ಅಥವಾ

ಒಟ್ಟು 36 ಕಡೆಗಳಲ್ಲಿ , 14 ವಚನಕಾರರು , 34 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೂಲಾಧಾರದ ಬೇರ ಮೆಟ್ಟಿ, ಭ್ರೂಮಂಡಲವನೇರಿದೆ. ಆಚಾರದ ಬೇರ ಹಿಡಿದು ಐಕ್ಯದ ತುದಿಯನೇರಿದೆ. ವೈರಾಗ್ಯದ ಸೋಪಾನದಿಂದ ಶ್ರೀಗಿರಿಯನೇರಿದೆ. ಕೈವಿಡಿದು ತೆಗೆದುಕೊಳ್ಳಾ, ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಗುರುವಿನ ಕೃಪೆಯಿಂದ ಸಾಧಾರಣ ತನುವ ಮರೆದೆ; ಗುರುವಿನ ಕೃಪೆಯಿಂದ ಮಲತ್ರಯದ ಪಂಕವ ತೊಳೆದೆ; ಗುರುವಿನ ಕೃಪೆಯಿಂದ ದೀಕ್ಷಾತ್ರಯದಿಂದ ಅನುಭಾವಿಯಾದೆ; ಗುರುವಿನ ಕೃಪೆಯಿಂದ ಶುದ್ಧ ಸಿದ್ಧ ಪ್ರಸಿದ್ಧ ಪ್ರಮಾಣವನರಿದೆ; ಎನಗಾದ್ಥಿಕ್ಯವಪ್ಪ ವಸ್ತು ಬೇರೊಂದಿಲ್ಲ. ಅದೇನುಕಾರಣ? ಅವ ನಾನಾದೆನಾಗಿ. ಗುರುವೆ ಎನ್ನ ತನುವಿಂಗೆ ಲಿಂಗೀಕ್ಷೆಯ ಮಾಡಿ, ಎನ್ನ ಜ್ಞಾನಕ್ಕೆ ಸ್ವಾನುಭಾವ ದೀಕ್ಷೆಯ ಮಾಡಿ, ಎನ್ನ ತನು-ಮನ-ಧನದಲ್ಲಿ ವಂಚನೆಯಿಲ್ಲದೆ ಮಾಡಲೆಂದು ಜಂಗಮದಿಕ್ಷೆಯ ಮಾಡಿ, ಎನ್ನ ಸರ್ವಾಂಗವು ನಿನ್ನ ವಿಶ್ರಾಮಸ್ಥಾನ, ಶುದ್ಧಮಂಟಪವಾದ ಕಾರಣ, ಲೋಕವ್ಯಾಪ್ತಿಯನರಿಯದೆ ಲೋಕ ಎನ್ನೊಳಗಾಯಿತ್ತು, ಆ ಲೋಕಕ್ಕೆ ಹೊರಗಾದೆನಾಗಿ. ಅದೇನು ಕಾರಣ? ಜನನ-ಮರಣ-ಪ್ರಳಯಕ್ಕೆ ಹೊರಗಾದೆನಾಗಿ. ಗುರುವೆ ಸದ್ಗುರುವೆ ಎನ್ನ ಭವದ ಬೇರ ಹರಿದ ಗುರುವೆ, ಭವಪಾಶ ವಿಮೋಚನ, ಅವ್ಯಯ, ಮನದ ಸರ್ವಾಂಗ ಲೋಲುಪ್ತ, ಭಕ್ತಿ ಮುಕ್ತಿ ಫಲಪ್ರದಾಯಕ ಗುರುವೆ, ಬಸವಣ್ಣ, ಕಪಿಲಸಿದ್ಧಮಲ್ಲಿಕಾರ್ಜುನಾ, ಚೆನ್ನಬಸವಣ್ಣನಾಗಿ ಪ್ರಭು ಮೊದಲಾಗಿ ಅಸಂಖ್ಯಾತರೆಲ್ಲರನು ತೋರಿದೆ ಗುರುವೆ.
--------------
ಸಿದ್ಧರಾಮೇಶ್ವರ
ತ್ರಿದೋಷದ ಗುಣದಿಂದ ನಾನಾ ಬಹುತಾಪತ್ರಯದ ವ್ಯಾದ್ಥಿಯ ಚಿಕಿತ್ಸೆಯನಾರು ಅರಿಯರಲ್ಲಾ ! ತನುವಿಂಗೆ ವಾತ, ಪೈತ್ಯ, ಶ್ಲೇಷ್ಮ , ಆತ್ಮಂಗೆ ಆಣವ, ಮಾಯಾ, ಕಾರ್ಮಿಕ. ಇಂತೀ ತ್ರಿವಿಧ ಮಲತ್ರಯದ ರೋಗರುಜೆಯಡಸಿ, ಬಂಧನದಲ್ಲಿ ಸಾವುತ್ತಿದೆ ಅಂಗ. ಈ ರೋಗ ನಿರೋಗವಹುದಕ್ಕೆ ನಾ ಮೂರು ಬೇರ ತಂದೆ. ಒಂದ ಅಂಗದಲ್ಲಿ ಮರ್ದಿಸಿ, ಒಂದು ಆತ್ಮನಲ್ಲಿ ಮಥನಿಸಿ, ಒಂದ ಅರಿವಿನಲ್ಲಿ ಪಾನವ ಮಾಡಿ, ಈ ರೋಗ ಹರಿವುದು. ಇದಕ್ಕನುಪಾನ ಇದಿರೆಡೆಯಿಲ್ಲ , ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗ ಸಾಕ್ಷಿಯಾಗಿ.
--------------
ವೈದ್ಯ ಸಂಗಣ್ಣ
ತದ್ದುತತುರಿ ಬಾವು ಬಗದಳ ಶೀತ ವಾತ ಬಹುಜ್ವರ ಹೊಟ್ಟೆಬೇನೆ ಕೆಟ್ಟ ಹುಣ್ಣು ಮೈಕುಷ್ಠ ಮೊದಲಾದ ಮುನ್ನೂರರುವತ್ತು ವ್ಯಾದ್ಥಿಗಳ, ಶಿವನು ಹರಿಯಬಿಟ್ಟು ನೋಡುವ. ಇವೆಲ್ಲ ಶಿವನ ಕರುಣವಾದಲ್ಲದೆ ಹೋಗವು. ಇದನರಿಯದೆ, ನಾರು ಬೇರ ನಚ್ಚಿದ ಅವಿದ್ಯ ಸಾಧಕರೆಲ್ಲ ಹತವಾಗಿ ಹೋದರಂದೆ. ಇಂತಿದ ವಿಚಾರಿಸಿ ತಿಳಿಯದೆ, ಲೋಕದ ಬುದ್ಧಿಗೇಡಿ ಮನುಜರು, ಸಜ್ಜನಶುದ್ಧಶಿವಾಚಾರಸಂಪನ್ನರಾದ ಜಂಗಮಲಿಂಗದ ಮಾತ ಕೇಳದೆ, ಅದ್ದನ ಜೋಳ, ಅರಪಾವು ಎಣ್ಣೆಯ ಕೊಂಡು, ನೋಟಕಾರ್ತಿಯ ಮನೆಗೆ ಹೋಗಿ, ಅವಳು ಹೇಳಿದ ತಾತುಭೂತದ ಕೋಟಲೆಯ ಕೈಕೊಂಡು ಬಂದು, ಅವಕ್ಕೂಟವನಟ್ಟಿಕ್ಕಿ,. ಮಿಕ್ಕಿದ ಕೂಳ ತನ್ನಿಷ್ಟಲಿಂಗಕ್ಕೆ ತೋರಿ ತಿಂಬ, ಲಿಂಗದ್ರೋಹಿಗಳಿಗೆ ಕುಂಬ್ಥೀಪಾತಕ ನಾಯಕನರಕ, ತಪ್ಪದೆಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಗುರುವೆ ಎನ್ನ ತನುವಿಂಗೆ ಲಿಂಗೀಕ್ಷೆಯ ಮಾಡಿ ಎನ್ನ ಜ್ಞಾನಕ್ಕೆ ಸ್ವಾನುಭಾವೀಕ್ಷೆಯ ಮಾಡಿ ಎನ್ನ ತನು ಮನ ಧನದಲ್ಲಿ ವಂಚನೆಯಿಲ್ಲದೆ ಮಾಡಲೆಂದು ಜಂಗಮದೀಕ್ಷೆಯ ಮಾಡಿ ಎನ್ನ ಸರ್ವಾಂಗವು ನಿನ್ನ ವಿಶ್ರಾಮಸ್ಥಾನ ಶುದ್ಧಮಂಟಪವಾದ ಕಾರಣ, ಲೋಕವ್ಯಾಪ್ತಿಯನರಿಯದೆ ಲೋಕ ಎನ್ನೊಳಗಾಯಿತ್ತು, ಆ ಲೋಕಕ್ಕೆ ಹೊರಗಾದೆ. ಅದೇನು ಕಾರಣ? ಜನನ ಮರಣ ಪ್ರಳಯಕ್ಕೆ ಹೊರಗಾದೆನಾಗಿ. ಗುರುವೆ ಸದ್ಗುರುವೆ ಎನ್ನ ಭವದ ಬೇರ ಹರಿದೆ ಗುರುವೆ, ಭವಪಾಶವಿಮೋಚ[ನ]ನೆ, ಅನ್ವಯ ಮನದ ಸರ್ವಾಂಗಲೋಲುಪ್ತ, ಭುಕ್ತಿಮುಕ್ತಿ ಫಲಪ್ರದಾಯಕ ಗುರುವೆ ಬಸವಣ್ಣ, ಕಪಿಲಸಿದ್ಧಮಲ್ಲಿಕಾರ್ಜುನ ಚೆನ್ನಬಸವಣ್ಣನಾಗಿ ಪ್ರಭು ಮೊದಲಾಗಿ ಅಸಂಖ್ಯಾತರನೆಲ್ಲರನು ತೋರಿದ ಗುರುವೆ.
--------------
ಸಿದ್ಧರಾಮೇಶ್ವರ
ಅಯ್ಯಾ ನೀ ಮಾಡಿದಂತಾನಾದೆ ನೀ ಇರಿಸಿದಲ್ಲಿದ್ದೆ ಅಯ್ಯಾ ನೀ ಉತ್ತರ ದಕ್ಷಿಣ ಪೂರ್ವ ಪಶ್ಚಿಮ ಅನಾಹತ ವಿಶುದ್ಧಿ ಆಜ್ಞೆ ಪ್ರಣವ ಪಂಚಮ ಸಮಾದ್ಥಿಯಲ್ಲಿ ನೀನು ಅನುಭವಿಸಿ ಮುಂದೆ ಇರಿಸುವದ ನಾನಿಂದೆ ಕಂಡೆ. ಅದೇನು ಹದರದಿಂದ? ನಿನ್ನವರು ಎನ್ನನೊಲ್ಲದಿದ್ದಡೆ ಆ ನಿನ್ನ ಪಾದವ ಹಿಡಿದೆ. ನೀ ನಿನ್ನ ಆ ರೂಪಬಿಟ್ಟು ಗುರುವಾಗಿ ಬಂದೆನ್ನ ಭವದ ಬೇರ ಹರಿದೆ. ನಾನರಿವುದೇನರಿದಯ್ಯ. ನೀ ಶುದ್ಧದಲ್ಲಿ ಹೊಕ್ಕಡೆ ಆನೊಡನೆ ಹೊಕ್ಕೆ, ನೀ ಸಿದ್ಧದಲ್ಲಿ ಹೊಕ್ಕಡೆ ಆನೊಡನೆ ಹೊಕ್ಕೆ, ನೀನು ಪ್ರಸಿದ್ಧದಲ್ಲಿ ಪ್ರವೇಶಿಸಿದಡೆ ಆನೊಡನೆ ಪ್ರವೇಶಿಸಿದೆ. ಎನಗಿನ್ನೇನು ಅರಿದಿಲ್ಲ. ಇನ್ನು ಹಿಂದೆ ತಿರಿಗಿ ನೋಡಿದೆನಾಯಿತ್ತಾದಡೆ ಭಕ್ತಿಯ ತೋರಿದ ತಂದೆ, ಎನ್ನ ಭವವ ತಪ್ಪಿಸಿದ ಗುರು ಕಪಿಲಸಿದ್ಧ ಮಲ್ಲಿಕಾರ್ಜುನಯ್ಯನ ತದ್ರೂಪಾದ ಬಸವಪ್ರಭುವಿನಾಣೆ.
--------------
ಸಿದ್ಧರಾಮೇಶ್ವರ
ನೋಟವನಿಟ್ಟು ನೋಡುತಿರಲು ಮೂರಾಯಿತ್ತು. ಮೂರನೆ ಮೂಲಿಗನೆಂದರಿದು, ಮುದುಡ ಹರಿದು, ಸದವ ಬಡಿದು, ಪೋದರೌ, ನಿರ್ದಸಿಗೆಯ ಪಿರಿದು ಕದಳಿಯ ಕಡಿದು, ಕಂಭ ಬೇವ ಬೆಂಬಳಿವಿಡಿದು ಹೋಗುತಿರಲು, ಬೇರೆ ಕಂಡೆ. ಕಿತ್ತಿಹೆನೆಂದಡೆ ಕೀಳಬಾರದು, ನೆಟ್ಟಿಹೆನೆಂದಡೆ ನೆಡಬಾರದು. ಬಯಲಲ್ಲಿ ಬೆಳೆದ ಬೇರ ಮುಟ್ಟಿ ಹುಟ್ಟುಗೆಟ್ಟು ಹೋದೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ !
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಇವಳ (ಅವಳ?) ನೋಟವೆನ್ನ ಮತ್ರ್ಯಕ್ಕೆ ತಂದಿತ್ತಯ್ಯಾ. ಇವಳ ಕೂಟ ಸವಿಯನವಗಡಿಸಿ ಕಾಡಿತ್ತಯ್ಯಾ. ಇವಳ ಬೇಟದ ಬೇರ ಹರಿದಲ್ಲಿ ತ್ರಿಪುರ ಹಾಳಾದುದ ಕಂಡೆನು. ಉರಿಯ ಮೇಲೆ ಉರಿ ಎರಗಿದಡೆ ತಂಪು ಮೂಡಿತ್ತ ಕಂಡೆನು. ಕರಿಯ ಬೇಡನ ಕಸ್ತುರಿಯ ಮೃಗ ನುಂಗಿದಡೆ ಹಿರಿಯ ಹೆಂಡತಿ ಓಲೆಗಳೆದುದ ಕಂಡೆನು. ಕಾರಿರುಳ ಕೋಟೆಯಲಿ ಕಲಿಯ ಕಾಳೆಗವ ಗೆಲಿದು ಹೂಳಿರ್ದ ನಿಧಾನವ ಕಂಡೆನು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಯ್ಯಾ, ನಾವು ಗುರು ಲಿಂಗ ಜಂಗಮದ ಪಾದೋದಕ ಪ್ರಸಾದಸಂಬಂದ್ಥಿಗಳೆಂದು ನುಡಿದುಕೊಂಬ ಪಾತಕರ ಮುಖವ ನೋಡಲಾಗದು. ಅದೇಕೆಂದಡೆ, ಪಾದೋದಕವ ಕೊಂಡ ಬಳಿಕ, ಜನನದ ಬೇರ ಕಿತ್ತೊರಸಬೇಕು. ಪ್ರಸಾದವ ಕೊಂಡ ಬಳಿಕ, ಪ್ರಳಯವ ಗೆಲಿಯಬೇಕು. ಇಂತಪ್ಪ ಚಿದ್ರಸ ಪಾದೋದಕ ಚಿತ್‍ಪ್ರಕಾಶ ಪ್ರಸಾದ. ತನ್ನ ಚಿನ್ಮನಸ್ವರೂಪವಾದ ಹೃದಯಮಂದಿರ ಮಧ್ಯದಲ್ಲಿ ನೆಲಸಿರುವ ಸಕೀಲಸಂಬಂಧವ ಚಿದ್ಘನ ಗುರುವಿನ ಮುಖದಿಂದ ಸಂಬಂದ್ಥಿಸಿಕೊಳಲರಿಯದೆ, ಅರ್ಥದಾಸೆಗಾಗಿ ಬಡ್ಡಿಯ ತೆಗೆದುಕೊಂಡು, ಬಡವರ ಬಂಧನಕಿಕ್ಕಿ, ತುಡುಗುವ್ಯಾಪಾರವ ಮಾಡಿ, ಸದಾಚಾರದಿಂದ ಆಚರಿಸಲರಿಯದೆ, ತನುಮನಧನದಲ್ಲಿ ವಂಚನೆಯಿಲ್ಲದ ಭಕ್ತಿಯನರಿಯದೆ, ತೀರ್ಥಪ್ರಸಾದದಲ್ಲಿ ನಂಬುಗೆ ವಿಶ್ವಾಸವಿಲ್ಲದೆ ಕಂಡವರ ಕೈಯೊಡ್ಡಿ ಇಕ್ಕಿಸಿಕೊಂಡು ವಿಶ್ವಾಸವಿಲ್ಲದವಂಗೆ ಅಷ್ಟಾವರಣವೆಂತು ಸಿದ್ಧಿಯಹುದೋ? ಅದೇನು ಕಾರಣವೆಂದಡೆ : ಸಕಲ ವೇದಾಗಮ ಪುರಾಣ ಸಪ್ತಕೋಟಿ ಮಹಾಮಂತ್ರ ಉಪಮಂತ್ರ ಕೋಟ್ಯಾನುಕೋಟಿಗೆ ಮಾತೃಸ್ಥಾನವಾದ ಪಂಚಾಕ್ಷರಿಯ ಮಂತ್ರ ಸಟೆಯಾಯಿತ್ತು. ಅನಂತಕೋಟಿ ಬ್ರಹ್ಮಾಂಡಗಳನೊಳಗೊಂಡಂಥ ಗುರುಕೊಟ್ಟ ಇಷ್ಟಲಿಂಗ ಸಟೆಯಾಯಿತ್ತು. ದೇಗುಲದೊಳಗಣ ಕಲ್ಲು ಕಂಚು ಕಟ್ಟಿಗೆ ಬೆಳ್ಳಿ ತಾಮ್ರ ಬಂಗಾರದ ದೇವರ ಪೂಜಿಸುವ ಪೂಜಾರಿಗಳ ಮಾತು ದಿಟವಾಗಿತ್ತು. ಆದಿ ಅನಾದಿಯಿಂದತ್ತತ್ತಲಾಗಿ ಮೀರಿ ತೋರುವ ಮಾಯಾಕೋಳಾಹಳ ನಿರಂಜನಜಂಗಮದ ಪಾದೋದಕ ಪ್ರಸಾದ ಸಟೆಯಾಯಿತ್ತು. ಕ್ಷೇತ್ರಾದಿಗಳ ತೀರ್ಥಪ್ರಸಾದ ದಿಟವಾಯಿತ್ತು. ಅಂತಪ್ಪ ಅಗಮ್ಯ ಅಗೋಚರವಾದ ಅಷ್ಟಾವರಣ ಇಂಥವರಿಗೆಂತು ಸಾಧ್ಯವಹುದು? ಆಗದೆಂದಾತ ನಮ್ಮ ಶರಣ ಕಲಿದೇವರದೇವ
--------------
ಮಡಿವಾಳ ಮಾಚಿದೇವ
ಇಂತೀ ವರ್ಮಭೇದಂಗಳ ಸ್ಥಲವಿವರಂಗಳ, ತತ್ವಭೇದಂಗಳ ನಿರೀಕ್ಷಿಸಿ ನೋಡಿಹೆನೆಂದಡೆ, ಭೇದಕ್ಕೆ ವಿಭೇದವಾಗಿ ಕಾಬ ಹೊರೆಗೆ ಕಟ್ಟಣೆಯಿಲ್ಲ. ಹಿಡಿವಲ್ಲಿ ಅಡಿಯ ಕಂಡು, ಬಿಡುವಲ್ಲಿ ಬೇರ ಕಿತ್ತು, ಬಿಡುಮುಡಿಯನರಿದಲ್ಲಿ ಉಭಯಕಕ್ಷೆಯೆ ಲೋಪ ಸದ್ಯೋಜಾತಲಿಂಗವನರಿದಲ್ಲಿ.
--------------
ಅವಸರದ ರೇಕಣ್ಣ
ಗುರುವೆನಲು ಕೊರೆವುದು ಜನನ ಮರಣದ ಬೇರ ನೋಡಾ. ಗುರುವೆನಲು ಸುಡುವುದು ಭವಾರಣ್ಯವ ನೋಡಾ. ಗುರುವೆನಲು ಕಡಿವುದು ಭವಕುಜಲತೆಗಳ ನೋಡಾ. ಇಂತಪ್ಪ ಸದ್ಗುರುದೇವಂಗೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ನಾನಾ ಯೋನಿಯಲ್ಲಿ ತಿರುಗಿ ಬಂದನಾಗಿ ಗುರುವಲ್ಲ. ನಾನಾ ಶಿಲೆಯಲ್ಲಿ ರೂಹಿಟ್ಟು ಬಂದುದಾಗಿ ಲಿಂಗವಲ್ಲ. ನಾನಾ ಯಾಚಕ ವಿಕಾರದಿಂದ ತಿರುಗುವನಾಗಿ ಜಂಗಮವಲ್ಲ. ಜನನರಹಿತ ಗುರು, ಅವತಾರರಹಿತ ಲಿಂಗ, ಮರಣರಹಿತ ಜಂಗಮ. ಹೀಗಲ್ಲದೆ ತ್ರಿವಿಧವ ಕಳೆಯಬಾರದು. ತ್ರಿವಿಧಕ್ಕೆ ತ್ರಿವಿಧವನಿತ್ತು, ಗುರುವಿನ ಹಂಗ ಮರೆಯಬೇಕು. ತ್ರಿವಿಧಕ್ಕೆ ತ್ರಿವಿಧವನಿತ್ತು, ಲಿಂಗದ ಹಂಗ ಮರೆಯಬೇಕು. ತ್ರಿವಿಧಕ್ಕೆ ತ್ರಿವಿಧವನಿತ್ತು, ಜಂಗಮದ ಹಂಗ ಮರೆಯಬೇಕು. ಮೂರರೊಳಗಾದ ಆರು ಕೊಟ್ಟು, ಐದನಿರಿಸಿಕೊಂಡು, ಇಪ್ಪತ್ತೈದರ ಲೆಕ್ಕದಲ್ಲಿರಿಸಿ, ಐವತ್ತೊಂದು ಬಿಂದುವಿನಲ್ಲಿ ಹೊಂದಿಸಿ, ಓಂಕಾರವಪ್ಪ ಪ್ರಣಮವ ಪರಿಣಾಮಿಸಿ, ವ್ಯಾಪಾರದ ಲತೆಯ ಬಳ್ಳಿಯ ಬೇರ ಕಿತ್ತು, ಪರ್ವಿ ಪ್ರಕಾರದಿಂದ ಉರ್ವಿಯ ಸುತ್ತಿಮುತ್ತಿ ಬೆಳೆದ ಚಿತ್ತಬಿದಿರಿನ ನಡುವಿದ್ದ ಹುತ್ತದ ಬಹುಮುಖದ ಸರ್ಪನ ಹಿಡಿದು, ಕಾಳೋರಗನಂ ಬೇರು ಮಾಡಿ, ಲೀಲೆಗೆ ಹೊರಗಾಗಿ ಭಾಳಲೋಚನನಂ ಕೀಳುಮಾಡಿ, ಬಾಲೆಯರ ಬಣ್ಣಕ್ಕೆ ಸೋಲದೆ, ಕಾಳುಶರೀರವೆಂಬ ಒತ್ತರಂಗೊಳ್ಳದೆ, ಗತಿ ಮತಿ ಗುಣ ಸಂಸರ್ಗ ವಿಪಿನ ಕಂಟಕಕ್ಕೊಳಗಾಗದೆ, ಪಿಂಡಪ್ರಾಣದ ವಾಯುಸಂಚಾರಕ್ಕೀಡುಮಾಡದೆ, ಅರಿದೆನೆಂಬುದಕ್ಕೆ ಕುರುಹಿಲ್ಲದೆ, ಕುರುಹಿಗೆ ಅವಧಿಗೊಡಲಿಲ್ಲದೆ, ಹುಸಿ ಮಸಿಯ ಮಣಿಮಾಡದಲ್ಲಿ ಒರಗದೆ, ಪರಿಣಾಮವೇ ಪಥ್ಯವಾಗಿ, ಅಂತರಂಗಶುದ್ಧಿ ಪರಿಪೂರ್ಣವಾಗಿ ನಿಂದು, ಸಂಸಾರಕ್ಕೆ ಸಿಕ್ಕದೆ, ನಿಂದ ನಿಜ ತಾನಾಗಿ ಲಿಂಗೈಕ್ಯವು. ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಸರ್ವಾಂಗದಲ್ಲಿ ನಿರ್ಲೇಪವಾ[ದುದೇ] ಶರಣಸ್ಥಲ.
--------------
ಮೋಳಿಗೆ ಮಾರಯ್ಯ
ಆದಿಯಾಧಾರದಲ್ಲಿ ಆದಿಯಿಲ್ಲದ ಮುನ್ನ, ಅನಾದಿ ಸಂಸಿದ್ಧನಯ್ಯಾ ಬಸವಣ್ಣನು. ಲೋಕವೀರೇಳರ ಆಕಾರವಿಲ್ಲದಲ್ಲಿ, ಏಕೈಕರೂಪನಯ್ಯಾ ಚೆನ್ನಬಸವಣ್ಣನು. ಸಾಕಾರದಿಂದತ್ತ ನಿರ್ಮಾಯ ಬಂದನು, ಲೋಕಪಾವನಮೂರ್ತಿ ಪ್ರಭುರಾಯನು. ಇಂತೆನ್ನ ಭವದ ಬೇರ ಹರಿದು ಹದುಳ ಮಾಡಿ ಶರಣರೊಳಗಿರಿಸಿದ ಗುರು ಇಂತು ಮೂವರಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ನೀರ ನೆಳಲಿನಲ್ಲಿ ಒಂದು ಆರವೆ ಹುಟ್ಟಿತ್ತು: ಅದು ಬೇರಿಲ್ಲದೆ, ಆ ಮರನ ಮೀರುವ ಕೊಂಬಿಲ್ಲದೆ, ಕೊಂಬ ಮೀರುವ ಎಲೆಯಿಲ್ಲದೆ, ಎಲೆಯ ಮೀರುವ ಹೂವಿಲ್ಲದೆ, ಹೂವ ಮೀರುವ ಕಾಯಿಯಿಲ್ಲದೆ, ಇದು ಚೆನ್ನಾಗಿ ತಿಳಿದು ನೋಡಿ. ಆ ನೀರು ಬೇರ ನುಂಗಿ, ಬೇರು ವೃಕ್ಷವ ನುಂಗಿ, ಪರ್ಣ ಕುಸುಮವ ಕೊಂಡು, ಕುಸುಮ ಕಾಯವ ಕೊಂಡು, ಕಾಯಿ ಹಣ್ಣನು ಮೆದ್ದಲ್ಲಿ ಭಾವವಳಿಯಿತ್ತು. ಇದನಾರು ಬಲ್ಲರು ? ನಿಃಕಳಂಕ ಮಲ್ಲಿಕಾರ್ಜುನಾ, ನೀನೆ ಬಲ್ಲೆ.
--------------
ಮೋಳಿಗೆ ಮಾರಯ್ಯ
ನಿನ್ನವನಾಗಿ ಅನ್ಯರ ಬೇಡುವ ಅನ್ಯಾಯವನೇನೆಂಬೆನೆಲೆಯಯ್ಯಾ. ನಿನ್ನನರ್ಚಿಸಿದ ಪುರಾತನರು ನೀವೆಯಾದರು. ನಿನ್ನನರ್ಚಿಸಿದ ಬಸವಣ್ಣ ನೀನೆಯಾದ. ಎಲೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯ, ಗುರುವಾಗಿ ಬಂದೆನ್ನ ಭವದ ಬೇರ ಹರಿದ ಬಳಿಕ ನಿನ್ನವರು ನೀನು ನಾನೆಂಬ ಸಂದೇಹವೇಕಯ್ಯ?
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->