರಿಸಿದಡೆ ಆ ಇಷ್ಟಲಿಂಗವು ಅನಿಷ್ಟವ ಕಳೆದು ಇಷ್ಟಾರ್ಥವನೀವ ಪರಿಯಿನ್ನೆಂತೊ ? ಇದು ಕಾರಣ- ಕೂಡಲಚೆನ್ನಸಂಗಯ್ಯನಲ್ಲಿ ಮುಕ್ತಿಯನರಸುವಡೆ ಅಂಗನಲ್ಲಿ ಹೆರೆಹಿಂಗದೆ ಲಿಂಗವ ಧರಿಸಬೇಕು
--------------
ಚನ್ನಬಸವಣ್ಣ
ಲೀಲೆಯ ನೇಮಕ್ಕೆ ಹುಟ್ಟಿ ಬೆಳೆದು ಅಳೆಯ ಬಂದಾಣತಿಗೆ ಕಟ್ಟಳೆಯ ಕಡೆಗಿಡದೆ ಕಾಣಬೇಕು. ಹುಟ್ಟಿದೆನೆನಬಾರದು ಬೆಳೆದೆನೆನಬಾರದು ಅಳಿದೆನೆನಬಾರದು, ಅದೇ ಕೊರತೆ ನೋಡಾ. ಅನುಪಮ ನಾಮಕ್ಕೆ ಗುರುನಿರಂಜನ ಚನ್ನಬಸವಲಿಂಗ ತಾನಾದ ಶರಣ ಅರಿದರಿದಾಡುತಿರ್ದ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬೆಳೆದು ಬೆಳೆಯಿಸಿಕೊಂಬುದು ನೀರೊ ನೆಲನೊ ಬೀಜವೊ ಎಂಬುದ ತಿಳಿದು, ಕರ್ಮವರ್ಮ ಕೂಟಂಗಳ ಆಟವನರಿತು ವರ್ತನಕ್ಕೆ ಕ್ರೀ ಸತ್ಯಕ್ಕೆ ಜ್ಞಾನ ಜ್ಞಾನಕ್ಕೆ ಸರ್ವಜೀವದ ವ್ಯಾಪಾರ ಭೇದ. ಅದು ಸಂಪದ ಸಂಬಂಧ ತತ್ವ ಗೋಪತಿನಾಥ ವಿಶ್ವೇಶ್ವರಲಿಂಗದ ಕ್ರಿಯಾನಿರ್ವಾಹ.
--------------
ತುರುಗಾಹಿ ರಾಮಣ್ಣ
ಮಾಟಕೂಟವೆಂಬ ಹೊಲದಲ್ಲಿ, ಪಾಪರುಣ್ಯವೆಂಬ ಬೀಜವ ಬಿತ್ತೆ, ತಂಗಾಲಕ್ಕೆ ಬೆಳೆದು, ಮಳೆಗಾಲಕ್ಕೆ ತಗ್ಗಿ, ಹೊಲದ ಓವರಿಯಲ್ಲಿ ಜಲಬಿದ್ದು ಹೋಯಿತ್ತು. ಮತ್ತೆ ಹೊಲದ ಹೊಲಬಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->