ಅಥವಾ

ಒಟ್ಟು 4 ಕಡೆಗಳಲ್ಲಿ , 4 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತನೆ ಕುಲಜನೆಂಬರು, ಯುಕ್ತಿಯಲ್ಲಿ ವಿಚಾರಿಸರು ನೋಡಾ ! ವ್ಯಾಕುಳ ನಿರಾಕುಳವೆಂಬ ಎರಡು ಕುಳ ನೋಡಾ ! ವ್ಯಾಕುಳವೆ ಭವ, ನಿರಾಕುಳವೆ ನಿರ್ಭವ. ವ್ಯಾಕುಳವೆ ಪಾಪ, ನಿರಾಕುಳವೆ ಪುಣ್ಯ. ವ್ಯಾಕುಳವೆ ಭವಿ, ನಿರಾಕುಳವೆ ಭಕ್ತ. ಭವೇ ಬೀಜಂ ತಥಾ ಭಕ್ತಿರ್ಭಕ್ತಿಬೀಜಂ ತಥಾ ಶಿವಃ ಶಿವಬೀಜಂ ತಥಾ ಜ್ಞಾನಂ ಜ್ಞಾನಂ ತ್ರೈಲೋಕ್ಯ ದುರ್ಲಭಂ ಎಂಬುದಾಗಿ, ಜ್ಞಾನಿಗೆ ಕತ್ತಲೆಯಿಲ್ಲ, ಅಜಾತಂಗೆ ಹೊಲೆಯಿಲ್ಲ, ಕುಲಾಧೀಶ, ಕೂಡಲಚೆನ್ನಸಂಗಾ.
--------------
ಚನ್ನಬಸವಣ್ಣ
ಅರಿವಿಂಗೂ ಮರವೆಯ ದೆಸೆಯಲ್ಲಿ ಓಲಾಡುವ ಇಂದ್ರಿಯಂಗಳ ಸಮೂಹ. ಈ ಉಭಯವೂ ಕೂಡಿ, ಮಹವೊಡಗೂಡಿದಲ್ಲಿ ಭರಿತಾರ್ಪಣ. ಅರಿವುಳ್ಳವನೆಂದು, ನಿಬ್ಬೆರಗು ಕರಿಗೊಂಡವನೆಂದು, ಸರ್ವಸಂಗಪರಿತ್ಯಾಗಿಯೆಂದು ತಾನರಿಯದೆ, ಉಳಿದರ ಕೈಯಿಂದ, ಪರಾಧೀನರಿಗೊರೆಯದೆ, ಅಮೃತ ಸುಧೆಯಂತೆ, ಪರಿಪೂರ್ಣ ಕಳೆದಂತೆ, ಅರಿದರಿಯದಂತಿದ್ದುದು ಭರಿತಾರ್ಪಣ. ಹೀಂಗಲ್ಲದೆ ಅಜಯಾಗವ ಮಾಡುವ ವಿಪ್ರನ ಕರ್ಮದಂತೆ ನಾನಲ್ಲ ನೇಣು ಕೊಂದಿತ್ತೆಂದು ದಾಯಗಾರಿಕೆಯಲ್ಲಿ ಹೋಹ ದರ್ಶನ ಢಾಳಕವಂತಂಗೆ, ತನ್ನ ಕಾಲ ವೇಳೆಗೆ ತಕ್ಕಹಾಗೆ ಭಕ್ತಿಯ ಮರೆದು, ಸತ್ಯವ ತೊರೆದ ದುರ್ಮತ್ತಂಗೆ ಭರಿತಾರ್ಪಣದ ಕಟ್ಟುಂಟೆ ? ಇಂತೀ ಭೇದಂಗಳ ಯುಕ್ತಿಯಲ್ಲಿ ಸತ್ತು ಚಿತ್ತು ಆನಂದವೆಂಬ ಗೊತ್ತ ಮುಟ್ಟದೆ, ಮನ ಘನದಲ್ಲಿ ನಿಂದು ಉಭಯದೆಡೆಗೆಟ್ಟುದು ಭರಿತಾರ್ಪಣ. ಈ ಗುಣ ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗ ಸಂಗ.
--------------
ಭರಿತಾರ್ಪಣದ ಚೆನ್ನಬಸವಣ್ಣ
ನಾನಾ ಜನ್ಮಂಗಳಲ್ಲಿ ಬಂದಡೂ, ನಾನಾ ಯುಕ್ತಿಯಲ್ಲಿ ನುಡಿದಡೂ, ನಾನಾ ಲಕ್ಷಣಂಗಳಲ್ಲಿ ಶ್ರುತ ದೃಷ್ಟ ಆನುಮಾನಂಗಳ ಲಕ್ಷಿಸಿ ನುಡಿವಲ್ಲಿ ಏನನಹುದು ಏನನಲ್ಲಾಯೆಂಬ ಠಾವನರಿಯಬೇಕು. ಮಾತ ಬಲ್ಲೆನೆಂದು ನುಡಿಯದೆ, ನೀತಿವಂತನೆಂದು ಸುಮ್ಮನಿರದೆ, ಆ ತತ್ಕಾಲದ ನೀತಿಯನರಿದು ಸಾತ್ವಿಕ ಲಕ್ಷಣದಲ್ಲಿಪ್ಪಾತನ ಲಕ್ಷಣವೇ ನಿರೀಕ್ಷಣ ಕದಂಬಲಿಂಗಾ.
--------------
ಗೋಣಿ ಮಾರಯ್ಯ
ನಾನಾ ಶ್ರುತಿತತ್ವಂಗಳಲ್ಲಿ ಸಾಮ ಅಥರ್ವಣ ಯಜುಸ್ಸು ಋಗ್ವೇದ ಮೊದಲಾದ ಶಂಕರಸಂಹಿತೆ ಉಪೇಕ್ಷೆ ಅಭಿಸಂಧಿ ಚಿಂತನೆ ಸೂತ್ರಾವರಣಭೇದ ತಂತ್ರ ಖಂಡಿತ ಖಂಡನ ಉತ್ತರ ನಿರುತ್ತರ ಮುಂತಾದ ಯುಕ್ತಿಯಲ್ಲಿ ನುಡಿದಡೂ ಶಬ್ದಶಾಸ್ತ್ರಕ್ಕೆ ಹೆಚ್ಚುಗೆವಂತನಲ್ಲದೆ ವಿರಕ್ತಿಗೆ ಸಲ್ಲ. ತತ್ವಂಗಳನೆಲ್ಲವನರಿವುದಕ್ಕೆ ರುಜೆಗೆ ಚಿಕಿತ್ಸೆಯಂತೆ ಫಲ ಫಲಿಸುವಂತೆ ವೇದನೆ ವೇಧಿಸಿ ವಿಭೇದವಿಲ್ಲದೆ ನಿಂದಂತೆ ವಾಚಕಾವೃತ್ತಿಯ ಕ್ರೀ ಸರ್ವದುರ್ಗುಣವ ನೇತಿಗಳೆವ ವಸ್ತುಕೂಟಯೇಕವಾದಲ್ಲಿ ನುಡಿ ನಡೆ ಸಿದ್ಧಾಂತ. ಇದು ಸತ್ಪಥಮಾರ್ಗದ ಭಿತ್ತಿಯ ಹಾದಿ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿವುದಕ್ಕೆ.
--------------
ಪ್ರಸಾದಿ ಭೋಗಣ್ಣ
-->