ಅಥವಾ

ಒಟ್ಟು 31 ಕಡೆಗಳಲ್ಲಿ , 20 ವಚನಕಾರರು , 31 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಡಶೀಲಗಳ ಹೊತ್ತು ಕೆಡುವೊಡಲಹೊರೆವ ತುಡುಗುಣಿಗಳಾಚಾರಕ್ಕಗಣಿತ ನೋಡಾ ನಮ್ಮ ವೀರಮಾಹೇಶ್ವರನು. ಮನದಿಚ್ಫೆಗನುವಾದ ತನುಸುಖಪದಾರ್ಥವನು ದಿನದಿನಕ್ಕೆ ವ್ರತವೆಂದು ತಿನಬಂದ ಶುನಕನಲ್ಲ ನೋಡಾ ನಮ್ಮ ವೀರಮಾಹೇಶ್ವರನು. ಮುಟ್ಟುತಟ್ಟುಗಳಿಂದೆ ಕೆಟ್ಟೆನಲ್ಲಾಯೆಂದು ಕಟ್ಟುಕಾವಲಿಗೊಂಡು ಕೆಟ್ಟಸಿಟ್ಟುಗಳಿಂದೆ ಬಟ್ಟೆಯನು ಹಿಡಿವ ಪಟ್ಟುಗುಡುವನಂತಲ್ಲ ನೋಡಾ ನಮ್ಮ ವೀರಮಾಹೇಶ್ವರನು. ಮತ್ತೆಂತೆಂದೊಡೆ : ಪರಧನ ಪರಸತಿ ಪರಹಿಂಸೆ ಪರನಿಂದೆ ಪರದೈವ ಪರಸಮಯಾದಿ ದುರಾಸೆವಿಡಿದು ನಡೆಯದಿಹುದೇ ಶೀಲ ನೋಡಾ ನಮ್ಮ ವೀರಮಾಹೇಶ್ವರಂಗೆ. ತನು ಮನ ಪ್ರಾಣಾದಿ ಸಕಲ ಕರಣಾದಿ ಗುಣವಳಿದು ಗುರುನಿರಂಜನ ಚನ್ನಬಸವಲಿಂಗನ ನೆನಹು ಬಿಡದಿಹುದೇ ವ್ರತ ನೋಡಾ ನಮ್ಮ ವೀರಮಾಹೇಶ್ವರಂಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬಲುಹಾಗಿ ತತ್ವವಡಸಿದಾತ ಸತ್ತನೆ? ಕರಗುವ ತತ್ಪುಂಜನೆಯ ಕರಣವ ತಪ್ಪಿಸಿ ಪ್ರವೇಶಿಸುವಾತ ಸಂಚರಿಸುವ ತದ್ಬ ್ರಮೆಯಿಂದ ಬಯಲ ಕರಣಂಗಳಿಗೆಡೆಗೊಡುವ ಕತದಿಂ ಪಂಚಮಹಾರೂಪನ ಅಹಂಭಾವದ ಜೀವನಿಂದ ರಾಗಾದಿ ಮಲತ್ಯಾಗದಿಂದ, ಸಕಲ ಕರಣ ವ್ಯಾಪಾರದಿಂದ, ಉತ್ತುಂಗ ಪದೋನ್ನತಿಯಿಂದ ಸಮವೆನೆ, ಕರಣದೊಳಿಪ್ಪರಿವಿಂದೆ ಚೇಷ್ಟಿಸುವನಾಗಿ ಪ್ರಾಣಾದಿರೂಪನು. ತಾ ನುಡಿದುದ ತಾನೆ ಕೇಳುವ, ಲೇಸೆಂಬುದ ಹಿಡಿವ, ಮುಂದೆ ನೇತಿಗತಿಯ ಕರಣಂಗಳ ಕಾಬ, ಹೊಲ್ಲಹದವ ಬಿಡುತ್ತ ಸೇವಿಸುವ, ಸ್ವಚ್ಛಾಂಗ ಸುಖವಾಸನೆಗೆರಗುವ, ಕರ್ಮೇಂದ್ರಿಯದ ಬುದ್ಧೀಂದ್ರಿಯಾನಂದ ತಾನೆಂಬುದನಾರೂ ಅರಿಯರಯ್ಯಾ! ನೋಡಲೇನದ ನಿಶ್ಚಯಿಸಿ ನಾ ಬಲ್ಲೆನೆಂಬ ಆರಿದು ಮರೆಯದಂತೆ ರೂಪನಪ್ಪಿ ಸೋಹಮೆಂಬುದು ಜೀವ. ಇಂತಪ್ಪ ಸರ್ವದೃಷ್ಟವನೊಳಕೊಂಡು. ಪಂಚವಿಂಶತಿಯಾಗಿ ತೋರುವ ತೋರಿಕೆಯೆಲ್ಲಾ ಹುಸಿಯೆಂದರಿದರಿವು ನಿಜತತ್ವ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ನಡೆವ ಕಾಲದಲ್ಲಿ ನಿಮ್ಮ ಕೂಡೆ ನಡೆವೆನಯ್ಯಾ. ನುಡಿವ ಕಾಲದಲ್ಲಿ ನಿಮ್ಮ ಕೂಡೆ ನುಡಿವೆನಯ್ಯಾ. ಹಿಡಿವ ಕಾಲದಲ್ಲಿ ನಿಮ್ಮ ಕೂಡೆ ಹಿಡಿವೆನಯ್ಯಾ. ಬಿಡುವ ಕಾಲದಲ್ಲಿ ನಿಮ್ಮ ಕೂಡೆ ಬಿಡುವೆನಯ್ಯಾ. ನೋಡುವ ಕಾಲದಲ್ಲಿ ನಿಮ್ಮ ಕೂಡೆ ನೋಡುವೆನಯ್ಯಾ. ಕೇಳುವ ಕಾಲದಲ್ಲಿ ನಿಮ್ಮ ಕೂಡೆ ಕೇಳುವೆನಯ್ಯಾ. ಸೋಂಕುವ ಕಾಲದಲ್ಲಿ ನಿಮ್ಮ ಕೂಡೆ ಸೋಂಕುವೆನಯ್ಯಾ. ವಾಸಿಸುವ ಕಾಲದಲ್ಲಿ ನಿಮ್ಮ ಕೂಡೆ ವಾಸಿಸುವೆನಯ್ಯಾ. ರುಚಿಸುವ ಕಾಲದಲ್ಲಿ ನಿಮ್ಮ ಕೂಡೆ ರುಚಿಸುವೆನಯ್ಯಾ. ನೆನೆವ ಕಾಲದಲ್ಲಿ ನಿಮ್ಮ ಕೂಡೆ ನೆನೆವೆನಯ್ಯಾ. ಮರೆವ ಕಾಲದಲ್ಲಿ ನಿಮ್ಮ ಕೂಡೆ ಮರೆವೆನಯ್ಯಾ. ಅರಿವ ಕಾಲದಲ್ಲಿ ನಿಮ್ಮ ಕೂಡೆ ಅರಿವೆನಯ್ಯಾ. ಇನಮಂಡಲಕಿರಣದಂತೆ ಸಕಲ ತೋರಿಕೆಯ ತೋರುವ ಕಾಲದಲ್ಲಿ ನಿಮ್ಮ ಕೂಡೆ ತೋರುವೆನಾಗಿ, ಅಖಂಡೇಶ್ವರಾ, ನಿಮ್ಮಲ್ಲಿ ಎನಗೆ ಸಹಭೋಜನವು ಸಮನಿಸಿತ್ತು ನೋಡಾ.
--------------
ಷಣ್ಮುಖಸ್ವಾಮಿ
ಕುನ್ನಿಗೆ ರನ್ನದ ಹಲ್ಲಣವ ಹಾಕಿದಂತೆ, ಹಂದಿಯ ತಂದು ಅಂದಣವನೇರಿಸಿದಂತೆ, ಎನಗೊಲಿದು ಶಿವಲಾಂಛನವ ಕೊಟ್ಟ ಕಾರಣವೇನಯ್ಯ ಗುರುವೆ?. ನಾನು ಲಿಂಗದ್ರೋಹವ ಮಾಡಿ ಜಂಗಮವ ಕೆಡನುಡಿದೆನು. ಕೈವಿಡಿದ ಸ್ತ್ರೀಯ ಕಡಿಖಂಡವಮಾಡಿದೆ. ಒಡನಾಡಿದವರ ಕಡುಕೋಪದಿನಿರಿದುಕೊಂದೆ. ನಂಬಿದ ಹಳೆಯರ ಪ್ರಾಣಕ್ಕೆ ಮುನಿದೆ. ಪಶುವಿನ ಶಿಶುವ ತಲೆಯೊಡೆಯಿಕ್ಕಿದೆ. ಗೋವ ಕೊಂದವರ ವಹಿಸಿಕೊಂಡೆ. ಪರಧನವ ಕದ್ದೆ, ಪರಸ್ತ್ರೀಯರಿಗಳುಪಿದೆ. ಭವಿಹೆಣ್ಣುಗಳ ಕೂಡುಂಡ ಬಾಯಹುಳುಕನಯ್ಯ ನಾನು. ಇಂತಪ್ಪ ಮಹಾಪಾತಕಂಗಳ ಮಾಡಿದ್ದ ಹೊಲೆಯನಿವನೆಂದು ನೀನರಿದ ಬಳಿಕ, ಎನಗೆ ವಿರಕ್ತಿಯೆಂಬ ಲಾಂಛನ ಕೊಟ್ಟುದು, ಕೋಪದ ಕಾರಣವಲ್ಲದೆ ಕೃಪೆಯಲ್ಲವಯ್ಯ. ಅದೇನು ಕಾರಣವೆಂದೊಡೆ- ಬಟ್ಟೆಯ ಬಡಿದ ಕಳ್ಳಬಂಟನ ಭೂಪಾಲರು ಬೇಹನಿಕ್ಕಿ ಹಿಡಿತರಿಸಿ, ನಾಳೆ ಶೂಲಕ್ಕೆ ತೆಗಸುವರೆ, ಇಂದು ಕಳ್ಳಬಂಟಂಗೆ, ಪುನುಗು ಜವಾಜಿಯ ಲೇಪಿಸಿ, ಹೂವಿನ ದಂಡೆಯ ಕೊರಳು- ಮಂಡೆ-ಉರದೊಳಗೆ ಅಡ್ಡಹಾಕಿ, ಹಾಲು ತುಪ್ಪ ಹಣ್ಣುಗಳ ಉಣಕೊಟ್ಟು, ಅಡಿಗಡಿಗೆ, ಅಡಕೆಲೆಯ, ಮೆಲುಕೊಟ್ಟು ವೀರವೃಂದದ ಹಲಗೆ ಕಹಳೆಯಂ, ಅವನ ಮುಂದೆ ಸಂಭ್ರಮಿಸುವ ಬರಿಯುಪಚಾರದಂತೆ, ನಾನು ಮಾಡಿದ ಸರ್ವ ದ್ರೋಹಕ್ಕೆ ನಿನ್ನ ಮನನೊಂದು, ಎನ್ನ ಎಕ್ಕಲನರಕಕ್ಕೆ ನೂಂಕುವುದಕ್ಕೋಸ್ಕರ ಕೊಟ್ಟ ಸಟೆಯುಪಚಾರಕ್ಕಾದ ಲಾಂಛನವಲ್ಲದೆ, ದಿಟದೊಲವಲ್ಲವಯ್ಯ ದೇವನೆ. ನಾನು ಮುಂದನರಿಯದಂಧಕನಯ್ಯ. ನಿನ್ನ ಬಾಗಿಲ ಕಾವ ಗೊಲ್ಲನಯ್ಯ. ನಿನ್ನ ಕುದುರೆಯ ಸಾಕುವ ಗೋವನಯ್ಯ. ನಿನ್ನ ಚಮ್ಮಾವುಗೆಯ ಹೊತ್ತು ಬರುವ ಬೋವರ ಲೆಂಕನಯ್ಯ. ನಿನ್ನ ಪಡುಗವ ಹಿಡಿವ ಪಡುಡಿಂಡಿಯಯ್ಯ. ನೀನುಗುಳ್ದ ತಂಬುಲವನುಂಬ ನಿನ್ನಾದಿಯ ಹಳೆಯನಯ್ಯ. ನಿನ್ನಂಗಳದಲ್ಲಿ ಬೊಗಳುವ ಶ್ವಾನನಯ್ಯ. ಎನ್ನ ತಪ್ಪ ಕಾಯಯ್ಯ ಶಿವಧೋ ಶಿವಧೋ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಅಂಗಕ್ಕೆಂದಡೆ ಹಿರಿಯ ಹರಿವಾಣವ ತುಂಬಿ ಬೋನವ ತಾ ಎಂಬರು. ಲಿಂಗಕ್ಕೆಂದಡೆ ಚಿಕ್ಕ ಗಿಣ್ಣಿಲು ತುಂಬಿ ಬೋನವ ತಾ ಎಂಬರು. ಅಂಗವ ಹಿರಿದು ಮಾಡಿ ಲಿಂಗವ ಕಿರಿದು ಮಾಡಿ ಮನೆಯಲ್ಲಿ ಮಡಕೆ ತುಂಬಿ ಬೋನವ ಮಾಡಿ, ಚಿಕ್ಕ ಕುಡಿಕೆ ಗಿಣ್ಣಿಲು ಲಿಂಗಕ್ಕೆ ಬೋನವ ಹಿಡಿವ ಈ ಮಡಕೆಮಾರಿಗಳನೇನೆಂಬೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಸರ್ವಕಳಾ ಚಿತ್ರ ವಿಚಿತ್ರವೆಂಬ ಮೋಹನ ಚಿಚ್ಫಕ್ತಿಯು ವೇದೋಪನಿಷತ್ತು ಶಾಸ್ತ್ರ ಆಗಮ ಪುರಾಣ ಶಬ್ದ ಜ್ಯೋತಿಷ ವ್ಯಾಕರಣ ಯೋಗಾಭ್ಯಾಸ ವೀಣಾಭರಣ[ತ?] ಛಂದಸ್ಸು ನಾಟಕಾಲಂಕಾರ ಇಂತೀ ಪರೀಕ್ಷೆಯು ನೋಡುವ ಅಯ್ಯಗಳ ಎಲ್ಲ ತನ್ನ ಜವನಿಕೆಯೊಳಗೆ ಕೆಡಹಿಕೊಂಡಿತ್ತು. ಧ್ಯಾನ ಮೌನದಿಂದ ಕಂಡೆಹೆನೆಂಬವರ ಅಜ್ಞಾನಕೆ ಒಡಲುಮಾಡಿತ್ತು. ತತ್ವದವ ನೋಡೆಹೆನೆಂಬವರ ಮೆಚ್ಚಿಸಿ ಮರುಳುಮಾಡಿತ್ತು. ಅಂಗವೆಲ್ಲವನರಿದೆನೆಂಬವರ ಹಿಂಗದೆ ತನ್ನ ಅಂಗದ ಬಲೆಯೊಳಗೆ ಕೆಡಹಿತ್ತು. ಲಿಂಗಮೋಹಿಗಳೆಂಬವರ ತನ್ನ ಸಂಗದ ಅನಂಗನ ಅಂತರಂಗಕ್ಕೆ ಒಳಗುಮಾಡಿತ್ತು. ವೇದವೇದ್ಯವೆಂಬರೆಲ್ಲರನು ಏಕಾಂತದೊಳಗೆ ತಳಹೊ[ವ?]ಳಗೊಳಿಸಿತ್ತು. ಕಣ್ಣ ಮುಚ್ಚಿ ಜಪ ಧ್ಯಾನ ಶೀಲ ಮೌನ ನೇಮ ನಿತ್ಯವ ಹಿಡಿವ ವ್ರತಿಗಳ ನಾನಾ ಭವದಲ್ಲಿ ಬರಿಸಿತ್ತು. ವಾಗದ್ವೈತವ ನುಡಿವ ಅರುಹಿರಿಯರೆಂಬವರ ಜಾಗ್ರದಲ್ಲಿ ಆಕ್ರಮಿಸಿಕೊಂಡಿತ್ತು. ಸ್ವಪ್ನದಲ್ಲಿ ಮೂಅರ್sತರ ಮಾಡಿತ್ತು. ಸುಷುಪ್ತಿಯಲ್ಲಿ ಕಂಡೆನೆಂಬವರ ವ್ಯಾಪ್ತಿಯೆಂಬ ಬೇಳುವೆಗೊಳಗುಮಾಡಿತ್ತು. ಇಂತೀ ತ್ರಿವಿಧದೊಳ ಹೊರಗಿನ ಭೇದವನರಿಯದ ಪ್ರಪಂಚುದೇಹಿಗಳಿಗೆ ವಿರಕ್ತಿ ಇನ್ನೆಲ್ಲಿಯದು ? ಘಟಿಸದು ಕಾ[ಣಾ]. ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು ನಿರ್ಧರವಾದಲ್ಲಿ ನಿವಾಸವಾಗಿಪ್ಪನು.
--------------
ಬಾಚಿಕಾಯಕದ ಬಸವಣ್ಣ
ಹರುಗೋಲನೇರಿದಡೆ ಅದ ಹಿಡಿವ ತೆರನನರಿಯಬೇಕು. ತಡಿ ಮಡು, ಅದರಡಿಯನರಿದು ಒಡಗೂಡಬೇಕು. ಬಿಡುಮುಡಿಯನರಿಯದಿರ್ದಡೆ ತನಗೆ ಸಡಗರವೇಕೆ ? ಕೊಲುವ ಹಗೆ ಬೇರಿಲ್ಲವೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ವ್ರತ ನೇಮ ಸಪ್ಪೆ ಒರತೆ ಮುಂತಾದ ನೀರ್ವಿಡಿಯ ನೇಮವಂ ತಾಳಿ, ಅಂಗನೆಯರ ಸಂಗಸುಖವ ಮೆಚ್ಚಿ, ಲಿಂಗವ ಕೊಂಡಾಡುವ ಬಾಯಲ್ಲಿ ಹೆಂಗಳ ಅಧರವಂ ಚುಂಬಿಸೆ, ಲಿಂಗಜಂಗಮದ ಪ್ರಸಾದ ಹೋಯಿತ್ತು. ಇಷ್ಟಲಿಂಗ ಹಿಡಿವ ಕೈಯಲ್ಲಿ ಬಟ್ಟಿತ್ತು ಕುಚವ ಹಿಡಿದು, ಉಚ್ಚೆಯ ಬಚ್ಚಲ ತೋಡುವ ಕಸ್ತುಕಾರರನೊಪ್ಪೆನೆಂದ. ಇಂತಪ್ಪವರ ಭಕ್ತರೆಂದಡೆ, ಮೆಟ್ಟುವ ನರಕದಲ್ಲಿ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಹಿಡಿವೆಡೆಯನೆ ಕಾಸಿ ಹಿಡಿವ, ಕೈಬೆಂದು ಮಿಡುಮಿಡನೆ ಮಿಡುಕುವ, ಮರುಳ ಮಾನವನೇ ಬಡವರೆಂದೆನಬೇಡ ಲಾಂಛನಧಾರಿಯನು, ಕಡುಸ್ನೇಹದಿಂದವರ ಪೂಜೆಮಾಡುವುದು. ನಿಜವಡಗಿದ ರೂಪು, ನಿರ್ವಯಲಸ್ಥಾನ, ನಡೆಲಿಂಗ ಜಂಗಮ ±ಕೂಡಲಸಂಗಮದೇವ. 416
--------------
ಬಸವಣ್ಣ
ಹುತ್ತದೊಳಗಣ ಹಾವ, ಮಡುವಿನೊಳಗಣ ಮತ್ಸ್ಯವ, ಮಹಾಕಾನನದ ವಾನರವ, ಹಿಡಿವ ಪರಿಯಿನ್ನೆಂತೊ ? ಹುತ್ತವನಗೆದು, ಮಡುವ ಹೂಳಿ, ಕಾನನವ ತರಿದು, ಇಂತಿವ ಹಿಡಿಯಬೇಕು. ಸಕಲೇಂದ್ರಿಯದೊಳಗಿರ್ದು ವಸ್ತುವನರಿದನೆಂಬ ಮಿಟ್ಟೆಯ ಭಂಡರನೊಪ್ಪ ಏಣಾಂಕಧರ ಸೋಮೇಶ್ವರಲಿಂಗ.
--------------
ಬಿಬ್ಬಿ ಬಾಚಯ್ಯ
ನದೀಜಲ, ಕೂಪಜಲ, ತಟಾಕಜಲವೆಂದಂಬು ಹಿರಿದು ಕಿರಿದಾದುದನರಿಯರು. ಬೇರೆ ಮತ್ತೊಂದು ಭಾಷೆ ವ್ರತ ನೇಮಂಗಳ ಹಿಡಿವ ಶೀಲಸಂಬಂಧಿಗಳು ಜಾತ್ಯಂಧರು, ನಿಮ್ಮನೆತ್ತಬಲ್ಲರು ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಸಾಧು ಗುಣಕ್ಕೆ ಸಲೆ ಸಂದ ವಾರಣ ಬಂದು ಹುಟ್ಟು ಕಂಗಳರ ಸಭಾಮಧ್ಯದಲ್ಲಿ ನಿಲ್ಲಲು ಕೆಲದೊಳಿಪ್ಪ ಕಣ್ಣುಳ್ಳಾತ ಆನೆ ಬಂದಿತೆಂದು ನುಡಿಯಲೊಡನೆ ಅತಿ ಪ್ರೇಮದಿಂದ ಕಂಗಳರು ಆ ಆನೆಯ ಅವಯವಂಗಳಂ ಮುಟ್ಟಿ ನೋಡಿ ಆನೆ ಕೊಳಗದಾಕಾರವೆಂದು ಕಾಲ ಮುಟ್ಟಿದಾತ ಆನೆ ಒನಕೆಯಾಕಾರವೆಂದು ಸೊಂಡಿಲ ಮುಟ್ಟಿದಾತ ಆನೆ ಹರವಿಯಾಕಾರವೆಂದು ಕುಂಭಸ್ಥಲವ ಮುಟ್ಟಿದಾತ ಆನೆ ಮೊರದಾಕಾರವೆಂದು ಕಿವಿಯ ಮುಟ್ಟಿದಾತ ಆನೆ ರಜಪೂರಿಗೆಯಾಕಾರವೆಂದು ಬಾಲವ ಮುಟ್ಟಿದಾತ ಇಂತಿವರೆಲ್ಲರೂ ಆನೆಯ ನೆಲೆಯನರಿಯದೆ ತಮ್ಮೊಳಗೆ ತಾವು ಕೊಂಡಾಡುತ್ತಿಪ್ಪರು. ಆನೆಯ ನೆಲೆಯ ಆನೆಯನೇರುವ ಪಟ್ಟದರಸು ಬಲ್ಲನಲ್ಲದೆ ಹುಟ್ಟು ಕುರುಡರದೇನು ಬಲ್ಲರಯ್ಯ?. ಈ ಪ್ರಕಾರದಲ್ಲಿಪ್ಪ ಪಶುಪ್ರಾಣಿಗಳು ನಿಜೈಕ್ಯರ ಆಚರಣೆಯನರಿಯದೆ ಮೂಗಿನಾಭರಣವ ಮೂಗಿಗಿಕ್ಕುವಂತೆ ನುಡಿದು ನಡೆಯ ತಪ್ಪುವರು. ಅದು ಶಿವಜ್ಞಾನಿಗಳ ಮತವಲ್ಲ. ಅದು ಹೇಗೆಂದೊಡೆ ಪ್ರತ್ಯಕ್ಷ ಜ್ಞಾನವ ಪ್ರಮಾಣಿಸಿ ಅಪರೋಕ್ಷಜ್ಞಾನವನಾಲೋಚಿಸಿ ಸಹಜಜ್ಞಾನವ ಸಂಪಾದಿಸಿ ಈ ಜ್ಞಾನತ್ರಯವನೊಂದುಮಾಡಿ ಬಿಡುವ ಹಿಡಿವ ಆಚರಣೆಯಂ ನೆಲೆಗೊಳಿಸಿಕೊಂಡು ಹಿಡಿದಾಚರಣೆಯಲ್ಲಿ ಪರಾಕ್ರಮಿಯಾಗಿ ಆದಿ ಅನಾದಿಯ ಮೇಲಣ ಜ್ಯೋತಿರ್ಮಯವಪ್ಪ ಶೂನ್ಯಲಿಂಗಮಂ ಬೆರಸಿ ಭಿನ್ನವಿಲ್ಲದಿರ್ಪ ಆಚರಣೆಯ ವೀರಮಾಹೇಶ್ವರ ಬಲ್ಲನಲ್ಲದೆ ಅಜ್ಞಾನಿ ಬಾಯಿಬಡಿಕರಿವರೆತ್ತ ಬಲ್ಲರಯ್ಯಾ?, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ತತ್ವವಿದ್ಯೆಯೆಂದು ಮಿಕ್ಕಾದವರಿಗೆ ಹೇಳುವಾಗ, ವಸ್ತುವಿದ್ಯೆಯೆಂದು ಮಿಕ್ಕಾದವರಿಗೆ ಹೇಳುವಾಗ ಆ ತತ್ವವೂ ಆ ವಸ್ತುವೂ ತನ್ನ ಕತ್ತಲು ಕೂಸೆ ? ತಾ ಸತ್ತೆನೆಂದು ಹೇಳುವಾಗ, ಆ ಗುಣ ಚೇತನವೋ ? ಅಚೇತನವೋ ? ಮದೋನ್ಮತ್ತಂಗೆ, ಸರ್ಪದಷ್ಟಂಗೆ, ದುಗ್ರ್ರಹವೇದಿತಂಗೆ, ತ್ರಿವಿಧಮಲಲೋಲುಪ್ತಮತ್ತಂಗೆ ಮತ್ತೆ ತನ್ನ ಕೊರತೆಯನರಿಯದ ದುಶ್ಚರಿತ ಕುಹಕಿ ಕ್ಷುದ್ರಂಗೆ, ಮತ್ತೆ ನಿಜವಸ್ತುವಲ್ಲಿ ಹೊತ್ತು ನಿತ್ತರಿಸಿಪ್ಪನೆ ? ನಿಜನಿಃಕಲರಲ್ಲಿ, ನಿರ್ದೇಹಿಗಳಲ್ಲಿ, ನಿರಾಲಂಬರಲ್ಲಿ, ಸರ್ವಕ್ರೀ ಸಂಪೂರ್ಣರಲ್ಲಿ, ಅಕುಟಿಲರಲ್ಲಿ ಇಂತೀ ಉಭಯದಿರವ ತಿಳಿದು ಮಾಡುವ ಭಕ್ತಂಗೆ ಗುರುವಿನ ಇರವು, ಚರದ ಲಕ್ಷಣ. ಲಿಂಗದ ಪರೀಕ್ಷೆಯಿಂದ ತ್ರಿವಿಧದ ಬಿಡುಗಡೆಯ ಒಳಗೆ ಹಿಡಿವ, ಬಿಡುಮುಡಿಯಲ್ಲಿ ಕೂಡುವ, ಕೊಂಬ ಎಡೆಗಳಲ್ಲಿ ಅಡಿಗಡಿಗೆ ಒಡಗೂಡಿ ನೋಡುತ್ತಿರಬೇಕು. ವರ್ಮದ ಬಿಡುಗಡೆಯಲ್ಲಿ ಮಾಡುವ ಭಕ್ತನ ಕೂಡಿಹ ವಿರಕ್ತನ ತೆರ, ಊಧ್ರ್ವರೇತೋಮೂರ್ತಿ ಶ್ವೇತಸ್ವಯಂಭು ಕಪಿಲೇಶ್ವರಲಿಂಗವು ತಾನಾದ ಭಕ್ತನ ಯುಕ್ತಿ.
--------------
ಮಹಾಲಿಂಗ ಶಶಿಮೌಳಿ ಸದಾಶಿವ
ಭರಿತಾರ್ಪಣವೆಂದು ಸ್ಥಲವನಂಗೀಕರಿಸಿದಲ್ಲಿ ಆ ಭರಿತ ಅಂಗಕ್ಕೊ, ಲಿಂಗಕ್ಕೊ, ಆತ್ಮಕ್ಕೊ, ಸರ್ವೇಂದ್ರಿಯ ವಿಕಾರಕ್ಕೊ ? ಹಿಡಿವ, ಬಿಡುವ, ಕೊಡುವ, ಕೊಂಬ ಸಡಗರಿಸುವ ಎಡೆಗಳಲ್ಲಿಯೆ ಘೃತ, ರಸಾನ್ನ, ಸಕಲಪದಾರ್ಥಗಳ ಯಥೇಷ್ಡವಾಗಿ ಗ್ರಾಸಿಸುವ ಭರಿತವೊ ? ಆತ್ಮನ ಕ್ಷುಧೆಯ ಆಶಾಪಾಶವೊ ? ಅಲ್ಲ, ಲಿಂಗಕ್ಕೆ ಸಂದುದನೆಲ್ಲವನು ಒಂದೆ ಭಾವದಲ್ಲಿ ಕೊಳಬೇಕೆಂದು ಸಂದೇಹವೊ ? ಇಂತೀ ಗುಣಂಗಳಲ್ಲಿ ಅಹುದಲ್ಲವೆಂಬುದ ತಿಳಿದು ನೋಡಿಕೊಳ್ಳಿ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ.
--------------
ಅಕ್ಕಮ್ಮ
ಹಠಯೋಗ ಲಂಬಿಕಾಯೋಗ ಆತ್ಮಯೋಗ ಸಿದ್ಧಯೋಗ ಪಿಶಾಚಯೋಗ ಅಷ್ಟಾಂಗಯೋಗಂಗಳೆಂಬ ಷಡುವಿಧ ಕರ್ಮಯೋಗಂಗಳೊಳು ಶೋಷಣೆ, ದಾಹನೆ, ಪ್ಲಾವನೆ, ಚಾಲನೆ ಖಾಳಾಪಖಾಳಮಂ ಮಾಡಿ ತ್ರಿದೋಷಾದಿಗಳಂ ಪ್ರವರ್ತಿಸಲೀಯದೆ ಮಲಯುಗಮಂ ನೆಲೆಗೊಳ್ಳಲೀಯದೆ ಗಜಕರಣಂಗಳಿಂ ಪವನಧಾರಣೆಯಿಂ ಕಲ್ಪಯೋಗಂಗಳಿಂ ಮೂಲಿಕಾಬಂಧದಿಂ ಬಂಧಿಸಿ, ಘಟಮಂ ನಟಿಸುವುದು ಹಠಯೋಗ. ಪವನಾಭ್ಯಾಸಂಗಳಿಂದಭ್ಯಾಸಯೋಗ, ಕ್ರಮಕ್ರಮಂಗಳಿಂ ಜಿಹ್ವೆಯಂ ಬೆಳಸಿ ಹಠಸಮ್ಮಿಶ್ರದಿಂ ಷಡಾಧಾರದ ಪಶ್ಚಿಮಪಥವಿಡಿದು ಪ್ರಾಣಪವನನ ಮಸ್ತಕಕ್ಕೇರಿಸಿ ಜಿಹ್ವೆಯ ಸುಷುಮ್ನೆಯಲ್ಲಿಟ್ಟು ಸೋಮಪಾನಮಂ ಸೇವಿಸಿ ಸಪ್ತಸ್ಥಾನ ನವಚಕ್ರದಲ್ಲಿ ನಿಂದು ಮುಕ್ತ್ಯಂಬಿಕೆಯೊಡಗೂಡುನವುದು ಲಂಫಬಿಕಾಯೋಗ. ಆತ್ಮನಂ ಭೇದಿಸಿ ಪ್ರಾಣವಾಯು ನಾಡಿಗಳನರಿತು ಹಿಡಿವ ಭೇದಮಂ ತಿಳಿದು, ತೆಗೆವ ಬಿಗಿವ ಸಂಚಮಂ ಕಂಡು ಒಡ್ಡಿಯಾಣಬಂಧ ಜಾಳಾಂಧರಬಂಧ ಠಾಣಿಕಾಮುದ್ರೆ ಭ್ರೂಸಂಕೋಚ ಬ್ರಹ್ಮಸ್ಥಾನದುತ್ತರನಾಡಿಯಿಂದ ಆತ್ಮನನಾತ್ಮಲಿಂಗದಲ್ಲಿ ಸಂಯೋಗಮಾಡುವದಾತ್ಮಯೋಗ. ಅಂಜನಾಸಿದ್ಧಿ ಘುಟಿಕಾಸಿದ್ಧಿ ಶರೀರಸಿದ್ಧಿ ಪರಕಾಯಪ್ರವೇಶ ತ್ರಿಕಾಲಜ್ಞಾನ ದೂರಶ್ರವಣ ದೂರದೃಷ್ಟಿಯೊಳಗಾದ ಅಷ್ಟಮಹಾಸಿದ್ಧಿಯಂ ಪಡೆದು, ರಸಸಿದ್ಧಿ ಪಾಷಾಣಸಿದ್ಧಿ ಲೋಹಸಿದ್ಧಿ ವಯಸ್ತಂಭ ಸ್ವರವಂಚನೆ ಕಾಯವಂಚನೆ ವೇದಶಾಸ್ತ್ರಸಿದ್ಧಿ ಭರತಸಿದ್ಧಿ ಗಾಂಧರ್ವಸಿದ್ಧಿ ಕಿನ್ನರಸಿದ್ಧಿ ವಾಚಾಸಿದ್ಧಿ ಖೇಚರತ್ವ ಮಹೇಂದ್ರಜಾಲದೊಳಗಾದ Zõ್ಞಷಷ್ಟಿವಿದ್ಯಾಸಿದ್ಧಿ ಅಣಿಮಾದಿ ಮಹಿಮಾ ದಿ ಈಶಿತ್ವ ವಶಿತ್ವ ಪ್ರಾಪ್ತಿ ಪ್ರಾಕಾಮ್ಯವೆಂಬ ಅಷ್ಟೈಶ್ವರ್ಯಸಿದ್ಧಿ ವ್ಯಾಳಿ ಚರ್ಪಟಿ ಕೋರಾಂಟ ರತ್ನಘೋಷ ಭೂತನಾಥ ನಾಗಾರ್ಜುನ ಮಚ್ಚೇಂದ್ರ ಗೋರಕ್ಷ ಮಂಜಿನಾಥ ನವನಾಥ ಸಿದ್ಧರೊಳಗಾದ ಸಮಸ್ತ ಸಿದ್ಧಿಬುದ್ಧಿಗಳಿಂ ಲಿಂಗವನರಿಸಿ ಅಟ್ಟಿಮುಟ್ಟಿ ಹಿಡಿದೆಹೆನೆಂಬುದು ಸಿದ್ಧಯೋಗ. ಪಿಶಾಚತ್ವದಿಂ ತ್ರಿಭುವನಿಯಂ ಸೇವಿಸಿ ಅಮರಿಗಳಂ ಸೇವಿಸಿ ಅಮರೀ ಭ್ರಮರಾದೇವಿ ಅಮರೀ ತ್ರಿಪುರಾಂತಕೀ ಅಮರೀ ಕಾಲಸಂಹಾರೀ ಅಮರೀ ತ್ರೈಲೋಕ್ಯಸಾಧನೀ ಇಂತೆಂಬ ಶ್ರುತಿಗೇಳ್ದು, ವಜ್ರಿ ಅಮರಿಗಳನಂಗಲೇಪಂ ಮಾಡಿ ಶುಕ್ಲಮಂ ಸೇವಿಸಿ ಭೂತಸಂಕುಳಂಗಳೊಡನಾಡಿ ಅಜ್ಞಾನವಶದಿಂ ಲಿಂಗವನೇನೆಂದರಿಯದ ಕ್ಷೀಣವೃತ್ತಿಯ ಪಿಶಾಚತ್ವದಿಂದಿಪ್ಪುದು ಪಿಶಾಚಯೋಗ. ಹಿಂಸೆಯನುಳಿದ ±õ್ಞಚತ್ವದಿಂ ಬ್ರಹ್ಮಚರ್ಯದಿಂ ತತ್ವಂಗಳನಾಹ್ವಾನಿಸುತ್ತಿಪ್ಪುದು ಯಮಯೋಗ. ವಿವೇಕ ವಿಚಾರದಿಂ ತತ್ವಂಗಳನರಿತು ಆಚರಿಸಿ ಅಡಿುಟ್ಟು ನಡೆವುದು ನಿಯಮಯೋಗ. ಪದ್ಮಾಸನ ಸಿದ್ಧಾಸನ ಬದ್ಧಾಸನ ವಜ್ರಾಸನ ಮಯೂರಾಸನ ಕೂರ್ಮಾಸನ ಕಕ್ಕುಟಾಸನ ಅರ್ಧಾಸನ ವೀರಾಸನ ಶ್ಮಶಾನಾಸನ ಹಸ್ತಾಸನ ಮಸ್ತಕಾಸನ ಕುಠಾರಾಸನ ಸಿಂಹಾಸನ ಮಧ್ಯಲವಣಿ ಶಿರೋಲವಣಿಯೊಳಗಾದ ಆಸನಬಂಧಂಗಳಿಂದಾಚರಿಸುವುದಾಸನಯೋಗ. ತತ್ವ ಮೂವತ್ತಾರಕ್ಕೆ ಪ್ರಣವ ಮೂಲವೆಂದರಿತು ಷಡಾಧಾರಚಕ್ರಂಗಳ ಅಕ್ಷರವರ್ಣಂಗಳಿಂ ತಿಳಿದು ಮೇರಣ ಅಜನಾಳ ಬ್ರಹ್ಮಸ್ಥಾನ ತುರೀಯಾತೀತದ ಓಂಕಾರಮಪ್ಪ ಪ್ರಣವವನರಿವುದು ಪ್ರಾಣಾಯಾಮಯೋಗ. ಪ್ರತ್ಯಾಹಾರಯೋಗಕ್ರಮಗಳಿಂದ ಸತ್ಪ್ರಣವವನಾಹಾರಿಸುವುದು ಪ್ರತ್ಯಾಹಾರಯೋಗ. ಪ್ರಣವಕ್ಕೆ ಅತೀತವಾದ ಪರಶಿವಮೂರ್ತಿ ಮನದಲ್ಲಿ ಚಿಗುರ್ತು ಅಂತರಂಗದಲ್ಲಿ ಧ್ಯಾನಾರೂಢನಾಗಿ ಧ್ಯಾನಿಸುವುದು ಧ್ಯಾನಯೋಗ. ಆ ಪರಶಿವಮೂರ್ತಿಯೆ ಇಷ್ಟಲಿಂಗವೆಂಬ ಭಾವನೆಯಿಂದ ಅಷ್ಟವಿಧಾರ್ಚನೆ ಷೋಡಶೋಪಚರ್ಯಂಗಳಿಂದಿಷ್ಟಲಿಂಗಧಾರಣದಿಂದ ಇಪ್ಪುದು ಧಾರಣಯೋಗ. ಅಪ್ರಶಿಖಾಸ್ಥನದಿಂದುತ್ತರವಿಭಾಗೆಯ ಅಜಪೆಯಿಂದತ್ತಣ ಚಿತ್‍ಪ್ರಭೆಯಿಂದುಜ್ವಳತೇಜ ಸ್ವಯಂಪ್ರಕಾಶ ದಿವ್ಯತೇಜದಿಂದೊಪ್ಪಿಪ್ಪ ಮಹಾಘನ ಪರವಸ್ತುವನಿದಿರಿಟ್ಟೀಕ್ಷಿಸಿ ಆಮಹಾಪ್ರಕಾಶದಲ್ಲಿ ಒಡಗೂಡಿ ತಾನು ತಾನಾಗಿ ಜಗದ್ವಿಹರಣೀಯನೇನೆಂದರಿಯದ ಪರಮಕಾಷೆ*ಯ ಸಮಾಧಿಯಲ್ಲಿಪ್ಪುದು ಸಮಾಧಿಯೋಗ. ಇಂತಪ್ಪ ಅಷ್ಟಾಂಗವೊಳಗಾದ ಷಡುವಿಧಕರ್ಮಯೋಗಂಗಳಂ ಮೆಟ್ಟಿ ಚತುರ್ವಿಧಪದವಿಯಂ ಹೊದ್ದದೆ ಫಲಭೋಗಂಗಳಂ ಮುಟ್ಟದೆ ಖ್ಯಾತಿ ಲಾಭ ಪೂಜೆಯಂ ತಟ್ಟದೆ ಇಹಪರಂಗಳಂ ಸಾರದೆ, ಭವಬಂಧನಕ್ಕೆ ಬಾರದೆ ಗೆಲ್ಲ ಸೋಲಕ್ಕೆ ಹೋರದೆ, ತನುವಿನಿಚ್ಛೆಯಲ್ಲಿ ಸುಳಿಯದೆ ಮನದಿಚ್ಛೆಯಲ್ಲಿ ಹರಿಯದೆ, ಪ್ರಾಣನ ಸುಳುಹಿನಲ್ಲಿ ಸಿಕ್ಕದೆ ಪ್ರಕೃತಿವಶಕ್ಕೊಳಗಾಗದೆ, ಇಂದ್ರಿಯಂಗಳಿಗೆ ಮೈಯೊಡ್ಡದೆ ಸರ್ವಸಂದೇಹನಿವೃತ್ತಿಯಾಗಿ, ನಿಂದಲ್ಲಿ ನಿರಾಳ, ನಡೆದಲ್ಲಿ ನಿರ್ಗಮನಿ, ನುಡಿದಲ್ಲಿ ನಿಶ್ಶಬ್ದಿ, ಸುಳಿದಲ್ಲಿ ಒಡಲಿಲ್ಲದುಪಾಧಿಯರತು ಅಂಗವೆ ಲಿಂಗವಾಗಿ ಲಿಂಗವೆ ಪ್ರಾಣವಾಗಿ ಪ್ರಾಣವೆ ಪ್ರಸಾದವಾಗಿ, ಪ್ರಸಾದವೆ ಪರಿಪೂರ್ಣವಾಗಿ ನಿಜಲಿಂಗೈಕ್ಯವಾಗಿ ನಿಜಸುಖಸಂಬಂಧಿಯಾಗಿ ನಿಜಯೋಗ ಸನ್ನಿಹಿತವಾಗಿ ಕಾಯವಿದ್ದಂತೆ ಬಯಲಾಗಿಪ್ಪರಯ್ಯಾ ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರು.
--------------
ಆದಯ್ಯ
ಇನ್ನಷ್ಟು ... -->