ಅಥವಾ

ಒಟ್ಟು 66 ಕಡೆಗಳಲ್ಲಿ , 29 ವಚನಕಾರರು , 61 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹದಿನಾರಂಗುಲದುದ್ದ ಸರ್ಪನ ವಿಷ ಕೆಟ್ಟು ಎರಡು ಕಾಲನಾಕಾಶದಲೂರಿ ನಿಂದಿತ್ತು. ಬಹುಮುಖದ ಪಕ್ಷಿ ಏಕಮುಖವಾಗಿ ಚಂಚುಪುಟದಲ್ಲಿರ್ದ ರತ್ನಪಕ್ಷಿಯ ನುಂಗಿ ರತ್ನ ಕೆಟ್ಟಿತ್ತು. ಸೌರಾಷ್ಟ್ರ ಸೋಮೇಶ್ವರನಲ್ಲಿ ಅರಸುವ ಬನ್ನಿರೆ, ಸುಜ್ಞಾನಭರಿತರು.
--------------
ಆದಯ್ಯ
ಉದಯ ತತ್ಕಾಲವೆ ಅಸ್ತಮಯ, ಅಸ್ತಮಯ ತತ್ಕಾಲವೆ ಉದಯ. ಮಧುವೆ ವಿಷ, ವಿಷವೆ ಮಧು. ಸದರಿವೆರಡಕ್ಕೆ ಮನಸ್ಸಿನ ಸಂದೇಹ ಮಾತ್ರ. ಅದು ಕಾರಣ ಮಧುರ ಸಮುದ್ರ, ಲವಣ ಸಮುದ್ರ, ಕ್ಷೀರ ಸಮುದ್ರ, ದದ್ಥಿ ಸಮುದ್ರ ಚತುರಂಗದೊಳಿರ್ದ ಸಪ್ತಸಮುದ್ರಕ್ಕೆ ಏಕೋಮೂಲ್ಯ ಬ್ಥಿನ್ನ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ಅರುಹು ತಲೆದೋರಿದಲ್ಲಿ ವಿಷ ಬೆಲ್ಲವು ಇಕ್ಷುರಸವಾಯಿತ್ತು. ಅರುಹು ತಲೆದೋರಿದಲ್ಲಿ ಅಂಬರ ಅವಯವಕ್ಕೆ ಹೊಂದಿತ್ತಯ್ಯಾ. ಅರುಹು ತಲೆದೋರಿದಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನನ ಕುರುಹು ನಾನೆಂದು ತಿಳಿಯಬಂದಿತ್ತಯ್ಯಾ ಯೋಗಿನಾಥಾ.
--------------
ಸಿದ್ಧರಾಮೇಶ್ವರ
ಕಾಯದ ಕಣ್ದೆರೆಯಿಂದುದಯವಾದ ಧಾವತಿ ಎರಡು ನೋಡಯ್ಯಾ : ಅಯ್ಯಾ ಭ್ರಾಂತಿಯತ್ತಲೊಂದೆಳವುತ್ತಲದೆ ದೇವಾ ನಿಮ್ಮತ್ತಲೊಂದೆಳವುತ್ತಲದೆ. ಒಂದರ ಸಹಜವನೊಂದು ಗೆಲಲರಿಯದು. ಮುಂದೆ ಸತ್ಪಥಕ್ಕೆಂತಡಿಯಿಡುವೆನಯ್ಯಾ ನಾನು ? ಕಾಲಚಕ್ರದಲ್ಲಿ ಹುಟ್ಟಿ, ಕರ್ಮಚಕ್ರದಲ್ಲಿ ಬೆಳೆದು ಕಲ್ಪಿತದಿಂದವೆ ದಿನಂಗಳು ಸವೆವುತ್ತವೆಯಯ್ಯಾ. ತಲೆಯೆರಡರ ಪಕ್ಷಿ ವಿಷ ನಿರ್ವಿಷವ ಮೆಲಿದಂತಾಯಿತ್ತೆನಗಯ್ಯಾ. ಅಂದಂದಿನರಿವು ಅಂದಂದಿನ ಮರವೆಗೆ ಸರಿಯಯ್ಯಾ. ತಂದೆ ಈ ದಂದುಗವ ಮಾಣಿಸಿ ನಿಮ್ಮ ನಿಜಾನಂದಭಕ್ತಿಯೆನಗೆ ಕರುಣಿಸಯ್ಯಾ ಅಮರಗುಂಡದ ಮಲ್ಲಿಕಾರ್ಜುನಾ.
--------------
ಪುರದ ನಾಗಣ್ಣ
ವಿಷ ಕೊಲುವಲ್ಲಿ, ಹಾವೇನ ಮಾಡುವುದು ? ಉಂಬ ಅಶನ ನಂಜಾಗಿಹಲ್ಲಿ, ಇಕ್ಕಿದವಳಿಗೆ ಅಂಜಿಕೆಯುಂಟೆ ? ತನ್ನ ಇಂದ್ರಿಯ ತನ್ನ ತಿಂಬಲ್ಲಿ, ವಸ್ತುವಿನ ಮೇಲೆ ಹಂಗ ಹಾಕುವ ಭಂಡರಿಗೆ ಇಲ್ಲಾಯೆಂದೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು.
--------------
ಸಗರದ ಬೊಮ್ಮಣ್ಣ
ಇರುವೆ ಆನೆಯ ನುಂಗಿತ್ತು, ಹೊಟ್ಟೆಗೆಯ್ದದೆ ಮಿಕ್ಕುವರ ನುಂಗಿತ್ತು. ಮತ್ತೊಂದು ಗಜ ಒತ್ತಿ ಬರಲಾಗಿ ಕಚ್ಚಿತ್ತು. ಕಚ್ಚಿದ ವಿಷ ತಾಗಿ ಮತ್ತನಾಗಿ ಬಿದ್ದಿತ್ತು. ನಾಗಾಲಡಿಯಾಗಿ ಆನೆಯದೆ ತಾನುಳಿದ ಪರಿಯ ನೋಡಾ, ಈ ವಸ್ತುವನ್ನೇಂಬೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ. ಸತಿಪತಿಗಳೊಂದಾಗದವನ ಭಕ್ತಿ ಅಮೃತದೊಳು ವಿಷ ಬೆರೆದಂತೆ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ವಿಷ ಉಂಡು ದಣಿಯಲಾರದೆ, ವಿಷ ನೈವೇದ್ಯವ ಮಾಡಿಕೊಂಡ ನೋಡಾ, ಈ ದೇವಾ. ತ್ರಿಪುರಾಂತಕ ಕೆರೆಯಗುಳಿ ದಣಿಯಲಾರದೆ, ಹಲವು ಗುಡ್ಡ ರೂಪಾಗಿ ಕೆರೆಯಗುಳಿಸಿಕೊಂಡ ನೋಡಾ [ಈ ದೇವ] ಇದ್ದ ದೇವಾಲಯವಲ್ಲದೆ ಮತ್ತೆ ದೇವಾಲಯವ ಮಾಡಿಸಿಕೊಂಡ ನೋಡಾ, ಈ ದೇವ, ತಾನಾಖಂಡಮೂರ್ತಿಯ ರೂಪು ಧರಿಸದೆ, ಲಕ್ಷ ತೊಂಬತ್ತಾರು ಸಾಸಿ[ವಾಗಿ]ನೆಲಸಿಪ್ಪ ನೋಡಾ ಈ ದೇವ, ಕಪಿಲಸಿದ್ಧಮಲ್ಲಿಕಾರ್ಜುನದೇವ.
--------------
ಸಿದ್ಧರಾಮೇಶ್ವರ
ಗುರುಪ್ರಸಾದಿ ಆ ಪ್ರಸಾದವ ಲಿಂಗಕ್ಕೆ ಅರ್ಪಿಸಲಾಗದು, ಲಿಂಗಪ್ರಸಾದಿ ಆ ಪ್ರಸಾದವ ಜಂಗಮಪ್ರಸಾದದಲ್ಲಿ ಕೂಡಲಾಗದು. ಇಂತೀ ತ್ರಿವಿಧಪ್ರಸಾದವ ತಾ ಸ್ವೀಕರಿಸುವಲ್ಲಿ ತನ್ನ ದೃಷ್ಟದ ಇಷ್ಟಕ್ಕೆ ಅರ್ಪಿಸದೆ ಮುಟ್ಟಲಾಗದು. ಇಂತೀ ಭಾವ ಅಮೃತದಲ್ಲಿ ವಿಷ ಬೆರೆದಂತೆ: ಅಮೃತವ ಚೆಲ್ಲಬಾರದು, ವಿಷವ ಮುಟ್ಟಬಾರದು. ಗೋವು ಮಾಣಿಕವ ನುಂಗಿದಂತೆ: ಗೋವ ಕೊಲ್ಲಬಾರದು, ಮಾಣಿಕವ ಬಿಡಬಾರದು. ಗೋವು ಸಾಯದೆ ಮಾಣಿಕ ಕೆಡದೆ ಬಹ ಹಾದಿಯ ಬಲ್ಲಡೆ ಆತ ತ್ರಿವಿಧ ಪ್ರಸಾದಿಯೆಂಬೆ. ಆ ಗುಣ ಏಲೇಶ್ವರಲಿಂಗಕ್ಕೂ ಅಸಾಧ್ಯ ನೋಡಾ!
--------------
ಏಲೇಶ್ವರ ಕೇತಯ್ಯ
ಹಾಲೋಗರವನುಂಡು ಬಾಲೆಯರ ತೋಳಮೇಲೊರಗಿದಡೆ ಬಾರದ ಭವದಲ್ಲಿ ಬಪ್ಪುದು ತಪ್ಪದು ಕಾಣಿರಣ್ಣ. ಅಲ್ಲಿಯ ಆಲಿಂಗನ ವಿಷ, ಚುಂಬನ ನಂಜು, ನೋಟ ಸರಳು, ಸವಿನುಡಿ ಕಠಾರಿ ನೋಡಾ. ಅಲ್ಲಿಯ ನೆನಹು ಆಜ್ಞಾನ ನೋಡಾ. ಅದು ತನ್ನ ಹಿತಶತ್ರುತನದಿಂದ ಭ್ರಾಂತುಭಾವನೆಯ ಹುಟ್ಟಿಸಿ ಕೊಲುವದಾಗಿ, ಆ ಸಂಸಾರ ನಿನಗೆ ಹಗೆಯೆಂದು ತಿಳಿಯ, ಮರುಳುಮಾನವ. ಇದುಕಾರಣ, ಸಂಸಾರಸುಖವನುಣ್ಣಲೊಲ್ಲದೆ, ಬಾಲೇಂದುಮೌಳಿಯ ಜ್ಞಾನಪ್ರಸಾದವನುಂಡು ನಾನು ಬದುಕಿದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನೀತಿಭಕ್ತಿ ಕ್ರಿಯಾಭಕ್ತಿ ಭಾವಭಕ್ತಿ ಸದ್ಭಾವಭಕ್ತಿ ಜ್ಞಾನಭಕ್ತಿ ಇಂತೀ ಭಕ್ತಿಯ ವಿವರ: ನೀತಿಭಕ್ತಿಗೆ ಸರ್ವಗುಣಪ್ರೀತಿವಂತನಾಗಿ, ಕ್ರಿಯಾಭಕ್ತಿಗೆ ಬಿಡುಮುಡಿ ಉಭಯವನರಿದು, ಭಾವಭಕ್ತಿಗೆ ಸಂಕಲ್ಪವಿಕಲ್ಪ ದೋಷವ ಕಂಡು ಸದ್ಭಾವಭಕ್ತಿಗೆ ಮನ ವಚನ ಕಾಯ ತ್ರಿಕರಣವನರಿದು, ಜ್ಞಾನಭಕ್ತಿಗೆ ಜ್ಞಾತೃ ಜ್ಞಾನ ಜ್ಞೇಯ ಮುಂತಾದ ಮರ್ಕಟ ವಿಹಂಗ ಪಿಪೀಲಿಕ ಸಂಚಿತ ಪ್ರಾರಬ್ಧ ಆಗಾಮಿಗಳೆಂಬ ತೆರನ ತಿಳಿದು, ವಿಷ ಚರಣಾಂಗುಲದಲ್ಲಿ ವೇದ್ಥಿಸಿ, ಕಪಾಲದಲ್ಲಿ ನಿಂದು ಅಂಗ ಮೂರ್ಛೆಗೊಂಡಂತೆ, ಇಂತೀ ಭಕ್ತಿಸ್ಥಲದ ವಿವರ. ಹೆಚ್ಚು ಕುಂದನರಿದು ಕೊಡುವಲ್ಲಿ ಕೊಂಬಲ್ಲಿ ತಟ್ಟುವಲ್ಲಿ ಮುಟ್ಟುವಲ್ಲಿ, ತಾಗುವಲ್ಲಿ ಸೋಂಕುವಲ್ಲಿ ನಾನಾಗುಣಂಗಳಲ್ಲಿ ವಿವರವನರಿತು ವರ್ಮಜ್ಞನಾಗಿಪ್ಪ ಭಕ್ತನಂಗ, ಆ ಸುಖದ ಸಂಗ ಸದ್ಯೋಜಾತಲಿಂಗದ ನಿರಂಗ.
--------------
ಅವಸರದ ರೇಕಣ್ಣ
ಅಂದಿನ ಪರಿ ಇಂದಿನ ಪರಿ ಬೇರೆ ಕಂಡೆಯಾ, ಮನವೆ. ಅಂದಿನ ವಿಷ ಇಂದಮೃತವಾಯಿತ್ತು ಕಂಡೆಯಾ, ಮನವೆ. ಅಂದಿನ ದೇವಾಂಗನೆ ಇಂದು ನಿಮಗೆ ಚಿಚ್ಛಕ್ತಿಯಾಯಿತ್ತು ಕಂಡೆಯಾ, ಮನವೆ. ಅಂದಿನವ ನೀನಿಂದು ಕಪಿಲಸಿದ್ಧಮಲ್ಲಿಕಾರ್ಜುನನೆಂದು ನಂಬು ಕಂಡೆಯಾ, ಮನವೆ.
--------------
ಸಿದ್ಧರಾಮೇಶ್ವರ
ಭಕ್ತಿವಿಶೇಷವಳವಡದಯ್ಯಾ! ವಿಷದ ಕೊಡನುವ ತುಡುಕಲೇಬಾರದು. ಅಂಗಕ್ಕೆ ಹಿತವಲ್ಲ, ಸಿಂಗಿ ನೋಡಯ್ಯ ವಿಷ. ಮಾಯಾವಿಚಿತ್ರ ಕೂಡಲಸಂಗಯ್ಯನಲ್ಲಿ ಸದಾಚಾರ ಸಂಬಂಧವು.
--------------
ಚನ್ನಬಸವಣ್ಣ
ಮೆಕ್ಕೆ ಮಿನಿಕೆ ಮೊದಲಾಗಿ ಅವು ಪಕ್ವಕ್ಕೆ ಬಂದಡೆ, ವಿಷ ಬಿಡುವುದೆ ? ಸೋರೆ ವಾರಿಧಿ ಫಣಿ ಅವು ಹರೆಯ ಹಿರಿದಾದಡೆ, ಮನದ ವಿಷ ಬಿಡದು. ಸಕಳೇಶ್ವರದೇವಾ, ನಿಮ್ಮ ನಿಜವನರಿಯದ ಮನುಜಂಗೆ, ನರೆ ಹಿರಿದಾದಡೇನು, ಮನದ ಅವಗುಣ ಬಿಡದು.
--------------
ಸಕಳೇಶ ಮಾದರಸ
ಕೇಳಾ ಹೇಳುವೆನು: ಮಹಾಘನಲಿಂಗಭಕ್ತನು ಆಚರಿಸುವ ಸದ್ವರ್ತನನಿರ್ಣಯವ, ಅದು ಪರಶಿವಲಿಂಗದ ನಿತ್ಯಪದದ ಮಾರ್ಗ: ಗೌರವಂ ಲೈಂಗಿಕಂ ಚಾರಂ ಪ್ರಸಾದಂ ಚರಣಾಂಬುಕಂ ಭೌಕ್ತಿಕಂ ಚ ಮಯಾ ಪ್ರೋಕ್ತಂ ಷಡ್ವಿಧಂ ವ್ರತಮಾಚರೇತ್ ಗುರುದೇವಃ ಶಿವಃ ಸಾಕ್ಷಾತ್ ತಚ್ಚಿಷ್ಯೋ ಜ್ಞಾನಸಾರವಿತ್ ತ್ರಿವಿಧಂ ಹೃದಿ ಸಂಭಾವ್ಯ, ಕೀರ್ತಿತಂ ಗೌರವಂ ವ್ರತಂ ಗುರುಣಾ ಚಾರ್ಪಿತಂ ಲಿಂಗಂ ಪ್ರಾಣಲಿಂಗಂ ಪ್ರಕಥ್ಯತೇ ತಥೈವ ಭಾವನಾದ್ವೈತಂ ತದ್ವ್ರತಂ ಲೈಂಗಿಕಂ ಸ್ಮøತಂ ಗುರುಲಿಂಗಚರಾಧೀನಂ ನಿರ್ಮಾಲ್ಯಂ ಭೋಜನಾದಿಕಂ ತಸ್ಯಾನುಭಾವನಂ ದೇವಿ ತತ್ಪರಂ ವ್ರತಮುತ್ತಮಂ ಗುರುಪಾದಾಬ್ಜಸಂಭೂತಂ ಉಜ್ಜಲಂ ಲೋಕಪಾವನಂ ತಜ್ಜಲಸ್ನಾನಪಾನಾದಿ ತದ್ವ್ರತಂ Z್ಪರಣಾಂಬುಕಂ|| ಗುರುಲಿಂಗಚರಾಣಾಂ ಚ ಪ್ರಸಾದಂ ಪಾದವಾರುಣಂ| ಪರ್ಯಾಯಭಜನಂ ಭಕ್ತ್ಯಾ ತದ್ವ್ರತಂ ಸ್ಮøತಂ|| ಕ್ರಿಯಾದ್ವೈತಂ ನ ಕರ್ತವ್ಯಂ ಭಾವಾದ್ವೈತಂ ಸಮಾಚರೇತ್| ಕ್ರಿಯಾಂ ನಿರ್ವಹತೇ ಯಸ್ತು ಭಾವಶುದ್ದಂ ತು ಶಾಂಕರಿ|| ಎಚಿದುದಾಗಿ, ಪೂಜಿತೈಃ ಶಿವಭಕ್ತೈಶ್ಚ ಪರಕರ್ಮ ಪ್ರಪಚಿಚಿತಂ| ಪುಣ್ಯಸ್ಸಶಿವಧರ್ಮಃ ಸ್ಯಾತ್ ವಜ್ರಸ್ರಚಿಸ್ಸಮಬ್ರವೀತ್|| ಪಾತ್ರಶಾಸನಯೋರ್ಮಧ್ಯೇ ಶಾಸನಂ ತು ವಿಶಿಷ್ಯತೇ| ತಸ್ಮಾತ್ ಶಾಸನಮೇವಾದೌ ಪೂಜ್ಯತೇ ಚ ಶವೋ ಯಥಾ|| ಗುಣವತ್ಪಾತ್ರಪ್ರಜಾಯಾಂ ವರಂ ಶಾಸನಪೂಜನಂ| ಶಾಸನಂ ಪೂಜಾಯೇತ್ತಸ್ಮಾಸವಿZ್ಫರಂ ಶಿವಾಜÐಯಾ|| ಸ ನರೋ ಭೃತ್ಯಸದ್ಭಕ್ತಃ ಪತಿಕರ್ಮಾ ಚ ಜಂಗಮಃ| ರೂಪಂ ಚ ಗುಣಶೀಲಂ ಚ ಅವಿZ್ಫರಂ ಶುಭಂ ಭವೇತ್|| ಗುಣೋಗುಣಶ್ಚ ರೂಪಂ ಚ ಅರೂಪಂ ಚ ನ ವಿದ್ಯತೇ ಪಶ್ಶತ್ಯಮೋಹಭಾವೇನ ಸ ನರಃ ಸುಖಮೇಧತೇ ದುಶ್ಶೀಲಃ ಶೀಲಸರ್ವಜ್ಞಂ ಮೂರ್ಖಭಾವೇನ ಪಶ್ಯತಿ ಪಶ್ಯಂತಿ ಲಿಂಗಭಾವೇನ ಸದ್ಭಕ್ತಾ ಮೋಕ್ಷಭಾವನಾಃ ಯಥಾ ಲಿಂಗಂ ತಥಾ ಭಾವಃ ಸತ್ಯಂ ಸತ್ಯಂ ನ ಸಂಶಯಃ ಯಥಾ ಭಕ್ತಿಸ್ತಥಾ ಸಿದ್ಧಿಃ ಸತ್ಯಂ ಸತ್ಯಂ ನ ಸಂಶಯಃ ಸತ್ಯಭಾವಿ ಮಹಾಸತ್ಯಂ ಸತ್ಯಂ ಸ್ಯಾಚ್ಚಿವಲಕ್ಷಣಂ ಮಿಥ್ಯಭಾವೀತ್ವಹಂ ಮಿಥ್ಯಾ ಸತ್ಯಂ ಸ್ಯಾಚ್ಚಿವಲಕ್ಷಣಂ ದಕ್ಷಿಣೇ ತು ಮಹಾದೇವೇ ಪದಾರ್ಥೇ ಕಿಂ ಪ್ರಯೋಜನಂ ಅದಕ್ಷೇ ತು ಮಹಾದೇವೇ ಪದಾರ್ಥೇ ಕಿಂ ಪ್ರಯೋಜನಂ ಅರಿರ್ಮಿತ್ರಂ ವಿಷಂ ಪಥ್ಯಂ ಅಧರ್ಮೋ ಧರ್ಮವದ್ಭವೇತ್ ಪ್ರಸನ್ನ ಏವ ದೇವೇ ತು ವಿಪರೀತಂ ಭವೇದ್ಧೃವಂ ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಚ್ಯತೆ ಜಂಗಮಸ್ಯಾವಮಾನೇನ ಸ್ಥಾವರಂ ನಿಷ್ಪಲಂ ಭವೇತ್ ನ ಮೇ ಪ್ರಿಯಶ್ಚತುರ್ವೇದೀ ಮದ್ಭಕ್ತಃ ಶ್ವಪಚೋ[s]ಪಿ ವಾ ತಸ್ಮೈ ದೇಯಂ ತತೋ ಗ್ರಾಹ್ಯಂ ಸಃ ಪೂಜ್ಯಶ್ಚ ಯಥಾ ಹ್ಯಹಂ ಸದ್ಗುರುರ್ಭಾವಲಿಂಗಂ ಚ ತಲ್ಲಿಂಗಂ ಚಿತ್ಸ್ವರೂಪಕಂ ತದ್ಭಾವಶುದ್ಧಿಸಿದ್ಧಸ್ಯ ಸದ್ಯೋನ್ಮುಕ್ತಿಃ ಸುಖಂ ಭವೇತ್ ಗುರುಃ ಪರಶಿವಶ್ಚೈವ ಜಂಗಮೋ ಲಿಂಗಮೇವ ಚ ತದ್ಭಾವಶುದ್ಧಿಸಿದ್ಧಸ್ಯ ಸದ್ಯೋನ್ಮುಕ್ತಿಃ ಸುಖಂ ಭವೇತ್ ಲಿಂಗಾಂಗೀ ಗುರುರ್ಲಿಂಗಂ ತ್ರಿವಿಧಂ ಲಿಂಗಮುಚ್ಯತೇ .................................................................. ತತ್ತ್ವದೀಪಿಕಾಯಾಂ ಪ್ರಸಾದೋ ಮುಕ್ತಿಮೂಲಂ ಚ ತತ್ಪ್ರಸಾದಸ್ತ್ರಿಧಾ ಮತಃ ಶಿವಃ ಸರ್ವಾಧಿದೇವಃ ಸ್ಯಾತ್ ಸರ್ವಕರ್ಮ ಶಿವಾಜ್ಞಯಾ ತತ್ತ್ವದೀಪಿಕಾಯಾಂ ಮಾಹೇಶ್ವರಸ್ಯ ಸಂಗಾದ್ಧಿ ಶಿವಯೋಗಂ ಲಭೇನ್ನರಃ ಪ್ರಸಾದಂ ತ್ರಿವಿಧಂ ಗ್ರಾಹ್ಯಂ ಮಹಾಪಾಪವಿನಾಶಕಂ ತತ್ತ್ವದೀಪಿಕಾಯಾಂ ಧನಪುತ್ರಕಲತ್ರಾದಿಮೋಹಂ ಸಂತ್ಯಜ್ಯ ಯೋ ನರಃ ಶಿವಭಾವೇನ ವರ್ತೇತ ಸದ್ಯೋನ್ಮುಕ್ತಸ್ಸುಖೀ ಭವೇತ್ ಪ್ರಾಣಲಿಂಗೇತ್ವವಿಶ್ವಾಸಾತ್ ಭಕ್ತಿಮುಕ್ತಿದ್ವಯಂ ನ ಚ ಪ್ರಾಣಲಿಂಗಸ್ಯ ವಿಶ್ವಾಸಾತ್ ಸಿದ್ದಿಃ ಸ್ಯಾತ್ ಭಕ್ತಿಮುಕ್ತಿದಾ ಪ್ರಾಣಲಿಂಗಮವಿಶ್ವಸ್ಯ ತೀರ್ಥಲಿಂಗಮುಪಾಸತೇ ಸ ನರಃ ಸ್ವರ್ಗಮಾಪ್ನೋತಿ ಗಣತ್ವಂ ನ ಪ್ರಯುಜ್ಯತೇ ಪ್ರಾಣಲಿಂಗಸಮಾಯುಕ್ತಃ ಪರಹಸ್ತಸಮರ್ಚನಾತ್ ತತ್ಪೂಜಾ ನಿಷ್ಫಲಾ ದೇವಿ ರೌರವಂ ನರಕಂ ವ್ರಜೇತ್ ಪ್ರಾಣಲಿಂಗಸಮಾಯುಕ್ತಃ ಪರಹಸ್ತೇ ದದಾತಿ ಚೇತ್ ನಿಮಿಷಾರ್ಧವಿಯೋಗೇನ ವಿಶೇಷಂ ಪಾತಕಂ ಭವೇತ್ ಪ್ರಾಣಲಿಂಗಸಮಾಯುಕ್ತ ಏಕಭುಕ್ತೋಪವಾಸತಃ ಗುರುಲಂಘನಮಾತ್ರೇಣ ಪೂಜಾ ಯಾ ನಿಷ್ಪಲಾ ಭವೇತ್ ಇಷ್ಟಲಿಂಗಂ ಸಮುತ್ಸೃಜ್ಯ ಅನ್ಯಲಿಂಗಸ್ಯ ಪೂಜನಾತ್ ಸ್ವೇಷ್ಟಂ ನ ಲಭತೇ ಮತ್ರ್ಯಃ ಪರಂ ತತ್ತ್ವಂ ನಿಹತ್ಯಸೌ ಅತ್ಯಂತಮಹಿಮಾರೂಢಂ ಶಿವಮಾಹಾತ್ಮ್ಯವಿಸ್ತರಂ ಯೋ[s]ಪಿ ದೃಷ್ಟ್ವಾಪ್ಯವಿಶ್ವಾಸೀ ಸ ಭಕ್ತೋ ನರಕಂ ವ್ರಜೇತ್ ಅಥ ಯೋ ಯಾದವ ಶ್ಚೈವ ರಾಜಾನಶ್ಯವೋ ಗ್ರಹಾ ನೈವ ಪೀಡ್ಯಸ್ತು ಯತ್ಕೃತ್ವಾ ನರಂ ಹಾರಪರಾಯಣಂ ಹಿರಣ್ಯರೂಪದೇಹಸ್ತಂ ಹಿರಣ್ಯಪತಿಪ್ರಾಣಿನಾಂ ಆಶಾದನ್ಯಂ ಹಿರಣ್ಯಂ ಚ ತದ್ದೇಹಂ ಲಿಂಗವರ್ಜಯೇತ್ ಘೃಣಾಮೂರ್ತಿರ್ಮಹಾದೇವೋ ಹಿರಣ್ಯೋದ್ಭಾಹು ಶಂಕರಃ ವರದಾಭಯ ಮತ್ಸ್ವಾಮಿನ್ ಯೇ ಆಶಾದನ್ಯಂ ವಿವರ್ಜಯೇತ್ ಆಶಾ ಚ ನರಕಂ ಚೈವ ನಿರಾಶಾ ಮುಕ್ತಿರೇವ ಹಿ ಆಶಾನಿರಾಶಯೋರ್ನಾಸ್ತಿ ತತ್ಸುಖಸ್ಯ ಸಮಂ ಪರಂ ಶಿವರಹಸ್ಯೇ ಜಪಶ್ರಾಂತಃ ಪುನಧ್ರ್ಯಾಯೇತ್ ಧ್ಯಾನಶ್ರಾಂತಃ ಪುನರ್ಜಪೇತ್ ಜಪಧ್ಯಾನಾದಿಯೋಗೇನ ಶಿವಃ ಕ್ಷಿಪ್ರಂ ಪ್ರಸೀದತಿ ಗಚ್ಚನ್ ತಿಷ*ನ್ ಸ್ವಪನ್ ಜಾಗ್ರನ್ ಉನ್ಮಿಷನ್ ನಿಮಿಷನ್ನಪಿ ಶುಚಿರ್ವಾಪ್ಯಶುಚಿರ್ವಾಪಿ ಶಿವಂ ಸರ್ವತ್ರ ಚಿಂತಯೇತ್ ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂ ಗತೋ[s]ಪಿ ವಾ ಯಸ್ಸ್ಮರೇತ್ ಸತತಂ ರುದ್ರಂ ಸ ಬಾಹ್ಯಾಭ್ಯಂತರಃ ಶುಚಿಃ ದುರ್ಲಭಂ ಮಾನುಷಂ ಜನ್ಮ ವಿವೇಕಸ್ತ್ವತಿದುರ್ಲಭಃ ದುರ್ಲಭಾ ಚ ಶಿವೇ ಭಕ್ತಿಃ ಶಿವಜ್ಞಾನಂ ತು ದುರ್ಲಭಂ ಇಂ್ರಯಪ್ರೀತಿದಾತಾರಃ ಪುಮಾಂಸೋ ಬಹವಃ ಕಿಲ ಶಿವಜ್ಞಾನಾರ್ಥದಾತಾರಃ ಪುಮಾಂಸೋ ಲೋಕದುರ್ಲಭಾಃ ಲಿಂಗಭಕ್ತ್ಯಾ ಮನಃ ಪೂತಂ ಅಂಗಂ ಪೂತಂ ತು ದೇಶಿಕಾತ್ ಭಾವಸ್ತು ಜಂಗಮಾತ್ ಪೂತಸ್ತ್ರಿವಿಧಾ ಭಕ್ತಿರುತ್ತಮಾ ಅಷ್ಟವಿಧಾರ್ಚನಂ ಲಿಂಗೇ ಅಷ್ಟಭೋಗಸ್ತು ಜಂಗಮೇ ಲಿಂಗೇ ಷೋಡಶೋಪಚಾರಾಃ ಸರ್ವೇ ತಾತ್ಪರ್ಯಜಂಗಮೇ ಮನೋ ಲೀನಂ ಮಹಾಲಿಂಗೇ ದ್ರವ್ಯಂ ಲೀನಂ ತು ಜಂಗಮೇ ತನುರ್ಲೀನೋ ಗುರೌ ಲಿಂಗೇ ಇತಿ ಭಕ್ತಸ್ಯ ವೈ ಧೃವಂ ಸಕಲಂ ಭಕ್ತರೂಪಂ ಚ ನಿಷ್ಕಲಂ ಶಿವರೂಪಕಂ ಸಕಲಂ ನಿಷ್ಕಲಂ ಮಿಶ್ರಂ ಚರರೂಪಂ ವಿಧೀಯತೇ ಸತ್ಕ್ರಿಯಾಂ ಪೂಜಯೇತ್ಪ್ರಾತರ್ಮಧ್ಯಾಹ್ನೇ ಭೋಜನಾವಧಿಂ ಸಾಯಂಕಾಲೇ ಮಹಾಪೂಜಾಂ ತತ್ಕ್ರಮಸ್ತು ವಿಶಿಷ್ಯತೇ ಮನಃಪೂತಾರ್ಚನಂ ಭಕ್ತ್ಯಾ ಪ್ರಾತಃಕಾಲವಿಧಿಕ್ರಮಃ ಸುಜಲಂ ಸುರಸಂ ಚೈವ ಯಥಾಸಂಭವದ್ರವ್ಯಕಂ ಅರ್ಪಯೇಚ್ಚರಲಿಂಗಾಯ ಮಧ್ಯಾಹ್ನೇ ಪೂಜನಕ್ರಮಃ ಗಂಧಂ ಪುಷ್ಪಂ ಚ ಕರ್ಪೂರಂ ಚಂದನಂ ಲೇಪನಂ ತಥಾ ಅರ್ಪಯೇತ್ ಫಲತಾಂಬೂಲಂ ಸಂಧ್ಯಾಪೂಜಾರ್ಚನಾವಿಧಿಕ್ರಮಃ ಧೂಪಮುಷ್ಣಾಧಿಕಂ ಸರ್ವಂ ಪ್ರಾತಃಕಾಲಾರ್ಚನಾವಿಧಿಃ ಪೂಜೋಪಚಾರಸ್ಸರ್ವೇಷಾಂ ಶೈತ್ಯಂ ಮಧ್ಯಾಹ್ನಸಂಧಿಷು ತ್ರಿಸಂಧ್ಯಾ ತ್ರಿಷು ಕಾಲೇಷು ಉಷ್ಣಂ ನೈವೇದ್ಯಮುತ್ತಮಂ ಯಥಾಸಂಭವಂ ಸಂಧ್ಯಾಯಾಂ ನಾದಾದೀನಿ ವಿಧಿಕ್ರಮಾತ್ ಶರಸಂಯುಕ್ತಪೂಜಾಯಾಂ ಕೇವಲಂ ನರಕಂ ಭವೇತ್ ನಿಶ್ಶಠಃ ಪೂಜಕಶ್ಚೈವ ಕೇವಲಂ ಮುಕ್ತಿಕಾರಣಂ ಅಷ್ಟಾದಶಾನಾಂ ಜಾತೀನಾಂ ಶಠಕರ್ಮಸ್ವಭಾವತಃ ನಿಶ್ಯಠಾಃ ಕುಲಮರ್ಯಾದಾಃ ಸದ್ಭಕ್ತಾಶ್ಚ ಶಿವಪ್ರಿಯಾಃ ಲಿಂಗಧಾರೀ ಮಹಾಲಿಂಗಂ ನ ಭೇದೋ ತತ್ರ ದೃಶ್ಯತೇ ಸದ್ವೈತ್ತೋ ಭೃತ್ಯರೂಪಶ್ಚ ಸತ್ಯಂ ಸತ್ಯಂ ಸಮೋ ನ ಚ ಕರ್ತೃಭೃತ್ಯಸ್ಯ ಸನ್ಮಾರ್ಗದುರ್ಮಾರ್ಗಸಮಭಾವತಃ ಅಹಂಕಾರೋ ಮಹಾಪಾಪಂ..... ಜನ್ಮಾಂತರಸಹಸ್ರೇಷು ತಪೋಧ್ಯಾನಪರಾಯಣೈಃ ನರಾಣಾಂ ಕ್ಷೀಣಪಾಪಾನಾಂ ಶಿವೇ ಭಕ್ತಿಃ ಪ್ರಜಾಯತೇ ತತೋ ವಿಷಯವೈರಾಗ್ಯಂ ವೈರಾಗ್ಯಾತ್ ಜ್ಞಾನಸಂಭವಃ ಜ್ಞಾನೇನ ತು ಪರಾ ಭಕ್ತಿಃ ಪ್ರಸಾದಸ್ತದನಂತರಂ ಪ್ರಸಾದಾನ್ಮುಚ್ಯತೇ ಜಂತುರ್ಮುಕ್ತಃ ಶಿವಸಮೋ ಭವೇತ್ ಅಸಾರೇ ದಗ್ಧಸಂಸಾರೇ ಸಾರಂ ದೇವಿ ಶಿವಾರ್ಚನಂ ಸತ್ಯಂ ವಚ್ಮಿ ಹಿತಂ ವಚ್ಮಿ ವಚ್ಮಿ ಪಥ್ಯಂ ಪುನಃ ಪುನಃ ಉಪಾಧಿಃ ಸ್ಯಾನ್ಮಹಾಭಕ್ತಿರುಪಾಧಿಸ್ಯಾತ್ಪ್ರಸಾದಕಃ ಉಪಾಧಿಃ ಸ್ಯಾತ್ಕ್ರಿಯಾಸ್ಸರ್ವಾಶ್ಯಿವಸ್ಯಾಸ್ಯಾ[s] ಪ್ರಸಾದತಃ ನಿುಪಾಧಿಕಮದ್ಭಕ್ತಿರ್ನಿರುಪಾಧಿಕಪ್ರಸಾದತಃ ನಿರೂಪಾಧಿಕ್ರಿಯಾಸ್ಸರ್ವಾಃ ಶಿವಃ ಶೀಘ್ರಂ ಪ್ರಸೀದತಿ ದಿನೇ ದಿನೇ ವಿಶೇಷಂ ಚ ಮಾಸೇ ಮಾಸೇ ಮಹಾದ್ಭುತಂ ವತ್ಸರೇ ವತ್ಸರೇ ಚೋದ್ಯಂ ಸದ್ಭಕ್ತಸ್ಯಾಭಿವರ್ಧನಂ ದಿನೇ ದಿನೇ ವಿಶೇಷಂ ಚ ಮಾಸೇ ಮಾಸೇ ಹಿ ದೃಶ್ಯತಾಂ ವತ್ಸರೇ ವತ್ಸರೇ ನಷ್ಟಾ ಮಹಾವಾಸಕ್ರಿಯಾಸ್ತಥಾ ದಾಸೋ[s]ಹಂ ಚ ಮಹಾಖ್ಯಾತಿರ್ದಾಸೋ[s]ಹಂ ಲಾಭ ಏವ ಚ ದಾಸೋ[s]ಹಂ ಚ ಮಹತ್ಪೂಜ್ಯಂ ದಾಸೋ[s]ಹಂ ಸತ್ಯಮುಕ್ತಿದಂ ಸದ್ಭಕ್ತಸಂಗಸಿದ್ಧಿಃ ಸ್ಯಾತ್ ಸರ್ವಸಿದ್ಧಿರ್ನ ಸಂಶಯಃ ಭಕ್ತಿಜ್ರ್ಞಾನಂ ಚ ವೈರಾಗ್ಯಂ ವರ್ಧತಾಂ ಚ ದಿನೇ ದಿನೇ ಮಹತ್ಸುಖಂ ಮಹಾತೋಷೋ ಲಿಂಗಭಕ್ತ್ಯಾ ಯಥಾ ಶಿವೇ ಪ್ರಾಣಲಿಂಗಪ್ರತೀಕಾರಂ ಕುರ್ವಂತೀಹ ದುರಾತ್ಮನಃ ಅತ್ಯುಗ್ರನರಕಂ ಯಾಂತಿ ಯುಗಾನಾಂ ಸಪ್ತವಿಂಶತಿ ಹುತಭುಗ್ಪತಿತಾಂಭೋಜಗತಿಃ ಪಾತಕಿನಾಂ ಭವೇತ್ ಸುಜ್ಞಾನ ಸದ್ಭಕ್ತಿ ಪರಮವೈರಾಗ್ಯಕ್ಕೆ ಶಿವನೊಲಿವನಲ್ಲದೆ ಸಾಮಾನ್ಯ ತಟ್ಟು ಮುಟ್ಟು ತಾಗು ನಿರೋಧದಲ್ಲಿ ಅನುಸರಿಸಿದಡೆ ಶಿವ ಮೆಚ್ಚುವನೆ ? ಸತ್ಯಶುದ್ಧ ನಿತ್ಯಮುಕ್ತ ಶರಣರು ಮೆಚ್ಚುವರೆ? ಶಿವನೊಲವು ಶರಣರೊಲವು ಸೂರೆಯೇ? ದೇವದಾನವ ಮಾನವರಂತೆ ಶಿವನಲ್ಲಿ ಭಕ್ತಿಯನು ಅನುಸರಿಸಿ ನಡೆವುದು ಭಕ್ತಿಯೇ ಅಲ್ಲ. ತಾಮಸ ರಾಜಸ ಉಳ್ಳುದು ಭಕ್ತಿಯ ಕುಳವಲ್ಲ, ಸದ್ಭಕ್ತಿಗೆ ಸಲ್ಲದು. ಗುರು ಲಿಂಗ ಜಂಗಮಕ್ಕೆ ಮರುಗಿ ತ್ರಿವಿಧಪದಾರ್ಥವ ಮನೋವಾಕ್ಕಾಯದಲ್ಲಿ ವಂಚನೆಯಿಲ್ಲದೆ ಮನ ಧನವನರ್ಪಿಸಿ ಮನ ಮುಟ್ಟಿದಡೆ ಗುರು ಲಿಂಗ ಜಂಗಮದ ಘನಮಹಿಮೆಯ ವೇದಪುರಾಣಾಗಮಂಗಳಿಂ ಗುರುವಾಕ್ಯದಿಂ ಪುರಾತನರ ಮತದಿಂದರಿದು ಮರೆವುದು ಜ್ಞಾನವಲ್ಲ. ಅರಿದು ಮರೆವುದು ಶ್ವಾನಜ್ಞಾನವಲ್ಲದೆ ಇಂತಪ್ಪ ಅಜ್ಞಾನಕ್ಕೆ ಒಲಿವನೇ ಶಿವನು? ಮೆಚ್ಚುವರೇ ಶರಣರು? ಶ್ರೀಗುರುಲಿಂಗಜಂಗಮವೊಂದೆಂಬರಿವು ಕರಿಗೊಂಡು ಸದ್ಭಾವದಿಂ ಭಾವಿಸಿ ಭಾವಶುದ್ಧಿಯಾದುದು ಸುಜ್ಞಾನ. ಗುರುಲಿಂಗಜಂಗಮದ ಅರ್ಚನೆ ಪೂಜನೆ ಅರ್ಪಿತ ದಾಸೋಹಕ್ರೀವಿಡಿದು ಸಂಸಾರಕ್ರೀ ಪರಧನ ಪರಸ್ತ್ರೀ ಅನ್ಯದೈವ ಭವಿಯನು ಅನುಸರಿಸಿ ಹಿಡಿದುದು ವೈರಾಗ್ಯವೇ ? ಅಲ್ಲ, ಅದು ಮರ್ಕಟ ವೈರಾಗ್ಯ. ಇವ ಬಿಟ್ಟು ಸದ್ಭಕ್ತಿ ಸಮ್ಯಗ್‍ಜ್ಞಾನ ಪರಮವೈರಾಗ್ಯಯುತನಾಗಿ ಗುರುಲಿಂಗಜಂಗಮಕ್ಕೊಲಿದು ಒಲಿಸುವುದು, ಸದ್ಭಕ್ತಿಪ್ರಸಾದಮುಕ್ತಿಯ ಹಡೆವುದು. ಈ ಸತ್ಕ್ರಿಯಾಭಕ್ತಿಯುಳ್ಳಡೆ ಲೇಸು, ಅಲ್ಲದಿದ್ದಡೆ ಸಾವುದೇ ಲೇಸಯ್ಯ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಇನ್ನಷ್ಟು ... -->