ಅಥವಾ

ಒಟ್ಟು 23 ಕಡೆಗಳಲ್ಲಿ , 18 ವಚನಕಾರರು , 20 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಕರ ಬ್ರಹ್ಮಾದಿಗಳೇನು ಕಾರಣ ಯೋನಿ, ನಾನಾ ಭವಂಗಳಲಿ ಬಂದರಯ್ಯ. ಧ್ಯಾನ ಮೌನ ಸಮಾದ್ಥಿಕಾರಣದ ಸಮತೆಯನು ಭೇದಿಸಲು ಅರಿಯದೆ, ನಾನಾ ಭವಂಗಳ ಮಗ್ನವಾಗಿ, ಅನಾದಿ ಸಂಸಿದ್ಧ ಕಪಿಲಸಿದ್ಧಮಲ್ಲಿಕಾರ್ಜುನ ಆದಿಯಕ್ಷರ ಸಮತೆ ಸಮಗೂಡದು
--------------
ಸಿದ್ಧರಾಮೇಶ್ವರ
ಸಮಶೀಲ ನೇಮ ಒಂದಾದಲ್ಲಿ ಉಡುವ ತೊಡುವ ಕೊಡುವ ಕೊಂಬ ಅಡಿಯೆಡೆ ಮುಂತಾಗಿ ಸಕ್ಕರೆಯ ಬುಡಶಾಖೆಯಂತೆ ಮಧುರಕ್ಕೆ ಹೆಚ್ಚು ಕುಂದಿಲ್ಲದೆ ಇಪ್ಪ ನೇಮ ಕಟ್ಟಾಚಾರ ನಿಶ್ಚಯವಾದವಂಗೆ, ಅಂಗ ಹಲವಲ್ಲದೆ ಕುಂದಣ ಒಂದೆ ಭೇದ. ನೇಮ ಹಲವಲ್ಲದೆ ಜ್ಞಾನವೊಂದೆ ಭೇದ. ಭೂಮಿ ಹಲವಲ್ಲದೆ ಅಪ್ಪುವೊಂದೆ ಭೇದ, ಬಂದ ಯೋನಿ ಒಂದೆ. ತಾ ಮುಂದಿಕ್ಕುವ ಯೋನಿ ಒಂದಾದ ಕಾರಣ. ಹಿಟ್ಟು ಹಲವಾದಡೆ ಅಪ್ಪದಕಲ್ಲು ಒಂದೆಯಾದಂತೆ. ಇದು ತಪ್ಪದ ಆಚಾರ, ಇದಕ್ಕೆ ಮಿಥ್ಯತಥ್ಯವಿಲ್ಲ, ತಪ್ಪದು ನಿಮ್ಮಾಣೆ. ಆಚಾರಕ್ಕರ್ಹನಾದ ರಾಮೇಶ್ವರಲಿಂಗವೆ ನೀನೆ ಬಲ್ಲೆ.
--------------
ಅಕ್ಕಮ್ಮ
ಮಾರ್ಜಾಲನ ಹೃದಯದಲ್ಲಿ ಮೂಷಕ ಮನೆಯ ಮಾಡಿ ಇದ್ದಿತ್ತು. ಅದಕ್ಕೆ ಮಣಿಮಾಡಂಗಳಿಂದ ಆಶ್ರಯವೊಂದು ಬಾಗಿಲು ಬೇರೆ. ಅದಕ್ಕೆ ಹೋಗಿ ಆಡುವ ನಾಟಕಸಾಲೆ. ಪವನನೆಂಬ ಸೂಳೆ ಅಘಟದಿಂದ ಆಡುತ್ತಿರಲಾಗಿ, ಕಾಲುಜಾರಿ ನೆಲಕ್ಕೆ ಬಿದ್ದಳು. ಬಿದ್ದ ಘಾತಕ್ಕೆ ಯೋನಿ ಒಡೆಯಿತ್ತು, ಮೊಲೆ ಹರಿದು, ಕಿವಿ ಕಿತ್ತು, ಕಣ್ಣು ಹಿಂಚುಮುಂಚಾಯಿತ್ತು. ನೋಡುವ ಅಣ್ಣಗಳ ಬಯಕೆ ಹರಿಯಿತ್ತು. ಯೋನಿ ಕಿತ್ತಲ್ಲಿ ಕೂಟಕ್ಕೆ ಸುಖವಿಲ್ಲ, ನೋಟಕ್ಕೆ ಬೆಂಬಳಿಯಿಲ್ಲ. ಪವನನ ಅಘಟ ಹೋಯಿತ್ತು, ಕಾಲನ ಕಮಟಕ್ಕೆ. ನೀ ಅಲೇಖನಾದ ಶೂನ್ಯ, ಇವರಾಟದ ಬೆಂಬಳಿಯ ಬಿಡಿಸು, ಕಲ್ಲಿನೊಳಗಿಂದ ಇತ್ತ ಬಾರಯ್ಯಾ.
--------------
ವಚನಭಂಡಾರಿ ಶಾಂತರಸ
ಯೋನಿ ಒಂದರಲ್ಲಿ ಬಂದೆನೆಂದಡೆ ಹಿಂಚುಮುಂಚಿಲ್ಲವೆ? ರತ್ನಕುಲ ಒಂದಾದಡೆ ಕಾಲಿಗೂ ಸರಿ, ಕೈಗೂ ಸರಿಯೆ? ನಾ ನುಡಿದಹೆನೆಂದಡೆ ಕಡೆನಡು ಮೊದಲಿಲ್ಲ. ಅಂಜನವನಿಕ್ಕಿ ನಿಧಾನವ ಕಾಬಂಗೆ ಬರುಬದೊಂದಾಗಿ ಸಂಗವೇತಕ್ಕೆ? ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ತುರಿಯಮೇಲೆ ಉಗುರನಿಕ್ಕಿದರೆ, ಹಿತವಾಗಿಹುದು; ಒತ್ತಿ ತುರಿಸಿದಡೆ ಒಡಲೆಲ್ಲಾ ಉರಿದ ದೃಷ್ಟಾಂತರದಂತೆ, ವಿಷಯ ತೋರಿದಡೆ ಯೋನಿ ಚಕ್ರವ ನಿಶ್ಚಯಿಸುವುದು ಆ ವಿಷಯ ತೀರಿದ ಬಳಿಕ ಆ ಯೋನಿ ಸ್ನಾನದಕುಳಿಯಿಂದ ಕಡೆಯಾಗಿಪ್ಪುದು ನೋಡ. ಸತಿಯೆಂಬುವಳು ಸತ್ತ ಶವಕಿಂದ ಕಡೆಯಾಗಿಪ್ಪಳು ನೋಡ. ಅಪ್ಪಬಾರದು ಅಪ್ಪಬಾರದು; ಅತಿ ಹೇಸಿಕೆ. ಪಶುಪತಿ ನೀ ಮಾಡಿದ ವಿಷಯವಿದ್ಥಿ ಈರೇಳು ಲೋಕವನಂಡೆಲೆವುತ್ತಿದೆ ನೋಡಾ. ಈ ಸಂಸಾರ ಪ್ರಪಂಚ ದೇವದಾನವ ಮಾನವರು ಪರಿಹರಿಸಲಾರದೆ ಆಳುತ್ತ ಮುಳುಗತ್ತಲಿಪ್ಪರು ನೋಡಾ. ಇದು ಕಾರಣ, ಸದಾಶಿವನನರಿದು ನೆನೆಯಲು ಸಂಸಾರಪ್ರಪಂಚು ಕೆಡುವುದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸದ್ಭಕ್ತಂಗೆಯೂ ಜಂಗಮಕ್ಕೆಯೂ ಭಾಜನ ಬೇರೆಂಬ ಶಾಸ್ತ್ರದ ಸದಗರು ನೀವು ಕೇಳಿರೋ. ಭಕ್ತದೇಹಿಕ ದೇವನೆಂದು ಶ್ರುತಿ ಸಾರುತ್ತಿವೆ, ಅರಿದು ಮರೆಯದಿರಿ, ಮರವೆಯಿಂದ ಬ್ರಹ್ಮ ಶಿರವ ಹೋಗಾಡಿಕೊಂಡ, ಮರವೆಯಿಂದ ದಕ್ಷ ಶಿರವ ನೀಗಿ ಕುರಿದಲೆಯಾದುದನರಿಯಿರೆ ಮರೆಯದೆ ವಿಚಾರಿಸಿ ನೋಡಿ, ಭಕ್ತಂಗೂ ಲಿಂಗಕ್ಕೂ ಭಿನ್ನವಿಲ್ಲ. ಇನ್ನು ಆ ಭಕ್ತಂಗೆಯೂ ಆ ಜಂಗಮಕ್ಕೆಯೂ ಭೇದವಿಲ್ಲ. ಬೇರ್ಪಡಿಸಿ ನುಡಿಯಲುಂಟೆ ಇನ್ನು ಆ ಗುರುವಿಂಗೆಯೂ ಆ ಭಕ್ತಂಗೆಯೂ ಸಂಕಲ್ಪವಿಲ್ಲ. ಅದೆಂತೆಂದಡೆ; ಮೆಟ್ಟುವ ರಕ್ಷೆ, ಮುಟ್ಟುವ ಯೋನಿ, ಅಶನ, ಶಯನ, ಸಂಯೋಗ, ಮಜ್ಜನ, ಭೋಜನ ಇಂತಿವನು ಗುರುಲಿಂಗಜಂಗಮ ಸಹಿತವಾಗಿ ಭೋಗಿಸುವ ಸದ್ಭಕ್ತಂಗೆ ನಾನು ನಮೋ ನಮೋ ಎಂಬೆನು. ಅದೆಂತೆಂದಡೆ; ಅರ್ಥಪ್ರಾಣಾಭಿಮಾನಂ ಚ ಗುgõ್ಞ ಲಿಂಗೇ ಚ ಜಂಗಮೇ± ತಲ್ಲಿಂಗಜಂಗಮಪ್ರಾಣಂ ಭಕ್ತಸ್ಥಲಮುದಾಹೃತಮ್ ಎಂದುದಾಗಿ, ಇದನರಿದು ಅರ್ಥವನೂ ಪ್ರಾಣವನೂ ಅಭಿನವನೂ ಗುರುಲಿಂಗಜಂಗಮಕ್ಕೆ ಸಮರ್ಪಿಸಿ ಆ ಗುರುಲಿಂಗಜಂಗಮವೆ ಪ್ರಾಣವಾಗಿಹ ಸದ್ಭಕ್ತಂಗೆಯೂ ಆ ಗುರುಲಿಂಗಜಂಗಮಕ್ಕೆಯೂ ಏಕಭಾಜನವಲ್ಲದೆ ಏಕಭೋಜನವಲ್ಲದೆ, ಭಿನ್ನಭಾಜನ ಭಿನ್ನಭೋಜನವುಂಟೆ _ಇಲ್ಲವಾಗಿ, ಅದೇನು ಕಾರಣವೆಂದಡೆ; ಆ ಸದ್ಭಕ್ತನ ಅಂಗವೆಂಬ ಗೃಹದಲ್ಲಿ ಜಂಗಮವಿಪ್ಪನಾಗಿ ಇದನರಿದು ಬೇರೆ ಮಾಡಿ ನುಡಿಯಲಾಗದು. ಚೆನ್ನಯ್ಯನೊಡನುಂಬುದು ಆವ ಶಾಸ್ತ್ರ ಕಣ್ಣಪ್ಪ ಸವಿದುದ ಸವಿವುದಾವ ಶಾಸ್ತ್ರ ಭಕ್ತದೇಹಿಕ ದೇವನಾದ ಕಾರಣ. ಅದೆಂತೆಂದಡೆ; ಭಕ್ತಜಿಹ್ವಾಗ್ರತೋ ಲಿಂಗಂ ಲಿಂಗಜಿಹ್ವಾಗ್ರತೋ ರುಚಿಃ ರುಚ್ಯಗ್ರೇ ತು ಪ್ರಸಾದೋಸ್ತು ಪ್ರಸಾದಃ ಪರಮಂ ಪದಂ ಇಂತೆಂಬ ಪುರಾಣವಾಕ್ಯವನರಿದು ಸದ್ಭಕ್ತನೂ ಗುರುಲಿಂಗಜಂಗಮವೂ ಈ ನಾಲ್ವರೂ ಒಂದೆ ಭಾಜನದಲ್ಲಿ ಸಹಭೋಜನಮಾಡುವರಿಂಗೆ ಇನ್ನೆಲ್ಲಿಯ ಸಂಕಲ್ಪವೊ, ಇನ್ನೆಲ್ಲಿಯ ಸೂತಕವೋ, ಇನ್ನೆಲ್ಲಿಯ ಪಾತಕವೋ ಕೂಡಲಸಂಗಮದೇವಾ.
--------------
ಬಸವಣ್ಣ
ತಟ್ಟು ಕುಂಚ ಕಮಂಡಲಂಗಳೆಂಬ ಲೋಚು ಮುಟ್ಟಿಯ ಹಿಡಿದು, ಭೂತಕಾಯವಾಗಿ ತಿರುಗುವ ಆತನನರಿಯದ ಬೌದ್ಧಕಾರಿಗಳು ಕೇಳಿರೊ. ಜಾಗ್ರಸ್ವಪ್ನಸುಷುಪ್ತಿಯಲ್ಲಿ ತಟ್ಟುಗೆಡೆಯದ ತಟ್ಟಲ್ಲದೆ ಹಾಸಿಕೆಯಲ್ಲ. ಮನ ಬುದ್ಧಿ ಚಿತ್ತ ಅಹಂಕಾರ ಎಂಬಿವು ಕೂಡಿ, ಸುಚಿತ್ತವೆಂಬರಿವು ಹಿಂಗದ ಕೋಲಿನಲ್ಲಿ ಕಟ್ಟಿ, ಮೂರಂಗವ ತೊಡೆವುದು ಕುಂಚ. ಹುಟ್ಟುವ ಅಂಡ, ಜನಿಸುವ ಯೋನಿ, ಮರಣದ ಮರವೆಯೆಂಬೀ ಗುಣವ ಅರಿತು, ಕೀಳುವುದು ಮಂಡೆಯ ಲೋಚು. ಹಿಂಗರಿತು ಕರಿಗೊಂಡು, ಭವವಿರೋಧವಂ ಗೆದ್ದು, ಅಘನಾಶನನ ಅಂಗದ ಮೇಲೆ ಇಂಬಿಟ್ಟು, ಹೆರೆಹಿಂಗದ ಸಂಗವೆ ತಾನಾಗಿ, ಆತ ಮಂಗಳಮಯ ಗುರುಮೂರ್ತಿ, ಎನ್ನಂಗದ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಕಂಗಳ ಸೂತಕವ ಯೋನಿ ತಡೆದು, ಬಾಯ ಬಸುರಾಗಿ, ಕೈ ಬೆಸನಾಯಿತ್ತು. ಕೈಯ ಶಿಶುವ ಕಂಗಳ ತಾಯಿ ಎತ್ತಿ, ಭಾವದ ದಾದಿಯ ಕೈಯಲ್ಲಿ ಕೊಟ್ಟು, ಅರ್ಕೇಶ್ವರಲಿಂಗವು ತೊಟ್ಟಿಲಲ್ಲಿ ಬೆಳಗುತ್ತದೆ.
--------------
ಮಧುವಯ್ಯ
ಕಾಲ ಸಂಹಾರವ ಮಾಡುವಲ್ಲಿ , ಕಾಳಗತ್ತಲೆಯ ಕೋಣೆಯೊಳಗೊಂದು ಬಾಲಲೀಲೆಯ ಶಿಶು ಉಳಿಯಿತ್ತು. ಬಾಲಲೀಲೆ ಹಿಂಗಿ, ವಿಷದ ಏಳಿಗೆಯಾಯಿತ್ತು. ಕಣ್ಣಿನಲ್ಲಿ ಮೊಲೆ ಹುಟ್ಟಿ, ಎದೆಯಲ್ಲಿ ಯೋನಿ ಹುಟ್ಟಿ, ಕೈಯಲ್ಲಿ ಬೆಸಲಾಯಿತ್ತು. ಅದು ಗಂಡೋ, ಹೆಣ್ಣೋ ಎಂದು ಅಂಡವ ಹಿಡಿದು ನೋಡಿ, ಅಂಡಜಮುಗ್ಧೆಯ ಮಕ್ಕಳಿರಾ ಎಂದರವರು. ಅದರಂದವ ನೋಡಿ, ಹೆಣ್ಣೂ ಅಲ್ಲ ಗಂಡೂ ಅಲ್ಲ, ನಡುವೆ ಒಂದು ಕೆಂಡದಂತಿದೆ. ಬಂಕೇಶ್ವರಲಿಂಗಕ್ಕೆ ತೋರಿ, ಕುರುಹಿಟ್ಟುಕೊಂಬೊ.
--------------
ಸುಂಕದ ಬಂಕಣ್ಣ
ಸರ್ವಘಟಂಗಳಲ್ಲಿ ಸುಖದುಃಖ ಅನುಭವಿಸುವ ಆ ಆತ್ಮ ಒಂದೋ, ಎರಡೋ? ಸರ್ವಯೋನಿಗಳಲ್ಲಿ ಕೂಡುವ ಶಿಶ್ನೆಯ ಸುಖ ಒಂದೋ, ಎರಡೋ ? ಆತ್ಮ ಒಂದೆಂದಡೆ ಘಟಭೇದಕ್ಕೆ ಭಿನ್ನವಾಗಿಪ್ಪುದು. ಆತ್ಮ ಹಲವೆಂದಡೆ ಚೇತನ ಸ್ವಭಾವ ಏಕವಾಗಿಪ್ಪುದು. ಆ ಘಟ ಆತ್ಮನ ಕೂಟ ಎಂತೆಯಿದ್ದಿತ್ತು ಅಂತೆ ಸುಖವಿದ್ದಿತ್ತು. ಯೋನಿಯ ಘಟ ಸಾಕಾರ ಎಂತೆಯಿದ್ದಿತ್ತು ಅಂತೆಯಿದ್ದಿತ್ತು ಶಿಶ್ನೆಯ ಯೋಗ. ಆತ್ಮನ ಘಟಸಂಗ ಜಾತಿಯ ಸುಜಾತಿಯ ಕೂಟಸ್ಥ ವಿಶ್ವಾಸದ ಭ್ರಾಂತಿಯ ಭ್ರಾಮಕಯೆಂತಿದ್ದಿತ್ತು ಅಂತೆಯಿದ್ದಿತ್ತು ಆತ್ಮ. ಇಂತೀ ಘಟದ ಸಾಕಾರವಡಗಿ ತೋರುವ ಆತ್ಮನ ಪರಿ. ಭಿನ್ನ ಇಂದ್ರಿಯಂಗಳ ಹಲವು ಸಂಚಿನ ಯೋನಿ. ಅದ ಸಂಧಿಸಿ ಕೂಡಿಹೆನೆಂಬ ಅರಿಕೆಯ ತೃಷ್ಣೆಯ ಶಿಶ್ನೆ ತಲಹಗೆಟ್ಟಲ್ಲಿ, ಭ್ರಾಂತಿನ ಭ್ರಮೆಯ ಸೂತಕ ಹೋಯಿತ್ತು, ಕಾಮಧೂಮ ಧೂಳೇಶ್ವರನ ತಾನು ತಾನಾದ ಕಾರಣ.
--------------
ಮಾದಾರ ಧೂಳಯ್ಯ
ಲಿಂಗಕ್ಕೂ ತಮಗೂ ಸಹಭಾಜನ ಸಹಭೋಜನವಾಹಲ್ಲಿ ಇದಿರಿಟ್ಟ ಪದಾರ್ಥಂಗಳ ಲಿಂಗಕ್ಕೆ ತೋರಿ, ತಾ ಕೊಂಬಲ್ಲಿ ದೃಷ್ಟವಾಯಿತ್ತು. ಸ್ವಪ್ನ ಸುಷುಪ್ತಿಗಳಲ್ಲಿ, ಮಿಕ್ಕಾದ ಏಕಾಂತ ಸತಿ ಕೂಟಂಗಳಲ್ಲಿ ಅದಕ್ಕೆ ದೃಷ್ಟವಹ ಸಹಭೋಜನವಾವುದಯ್ಯಾ ? ಯೋನಿ ಸ್ವಪ್ನ ಸುಷುಪ್ತಿ ಮುಂತಾದ ಭಾವದ ಸಹಭೋಜನ ಎಲ್ಲಿ ಇದ್ದಿತ್ತು ? ಆ ಭಾಜನದ ಸಹಭೋಜನದ ಸಂಬಂಧ ಎಲ್ಲಿದ್ದಿತು ? ಅದು ಕಲ್ಲಿನೊಳಗಣ ನೀರು, ನೀರೊಳಗಣ ಶಿಲೆ, ಇದಾರಿಗೂ ಅಸಾಧ್ಯ ನೋಡಾ. ಅದು ಕಾಯದ ಹೊರಗಾದ ಸುಖ, ಸುಖದ ಹೊರಗಾದ ಅರ್ಪಿತ. ಇಂತೀ ಗೊತ್ತಮುಟ್ಟಿ ಸಹಭೋಜನದಲ್ಲಿ ಅರ್ಪಿಸಬಲ್ಲವಂಗೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಸಹಭಾಜನ ಭೋಜನವಾಗಿಪ್ಪನು.
--------------
ಅಕ್ಕಮ್ಮ
ಅಚ್ಚಪ್ರಸಾದಿ ನಿಚ್ಚಪ್ರಸಾದಿಯೆಂಬ ಮುಚ್ಚಟ ಮುದಿಹೊಲೆಯರಿರಾ ನೀವು ಕೇಳಿರೊ. ಮುಟ್ಟುವ ಯೋನಿ ಮೆಟ್ಟುವ ಪಾದರಕ್ಷೆ ಈ ಎರಡೆಂಬ ಉಭಯಭ್ರಷ್ಟರಿಗೆ ಎಲ್ಲಿಯದೊ ಪ್ರಸಾದ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಹೆಣ್ಣಿನ ಮುದ್ದುಮುಖ ಮೊಲೆ ಮೋಹನ ಮುಗುಳುನಗೆಯ ಕಣ್ಣಿಂದ ಕಂಡು ಕಾಮಾತುರದಿಂದ ತಿಲದಷ್ಟು ಸುಖಕ್ಕಾಗಿ ಬಣ್ಣಗುಂದಿ ಭ್ರಮಿತರಾದರು ನೋಡಾ ಮನುಜರು. ತೆರನರಿಯದೆ ಹೆಣ್ಣಿನ ಮುಖಕಳೆ ತನ್ನ ಕೆಡಿಸುವ ಬಣ್ಣದ ಛಾಯೆಯೆಂದರಿಯರು ನೋಡಾ. ಹೆಣ್ಣಿನ ಸೋಲ್ಮುಡಿ ತಮ್ಮ ಕಟ್ಟುವ ಪಾಶವೆಂದರಿಯದೆ ಹೆಣ್ಣಿನ ಮುಗುಳನಗೆ ತಮ್ಮ ಮುದ್ದಿಸಿ ಭವಕೆ ತರುವ ಮೋಹವೆಂದರಿಯರು ನೋಡಾ. ಹೆಣ್ಣಿನ ಚುಂಬನ ತಮ್ಮ ಹೀರುವ ಭೂತವೆಂದರಿಯರು ನೋಡಾ. ಹೆಣ್ಣಿನ | ನೋಟ ತಮ್ಮ ಇರಿವ ಕಠಾರಿಯೆಂದರಿಯರು ನೋಡಾ. ಹೆಣ್ಣಿನ ಮೊಲೆ ತಮ್ಮ ಭವಕ್ಕಿಕ್ಕಿ ಈಡಿಸುವ ಗುಂಡೆಂದರಿಯರು ನೋಡಾ. ಹೆಣ್ಣಿನ ಯೋನಿ ತಮ್ಮ ತಿರುಹುವ ಗಾಣವೆಂದರಿಯರು ನೋಡಾ. ಇಂತಪ್ಪ ಹೆಣ್ಣಿನ ಮುದ್ದುಮುಖ ಮೊಲೆ ನೋಟ ಮುಗುಳನಗೆ ಚುಂಬನ ಭವದ ಭ್ರಾಂತಿಗೆ ತರಿಸಿ ಹಿಂಡಿ ಹೀರಿ ಹಿಪ್ಪೆಯ ಮಾಡಿ ನುಂಗುವ ಮೃತ್ಯುದೇವತೆಯೆಂದರಿಯರು ನೋಡಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಕಾಳಮೇಘಮಂದಿರದ ಜಾಳಾಂಧರದ ಮನೆಯಲ್ಲಿ ಒಬ್ಬ ಸೂಳೆಯ ಬಾಗಿಲಲ್ಲಿ ಎಂಬತ್ತನಾಲ್ಕು ಲಕ್ಷ ಮಿಂಡಗಾರರು. ಅವಳ ಸಂಗದಲ್ಲಿ ಇರಲಮ್ಮರು, ಅವಳು ತಾವೇ ಬರಲೆಂದು ಕರೆಯದಿಹಳು. ಅವಳಿಗೆ ಯೋನಿ ಹಿಂದು, ಅಂಡ ಮುಂದು, ಕಣ್ಣು ಅಂಗಾಲಿನಲ್ಲಿ, ತಲೆ ಮುಂಗಾಲಿನಲ್ಲಿ, ಕಿವಿ ಭುಜದಲ್ಲಿ, ಕೈ ಮಂಡೆಯ ಮೇಲೆ, ಮೂಗು ಹಣೆಯಲ್ಲಿ, ಮೂಗಿನ ದ್ವಾರ ಉಂಗುಷ*ದಲ್ಲಿ, ಬಸುರು ಬಾಯಲ್ಲಿ, ನಡೆವಳು ತಲೆ ಮುಂತಾಗಿ, ಕಾಲು ಮೇಲಾಗಿ. ಅವಳ ಕೂಡುವ ಪರಿಯ ಹೇಳಾ, ಅಲೇಖನಾದ ಶೂನ್ಯ ಗೆದ್ದೆಯಲ್ಲಾ, ಕಲ್ಲಿನ ಹೊಟ್ಟೆಯ ಮರೆಯಲ್ಲಿ.
--------------
ವಚನಭಂಡಾರಿ ಶಾಂತರಸ
ಪೃಥ್ವಿಗೆ ಮೈಯೆಲ್ಲಾ ಯೋನಿ, ಜಲಕ್ಕೆ ಶರೀರವೆಲ್ಲಾ ಕಾಲು, ಅಗ್ನಿಗೆ ಶರೀರವೆಲ್ಲಾ ಬಾಯಿ, ವಾಯುವಿಗೆ ತನುವೆಲ್ಲಾ ಮೂಗು, ಆಕಾಶಕ್ಕೆ ಕಾಯವೆಲ್ಲಾ ಹೊಟ್ಟೆ, ಆತ್ಮನಿಗೆ ಮೈಯೆಲ್ಲಾ ಕಣ್ಣು, ಪೃಥ್ವಿಗೆ ಘ್ರಾಣವೇ ಇಂದ್ರಿಯ, ಗಂಧವೇ ವಿಷಯ. ಜಲಕ್ಕೆ ಜಿಹ್ವೆಯೇ ಇಂದ್ರಿಯ, ರುಚಿಯೇ ವಿಷಯ. ಅಗ್ನಿಗೆ ನೇತ್ರವೇ ಇಂದ್ರಿಯ, ರೂಪೇ ವಿಷಯ. ವಾಯುವಿಗೆ ತ್ವಕ್ಕೇ ಇಂದ್ರಿಯ, ಸ್ಪರ್ಶನವೇ ವಿಷಯ. ಆಕಾಶಕ್ಕೆ ಶ್ರೋತ್ರವೇ ಇಂದ್ರಿಯ, ಶಬ್ದವೇ ವಿಷಯ. ಆತ್ಮನಿಗೆ ಮನಸ್ಸೇ ಇಂದ್ರಿಯ, ಭಾವವೇ ವಿಷಯ. ಪೃಥ್ವಿಯಲ್ಲಿರ್ಪ ಗಂಧಕ್ಕೆ ಘ್ರಾಣೇಂದ್ರಿಯವೇ ಕಾರಣಮಾಯಿತ್ತು. ಜಲದೊಳಗಿರ್ಪ ರುಚಿಗೆ ಜಿಹ್ವೇಂದ್ರಿಯದಲ್ಲಿರ್ಪ ಅಗ್ನಿಯೇ ಕಾರಣಮಾಯಿತ್ತು ಅಗ್ನಿಯಲ್ಲಿರ್ಪ ರೂಪಿಗೆ ನೇತ್ರೇಂದ್ರಿಯದಲ್ಲಿರ್ಪ ಜಲಮೆ ಕಾರಣಮಾಯಿತ್ತು. ವಾಯುವಿನೊಳಗಿರ್ಪ ಸ್ಪರುಶನಕ್ಕೆ ತ್ವಗೀಂದ್ರಿಯದಲ್ಲಿರ್ಪ ಪೃಥ್ವಿಯೇ ಕಾರಣಮಾಯಿತ್ತು. ಆಕಾಶದಲ್ಲಿರ್ಪ ಶಬ್ದಕ್ಕೆ ಶ್ರೋತ್ರೇಂದ್ರಿಯದಲ್ಲಿರ್ಪ ಆತ್ಮನೇ ಕಾರಣಮಾಯಿತ್ತು. ಆತ್ಮನಲ್ಲಿರ್ಪ ಭಾವಕ್ಕೆ ಹೃದಯೇಂದ್ರಿಯದಲ್ಲಿರ್ಪ ಆಕಾಶಮೇ ಕಾರಣಮಾಯಿತ್ತು. ಇಂತಪ್ಪ ಭಾವದಲ್ಲಿ ಜ್ಞಾನಶಕ್ತಿ ಹುಟ್ಟಲು, ಮನವೇ ಮಹಾಲಿಂಗವಾಯಿತ್ತು. ಶಬ್ದದಲ್ಲಿ ಪರಾಶಕ್ತಿ ಹುಟ್ಟಲು, ಶ್ರೋತ್ರವೇ ಪ್ರಸಾದಲಿಂಗಮಾಯಿತ್ತು. ಸ್ಪರ್ಶನದಲ್ಲಿ ಆದಿಶಕ್ತಿ ಹುಟ್ಟಲು, ಘ್ರಾಣವೇ ಆಚಾರಲಿಂಗಮಾಯಿತ್ತು. ಗ್ರಹಿಸುವುದೇ ಜ್ಞಾನೇಂದ್ರಿಯಮಾಯಿತ್ತು ; ಬಿಡುವುದೇ ಕರ್ಮೇಂದ್ರಿಯಮಾಯಿತ್ತು. ಇಂತಪ್ಪ ಇಂದ್ರಿಯಂಗಳೆಲ್ಲಾ ಲಿಂಗಸ್ವರೂಪಗಳಾಗಿ, ವಿಷಯಂಗಳೇ ಶಕ್ತಿಸ್ವರೂಪಮಾದ ಮಹಾಪುರುಷನಸ್ವರೂಪಿನಲ್ಲಿ ಇಷ್ಟಲಿಂಗವು ನೆಲೆಗೊಂಡಲ್ಲಿ, ಆ ಲಿಂಗದ ಮೋಹವೇ ಪ್ರಾಣಲಿಂಗಮಾಯಿತ್ತು, ಆ ಲಿಂಗದ ವಿಚಾರವೇ ಭಾವಲಿಂಗಮಾಯಿತ್ತು. ಭೂತಂಗಳೇ ಲಿಂಗಕ್ಕೆ ಅಂತರಂಗಂಗಳಾದವು. ಅಲ್ಲಲ್ಲಿರ್ಪ ಲಿಂಗಂಗಳೇ ಭೂತಂಗಳಿಗೆ ಚೈತನ್ಯಮಾದ ಪ್ರಾಣಂಗಳಾಗಿ, ಆ ಲಿಂಗಂಗಳೇ ಶರಣನಂಗಂಗಳಾಗಿ, ಲಿಂಗಂಗಳೇ ಶಿವನಾಗಿ, ಶರಣನೇ ಸತಿ ಲಿಂಗವೇ ಪತಿಯಾಗಿ, ಇಬ್ಬರ ಸಮರಸಭಾವವೇ ಪರಮಾನಂದರತಿಸುಖಮಾಗಿ, ಆ ಸುಖದಲ್ಲಿ ಎರಡಂ ಏಕಮಾಗಿ ಭೇದದೋರದೆ ನಿಶ್ಶಬ್ದಬ್ರಹ್ಮವಾಗಿರ್ಪುದೆ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಇನ್ನಷ್ಟು ... -->