ಅಥವಾ

ಒಟ್ಟು 12 ಕಡೆಗಳಲ್ಲಿ , 8 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಷ್ಟಲಿಂಗವ ಹಿಡಿದು ಕಷ್ಟಯೋನಿಗೆ ತಿರುಗುವ ಕೆಟ್ಟ ಪಾತಕರ ನೋಡಲಾಗದು. ಜಂಗಮವೆಂದು ಮಾಡಲಾಗದು ಪೂಜೆಯ. ನಮಿಸಿಕೊಳ್ಳಲಾಗದು ಹರನೆಂದು. ಅದೇನು ಕಾರಣವೆಂದೊಡೆ : ತನುಮನಭಾವನಷ್ಟವಾದಿಷ್ಟಲಿಂಗಜಂಗಮವು ಪೂಜೆಗೆ ಯೋಗ್ಯ. ತನುಮನಭಾವವು ತ್ರಿವಿಧಮಲದಲ್ಲಿ ಮುಳುಗಿ ಮಲರೂಪಮನುಜರಿಗೆ, ಗುರುನಿರಂಜನ ಚನ್ನಬಸವಲಿಂಗವೆಂದೊಡೆ ನಾಚಿಕೆಗೊಂಡಿತ್ತು ಆಚಾರ.
--------------
ದೇಶಿಕೇಂದ್ರ ಸಂಗನಬಸವಯ್ಯ
ಭಕ್ತಿಯುಳ್ಳವಂಗೆ ನಿಷ್ಠುರದ ಮಾತೇಕೆಂಬರು ನಾಲ್ಕರ ಮುಕ್ತಿಯ ಭಕ್ತರು. ನಿಷ್ಠೆವಂತರಿಗೆ ಇದೇ ಭಕ್ತಿ, ಅನಿತ್ಯವನರಿದ ನಿಶ್ಚಟಂಗೆ ಮಿಥ್ಯವನಾರಾದಡೂ ನುಡಿಯಲಿ, ಸತ್ಯವಿದ್ದ ಮತ್ತೆ. ಕಲ್ಲಿನ ಮನೆಯಲ್ಲಿದ್ದವಂಗೆ ದಳ್ಳುರಿ ಬಿದ್ದಡೇನು ? ಇವರೆಲ್ಲರ ಬಲ್ಲತನಕ್ಕಂಜಿ ನಾನೊಳ್ಳಿಹನೆಂದಡೆ, ಆತನು ಎಲ್ಲಿಗೆ ಯೋಗ್ಯ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಮತ್ತಮಾ ಶಿವಪೂಜಾವಿಧಿಗೆ ದೇಶ ಕಾಲ ಸ್ಥಾನ ದ್ರವ್ಯ ಪ್ರಯೋಜನಾದಿ ಗಳಂ ತಾಂತ್ರಿಕ ವೈದಿಕಮೆಂಬೆರಡೂ ಪೂಜಾಭೇದಂದಳಂ, ಅಂತಃಶೌಚ ಬಾಹ್ಯ ಶೌಚಯೆಂಬೆರಡೂ ಶೌಚಭೇದಂಗಳಂ, ಶೋಷಣ ದಹನ ಪ್ಲಾವನಮೆಂಬ ಕ್ರಿಯೆಗಳಂ, ಆತ್ಮಶುದ್ಧಿ ಸ್ಥಾನಶುದ್ಧಿ ದ್ರವ್ಯ ಶುದ್ಧಿ [ಲಿಂಗಶುದ್ಧಿ] ಮಂತ್ರ ಶುದ್ಧಿಯೆಂಬ ಪಂಚ ಶುದ್ಧಿಗಳ ವಿಸ್ತರಿಸುದವರಲ್ಲಿ ಶೌಚಾಚಮನಸ್ನಾನ ಭಸ್ಮರುದ್ರಾಕ್ಷಧಾರಣ ಕವಚ ಮಂತ್ರ ಕಲಾನ್ಯಾಸ ಧ್ಯಾನಾದಿ ರಚನೆಂಗೆಯ್ದುದೇ ಆತ್ಮಶುದ್ಧಿ ಎನಿಸೂದು. ಸಮ್ಮಾರ್ಜನಾನುಲೇಪನ ವರ್ಣಕ ಗಂಧಪುಷ್ಪಧೂಪ ದೀಪಾದಿ ನಿರ್ಮಲೋಪ ಕರಣಂಗಳಿಂ ಚೌಕಮನಲಂಕರಿಪುದೆ ಸ್ಥಾನ ಶುದ್ಧಿ ಎನಿಸೂದು. ಜಲಗಂಧಾಕ್ಷತಾ ಪುಷ್ಪಾದಿಗಳಂ ನಿರೀಕ್ಷಿಸಿ, ಭಸ್ಮಮಂತ್ರವಾರಿಗಳಿಂ ಸಂಪ್ರೋಕ್ಷಣಂಗೆಯ್ವುದೆ ದ್ರವ್ಯಶುದ್ಧಿ ಎನಿಸೂದು. ಅನಾಮಿಕ ಮಧ್ಯಮೆಗಳ ಮಧ್ಯದಲ್ಲಿ ನವೀನಕುಸುಮವಿಡಿದು ಅಂಗುಷ*ತರ್ಜನಿಗಳಿಂ ಮೊದಲ ನಿರ್ಮಾಲ್ಯಮಂ ತ್ಯಜಿಸಿ, ಲಿಂಗಪೀಠಮಂವಾರಿಯಿಂ ಪ್ರಕ್ಷಾಲನಂ ಗೆಯ್ವುದೆ ಲಿಂಗಶುದ್ಧಿ ಎನಿಸೂದು. ಸಕಲಪೂಜಾತ್ರ್ಥಮಾಗಿ ಒಂ ನಮಃ ಶಿವಾಯ ಸ್ವಾಹಾ ಎಂದುಚ್ಚರಿಪುದೆ ಮಂತ್ರಶುದ್ಧಿಯಹುದೆಂದೊಡಂ ಬಟ್ಟು, ಬಳಿಕ ಅಸ್ತ್ರಮುದ್ರೆ ಚಕ್ರಮುದ್ರೆ ಮಹಾಮುದ್ರೆ ಶೋಧನಿಮುದ್ರೆ ಸಂಹಾರ ಪಂಚಮುಖ ಮುದ್ರೆ ಸುರಭಿಮುದ್ರೆ ದ್ರವ್ಯಮುದ್ರೆ ಮುಕುಳಿಕಾಮುದ್ರೆ ಪದ್ಮಮುದ್ರೆ ಶಶಕರ್ಣವೆÅದ್ರೆ ಶಕ್ತಿಮುದ್ರೆ ಬೀಜಮುದ್ರೆ ಶಾಂತಿಮುದ್ರೆ ಆವಾಹನ ಮುದ್ರೆ ಮನೋರಮಮುದ್ರೆ ಧ್ವಜಮುದ್ರೆ ಲಿಂಗಮುದ್ರೆ ಗಾಯತ್ರಿಮುದ್ರೆ ಕಾಲಕಂಢ ಮುದ್ರೆ ಶೂಲಮುದ್ರೆ ನಮಸ್ಕಾರಮುದ್ರೆ ಯೋನಿಮುದ್ರೆ [ವಿ]ಬ್ದೊಟ..... ಮುದ್ರೆ....ರ ಮುದ್ರೆ ಎಂಬ ಸಕಲ ಮುದ್ರಾಲಕ್ಷಣವನರಿದಾಯಾ ಯೋಗ್ಯ ಕ್ರಿಯೆಗಳಿಲ್ಲಿ ಪ್ರಯೋಗಿಸಿ, ಬಳಿಕ ಕೂರ್ಮ ಆನಂತಸಿಂಹ ಪದ್ಮವಿ.......... ಪೀಠಂಗಳಲ್ಲಿ......ಮಾದ ಸಿಂಹಾಸನಕ್ಕೆ ಶ್ವೇತರಕ್ತಪೀತಶ್ಯಾಮವರ್ಣದ ಸಿಂಹಾ ಕಾರಮಾದ ಧರ್ಮಜ್ಞಾನ ವೈರಾಗ್ಯ ಐಶ್ವರ್ಯವೆ,ಬ ನಾಲ್ಕೆ ಕ್ರಮದಿಂದಾಗ್ನ್ಯಾದಿ ದಿಕ್ಕಿನ ಪಾದಚತುಷ್ಟಯಂಗಳು, ರಾಜಾವರ್ತಪ್ರಭೆಯ ರೂಪಮಾದ ಅಧರ್ಮ ಅಜ್ಞಾನ ಅವೈರಾಗ್ಯ ಅನೈಶ್ವರ್ಯವೆಂಬ ನಾಲ್ಕೆ ಕ್ರಮದಿ ಪೂರ್ವಾದಿ ದಿಕ್ಕಿನ ಪಾದಚತುಷ್ಟಯಂಗಳು ಮೇಲೆ ಅಣಿಮಾದಿಗಳೆ ಪೂರ್ವಾದ್ಯಷ್ಟದಿಕ್ಕಿನ ದಳಂಗಳು, ವಾಮಾದಿ ಸರ್ವಭೂತ ದಮನಾಂತಮಾದ ರುದ್ರವೆ ಪೂರ್ವಾ ದ್ಯಷ್ಟದಿಕ್ಕಿನ ಕೇಸರಂಗಳು, ವೈರಾಗ್ಯವೆ ಕರ್ಣಿಕೆ ವಾಮೆ ಮೊದಲು ಮನೋನ್ಮನಿ ಕಡೆಯಾದ ನವಶಕ್ತಿಗಳೆ ಪೂರ್ವಾದಿಮಧ್ಯಾಂತವಾದ ಕರ್ಣಿಕಾಬೀಜಂಗಳು, ಬಳಿಕದರ ಮೇಲೆ ಅಗ್ನಿರವಿಶಶಿ ಮಂಡಲತ್ರಯಂಗಳು, ಬಳಿಕದರ ಮೇಲೆ ತಮೋರಜಸತ್ವಗುಣಂಗಳವರ ಮೇಲೆ ಜೀವಾತ್ಮ ಅಂತರಾತ್ಮ ಪರಮಾತ್ಮರು ಗಳವರ ಮೇಲೆ ಆತ್ಮತತ್ವ ವಿದ್ಯಾತತ್ವ ಶಿವಶತ್ವಂಗಳಿಂತು ಪರಿವಿಡಿದಾಯತ ಮಾದ ಸಿಂಹಾಸನಮಂ ಪರಿಕಲ್ಪಿಸಿ ಲಿಂಗಾರ್ಚನೆಯಂ ಮಾಳ್ಪುದಯ್ಯಾ ಶಾಂತ ವೀರೇಶ್ವರಾ.
--------------
ಶಾಂತವೀರೇಶ್ವರ
ದಾಸೀಪುತ್ರನಾಗಲಿ, ವೇಶ್ಯಾಪುತ್ರನಾಗಲಿ ಶಿವದೀಕ್ಷೆಯಾದ ಬಳಿಕ ಸಾಕ್ಷಾತು ಶಿವನೆಂದು ವಂದಿಸಿ, ಪೂಜಿಸಿ, ಪಾದೋದಕ ಪ್ರಸಾದವ ಕೊಂಬುದೆ ಯೋಗ್ಯ. ಹೀಗಲ್ಲದೆ ಉದಾಸೀನವ ಮಾಡಿ ಬಿಡುವವರಿಗೆ ಪಂಚಮಹಾಪಾತಕ ನರಕ ಕಾಣಾ, ಕೂಡಲಸಂಗಮದೇವಾ.
--------------
ಬಸವಣ್ಣ
ಕೆರೆ ಪೂದೋಟ ಅರವಟ್ಟಿಗೆ ಬಾವಿ ವಿವಾಹ ಮುಂತಾದ ಧರ್ಮಂಗಳ ಕಟ್ಟಿಹೆವೆಂದು ನೇಮದಿಂದ ತಿರುಗುವ ಶೀಲ ಅದಾರಿಗೆ ಯೋಗ್ಯ? ಸರಿಹುದುಗಿನ ಸೂಳೆ ಸೀರೆಯನುಟ್ಟಂತೆ ಅದಾರಿಗೆ ಸುಖದುಃಖವೆಂಬುದ ನೀನೆ ಅರಿ. ಸರಿ ಹುದುಗಿನ ಧರ್ಮವುಂಟೆ? ಅರಿಕೆಯ ಒಡವೆಯ ಊರೆಲ್ಲಕ್ಕೆ ತಂದಿಕ್ಕಿ, ನಾ ಮಾಡಿದೆನೆಂದಡೆ ಇದಾರು ಮೆಚ್ಚುವರು? ಆ ಮಾಟವನಾರಯ್ಯಲಿಲ್ಲ, ಅದು ಸ್ವಕಾರ್ಯಕ್ಕೆ ಏರಿದ ಪಥ. ಇಂತೀ ವ್ರತ ನೇಮ ಶೀಲವನರಿಯಬೇಕು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಧರ್ಮಜ್ಞನಾಗಿ ವ್ರತವನಂಗೀಕರಿಸಬೇಕು.
--------------
ಅಕ್ಕಮ್ಮ
ಪಂಚಮುಖವರ್ಣಂಗಳವು ಪಂಚಮುಖನಂಘ್ರಿರೇಣುವಿಗೆ ಯೋಗ್ಯ ನೋಡಾ. ಷಣ್ಮುಖವರ್ಣಂಗಳವು ಅಷ್ಟಮೂರ್ತಿಯ ಪದಪದ್ಮದೈಕ್ಯಕ್ಕೆ ಯೋಗ್ಯ ನೋಡಾ. ಷಡ್ಚಕ್ರವರ್ಣಂಗಳವು ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಐಕ್ಯ ನೋಡಾ, ಎಂದರುಹಿದ ಗುರು ಚೆನ್ನಬಸವಣ್ಣನ ಪಾದವ ನೆನೆನೆನೆದು ಮುಕ್ತನಾದೆ ನೋಡಾ.
--------------
ಸಿದ್ಧರಾಮೇಶ್ವರ
ಜಂಗಮದ ಗುಣವನು, ಜಂಗಮದ ಭೇದವನು ಜಂಗಮದ ರೂಪವನು ಹೇಳಿಹೆ ಕೇಳಿರಣ್ಣ. ಜಂಗಮವೆಂದರೆ ಪರಮಜ್ಞಾನ ಸ್ವರೂಪನು. ಒಂದಿನ ಉಂಟಾಗಿ, ಒಂದಿನ ಇಲ್ಲ[ವಾಗಿಪ್ಪ] ಉಪಜೀವನಕನಲ್ಲ ಕಾಣಿರಣ್ಣ. ಉಪಾಧಿ[ಕ], ನಿರೂಪಾಧಿಕನೆಂಬ ಸಂದೇಹಭ್ರಾಂತನಲ್ಲ ಕಾಣಿಭೋ. ಸತ್ತು ಚಿತ್ತಾನಂದಭರಿತನು. ಭಕ್ತನ ಪ್ರಾಣವೇ ತಾನಾಗಿಪ್ಪ ನಿತ್ಯ ಪರಿಪೂರ್ಣನೆ, ಜಂಗಮದೇವನೆಂದರಿಯಲು ಯೋಗ್ಯ ಕಾಣಿಭೋ. ಆ ಘನ ಚೈತನ್ಯವೆಂಬ ಜಂಗಮವ ಮನೋಭಾವದಲ್ಲಿ ಆರಾಧಿಸಿ ಸುಖಿಯಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮನಮುಟ್ಟದ ವ್ರತ, ತನುಮುಟ್ಟದ ಸುಖ, ಬೇರುಮುಟ್ಟದ ಸಾರ ಅದಾರಿಗೆ ಯೋಗ್ಯ ಮನ ವಚನ ಕಾಯ ತ್ರಿಕರಣ ಏಕವಾಗಿ ಅಂಗಕ್ಕೆ ಆಚಾರ, ಆಚಾರಕ್ಕೆ ಅರಿವು, ಅರಿವಿಂಗೆ ಕುರುಹು, ಕುರುಹಿನಲ್ಲಿ ನೇಮಕ್ಕೊಡಲಾಗಿ, ಭಾವಕ್ಕೆ ರೂಪಾಗಿ, ಬಾವಿಯ ನೀರ ಕುಂಭ ತಂದುಕೊಡುವಂತೆ, ಮಹಾಜ್ಞಾನ ಸುಖಜಲವ ಜ್ಞಾತೃವೆಂಬ ಕಣ್ಣಿಗೆ ಜ್ಞೇಯವೆಂಬ ಕುಂಭದಲ್ಲಿ ಭಾವವೆಂಬ ಜಲ ಬಂದಿತ್ತು. ಆ ಸುಜಲದಿಂದ ಅಂಗವೆಂಬ ಲಿಂಗಕ್ಕೆ ಮಜ್ಜನಕ್ಕೆರೆದೆ ಪ್ರಾಣಲಿಂಗಕ್ಕೆ ಓಗರವನಟ್ಟೆ, ಮಹಾಘನವೆಂಬ ತೃಪ್ತಿಲಿಂಗ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ನೇಮ ಸಂದಿತ್ತು.
--------------
ಅಕ್ಕಮ್ಮ
ಬಳಿಕ ವಂಶಾಸನದಿಂ ದರಿದ್ರ, ಪಾಷಾಣಾಸನದಿಂ ವ್ಯಾಧಿ, ಭೂಮ್ಯಾಸ ನದಿಂ ದುಃಖ ಮಂತ್ರಹಾನಿಗಳು, ದಾರುಕಾಸನದಿಂ ದುರ್ಭಾಗ್ಯ ವ್ಯಾಧಿಗಳು, ತೃಣಾಸನದಿಂ ಯಶೋಹಾನಿ, ಪಲ್ಲವಾಸನದಿಂ ಚಿತ್ತಭ್ರಾಂತಿ, ಕೃಷ್ಣಾ ಜಿನಾಸನದಿಂ ಜ್ಞಾನಾಸಿದ್ಧಿ, ವ್ಯಾಘ್ರಾ ಜಿನಾಚರ್ಮಾಸನದಿಂ ಮೋಕ್ಷಲಕ್ಷ್ಮಿ , ವಸ್ತ್ರಾಸನದಿಂದ ವ್ಯಾಧಿ ನಿವೃತ್ತಿ, ಕಂಬಲಾಸನದಿಂ ಸುಖ್ಯತೆ, ಕೃಷ್ಣ ವಸ್ತ್ರಾಸನದಿಂ ಅಭಿಚಾರ ಕ್ರಿಯೆಗೆ, ರಕ್ತ ವಸ್ತ್ರಾಸನವೆ ವಶ್ಯಾದಿ ಕ್ರಿಯೆಗೆ, ಶುಭ್ರವಸ್ತ್ರಾಸನವೆ ಶಾಂತ್ಯಾಧಿವಿಧಿಗೆ, ಚಿತ್ರ ಕಂಬಲಾಸನವೆ ಸರ್ವಾರ್ಥಸಿದ್ಧಿಗಳಿವೆಂದು ಪೀಠಂಗಳಂ ಕುರುಹಿಟ್ಟು, ಬಳಿಕೆಂಬತ್ತನಾಲ್ಕಾಸನಂಗಳೊಳಗೆ ಸಿದ್ಧಾಸನ ಪದ್ಮಾಸನ ಸ್ವಸ್ತಿ ಕಾಸನ ವೀರಾಸನ ಗೋಮುಖಾಸನ ಸುಖಾಸನಂಗಳೇ ಜಪಕರ್ಮಕ್ಕೆ ಯೋಗ್ಯ ಮಾದಾ ಸನಂಗಳೆಂದು ಸುಸ್ಥಿರನಾಗಿ ಕುಳ್ಳಿರುವುದಯ್ಯ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಖಂಡಿತ ವ್ರತ ಅಖಂಡಿತ ವ್ರತ, ಸಂದ ವ್ರತ, ಸಲ್ಲದ ವ್ರತವೆಂದು ನೇಮವ ಮಾಡಿಕೊಂಡು ಊರೂರ ತಪ್ಪದೆ ಸಾರಿ ದೂರಿಕೊಂಡು ತಿರುಗಲೇತಕ್ಕೆ? ತಾ ಮಾಡಿಕೊಂಡ ವ್ರತ ನೇಮ ಊರೆಲ್ಲಕ್ಕೊ ತನಗೊ ಎಂಬುದ ತಾನರಿಯದೆ ನಿಕ್ಷೇಪವ ಕಂಡೆನೆಂದು ಸಾರಿದರುಂಟೆ? ಆ ಮನಜ್ಞಾನವ್ರತ ಕಳ್ಳನ ಚೇಳೂರಿದಂತೆ ಅಲ್ಲಿಯೆ ಅಡಗಬೇಕು. ಹೀಗಲ್ಲದೆ ಕಲಕೇತರಂತೆ ಊರಮಗನೆಂದು ಬಾಗಿಲಲ್ಲಿ ಇರಿದುಕೊಂಬನಂತೆ ಅವ ಮಾಡಿಕೊಂಡ ವ್ರತ ಅದಾರಿಗೆ ಯೋಗ್ಯ? ಅದು ಸಾಗದ ನೇಮ, ಶೀಲವಾಗದ ಅಕೃತ್ಯ. ಇಂತೀ ವ್ರತದ ಭೇದವನರಿಯಬೇಕು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ.
--------------
ಅಕ್ಕಮ್ಮ
ಅಯ್ಯಾ, ತನ್ನಾದಿ ಮಧ್ಯಾವಸಾನವ ತಿಳಿದು, ಭವಿ ಭಕ್ತ, ಆಚಾರ ಅನಾಚಾರ, ಯೋಗ್ಯ ಅಯೋಗ್ಯ, ಅರ್ಪಿತ ಅನರ್ಪಿತ, ಸುಸಂಗ ದುಸ್ಸಂಗ, ಸುಚಿತ್ತ ಕುಚಿತ್ತ, ಸುಬುದ್ಧಿ ಕುಬುದ್ಧಿ, ಅಹಂಕಾರ ನಿರಹಂಕಾರ, ಸುಮನ ಕುಮನ, ಸುಜ್ಞಾನ ಅಜ್ಞಾನ, ಸದ್ಭಾವ ದುರ್ಭಾವ, ಪಾಪ ಪುಣ್ಯ, ಧರ್ಮ ಕರ್ಮ, ಸ್ವರ್ಗ ನರಕ, ಇಹಪರವೆಂಬ ಭೇದಾಭೇದವ ತಿಳಿದು, ಶೈವಮಾರ್ಗದಷ್ಟಾಂಗಯೋಗವನುಳಿದು, ವೀರಶೈವ ಶಿವಯೋಗಸಂಪನ್ನನಾಗಿ ಭಕ್ತಿ ಜ್ಞಾನ ವೈರಾಗ್ಯದಲ್ಲಾಚರಿಸಿ, ಬಕಧ್ಯಾನವನುಳಿದು, ರಾಜಹಂಸನ ಹಾಗೆ ಅಸತ್ಯವನುಳಿದು, ಸುಸತ್ಯದಲ್ಲಾಚರಿಸುವ ಭಕ್ತ ಜಂಗಮವೇ ದ್ವಿತೀಯ ಶಂಭುವೆಂದು ಅವರಂಗಣವ ಕಾಯ್ದು, ಅವರುಟ್ಟುದ ತೊಳೆದು, ಅವರೊಕ್ಕುದ ಕೈಕೊಂಡು, ಅವರುಗಳ ಹಾರೈಸಿ, ಅವರ ಕಡೆಬಾಗಿಲ ಕಾಯ್ದು, ಅವರ ತೊತ್ತಿನ ತೊತ್ತಾಗಿ ಬದುಕಿದೆ ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
-->