ಅಥವಾ

ಒಟ್ಟು 65 ಕಡೆಗಳಲ್ಲಿ , 22 ವಚನಕಾರರು , 51 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೈದು ಮೊನೆ ಏರುವದಕ್ಕೆ ಮೊದಲೇ ಕಟ್ಟಬಲ್ಲಡೆ ಕೈದೇನ ಮಾಡುವುದು ? ಹಾವು ಬಾಯಿ ಬಿಡುವುದಕ್ಕೆ ಮೊದಲೇ ಹಿಡಿದ ಮತ್ತೆ ವಿಷವೇನ ಮಾಡುವುದು ? ಮನ ವಿಕಾರಿಸುವುದಕ್ಕೆ ಮೊದಲೇ ಮಹದಲ್ಲಿ ನಿಂದ ಮತ್ತೆ ಇಂದ್ರಿಯಂಗಳೇನ ಮಾಡಲಾಪವು, ಜಾಂಬೇಶ್ವರಾ ?
--------------
ರಾಯಸದ ಮಂಚಣ್ಣ
ಕೋಡಗ ಬಲಿದು ಕೋಣನಾಗಿ, ಕೋಣನ ಕೋಡಿನಲ್ಲಿ ಈರಾರು ಸೇನೆ ಸೇನೆಗೊಬ್ಬ ಭಟ, ಭಟಗೆ ಮೂವರು ಸತಿಯರು. ಸತಿಯರ ಕುಚದ ನಡುವೆ ಒಂದು ಕಸ. ಹಾವು ಕಚ್ಚಿ ಭಟರೆಲ್ಲರೂ ಸತ್ತರು. ನಿಬ್ರ್ಥೀತಿವಂತರು ಕೇಳಿ ಬಂಕೇಶ್ವರಲಿಂಗವ.
--------------
ಸುಂಕದ ಬಂಕಣ್ಣ
ಹುತ್ತದೊಳಗಳ ಹಾವು ಹದ್ದಿನ ಹೊಟ್ಟೆಯೊಳಗಳ ತತ್ತಿ ನುಂಗಿತ್ತು. ಗಿಡುಗನ ಉಡು ನುಂಗಿ, ಹೊಡೆವವನ ದಡಿ ನುಂಗಿತ್ತು. ಹಾವನು ಹದ್ದಿನ ತತ್ತಿಯ, ಗಿಡುಗನ ಉಡುವ, ಹೊಡೆವವನ ಡೊಣ್ಣೆಯ ಬಾಯಿಲ್ಲದ ಇರುಹೆ ನುಂಗಿತ್ತು ಕಂಡೆ. ಸದಾಶಿವಮೂರ್ತಿಲಿಂಗವು ಬಚ್ಚಬಯವಾಯಿತ್ತು.
--------------
ಅರಿವಿನ ಮಾರಿತಂದೆ
ಹಾವು ಹುಲಿ ಕಳ್ಳರ ಭಯವೆಂದು ಹೇಳಿದವರ ಮೇಲೆ ನೋವುಂಟೆ? ನೋವಾದಡಾಗಲಿ, ಇದರಿಂದ ಎನಗೆ ಕೇಡಿಲ್ಲ. ಕಂಡು ಸುಮ್ಮನಿದ್ದಡೆ, ಆ ಗುರುವಿನ ಸುಖದುಃಖ ಎನ್ನದಾಗಿ, ಸಮಯಕ್ಕಂಜಿದಡೆ ಎನ್ನ ಮಾಡುವ ಮಾಟ ಎನ್ನ ಕೇಡು, ಎನ್ನ ಅರಿವು ಮರವೆಯಲ್ಲಿದ್ದಡೆ, ಭವದುಃಖಕ್ಕೆ ಬೀಜ. ಎನ್ನ ಕೈಯಲ್ಲಿ ಎನ್ನಂಗವ ತೊಳೆಯಬೇಕಲ್ಲದೆ ಅನ್ಯರಿಗೆ ಹೇಳಲೇಕಯ್ಯಾ? ಇಂತೀ ಮೂರರೊದಗ ನಾ ಮಾಡಿ ಹಾನಿಯ ಪಡೆವುದಕ್ಕೇನು? ಅಂದಿಗೇನಾದಡಾಗಲಿ ಇಂದಿಗೆ ಶುದ್ಧ, ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಹಾವಡಿಗನು ಮೂಕೊರತಿಯು: ತನ್ನ ಕೈಯಲ್ಲಿ ಹಾವು, ಮಗನ ಮದುವೆಗೆ ಶಕುನವ ನೋಡಹೋಹಾಗ ಇದಿರಲೊಬ್ಬ ಮೂಕೊರತಿಯ ಹಾವಡಿಗನ ಕಂಡು, ಶಕುನ ಹೊಲ್ಲೆಂಬ ಚದುರನ ನೋಡಾ. ತನ್ನ ಸತಿ ಮೂಕೊರತಿ, ತನ್ನ ಕೈಯಲ್ಲಿ ಹಾವು, ತಾನು ಮೂಕೊರೆಯ. ತನ್ನ ಬ್ಥಿನ್ನವನರಿಯದೆ ಅನ್ಯರನೆಂಬ ಕುನ್ನಿಯನೇನೆಂಬೆ ಕೂಡಲಸಂಗಮದೇವಾ 105
--------------
ಬಸವಣ್ಣ
ಅದ್ವೈತವ ಅಂತರಂಗದಲ್ಲಿ ಅರಿದು ಹೊರಗೆ ದಾಸೋಹವ ಮಾಡದಿರ್ದಡೆ ಎಂತಯ್ಯಾ ಉಭಯ ಸಂದೇಹದಲ್ಲಿ ನಿಜವಪ್ಪುದು ನಿಮ್ಮ ಶರಣರ ಮನ ನೊಂದಲ್ಲಿ ನಾನು ಸೈರಿಸಿಕೊಂಬೆನೆಂತಯ್ಯಾ ಕೂಡಲಸಂಗಮದೇವಾ, ಹಾವು ಸಾಯದೆ ಕೋಲು ನೋಯದಂತೆ ಮಾಡಾ, ನಿಮ್ಮ ಧರ್ಮ.
--------------
ಬಸವಣ್ಣ
ಆಡು ತೋಳನ ಮುರಿದಾಗ, ಮೊಲ ನಾಯ ಕಚ್ಚಿತ್ತು. ಕಚ್ಚುವುದ ಕಂಡು ಹದ್ದು ಹಾರಲಾಗಿ ಆ ಹದ್ದ ಹಾವು ಕಚ್ಚಿ ಸತ್ತಿತ್ತು; ವಿಷವೇರಿ ಹೋಯಿತ್ತು ಗಾರುಡ. ನಾರಾಯಣಪ್ರಿಯ ರಾಮನಾಥನಲ್ಲಿ ಐಕ್ಯಾನುಭಾವಿಯಾದ ಶರಣಂಗೆ.
--------------
ಗುಪ್ತ ಮಂಚಣ್ಣ
ಮಹಾಮಲೆಯ ವ್ಯಾಘ್ರನ ನೀರ ನಕ್ರ ಕಚ್ಚಿ, ನಕ್ರನ ಹಂದಿ ಕಚ್ಚಿ, ಹಂದಿಯ ನಾಯಿ ಕಚ್ಚಿ, ನಾಯಿಯ ಕಾಳೋರಗ ಕಚ್ಚಿ ಹೆಡೆಯೆತ್ತಿ ಆಡಲಾಗಿ, ಆಕಾಶದ ಹದ್ದು ಕಂಡು ಎರಗಲಾಗಿ, ಹೆಡೆಯುಡಿಗಿ ಸುನಿಗಳು ಬಿಟ್ಟು, ಹಂದಿ ಸತ್ತು, ನಕ್ರ ಬಿದ್ದು, ವ್ಯಾಘ್ರ ಪಲಾಯನವಾಗಿ, ಹಾವ ಹದ್ದು ಕಚ್ಚಿ, ಹದ್ದು ಹಾವ ಕಚ್ಚಿ, ಹದ್ದಳಿದು ಹಾವು ಉಳಿದ ಭೇದವ ತಾನೆ ಬಲ್ಲನಲ್ಲದೆ ಈ ಲೋಕದ ಜಡಜೀವಿಗಳೆತ್ತ ಬಲ್ಲರಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ತನುವೆಂಬ ಹುತ್ತಕ್ಕೆ ಮನವೆಂಬ ಸರ್ಪ ಆವರಿಸಿ, ಹೆಡೆಯೆತ್ತಿ ಆಡುತ್ತಿರಲು, ಆ ಸರ್ಪನ ಕಂಡು, ನಾ ಹೆದರಿಕೊಂಡು, ಗುರುಕರುಣವೆಂಬ ಪರುಷವ ತಂದು ಮುಟ್ಟಿಸಲು, ನೋಟ ನಿಂದಿತ್ತು, ಹೆಡೆ ಅಡಗಿತ್ತು, ಹಾವು ಬಯಲಾಯಿತ್ತು. ಆ ಗುರುಕರುಣವೆಂಬ ಪರುಷವೆ ನಿಂದಿತ್ತು. ನಿಂದ ಪರುಷವನೆ ಕೊಂಡು ನಿಜದಲ್ಲಿ ನಿರ್ವಯಲಾಗುವ ಶರಣರ ಪಾದವ ನಂಬಿ ಕೆಟ್ಟು ಬಟ್ಟಬಯಲಾದೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ವಜ್ರದ ಮನೆಯೊಳಗಿರ್ದು, ಗೊರಲೆ ಮುಟ್ಟಿತೆಂಬ ಸಂದೇಹವೇಕೆ ? ಭದ್ರಗಜ ಮೇಲೆ ಬರುತಿರ್ದು ಕೆಳಗಿರ್ದ ಗುಜ್ಜನಾಯಿ ಮುಟ್ಟಿತೆಂಬ ಸಂದೇಹವೇಕೆ ? ಸಂಜೀವನ ಕೈಯ ಸಾರಿರ್ದು ಇಂದಿಗೆ ನಾಳಿಗೆಂಬ ಸಂದೇಹವೇಕೆ ? ಸಜ್ಜನ ಸದ್ಭಕ್ತರ ಸಂಗದೊಳಗಿರ್ದು, ಸತ್ತೆನೋ, ಬದುಕಿದೆನೋ ಎಂಬ ಸಂದೇಹವೇಕೆ ? ಹತ್ತರಡಿಯ ಬಿದ್ದ ಹಾವು ಸಾಯದೆಂದು ಗಾದೆಯ ಮಾತ ನುಡಿವರು. ನಿತ್ಯರಪ್ಪ ಶರಣರ ಸಂಗದೊಳಗಿರ್ದು, ಮತ್ತೊಂದು ಉಂಟೆಂದು ಭಾವಿಸಿ ನೋಡುವ ಕತ್ತೆಮನುಜರ ಅತ್ತ ಹೊದ್ದದೆ, ಇತ್ತಲೆ ನಿಂದು ನಾಚಿ ನಗುತಿರ್ದ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ .
--------------
ಹಡಪದ ಅಪ್ಪಣ್ಣ
ಊರಿನ ಹಾದಿಯಲ್ಲಿ ಹೋಗುತ್ತಿರಲಾಗಿ, ಎಯ್ದಿ ಬಂದಿತ್ತೊಂದು ಹಾವು. ಆರೂ ಇಲ್ಲದ ಠಾವಿನಲ್ಲಿ ಅದ ಮೀರಿ ಹೋಗಲಂಜಿದೆ. ಓಡಿದಡಟ್ಟಿತ್ತು ಮೀರಿ ನಿಂದಡೆ ಕಚ್ಚಿತ್ತು. ಗಾರಾದೆನಯ್ಯಾ ಈ ಹಾವ ಕಂಡು. ಹೋಗಲಿಲ್ಲ ನಿಲ್ಲಲಿಲ್ಲ, ಇದಕ್ಕಾರದೆ ಮೀರಿ ಹಿಡಿದ ಹಾವು ನಟ್ಟನಡುವೆ ಹಿಡಿಗೊಳಗಾಗಿ ಕಚ್ಚಿತ್ತು. [ಆ] ಹಾ[ವಿಗೆ] ತಲೆಯಿದ್ದಂತೆ ಬಾಲದಲ್ಲಿ [ವಿಷ]. ಬಾಲದ ವಿಷ ತಾಗಿ, ಊರೆಲ್ಲರೂ ಸತ್ತರು. ನಾ ಬದುಕಿದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕೋಡಗ ಜೋಗಿನಾಡಿಸುವುದ ಕಂಡೆ. ಹಾವು ಹಾವಾಡಿಗನ ಗಾರುಡವನಿಕ್ಕಿ, ಹೇಳಿಗೆಯ ಬಂಧನದಲ್ಲಿ ಕೂಡಿ ಕಾಡುವುದ ಕಂಡೆ. ಉರಿಗೆಂಡ ತೃಣಕಂಜಿ, ಅಲ್ಲಿಯೆ ಅಡಗಿ ತನ್ನ ಉಷ್ಣವಿಲ್ಲದುದ ಕಂಡೆ. ಇಂತೀ ದೃಷ್ಟವ ಮರೆದು, ಇಷ್ಟವನರಿಯದ ವಿಶ್ವಾಸಹೀನರು, ನಿಃಕಳಂಕ ಮಲ್ಲಿಕಾರ್ಜುನಲಿಂಗವನರಿಯದೆ ಹೋದರು.
--------------
ಮೋಳಿಗೆ ಮಾರಯ್ಯ
ಹಾವು ಹದ್ದು ಕಾಗೆ ಗೂಗೆ ಅನಂತಕಾಲ ಬದುಕವೆ ಬೇಡವೋ ಮಾನವಾ, ಲೇಸೆನಿಸಿಕೊಂಡು ಬದುಕು, ಓ ಮಾನವಾ ಶಿವಭಕ್ತನಾಗಿ. ಅದೆಂತೆಂದಡೆ; ಜೀವಿತಂ ಶಿವಭಕ್ತಾನಾಂ ವರಂ ಪಂಚದಿನಾನಿ ಚ ನಾಜಕಲ್ಪಸಹಸ್ರಾಣಿ ಭಕ್ತಿಹೀನಸ್ಯ ಶಾಂಕರಿ ಎಂದುದಾಗಿ, ನಮ್ಮ ಕೂಡಲಸಂಗಮದೇವರ ಭಕ್ತಿವಿಡಿದು, ಐದು ದಿವಸವಾದಡೂ ಬದುಕಿದಡೆ ಸಾಲದೆ
--------------
ಬಸವಣ್ಣ
ಕೋಡಗದ ತಲೆಯ ಚಂಡಿನ ಮೇಲೆ ಮೂರುಕವಲಿನ ಸೂಜೆ. ಮೂರರ ಮನೆಯಲ್ಲಿ ಐದು ಬೆಟ್ಟವಡಿಗಿದವು. ಬೆಟ್ಟದ ತುತ್ತತುದಿಯಲ್ಲಿ ಮಟ್ಟಿಲ್ಲದ ಬಾವಿ. ಬಾವಿಯೊಳಗೊಂದು ಹಾವು ಹುಟ್ಟಿತ್ತು. ಆ ಹಾವಿನ ಮೈಯೆಲ್ಲವೊ ಬಾಯಿ. ಬಾಲದಲ್ಲಿ ಹೆಡೆ ಹುಟ್ಟಿ, ಬಾಯಲ್ಲಿ ಬಾಲ ಹುಟ್ಟಿ, ಹರಿವುದಕ್ಕೆ ಹಾದಿಯಿಲ್ಲದೆ, ಕೊಂಬುದಕ್ಕೆ ಆಹಾರವಿಲ್ಲದೆ ಹೊಂದಿತ್ತು. ಆ ಹಾವು ಬಾವಿಯ ಬಸುರಿನಲ್ಲಿ ಬಾವಿಯ ಬಸುರೊಡೆದು ಹಾವಿನ ಇಲು ನುಂಗಿ ಬೆಟ್ಟ ಚಿಪ್ಪು ಬೇರಾಗಿ ಸೂಜಿಯ ಮೊನೆ ಮುರಿದು ಕೋಡಗದ ಚಂಡು ಮಂಡೆಯ ಬಿಟ್ಟು ಹಂಗು ಹರಿಯಿತ್ತು. ಆತ್ಮನೆಂಬ ಲಿಂಗ ನಾಮ ರೂಪಿಲ್ಲ ನಾರಾಯಣಪ್ರಿಯ ರಾಮನಾಥನಲ್ಲಿ ಶಬ್ದಮುಗ್ಧನಾದ ಶರಣಂಗೆ.
--------------
ಗುಪ್ತ ಮಂಚಣ್ಣ
ಹಾವು, ಕಿಚ್ಚ ಮುಟ್ಟಿಹ ಶಿಶುವೆಂದು ಹೆತ್ತತಾಯಿ ಮಗನ ಬೆಂಬತ್ತಿ ಬಪ್ಪಂತೆ ಇಪ್ಪ ನೋಡಾ, ಎನ್ನೊಡನೊಡನೆ ಕೂಡಲಸಂಗಮದೇವ ಕಾಯ್ದುಕೊಂಡಿಪ್ಪನಾಗಿ.
--------------
ಬಸವಣ್ಣ
ಇನ್ನಷ್ಟು ... -->