ಅಥವಾ

ಒಟ್ಟು 7 ಕಡೆಗಳಲ್ಲಿ , 6 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಕ್ಷೆ ಭಕ್ತನ ಸೋಂಕು. ಮುಖಸಜ್ಜೆ ಮಾಹೇಶ್ವರನ ಸೋಂಕು. ಕರಸ್ಥಲ ಪ್ರಾಣಲಿಂಗಿಯ ಸೋಂಕು. ಉತ್ತಮಾಂಗ ಶರಣನ ಸೋಂಕು. ಅಮಳೋಕ್ಯ ಐಕ್ಯನ ಸೋಂಕು. ಭಕ್ತಂಗೆ ಆಚಾರಲಿಂಗ, ಮಾಹೇಶ್ವರಂಗೆ ಸದಾಚಾರಲಿಂಗ, ಪ್ರಸಾದಿಗೆ ವಿಚಾರಲಿಂಗ, ಪ್ರಾಣಲಿಂಗಿಗೆ ಸರ್ವವ್ಯವಧಾನ ಸನ್ನದ್ಧಲಿಂಗ, ಶರಣಂಗೆ ಅವಿರಳ ಸಂಪೂರ್ಣಲಿಂಗ, ಐಕ್ಯಂಗೆ ಪರಮ ಪರಿಪೂರ್ಣಲಿಂಗ ಇಂತೀ ಆರುಸ್ಥಲ ಷಟ್ಕರ್ಮ ಷಡ್ವಿಧಲಿಂಗ ಭೇದಂಗಳಲ್ಲಿ ಮುಂದಣ ವಸ್ತುವೊಂದುಂಟೆಂದು ಸಂಗವ ಮಾಡುವುದಕ್ಕೆ ಆರಂಗದ ಪಥಗೂಡಿ ಕಾಬಲ್ಲಿ ವಸ್ತುವನೊಡಗೂಡುವುದೊಂದೆ ಭೇದ. ಇಂತೀ ಸ್ಥಲವಿವರ ಕೂಟಸಂಬಂಧ. ಏಕಮೂರ್ತಿ ತ್ರಿವಿಧಸ್ಥಲವಾಗಿ, ತ್ರಿವಿಧಮೂರ್ತಿ ಷಡುಸ್ಥಲವಾಗಿ ಮಿಶ್ರಕ್ಕೆ ಮಿಶ್ರ ತತ್ವಕ್ಕೆ ತತ್ವ ಬೊಮ್ಮಕ್ಕೆ ಪರಬ್ರಹ್ಮವನರಿತಡೂ, ಹಲವು ಹೊಲಬಿನ ಪಥದಲ್ಲಿ ಬಂದಡೂ ಪಥ ಹಲವಲ್ಲದೆ ನಗರಕ್ಕೆ ಒಂದೆ ಒಲಬು. ಇಂತೀ ಸ್ಥಲವಸ್ತುನಿರ್ವಾಹ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಎಲ್ಲಿಕ್ಕೆಯ ಎಣ್ಣೆ, ಎಲ್ಲಿಕ್ಕೆಯ ಬತ್ತಿ, ಎಲ್ಲಿಕ್ಕೆಯ ಲಿಂಗವ ಪೂಜಿಸುವರು ನೀವು ಕೇಳಿರೆ : ಅಂಗ ಲಿಂಗವೆಂಬೆನೆ ? ಹಿಂಗದು ಮನದ ಭವಿತನ. ಪ್ರಾಣ ಲಿಂಗವೆಂಬೆನೆ ? ಭಾವದಲ್ಲಿ ಜಂಗಮವನರಿಯರು. ಗುರುವಚನ ಸಾರಾಯಸಂಪನ್ನರೆಂಬೆನೆ ? ಷಟ್ಕರ್ಮ (ಷಡಕ್ಷರ?) ಮಂತ್ರ ವಿರೋಧಿಗಳು. ಇದು ಕಾರಣ ಕೂಡಲಚೆನ್ನಸಂಗಯ್ಯಾ ತಾಯ ಮಾರಿ ತೊತ್ತ ಕೊಂಬರನೇನೆಂಬೆ.
--------------
ಚನ್ನಬಸವಣ್ಣ
ಆರು ಚಕ್ರದೊಳಗೆ ಆರುಭೂತಂಗಳೇರಿಪ್ಪವಯ್ಯಾ ಅವರೊಳಗೆ ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಆತ್ಮತತ್ವವೆಂಬ ಆರು ಅಧಿದೇವತೆಗಳಿಪ್ಪವಯ್ಯಾ. ಇಂತಪ್ಪ ಷಟ್ಕರ್ಮ ಸಾದಾಖ್ಯರ ಹಾನಿ ಮಾಡಿ ದಾಟುವರನೆ ಭಕ್ತಜಂಗಮವೆಂಬೆನು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಬ್ರಹ್ಮಾಂಡದಲ್ಲಿ ಪುಟ್ಟಿಹ ಲಕ್ಷಣ ಪಿಂಡಾಂಡದಲ್ಲಿ ಉಂಟೆಂಬರು. ಆ ಬ್ರಹ್ಮಾಂಡಕ್ಕೆ ತ್ರಿಜಾತಿವರ್ಗ, ಚರಸ್ಥಾವರ ಮೂಲಾದಿಭೇದ ಸಪ್ತಸಿಂಧು ಸವಾಲಕ್ಷ ಮುಂತಾದ ಮಹಾಮೇರುವೆ ಅಷ್ಟಾಷಷ್ಟಿ ಗಂಗಾನದಿಗಳು ಮುಂತಾದ ನವಪಾಷಾಣದೊಳಗಾದ ರತಿಸಂಭವ ಮುಂತಾದ ಷಟ್ಕರ್ಮ ಆಚರಣೆ ಮುಂತಾದ ಇಂತೀ ಬ್ರಹ್ಮಾಂಡದೊಳಗಾದ ವಸ್ತುಕ ವರ್ಣಕ ಇವು ಎಲ್ಲವು, ಲಕ್ಷಿಸಿಕೊಂಡು ಪ್ರಮಾಣಾದವು. ಈ ಪಿಂಡಾಂಡಕ್ಕೆ ಬ್ರಹ್ಮಾಂಡವ ಸರಿಗಾಬಲ್ಲಿ ನಾನಾ ವರ್ಣದ ಭೇದಂಗಳೆಲ್ಲವ ವಿಚಾರಿಸಲಿಕ್ಕೆ ಉಂಟು. ಘಟಭೇದದಲಿ ಇಲ್ಲ, ಜ್ಞಾನಭೇದದಲ್ಲಿ ಉಂಟೆಂದು ಕರ್ಮವ ವಿಚಾರಿಸಲಿಕ್ಕೆ ಪೃಥ್ವೀತತ್ವದೊಳಗಾದುದೆಲ್ಲವೂ ವಸ್ತುಕರೂಪು. ಅಪ್ಪುತತ್ವದೊಳಗಾದುದೆಲ್ಲವೂ ವರ್ಣಕರೂಪು. ತೇಜತತ್ವದೊಳಗಾದುದೆಲ್ಲವೂ ದೃಶ್ಯಾಂತರಭಾವ. ವಾಯುತತ್ವದೊಳಗಾದುದೆಲ್ಲವೂ ಖೇಚರಸಂಚಾರಭಾವ. ಆಕಾಶತತ್ವದೊಳಗಾದುದೆಲ್ಲವೂ ಇಂತೀ ಚತುರ್ಗುಣ ಭಾವವನೊಳಗೊಂಡು ಶಬ್ದಗಮ್ಯವಾಗಿ ಮಹದಾಕಾಶವ ಎಯ್ದುತ್ತಿಹುದಾಗಿ. ಇಂತೀ ಅಂಡಪಿಂಡವ ವಿಸ್ತರಿಸಿ ನೋಡಿಹೆನೆಂದಡೆ ಅಗ್ನಿಗೆ ಆಕಾಶದ ಉದ್ದ ಕಾಷ*ವನೊಟ್ಟಿದಡೂ ಅಲ್ಲಿಗೆ ಹೊತ್ತುವದಲ್ಲದೆ ಸಾಕೆಂದು ಒಪ್ಪುವದಿಲ್ಲ. ಇಂತೀ ಭೇದದಂತೆ ಸಕಲವ ನೋಡಿಹೆನೆಂದಡೆ ನಾಲ್ಕು ವೇದ ಒಳಗಾಗಿ ಹದಿನಾರು ಶಾಸ್ತ್ರ ಮುಂತಾಗಿ ಇಪ್ಪತ್ತೆಂಟು ದಿವ್ಯಾಗಮಂಗಳು ಕಡೆಯಾಗಿ ಇಂತಿವರೊಳಗಾದ ಉಪಮನ್ಯು, ಶಾಂಕರಸಂಹಿತೆ, ಚಿಂತನೆ, ಉತ್ತರ ಚಿಂತನೆ, ಪ್ರತ್ಯುತ್ತರ ಚಿಂತನೆ, ಸಂಕಲ್ಪಸಿದ್ಧಿ ಇಂತಿವರೊಳಗೆ ತಿಳಿದೆಹೆನೆಂದಡೆ ಕಲಿಕೆಗೆ ಕಡೆಯಿಲ್ಲ ಅರಿವಿಗೆ ತುದಿ ಮೊದಲಿಲ್ಲ. ಇಂತಿವೆಲ್ಲವ ಕಳೆದುಳಿದು ನಿಲಬಲ್ಲಡೆ ವರ್ಮಸ್ಥಾನ ಶುದ್ಧಾತ್ಮನಾಗಿಪ್ಪ ಭೇದವ ಹಿಡಿದು ಮಾಡುವಲ್ಲಿ ದೃಢಾತ್ಮನಾಗಿ, ಲಿಂಗವನರ್ಚಿಸಿ ಪೂಜಿಸುವಲ್ಲಿ ನೈಷಿ*ಕವಂತನಾಗಿ, ತ್ರಿವಿಧವ ಕುರಿತು ಅರಿದು ಮಾಡುವಲ್ಲಿ ನಿಶ್ಚಯವಂತನಾಗಿ, ಅಶ್ವತ್ಥವೃಕ್ಷದ ಪರ್ಣದ ಅಗ್ರದ ತುದಿಯ ಮೊನೆಯಲ್ಲಿ ಬಿಂದು [ಸಾ]ರಕ್ಕೆ ಮುನ್ನವೆ ಬಿದ್ದಂತೆ ಇಂತೀ ಕರ್ಮಕಾಂಡದಲ್ಲಿದ್ದ ಆತ್ಮನು ಹಾಗಾಯಿತ್ತೆಂಬುದ ಹೀಗರಿದು ಇಂತೀ ಉಭಯದಲ್ಲಿ ಚೋದ್ಯನಾಗಿ ಸದ್ಯೋಜಾತಲಿಂಗವ ಕೂಡಬೇಕು.
--------------
ಅವಸರದ ರೇಕಣ್ಣ
ಅಷ್ಟವಿಧಾರ್ಚನೆ ಷೋಡಶ ಉಪಚರಿಯ ಷಟ್ಕರ್ಮ ತ್ರಿವಿಧವರ್ಮ ಚತುರ್ವಿಧಫಲಭೋಗ ಭೋಜ್ಯ ಪೂಜಾ ವ್ಯವಧಾನ ಕರ್ಮಂಗಳಲ್ಲಿ ಸೋದಿಸಿ ವರ್ಮವನರಿಯಬೇಕು. ವರ್ಮವನರಿತಲ್ಲಿ ಸರ್ವಜೀವಕ್ಕೆ ಶಾಂತಿ, ಆಚಾರ್ಯನಂಗಕ್ಕೆ ನಿಹಿತ. ಸರ್ವಚೇತನಾದಿಗಳಲ್ಲಿ ಘಾತಕತನವಿಲ್ಲದೆ ಮನ ವಚನ ಕಾಯ ತ್ರಿಕರಣಶುದ್ಧವಾಗಿ ಈಶ್ವರಪೂಜೆಯ ಮಾಡುವಾತನ ಆಶ್ರಯದ ಶೇಷಪ್ರಸಾದವ ಕೊಂಬ ವೃಶ್ಚಿಕ ಮೂಷಕ ವಿಹಂಗ ಮಾರ್ಜಾಲ ಇಂತಿವರಂತೆ ಸದ್ಭಕ್ತನ ಬಾಗಿಲಲ್ಲಿ ಸಂತತ ಕಾಯುವಂತೆ ಮಾಡು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಾ.
--------------
ಪ್ರಸಾದಿ ಭೋಗಣ್ಣ
ಆಚಾರದಿಂದ ವಿಚಾರಿಸಿ ದೀಕ್ಷೆಯ ಮಾಡುವುದು ಗುರುಸ್ಥಲ. ವಿಚಾರ ಸರ್ವಗಣಾಚಾರದಿಂದ ದೀಕ್ಷೆಯ ಮಾಡುವುದು ಜಂಗಮಸ್ಥಲ. ಈ ಉಭಯದ ಗೊತ್ತ ಮುಟ್ಟಿ, ನಿಶ್ಚಯ ನಿಜವ ಮುಟ್ಟಿ ಪಂಚವಿಂಶತಿತತ್ವಂಗಳಲ್ಲಿ ಷಟ್ಕರ್ಮ ತ್ರಿವಿಧಾತ್ಮ ಭೇದಂಗಳಲ್ಲಿ ಏಕೋತ್ತರಶತಸ್ಥಲವೆಂಬ ಭಿನ್ನಭಾವಂಗಳನರಿದು ಐವತ್ತೊಂದಕ್ಷರದ ಬೀಜನೇಮವನೊಂದಕ್ಷರದಲೈಕ್ಯವನರಿತು ಇಂತೀ ಐವತ್ತೆರಡು ಗುರುಲಫು ಗುಣನೇಮ ಬಿಂದು ವಿಸರ್ಗ ಶಾಖೆ ಮುಂತಾದವನೊಂದುಗೂಡಿ ನಿರುತದಿಂದ ನಿಂದುದು ಜ್ಞಾನದೀಕ್ಷೆ. ಇಂತೀ ಗುರುಸ್ಥಲದ ವಿವರ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಕಣ್ಗಾಣದೆ ಲೋಕ ಮಾಯಾತಮಂಧವೆಂಬ ಬಣ್ಣಛಾಯಕ್ಕೆ ಸಿಲ್ಕಿ ಭ್ರಮಿತಗೊಂಡಿತು. ಪದ : ತನುಮದ ಹುತ್ತದೊಳು ಮನವಿಕಾರದ ಸರ್ಪ ಜನರನೆಲ್ಲರ ಕಚ್ಚಿ ವಿಷವೇರಿಸಿ ಅನುದಿನ ಉಳಿಯಗೊಡದಾ ಮಾಯಾತಮಂಧವೆಂಬ ಅಣಲಿಂಗೆ ಗುರಿಯಾಗಿ ಬರಿದೆ ಕಲಿಗೆಡುತಲಿ. | 1 | ಷಡೂರ್ಮೆ ಷಟ್ಕರ್ಮ ಷಡ್ಭಾವವೈಕರಣ ಷಡ್ಭ್ರಮೆಗಳೆಂದೆಂಬುದ ಷಡು ಅಂಗ ಕತ್ತಲೆಗೆ ನಡೆದು ಮೈಮರೆದು ಬರಿದೆ. | 2 | ಅಸಿಯ ಜವ್ವನೆಯರ ವಿಷಯರಸವೆಂದೆಂಬ ಪ್ರಸರದೊಳು ಲೋಕವನು ಗುರಿಮಾಡಿಯೆ ; ಅಸನ ವ್ಯಸನ ನಿದ್ರೆ ಆಲಸ್ಯ ಮಾಯಾತನು ಬೆಸುಗೆಯೊಳು ಸಿಲ್ಕಿ ಬರಿದೆ. | 3 | ಹಿರಿದು ಮಾಯಾತಮವೆಂಬ ಕತ್ತಲೆಯೊಳಗೆ ನಡೆದು ಬರುತಲಿ ಅಜ್ಞಾನವೆಂದೆಂಬುವ ಕೊರಡನೆಡವಿಯೆ ತಾಪತ್ರಯದಗ್ನಿಗಿರಿಯೊಳಗೆ ಮರೆಗೊಂಡು ಮುಂದುಗಾಣದೆ ಮೂಲೋಕ | 4 | ಸುರೆಗುಡಿದ ಮರ್ಕಟಗೆ ವಿರಚಿ ಭೂತಂ ಸೋಂಕಿ ಹಿರಿದು ಚೇಷ್ಟೆಯ ತೆರದಿ ಮಾಯಾಮದದ ಗುರುವಹಂಕಾರ ಮನ ಚೇಷ್ಟೆಯಂಗಳ ತೊರದು ಗುರುಸಿದ್ಧ ಮಲ್ಲಿನಾಥನೊಳು ಬೆರೆಯಲರಿಯದೆ. | 5 |
--------------
ಹೇಮಗಲ್ಲ ಹಂಪ
-->