ಅಥವಾ

ಒಟ್ಟು 110 ಕಡೆಗಳಲ್ಲಿ , 37 ವಚನಕಾರರು , 98 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಹಜದಿಂದ ನಿರಾಲಂಬವಾಯಿತ್ತು, ನಿರಾಲಂಬದಿಂದ ನಿರಾಳವಾಯಿತ್ತು. ನಿರಾಳದಿಂದ ನಿರವಯವಾಯಿತ್ತು, ನಿರವಯದಿಂದ ಅನಾದಿಯಾಗಿತ್ತು. ಅನಾದಿಯಲ್ಲಿ ಮೂರ್ತಿಯಾದನೊಬ್ಬ ಶರಣ. ಆ ಶರಣನ ಮೂರ್ತಿಯಿಂದ ಸದಾಶಿವನಾದ, ಆ ಸದಾಶಿವನ ಮೂರ್ತಿಯಿಂದ ಶಿವನಾದ, ಆ ಶಿವನ ಮೂರ್ತಿಯಿಂದ ರುದ್ರನಾದ, ಆ ರುದ್ರನ ಮೂರ್ತಿಯಿಂದ ವಿಷ್ಣುವಾದ. ಆ ವಿಷ್ಣುವಿನ ಮೂರ್ತಿಯಿಂದ ಬ್ರಹ್ಮನಾದ. ಆ ಬ್ರಹ್ಮನ ಮೂರ್ತಿಯಿಂದಾದವು ಸಕಲ ಜಗತ್ತುಗಳೆಲ್ಲಾ_ ಇವರೆಲ್ಲ ನಮ್ಮ ಗುಹೇಶ್ವರನ ಕರಸ್ಥಲದ ಹಂಗಿನಲ್ಲಿ ಹುಟ್ಟಿ ಬೆಳೆದರು
--------------
ಅಲ್ಲಮಪ್ರಭುದೇವರು
ಬ್ರಹ್ಮನ ಡಾಗು ಬೆನ್ನಮೇಲೆ, ವಿಷ್ಣುವಿನ ಡಾಗು ಕೈಯ ಮೇಲೆ. ರುದ್ರನ ಡಾಗು ತಲೆಯ ಮೇಲೆ. ಇಂತೀ ಡಾಗಿನ ಪಶುಗಳಿಗೇಕೆ ಅನಾಗತನ ಸುದ್ದಿ ? ಇದು ನಿಮಗೆ ಸಾ[ದ್ಥಿ]ಸದೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಬ್ರಹ್ಮನ ಹೆಂಡಿರ ಮಕ್ಕಳ ಹಿಡಿತಂದು, ಅಡಿಗೆಯ ಮಾಡಿಸಿದಾತ ಬಸವಣ್ಣ. ವಿಷ್ಣುವಿನ ಸಾಸಿರದೇಳುನೂರು ಕುಮಾರಿಯರ ಹಿಡಿತಂದು, ದಹಿಸಿದಾತ ಬಸವಣ್ಣ. ರುದ್ರರ ರುದ್ರಗಣಂಗಳ ಹಿಡಿತಂದು, ಸ್ವಾಮಿಭೃತ್ಯಾಚಾರಸಂಬಂಧವ ಮಾಡಿಸಿದಾತ ಬಸವಣ್ಣ. ಆ ಬಸವಣ್ಣಂಗೆ ಪ್ರಸಾದವೆ ನೆಲೆಯಾದುದು, ಕಲಿದೇವಯ್ಯಾ.
--------------
ಮಡಿವಾಳ ಮಾಚಿದೇವ
ಬಡವರ ಭೋಜನ ಭೋಗಿಸಿದವ ಭವಾನೀಪುತ್ರ ನೋಡಯ್ಯಾ. ಕಡವರನ ಎಡೆಗೊಂಡವ ವಿಷ್ಣುವಿನ ವಂಶದವ ನೋಡಯ್ಯಾ. ಬಡವರ ಭೋಜನ ಅಮೃತ ಸೇವನೆ; ಕಡವರನಮೃತ ಸುರಾಪಾನ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಮಣ್ಣು ಹಿಡಿದವರೆಲ್ಲರೂ ಬ್ರಹ್ಮನ ಸೃಷ್ಟಿಗೊಳಗಾದರು. ಹೊನ್ನ ಹಿಡಿದವರೆಲ್ಲರೂ ವಿಷ್ಣುವಿನ ಸ್ಥಿತಿಗೊಳಗಾದರು. ಹೆಣ್ಣು ಹಿಡಿದವರೆಲ್ಲರೂ ರುದ್ರನ ಸಂಹಾರಕ್ಕೊಳಗಾದರು. [ಮ]ಣ್ಣು ಹೊನ್ನು[ಹೆ]ಣ್ಣ ಬಿಟ್ಟು ಲಿಂಗಾಂಗ ಸಂಯೋಗವರಿಯದೆ ಸದಾಚಾರದಲ್ಲಿ ತಿರಿದುಂಡು ಆತ್ಮಸುಖಿಯಾದವರೆಲ್ಲರೂ ಫಲಭೋಗಕ್ಕೊಳಗಾದರು. ನಾನು ಮೂರ ಬಿಟ್ಟು ಆರ ಕಂಡು ಮೂದೇವರ ಗೆಲಿದೆ. ಆರ ಬಿಟ್ಟು ಮೂರ ಕಂಡು ಮನ ಮುಳುಗಿ ಮೂರೊಂದು ಪದವ ದಾಂಟಿ ಶಿವನೊಳಗಾದೆನಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಪ್ರಥಮದೀಕ್ಷೆ, ಪರಬ್ರಹ್ಮದೀಕ್ಷೆ, ಅಂಗಲಿಂಗದೀಕ್ಷೆ, ಪುನರ್ದೀಕ್ಷೆ: ಇಂತೀ ದೀಕ್ಷೆಗಳಲ್ಲಿ ತಿಳಿಯಬೇಕು. ಪ್ರಥಮದೀಕ್ಷೆಯ ಮಾಡುವಲ್ಲಿ ಬ್ರಹ್ಮನ ಪಾಶವ ಹರಿಯಬೇಕು. ಪರಬ್ರಹ್ಮದೀಕ್ಷೆಯ ಮಾಡುವಲ್ಲಿ ವಿಷ್ಣುವಿನ ಪಾಶವ ಹರಿಯಬೇಕು; ಅಂಗಲಿಂಗದೀಕ್ಷೆಯ ಮಾಡುವಲ್ಲಿ ರುದ್ರನ ಪಾಶವ ಹರಿಯಬೇಕು; ಪುನರ್ದೀಕ್ಷೆಯ ಮಾಡುವಲ್ಲಿ ಆ ಘಟದಲ್ಲಿದ್ದ ಆತ್ಮನ ಕಳೆದು ಪುನರಪಿಯ ಮಾಡಿ ಪುನರ್ದೀಕ್ಷೆಯ ಮಾಡಬೇಕು. ಅದೆಂತೆಂದಡೆ, ಅದಕ್ಕೆ ದೃಷ್ಟ: ದ್ವಿಜರ ಗರ್ಭದಲ್ಲಿ ಜನಿಸಿದ ಪಿಂಡಕ್ಕೆ ಮಂತ್ರೋಚ್ಚರಣೆ ಮುಂಜಿಯಿಂದಲ್ಲದೆ ಭೂಸುರಕುಲವಿಲ್ಲ. ಇದನರಿತು ವಿಚಾರವ ಮಾಡಿ ಕೇಳಿ ಕಂಡು ಉಪದೇಶ ಗುರುವಾಗಬೇಕು. ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಸ್ಥೂಲ ಬ್ರಹ್ಮನ ಮಗ, ಸೂಕ್ಷ್ಮ ವಿಷ್ಣುವಿನ ಮಗ, ಕಾರಣ ರುದ್ರನ ಮಗ. ಘನಮಹಿಮ ನಿಮ್ಮನರಿವುದಕ್ಕೆ ಎನಗಿನ್ನಾವುದು ಮನ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಎಡಭಾಗದ ಮುರಗಿಂದ ಬ್ರಹ್ಮನ ಹೊಡೆದು ಕೊಂದೆ, ಬಲಭಾಗದ ಮುರಗಿಂದ ವಿಷ್ಣುವಿನ ಕೊಂದೆ, ಹಿಂಭಾಗದ ಮುರಗಿಂದ ರುದ್ರನ ಕೊಂದೆ. ಒಂಟಿಮುರಗಿಯ ಹನಿಗಳಿಂದ ಶುನಿಗಳ ಕೊಂದೆ, ಮೈಲಿಗಿ ಮೋಳಗಿಯ ನುಂಗಿ ಸತ್ತು ಕಾಯಕವ ಮಾಡುತಿರ್ದನು ನೋಡಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಬ್ರಹ್ಮನ ಹುಟ್ಟು, ವಿಷ್ಣುವಿನ ಸ್ಥಿತಿ, ರುದ್ರನ ಲಯಕ್ಕೆ ಒಳಗಾದ ಮನುಜರೆಲ್ಲ ತಾವು ಪ್ರಸಾದಿ, ಪ್ರಾಣಲಿಂಗಿಗಳೆಂದು ನುಡಿದುಕೊಂಬಿರಿ. ಪ್ರಸಾದಿಸ್ಥಲ ಎಲ್ಲರಿಗೆಂತಾದುದಣ್ಣಾ ? ಪ್ರಸಾದಿಸ್ಥಲ ಪರಮಸುಖ ಪರಿಣಾಮ. ಮನ ಮೇರೆದಪ್ಪಿ ತನುವನೆ ಪ್ರಸಾದವ ಮಾಡುವದೀಗ ಪ್ರಸಾದ. ಇದನರಿಯದೆ ಸದಮದವಾಗಿ ಮುಡಿ ನೋಡಿ ಒಡಲ ಕೆಡಿಸಿಕೊಂಬ ಜಡಮನುಜರ ನುಡಿಯ ಕೇಳಲಾಗದು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಗುರುವ ಕುರಿತು ಮಾಡುವಲ್ಲಿ ಬ್ರಹ್ಮನ ಭಜನೆಯ ಹರಿಯಬೇಕು. ಲಿಂಗವ ಕುರಿತು ಮಾಡುವಲ್ಲಿ ವಿಷ್ಣುವಿನ ಸಂತೋಷಕ್ಕೆ ಸಿಕ್ಕದಿರಬೇಕು. ಜಂಗಮವ ಕುರಿತು ಮಾಡುವಲ್ಲಿ ರುದ್ರನ ಪಾಶವ ಹೊದ್ದದಿರಬೇಕು. ಒಂದನರಿದು ಒಂದ ಮರೆದು ಸಂದಿಲ್ಲದ ಸುಖ ಜಂಗಮ ದಾಸೋಹದಲ್ಲಿ ಸಂಗನಬಸವಣ್ಣ ನಿತ್ಯ ಚಂದೇಶ್ವರಲಿಂಗಕ್ಕೆ ತಲುಪಿ.
--------------
ನುಲಿಯ ಚಂದಯ್ಯ
ಒಂದು ಜಡಿಯ ಬಿಚ್ಚಿ ಸಹಸ್ರ ಹುರಿಗೂಡಿದ ಒಂದು ಹಗ್ಗ. ಮೂರು ಹುರಿಗೂಡಿದ ಒಂದು ಹಗ್ಗ. ಒಂದು ಹುರಿಗೂಡಿದ ಒಂದು ಹಗ್ಗ. ನಾಲ್ಕು ಹುರಿಗೂಡಿದ ಒಂದು ಹಗ್ಗ. ಆರು ಹುರಿಗೂಡಿದ ಒಂದು ಹಗ್ಗ. ಹತ್ತು ಹುರಿಗೂಡಿದ ಒಂದು ಹಗ್ಗ. ದ್ವಾದಶ ಹುರಿಗೂಡಿದ ಒಂದು ಹಗ್ಗ. ಷೋಡಶ ಹುರಿಗೂಡಿದ ಒಂದು ಹಗ್ಗ. ಎರಡು ಹುರಿಗೂಡಿದ ಒಂದು ಹಗ್ಗ. ಇಂತೀ ಹುರಿಗೂಡಿದ ಹಗ್ಗ ಮೊದಲಾದ ಅನೇಕ ಹುರಿಗೂಡಿದ ಒಂದು ಅಖಂಡ ಹಗ್ಗವಮಾಡಿ, ನಾಲ್ಕು ಹುರಿ ಹಗ್ಗದಿಂ ಬ್ರಹ್ಮನ ಕಟ್ಟಿ, ಷಡುಹುರಿ ಹಗ್ಗದಿಂ ವಿಷ್ಣುವಿನ ಕಟ್ಟಿ, ದಶಹುರಿ ಹಗ್ಗದಿಂ ರುದ್ರನ ಕಟ್ಟಿ, ದ್ವಾದಶಹುರಿ ಹಗ್ಗದಿಂ ಈಶ್ವರನ ಕಟ್ಟಿ, ಷೋಡಶಹುರಿ ಹಗ್ಗದಿಂ ಸದಾಶಿವನ ಕಟ್ಟಿ, ದ್ವಿಹುರಿ ಹಗ್ಗದಿಂ ಶಿವನ ಕಟ್ಟಿ, ಸಹಸ್ರ ಹುರಿಹಗ್ಗದಿಂ ಮತ್ರ್ಯದರಸನ ಕಟ್ಟಿ, ಮೂರು ಹುರಿಹಗ್ಗದಿಂ ಸ್ವರ್ಗಲೋಕದರಸನ ಕಟ್ಟಿ, ಒಂದು ಹುರಿಹಗ್ಗದಿಂ ಪಾತಾಳಲೋಕದರಸನ ಕಟ್ಟಿ, ಅನಂತ ಹುರಿಗೂಡಿದ ಅಖಂಡ ಹಗ್ಗದಿಂ ಚತುರ್ದಶಭುವನಯುಕ್ತವಾದ ಬ್ರಹ್ಮಾಂಡವ ಕಟ್ಟಿ, ಕಾಯಕವ ಮಾಡುತಿರ್ದನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ. ಈ ಭೇದವ ಬಲ್ಲವರು ಲಿಂಗಸಂಬಂದ್ಥಿಗಳು ಈ ಭೇದವ ತಿಳಿಯದವರು ಅಂಗಸಂಬಂದ್ಥಿಗಳು.
--------------
ಕಾಡಸಿದ್ಧೇಶ್ವರ
ಜಗದೊಳಗೆ ಹುಟ್ಟಿ ಜಗದ ಹಂಗಿಗರಾಗಿ, ನಾವು ಜಂಗಮ, ನಾವು ಭಕ್ತರೆಂಬ ನುಡಿಗೆ ನಾಚರು ನೋಡಾ. ಅಪ್ಪುವಿನ ಘಟನ ಹೊತ್ತುಕೊಂಡು ಅನ್ನಪಾಂಗಳಿಗೆ ಅನುಸರಿಸಿ ನಡೆವುತ್ತ, ಹೊನ್ನು, ಹೆಣ್ಣು, ಮಣ್ಣನೀವವರ ಬಾಗಿಲ ಕಾಯ್ವ ಅಣ್ಣಗಳ ವೇಷಕ್ಕೆ ಶರಣಾರ್ಥಿ. ಅವರ ಆಶಾಪಾಶವ ಕಂಡು, ಹೇಸಿತ್ತೆನ್ನ ಮನವು. ಅದಂತಿರಲಿ, ಅದು ಬ್ರಹ್ಮನ ಹುಟ್ಟು, ವಿಷ್ಣುವಿನ ಸ್ಥಿತಿ, ರುದ್ರನ ಲಯಕ್ಕೊಳಗಾಗಿ ಹೋಯಿತ್ತು ಅಂತಲ್ಲ ಕೇಳಿರಣ್ಣ. ಜಂಗಮವಾದರೆ ಜಗದೊಳಗೆ ಹುಟ್ಟಿ, ಜಗದ ಹಂಗ ಹರಿದು, ಹೊನ್ನು, ಹೆಣ್ಣು, ಮಣ್ಣು ಕಣ್ಣಿಲೆ ನೋಡಿ ಕಾಮಿಸದೆ, ಮನದಲ್ಲಿ ನೆನೆಯದೆ, ಮಾಯವನುಣ್ಣದೆ, ಆಶೆಗೊಳಗಾಗದೆ, ವೇಷವ ಹೊರದೆ, ದೇಶದ ಮನುಜರ ಸುತ್ತಿದ ಪಾಶಕ್ಕೆ ಹೊರಗಾಗಿ ಸುಳಿವ ಜಂಗಮದ ಈಶನೆಂದೆ ಕಾಂಬೆ. ಆ ಜಂಗಮಕ್ಕೆ ಅರ್ಥ, ಪ್ರಾಣ, ಅಬ್ಥಿಮಾನವನೊಪ್ಪಿಸಿ, ತಪ್ಪದೆ ಒಡೆಯನೆಂದರಿದು ಮಾಡುವ ಭಕ್ತನ ಎಂತಿಪ್ಪನೆಂದು ಕಾಂಬೆ. ಇದನೆಂತಾದರೂ ಒಪ್ಪುಗೊಳ್ಳ ಎನ್ನ. ಬಸವಪ್ರಿಯ ಕೂಡಲಚೆನ್ನಸಂಗನ ಬಸವಣ್ಣನಲ್ಲಿ ಶರಣಗಣಂಗಳು.
--------------
ಹಡಪದ ಅಪ್ಪಣ್ಣ
ಶ್ರೀಗುರುಲಿಂಗಜಂಗಮದ ಧೂಳಪಾದೋದಕದಿಂದ ಸಮಸ್ತಲೋಕದ ಪ್ರಾಣಿಗಳನೆಲ್ಲವ ಭವತ್ವವಳಿದು ಭೃತ್ಯಭಕ್ತಿಮಾರ್ಗವ ತೋರುವುದಯ್ಯ, ಶ್ರೀಗುರುಲಿಂಗಜಂಗಮದ ದೀಕ್ಷಾಪಾದೋದಕದಿಂದ ಸಮಸ್ತ ಪದಾರ್ಥಂಗಳೆಲ್ಲವ ಶಿವಗಣಪದಕ್ಕೆ ಯೋಗ್ಯವಾಗುವಂತೆ ಮಾಡುವುದಯ್ಯ. ಶ್ರೀಗುರುಲಿಂಗಜಂಗಮದ ಶಿಕ್ಷಾಪಾದೋದಕದಿಂದ ಬ್ರಹ್ಮನ ಉತ್ಪತ್ಯ, ವಿಷ್ಣುವಿನ ಸ್ಥಿತಿ, ರುದ್ರನ ಲಯ, ಈಶ್ವರನ ತಿರೋಧಾನ, ಸದಾಶಿವನ ಅನುಗ್ರಹ ತೊಡದು ಶಿವಶರಣಗಣಂಗಳ ನಿಜನಿವಾಸವ ತೋರುವುದಯ್ಯ. ಶ್ರೀಗುರುಲಿಂಗಜಂಗಮದ ಮಹಾಜ್ಞಾನ ಪಾದೋದಕದಿಂದ ಷಡ್ವಿಧ ದೀಕ್ಷಾತ್ರಯವ ಕರುಣಿಸಿ, ಷಟ್ಸ್ಥಲಮಾರ್ಗವ ತೋರುವುದಯ್ಯ. ಶ್ರೀಗುರುಲಿಂಗಜಂಗಮದ ಸ್ಪರ್ಶನೋದಕ, ಅವಧಾನೋದಕ, ಆಪ್ಯಾಯನೋದಕದಿಂದ ತ್ರಿವಿಧಲಿಂಗಾಂಗ ಸಮರಸದ ಸನ್ಮಾರ್ಗಾಚಾರಕ್ರಿಯಾಜ್ಞಾನವ ತೋರುವುದಯ್ಯ. ಶ್ರಿಗುರುಲಿಂಗಜಂಗಮದ ಹಸ್ತೋದಕ-ಪರಿಣಾಮೋದಕ-ನಿರ್ನಾಮೋದಕದಿಂದ ಷಡ್ವಿಧಲಿಂಗಾಂಗ ಸಮರಸಾಚರಣೆಯ ಮಾರ್ಗದ, ಮೀರಿದ ಕ್ರಿಯಾಜ್ಞಾನವ ತೋರುವುದಯ್ಯ. ಶ್ರೀಗುರುಲಿಂಗಜಂಗಮದ ಸತ್ಯೋದಕ-ಕರುಣಜಲ- ವಿನಯಜಲ-ಸಮತಾಜಲದಿಂದ ಸಮಸ್ತಪ್ರಮಥಗಣಂಗಳೆಲ್ಲ ಜ್ಯೋತಿರ್ಮಯವಾದರು ನೋಡ. ಶ್ರೀಗುರುಲಿಂಗಜಂಗಮದ ಪಾದೋದಕವೆ ಪರಮಾರಾಧ್ಯ ಶರಣಗಣಂಗಳಾಚಾರಸಂಪದಕ್ಕೆ ಪರಬ್ರಹ್ಮ ಜ್ಯೋತಿರ್ಮಯವಸ್ತು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಬ್ರಹ್ಮನ ಕಲ್ಪಿತವ ಕಳೆಯನಾಗಿ, ಗುರು ಲಿಂಗವ ಕೊಟ್ಟುದು ಹುಸಿ. ಆ ಲಿಂಗ ಬಂದು ತನುವನಿಂಬುಗೊಳ್ಳದಾಗಿ, ವಿಷ್ಣುವಿನ ಸ್ಥಿತಿ ಬಿಟ್ಟುದು ಹುಸಿ. ಆ ವಿಷ್ಣುವಿನ ಹಂಗಿನಲ್ಲಿ ಉಂಡುಹೋಹ ಕಾರಣ, ಜಂಗಮದ ಮಾಟ ಹುಸಿ. ಇದು ಕಾರಣ, ರುದ್ರನ ಹಂಗಿನಲ್ಲಿ ಜಗವೆಲ್ಲ ಲಯವಾಗುತ್ತಿರ್ಪ ಕಾರಣ, ಪ್ರಾಣಲಿಂಗಿಗಳೆಂಬುದು ಹುಸಿ. ಇಂತಿವು ನಿರ್ಲೇಪವಾಗಿಯಲ್ಲದೆ ಸಹಜಭರಿತನಲ್ಲ, ಇಹ ಪರಕ್ಕೆ ಸಲ್ಲ. ಸೊಲ್ಲಿಗಭೇದ್ಯ ನಿಃಕಳಂಕ ಮಲ್ಲಿಕಾರ್ಜನ ಬಲ್ಲರ ಬಲ್ಲಹ.
--------------
ಮೋಳಿಗೆ ಮಾರಯ್ಯ
ಒಂದನೆಯ ಗಾಳಕ್ಕೆ ಬ್ರಹ್ಮನ ಕೆಡವಿದೆ. ಎರಡನೆಯ ಗಾಳಕ್ಕೆ ವಿಷ್ಣುವಿನ ಕೆಡವಿದೆ. ಮೂರನೆಯ ಗಾಳಕ್ಕೆ ರುದ್ರನ ಕೆಡವಿದೆ. ಮಿಕ್ಕಾದ ಗಾಳದಿಂ ಹಲವು ದೇವತೆಗಳ ಕೆಡವಿದೆ. ಒಂದು ಗಾಳದಿಂದ ನಾ ಸತ್ತು ಕಾಯಕವ ಮಾಡುತ್ತಿರ್ಪೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇನ್ನಷ್ಟು ... -->