ಅಥವಾ

ಒಟ್ಟು 48 ಕಡೆಗಳಲ್ಲಿ , 22 ವಚನಕಾರರು , 47 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಯ ಕೈಯೊಳಗಣ ಗಿಳಿಗೆ, ಬೆಕ್ಕಿನ ಭಯ. ಗಿಳಿಯೆದ್ದೋಡಿ ಹಾಲ ಕುಡಿಯಲು, ಹರಿಯ ಕೈ ಮುರಿದು, ಮಾರ್ಜಾಲಗೆ ಮರಣವಾಯಿತ್ತು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮಲಯಜದ ಮಧ್ಯದಲ್ಲಿ ವಂಶ ಪುದಿದಿರೆ ಮುಟ್ಟದು ಗಂಧ ಅದೇಕೆ? ಮಧ್ಯದ ದ್ವಾರದ ಲಕ್ಷಣದಿಂದ, ಪಾದಪದ ಜಾತಿಬ್ಥಿನ್ನದಿಂದ. ಆ ತೆರನನರಿದಲ್ಲಿ ಇದಿರಿಟ್ಟು ಕುರುಹು ಬ್ಥಿನ್ನವಾಯಿತ್ತು. ಆತ್ಮಂಗೆ ಅರಿವು ಸೂಜಿಯ ಮೊನೆಯಂತೆ ಕುರುಹು ಹಿಂಗಿದ ದ್ವಾರದಂತೆ ಉಭಯವ ಭೇದಿಸಿ ಆ ದ್ವಾರದಲ್ಲಿ ಎಯ್ದುವ ನೂಲು ಮುಂದಳ ಹರಿಯ ಮುಚ್ಚುವಂತೆ ಕರುಹಿನ ಬ್ಥಿನ್ನ ನಾಮನಷ್ಟವಾಗುತ್ತದೆ, ನಿಜತತ್ವದ ಬೆಳಗು ತೋರುತ್ತದೆ ಸದಾಶಿವಮೂರ್ತಿಲಿಂಗದಲ್ಲಿ,
--------------
ಅರಿವಿನ ಮಾರಿತಂದೆ
ಗುರುಭಕ್ತರಾದವರು ತ್ರಿಕಾಲದಲ್ಲಿ ಹರಸ್ಮರಣೆಯಲ್ಲದೆ ಹರಿಯೆಂದು ನುಡಿಯಲಾಗದು. ಹರಿ ಶಬ್ದವ ಕೇಳಲಾಗದು, ಹರಿಯ ರೂಪವ ನೋಡಲಾಗದು. ಅದೇನು ಕಾರಣವೆಂದೊಡೆ : ಪೂರ್ಣಾಯುಷ್ಯವು, ವಿಮಲಮತಿಯು, ಸತ್ಕೀರ್ತಿಯು, ಮಹಾಬಲವು, ಕೆಟ್ಟು ಹೋಗುತ್ತಿಹುದು ನೋಡಾ ! ಅದೆಂತೆಂದೊಡೆ :ಬ್ರಹ್ಮಾಂಡಪುರಾಣೇ ``ನ ಪ್ರದೋಷೇ ಹರಿಂ ಪಶ್ಯೇತ್ ಯದಿ ಪಶ್ಯೇತ್ ಪ್ರಮಾದತಃ | ಚತ್ವಾರಿ ತಸ್ಯ ನಶ್ಯಂತಿ ಆಯುಃ ಪ್ರಜ್ಞಾ ಯಶೋ ಬಲಮ್ ||'' ಎಂದುದಾಗಿ, ಸತ್ತು ಹುಟ್ಟುವ ಹರಿಗೆ ಇನ್ನೆತ್ತಣ ದೇವತ್ವ ಹೇಳಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಅಯ್ಯಾ ಏನೂ ಏನೂ ಇಲ್ಲದಂದು, ಆದಿಕುಳದುತ್ಪತ್ಯವಾಗದಂದು, ಚಂದ್ರಧರ ವೃಷಭವಾಹನರಿಲ್ಲದಂದು, ಕಾಲಸಂಹರ ತ್ರಿಪುರಸಂಹರರಿಲ್ಲದಂದು, ಕಾಮನ ಭಸ್ಮವ ಪೂಸದಂದು ದೇವಿಯರಿಬ್ಬರಿಲ್ಲದಂದು, ಹರಿಯ ಹತ್ತವತಾರದಲ್ಲಿ ತಾರದಂದು, ಬ್ರಹ್ಮನ ಶಿರವ ಹರಿಯದಂದು, ಇವಾವ ಲೀಲೆಯದೋರದಂದು, ನಿಮಗನಂತನಾಮಂಗಳಿಲ್ಲದಂದು, ಅಂದು ನಿಮ್ಮ ಹೆಸರೇನು? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ?.
--------------
ಸ್ವತಂತ್ರ ಸಿದ್ಧಲಿಂಗ
ಹರಿಯಾಣದೊಳಗಣ ಓಗರವ ಹರಿಯವರು ಹರಿಹರಿದುಂಡರಯ್ಯಾ. ಪರ ವಧು ಬಂದು ಬೆರಸಲು ಆ ಹರಿ ಪರಹರಿಯಾದ. ಉಣಬಂದ ಹರಿಯ ಶಿರವ ಮೆಟ್ಟಿ ನಿಂದಳು ನಿಮ್ಮ ಹೆಣ್ಣು. ಇದ ಕಂಡು ನಾ ಬೆರಗಾದೆನಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ
--------------
ಸಿದ್ಧರಾಮೇಶ್ವರ
ಹರಿಯ ಹತ್ತು ಭವದಲ್ಲಿ ಬರಿಸಿತ್ತು ಮಾಯೆ. ಬ್ರಹ್ಮನ ತಲೆಯ ಹೋಳುಮಾಡಿತ್ತು ಮಾಯೆ. ಇಂದ್ರಚಂದ್ರರಂಗಕ್ಕೆ ಭಂಗವಿಕ್ಕಿತ್ತು ಮಾಯೆ. ಗರುಡ ಗಂಧರ್ವರ ಬರಡುಮಾಡಿತ್ತು ಮಾಯೆ. ಕಿನ್ನರ ಕಿಂಪುರುಷರ ಚುನ್ನವಾಡಿತ್ತು ಮಾಯೆ. ಸಿದ್ಧಸಾಧಕರಿಗೆಲ್ಲ ಗುದ್ದಾಟವನಿಕ್ಕಿತ್ತು ಮಾಯೆ. ಮನುಮುನಿಗಳನೆಲ್ಲರ ಮನವ ಸೆಳಕೊಂಡು ಮರಣಕ್ಕೊಳಗುಮಾಡಿತ್ತು ಮಾಯೆ. ಸ್ವರ್ಗಮರ್ತ್ಯಪಾತಾಳಗಳೆಂಬ ಮೂರು ಲೋಕದವರನ್ನೆಲ್ಲ ಯೋನಿಮುಖದಲ್ಲಿ ಹರಿಹರಿದು ನುಂಗಿ ತೊತ್ತಳದುಳಿದಿತ್ತು ಮಾಯೆ. ಮುಕ್ಕಣ್ಣಾ, ನೀ ಮಾಡಿದ ಮಾಯವ ಕಂಡು ಬೆಕ್ಕನೆ ಬೆರಗಾದೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಆದಿ ಅನಾದಿ ಇಲ್ಲದಂದು, ಸ್ಥಿತಿಗತಿ ಉತ್ಪನ್ನವಾಗದಂದು ಭಕ್ತಿಯನುಭಾವಿಯ ಬಸುರೊಳಗೆ ಸತ್ಯಜ್ಞಾನವೆಂಬ ಶಾಸ್ತ್ರಂಗಳು ಹುಟ್ಟಿದವು. ಆ ಶಾಸ್ತ್ರದೊಳಡಗಿದವು ವೇದಪುರಾಣಾಗಮಂಗಳು. ಆ ಆಗಮಂಗಳೊಳಡಗಿದವು ಐವತ್ತೆರಡಕ್ಷರಂಗಳು ಆ ಅಕ್ಷರಂಗಳೊಳಡಗಿದವು ಇಪ್ಪತ್ತೇಳು ನಕ್ಷತ್ರಂಗಳು. ಆ ಇಪ್ಪತ್ತೇಳು ನಕ್ಷತ್ರಂಗಳೊಳಡಗಿದವು ಈರೇಳು ಲೋಕದ ಗಳಿಗೆ ಜಾವ ದಿನ ಮಾಸ ಸಂವತ್ಸರಂಗಳು. ಇಂತಿವೆಲ್ಲವನು ಒಳಗಿಟ್ಟುಕೊಂಡಿಹಾತ `ಓಂ ನಮಃ ಶಿವಾಯ ಎಂಬಾತ ಕಾಣಿರೆ ! ಹೊರಗಿಪ್ಪಾತನು `ಓಂ ನಮಃ ಶಿವಾಯ ಎಂಬಾತ ಕಾಣಿರೆ ! ಉಳಿದಿಪ್ಪಾತನು `ಓಂ ನಮಃ ಶಿವಾಯ ಎಂಬಾತ ಕಾಣಿರೆ ! ಮತ್ತಿದ್ದ ಯೋನಿಜರೆಲ್ಲರೂ ಶಾಪಹತರಾಗಿ ಹೋದರು. ಇದು ಕಾರಣ- `ಓಂ ನಮಃ ಶಿವಾಯ ಎಂಬಾತನೆ ಲಿಂಗವು ಪಂಚಾಕ್ಷರಿಯೆ ಪರಮೇಶ್ವರನು, ಪಂಚಾಕ್ಷರಿಯೆ ಪರಮತತ್ವ, ಪಂಚಾಕ್ಷರಿಯೆ ಪರಮಯೋಗ, ಪಂಚಾಕ್ಷರಿಯೆ ಪರಂಜ್ಯೋತಿ, ಪಂಚಾಕ್ಷರಿಯೆ ಪಾಪಾಂತಕ. `ನ ಎಂಬಕ್ಷರವೆ ದೇವರ ಚರಣ, `ಮ ಎಂಬಕ್ಷರವೆ ದೇವರ ಒಡಲು, `ಶಿ ಎಂಬಕ್ಷರವೆ ದೇವರ ಹಸ್ತ, `ವಾ ಎಂಬಕ್ಷರವೆ ದೇವರ ನಾಸಿಕ, `ಯ ಎಂಬಕ್ಷರವೆ ದೇವರ ನೇತ್ರ. ಮತ್ತೆ ; `ನ ಎಂಬಕ್ಷರವೆ ದೇವರ ದಯೆ, `ಮ ಎಂಬಕ್ಷರವೆ ದೇವರ ಶಾಂತಿ, `ಶಿ ಎಂಬಕ್ಷರವೆ ದೇವರ ಕ್ರೋಧ, `ವಾ ಎಂಬಕ್ಷರವೆ ದೇವರ ದಮನ, `ಯ ಎಂಬ ಅಕ್ಷರವೆ ದೇವರ ಶಬ್ದ, ಮತ್ತೆ ; `ನ ಎಂಬಕ್ಷರವೆ ಪೃಥ್ವಿ, `ಮ ಎಂಬಕ್ಷರವೆ ಅಪ್ಪು, `ಶಿ` ಎಂಬಕ್ಷರವೆ ಅಗ್ನಿ, `ವಾ ಎಂಬಕ್ಷರವೆ ವಾಯು, `ಯ ಎಂಬಕ್ಷರವೆ ಆಕಾಶ. ಮತ್ತೆ; `ನ ಎಂಬಕ್ಷರವೆ ಬ್ರಹ್ಮ, `ಮ ಎಂಬಕ್ಷರವೆ ವಿಷ್ಣು, `ಶಿ ಎಂಬಕ್ಷರವೆ ರುದ್ರ, `ವಾ ಎಂಬಕ್ಷರವೆ ಶಕ್ತಿ, `ಯ ಎಂಬಕ್ಷರವೆ ಲಿಂಗ, ಇಂತು ಪಂಚಾಕ್ಷರದೊಳಗಳಿವಕ್ಷರ ನಾಲ್ಕು, ಉಳಿವಕ್ಷರ ಒಂದು. ಈ ಪಂಚಾಕ್ಷರವನೇಕಾಕ್ಷರವ ಮಾಡಿದ ಬಳಿಕ ದೇವನೊಬ್ಬನೆ ಎಂದರಿದು, ಬ್ರಹ್ಮ ದೈವವೆಂಬ ಬ್ರಹ್ಮೇತಿಕಾರರನೇನೆಂಬೆನಯ್ಯ ! ವಿಷ್ಣು ದೈವವೆಂಬ ವಿಚಾರಹೀನರನೇನೆಂಬೆನಯ್ಯ ! ಅಶ್ವಿನಿ ಭರಣಿ ಕೃತ್ತಿಕೆ ಮೊದಲಾದ ಇಪ್ಪತ್ತೇಳು ನಕ್ಷತ್ರಂಗಳೊಳಗೆ, ಮೂಲಾನಕ್ಷತ್ರದಲ್ಲಿ (ವಿಷ್ಣು) ಹುಟ್ಟಿದನಾಗಿ ಮೂಲನೆಂಬ ಹೆಸರಾಯಿತ್ತು. ದೇವರ ಸೇವ್ಯಕಾರ್ಯಕ್ಕೆ ಪ್ರಾಪ್ತನೆಂದು ವೇದಂಗಳು ಬಿನ್ನೈಸಲು, ಜ್ಯೋತಿಷ್ಯಜ್ಞಾನ ಶಾಸ್ತ್ರಂಗಳು ಹುಸಿಯಾದೆವೆಂದು ನಿಮ್ಮ ಹರಿಯ ಅಡವಿಯಲ್ಲಿ ಬೀಸಾಡಲು, ಅಲ್ಲಿ ಆಳುತ್ತಿದ್ದ ಮಗನ ಭೂದೇವತೆ ಸಲಹಿ, ಭೂಕಾಂತನೆಂಬ ಹೆಸರುಕೊಟ್ಟು, ಭೂಚಕ್ರಿ ತನ್ನ ಪ್ರತಿರೂಪ ತೋಳಲ್ಲಿ ಸೂಡಿಸಿ ಶಿವಧರ್ಮಾಗಮ ಪೂಜೆ ಭಕ್ತಿಯಲ್ಲಿ ಯುಕ್ತನ ಮಾಡಿದ ಬಳಿಕ, ಮತ್ತೆ ನಮ್ಮ ದೇವರ ಶ್ರೀಚರಣದಲ್ಲಿರ್ದು ಒಳಗೆ ತೋರಲು ದೇವರು ಪುರಾಣಂಗ? ಕರೆದು ವಿಷ್ಣುವಿನ ಪಾಪಕ್ಷಯವ ನೋಡಿ ಎಂದರೆ ಆ ಪುರಾಣಂಗಳಿಂತೆಂದವು; ``ಪಾಪಂತು ಮೂಲನಕ್ಷತ್ರಂ ಜನನೀವರಣಂ ಪುನಃ ಪಾಪಂ ತು ಪರ್ವತಸ್ಥೂಲಂ ಶಿವೇ ವೈರಮತಃ ಪರಂ ಶಿವದಾಸೋಹಭಾವೇನ ಪಾಪಕ್ಷಯಮವಾಪ್ನುಯಾತ್ ಎಂದು ಪುರಾಣಂಗಳು ಹೇಳಲಾಗಿ; ವಿಷ್ಣು ಕೇಳಿ, ಪುರಾಣದ ಕೈಯಲು ದೀಕ್ಷಿತನಾಗೆ, ಪುರಾಣ ಪುರುಷೋತ್ತಮನೆಂಬ ಹೆಸರು ಬಳಿಕಾಯಿತ್ತು. ಮತ್ತೆ ನಮ್ಮ ದೇವರ ಪಾದರಕ್ಷೆಯ ತಲೆಯಲ್ಲಿ ಹೊತ್ತುಕೊಂಡು ಭೂತಂಗಳಿಗಂಜಿ ಶಂಖಮಂ ಪಿಡಿದುಕೊಂಡು, ದುರಿತಂಗಳಿಗಂಜಿ ನಾಮವನಿಟ್ಟು, ಪ್ರಳಯಂಗಳಿಗಂಜಿ ವೇಷವ ತೊಟ್ಟು. ರಾಕ್ಷಸರಿಗಂಜಿ ಚಕ್ರಮಂ ಪಿಡಿದು, ಶಿವನ ದಾಸೋಹದ ದಾಸಿಯೆಂದು ಕಸಕಿಲಂ ಪಿಡಿದು ಬಯಲನುಡುಗಿ, ಹೊತ್ತ ನೀರಲ್ಲಿ ಪುತ್ಥಳಿಯ ¸õ್ಞಖ್ಯಮಂ ಮಾಡಿ ಇಪ್ಪತ್ತೇಳು ಲಕ್ಷವರುಷ ಶಿವನ ಸೇವೆಯಂ ಮಾಡಿ ಮತ್ತೆ ಗರುಡವಾಹನ ಸತಿಲಕ್ಷ್ಮಿ ವಾರ್ಧಿಜಯಮಂ ಪಡೆದು ದೇವರ ಎಡದ ಗದ್ದುಗೆಯನೋಲೈಸಿಪ್ಪವನ ದೇವರೆಂದರೆ ನೀವೆಂದಂತೆ ಎಂಬರೆ ? ಕೇಳಿರಣ್ಣಾ ! ವಚನಶುದ್ಧ ಭಾವದಲ್ಲಿ ಭಕ್ತಿಯುಳ್ಳವರು ನೀವು ಹೊತ್ತಿದ್ದ ವೇಷದಲ್ಲಿ ತಿಳಿದು ನೋಡಿ. ತಂದೆತಾಯಿ ಇಂದ್ರಿಯದಲ್ಲಿ ಬಂದವರು ದೇವರೆ ? ಸಂದೇಹ ಭ್ರಮೆಯೊಳಗೆ ಸಿಕ್ಕಿದವರು ದೇವರೆ ? ಶುಕ್ಲ ಶೋಣಿತದೊಳಗೆ ಬೆಳೆದವರು ದೇವರೆ ? ಆ ತಂದೆ ತಾಯ ಹುಟ್ಟಿಸಿದರಾರೆಂದು ಕೇಳಿರೆ; ಹಿಂದೆ ಸಂದ ಯುಗಂಗಳು ಶತಕೋಟಿ ಸಂಖ್ಯೆಯ ಮೇಲೆ ಏಳುನೂರೆಪ್ಪತ್ತುಸಾವಿರ ಯುಗಂಗಳು, ಇದಕ್ಕೆ ನವಕೋಟಿ ನಾರಾಯಣರಳಿದರು, ಶತಕೋಟಿ ಸಂಖ್ಯೆ ಬ್ರಹ್ಮರಳಿದರು ಉಳಿದವರ ಪ್ರಳಯವ ಹೊಗಳಲಿನ್ನಾರ ವಶ ? ಇಂತಿವೆಲ್ಲವನು ಬಿಟ್ಟು ಉಳಿದಿಪ್ಪಾತನೊಬ್ಬನೆ, ಆತಂಗೆ ನಮೋ ಎಂಬೆ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
(ಲಿಂಗಾಂಗಿಗಳೆಂಬರು) ತ್ರಿಪುರಮರ್ದನವರಿಯರು. ಲಿಂಗವಂತರೆಂಬರು ಕಾಮದಹನವ ಮಾಡಲರಿಯರು. ಪ್ರಾಣಲಿಂಗಿಗಳೆಂಬರು ಹರಿಯ ನಷ್ಟವನರಿಯರು. ಲಿಂಗಪ್ರಾಣಿಗಳೆಂಬರು ಬ್ರಹ್ಮನ ಕೊಲಲರಿಯರು. ಇಂತಪ್ಪ ಶಬ್ದಸೂತಕಿಗಳ ಕಂಡು ಕೂಡಲಚೆನ್ನಸಂಗನಲ್ಲಿ ನಾಚಿತ್ತೆನ್ನ ಮನವು.
--------------
ಚನ್ನಬಸವಣ್ಣ
ಹರಿಯ ಹಾದಿಯಲ್ಲಿ ಕರಿಯ ಮಲ್ಲಿಗೆಯ ಕಂಡೆ. ಕರಿಯ ಮಲ್ಲಿಗೆಯ ಕಮಲವ ಕುಯಿದು ಕಾಮಾರಿಯ ಚರಣವನರ್ಚಿಸಬಲ್ಲ ನಿಸ್ಸೀಮ ಶರಣಂಗೆ, ನಾಮ ಸೀಮೆಗಳೆಂದೇನು? ಕಾಲ ಕಲ್ಪಿತವೆಂದೇನು? ನಿರ್ವಿಕಲ್ಪಭಾವದಲ್ಲಿ ಲಿಂಗಾರ್ಚನೆಯ ಮಾಡುವ ಶರಣಂಗೆ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತ್ರಿಭುವನಗಿರಿಯರಸರು ತ್ರೈಲೋಕಪಟ್ಟಣಕ್ಕೆ ದಾಳಿಯನಿಕ್ಕಿದರು. ಆ ಪಟ್ಟಣ ಸುತ್ತಿ ಮುತ್ತಿಕೊಂಡರು. ಏಳು ಭೂದುರ್ಗಂಗಳು ಕೊಳಹೋದವು. ಅರಮನೆಯ ಹೊಕ್ಕರು, ಹನ್ನೆರಡುಸಾವಿರ ರಾಣಿವಾಸವ ಸೆರೆ ಹಿಡಿದರು. ಆನೆಯ ಸಾಲೆಗೆ ಕಿಚ್ಚನಿಕ್ಕಿದರು, ಕುದುರೆಗಳ ಕಾಲ ಹರಿಯ ಹೊಯ್ದರು. ನಾಯಿಗಳ ಕಣ್ಣ ಕೆಡಿಸಿದರು, ಹಿರಿಯರಸನ ಹಿಡಿದುಕೊಂಡರು. ಇಪ್ಪತ್ತೈದು ತಳವಾರರ ನಿರ್ಮೂಲಿಸಿ ಬಿಟ್ಟರು. ಮೂವರ ಮೂಗ ಕೊಯ್ದರು, ಒಬ್ಬನ ಶೂಲಕ್ಕೆ ಹಾಕಿದರು. ಆ ಪಟ್ಟಣದ ಲಕ್ಷ್ಮಿ ಹಾರಿತ್ತು. ಆ ಪಟ್ಟಣದ ಪ್ರಜೆಗಳಿಗೆ ರಣಮಧ್ಯ ಮರಣವಾಯಿತ್ತು. ಆ ರಣಭೂಮಿಯಲ್ಲಿಕಾಡುಗಿಚ್ಚೆದ್ದುರಿಯಿತ್ತು. ಆ ಊರ ನಡುಗಡೆಯಲ್ಲಿ ಒಬ್ಬ ಬೇತಾಳ ನಿಂದಿರ್ದ. ಆ ಬೇತಾಳನ ಮೇಲೆ ಅಕಾಲವರುಷ ಸುರಿಯಿತ್ತು. ಆ ವರುಷದಿಂ ಹದಿನಾಲ್ಕು ಭುವನ, ಸಚರಾಚರಂಗಳಿಗೆ ಶಾಂತಿಯಾಯಿತ್ತು. ಆ ಶಾಂತಿ ವಿಶ್ರಾಂತಿಯಲ್ಲಿ ಹುಟ್ಟಿದ ಸುಖವ, ನಿಮ್ಮ ಉಂಗುಷ್ಟಾಗ್ರದಲ್ಲಿ ಕಂಡ ಘನ[ವ], ಸುರಗಿಯ ಚೌಡಯ್ಯಗಳು ಬಲ್ಲರಲ್ಲದೆ, ನಾನೆತ್ತ ಬಲ್ಲೆನಯ್ಯಾ. ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಹರಿಯ ನಯನ ಹರನ ಶ್ರೀಪಾದದೊಳು ಅಡಕವಾದುದ ಸಟೆಯೆಂಬ ವಿಪ್ರ ನೀ ಕೇಳಾ. ಹರಿ ಸಹಸ್ರಕಮಲದಲ್ಲಿ ಹರನ ಶ್ರೀಪಾದದ ಪೂಜೆ ಮಾಡುತಿರೆ, ಒಂದರಳು ಕುಂದಿದರೆ ನಯನಕಮಲವನೇರಿಸಿ, ಶಿವನ ಪಾದಕೃಪೆಯಿಂದ ಶಂಖ ಚಕ್ರವ ಪಡೆದುದು ಹುಸಿಯೆ ? ಹುಸಿಯಲ್ಲ. ಮತ್ತೆ ಹೇಳುವೆ ಕೇಳು ದ್ವಿಜ. ಹರಿಯಜರಿಬ್ಬರು ಹರನ ಶ್ರೀಪಾದಮಗುಟವ ಕಾಣ್ಬೆನೆಂದು ವರಗೃಧ್ರಗಳಾದುದು ಸಟೆಯೇ ? ಸಾಕ್ಷಿ :``ಯುಗ್ಧಸಂಯುಕ್ತ ಉಭಯ ಚ ದೃಷ್ಟ ಬ್ರಾಹ್ಮಣ ರಾಜಸಬದ್ಧ ವರಗೃಧ್ರ |'' (?) ಎಂದುದಾಗಿ, ಹದ್ದು ಹೆಬ್ಬಂದಿಯಾಗಿ ಶ್ರೀಪರಮಾತ್ಮನ ಮಗುಟಚರಣವ ಕಾಣದೆ ತೊಳಲಿ ಬಳಲುತಿರಲು, ಹರಿಯಜರ ಮಧ್ಯದಲ್ಲಿ ಉರಿಲಿಂಗವಾದ ಪರಮಾತ್ಮನ ನಿಲವನರಿಯದೆ, ಅನ್ಯದೈವವ ತಂದು ಪನ್ನಗಧರಗೆ ಸರಿಯೆಂಬ ಕುನ್ನಿಮಾನವರ ತಲೆಕೆಳಗಾಗಿ ನರಕಕ್ಕೆ ಕೆಡುವುದ ಮಾಣ್ಬನೆ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಗಂಡನುಳ್ಳ ಗರತಿಯರೆಲ್ಲರು ನಿಮ್ಮ ಗಂಡನ ಕುರುಹ ನೀವು ಹೇಳಿರೆ ; ನೀವರಿಯದಿರ್ದಡೆ ನಾವು ನಮ್ಮ ಗಂಡರ ಕುರುಹ ಹೇಳಿಹೆವು ಕೇಳಿರೆ. ಹೊಳೆವ ಕೆಂಜೆಡೆಗಳ, ಬೆಳಗುವ ಭಾಳಲೋಚನದ, ಥಳಥಳಿಪ ಸುಲಿಪಲ್ಲಿನ, ಕಳೆದುಂಬಿ ನೋಡುವ ಕಂಗಳ ನೋಟದ, ಸೊಗಸಿಂದೆ ನಗುವ ಮುಗುಳುನಗೆಯ, ರತ್ನದಂತೆ ಬೆಳಗುವ ರಂಗುದುಟಿಯ, ಚಂಪಕದ ನಗೆಯಂತೆ ಸೊಂಪಾದ ನಾಸಿಕದ, ಶಶಿಯಂತೆ ಬೆಳಗುವ ಎಸೆವ ಕದಪಿನ, ಮಿಸುಪ ಎದೆ ಭುಜ ಕಂಠದ, ಶೃಂಗಾರದ ಕುಕ್ಷಿಯ, ಸುಳಿದೆಗೆದ ನಾಭಿಯ, ತೊಳಪ ತೊಡೆಮಣಿಪಾದಹರಡಿನ, ನಕ್ಷತ್ರದಂತೆ ಹೊಳೆವ ನಖದ ಪಂಕ್ತಿಯ ಚರಣಕಮಲದಲ್ಲಿ ಹರಿಯ ನಯನದ ಕುರುಹಿನ. ಸಕಲಸೌಂದರ್ಯವನೊಳಕೊಂಡು ರವಿಕೋಟಿಪ್ರಭೆಯಂತೆ ರಾಜಿಸುವ ರಾಜಾಧಿರಾಜ ನಮ್ಮ ಅಖಂಡೇಶ್ವರನೆಂಬ ನಲ್ಲನ ಕುರುಹು ಇಂತುಟು ಕೇಳಿರವ್ವಾ.
--------------
ಷಣ್ಮುಖಸ್ವಾಮಿ
ಆನು ಶುದ್ಧಧವಳಿತನು ಎನಗೆ ಅನಾದಿ ಬಂದು ಹೊದ್ದಿದ ಕಾರಣವೇನಯ್ಯಾ ? ಜಲವ ಮೊಗೆಯೆ ಬಂದೆನೇಕಯ್ಯಾ ? ಗಿಡುವ ಹರಿಯ ಬಂದೆನೇಕಯ್ಯಾ ? ಎಲ್ಲರ ನಡುವೆ ಕುಳ್ಳಿರ್ದು ಗೀತವ ಹಾಡಬಂದೆನೇಕಯ್ಯಾ ? ಬಸವಣ್ಣ ಚೆನ್ನಬಸವಣ್ಣಯೆಂಬೆರಡು ಶಬ್ದವೇಕಾದವು ಹೇಳಾ, ಕೂಡಲಚೆನ್ನಸಂಗಮದೇವಾ ?
--------------
ಚನ್ನಬಸವಣ್ಣ
ಏರುವಡೆ ಮೊಲನಾಗನ ಗದ್ದುಗೆ ಕಪಾಲ ಕೈಯಲ್ಲಿ, ಹೇಳುವಡೆ ಹರಿಯ ಹೆಗಲಲ್ಲಿ ನೋಡಾ. ಬಿಚ್ಚಿ ಹೊದೆವಡೆ ನಾರಸಿಂಹನ ಹಸಿಯ ತೊವಲು. ಉಬ್ಬಿ ಹಿಡಿವಡೆ ನಿನಗಾದಿ ವರಹನ ದಾಡೆ. ನಲಿದು ಪಿಡಿವಡೆ ನಿನಗೆ ತ್ರಿವಿಕ್ರಮನ ನಿಟ್ಟೆಲುವು. ಕಲಿಗಳ ತಲೆಗಳ ಮಾಲೆಗಳಾರಾದಡೇನು [ಯೋಗ್ಯವೆ] ? ಸುಡು ಬಿಡು, ಎಲುವುಗಳ ಮುಟ್ಟುವರೆ ಸೊಡ್ಡಳಾ.
--------------
ಸೊಡ್ಡಳ ಬಾಚರಸ
ವದನದ್ವಾರಕ್ಕೆ ಗುದದ್ವಾರ ಸರಿಯೆಂದು, ಗುದದ್ವಾರದಲ್ಲಿ ಬಂದುದ ವದನದ್ವಾರದಲ್ಲಿ ಕೊಂಬವಂಗೆ ಹೋ ಹೋ ! ಹರಂಗೆ ಹರಿಯ ಸರಿಯೆನಬಹುದು. ಯಾದಾಸ್ಯಾಪಾನಯೋಃ ಸಾಮ್ಯಂ ಇಂದ್ರತ್ವೇಪಿ ನ ವಿದ್ಯತೇ | ತಥಾ ವಿಷ್ಣ್ವಾದಿ ಬುಧೈಸ್ತು ರುದ್ರಸಾಮ್ಯಂ ನ ವಿದ್ಯತೇ || ಇಂತೆಂದುದಾಗಿ, ಇದು ಕಾರಣ, ಹರಿವಿರಿಂಚಾದಿ ದೇವತೆಗಳನು ಶಿವಂಗೆ ಸರಿಯೆಂದು ಗಳಹುವ ನರಕಿಗಳ ಬಾಯಲಿ ಹುಳು ಸುರಿಯದಿಹವೆ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ ?
--------------
ಸಂಗಮೇಶ್ವರದ ಅಪ್ಪಣ್ಣ
ಇನ್ನಷ್ಟು ... -->