ಅಥವಾ

ಒಟ್ಟು 15 ಕಡೆಗಳಲ್ಲಿ , 8 ವಚನಕಾರರು , 14 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆ ಅಖಂಡ ಮಹಾಮೂಲಸ್ವಾಮಿಯ ಸ್ಥಲದ ವಚನವೆಂತೆಂದೊಡೆ : ನಿರಂಜನಾತೀತಪ್ರಣವ, ಅವಾಚ್ಯಪ್ರಣವ, ಕಲಾಪ್ರಣವ, ಅನಾದಿಪ್ರಣವ, ಆದಿಪ್ರಣವ ಶಿವಪ್ರಣವ, ಶಕ್ತಿಪ್ರಣವ, ಶಿವಶಕ್ತಿರಹಿತವಾಗಿಹ ಮಹಾಪ್ರಣವ ಮೊದಲಾದ ಅನಂತಕೋಟಿ ಪ್ರಣವಂಗಳಿಲ್ಲದಂದು, ಚಿತ್ಪ್ರಕಾಶ ಚಿದಾಕಾಶ ಮಹದಾಕಾಶ ಮಹಾಕಾಶ ಶಿವಾಕಾಶ ಬಿಂದ್ವಾಕಾಶ ನಾದಾಕಾಶ ಕಲಾಕಾಶ ಪ್ರಣವಾಕಾಶ ಮೊದಲಾಗಿ ಅನಂತಕೋಟಿ ಮಹಾಪ್ರಣವಾಕಾಶ, ಅತಿಪ್ರಣವಾಕಾಶ ಅತಿಮಹಾತೀತಪ್ರಣವಾಕಾಶಗಳಿಲ್ಲದಂದು, ಆದಿ ಅನಾದಿ ಸಂಗತ ಅನಂತ ಅರ್ಭಕ ತಮಂಧ ತಾರಜ ತಂಡಜ ಬ್ಥಿನ್ನಜ ಬ್ಥಿನ್ನಾಯುಕ್ತ ಅವ್ಯಕ್ತ ಅಮದಾಯುಕ್ತ ಮಣಿರಣ ಮಾನ್ಯರಣ ವಿಶ್ವಾರಣ ವಿಶ್ವಾವಸು ಅಲಂಕೃತ ಕೃತಯುಗ ತ್ರೇತಾಯುಗ ದ್ವಾಪರಯುಗ ಕಲಿಯುಗಂಗಳೆಂಬ ಇಪ್ಪತ್ತೊಂದು ಯುಗ ಮೊದಲಾಗಿ ಅನಂತಕೋಟಿ ಯುಗಂಗಳು ಅತಿಮಹಾಯುಗಂಗಳು, ಅತಿಮಹಾತೀತಮಹಾಯುಗಂಗಳಿಲ್ಲದಂದು, ಆದಿಮೂಲ ಅನಾದಿಮೂಲಂಗಳಿಗತ್ತತ್ತವಾದ ಮಹಾಮೂಲಸ್ವಾಮಿಯ ಮೀರಿದ ಅತಿಮಹಾಮೂಲಸ್ವಾಮಿಗತ್ತತ್ತವಾಗಿಹ ಅಖಂಡ ಮಹಾಮೂಲಸ್ವಾಮಿಯು ಇದ್ದನಯ್ಯ ಇಲ್ಲದಂತೆ ನಮ್ಮ ಅಪ್ರಮಾಣ ಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಯುಗ ಜುಗವ ಬಲ್ಲೆನೆಂಬವರು, ನಿಚ್ಚಕ್ಕೆ ನಿಚ್ಚ ಬಪ್ಪ ಚಿಕ್ಕುಟು ಸಾವನರಿಯರು. ಬಾಯ ಬಾಗಿಲ [ಉಲುಹು], ತಲೆಹೊಲದ ಹುಲ್ಲೊಣಗಿತ್ತು. ನಿಮ್ಮನುವಿನಲ್ಲಿರ್ದೆ ಕಾಣಾ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಅ ಅಖಂಡಮಹಾಮೂಲಸ್ವಾಮಿಯ ಸ್ಥಲದ ವಚನವೆಂತೆಂದಡೆ : ನಿರಂಜನಾತೀತಪ್ರಣವ, ಅವಾಚ್ಯಪ್ರಣವ, ಕಲಾಪ್ರಣವ, ಅನಾದಿಪ್ರಣವ, ಆದಿಪ್ರಣವ, ಶಿವಶಕ್ತಿಪ್ರಣವ, ಶಿವಶಕ್ತಿರಹಿತವಾಗಿ ಮಹಾಪ್ರಣವ ಮೊದಲಾಗಿ ಅನಂತಕೋಟಿಪ್ರಣವಂಗಳಿಲ್ಲದಂದು, ಚಿತ್ತಾಕಾಶ ಚಿದಾಕಾಶ ಮಹದಾಕಾಶ ಪರಾಕಾಶ ಶಿವಾಕಾಶ ಬಿಂದ್ವಾಕಾಶ ನಾದಾಕಾಶ ಕಲಾಕಾಶ ಪ್ರಣವಾಕಾಶ ಮೊದಲಾಗಿ ಅನಂತಕೋಟಿ ಮಹಾಪ್ರಣವಾಕಾಶ, ಅತಿಮಹಾಪ್ರಣವಾಕಾಶ, ಅತಿಮಹಾತೀತಪ್ರಣವಾಕಾಶಂಗಳಿಲ್ಲದಂದು, ಆದಿ ಅನಾದಿ ಅನಾಗತ ಅನಂತ ಅದ್ಭುತ ತಮಂಧ ತಾರಜ ತಂಡಜ ಭಿನ್ನಜ ಭಿನ್ನಾಯುಕ್ತ ಅವ್ಯಕ್ತ ಅಮದಾಯುಕ್ತ ಮಣಿರಣ ಮಾನ್ಯರಣ ವಿಶ್ವಾರಣ ವಿಶ್ವಾವಸು ಅಲಂಕೃತ ಕೃತಯುಗ ತ್ರೇತಾಯುಗ ಕಲಿಯುಗಂಗಳೆಂಬ ಇಪ್ಪತ್ತೊಂದು ಯುಗ ಮೊದಲಾಗಿ ಅನಂತಕೋಟಿ ಮಹಾಯುಗಂಗಳು, ಅತಿಮಹಾಯುಗಂಗಳು ಅತಿಮಹಾತೀತ ಮಹಾಯುಗಂಗಳಿಲ್ಲದಂದು, ಆದಿಮೂಲ ಅನಾದಿಮೂಲಂಗಳಿಗತ್ತತ್ತವಾದ ಮಹಾಮೂಲಸ್ವಾಮಿಯ ಮೀರಿದ ಅತಿಮಹಾಮೂಲಸ್ವಾಮಿಗತ್ತತ್ತವಾಗಿಹ ಅಖಂಡ ಮಹಾಮೂಲಸ್ವಾಮಿ ಇದ್ದನಯ್ಯ ಇಲ್ಲದಂತೆ ನಮ್ಮ ಅಪ್ರಮಾಣ ಕೂಡಲಸಂಗಮದೇವ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಯ್ಯಾ ಜಲ, ಕೂರ್ಮ, ಗಜ, ಫಣಿಯ ಮೇಲೆ ಧರೆ ವಿಸ್ತರಿಸಿ ನಿಲ್ಲದಂದು, ಗಗನವಿಲ್ಲದಂದು, ಪವನನ ಸುಳುಹಿಲ್ಲದಂದು, ಅಗ್ನಿಗೆ ಕಳೆದೋರದಂದು, ತರು ಗಿರಿ ತೃಣ ಕಾಷಾ*ದಿಗಳಿಲ್ಲದಂದು, ಯುಗ ಜುಗ, ಮಿಗಿಲೆನಿಸಿದ ಹದಿನಾಲ್ಕು ಭುವನ ನೆಲೆಗೊಳ್ಳದಂದು, ನಿಜವನರಿದೆನೆಂಬ ತ್ರಿಜಗಾಧಿಪತಿಗಳಿಲ್ಲದಂದು ತೋರುವ ಬೀರುವ ಭಾವದ ಪರಿ, ಭಾವದಲ್ಲಿ ಭರಿತ, ಆಗಮ್ಯ ಗುಹೇಶ್ವರ ನಿರಾಳವು !
--------------
ಅಲ್ಲಮಪ್ರಭುದೇವರು
ಹಿಂದೆ ಮುನ್ನೂರರವತ್ತು ಸಾವಿರ ಯುಗ ಹೋಯಿತ್ತು. ಮುಂದೆ ಮುನ್ನೂರರವತ್ತು ಸಾವಿರ ಯುಗ ಹೋಯಿತ್ತು. ಇನ್ನೂ ಕೊಯ್ದಾನೆ ಪುಷ್ಪಂಗಳನು. ಉನ್ನತನೆಂಬ ಗಣೇಶ್ವರನ ಕರಡಗೆ ತುಂಬದು ನೋಡಾ ! ಇನ್ನೂ ಕೊಯ್ದಾನೆ ಪುಷ್ಪಂಗಳನು_ಆ ಕುಲಗಿರಿಗೆ ಮೇರುಗಿರಿ ಘನವೆಂದರಿಯರು. ಗುಹೇಶ್ವರಾ, ನಿಮ್ಮ ಮಹಿಮೆಯ ಹರಿಬ್ರಹ್ಮಾದಿಗಳೂ ಅರಿಯರು.
--------------
ಅಲ್ಲಮಪ್ರಭುದೇವರು
ಯುಗ ಜುಗ ಪ್ರಳಯವಹಂದೂ ಕಾಣೆನಿಂದೂ ಕಾಣೆ ! ಧಗಿಲು ಭುಗಿಲು ಎಂದುರಿವಂದೂ ಕಾಣೆನಿಂದೂ ಕಾಣೆ ! ಕೂಡಲಸಂಗಮದೇವನಲ್ಲದೆ ತಲೆದೋರುವ ದೈವಂಗಳನಂದೂ ಕಾಣೆನಿಂದೂ ಕಾಣೆ.
--------------
ಬಸವಣ್ಣ
ಬೇರು ಒಣಗಿದಲ್ಲಿ ಅಂಕುರವುಂಟೆ ? ಆರನರಿಯದೆ ಮೂರ ಪ್ರಮಾಣಿಸದೆ, ಮೀರಿ ಇಪ್ಪಾತನ ಭೇದವನರಿಯದೆ, ಮತ್ತೆ ತೋರಿಕೆಗೆ ಇನ್ನಾವುದು ಹೇಳಾ ? ಯುಗ ಪ್ರಮಾಣಿಸುವುದಕ್ಕೆ ಮುನ್ನ, ಆಚೆಯಲ್ಲಿ ನಾನರಿಯೆ, ಈಚೆಯಲ್ಲಿ ನಾ ಬಲ್ಲ ಇಷ್ಟ, ಆವ ಸ್ಥಲದಲ್ಲಿಯೂ ಸ್ಥಲಭರಿತನಾಗಿ, ಹಿಡಿವಲ್ಲಿ ಕ್ರೀ ಶುದ್ಧವಾಗಿ, ಅರಿವಲ್ಲಿ ಆತ್ಮಶುದ್ಧವಾಗಿ. ಇಂತೀ ಉಭಯದ ಒಡಲನರಿದು ಒಡಗೂಡಬೇಕು, ನಿಃಕಳಂಕ ಮಲ್ಲಿಕಾರ್ಜುನಲಿಂಗವನರಿಯಬಲ್ಲಡೆ.
--------------
ಮೋಳಿಗೆ ಮಾರಯ್ಯ
ಸರ್ವಗತಶಿವನೆಂಬುದೀ ಲೋಕವೆಲ್ಲಾ. ಶಿವಶಿವಾ ನಿರ್ಬುದ್ಧಿ ಜನಂಗಳನೇನೆಂಬೆ! ಸರ್ವವೆಲ್ಲವೂ ಶಿವನಾದರೆ ಹಿಂದಣ ಯುಗ ಪ್ರಳಯಂಗಳೇಕಾದವು? ಸರ್ವವೆಲ್ಲವೂ ಶಿವನಾದರೆ ಚೌರಾಸಿಲಕ್ಷ ಜೀವರಾಶಿಗಳೇಕಾದವು? ಸೂತ್ರಧಾರಿ, ನರರಿಗಾಗಿ ಯಂತ್ರವನಾಡಿಸುವಲ್ಲಿ ಹೊರಗಿದ್ದಾಡಿಸುವನಲ್ಲದೆ ತಾನೊಳಗಿದ್ದಾಡಿಸುವನೆ? ಅಹಂಗೆ ಶಿವನು ತನ್ನಾಧೀನವಾಗಿಪ್ಪ ತ್ರಿಜಗದ ಸಚರಾಚರಂಗಳ ತಾನು ಯಂತ್ರವಾಹಕನಾಗಿ ಆಡಿಸುವನಲ್ಲದೆ, ತಾನಾಡುವನೆ? ಸರ್ವಯಂತ್ರವೂ ತಾನಾದರೆ ಸಕಲತೀರ್ಥಕ್ಷೇತ್ರಯಾತ್ರೆಗೆ ಹೋಗಲೇಕೊ ? ಇದು ಕಾರಣ ಸರ್ವವೂ ಶಿವನೆನಲಾಗದು. ಸದಾಚಾರ ಸದ್ಭಕ್ತಿ ಸನ್ನಿಹಿತ ಲಿಂಗಜಂಗಮದೊಳಗಿಪ್ಪ, ಮತ್ತೆಲ್ಲಿಯೂ ಇಲ್ಲ, ಕೂಡಲಚೆನ್ನಸಂಗಯ್ಯಾ
--------------
ಚನ್ನಬಸವಣ್ಣ
ಯುಗ ಜುಗ ಮಡಿವಂದು ಧಗಿಲು ಭುಗಿಲೆಂದು ಮುಸುಕಿದ ಮಹಾಜ್ವಾಲೆ ಇದೇನೊ! ಇಂದೆನ್ನ ಕಣ್ಗೆ ಗೋಚರವಾಯಿತ್ತೆಲೆ ಅಯ್ಯಾ! ನೀವೆಂದರಿಯೆನಯ್ಯಾ. ನಾನೆನ್ನ ಕಾಯದ ಕಳವಳದಲ್ಲಿದ್ದೆನಲ್ಲದೆ ನೀವೆಂಬ ಬಗೆದೋರದೆ ಕೆಟ್ಟೆನೆಲೆ ಅಯ್ಯಾ. ಆಳ್ದನೊಡನೆ ಆಳು ಮುನಿದಡೆ, ಆರು ಕೆಡುವರು ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಒಂದೊಂದವರೆಯಿಲ್ಲದ ಯುಗ ಚಂದ್ರಾದಿಗಳು ಜನಿಸದಲ್ಲಿ ಬಿಂದು, ಲಘು, ಗುರು, ಉಭಯಂಗಳಿಲ್ಲದ ಮತ್ತೆ ಜಗವ ಸಂಧಿಸಿ ಶರಣೆನಿಸಿಕೊಂಬ ದೇವರಾರಯ್ಯ ? ಪ್ರಥಮದಲ್ಲಿ ಘನಕಲ್ಪಾಂತರಕ್ಕೆ ಎಯ್ದಿದ ದ್ವಿತೀಯದಲ್ಲಿ ಶಂಭು ಕೂಡಿದ ತೃತೀಯದಲ್ಲಿ ಪ್ರಮಾಣು ಅವಧಿಗೊಳಗಾದ ಪಂಚವಿಂಶತಿತತ್ವದಿಂದತ್ತ ಅಭೇದ್ಯವಸ್ತು ವೈದಿಕ ಮಾಯಾಭೇದವೆಂಬ ಸ್ವರೂಪವ ಕಂಡು ಪೂರ್ವಭಾಗದಲ್ಲಿ ಶಕ್ತಿಯ ಧರಿಸಿ, ಉತ್ತರಭಾಗದಲ್ಲಿ ವಸ್ತು ತಾನಾಗಿ ವಾಮಾಂಗನಾದ ವಿಷ್ಣುವಿಗೆ ಓಲೆಯನಿಟ್ಟು, ಬ್ರಹ್ಮಂಗೆ ನಾಲಗೆಯ ಕೊಟ್ಟು. ಏಕಾದಶರುದ್ರರಿಗೆ ಮುಖ್ಯನಾದ ಪರಮೇಶ್ವರಂಗೆ ಪರಮಪದವ ಕೊಟ್ಟು ನೀ ಭಕ್ತರ ಹೃತ್ಕಮಲಮಧ್ಯದಲ್ಲಿ ನಿಜವಾಸಿಯಾದೆಯಲ್ಲಾ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆ.
--------------
ಪ್ರಸಾದಿ ಭೋಗಣ್ಣ
ಬ್ರಹ್ಮಪ್ರಳಯವಾದಲ್ಲಿ ತಾ ಕೆಟ್ಟುದಿಲ್ಲ ಮಾರಿ. ವಿಷ್ಣು ಮರಣವಹಲ್ಲಿ ತಾ ಸತ್ತುದಿಲ್ಲ ಮಾರಿ. ರುದ್ರ ಯುಗ ಜುಂಗಂಗಳ ಗೆಲುವಲ್ಲಿ ಮಾಯೆ ಮನಸಿಜನ ಮನವೆಲ್ಲಿತ್ತು ಅಲ್ಲಿದ್ದಳು. ಇಂತೀ ತ್ರಿವಿಧ ಮೂರ್ತಿಗಳಲ್ಲಿ ಮರವೆಯ ದೆಸೆಯಿಂದ ಮಾರಿಯಾಯಿತ್ತು. ಆ ಮಾರಿಯ ಹೊತ್ತು ಭವದ ಬಾಗಿಲಲ್ಲಿ ತಿರುಗಾಡುತ್ತಿದ್ದೇನೆ. ಡಕ್ಕೆಯ ಉಲುಹಡಗುವುದಕ್ಕೆ ಮೊದಲೆ ಭಕ್ತಿ ಮುಕ್ತಿಯನರಿದು ನಿಶ್ಚಯರಾಗಿ ಕಾಲಾಂತಕ ಭೀಮೇಶ್ವರಲಿಂಗವನರಿಯಬಲ್ಲಡೆ.
--------------
ಡಕ್ಕೆಯ ಬೊಮ್ಮಣ್ಣ
ಯುಗ ಹದಿನೆಂಟು ಸಹಸ್ರ ಕೂಡೆ, ಬ್ರಹ್ಮಂಗೆ ಪರಮಾಯು. ಇಂತಾ ನವಬ್ರಹ್ಮರು ಸಹಸ್ರ ಕೂಡೆ, ವಿಷ್ಣುವಿಂಗೆ ಪರಮಾಯು. ಇಂತಾ ವಿಷ್ಣುವಿನ ಸಹಸ್ರ ಕೂಡೆ, ರುದ್ರಂಗೆ ಒಂದು ಜಾವ. ಇಂತಾ ರುದ್ರರು ಏಕಾದಶ ಕೂಡೆ, ಈಶ್ವರಂಗೆ ಎರಡು ಜಾವ. ಇಂತಾ ಈಶ್ವರರು ದ್ವಾದಶ ಕೂಡೆ, ಸದಾಶಿವಂಗೆ ಮೂರು ಜಾವ. ಇಂತಾ ಸದಾಶಿವರು ಶತಸಹಸ್ರ ಕೂಡೆ, ಮಹಾಪ್ರಳಯವಾಯಿತ್ತು. ಇಂತಾ ಮಹಾಪ್ರಳಯ ಹದಿನೆಂಟು ಕೂಡೆ, ಮಹಾಂಧಕಾರ ಸಂದಿತ್ತು. ಇಂತಾ ಮಹಾಂಧಕಾರ ಸಂದಿಲ್ಲದೆ ತಿರುಗುವಲ್ಲಿ, ಬಯಲು ಬರಿಕೆಯ್ಯಿತ್ತು. ಅಲ್ಲಿಂದಾಚೆ ನೀವೆ ಬಲ್ಲಿರಿ, ನಾನರಿಯೆನಯ್ಯಾ. ಸೊಲ್ಲಿಗತೀತನ ಕಲ್ಲಿಲಿರ್ದಹೆನೆಂಬರಯ್ಯಾ. ನಂಬಿಗೆ ಅಂಜಿ ಹಿಂದುಮುಂದಾದೆ, ಸಂದೇಹಿ ನಾನಯ್ಯಾ. ಎಲ್ಲಿ ಭಾವಿಸಿದಡಲ್ಲಿ ವಲ್ಲಭ ನೀನಾಗಿರ್ಪೆ, ಎನ್ನ ನಲ್ಲನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕೃತಯುಗದಲ್ಲಿ ದೇವರು ದೇವಾಸುರನ ಕೊಲುವಲ್ಲಿ, ಪ್ರಮಥನೆಂಬ ಗಣೇಶ್ವರನಾಗಿರ್ದನು. ಗಜಾಸುರನ ಚರ್ಮವ ಬಿಚ್ಚಿ ಅಜಾರಿ ಹೊದೆವಲ್ಲಿ ಉಗ್ರನೆಂಬ ಗಣೇಶ್ವರನಾಗಿರ್ದನು. ಅಸುರರ ಶಿರೋಮಾಲೆಯ ಕೊರಳಲ್ಲಿ ಉರದಲ್ಲಿ ಹಾರವಾಗಿ ಧರಿಸಿ ಜಗಕ್ಕೆ ಜೂಬಾಗಿಪ್ಪಲ್ಲಿ, ಶಂಕೆಯಿಲ್ಲದೆ ನಿಶ್ಶಂಕನೆಂಬ ಗಣೇಶ್ವರನಾಗಿರ್ದನು. ಸಮಸ್ತ ದೇವರಿಗೆ ಕರುಣಾಮೃತವ ಸುರಿದು ಸುಖವನಿತ್ತು ರಕ್ಷಿಸುವಲ್ಲಿ ಶಂಕರನೆಂಬ ಗಣೇಶ್ವರನಾಗಿರ್ದನು. ಜಾಳಂಧರನೆಂಬ ಅಸುರನ ಕೊಲುವಲ್ಲಿ ಜಾಣರಿಗೆ ಜಾಣನಾಗಿ ವಿಚಿತ್ರನೆಂಬ ಗಣೇಶ್ವರನಾಗಿರ್ದನು. ತ್ರೇತಾಯುಗದಲ್ಲಿ ಕಾಳಂಧರದೊಳಗೆ ಶಿವನು ನಿಜಮಂದಿರವಾಗಿದ್ದಲ್ಲಿ, ಕಾಲಾಗ್ನಿರುದ್ರನೆಂಬ ಗಣೇಶ್ವನಾಗಿರ್ದನು. ಪಿತಾಸುರನೆಂಬ ದೈತ್ಯನ ಕೊಂದು ಜಗವ ರಕ್ಷಿಸುವಲ್ಲಿ, ಮಾತಾಪಿತನೆಂಬ ಗಣೇಶ್ವರನಾಗಿರ್ದನು. ತಾಳಾಸುರನೆಂಬ ದೈತ್ಯನ ಕೊಂದು ಜಗವ ರಕ್ಷಿಸಿ ಸೃಷ್ಟಿಯ ಕಲ್ಪಿಸಿ ಬ್ರಹ್ಮಾಂಡ ಭಾರಮಂ ಧರಿಸುವಲ್ಲಿ, ತಾಳಸಮ್ಮೇಳನೆಂಬ ಗಣೇಶ್ವರನಾಗಿರ್ದನು. ಜಲಪ್ರಳಯದಲ್ಲಿ ಜಗನ್ನಾಥನು ಅಳಿಯದೆ ಇಪ್ಪಲ್ಲಿ ಜನನಮರಣವರ್ಜಿತನೆಂಬ ಗಣೇಶ್ವರನಾಗಿರ್ದನು. ಜಗವೆಲ್ಲಾ ಶೂನ್ಯವೆಂದಡೆ ನಾನೆ ಹುಟ್ಟಿಸಿದೆನೆಂದು, ಆದಿಗಣನಾಥನೆಂಬ ಗಣೇಶ್ವರನಾಗಿರ್ದನು. ಸುರಾಸುರರು ಅಹಂಕಾರದಲ್ಲಿ ಹೆಚ್ಚಿ ಮೇರೆದಪ್ಪಿದಲ್ಲಿ ಗೂಳಿಯಾಗಿ ಹೋರಿ ಎಲ್ಲರ ತೊತ್ತ?ದುಳಿದು, ಒಕ್ಕಲಿಕ್ಕಿ ಮಿಕ್ಕು ಮೀರಿ ನಂದಿಮಹಾಕಾಳನೆಂಬ ಗಣೇಶ್ವರನಾಗಿರ್ದನು. ಉರಿಗಣ್ಣ ತೆರೆದಡೆ ಉರಿದಹವು ಲೋಕಂಗಳೆಂದು ಜಗವ ಹಿಂದಿಕ್ಕಿಕೊಂಡು ವಂದ್ಯನೆಂಬ ಗಣೇಶ್ವರನಾಗಿರ್ದನು. ಉಮೆಯ ಕಲ್ಯಾಣದಲ್ಲಿ ಕಾಲಲೋಚನನೆಂಬ ಗಣೇಶ್ವರನಾಗಿರ್ದನು. ಅಂಧಕಾಸುರನ ಕೊಲುವಲ್ಲಿ ನೀಲಲೋಹಿತನೆಂಬ ಗಣೇಶ್ವರನಾಗಿರ್ದನು. ತ್ರಿಪುರದಹನವ ಮಾಡುವಲ್ಲಿ ಸ್ಕಂದನೆಂಬ ಗಣೇಶ್ವರನಾಗಿರ್ದನು. ಬ್ರಹ್ಮಕಪಾಲ ವಿಷ್ಣುಕಂಕಾಳವನಿಕ್ಕುವಲ್ಲಿ ನೀಲಕಂಠನೆಂಬ ಗಣೇಶ್ವರನಾಗಿರ್ದನು. ದ್ವಾಪರದಲ್ಲಿ ಲಿಂಗಪ್ರಾಣಸಂಯೋಗವಾಗಿ ವೃಷಭನೆಂಬ ಗಣೇಶ್ವರನಾಗಿರ್ದನು. ಇಂತು ನಾಲ್ಕು ಯುಗ, ಹದಿನಾಲ್ಕು ಭುವನಂಗಳು ಮಡಿವಲ್ಲಿ, ಹುಟ್ಟುವಲ್ಲಿ ನಂದಿಕೇಶ್ವರನೆಂಬ ಗಣೇಶ್ವರನಾಗಿರ್ದನು. ಕಲಿಯುಗದಲ್ಲಿ ಗುರು ಲಿಂಗ ಜಂಗಮ ಪಾದೋದಕ ಪ್ರಸಾದನದಫ ಪೂರ್ವಾಶ್ರಯವ ಕಳೆದು ಲಿಂಗವಾಗಿ ಕುಳಸ್ಥಳವನರಿತು ಮಹಾಂತ ಕೂಡಲಚೆನ್ನಸಂಗನ ಮಹಾಮನೆಯಲ್ಲಿ, ಸರ್ವಾಚಾರಸಂಪನ್ನ ಬಸವಣ್ಣನೆಂಬ ಗಣೇಶ್ವರನಾಗಿರ್ದನು ಕೇಳಾ ಪ್ರಭುವೆ !
--------------
ಚನ್ನಬಸವಣ್ಣ
ಆದಿಯ ಶರಣನೊಬ್ಬನ ಮದುವೆಯ ಮಾಡಲು, ಯುಗ ಜುಗದವರೆಲ್ಲಾ ನಿಬ್ಬಣ ಹೋದರು, ಹೋದ ನಿಬ್ಬಣಿಗರು ಮರಳರು ! ಮದುವಣಿಗನ ಸುದ್ದಿಯನರಿಯಲು ಬಾರದು. ಹಂದರವಳಿಯದು, ಹಸೆ ಮುನ್ನಲುಡುಗದು ! ಬಂದಬಂದವರೆಲ್ಲಾ ಮಿಂದುಂಡು ಹೋದರು. [ಇದರಂತುವನರಿಯದೆ ಜಗವೆಲ್ಲ ಬರಡಾಯಿತ್ತು] ಇದರಂತುವನರಿದಡೆ- ಗುಹೇಶ್ವರಶಬ್ದವನೊಳಕೊಂಡ ಮಹಂತ ಬಯಲು !
--------------
ಅಲ್ಲಮಪ್ರಭುದೇವರು
-->