ಅಥವಾ

ಒಟ್ಟು 35 ಕಡೆಗಳಲ್ಲಿ , 10 ವಚನಕಾರರು , 30 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಗದ ಮೇಲೆ ಲಿಂಗವಿಲ್ಲದವರು ಲಿಂಗಕ್ಕೆ ಬೋನವ ಮಾಡಲಾಗದು. ಮಾಡಿದರೆ [ಮಾಡಲಿ] ಅವರು ಮಾಡಿದ ಬೋನವ ಲಿಂಗಕ್ಕೆ ಕೊಟ್ಟು ಪ್ರಸಾದವೆಂದು ಕೊಂಡರೆ, ಕುಂಭೀಪಾಕ ನಾಯಕನರಕ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಆಯತವಿಲ್ಲದ ಮಠದಲ್ಲಿ ಅಗ್ನಿಯಿಲ್ಲದೆ ಬೋನವ ಮಾಡಿ ಭಾವವಿಲ್ಲದೆ ಶಿವಕಾರ್ಯಂಗಳು ಭೋಜನವಿಲ್ಲದೆ ಅರಿಸಿ ಕೊಟ್ಟಡೆ ಆಪ್ಯಾಯನವಾರಿಗೂ ಅಡಸದಿರ್ದುದ ಕಂಡು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲಾ ಎಂದೆನು.
--------------
ಘಟ್ಟಿವಾಳಯ್ಯ
ಎಂಟುಲಕ್ಷದ ಮೇಲೆ ಐನೂರು ದೇವರಿಗೆ ಮಾಡಿದ ಬೋನವ ಒಬ್ಬ ಜಂಗಮನಾರೋಗಣೆಯ ಮಾಡುವನಲ್ಲದೆ, ಹದಿನಾರು ಲಕ್ಷದ ಮೇಲೆ ಐನೂರು ದೇವರು ಕೂಡಿಕೊಂಡು ಒಬ್ಬ ಜಂಗಮಕ್ಕೆ ಮಾಡಿದ ಬೋನವನಾರೋಗಿಸಲರಿಯವು. ಅಂತಪ್ಪ ದೇವರಿಗಿಂತಲೂ ಜಂಗಮವೆ ಘನ. ಕೃತಯುಗದಲ್ಲಿ ಸುವರ್ಣದ ಲಿಂಗಾವಾದಲ್ಲಿ ನಿನ್ನ ಹೆಸರೇನು ? ತ್ರೇತಾಯುಗದಲ್ಲಿ ಬೆಳ್ಳಿಯ ಲಿಂಗವಾದಲ್ಲಿ ನಿನ್ನ ತಾಯಿ-ತಂದೆ ಯಾರು ? ದ್ವಾಪರದಲ್ಲಿ ತಾಮ್ರದಲಿಂಗವಾದಲ್ಲಿ ಹದಿನೆಂಟು ಜಾತಿಯ ಕೈಯ ಕಿಲುಬು ಹೋಯಿತ್ತು. ಕಲಿಯುಗದಲ್ಲಿ ಕಲ್ಲ ದೇವರಾದರೆ ಇಕ್ಕಿದೋಗರವನುಣ್ಣದೇಕೊ ? ಹಿಂದೊಮ್ಮೆ ನಾಲ್ಕುಯುಗದಲ್ಲಿ ಅಳಿದು ಹೋದುದನರಿಯಾ ? ಇನ್ನೇಕೆ ದೇವತನಕ್ಕೆ ಬೆರತಹೆ ? ``ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ ಜಂಗಮಸ್ಯಾವಮಾನೇನ ಸ್ಥಾವರಂ ನಿಷ್ಫಲಂ ಭವೇತ್ _ಇದು ಕಾರಣ ಕೂಡಲಚೆನ್ನಸಂಗಯ್ಯಾ, ತಪ್ಪದೆ ನಾಲ್ಕುಯುಗದಲ್ಲಿ ಜಂಗಮವೆ ಪ್ರಾಣಲಿಂಗವಾದ ಕಾರಣ ಸ್ಥಾವರವೆ ಜಂಗಮಪ್ರಸಾದಕ್ಕೆ ಯೋಗ್ಯವಾಯಿತ್ತು.
--------------
ಚನ್ನಬಸವಣ್ಣ
ಅಂಗಕ್ಕೆಂದಡೆ ಹಿರಿಯ ಹರಿವಾಣವ ತುಂಬಿ ಬೋನವ ತಾ ಎಂಬರು. ಲಿಂಗಕ್ಕೆಂದಡೆ ಚಿಕ್ಕ ಗಿಣ್ಣಿಲು ತುಂಬಿ ಬೋನವ ತಾ ಎಂಬರು. ಅಂಗವ ಹಿರಿದು ಮಾಡಿ ಲಿಂಗವ ಕಿರಿದು ಮಾಡಿ ಮನೆಯಲ್ಲಿ ಮಡಕೆ ತುಂಬಿ ಬೋನವ ಮಾಡಿ, ಚಿಕ್ಕ ಕುಡಿಕೆ ಗಿಣ್ಣಿಲು ಲಿಂಗಕ್ಕೆ ಬೋನವ ಹಿಡಿವ ಈ ಮಡಕೆಮಾರಿಗಳನೇನೆಂಬೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಂಗ ಲಿಂಗಕ್ಕೆ ಭಾಜನರೆಂಬರು, ಅಂಗ ಲಿಂಗಕ್ಕೆ ಭಾಜನವಲ್ಲ. ಕಾಯಗುಣಂಗಳ ಕಳೆದುಳಿದು ಮಾಯಾಮಲವ ಹಿಂಗಿಸಿ, ಮನವೆಂಬ ಘನಪರಿಯಾಣವ ಬೆಳಗಿ, ಸಕಲ ಇಂದ್ರಿಯಗಳೆಂಬ ಕೆಲವಟ್ಟಲವ£ಳವಡಿಸಿ, ಜ್ಞಾನಪ್ರಕಾಶವೆಂಬ ದೀಪಸ್ತಂಭ ಬೆಳಗಿ, ಷಡಾಧಾರಚಕ್ರವೆಂಬ ಅಡ್ಡಣಿಗೆಯನಿಟ್ಟು, ಸಕಲಕಾರಣಂಗಳೆಂಬ ಮೇಲುಸಾಧನಂಗ? ಹಿಡಿದು, ಸದ್ಭಕ್ತ್ಯಾನಂದವೆಂಬ ಬೋನವ ಬಡಿಸಿ, ವಿನಯ ವಿವೇಕವೆಂಬ ಅಭಿಘಾರವ ಗಡಣಿಸಿ ಪ್ರಸನ್ನ ಪರಿಣಾಮದ ಮಹಾರುಚಿಯೆಂಬ ಚಿಲುಪಾಲಘಟ್ಟಿಯ ತಂದಿಳುಹಿ, ಸುಚಿತ್ತ ಸುಯಿಧಾನದಿಂದ, ನಿಮ್ಮ ಹಸ್ತದ ಅವಧಾನವೆ ಅನುವಾಗಿ, ಬಸವಣ್ಣನೆ ಬೋನ ನಾನೆ ಪದಾರ್ಥವಾಗಿ ನಿಮ್ಮ ಪರಿಯಾಣಕ್ಕೆ ನಿವೇದಿಸಿದೆನು. ಆರೋಗಣೆಯ ಮಾಡಯ್ಯಾ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಶಿವಭಕ್ತರ ಮನೆಗೆ ಹೋಗಿ ಒರಳಕ್ಕಿಯನಾಯ್ದು ತಂದು, ಲಿಂಗಕ್ಕೆ ಬೋನವ ಮಾಡಿ, ಜಂಗಮಕ್ಕೆ ನೀಡಿ, ಒಕ್ಕುದ ಕೊಂಡವ ಪೋಪನೈ ಕೈಲಾಸಕ್ಕೆ. ಅವರಿಗೆ ಮುಕ್ಕಣ್ಣನಲ್ಲದೆ ಉಳಿದ ಭುವನತ್ರಯದವರು ಸರಿಯಲ್ಲೆಂದಾತನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ತನ್ನ ಲಿಂಗಕ್ಕೆ ಮಾಡಿದ ಬೋನವ ಜಂಗಮಕ್ಕೆ ನೀಡಬಾರದೆಂಬುದನೇಕ ನರಕ ! ತನ್ನ ಲಿಂಗವಾರೋಗಿಸಿ ಮಿಕ್ಕ ಪ್ರಸಾದವ ಜಂಗಮಕ್ಕೆ ನೀಡುವುದನೇಕ ನಾಯಕನರಕ. ಆ ಜಂಗಮವಾರೋಗಿಸಿ ಮಿಕ್ಕ ಪ್ರಸಾದ, ಎನ್ನ ಲಿಂಗಕ್ಕೆ ಬೋನವಾಯಿತ್ತು, ಎನಗೆ ಪ್ರಸಾದವಾಯಿತ್ತು. ಕೂಡಲಚೆನ್ನಸಂಗಯ್ಯಾ ಎನಗೆಯೂ ನಿನಗೆಯೂ ಜಂಗಮಪ್ರಸಾದ ಪ್ರಾಣವಾಯಿತ್ತು.
--------------
ಚನ್ನಬಸವಣ್ಣ
ಮನ ಮುಕ್ತಿ ವಿವೇಕವೆಂಬ ಅಕ್ಕಿಯನು ಗುಪಿತವೆಂಬ ಒರಳೊಳಗಿಕ್ಕಿ ಅಭಿನ್ನಮಥನವೆಂಬ ಒನಕೆಯಲ್ಲಿ ಥಳಿಸಿ ಕಲ್ಮಷವೆಂಬ võ್ಞಡ ಹಾರಿಸಿ, ಸಮತೆಯೆಂಬ ಸಲಿಲದಲ್ಲಿ ಜಾಳಿಸಿ, ಅಳುಪು ಎಂಬ ಹರಳ ಕಳೆದು ದಯಾಮೃತವೆಂಬ ಹಾಲಿನಲ್ಲಿ ಬೋನವ ಮಾಡಿ ಸಮರಸ ರುಚಿಕರದಿಂದ ಶಾಕಪಾಕಂಗಳಂ ಮಾಡಿ ನೆನಹಿನ ಲವಲವಕಿಯೆ ಅಭಿಗಾರವಾಗಿ ನಿರ್ಮಲವೆಂಬ ಶಿವದಾನವ ಗಡಣಿಸಿ ಕಾಯ್ದಿದ್ದರಯ್ಯಾ. ಪಂಚೇಂದ್ರಿಯವೆಂಬ ಸೊಣಗ ಮುಟ್ಟದಂತೆ ಕಾಯ್ದಿದ್ದರಯ್ಯಾ. ಷಡುವರ್ಗವೆಂಬ ತೊತ್ತಿರು ಮುಟ್ಟದಂತೆ ಕಾಯ್ದಿದ್ದರಯ್ಯಾ. ಅಷ್ಟಮದವೆಂಬ ಮಕ್ಕಳು ಮುಟ್ಟದಂತೆ ಕಾಯ್ದಿದ್ದರಯ್ಯಾ. ಇನಿತು ಮುಖ್ಯವಾದ ಹೀನಂಗಳಾವೂ ಮುಟ್ಟದಂತೆ ಕಾಯ್ದಿದ್ದರಾಗಿ, ಈ ಬೋನ ಗುಹೇಶ್ವರಲಿಂಗಕ್ಕೆ ಅರ್ಪಿತವಾಯಿತ್ತು, ಕಾಣಾ ಚೆನ್ನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಅಂದೊಮ್ಮೆ ಧರೆಯ ಮೇಲೆ ಬೀಜವಿಲ್ಲದಂದು ಬಸವನೆಂಬ ಗಣೇಶ್ವರನು ಭೋಂಕರಿಸಿ ಕೆಲೆದಡೆ ಬೀಜ ಉತ್ಪತ್ತಿಯಾಯಿತ್ತು. ಅದೆನೆ ಬಿತ್ತಿ ಅದನೆ ಬೆಳೆದು ಅಟ್ಟಟ್ಟು ಲಿಂಗಕ್ಕೆ ಬೋನವ ಮಾಡಿ- ನಾಗಲೋಕದ ನಾಗಗಣಂಗಳಿಗೆಯೂ ಬಸವಣ್ಣನ ಪ್ರಸಾದ, ಮತ್ರ್ಯಲೋಕದ ಮಹಾಗಣಂಗಳಿಗೆಯೂ ಬಸವಣ್ಣನ ಪ್ರಸಾದ, ದೇವಲೋಕದ ದೇವಗಣಂಗಳಿಗೆಯೂ ಬಸವಣ್ಣನ ಪ್ರಸಾದ, ಎಲೆ ಕೂಡಲಚೆನ್ನಸಂಗಮದೇವಾ, ನಿಮ್ಮಾಣೆ, ನಿಮಗೂ ಎನಗೂ ಬಸವಣ್ಣನ ಪ್ರಸಾದ !
--------------
ಚನ್ನಬಸವಣ್ಣ
ಈಶ! ನಿಮ್ಮ ಪೂಜಿಸಿದ ಬಳಿಕ ಅನ್ಯ ದೈವಂಗಳಿಗೆ ಹೇಸಲೇ ಬೇಕು. ಹೇಸದೆ ಅನ್ಯದೈವಕ್ಕೆ ಆಸೆ ಮಾಡಿದಡೆ ಅವ ನಮ್ಮ ಈಶ್ವರಂಗೆ ಹೊರಗು. ದೋಷರಹಿತ ಭಕ್ತರು ಅವಂಗೆ ಕುಲವೆಂದು ಕೂಸ ಕೊಟ್ಟು ಕೂಡುಂಡಡೆ ಮೀಸಲ ಬೋನವ ನಾಯಿ ಮುಟ್ಟಿದಂತೆ ಕಾಣಾ!ರಾಮನಾಥ.
--------------
ಜೇಡರ ದಾಸಿಮಯ್ಯ
ಅಯ್ಯಾ ಅಯ್ಯಾ, ನೀವು ಬಾರದಿರ್ದಡೆ ಅಂತು ಹಂಬಲಿಸುತ್ತಿದ್ದೆ. ನೀನೆನ್ನ ಹಂಬಲ ಕೇಳಿ ಕರುಣದಿಂದ ಭೋರನೆ ಬಂದಡೆ, ಆನು ತಳವೆಳಗಾಗಿ ಅವಗುಣವೆಂಬ ರಜವ ಕಳೆದು ಕಂಬಳಿಯ ಪೀಠವನೊಲ್ಲದೆ ಹೃದಯಪೀಠವನಿಕ್ಕಿ ಮೇಲುಪ್ಪರಿಗೆಯೊರತೆಯ ಅಗ್ಗಣಿಯ ತಂದು ಪಾದಾರ್ಚನೆಯ ಮಾಡಿ, ಎರಡೆಸಳ ಕಮಲವನೆರಡು ಪಾದಕ್ಕೆ ಪೂಜಿಸಿ, ಕಂಗಳ ತಿರುಳ ತೆಗೆದು ಆರತಿಯನ್ನೆತ್ತಿ, ಉಸುರ ನುಂಗಿದ ಪರಿಮಳದ ಧೂಪವ ಬೀಸಿ, ನ್ನೆತ್ತಿಯ ಪರಿಯಾಣದೊಳಿಟ್ಟು ಬೋನವ ಗಡಣಿಸಿದಡೆ, ಸಯದಾನ ಸವೆಯದೆ ಆರೋಗಣೆಯ ಮಾಡಿ, ಉಂಡ ಬಾಯ ತೊಳೆದಡೆ ಸಂದೇಹವಾದುದೆಂದು ಮೇಲುಸೆರಗಿನೊಳು ತೊಡೆದುಕೊಂಡು ಬಾಯ ಮುಚ್ಚಳ ತೆಗೆಯದೆ, ಕರಣವೆಂಬ ತಾಂಬೂಲವನವಧರಿಸಿದ, ಭಾವದ ಕನ್ನಡವ ಹರಿದುಹಾಯ್ಕಿದ, ಆತನ ಪಾದಕ್ಕೆ ನಾನು ಶರಣೆಂದು ಪಾದೋದಕವ ಕೊಂಡೆ. ಆತನ ಪ್ರಸಾದಕ್ಕೆನ್ನ ಸೆರಗ ಹಾಸಿ ಆರೋಗಿಸಿ ಸುಖಿಯಾದೆನು. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣ ಪ್ರಭುದೇವರ ಕರುಣವೆನಗೆ ಸಾಧ್ಯವಾದ ಪರಿಯನೇನೆಂದುಪಮಿಸುವೆ!
--------------
ಸಿದ್ಧರಾಮೇಶ್ವರ
ಲಿಂಗಕ್ಕೆಂದು ಮಾಡಿದ ಬೋನವ ಜಂಗಮಕ್ಕೆ ನೀಡಬಾರದೆಂಬ ಕರ್ಮಿಯ ನೋಡಾ, ಲಿಂಗಾರ್ಪಿತಂ ನ ಕರ್ತವ್ಯಂ ಕರ್ತವ್ಯಂ ಜಂಗಮಾರ್ಪಿತಂ ಲಿಂಗಜಂಗಮಯೋರ್ಮಧ್ಯೇ ಜಂಗಮಸ್ತು ವಿಶೇಷತಃ ಇದು ಕಾರಣ ಜಂಗಮವೇ ಲಿಂಗ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಈಶ್ವರಗಂಗೆ ಗುಹೇಶ್ವರದೇವರು ಹೇಳುತಿರ್ದ, ಸಾಕ್ಷಿ : ಶ್ಲೋಕ-ಏಕವೃಕ್ಷ ತವೇವರ್ಣಥೌ ನವೇಫಲ ಸೇವಿತಂ | ಮುಖ ಪದ್ಮದೃಷ್ಟಂ ದೇವ ಸರ್ವಪಾಪಂ ವಿನಶ್ಯತಿ (?) || ಇನ್ನು ಈಶ್ವರ ಲಿಂಗಾರ್ಪಿತವಂ ಮಾಡಬೇಕೆಂದು ಕೇಳಲು ಹೇಳಿದ ಪ್ರಸ್ತಾವದ ವಚನ : ಷಡುವರ್ಗವೆಂಬ ಸಮ್ಮಾರ್ಜನೆಯಂ ಮಾಡಿ, ಅಷ್ಟಮದಂಗಳ ಹಿಟ್ಟುಗುಟ್ಟಿ ರಂಗವಾಲಿಯನಿಕ್ಕಿ, ಸಪ್ತವ್ಯಸಗಳೆಂಬ ಉಪಕರಣಂಗಳ ಲಿಂಗಸೋಹಕ್ಕೆ ತಂದು, ತನುವೆಂಬ ಅಟ್ಟಣೆಯಲ್ಲಿ ಮನವೆಂಬ ಹಸ್ತದಿಂದ ಮಜ್ಜನಕ್ಕೆರೆದು ಮೂಲಗುಂಡಿಗೆಯೊಳಗಣ ಜ್ಯೋತಿಯನೆಬ್ಬಿಸಿ ಸಗುಣವೆಂಬ ಶ್ರೀಗÀಂಧವನಿಟ್ಟು, ಪ್ರಣಮಮೂಲವೆಂಬ ಅಕ್ಷತೆಯ ಧರಿಸಿ ಅಷ್ಟದಳದಲ್ಲಿ ಪೂಜೆಯ ಮಾಡಿ, ಸುಖಸದ್ವ್ಯಸನವೆಂಬ ಧೂಪವನ್ನು ಅಳವಡಿಸಿ ಪಂಚತತ್ವಗಳೆಂಬ ಪಂಚಾರತಿಯ ಬೆಳಗಿ ಸುಷುಮ್ನವೆಂಬ ಹರಿವಾಣದಲ್ಲಿ ಪರಮಭೋಜನವೆಂಬ ಬೋನವಂ ಗಡಣಿಸಿ, ಸರ್ವಶುದ್ಧವೆಂಬ ತುಪ್ಪವಂ ನೀಡಿ, ನಿರ್ಮಳಾತ್ಮಕವೆಂಬ ಬೆಳ್ಳಿಯ ನಿರ್ಮಿಸಿ, ಶುಚಿರ್ಭೂತವೆಂಬ ಹಸ್ತದಲ್ಲಿ ಮಹಾಲಿಂಗಕ್ಕೆ ನೈವೇದ್ಯವಂ ಕೊಟ್ಟು ಅರಿವು ಮರವೆಂಬ ಅಡಕೆಯನೊಡದು, ಶತಶಾಂತವೆಂಬ ಎಲೆಯಂ ಕೊಯಿದು, ನಿರ್ಗುಣವೆಂಬ ಸುಣ್ಣವಂ ನೀಡಿ, ಲಿಂಗಾರ್ಪಿತವಂ ಮಾಡಿ, ಪ್ರಸಾದವ ಸವಿವ ಲಿಂಗಾರ್ಚಕರ ಚರಣವ ತೋರಿ ಎನ್ನ ಸಲಹಯ್ಯ ಗೊಹೇಶ್ವರಪ್ರಿಯ ನಿರಾಳಲಿಂಗಾ.
--------------
ಗುಹೇಶ್ವರಯ್ಯ
ಹುಲಿಯ ಕೊಂದು, ಲಿಂಗಕ್ಕೆ ಬೋನವ ಮಾಡಿದಾತ ಬಸವಣ್ಣ. ಕರಡಿಯ ಕೊಂದು, ಲಿಂಗಕ್ಕೆ ಬೋನವ ಮಾಡಿದಾತ ಬಸವಣ್ಣ. ಹಾವಿನ ಪರಿಯಾಣವ ಮಾಡಿಕೊಡಬಲ್ಲಾತ ಬಸವಣ್ಣ ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಅನುದಿನದಲ್ಲಿ ಮಜ್ಜನಕ್ಕೆರೆದು ನೆನೆದು ಲಿಂಗ ಕರಿಗಟ್ಟಿತ್ತು. ನೀರನೊಲ್ಲದು, ಬೋನವ ಬೇಡದು, ಕರೆದಡೆ ಓ ಎನ್ನದು. ಸ್ಥಾವರ ಪೂಜೆ, ಜಂಗಮದ ಉದಾಸೀನ- ಕೂಡಲಸಂಗಯ್ಯನೊಲ್ಲ ನೋಡಾ.
--------------
ಬಸವಣ್ಣ
ಇನ್ನಷ್ಟು ... -->