ಅಥವಾ

ಒಟ್ಟು 38 ಕಡೆಗಳಲ್ಲಿ , 19 ವಚನಕಾರರು , 36 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೊಲದೊಳಗೊಂದು ಹುಲ್ಲೆ ಮರಿಯನೀದು, ಲಲ್ಲೆಯಿಂದ ನೆಕ್ಕುತ್ತಿರಲಾಗಿ, ಅದು ಹುಲಿಯ ಮರಿಯಂತಾಯಿತ್ತೆಂದು ತನ್ನ ಹೊಲಬಿಗೆ ತೋರಿ ಲಲ್ಲೆಯ ಬಿಟ್ಟಿತ್ತು. ಬಿಟ್ಟುದನರಿದು, ಆ ಮರಿ ಹುಲಿಯಾಗಿ ಹುಲ್ಲೆಯ ತಿಂದಿತ್ತು. ಬಂಕೇಶ್ವರಲಿಂಗ, ಎನ್ನಯ ಶಂಕೆಯ ಹೇಳಯ್ಯಾ.
--------------
ಸುಂಕದ ಬಂಕಣ್ಣ
ಹಾವ ಕೊಂದು ತಿಂದ ಹದ, ತಾ ತಿಂದಡೆ, ಸ್ವಾನುಭಾವಜ್ಞಾನಿ. ಹುಲಿಯ ಕೊಂದ ನಾಯ ಕೊಲ್ಲದೆ ತಂದಡೆ, ಆತ ಪರಂಜ್ಯೋತಿ ಪ್ರಕಾಶ. ಇಂತೀ ಹಾವಿನ ಹಗೆ, ಹುಲಿಯ ವಿರೋಧ. ಇಂತೀ ಉಭಯವ ತಿಂದವನ ತಿಂದು, ವಿಚ್ಛಂದವಿಲ್ಲದೆ ಬದುಕು, ಬಂಕೇಶ್ವರಲಿಂಗವನರಿವುದಕ್ಕೆ.
--------------
ಸುಂಕದ ಬಂಕಣ್ಣ
ಪಂಚಮುಖದ ಗಿರಿಯ ಗಹ್ವರದಲ್ಲಿ, ಮುಂಚಿದರೈದುವ ಹುಲಿಗಳ ಕಂಡೆ. ಆ ಹುಲಿಯೊಂದಕ್ಕೆ ಐದು ಬಾಯಿ. ಆ ಬಾಯೊಳಗೆ ಹೊಕ್ಕು ಹುಲಿಯ ಕುಲಗೆಡಿಸಬೇಕು, ನಿಃಕಳಂಕ ಮಲ್ಲಿಕಾರ್ಜುನಲಿಂಗವನರಿಯಬಲ್ಲಡೆ.
--------------
ಮೋಳಿಗೆ ಮಾರಯ್ಯ
ನನ್ನ ನಾನರಿವಡೆ, ಮೂರು ಹುಲಿಯ ಮಧ್ಯದಲ್ಲಿ ಸಿಲ್ಕಿದ ಶೃಂಗಿಯಂತೆ, ಮೊತ್ತದ ಸಕಲೇಂದ್ರಿಯದ ಹುತ್ತದ ಸರ್ಪನಿದ ಠಾವಿಂಗೆ ತಪ್ಪಿಹೋದ ಮೂಷಕನಂತೆ, ಎತ್ತಲೆಂದರಿಯೆ.ಅರ್ತಿಯಿಂದ ಕಟ್ಟಿದೆ ಇಷ್ಟವ. ವಸ್ತುವಿನ ಹುಟ್ಟ ಹೇಳಾ, ಅಲೇಖನಾದ ಶೂನ್ಯ ಕಲ್ಲಿನ ಮರೆ ಬೇಡ.
--------------
ವಚನಭಂಡಾರಿ ಶಾಂತರಸ
ಇರುಹೆ ಅಂಜದೆ ಮದ ಸೊಕ್ಕಿದ ಐದಾನೆಯ ತನ್ನ ಕಡೆಗಾಲಿನಲ್ಲಿ ಕಟ್ಟಿ ಸದಮದದಲ್ಲಿ ಎಳೆವುತ್ತದೆ. ಆನೆಯ ಕೊಂಬು ಮುರಿದು, ಸುಂಡಿಲುಡುಗಿ, ಮದ ಸೋರಿ, ಗಜಘಟವಳಿದು ಹೋಯಿತ್ತು. ಇರುಹಿನ ಕಾಲು ಐಗಜವ ಕೊಂದು, ಮೂರು ಹುಲಿಯ ಮುರಿದು, ನನಗಿನ್ನಾರೂ ಅಡಹಿಲ್ಲಾಯೆಂದು ಹೋಯಿತ್ತು, ಸದಾಶಿವಮೂರ್ತಿಲಿಂಗದಲ್ಲಿಗೆ ಎಯ್ದಿತ್ತು.
--------------
ಅರಿವಿನ ಮಾರಿತಂದೆ
ಆನೆಯ ನುಂಗಿದ ಹುಲಿ, ಹುಲಿಯ ನುಂಗಿದ ಸರ್ಪ, ಸರ್ಪನ ನುಂಗಿದ ಸಿಂಹ, ಸಿಂಹನ ನುಂಗಿದ ಮರೆ, ಮರೆಯ ನುಂಗಿದ ಭಲ್ಲೂಕ ಇಂತಿವರು ಹಕ್ಕಿಯ ಹೊಲನಲ್ಲಿ ತಮ್ಮ ತಮ್ಮ ವೈರತ್ವದಿಂದಲಿರುವುದಿದೇನು ಚೋದ್ಯ ಹೇಳಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಸಿರಿಯ ಭೂಮಿಯ ಮಧ್ಯದಲ್ಲಿ ಉರಿಯ ಮಡು ಹುಟ್ಟಿತ್ತು. ಆ ಮಡುವಿನ ಮಧ್ಯದಲ್ಲಿ ಐದು ಸರಗೂಡಿದ ಬಾವಿ. ಆ ಬಾವಿಯೊಳಗೆ ಮೂರು ಮುಖದ ಹುಲಿ ಹುಟ್ಟಿತ್ತು. ಒಂದು ಕೊಂದು ತಿಂಬುದು, ಒಂದು ಕೊಲ್ಲದೆ ತಿಂಬುದು, ಒಂದು ಎಲ್ಲರ ನೋಡಿ ತಿಂಬುದು, ಅಲ್ಲಾ ಎಂಬುದು, ಹುಲಿಯ ಬಣ್ಣ ಮೊದಲು ಕಪ್ಪು, ನಡುವೆ ಭಾಸುರ, ತುದಿಯಲ್ಲಿ ಬಿಳಿದು. ಹಗೆವಣ್ಣ ಸಹಿತಾಗಿ ಹುಟ್ಟಿದ ಹುಲಿ, ಉರಿಯ ಮಡುವನೀಂಟಿ, ಸರಬಾವಿಯ ಕುಡಿದು, ತಿಂಬವೆರಡು ಮುಖ ತಿನ್ನದ ಮುಖದಲ್ಲಿ ಅಡಗಿ, ಕಡೆ ಕಪ್ಪು, ನಡುವಣ ಭಾಸುರ, ತುದಿಯ ಬಿಳುಪಿನಲ್ಲಿ ಅಡಗಿ ಒಡಗೂಡಿತ್ತು. ಅದರ ತೊಡಿಗೆಯ ಕೇಳಿಹರೆಂದಂಜಿ, ಅಡಗಿದೆಯಾ, ಅಲೇಖನಾದ ಶೂನ್ಯ ಕಲ್ಲಿನೊಳಗಾಗಿ ?
--------------
ವಚನಭಂಡಾರಿ ಶಾಂತರಸ
ಸಂಸಾರವೆಂಬ ಅರಣ್ಯದೊಳು ಬಿದ್ದೆನು. ಆಸೆಯೆಂಬ ಹುಲಿ ಬಂದು ಹಿಡಿಯಿತ್ತಯ್ಯ ಎನ್ನ. ನಿಮ್ಮ ಮಹಾಜ್ಞಾನ ಶಸ್ತ್ರದಲ್ಲಿ ಆಸೆಯೆಂಬ ಹುಲಿಯ ಕೊಂದು ನಿಮ್ಮತ್ತ ತೆಗೆದುಕೊಳ್ಳಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಯ್ಯಾ [ನಾ] ನಿನಗಂಜುವೆ. ಕಚ್ಚುವ ಹಾವ ಕೈಯಲ್ಲಿ ಹಿಡಿದೆ. [ಕು]ತ್ತುವ ಹಸುವ ಬಾಗಿಲಲ್ಲಿ ಕಟ್ಟಿದೆ. ತಿಂಬ ಹುಲಿಯ ಅಂಗಳದಲ್ಲಿ ಕೂಡಿದೆ. ನಿನ್ನಂಗವಿದೇನೊ, ಅಭಂಗ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪರರಾಣಿಯರ ನೋಡುವಲ್ಲಿ, ಅಂಧನಾಗಿಪ್ಪ ನೋಡಾ ಜಂಗಮನು. ಪರಧನವ ಕಂಡಲ್ಲಿ, ಹುಲಿಯ ಕಂಡು ಹುಲ್ಲೆಯಂತೆ ಭೀತಿಬಡುವ ನೋಡಾ ಜಂಗಮನು. ದುರ್ನರರ ಸಂಭಾಷಣೆಯ ಕೇಳುವಲ್ಲಿ ಅ್ಕಮೂರ್ಖನಾಗಿಪ್ಪ ನೋಡಾ ಜಂಗಮನು. ದುಷ್ಕರ್ಮಪಥದೊಳರಸುವಲ್ಲಿ, ಕಡುಜಡ ಹೆಳವ ನೋಡಾ ಜಂಗಮನು. ಅಕ್ಷಾಂಗವಿಷಯಗಳೊಳು, ನಿಷ್ಕರುಣಿಯಾಗಿಪ್ಪ ನೋಡಾ ಜಂಗಮನು. ಶಿವನಿಂದಕರ ಸ್ವರಗೇಳುವಲ್ಲಿ, ಬಧಿರನಾಗಿಪ್ಪ ನೋಡಾ ಜಂಗಮನು. ದುರಾತ್ಮರಿಗೆ ಜ್ಞಾನದ್ರವ್ಯ ಕೊಡುವಲ್ಲಿ, ಲೋಭಿಯಾಗಿಪ್ಪ ನೋಡಾ ಜಂಗಮನು, ಕಪಿಲಸಿದ್ಧಮಲ್ಲಿಕಾರ್ಜುನನು
--------------
ಸಿದ್ಧರಾಮೇಶ್ವರ
ಮತ್ಸ್ಯದ ಕಣ್ಣು, ಸರ್ಪನ ವಿಷ, ಹುಲಿಯ ಕಾಲುಗುರು ನಡೆವಲ್ಲಿ ಅಡಗುವಂತೆ, ಕೊಲುವಲ್ಲಿ ಬಿಡುವಂತೆ ಇಂತೀ ವಿಗಡತ್ರಯವ ಅರಿ, ಅಸುವಿನ ಭೇದವ ಏಣಾಂಕಧರ ಸೋಮೇಶ್ವರಲಿಂಗವ ಬಲ್ಲಡೆ.
--------------
ಬಿಬ್ಬಿ ಬಾಚಯ್ಯ
ನವಿಲಾಡಿತೆಂದು ಕೆಂಬೋತ ಪಕ್ಕವ ತರಕೊಂಡಂತೆ ಹುಲಿಯ ಬಣ್ಣಕ್ಕೆ ನರಿ ಮೈಯ ಸುಟ್ಟುಕೊಂಡಂತೆ ಕೋಗಿಲೆ ಸ್ವರಗೆಯ್ದದೆಂದು ಕಾಗೆ ಕರೆದಂತೆ ಲಿಂಗನಿಷಾ*ಂಗಿ ವಚನಹಾಡಿದರೆ ಒಪ್ಪುವನಲ್ಲದೆ ನಿಷೆ*ಹೀನರು ಓದಿ ಹಾಡಿದರೆ ನಳ್ಳಿಗುಳ್ಳೆಯ ತಿಂದ ನರಿ ಹಳ್ಳದ ತಡಿಯಲ್ಲಿ ಬಳ್ಳಿಟ್ಟು ಬಗುಳಿದಂತೆ ಏನೆಂದು ಪಾಟಿ ಮಾಡರಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹುಲಿಯ ಕೊಂದು, ಲಿಂಗಕ್ಕೆ ಬೋನವ ಮಾಡಿದಾತ ಬಸವಣ್ಣ. ಕರಡಿಯ ಕೊಂದು, ಲಿಂಗಕ್ಕೆ ಬೋನವ ಮಾಡಿದಾತ ಬಸವಣ್ಣ. ಹಾವಿನ ಪರಿಯಾಣವ ಮಾಡಿಕೊಡಬಲ್ಲಾತ ಬಸವಣ್ಣ ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಎನ್ನ ಮಾತು ನಿಮಗೆ ಅನ್ಯವೆ? ರಂಭದ ಸಂಚಾರ ರಂಭಕ್ಕೆ ಕೇಡು. ಕುರುಂಬದ ಸಂಚಾರ ರಂಭದ ಕೇಡು. ಎನ್ನಿಂದ ನಿಮ್ಮಿಂದ ಬಂದ ಕೊರತೆ ಪ್ರಮಥ ಸಮೂಹಕ್ಕೆ ಭಂಗ. ಹುಲಿಯ ಪ್ರಾಣ ಕಳ್ಳನ ತಲೆ ಹಗೆಯ ಮರಣವೆಲ್ಲಕ್ಕೂ ಲೇಸು. ಇಂದು ಎನಗೆ ಅಗೂಢವಿಲ್ಲ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಹುಲಿಯ ಹಾಲು ಹುಲಿಗಲ್ಲದೆ ಹೊಲದ ಹುಲ್ಲೆಗುಣಬಾರದು, ಕಲಿಯ ಕಾಲ ತೊಡರು ಛಲದಾಳಿಗಲ್ಲದೆ ಇಕ್ಕಬಾರದು. ಅಳಿಮನದಾಸೆಯವರ ಮೂಗ ಹಲುದೋರೆ ಕೊಯ್ವ ಕೂಡಲಸಂಗಮದೇವ.
--------------
ಬಸವಣ್ಣ
ಇನ್ನಷ್ಟು ... -->