ಅಥವಾ

ಒಟ್ಟು 45 ಕಡೆಗಳಲ್ಲಿ , 20 ವಚನಕಾರರು , 34 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಷ್ಟಲಿಂಗ ಸಂಬಂಧವಾದ ಬಳಿಕ ಕಾಯಗುಣ ಕೆಟ್ಟು ಲಿಂಗವಾಯಿತ್ತು. ಪ್ರಾಣಲಿಂಗ ಸಂಬಂಧವಾದ ಬಳಿಕ ಕರಣಗುಣ ಕೆಟ್ಟು ಲಿಂಗಕರಣಂಗಳಾದುವು. ಭಾವಲಿಂಗ ಸಂಬಂಧವಾದ ಬಳಿಕ ಇಂದ್ರಿಯಗುಣ ಕೆಟ್ಟು ಲಿಂಗೇಂದ್ರಿಯಗಳಾದುವು. ಇದು ಕಾರಣ- ಶರಣಂಗೆ ಬೇರೆ ಲಿಂಗವಿಲ್ಲ, ಬೇರೆ ಅಂಗವಿಲ್ಲ. ಅರ್ಪಿತ ಅನರ್ಪಿತವೆಂಬ ಉಭಯ ಶಂಕೆ ಹಿಂಗಿತ್ತು, ಕೂಡಲಚೆನ್ನಸಂಗಯ್ಯಾ ನಿನ್ನೊಳಡಗಿದ ನಿಜೈಕ್ಯಂಗೆ
--------------
ಚನ್ನಬಸವಣ್ಣ
ನೆನಹು ಸತ್ತಿತ್ತು ಭ್ರಾಂತು ಬೆಂದಿತ್ತು. ಅರಿವು ಮರೆಯಿತ್ತು ಕುರುಹುಗೆಟ್ಟಿತ್ತು. ಗತಿಯನರಸಲುಂಟೆ? ಮತಿಯನರಸಲುಂಟೆ? ಅಂಗವೆಲ್ಲ ನಷ್ಟವಾಗಿ ಲಿಂಗಲೀಯವಾಯಿತ್ತು. ಕಂಗಳಂಗದ ಕಳೆಯ ಬೆಳಗಿನ ಭಂಗ ಹಿಂಗಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ವಾಸನೆ ಕಾರಣ ನೊಣವಿನ ಮಲ ಜೇನುತುಪ್ಪವೆಂದೆನಿಸಿತ್ತು, ಪರಿಮಳ ಕಾರಣ ಕೋಣನ ಮಾಂಸ ವಾಣಿಜ್ಯತೆ ಇಂಗು ಎನಿಸಿತ್ತಯ್ಯಾ, ಭಕ್ತಿ ಕಾರಣ ಎನ್ನಲುಳ್ಳ ಅವಗುಣ ಹಿಂಗಿತ್ತು ಕಾಣಾ, ಕೂಡಲಸಂಗಮದೇವಾ.
--------------
ಬಸವಣ್ಣ
ಎರಡು ಒಂದಾದ ಬಳಿಕ ಅರ್ಚನೆ ಹಿಂಗಿತ್ತು. ಎರಡು ಒಂದಾದ ಬಳಿಕ ಅರ್ಪಿತ ಹಿಂಗಿತ್ತು. ಎರಡು ಒಂದಾದ ಬಳಿಕ ಆಚಾರ ಹಿಂಗಿತ್ತು. ಎರಡು ಒಂದಾದ ಬಳಿಕ ಅವಧಾನ ಹಿಂಗಿತ್ತು. ಎರಡು ಒಂದಾದ ಬಳಿಕ ಶಬ್ದಕ್ಕೆ ಇಂಬಿಲ್ಲ ರೂಹಿಸಲೆಡೆಯುಂಟೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಅಯ್ಯಾ, ಕೊಟ್ಟ ಲಿಂಗವ ಮರಳಿ ಕೊಂಡು ಬಾ ಎಂದು ಎನ್ನನಟ್ಟಿದನಯ್ಯಾ ಶಶಿಧರನು ಮತ್ರ್ಯಕ್ಕೆ. ನಿಮ್ಮ ಮುಖದಿಂದ ಎನ್ನ ಭವ ಹರಿವುದೆಂದು ಹರಹಿಕೊಂಡಿದ್ದೆನಯ್ಯಾ ದಾಸೋಹವನು. ನಿಮ್ಮ ಬರವ ಹಾರಿ ಸವೆದವು ಒಂದನಂತ ದಿನಗಳು, ಇಂದೆನ್ನ ಪುಣ್ಯದ ಫಲದಿಂದ ಎನಗೆ ಗೋಚರವಾದಿರಿ, ಹಿಂದಣ ಸಂದೇಹ ಸೂತಕ ಹಿಂಗಿತ್ತು. ಎನ್ನ ಪ್ರಾಣಲಿಂಗವು ನೀವೇ ಆಗಿ, ಎನ್ನ ಸರ್ವಾಂಗಲಿಂಗದಲ್ಲಿ ಸನ್ನಿಹಿತವಾಗಿ, ಎನ್ನ ಚಿಂತೆಯ ನಿಶ್ಚಿಂತೆಯ ಮಾಡಾ ಕೂಡಲಸಂಗಮದೇವ ಪ್ರಭುವೆ.
--------------
ಬಸವಣ್ಣ
ದಾಸಿಯ ವರ್ಗದಲ್ಲಿಪ್ಪೆನು ಶಿವಶರಣರ ಮನೆಯಲ್ಲಿ. ಅವರೊಕ್ಕುದನುಂಡು, ಮಿಕ್ಕುದ ಕಾಯ್ದುಕೊಂಡಿಪ್ಪ ಕಾರಣ ಕಾಲ ಮುಟ್ಟಲಮ್ಮನು, ಕಲ್ಪಿತ ತೊಡೆುತ್ತು. ಭವಬಂಧನ ಹಿಂಗಿತ್ತು, ಕರ್ಮ ನಿರ್ಮಳವಾಗಿತ್ತು. ಅವರ ತೊತ್ತಿನ ತೊತ್ತಿನ ಪಡಿದೊತ್ತಿನ ಮಗನೆಂದು ಕೂಡಲಸಂಗಮದೇವನು `ಇತ್ತ ಬಾ ಎಂದು ಎತ್ತಿಕೊಂಡನು. 473
--------------
ಬಸವಣ್ಣ
ಅಂತರಂಗದ ಅರಿವು, ಬಹಿರಂಗದ ಕ್ರಿಯೆ- ಈ ಉಭಯಸಂಪುಟ ಒಂದಾದ ಶರಣಂಗೆ ಹಿಂಗಿತ್ತು ತನುಸೂತಕ, ಹಿಂಗಿತ್ತು ಮನಸೂತಕ. ಕೂಡಲಚೆನ್ನಸಂಗಯ್ಯಲ್ಲಿ ಸಂಗವಾದುದು ಸರ್ವೇಂದ್ರಿಯ.
--------------
ಚನ್ನಬಸವಣ್ಣ
ಜೀವಕುಳವಳಿಯಿತ್ತು, ಜ್ಞಾನಕುಳ ಉಳಿಯಿತ್ತು. ಭವಪಾಶ ಹರಿಯಿತ್ತು, ಅಜ್ಞಾನ ಹಿಂಗಿತ್ತು. ಎಲೆ ಗೋಪತಿನಾಥ ವಿಶ್ವೇಶ್ವರಲಿಂಗಾ, ನಿನ್ನತ್ತ ಮನವಾಯಿತ್ತೆನಗೆ ಕೃಪೆಮಾಡು ಕೃಪೆಮಾಡು ಶಿವಧೋ ಶಿವಧೋ.
--------------
ತುರುಗಾಹಿ ರಾಮಣ್ಣ
ಮೂರು ಪಂಚಭೂತದಿಂದ ಗಾರಪ್ಪುದು [ಬೇರೆ] ಮಾಡಿ, ಮೂರು ಕರ್ಮ ಮೂರು ತಾಪ ಮೂರು ಮಲಂಗಳ ಹಾರ ಹೊಯ್ದು, ಊರಿದ್ದ ಲಿಂಗವ ತಂದು, ಊರಿ ತೋರಿದನಯ್ಯಾ ಕರಸ್ಥಲದಲ್ಲಿ. ದೀಕ್ಷಾನ್ವಯವನನ್ವಯಿಸಿದ ಶ್ರೀಗುರು ಸೌರಾಷ್ಟ್ರ ಸೋಮೇಶ್ವರಾ, ನೀನೆನ್ನ ಉತ್ತಮಾಂಗದಲ್ಲಿ ನೆಲಸಿದೆಯಾಗಿ ಭವ ಹಿಂಗಿತ್ತು.
--------------
ಆದಯ್ಯ
ಸಾಕಯ್ಯಾ, ಲೋಕದ ಹಂಗು ಹರಿಯಿತ್ತು ತನುವಿನಾಸೆ ಬಿಟ್ಟಿತ್ತು ಮನದ ಸಂಚಲ ನಿಂದಿತ್ತು. ನುಡಿಗಡಣ ಹಿಂಗಿತ್ತು ಘನವಬೆರೆಯಿತ್ತು, ಬೆಳಗಕೂಡಿತ್ತು. ಬಯಲಿನೊಳಗೋಲಾಡಿ ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಎನ್ನ ಕಾಯದ ಕತ್ತಲೆ ಹಿಂಗಿತ್ತು, ಚೆನ್ನಬಸವಣ್ಣಾ ಇಂದಿನಲ್ಲಿ. ಎನ್ನ ತನುಮನಧನದ ಲೋಭವಳಿದು ತಳವೆಳಗಾಯಿತ್ತು, ಚೆನ್ನಬಸವಣ್ಣಾ ಇಂದಿನಲ್ಲಿ. ಎನ್ನನೆಡೆಗೊಂಡ ಅಹಂಕಾರ ನಿರ್ವಯಲಾಯಿತ್ತು ಚೆನ್ನಬಸವಣ್ಣಾ ಇಂದಿನಲ್ಲಿ. ಕೂಡಲಸಂಗಮದೇವರ ತೃಪ್ತಿಯ ತೆರನ ನೀನು ತೋರಿದೆಯಾಗಿ ನಾನು ಬದುಕಿದೆ ಕಾಣಾ, ಚೆನ್ನಬಸವಣ್ಣಾ.
--------------
ಬಸವಣ್ಣ
ಹರನಿಂದೆ ಗುರುನಿಂದೆ ಪರನಿಂದ್ಯವ ತೊರೆದು ಶಿವಕೇಳಿಯೊಳಿಂಬುಗೊಂಡ ಕರ್ಣಕ್ಕೆ ಕರ್ಣೇಂದ್ರಿಯವೆಲ್ಲಿಹುದೋ ? ಕಾಮವೆಂಬ ಶೀತ, ಕ್ರೋಧವೆಂಬ ಉಷ್ಣ , ಮೋಹನ ಮುದ್ದುಮುಖ ಮೊಲೆ, ಅಂಗನೆಯೆಂಬ ಮೃದು, ವಿಷಯಾತುರವೆಂಬ ಕಠಿಣವ ಮುಟ್ಟದೆ, ಲಿಂಗ ಮುಟ್ಟಿ ಲಿಂಗವ ಪೂಜಿಸಿ ಲಿಂಗವ ಮೋಹಿಪ ಹಸ್ತಕ್ಕೆ ತ್ವಗಿಂದ್ರಿಯವೆಲ್ಲಿಯದೋ ? ಶ್ವೇತ ಪೀತ ಹರಿತ ಮಾಂಜಿಷ್ಟ ಮಾಣಿಕ್ಯ ಕಪೋತವರ್ಣವೆಂಬ ಷಡುರೂಪವ ಕಳೆದು ಲಿಂಗದ ಷಡುರೂಪದೊಳಿಂಬುಪಡೆದುಕೊಂಡು ಅನುಮಿಷದೃಷ್ಟಿ ಇಟ್ಟ ನಯನಕ್ಕೆ ನೇತ್ರೇಂದ್ರಿಯವೆಲ್ಲಿಯದೊ ? ತಿಕ್ತ ಕಟು ಕಷಾಯ ಮಧುರ ಆಮ್ಲ ಲವಣವೆಂಬ ಷಡುರುಚಿಗೆಳಸದೆ, ಲಿಂಗಾನುಭಾವಾಮೃತವ ಸೇವಿಪ ಜಿಹ್ವೆಗೆ ಜಿಹ್ವೇಂದ್ರಿಯವೆಲ್ಲಿಯದೋ ? ಗಂಧ ದುರ್ಗಂಧವನಳಿದು ಸ್ವಾನುಭಾವಸದ್ವಾಸನೆಗೆಳಸಿಪ್ಪ ನಾಸಿಕಕ್ಕೆ ಘ್ರಾಣೇಂದ್ರಿಯವೆಲ್ಲಿಯದೋ ? ಇಂತೀ ಪಂಚೇಂದ್ರಿಯಮುಖದಲ್ಲಿ ಪಂಚವದನನ ಮುಖವಾಗಿಪ್ಪ ಶಿವಶರಣರು ಲಕ್ಷಗಾವುದದಲ್ಲಿದ್ದರೂ ಇರಲಿ, ಅಲ್ಲಿಗೆನ್ನ ಮನಮಂ ಹರಿಯಬಿಟ್ಟು ನಮಸ್ಕರಿಸುವೆನು. ಕಂದ :ಲಕ್ಷಯೋಜನದೊಳಾಡೆ ಮುಕ್ಕಣ್ಣನ ಶರಣನೈದನೆನೆ ಕೇಳ್ದೊಲವಿಂ ದಿಕ್ಕನೆ ಮನಮಂ ಕಳುಹಿ ಪ ದಕ್ಕೆರಗುವೆ ನಾಂ ಪ್ರಸನ್ನಶಂಕರಲಿಂಗ. ಈ ಕಾರಣ ನಿಮ್ಮ ಶರಣರ ನೆನೆದು ನೋಡಿ ವಾರ್ತೆಯ ಕೇಳಿ ಮನಮುಟ್ಟಿ ದರುಶನವ ಮಾಡಲೆನ್ನ ಭವ ಹಿಂಗಿತ್ತು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮಾಧವನ ಪಟ್ಟಣದಿಂದ ಓಡಿದರು ಮೂವರು ಸೂಳೆಯರು. ಅವರು ಹೋದ ಹಾದಿಯಲ್ಲದೆ, ಬೇರೊಂದು ಹಾದಿಯಲ್ಲಿ ಅರಸಿ ಕಂಡರು ಸೂಳೆಯರ. ಅವರ ಮೂವರ ಸೆರೆಯ ವಿವರ: ಬಾಯಿಗೆ ಕೋಳ, ಕಾಲಿಗೆ ನೂಲೆಳೆಯ ಕಟ್ಟು, ಕೈಹೋಗದಂತೆ ಕೂರಲಗಿನ ಸಂಭವ ಕಟ್ಟು, ಮೂವರ ಅಗಡ ಹಿಂಗಿತ್ತು. ಇನ್ನೈವರ ಕೇಳಿ, ಬಂಕೇಶ್ವರಲಿಂಗವ.
--------------
ಸುಂಕದ ಬಂಕಣ್ಣ
ಸ್ಥಲವನರಿದೆನೆಂದರೆ ಕುಳವನರಿಯಬೇಕು. ಕುಳವನರಿದಡೆ ಭ್ರಾಂತು ಸೂತಕವಿಲ್ಲಯ್ಯಾ. ತನುಮನ ಲಯವಾದ ನಿಜೈಕ್ಯನ, `ಲಿಂಗದೇವಾ ಎಂದು ಉಪಚರಿಸಲುಂಟೆ ? ಆಗಮ ಮುನ್ನವೇ ಹಿಂಗಿತ್ತು, ಆಚಾರ ಮೀರಿತ್ತು. ಕೂಡಲಚೆನ್ನಸಂಗನ ಶರಣ ಸುಚರಂ ಭೋ.
--------------
ಚನ್ನಬಸವಣ್ಣ
ಅನಾದಿಯ ಜಂಗಮವು ಶಿವಭಕ್ತನ ಮಠಕೆ ಬಂದು 'ಭಿಕ್ಷೆ ಲಿಂಗಾರ್ಪಿತಾ' ಎನಲು ಆ ಭಕ್ತನು ಜಂಗಮಕ್ಕೆ ಎರಗಿ, ಸಿಂಹಾಸನದ ಗದ್ದುಗೆಯ ಮಾಡಿ, ಆ ಜಂಗಮವ ಮೂರ್ತಂಗೊಳಿಸಿ ತನ್ನಲ್ಲಿರ್ದ ಪರಮಪ್ರಸಾದವ ಎಡೆಮಾಡಿ ನೀಡಲೊಡನೆ, ಆ ಜಂಗಮವು ಸ್ವೀಕರಿಸಲು, ಆ ಭಕ್ತನ ಕರ್ಮದೋಷವೆಲ್ಲ ಹಿಂಗಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇನ್ನಷ್ಟು ... -->