ಅಥವಾ

ಒಟ್ಟು 36 ಕಡೆಗಳಲ್ಲಿ , 21 ವಚನಕಾರರು , 34 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೃದಯದ ಬಾವಿಯ ತಡಿಯಲ್ಲಿ ಒಂದು ಬಾಳೆ ಹುಟ್ಟಿತ್ತು ! ಆ ಬಾಳೆಯ ಹಣ್ಣ ಮೆಲಬಂದ ಸರ್ಪನ ಪರಿಯ ನೋಡಾ. ಬಾಳೆ ಬೀಗಿ ಸರ್ಪನೆದ್ದೆಡೆ_ನಿರಾಳವು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಸದ್ಯೋಜಾತಮುಖವೆ ಎನಗೆ ಬಸವಣ್ಣನಯ್ಯಾ, ವಾಮದೇವಮುಖವೆ ಎನಗೆ ಚೆನ್ನಬಸವಣ್ಣನಯ್ಯಾ, ಅಘೋರಮುಖವೆ ಎನಗೆ ಮಡಿವಾಳಯ್ಯನಯ್ಯಾ, ತತ್ಪುರುಷಮುಖವೆ ಎನಗೆ ಸಿದ್ಧರಾಮಯ್ಯನಯ್ಯಾ, ಈಶಾನಮುಖವೆ ಎನಗೆ ಪ್ರಭುದೇವರಯ್ಯಾ, ಹೃದಯದ ಮುಖವೆ ಎನಗೆ ಗಣಂಗಳಯ್ಯಾ. ಇಂತಿವರ ಶ್ರೀಚರಣದಲ್ಲಿ ಉರಿಯುಂಡ ಕರ್ಪುರದಂತೆ ಬೆರಸಿದೆನಯ್ಯಾ ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಸಮಯದಲ್ಲಿ ಸಮ್ಮತನು ಆಚಾರದ ನೆಲೆಯನರಿದು, ಹೃದಯದ ಕತ್ತಲೆಯ ಉದಯದಲ್ಲಿಯೇ ಕಳೆದ. ಮುಟ್ಟುವುದ ಮುಟ್ಟದೆ ಕಳೆದ; ಮುಟ್ಟದುದ ಮುನ್ನವೆ ಕಳೆದ. ಅಯ್ಯಾ ಆಯ್ಯಾ ಎಂದಲ್ಲಿಯೆ ಕಲಿಯಾದ. ಕೇಸರಿಸಮ ಜೋಗ; ಐದರ ಮದಸೇನೆ ಮುರಿಯಿತ್ತು, ಎನ್ನೊಡೆಯ ಕೂಡಲಚೆನ್ನಸಂಗಯ್ಯ ಹಿಡಿವಡೆದ
--------------
ಚನ್ನಬಸವಣ್ಣ
ಎನ್ನ ಘ್ರಾಣದ ಕೊನೆಯಲ್ಲಿ ಕುಳ್ಳಿರ್ದು ಷಡ್ವಿಧಗಂಧವೆಂಬ ಭಕ್ತಿಪದಾರ್ಥವ ಕೈಕೊಂಡು ಎನಗೆ ಮುಕ್ತಿಪ್ರಸಾದವ ಕರುಣಿಸುವಾತನು ನೀನೆ ಅಯ್ಯಾ. ಎನ್ನ ಜಿಹ್ವೆಯ ಕೊನೆಯಲ್ಲಿ ಕುಳ್ಳಿರ್ದು ಷಡ್ವಿಧರಸವೆಂಬ ಭಕ್ತಿಪದಾರ್ಥವ ಕೈಕೊಂಡು ಎನಗೆ ಮುಕ್ತಿಪ್ರಸಾದವ ಕರುಣಿಸುವಾತನು ನೀನೆ ಅಯ್ಯಾ. ಎನ್ನ ನೇತ್ರದ ಕೊನೆಯಲ್ಲಿ ಕುಳ್ಳಿರ್ದು ಷಡ್ವಿಧರೂಪವೆಂಬ ಭಕ್ತಿಪದಾರ್ಥವ ಕೈಕೊಂಡು ಎನಗೆ ಮುಕ್ತಿಪ್ರಸಾದವ ಕರುಣಿಸುವಾತನು ನೀನೆ ಅಯ್ಯಾ. ಎನ್ನ ತ್ವಕ್ಕಿನ ಕೊನೆಯಲ್ಲಿ ಕುಳ್ಳಿರ್ದು ಷಡ್ವಿಧಸ್ಪರ್ಶನವೆಂಬ ಭಕ್ತಿಪದಾರ್ಥವ ಕೈಕೊಂಡು ಎನಗೆ ಮುಕ್ತಿಪ್ರಸಾದವ ಕರುಣಿಸುವಾತನು ನೀನೆ ಅಯ್ಯಾ. ಎನ್ನ ಶ್ರೋತ್ರದ ಕೊನೆಯಲ್ಲಿ ಕುಳ್ಳಿರ್ದು ಷಡ್ವಿಧಶಬ್ದವೆಂಬ ಭಕ್ತಿಪದಾರ್ಥವ ಕೈಕೊಂಡು ಎನಗೆ ಮುಕ್ತಿಪ್ರಸಾದವ ಕುರಣಿಸುವಾತನು ನೀನೆ ಅಯ್ಯಾ. ಎನ್ನ ಹೃದಯದ ಕೊನೆಯಲ್ಲಿ ಕುಳ್ಳಿರ್ದು ಷಡ್ವಿಧ ತೃಪ್ತಿಯೆಂಬ ಭಕ್ತಿಪದಾರ್ಥವ ಕೈಕೊಂಡು, ಎನಗೆ ಮುಕ್ತಿಪ್ರಸಾದವ ಕರುಣಿಸುವಾತನು ನೀನೆ ಅಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಮಹಾನಾದ ಕಳೆಯವೆ ಲಿಂಗಕ್ಕಾಶ್ರಯವಾಗಿ, ಲಿಂಗ ಕಳೆಯವೆ ಹೃದಯಕ್ಕಾಶ್ರಯವಾಗಿ, ಹೃದಯದ ಕಳೆಯವೆ ಜ್ಞಾನಕ್ಕಾಶ್ರಯವಾಗಿ, ಜ್ಞಾನದ ಕಳೆಯವೆ ನಿತ್ಯಕ್ಕಾಶ್ರಯವಾಗಿ, ನಿತ್ಯನಿರವಯ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎನುತ್ತಿದ್ದೆನು.
--------------
ಘಟ್ಟಿವಾಳಯ್ಯ
ಹೃದಯದ ಕೊನೆಯ ಮೇಲೆ ಬಂದ ಪರಿಣಾಮದ ತೃಪ್ತಿಯ ಸುಖವ, ಹೃದಯದ ಮನದ ಕೊನೆಯ ಮೊನೆಯ ಮೇಲೆ, ಮಹಾಲಿಂಗಕ್ಕೆ ಸಮರ್ಪಿಸಬೇಕು. ಶ್ರೋತ್ರದ ಕೊನೆಯಲ್ಲಿ ಬಂದ ಸಂಗೀತದ ಪರಿಣಾಮವ, ಅವಧಾನದ ಶ್ರೋತ್ರದ ಕೊನೆಯ ಮೊನೆಯ ಮೇಲೆ, ಪ್ರಸಾದಲಿಂಗಕ್ಕೆ ಅರ್ಪಿಸಬೇಕು. ನೇತ್ರದ ಕೊನೆಯಲ್ಲಿ ಬಂದ ಸುಲಕ್ಷಣ ಸುರೂಪಿನ ಪರಿಣಾಮವ, ಅವಧಾನದ ಮನದ ಕೊನೆಯ ಮೊನೆಯ ಮೇಲೆ, ಶಿವಲಿಂಗಕ್ಕೆ ಸಮರ್ಪಿಸಬೇಕು. ನಾಸಿಕದ ಕೊನೆಯಲ್ಲಿ ಬಂದ ಸುಗಂಧದ ಪರಿಣಾಮವ, ಅವಧಾನದ ಮನದ ಕೊನೆಯ ಮೊನೆಯ ಮೇಲೆ, ಆಚಾರಲಿಂಗಕ್ಕೆ ಅರ್ಪಿಸಬೇಕು. ಜಿಹ್ವೆಯ ಕೊನೆಯಲ್ಲಿ ಬಂದ ಸುಸ್ವಾದುವಿನ ಪ್ರಸಾದದ ರುಚಿಯ ಪರಿಣಾಮವ, ಅವಧಾನದ ಮನದ ಕೊನೆಯ ಮೊನೆಯ ಮೇಲೆ, ಗುರುಲಿಂಗಕ್ಕೆ ಸಮರ್ಪಿಸಬೇಕು. ತ್ವಕ್ಕಿನ ಕೊನೆಯಲ್ಲಿ ಬಂದ ಸುಪರ್ಶನದ ಸುಖದ ಪರಿಣಾಮವ, ಅವಧಾನದ ಮನದ ಕೊನೆಯ ಮೊನೆಯ ಮೇಲೆ, ಜಂಗಮಲಿಂಗಕ್ಕೆ ಸಮರ್ಪಿಸಬೇಕು. ಮನದಲ್ಲಿ ತಟ್ಟುವ ಮುಟ್ಟುವ ತಾಗುನಿರೋಧವೆಲ್ಲವನೂ ಅವಧಾನದ ಮನದ ಕೊನೆಯ ಮೊನೆಯ ಮೇಲೆ, ಮಹಾಘನಲಿಂಗಕ್ಕೆ ಸಮರ್ಪಿಸಬೇಕು. ಈ ಕ್ರಮವನರಿದು ಸರ್ವಾವಧಾನಿಯಾಗಿ, ಗುರುಲಿಂಗಜಂಗಮಮುಖದಲ್ಲಿ ತನುಮನಧನವನರ್ಪಿಸಿ, ಆ ಶುದ್ಧಸಿದ್ಧಪ್ರಸಿದ್ಧಪ್ರಸಾದದ ರೂಪುರುಚಿತೃಪ್ತಿಯ ಆದಿಮಧ್ಯಾಂತವನರಿದು, ಸಾವಧಾನಭಕ್ತಿಯಿಂ ಇಷ್ಟಪ್ರಾಣಭಾವಲಿಂಗಕ್ಕರ್ಪಿಸಿ, ಮಹಾಪ್ರಸಾದಿಯಾಗಿಪ್ಪಾತ, ನಮ್ಮ ಚನ್ನಬಸವಣ್ಣ ಕಾಣಿರಯ್ಯಗಳಿರಾ. ಈ ಪ್ರಕಾರದ ಅವಧಾನ ಮನದ ಕೊನೆಯ ಮೊನೆಯ ಮೇಲೆ, ಸರ್ವಾರ್ಪಿತಕ್ರಮವನರಿದು ಪ್ರಸಾದಭೋಗಿಯಾಗಿಪ್ಪಾತನು, ನಮ್ಮ ಸಂಗನಬಸವಣ್ಣನು ಕೇಳಿರಣ್ಣಗಳಿರಾ. ಈ ಬಸವಣ್ಣನ ಪ್ರಸಾದವ ಕೊಂಡು ನಾನು ಬದುಕಿದೆನು ಕಾಣಾ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ. ಮತ್ತೀ ಕ್ರಮವನರಿದು, ಅರ್ಪಿತಮುಖವನರಿದು ಅರ್ಪಿಸಿ, ತೃಪ್ತಿಯನೈದಬಲ್ಲ ಶರಣರ ಮಹಾತ್ಮೆಯ ನೀವೆ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಒಂದೆ ಭಾವದಿಂದ ಗುರುಲಿಂಗಾರ್ಚನೆ ಪೂಜೆಯಂ ಮಾಡಿ, ಹಿಂದಣ ಭವಜನ್ಮ ದಂದುಗವನೆ ಗೆಲಿದು, ಶಿವನ ಸಲುಸಂದ ಪ್ರಮಥರ ಸರಿಯೆನಿಸಿಕೊಂಬುದು ಸಾಮಾನ್ಯವಲ್ಲ. ಕಂದನ ಶಿವಗರ್ಪಿತವ ಮಾಡಿ, ಸಿರಿಯಾಳಸೆಟ್ಟಿ ಕೈಲಾಸ ಕಾಬುದು ಸಂದೇಹವಾಗಿಹುದೆಂದ. ಹೃದಯದ ಅಂಧಕಾರ ಹರಿಯಲೆಂದು, ಗುರುದೇವನು ಬೆಳಗ ತೋರಿದ. ಹಿಂದಣ ಸೂತಕ ತೊಳೆಯಲೆಂದು ನಿಂದರೂ ಮಾಯಾಬಂಧನದಲ್ಲಿ ಸಿಲ್ಕಿ, ಗುರುವಿಂಗೆ ವಂದನೆಯ ಮಾಡದೆ, ಶಿವಗತಿಗೆ ಸಂದೆನೆಂಬ ಸ್ವಾಮಿದ್ರೋಹಿಗಳಿಗೆ ಎಂದೂ ಗತಿಯಿಲ್ಲವೆಂದ, ಕಲಿದೇವರದೇವಯ್ಯ.
--------------
ಮಡಿವಾಳ ಮಾಚಿದೇವ
ಆವಂಗದ ಮರೆಯಲ್ಲಿದ್ದು ಕಾದುವ ಭಟನು: ಆ(ವಂಗ)ದ ಮರೆಯ ಸತ್ವವೋ ? ತನ್ನ ಹೃದಯದ ಸತ್ವವೋ ? ಒಂದನಹುದು ಒಂದನಲ್ಲಾ, ಎಂದಡೆ ಕ್ರೀ ನಿಃಕ್ರೀಯೆಂಬ ಉಭಯವಿಲ್ಲ. ಎರಡನೊಡಗೂಡಿ ಒಂದನರಿದಿಹೆನೆಂದಡೆ ಸಾಕಾರವೊಂದು ನಿರಾಕಾರವೊಂದು. ಸಾಕಾರವನು ನಿರಾಕಾರವನು ಏಕೀಕರಿಸಿ ಕಂಡೆಹೆನೆಂದಡೆ ಅದು ಒಂದು ದೃಷ್ಟ, ಒಂದು ತನ್ನಷ್ಟ. ಆ ಉಭಯದಂಗ ಒಂದಂಗವಾಗಿ ಕರ್ಪುರದ ಗಿರಿಯಲ್ಲಿ ಉರಿಯುದಿಸಿದ ತೆರನಂತೆ ಉಭಯ ಏಕವಾಗಿಯಲ್ಲದೆ ಭೋಗಬಂಕೇಶ್ವರಲಿಂಗವನರಿಯಬಾರದು.
--------------
ಶ್ರೀ ಮುಕ್ತಿರಾಮೇಶ್ವರ
ವಚನದ ಹುಸಿ ನುಸುಳೆಂತು ಮಾಬುದೆನ್ನ ಮನದ ಮರ್ಕಟತನವೆಂತು ಮಾಬುದೆನ್ನ ಹೃದಯದ ಕಲ್ಮಷವೆಂತು ಮಾಬುದೆನ್ನ ಕಾಯವಿಕಾರಕ್ಕೆ ತರಿಸಲುವೋದೆನು, ಎನಗಿದು ವಿಧಿಯೇ, ಕೂಡಲಸಂಗಮದೇವಾ 41
--------------
ಬಸವಣ್ಣ
ಪರತತ್ತ್ವದ ಹೃದಯದ ಮೇಲೆ ನಿರಂಜನ ಆಜ್ಞಾಚಕ್ರ. ಅಲ್ಲಿಯ ಪದ್ಮ ವಿಶ್ವತೋದಳಪದ್ಮ. ಆ ಪದ್ಮದ ವರ್ಣ ಅನಂತಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶದ ವರ್ಣ. ಅಲ್ಲಿಯ ಅಕ್ಷರಂಗಳು ವಿಶ್ವತೋ ಅಕ್ಷರಂಗಳು. ಆ ಅಕ್ಷರಂಗಳು ವಿಶ್ವಾತೀತವಾಗಿಹುದು. ಅಲ್ಲಿಯ ಶಕ್ತಿ ನಿರಾಮಯಾನಂದಾತೀತವೆಂಬ ಮಹಾಶಕ್ತಿ. ನಿರಂಜನಾತೀತವೆಂಬ ಮಹಾಘನಲಿಂಗವೆ ಅಧಿದೇವತೆ. ಅಲ್ಲಿಯ ನಾದ ಮಹಾಗುಹ್ಯನಾದ. ಅಲ್ಲಿಯ ಬೀಜಾಕ್ಷರ ನಿರಂಜನಪ್ರಣವ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಎನ್ನ ಕಾಯದ ಕದಳಿಯೆ ಸಂಗನಬಸವಣ್ಣನು, ಎನ್ನ ಜೀವದ ಸುಮನವೆ ಚೆನ್ನಬಸವಣ್ಣನು. ಎನ್ನ ಭಾವದ ಬಲುಹೆ ಪ್ರಭುದೇವರು, ಎನ್ನ ತನುವಿನ ಮೂರ್ತಿಯೆ ಚಂದಯ್ಯನು, ಎನ್ನ ಮನದ ನಿಶ್ಚಯವೆ ಮಡಿವಾಳಯ್ಯನು, ಎನ್ನ ಪ್ರಾಣದ ಪರಿಣಾಮವೆ ಹಡಪದಪ್ಪಣ್ಣನು, ಎನ್ನ ಅರುಹಿನ ನೈಷೆ*ಯೆ ಸೊಡ್ಡಳ ಬಾಚರಸನು, ಎನ್ನಾಚಾರದ ದೃಢವೇ ಮೋಳಿಗೆಯ ಮಾರಯ್ಯನು, ಎನ್ನ ನೋಟದ ನಿಬ್ಬೆರಗೆ ಅನುಮಿಷದೇವರು, ಎನ್ನ ಶ್ರೋತ್ರದ ಕೇಳಿಕೆಯೆ ಮರುಳಶಂಕರದೇವರು, ಎನ್ನ ಹೃದಯದ ಜ್ಯೋತಿಯೆ ಘಟ್ಟಿವಾಳಯ್ಯನು, ಎನ್ನಂತರಂಗದ ಬೆಳಗೆ ಅಜಗಣ್ಣಯ್ಯನು, ಎನ್ನ ಬಹಿರಂಗದ ನಿರಾಳವೆ ನಿಜಗುಣದೇವರು, ಎನ್ನ ಸರ್ವಾಂಗದ ಕಳೆಯೆ ಸಿದ್ಧರಾಮಯ್ಯನು, ಎನ್ನ ಗತಿಮತಿಚೈತನ್ಯವೇ ಏಳ್ನೂರೆಪ್ಪತ್ತಮರಗಣಂಗಳು. ಭೋಗಬಂಕೇಶ್ವರಾ, ನಿಮ್ಮ ಶರಣರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಶ್ರೀ ಮುಕ್ತಿರಾಮೇಶ್ವರ
ಶಿವತತ್ತ್ವದ ಹೃದಯದ ಮೇಲೆ ನಿರಾಳ ಆಜ್ಞಾಚಕ್ರ. ಅಲ್ಲಿಯ ಪದ್ಮ ಅನೇಕ ಕೋಟಿದಳಪದ್ಮ. ಆ ಪದ್ಮದ ವರ್ಣ ಅಂಥಾದಿಂಥಾದೆಂದು ಉಪಮೆ ಇಲ್ಲದ ಉಪಮಾತೀತವಾಗಿಹುದು. ಅಲ್ಲಿಯ ಅಕ್ಷರ ಅನೇಕ ಕೋಟಿ ಅಕ್ಷರ ; ಆ ಅಕ್ಷರ ಸರ್ವಾತೀತವಾಗಿಹುದು. ಅಲ್ಲಿಯ ಶಕ್ತಿ ನಿರಾಳಪ್ರಣವವೆಂಬ ಮಹಾಶಕ್ತಿ. ನಿರಾಳಾತೀತವೆಂಬ ಮಹಾಘನಲಿಂಗವೆ ಅಧಿದೇವತೆ. ಅಲ್ಲಿಯ ನಾದ ಪರಮಾನಂದವೆಂಬ ಮಹಾನಾದ. ಅಲ್ಲಿ ಬೀಜಾಕ್ಷರ ಕಲಾಪ್ರಣವ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಕಾರುಕನ ಹೃದಯದ ಕಪಟ, ಕಣಿಲೆಂದು ಕೈಯ ಕಲ್ಲು, ತನು ಕಟ್ಟಳೆಹೀನನ ಹೊಗುತೆ, ಸೈರಣೆಯವಳೊಳುಪಿನ ಮಾತು, ಇವು ಸಾರದ ಪ್ರಸ್ಥದಂತೆ, ವೇಷಡಂಬಕನ ಚಾತುರಿಯದ ಗೀತ[ದಂತೆ]. ಇಂತೀ ಘಾತುಕತನದ ವೇಷವ ಬಿಟ್ಟು, ನುಡಿ ನಡೆ ಸಿದ್ಧಾಂತವಾಗಬೇಕು. ಸಗರದ ಬೊಮ್ಮನೊಡೆಯ ಇವರಿಗೆ ಸದರವೆ ಹರಿ, ಕುಟಿಲ ಬಿಟ್ಟು ಅರಿ, ತನುಮನ ಸಂಗಮೇಶ್ವರಲಿಂಗವ.
--------------
ಸಗರದ ಬೊಮ್ಮಣ್ಣ
ಎನ್ನ ಸರ್ವಾಂಗವೆಲ್ಲವೂ ಲಿಂಗವಾದ ಪರಿಕ್ರಮವೆಂತೆಂದಡೆ; ಶ್ರೀಗುರು ಬಸವಣ್ಣನುಪದೇಶಿಸಿದ ಇಷ್ಟಲಿಂಗವೆನ್ನ ಸರ್ವಾಂಗದಲ್ಲಿ ಭಿನ್ನ ನಾಮಂಗಳಿಂದ ಪ್ರಕಾಶಿಸುತ್ತಿಹುದು. ಅದೆಂತೆಂದಡೆ ; ಸ್ಥೂಲಾಂಗದಲ್ಲಿ ಇಷ್ಟಲಿಂಗವೆಂದು, ಸೂಕ್ಷ್ಮಾಂಗದಲ್ಲಿ ಪ್ರಾಣಲಿಂಗವೆಂದು ಕಾರಣಾಂಗದಲ್ಲಿ ಭಾವಲಿಂಗವೆಂದು ತ್ರಿಭೇದವಾಗಿಹುದು. ಇಂತು ಅಂಗವ ಕುರಿತು ಮೂರು ತೆರನಾಯಿತ್ತು. ಇನ್ನು ಇಂದ್ರಿಯಂಗಳ ಕುರಿತು ಆರು ತೆರನಾಗಿರ್ಪುದು. ಅದು ಹೇಗೆಂದಡೆ; ಹೃದಯದಲ್ಲಿ ಮಹಾಲಿಂಗವೆಂದು, ಶ್ರೋತ್ರದಲ್ಲಿ ಪ್ರಸಾದಲಿಂಗವೆಂದು, ತ್ವಕ್ಕಿನಲ್ಲಿ ಜಂಗಮಲಿಂಗವೆಂದು, ನೇತ್ರದಲ್ಲಿ ಶಿವಲಿಂಗವೆಂದು, ಜಿಹ್ವೆಯಲ್ಲಿ ಗುರುಲಿಂಗವೆಂದು, ಘ್ರಾಣದಲ್ಲಿ ಆಚಾರಲಿಂಗವೆಂದು, ಇಂತು ಷಡಿಂದ್ರಿಯಂಗಳಲ್ಲಿ ಷಡ್ವಿಧಲಿಂಗವಾಗಿ ತೋರಿತ್ತು. ಇಂತೀ ಮರ್ಯಾದೆಯಲ್ಲಿ ಜ್ಞಾನ-ಕರ್ಮೇಂದ್ರಿಯಂಗಳಲ್ಲಿಯೂ ಲಿಂಗವೆ ಪ್ರಕಾಶಿಸುತ್ತಿಹುದು. ಅದು ಹೇಗಂದಡೆ; ಜ್ಞಾನೇಂದ್ರಿಯಂಗಳಿಗೆಯೂ ಕರ್ಮೇಂದ್ರಿಯಂಗಳಿಗೆಯೂ ಭೇದವಿಲ್ಲ. ಅದೆಂತೆಂದಡೆ, ಶ್ರೋತ್ರಕ್ಕೂ ವಾಕ್ಕಿಗೂ ಭೇದವಿಲ್ಲ, ಶಬ್ದಕ್ಕೂ ವಚನಕ್ಕೂ ಭೇದವಿಲ್ಲ; ತ್ವಕ್ಕಿಗೂ ಪಾಣಿಗೂ ಭೇದವಿಲ್ಲ, ಸ್ಪರ್ಶಕ್ಕೂ ಆದಾನಕ್ಕೂ ಭೇದವಿಲ್ಲ; ನೇತ್ರಕ್ಕೂ ಪಾದಕ್ಕೂ ಭೇದವಿಲ್ಲ, ರೂಪಿಗೂ ಗಮನಕ್ಕೂ ಭೇದವಿಲ್ಲ, ಜಿಹ್ವೆಗೂ ಗುಹ್ಯಕ್ಕೂ ಭೇದವಿಲ್ಲ, ರಸಕ್ಕೂ ಆನಂದಕ್ಕೂ ಭೇದವಿಲ್ಲ; ಘ್ರಾಣಕ್ಕೂ ಗುದಕ್ಕೂ ಭೇದವಿಲ್ಲ, ಗಂಧಕ್ಕೂ ವಿಸರ್ಜನಕ್ಕೂ ಭೇದವಿಲ್ಲ, ಇನ್ನು ಶ್ರೋತ್ರವೆಂಬ ಜ್ಞಾನೇಂದ್ರಿಯಕ್ಕೂ ವಾಕ್ಕೆಂಬ ಕರ್ಮೇಂದ್ರಿಯಕ್ಕೂ ಶಬ್ದ ವಿಷಯ, ಮೂಲಭೂತ ಆಕಾಶ, ಈಶಾನಮೂರ್ತಿ ಅಧಿದೇವತೆ. ತ್ವಕ್ಕೆಂಬ ಜ್ಞಾನೇಂದ್ರಿಯಕ್ಕೂ ಪಾಣಿಯೆಂಬ ಕರ್ಮೇಂದ್ರಿಯಕ್ಕೂ ಸ್ಪರ್ಶನ ವಿಷಯ, ಮೂಲಭೂತ ವಾಯು, ತತ್ಪುರುಷಮೂರ್ತಿ ಅಧಿದೇವತೆ. ದೃಕ್ಕೆಂಬ ಜ್ಞಾನೇಂದ್ರಿಯಕ್ಕೂ ಪಾದವೆಂಬ ಕರ್ಮೇಂದ್ರಿಯಕ್ಕೂ ರೂಪು ವಿಷಯ, ಮೂಲಭೂತ ಅಗ್ನಿ, ಅಘೋರಮೂರ್ತಿ ಅಧಿದೇವತೆ. ಜಿಹ್ವೆಯೆಂಬ ಜ್ಞಾನೇಂದ್ರಿಯಕ್ಕೂ ಗುಹ್ಯವೆಂಬ ಕರ್ಮೇಂದ್ರಿಯಕ್ಕೂ ರಸ ವಿಷಯ, ಮೂಲಭೂತ ಅಪ್ಪು, ವಾಮದೇವಮೂರ್ತಿ ಅಧಿದೇವತೆ, ಘ್ರಾಣವೆಂಬ ಜ್ಞಾನೇಂದ್ರಿಯಕ್ಕೂ ಪಾಯುವೆಂಬ ಕರ್ಮೇಂದ್ರಿಯಕ್ಕೂ ಗಂಧ ವಿಷಯ, ಮೂಲಭೂತ ಪೃಥ್ವಿ, ಸದ್ಯೋಜಾತಮೂರ್ತಿ ಅಧಿದೇವತೆ. ಇಂತೀ ಜ್ಞಾನೇಂದ್ರಿಯಂಗಳಿಗೆಯೂ ಕರ್ಮೇಂದ್ರಿಯಂಗಳಿಗೆಯೂ ಹೃದಯವೆ ಆಶ್ರಯಸ್ಥಾನವಾದ ಕಾರಣ, ಹೃದಯ ಆಕಾಶವೆನಿಸಿತ್ತು. ಅಲ್ಲಿ ಸ್ಥೂಲ ಸೂಕ್ಷ್ಮ ಕಾರಣ ರೂಪಿಂದೆಲ್ಲಾ ಇಂದ್ರಿಯಂಗಳಿರುತ್ತಿಹವು. ಗುರೂಪದೇಶದಿಂದ ಎಲ್ಲಾ ಇಂದ್ರಿಯಂಗಳಲ್ಲಿಯೂ ಲಿಂಗವೆ ಪ್ರಕಾಶಿಸುತ್ತಿಹುದು. ಅದು ಹೇಗೆಂದಡೆ; ಘ್ರಾಣದ ಘ್ರಾಣವೆ ಆಚಾರಲಿಂಗ; ಜಿಹ್ವೆಯ ಜಿಹ್ವೆಯೆ ಗುರುಲಿಂಗ; ನೇತ್ರದ ನೇತ್ರವೆ ಶಿವಲಿಂಗ; ತ್ವಕ್ಕಿನ ತ್ವಕ್ಕೆ ಜಂಗಮಲಿಂಗ; ಶ್ರೋತ್ರದ ಶ್ರೋತ್ರವೆ ಪ್ರಸಾದಲಿಂಗ; ಹೃದಯದ ಹೃದಯವೆ ಮಹಾಲಿಂಗ. ಈ ಆರು ಲಿಂಗಕ್ಕೆ ಅಂಗಸ್ಥಲ ಆರು; ಅವಾವುವೆಂದಡೆ; ಐಕ್ಯ ಶರಣ ಪ್ರಾಣಲಿಂಗಿ ಪ್ರಸಾದಿ ಮಹೇಶ್ವರ ಭಕ್ತ ಎಂದೀ ಆರು ಅಂಗಸ್ಥಲಗಳು. ಇವಕ್ಕೆ ವಿವರ; ಆತ್ಮಾಂಗದಲ್ಲಿ ಸದ್ಭಾವ ಹಸ್ತದಿಂದ ಎಲ್ಲಾ ಇಂದ್ರಿಯಂಗಳ ಪರಿಣಾಮವನು ಸಮರಸಭಕ್ತಿಯಿಂದ ಮಹಾಲಿಂಗಕ್ಕರ್ಪಿಸುವಾತನೆ ಐಕ್ಯ. ವ್ಯೋಮಾಂಗದಲ್ಲಿ ಸುಜ್ಞಾನಹಸ್ತದಿಂದ ಸುಶಬ್ದದ್ರವ್ಯವನು ಆನಂದಭಕ್ತಿಯಿಂದ ಪ್ರಸಾದಲಿಂಗಕ್ಕರ್ಪಿಸುವಾತನೆ ಶರಣ. ಅನಿಲಾಂಗದಲ್ಲಿ ಮನೋಹಸ್ತದಿಂದ ಸುಸ್ಪರ್ಶನದ್ರವ್ಯವನು ಅನುಭಾವಭಕ್ತಿಯಿಂದ ಶಿವಲಿಂಗಕ್ಕರ್ಪಿಸುವಾತನೆ ಪ್ರಾಣಲಿಂಗಿ. ಅನಲಾಂಗದಲ್ಲಿ ನಿರಹಂಕಾರಹಸ್ತದಿಂದ ಸುರೂಪುದ್ರವ್ಯವನು ಅವಧಾನಭಕ್ತಿಯಿಂದ ಶಿವಲಿಂಗಕ್ಕರ್ಪಿಸುವಾತನೆ ಪ್ರಸಾದಿ, ಜಲಾಂಗದಲ್ಲಿ ಸುಬುದ್ಧಿ ಹಸ್ತದಿಂದ ಸುರಸದ್ರವ್ಯವನು ನೈಷಿ*ಕಾಭಕ್ತಿಯಿಂದ ಗುರುಲಿಂಗಕ್ಕರ್ಪಿಸುವಾತನೆ ಮಾಹೇಶ್ವರ. ಭೂಮ್ಯಂಗದಲ್ಲಿ ಸುಚಿತ್ತಹಸ್ತದಿಂದ ಸುಗಂಧದ್ರವ್ಯವನು ಸದ್ಭಕ್ತಿಯಿಂದ ಆಚಾರಲಿಂಗಕ್ಕರ್ಪಿಸುವಾತನೆ ಭಕ್ತ. ಇನ್ನು ಷಡಾಧಾರಂಗಳಲ್ಲಿ ಷಡಕ್ಷರರೂಪದಿಂದ ಷಡ್ಲಿಂಗ ಸ್ಥಾಪ್ಯವಾಗಿಹವು. ಅದು ಹೇಗೆಂದಡೆ, ನಕಾರವೆ ಆಚಾರಲಿಂಗ, ಮಕಾರವೆ ಗುರುಲಿಂಗ, ಶಿಕಾರವೆ ಶಿವಲಿಂಗ, ವಾಕಾರವೆ ಜಂಗಮಲಿಂಗ, ಯಾಕಾರವೆ ಪ್ರಸಾದಲಿಂಗ, ಓಂಕಾರವೆ ಮಹಾಲಿಂಗ, ಎಂದು ಆರು ತೆರನಾಗಿಹವು. ಅದೆಂತೆಂದಡೆ; ಆಧಾರದಲ್ಲಿ ನಕಾರ, ಸ್ವಾಧಿಷಾ*ನದಲ್ಲಿ ಮಕಾರ, ಮಣಿಪೂರಕದಲ್ಲಿ ಶಿಕಾರ, ಅನಾಹತದಲ್ಲಿ ವಾಕಾರ, ವಿಶುದ್ಧಿಯಲ್ಲಿ ಯಕಾರ, ಆಜ್ಞೆಯಲ್ಲಿ ಓಂಕಾರ, ಇಂತೀ ಮರ್ಯಾದೆಯಲ್ಲಿ ಷಡ್ಧಾತುವಿನಲ್ಲಿ ಷಡಕ್ಷರರೂಪಿಂದ ಷಡ್ಲಿಂಗ ಸ್ಥಾಪ್ಯವಾಗಿಹವು. ಅದು ಹೇಗೆಂದಡೆ; ತ್ವಙ್ಮಯವಾಗಿಹುದು ಓಂಕಾರ, ರುಧಿರಮಯವಾಗಿಹುದು ನಕಾರ, ಮಾಂಸಮಯವಾಗಿಹುದು ಮಕಾರ, ಮೇಧೋಮಯವಾಗಿಹುದು ಶಿಕಾರ, ಅಸ್ಥಿಮಯವಾಗಿಹುದು ವಾಕಾರ, ಮಜ್ಜಾಮಯವಾಗಿಹುದು ಯಕಾರ. ಇಂತೀ ಷಡ್ಧಾತುವೆ ಷಡಕ್ಷರಮಯವಾಗಿ, ಅವೆ ಲಿಂಗಂಗಳಾಗಿ, ಒ?ಹೊರಗೆ ತೆರಹಿಲ್ಲದೆ ಸರ್ವಾಂಗವೆಲ್ಲವೂ ಲಿಂಗಮಯವಾದ ಇರವು. ಅದು ತಾನೆ ಶಿವನಿರವು, ಅದು ತಾನೆ ಶಿವನ ಭವನ. ಅದು ತಾನೆ ಶಿವನ ವಿಶ್ರಾಮಸ್ಥಾನ. ಇಂತೀ ಷಟ್ಸ್ಥಲಬ್ರಹ್ಮವನರಿದಾತನೆ ಶರಣ, ಆತನೆ ಲಿಂಗೈಕ್ಯ. ಇಂತೀ ಷಟ್ಸ್ಥಲಬ್ರಹ್ಮವೆಂಬುದು ಅಪ್ರಮಾಣ ಅಗೋಚರ ಅನಿರ್ವಾಚ್ಯವಾದ ಕಾರಣ, ವಚಿಸುತ್ತ ವಚಿಸುತ್ತ ವಚಿಸುತ್ತ ವಚನಗೆಟ್ಟಿತ್ತು. ಉಪ್ಪು ನೀರೊಳು ಕೂಡಿದಂತೆ, ವಾರಿಕಲ್ಲು ಅಂಬುಧಿಯೊಳು ಬಿದ್ದಂತೆ, ಶಿಖಿಕರ್ಪೂರ ಯೋಗದಂತೆ ಆದೆನಯ್ಯಾ ಕೂಡಲಚೆನ್ನಸಂಗಯ್ಯನಲ್ಲಿ, ಬಸವಣ್ಣನ ಭಾವಹಸ್ತ ಮುಟ್ಟಿದ ಕಾರಣ.
--------------
ಚನ್ನಬಸವಣ್ಣ
ಎನ್ನ ಘ್ರಾಣದ ಪರಿಣಾಮ ನಿಮಗರ್ಪಿತವಯ್ಯಾ. ಎನ್ನ ಜಿಹ್ವೆಯ ಪರಿಣಾಮ ನಿಮಗರ್ಪಿತವಯ್ಯಾ. ಎನ್ನ ನೇತ್ರದ ಪರಿಣಾಮ ನಿಮಗರ್ಪಿತವಯ್ಯಾ. ಎನ್ನ ತ್ವಕ್ಕಿನ ಪರಿಣಾಮ ನಿಮಗರ್ಪಿತವಯ್ಯಾ. ಎನ್ನ ಶ್ರೋತ್ರದ ಪರಿಣಾಮ ನಿಮಗರ್ಪಿತವಯ್ಯಾ. ಎನ್ನ ಹೃದಯದ ಪರಿಣಾಮ ನಿಮಗರ್ಪಿತವಯ್ಯಾ. ಎನ್ನ ಸರ್ವಾಂಗದ ಪರಿಣಾಮ ನಿಮಗರ್ಪಿತವಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇನ್ನಷ್ಟು ... -->