ಅಥವಾ

ಒಟ್ಟು 59 ಕಡೆಗಳಲ್ಲಿ , 15 ವಚನಕಾರರು , 48 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಮ್ಮನರಿವರನರಿವೆನಯ್ಯಾ. ನಿಮ್ಮ ಮರೆವರ ಮರೆವೆನಯ್ಯಾ. ಮಾಯಿದೇವಿಗೆ ಮತವ ಕೊಟ್ಟು ಎಲ್ಲ ಹಿರಿಯರ ಜರಿವೆಯಯ್ಯಾ. ಇವೆಲ್ಲವ ತೋರಿ ನೀ ಗೆಲುವೆಯಯ್ಯಾ ಎನ್ನ ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ಭಗಧ್ಯಾನವೆಂಬುವ ಬಂದಿಕಾನವ ಹೊಕ್ಕು, ಸತಿಯರ ಸವಿನುಡಿಯೆಂಬ ಶಸ್ತ್ರವ ಹಾಯ್ದು, ಅಂಗನೆಯರ ಶೃಂಗಾರವೆಂಬ ಕತ್ತಲೆಗವಿದು, ಕಂಗಳು ಕೆಟ್ಟು, ಲಿಂಗನೆನಹೆಂಬ ಜ್ಯೋತಿ ನಂದಿತ್ತು ನೋಡಾ. ಆ ಸ್ವಯಂ ಜ್ಯೋತಿ ಕೆಡದ ಮುನ್ನ, ಅಂಗವಿಕಾರವೆಂಬ ಅರಸು ಅನಂತ ಹಿರಿಯರ ನುಂಗುವದ ಕಂಡು, ಮಹಾಜ್ಞಾನಿಗಳು ಹೇಸಿ ಕಡೆಗೆ ತೊಲಗಿದರು ನೋಡಾ ನಿಮ್ಮ ಪ್ರಮಥರು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಊರಿಗೆ ಹೋಗುವ ದಾರಿಯಲ್ಲಿ ಉರಗನ ಕಂಡೆನಯ್ಯ. ಆ ಉರಗನು ಮೂರು ಲೋಕವನ್ನೆಲ್ಲಾ ನುಂಗಿ ವಿಷವನುಗುಳುತಿಪ್ಪುದು ನೋಡಾ. ಆ ವಿಷವ ಕೆಡಿಸಿ, ಉರಗನ ಕೊಂದು, ಊರಿಗೆ ಹೋಗುವ ಹಿರಿಯರ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹಲವು ಕಡೆಗೆ ಹರಿದಾಡುವ ಮನವ ನಿಲಿಸಬಲ್ಲ ಶರಣನ ಅಂತರಂಗದಲ್ಲಿ ಪರಬ್ರಹ್ಮಲಿಂಗವಿರ್ಪುದು ನೋಡಾ. ಆ ಲಿಂಗದಲ್ಲಿ ತನ್ನ ಮರೆದು ಇರಬಲ್ಲ ಹಿರಿಯರ ಎನಗೊಮ್ಮೆ ತೋರಿಸಯ್ಯ, ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
``......................ರು, ನೀವು ಕೇಳಿ, ನಿಚ್ಚಕ್ಕೆ ನಿಜಹುಸಿಯ ಕಂಡೆವಲ್ಲಾ ! ವಾಯು ಬೀಸುವಲ್ಲಿ ಆಕಾಶ ಬಲಿದಲ್ಲಿ ಲಿಂಗಾರ್ಪಿತ ಮುಖವನರಿಯರಲ್ಲ. ಭೋಜನವನುಂಡು ಭಾಜನವನಲ್ಲಿಟ್ಟು ಹೋಹ ಹಿರಿಯರ ವ್ರತಕ್ಕೆ ಅದೇ ಭಂಗ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಸರ್ವವನೂ ಕಂಡು ಕಂಠಣಿಸದೆ ಓಸರಿಸದೆ ಒಳಕೊಂಡಿಪ್ಪುದದಕೆ ಎಂತಿರಬೇಡಾ ಹಿರಿಯರ ಮನ? ಮನವಿಚ್ಛಂದವಾಗದದೊಂದೆಯಂದದಲ್ಲಿಪ್ಪಂತಪ್ಪ ನಿಮ್ಮದೊಂದು ಸಮತಾಗುಣ ಎನ್ನನೆಂದು ಬಂದು ಹೊದ್ದಿಪ್ಪುದು ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಆದ್ಯರಲ್ಲ ವೇದ್ಯರಲ್ಲ ಸಾಧ್ಯರಲ್ಲದ ಹಿರಿಯರ ನೋಡಾ. ತನುವಿಕಾರ ಮನವಿಕಾರ ಇಂದ್ರಿಯವಿಕಾರದ ಹಿರಿಯರ ನೋಡಾ. ಶಿವಚಿಂತೆ ಶಿವಜ್ಞಾನಿಗಳ ಕಂಡಡೆ, ಆಳವಾಡಿ ನುಡಿವರು, ಗುಹೇಶ್ವರನರಿಯದ ಕರ್ಮಿಗಳು.
--------------
ಅಲ್ಲಮಪ್ರಭುದೇವರು
ಹಿರಿದು ಲಿಂಗವ ಮರೆದ ಕೈಯಲ್ಲಿ ಹಿಡಿದು ಪರಿಪರಿಯಿಂದಾಡುವ ಮಡದಿ ಇವಳಾರಯ್ಯ ! ಸಿರಿವುಳ್ಳ ಹಿರಿಯರ ಬ್ಥಿನ್ನಭಾವದಲ್ಲಿ ಹರಿದು ಹರಿದು ನೆರೆವ ಉರವಣಿಯವಳು ಇವಳಾರಯ್ಯಾ ! ತುಂಬಿದ ಪುರದೊಳಗೆ ಸಂಭ್ರಮಸುಖಿ ಗುರುನಿರಂಜನ ಚನ್ನಬಸವಲಿಂಗಕ್ಕೊಂದಿಟ್ಟು ತಾನೊಂದಾಡುವ ಸಗುಣಶೌರಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ದೊರಕುವನ್ನಕ್ಕರ ನಿಸ್ಪೃಹ. ದೊರಕಿದ ಮತ್ತೆ ಸಂಸಾರಿಯೆ ? ಇಂತೀ ಉಭಯವನರಿಯದೆ ಪೂಜಿಸಿಕೊಂಬ ಹಿರಿಯರ ನಾನರಿದೆ, ತ್ರಿವಿಧವೆಂಬ ಮಾರಿಯ ಮುಂದೆ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ಅರಿದಹನೆಂದು.
--------------
ಪ್ರಸಾದಿ ಭೋಗಣ್ಣ
ಅಮಲಬ್ರಹ್ಮದಲ್ಲಿ ಸಕಲ ಬ್ರಹ್ಮಾಂಡಂಗಳು ಅಡಗಿಪ್ಪವಯ್ಯ. ಆ ಸಕಲ ಬ್ರಹ್ಮಾಂಡಕೆ ಒಂದೇ ಲಿಂಗ ನೋಡಾ! ಆ ಲಿಂಗವನು ಮಹಾಜ್ಞಾನದಿಂದ ತಿಳಿದು ಪರಿಣಾಮಿಸಬಲ್ಲ ಹಿರಿಯರ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬೆಟ್ಟದ ತುದಿಯ ಮೇಲೆ ಉರಿವ ಕಂಬವ ಕಂಡೆ ನೋಡಾ! ಆ ಕಂಬದ ಮೇಲೊಂದು ಕೋಗಿಲೆ ಕುಳಿತು ಕೂಗುತಿದೆ ನೋಡಾ! ಆ ಕೋಗಿಲೆಯ ಹಿಡಿದು ನಿಶ್ಚೈಸಬಲ್ಲ ಹಿರಿಯರ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಾಡುವ ಕರಣಂಗಳೇ ಮಕ್ಕಳು, ಬೇಡುವ ಮನವೇ ಭ್ರಾಂತಿ. ಕಾಡುವ ಕರಣಂಗಳಿಗೆ ಸಿಲ್ಕದೆ, ಬೇಡುವ ಭ್ರಾಂತಿಗೆ ಸಿಲ್ಕದೆ ತ್ರಿಕೂಟದಲ್ಲಿಪ್ಪ ಲಿಂಗವ ನೋಡಿ ಭ್ರಮಿಸುವ ಹಿರಿಯರ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇಪ್ಪತ್ತೈದು ಗ್ರಾಮದ ಮೇಲೆ ಸುಳಿದಾಡುವ ಪುಷ್ಪದತ್ತನ ಕಂಡೆನಯ್ಯ. ಆ ಪುಷ್ಪದತ್ತನ ಕರಕಮಲದಲ್ಲಿ ಸಾವಿರೆಸಳ ಪುಷ್ಪವಿಪ್ಪುದು ನೋಡಾ. ಆ ಪುಷ್ಪದ ಪರಿಮಳವ ಅರುಹುವ ಹಿರಿಯರ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹಿರಿಯರನೆಲ್ಲ ಹುಟ್ಟಿಸಿದಾತನನರಿಯಿರೊ, ಹಿರಿಯರ ಮಕ್ಕಳಿರಾ ? ಇಂದು ಎಂದೇನೊ ? ನಾಳೆ ಎಂದೇನೊ ? ಎಂದೂ ಒಂದೇ ಮಕ್ಕಳಿರಾ ? ಗುಹೇಶ್ವರಲಿಂಗ ಹಂಗಿಲ್ಲದ ಸಂಯೋಗ ಇದ ಬೇಗನರಿಯಿರೊ ಹಿರಿಯರ ಮಕ್ಕಳಿರಾ.
--------------
ಅಲ್ಲಮಪ್ರಭುದೇವರು
ಘನಮಹಿಮ ಶರಣರು ತನ್ನ ಮನೆಗೆ ಗಮನಿಸಿ ಬಂದರೆ, ಅನುವರಿದು ಅವರವರ ಒಡವೆಯ ಅವರವರಿಗಿತ್ತು ವಿನಯ ಮುಂದುಗೊಂಡಿಪ್ಪುದೇ ಸಹಜ. ಒರೆದು ನೋಡಬಂದ ಹಿರಿಯರ ಗರ್ಜನೆಯನು ಸೈರಣೆಯೊಳರ್ಚಿಸಿ, ಸಾವಧಾನಸಖತನ ಮುಂದುಗೊಂಡಿಪ್ಪುದೇ ನಿಜಭಕ್ತಿ. ಕೊಂಡು ಮಾಡಬಲ್ಲ ಪ್ರಚಂಡ ಒಡೆಯರಡಿಯಿಟ್ಟು ಬಂದರೆ ತಡವಿಲ್ಲದರಿದು, ಒಡನಿರ್ದ ಧನವ ವಂಚನೆಯನರಿಯದೆ ಈವುದು ಗುರುನಿರಂಜನ ಚನ್ನಬಸವಲಿಂಗಕ್ಕೆ ಅಭಿನ್ನಭಕ್ತಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->