ಅಥವಾ

ಒಟ್ಟು 32 ಕಡೆಗಳಲ್ಲಿ , 16 ವಚನಕಾರರು , 27 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಷ್ಟದಳಕಮಲವ ಮೆಟ್ಟಿ ಚರಿಸುವ ಹಂಸನ ಭೇದವ ಹೇಳಿಹೆನು: ಪೂರ್ವದಳಕೇರಲು ಗುಣಿಯಾಗಿಹನು. ಅಗ್ನಿದಳಕೇರಲು ಕ್ಷುಧೆಯಾಗಿಹನು. ದಕ್ಷಿಣದಳಕೇರಲು ಕ್ರೋದ್ಥಿಯಾಗಿಹನು. ನೈಋತ್ಯದಳಕೇರಲು ಅಸತ್ಯನಾಗಿಹನು. ವರುಣದಳಕೇರಲು ನಿದ್ರೆಗೆಯ್ವುತಿಹನು. ವಾಯುದಳಕೇರಲು ಸಂಚಲನಾಗಿಹನು. ಉತ್ತರದಳಕೇರಲು ಧರ್ಮಿಯಾಗಿಹನು. ಈಶಾನ್ಯದಳಕೇರಲು ಕಾಮಾತುರನಾಗಿಹನು. ಈ ಅಷ್ಟದಳಮಂಟಪದ ಮೇಲೆ ಹರಿದಾಡುವ ಹಂಸನ ಕುಳನ ತೊಲಗಿಸುವ ಕ್ರಮವೆಂತುಟಯ್ಯಾಯೆಂದೊಡೆ: ಅಷ್ಟದಳಮಂಟಪದ ಅಷ್ಟಕೋಣೆಗಳೊಳಗೆ ಅಷ್ಟ ಲಿಂಗಕಳೆಯ ಪ್ರತಿಷ್ಠಿಸಿ ಹಂಸನ ನಟ್ಟ ನಡುಮಧ್ಯದಲ್ಲಿ ತಂದು ನಿಲಿಸಲು ಮುಕ್ತಿಮೋಕ್ಷವನೆಯ್ದಿ ಪರವಶನಾಗಿಪ್ಪನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹೃದಯಕಮಲಮಧ್ಯದಲ್ಲಿ ಅಷ್ಟದಳ ಕಮಲವ ಮೆಟ್ಟಿಪ್ಪ ಹಂಸನ ಕಟ್ಟಬೇಕೆಂಬರು. ಈ ಹೊಟ್ಟೆಯ ಕೂಳ ಅಣ್ಣಗಳೆಲ್ಲರೂ ಕಟ್ಟಬಲ್ಲರೆ ನಿಜಹಂಸನ ? ಬೆಟ್ಟಬೆಟ್ಟವನೇರಿದ ಭೃಗು ದದ್ಥೀಚಿ ಅಗಸ್ತ್ಯ ಕಶ್ಯಪ ರೋಮಜ ಕೌಂಡಿಲ್ಯ ಚಿಪ್ಪಜ ಮುಂತಾದ ಸಪ್ತ ಋಷಿಗಳೆಲ್ಲರೊಳಗಾದ ಋಷಿಜನಂಗಳು, ಬೆಟ್ಟವನೇರಿ ಕಟ್ಟಿದುದಿಲ್ಲ. ಮತ್ತೆಯೂ ಬಟ್ಟೆಗೆ ಬಂದು ಮತ್ತರಾದರಲ್ಲದೆ, ಸುಚಿತ್ತವನರಿದುದಿಲ್ಲ. ವಿಷರುಹಕುಸುಮಜನ ಕಪಾಲವ ಹಿಡಿದಾತನ ಕೈಯಲ್ಲಿ ಗಸಣೆಗೊಳಗಾದರು. ಆತ್ಮನ ರಸಿಕವನರಿಯದೆ, ಈ ಹುಸಿಗರ ನೋಡಿ ದೆಸೆಯ ಹೊದ್ದೆನೆಂದೆ, ಪಶುಪತಿದೂರ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಷ್ಟದಳದ ಮೇಲೆ ನಲಿದಾಡುವ ಹಂಸನ ಜ್ಞಾನದೃಷ್ಟಿಯ ಮೇಲೆ ನಿಲಿಸಿ, ಬಟ್ಟಬಯಲ ನೋಡಿ ದೃಷ್ಟನಾದನಯ್ಯ ನಿಮ್ಮ ಶರಣನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಎಪ್ಪತ್ತೊಂದು ಅರಣ್ಯದಲ್ಲಿಪ್ಪತ್ತೊಂದು ಋಷಿಯರು ತಪ್ಪದೆ ಅಜಪೆಯ ಜಪಿಸುತ್ತ, `ಹವಿಷಾ ಹವಿಷಾ'ಯೆಂಬ ಆನಂದದ ಹಂಸನ ಜಪದಲ್ಲಿ, ತೋರಿಪ್ಪ ಬ್ರಹ್ಮಾಂಡವ ಮೀರಿಪ್ಪ ಜಪದಲ್ಲಿ, ಆರೂಢವಾದಳವ್ವೆ. ಕಪಿಲಸಿದ್ಧಮಲ್ಲಿನಾಥನ ಕೂಡಿ ಕೂಡಿಲೀಯವಾದಳು.
--------------
ಸಿದ್ಧರಾಮೇಶ್ವರ
ಗಿರಿಯ ತುದಿಯ ಮೇಲೆ ಹಾರುವ ಹಂಸನ ಕಂಡೆನಯ್ಯ. ಆ ಹಂಸನು ಚಂದ್ರಸೂರ್ಯಾದಿಗಳ ಬೆಳಗನೊಳಕೊಂಡು ಪರಿಪೂರ್ಣವಾದ ಲಿಂಗಕ್ಕೆ ಹಾರಿಹೋದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬೆಟ್ಟದ ತುದಿಯ ಮೇಲೆ ಹುಟ್ಟಿ ಆಡುವ ಹಂಸನ ಕಂಡೆ ನೋಡಾ, ಅದಕೆ ತಲೆ ಒಂದು, ನಾಲಗೆ ಮೂರು, ಹಸ್ತವಾರು, ಮೂವತ್ತಾರು ಪಾದಂಗಳು, ಐವತ್ತೆರಡು ಎಸಳಿನ ಮನೆಯಲ್ಲಿ ಸುಳಿದಾಡುತಿಪ್ಪುದು ನೋಡಾ. ಆ ಸುಳುವಿನ ಭೇದವನರಿವ ಶರಣರ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪಿಂಡಮುಕ್ತನ ಪದಮುಕ್ತನ ರೂಪಮುಕ್ತನ_ತಿಳಿದೆ ನೋಡಾ. ಪಿಂಡವೆ ಕುಂಡಲಿಯ ಶಕ್ತಿ, ಪದವೆ ಹಂಸನ ಚರಿತ್ರ, ಬಿಂದು ಅನಾಹತವೆಂದರಿದು_ಗುಹೇಶ್ವರಲಿಂಗವ ಕೂಡಿದೆನು.
--------------
ಅಲ್ಲಮಪ್ರಭುದೇವರು
ಊರ ಮುಂದೆ ಶ್ವಾನನ ಕಾಣಬಹುದಲ್ಲದೆ ಸಿಂಹವ ಕಾಣಬಾರದು. ನದಿಯ ಮುಂದೆ ಬಕನ ಕಾಣಬಹುದಲ್ಲದೆ ಹಂಸನ ಕಾಣಬಾರದು. ಪಸರದೊಳಗೆ ಗಾಜಿನ ಮಣಿಯ ಕಾಣಬಹುದಲ್ಲದೆ ರತ್ನವ ಕಾಣಬಾರದು. ಧರೆಯ ಮೇಲೆ ವೇಷಧಾರಿಗಳ ಕಾಣಬಹುದಲ್ಲದೆ (ಶಿವ)ಜ್ಞಾನಿಗಳ ಕಾಣಬಾರದು, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಆಕಾಶದ ಮೇಲೆ ಏಕಾಂತ ಸೂಳೆಯ ಕಂಡೆನಯ್ಯ! ಆ ಸೂಳೆಯ ಬಸುರಲಿ ಪಿಂಡಬ್ರಹ್ಮಾಂಡಗಳಿಪ್ಪವು ನೋಡಾ! ಆ ಪಿಂಡಬ್ರಹ್ಮಾಂಡಗಳೊಳಗೆ ಒಂದು ಹಂಸನಿರ್ಪುದ ಕಂಡೆನಯ್ಯ! ಆ ಹಂಸನು ಸಕಲ ಬಲೆಯಂಗಳ ಹರಿದು ನಿಶ್ಚಿಂತ ನಿರಾಕುಳವೆಂಬ ಸಿಂಹಾಸನದಲ್ಲಿ ಇರುವುದು. ಹಂಸನ ಕಾಣಬಲ್ಲಾತನೆ ನಿರ್ಮುಕ್ತಗಣೇಶ್ವರ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮಲವ ಭುಂಜಿಸುವ ಶೂಕರನಿಗೆ ಮದಗಜವ ಹೋಲಿಸಿದರೆ ಆ ಶೂಕರ ಮದಗಜವಾಗಬಲ್ಲುದೆ ? ಎಲುಬು ಕಡಿಯುವ ಶುನಿಗಳಿಗೆ ಗಜವೈರಿಯ ಹೋಲಿಸಿದರೆ ಆ ಶುನಿಗಳು ಗಜವೈರಿಯಾಗಬಲ್ಲುವೆ ? ಇಲಿಯ ತಿಂಬುವ ಮಾರ್ಜಾಲನಿಗೆ ಮಹಾವ್ಯಾನ ಹೋಲಿಸಿದರೆ ಆ ಮಾರ್ಜಾಲ ಮಹಾವ್ಯಾಘ್ರನಾಗಬಲ್ಲುದೆ ? ಹೊಲಸುತಿಂಬುವ ಕಾಗಿಯ ಮರಿಗೆ ಕೋಗಿಲೆಯ ಹೋಲಿಸಿದರೆ ಆ ಕಾಗಿಯಮರಿ ಸುನಾದಸ್ವರ ಕೋಗಿಲಮರಿಯಾಗಬಲ್ಲುದೆ ? ಕಸವ ತಿಂಬುವ ಕತ್ತೆಗೆ ಕುದುರೆಯ ಹೋಲಿಸಿದರೆ ಆ ಕತ್ತೆ ಮಹಾತೇಜಿಯಾಗಬಲ್ಲುದೆ ? ಕಸ ನೀರು ಹೊರುವ ದಾಸಿಗೆ ಅರಸಿಯ ಹೋಲಿಸಿದರೆ ಆ ದಾಸಿಯು ಅರಸಿಯಾಗಬಲ್ಲಳೆ ? ಈಚಲ ಕಾಡಿನಮರಕ್ಕೆ ಟೆಂಗಿನಮರ ಹೋಲಿಸಿದರೆ ಆ ಈಚಲ ಕಾಡಿನಮರ ಎಳೆಯ ಟೆಂಗಿನಮರವಾಗಬಲ್ಲುದೆ ? ನೀರೊಳಗಣ ಕೋಳಿಗೆ ಕೊಳದೊಳಗಣ ಹಂಸನ ಹೋಲಿಸಿದರೆ ಆ ನೀರಕೋಳಿಯು ರಾಜಹಂಸನಾಗಬಲ್ಲುದೆ ? ತಿಪ್ಪೆಯೊಳಗಣ ಪುಳವತಿಂಬುವ ಕೋಳಿಗೆ ಪಂಜರದೊಳಗಣ ಗಿಣಿಯ ಹೋಲಿಸಿದರೆ ಆ ಕೋಳಿಯು ಅರಗಿಳಿಯಾಗಬಲ್ಲುದೆ ? ಇಂತೀ ದೃಷ್ಟದ ಹಾಗೆ ಲೌಕಿಕದ ಜಡಮತಿ ಮನುಜರಿಗೆ ಶಿವಜ್ಞಾನಸಂಪನ್ನರಾದ ಶರಣರ ಹೋಲಿಸಿದರೆ, ಆ ಮಂದಮತಿ ಜೀವರು ಶಿವಜ್ಞಾನಿಗಳಾದ ಶಿವಶರಣರಾಗಬಲ್ಲರೆ ? ಈ ಭೇದವ ತಿಳಿಯಬಲ್ಲರೆ ಕೂಡಲ ಚನ್ನಸಂಗಯ್ಯನ ಶರಣರೆಂಬೆ. ಇದ ತಿಳಿಯದಿದ್ದರೆ ಭವಭಾರಿಗಳೆಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನವದ್ವಾರಬೀದಿಗಳಲ್ಲಿ ಸುಳಿದಾಡುವ ಹಂಸನ ಕೊರಳಲ್ಲಿ ಇಪ್ಪತ್ತೈದು ಗ್ರಾಮಗಳ ಕಟ್ಟಿ ತೂಗುತದೆ ನೋಡಾ ! ಸಮುದ್ರವೆಂಬ ಘೋಷದಲ್ಲಿ ಒಂದು ಕಪ್ಪೆ ಕುಳಿತು ಆ ಹಂಸನ ನುಂಗಿ ಕೂಗುತಿದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನವನಾಳಪದ್ಮದ ಅಷ್ಟದಳದೊಳಗೆ ಎಪ್ಪತ್ತುಮೂರು ನಾಳ ನೋಡಾ. ಸುಳಿದು ಬೀಸುವ ವಾಯು, ಒಳಗೆ ಆತ್ಮಜ್ಯೋತಿ, ಅಲ್ಲಿಂದೊಳಗಿಪ್ಪ ಹಂಸನ ಗೃಹವ ನೋಡಾ. ಹಿರಿದೊಂದು ಭೂತನು ಹುದುಗಿಪ್ಪ ಭೇದವ ನಿಲುಕಿ ನೋಡಿಯೆ ಕಂಡನಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕಾಯವಿಲ್ಲದ ಹಂಸನು ಗೂಡನಿಕ್ಕುವದ ಕಂಡೆನಯ್ಯ. ಅದು ಹೇಗೆಂದಡೆ: ಅದಕ್ಕೆ ಬುಡ ಒಂದು, ಕೊನೆ ಮೂರು, ಆರು ಕಡ್ಡಿಯ ಹೂಡಿ, ನಾದಬ್ರಹ್ಮವೆಂಬ ಕಟ್ಟ ಕಟ್ಟಿ, ಒಂಬತ್ತು ಯಜ್ಞದ ಗೂಡಿನೊಳಗೆ ಇಪ್ಪ ಹಂಸನ ಒಬ್ಬ ಸತಿಯಳು ಕಂಡು ಬೇಂಟೆಗಾರಂಗೆ ಹೇಳಲೊಡನೆ, ಆ ಬೇಂಟೆಕಾರ ಗದೆಯ ತಕ್ಕೊಂಡು ಇಡಲೊಡನೆ, ಸ್ವರ್ಗ ಮತ್ರ್ಯ ಪಾತಾಳವನೊಡೆದು ಆಕಾಶ ನಿರಾಕಾಶವೆಂಬ ನಿರ್ಬಯಲಲ್ಲಿ ಬಿತ್ತು ನೋಡಾ! ಆ ಬೇಂಟೆಕಾರ, ಆ ಗುರಿಯನೆತ್ತಲು ಆ ಕಾಯವಿಲ್ಲದ ಹಂಸ ಆ ಗದೆಯ ಕಚ್ಚಿತ್ತು ನೋಡಾ! ಇದೇನು ವಿಚಿತ್ರವೆಂದು ಬೆರಗಾಗುತಿರ್ದನಯ್ಯ ಝೇಂಕಾರ ನಿಜಲಿಂಗಪ್ರಭುವೆ ನಿಮ್ಮ ಶರಣನು.
--------------
ಜಕ್ಕಣಯ್ಯ
ಕರಣಂಗಳ ಕಾಳಿಕೆಯಳಿದುದೆ ನಿರಂಜನದ ಬೆಳಗಯ್ಯಾ. ಊಧ್ರ್ವಮಧ್ಯದಲ್ಲಿ ತಿರುಗಾಡುವ ಹಂಸನ ಶಂಕೆಯ ಹರಿದುದೆ, ಅಖಂಡಿತದ ಕಡ್ಡಿವತ್ತಿಯ ತುದಿವೆಳಗಯ್ಯಾ. ಒಂಕಾರವೆ ದಿವ್ಯಸಂಚಾರವಯ್ಯಾ. ಶ್ರುತಿಸ್ಮೃತಿತತ್ವವೆ ಸಕಲನಾದಪೂಜೆಯಯ್ಯಾ. ಎನ್ನ ಸಕಲೇಂದ್ರಿಯ ಭಾವಚ್ಛೇದನವೆ ನಿಮಗಾಲವಟ್ಟವಯ್ಯಾ. ಎನ್ನ ಚಿತ್ತ ಸುಚಿತ್ತವಾದುದೆ ನಿಮಗೆ ಛತ್ರವಯ್ಯಾ. ಪ್ರಕೃತಿ ಪ್ರಪಂಚುಭಾವ ತಲೆದೋರದೆ ಸೂಸದೆ, ಘನ ಒಲೆದಾಡುವುದೆ ಚಾಮರವಯ್ಯಾ. ನಿಮಗೆನ್ನ ಚತುಷ್ಟಯ ಭಾವಹಿಂಗಿ ನಿಬ್ಬೆರಗಾದುದೆ ಆಭರಣವಯ್ಯಾ. ಒಬ್ಬುಳಿಯ ತನುಭಾವ ಕೂಡಿದುದೆ ಲಿಂಗಸುಖವಾಸದ ವಸ್ತ್ರವಯ್ಯಾ. ಇಂತೀ ಪೂಜೆ, ಸಗರದ ಬೊಮ್ಮನೊಡೆಯ ನೀ ನಾನೆಂಬುಭಯವನರಿದು ಮರೆದಲ್ಲಿಯೆ, ಸದಮಲಾನಂದ ಪೂಜೆಯಯ್ಯಾ.
--------------
ಸಗರದ ಬೊಮ್ಮಣ್ಣ
ತನ್ನೊಡನೆ ಒಬ್ಬ ಭಾಮಿನಿ ಪುಟ್ಟಿದಳು ನೋಡಾ. ಆ ಭಾಮಿನಿಯ ಅಂಗದೊಳಗೆ ಐದು ಗ್ರಾಮಂಗಳು ಹುಟ್ಟಿದವು ನೋಡಾ. ಆ ಗ್ರಾಮದೊಳಗೆ ಸುಳಿದಾಡುವ ಹಂಸನ ಕಂಡೆನಯ್ಯ. ಆ ಹಂಸನ ಹಿಡಿಯಲಾಗಿ ಆ ಹಂಸ ಹಾರಿ ಆ ಭಾಮಿನಿಯ ನುಂಗಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇನ್ನಷ್ಟು ... -->