ಅಥವಾ

ಒಟ್ಟು 33 ಕಡೆಗಳಲ್ಲಿ , 16 ವಚನಕಾರರು , 31 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಿವತಂತ್ರದಿಂದ ಸುಖದುಃಖಗಳು ಬರುತಿಹವೆಂದರಿಯದೆ ನರಗುರಿಗಳಿಗೆ, ರೋಗ ದಾರಿದ್ರ್ಯ ಅಪಜಯಂಗಳು ಬರುತ್ತಿರಲು ವಿಪ್ರಗೆ ಕೈಮುಗಿದು ಕಾಣಿಕೆಯನಿಕ್ಕಿ ತನ್ನ ಹೆಸರ ಹೇಳಿ ಸೂರ್ಯಬಲ ಚಂದ್ರಬಲ ಬೃಹಸ್ಪತಿಬಲ ನವಗ್ರಹಬಲವ ಕೇಳುವವರಿಗೆ ಎಲ್ಲಿಯದೋ ಶಿವಭಕ್ತಿ ? ಸೂರ್ಯನು ಜ್ಞಾನವುಳ್ಳ್ಳವನಾದಡೆ ಗೌತಮಮುನೀಶ್ವರನ ಹೆಂಡತಿ ಅಹಲ್ಯಾದೇವಿಗೆ ಮೋಹಿಸಿ ಮುನಿಯ ಶಾಪದಿಂದ ಕುಷ್ಟದೊಳಗಿಹನೆ ? ಳ ಅಲ್ಲದೆ ದಕ್ಷನ ಯಾಗದಲ್ಲಿ ಹಲ್ಲ ಹೋಗಲಾಡಿಸಿಕೊಂಬನೆ ? ಚಂದ್ರನು ಜ್ಞಾನವುಳ್ಳವನಾದಡೆ ಗುರುವಿನ ಹೆಂಡತಿಗೆ ಅಳುಪಿ ಕೊಂಡೊಯ್ದು ಜಾತಜ್ವರದಲ್ಲಿ ಅಳಲುತಿಹನೆ ? ಬೃಹಸ್ಪತಿ ಜ್ಞಾನವುಳ್ಳವನಾದಡೆ ಸಕಲ ಜ್ಯೋತಿಷ್ಯಗಳ ನೋಡಿ ವಿವಾಹವಾದ ಹೆಂಡತಿ ರೋಹಿಣೀದೇವಿಯ ಚಂದ್ರನೆತ್ತಿಕೊಂಡು ಹೋಹಾಗ ಸುಮ್ಮನಿದ್ದುದು ಏನು ಜ್ಞಾನ ? ಶನಿ ಜ್ಞಾನವಳ್ಳವನಾದಡೆ ಕುಂಟನಾಗಿ ಸಂಕೋಲೆ ಬೀಳ್ವನೆ ? ಅದು ಕಾರಣ_ ತಮಗೆ ಮುಂಬಹ ಸುಖದುಃಖಂಗಳನರಿಯದವರು ಮತ್ತೊಬ್ಬರ ಸುಖದುಃಖಂಗಳ ಮೊದಲೆ ಅರಿಯರು. ಬೃಹಸ್ಪತಿಯ ಮತದಿಂದೆ ದಕ್ಷ, ಯಾಗವನಿಕ್ಕೆ ಕುರಿದಲೆಯಾಯಿತ್ತು. ಬೃಹಸ್ಪತಿಯ ಮತದಿಂದೆ ದ್ವಾರಾವತ ನೀರಲ್ಲಿ ನೆರೆದು ಕೃಷ್ಣನ ಹದಿನಾರುಸಾವಿರ ಸ್ತ್ರೀಯರ ಹೊಲೆಬೇಡರು ಸೆರೆಯನೊಯ್ದರು, ಶ್ರೀರಾಮನ ಹೆಂಡತಿ ಸೀತಾಂಗನೆ ಸೆರೆಯಾದಳು. ಇಂತೀ ತಮತಮಗೆ ಮುಂದೆ ಬಹ ಅಪಜಯಂಗಳನರಿಯದ ಕಾರಣ, ಆ ಬೃಹಸ್ಪತಿ ಜ್ಞಾನಿಯ ಮತದಿಂದೆ, ಅಭಾಷ ಜೋಯಿಸರ ಮಾತ ಕೇಳಿ ಹುಣ್ಣಿಮೆ ಅಮವಾಸೆಯಲ್ಲಿ ಉಪವಾಸವಿದ್ದು, ಗ್ರಹಬಲವುಳ್ಳ ಶುಭಮುಹೂರ್ತದಲ್ಲಿ, ಅರಳಿಯ ಮರಕ್ಕೆ ನೀರ ಹೊಯ್ದು ನೂಲ ಸುತ್ತಿ ವಿಪ್ರಜೋಯಿಸರ್ಗೆ ಹೊನ್ನು ಹಣವ ಕೊಟ್ಟಡೆ, ಹೋದೀತೆಂಬ ಅನಾಚಾರಿಯ ಮಾತ ಕೇಳಲಾಗದು. `ವಸಿಷ್ಠೇನ ಕೃತೇ ಲಗ್ನೇ ವನೇ ರಾಮೇಣ ವಾಸಿತೇ ಕರ್ಮಮೂಲೇ ಪ್ರಧಾನೇ ತು ಕಿಂ ಕರೋತಿ ಶುಭಗ್ರಹಃ ' ಇಂತೆಂದುದಾಗಿ ಬಹ ಕಂಟಕವ ಹೊನ್ನು ಹೆಣ್ಣು ಶುಭ ಲಗ್ನದಿಂದೆ ಪರಿಹರಿಸೇನೆಂದಡೆ ಹೋಗಲರಿಯದು. ಹಸಿವಿಲ್ಲದ ಮದ್ದು ಕೊಟ್ಟೇನು, ಅಶನವ ನೀಡೆಂಬಂತೆ, ಖೇಚರದ ಮದ್ದು ಕೊಟ್ಟೇನು ತೊರೆಯ ದಾಂಟಿಸೆಂಬಂತೆ, ಕುರುಡನ ಕೈಯ ಕುರುಡ ಹಿಡಿದು ಹಾದಿಯ ತೋರುವಂತೆ, ಲಜ್ಜೆ ನಾಚಿಕೆ ಇಲ್ಲದೆ ವಿಪ್ರರ ಕೈಯೆ ಲಗ್ನವ ಕೇಳಲಾಗದು. ಸದ್ಭಕ್ತರಾದವರಿಗೆ ನಿಮ್ಮ ಬಲವೇ ಬಲವಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಪೃಥ್ವಿಯ ವಂಶಿಕದಲ್ಲಿ ಆತ್ಮನು ಬಂದಿರಲಿಕ್ಕಾಗಿ ಗುಣಗಂಬ್ಥೀರದಲ್ಲಿ ಇದ್ದಿತೆಂಬರು. ಅಪ್ಪುವಿನಂಶಿಕದಲ್ಲಿ ಆತ್ಮನು ಬಂದಿರಲಿಕ್ಕಾಗಿ ಸರ್ವಸಾರಮಯವಾಗಿದ್ದಿತ್ತೆಂಬರು. ತೇಜದಂಶಿಕದಲ್ಲಿ ಆತ್ಮ ಬಂದಿರಲಿಕ್ಕಾಗಿ ಸರ್ವದೀಪ್ತವಾಗಿದ್ದಿತ್ತೆಂಬರು. ವಾಯುವಿನಂಶಿಕದಲ್ಲಿ ಆತ್ಮನು ಬಂದಿರಲಿಕ್ಕಾಗಿ ಸರ್ವಸಂಚಲಮಯವಾಗಿದ್ದಿತ್ತೆಂಬರು. ಆಕಾಶದಂಶದಲ್ಲಿ ಆತ್ಮನು ಬಂದಿರಲಿಕ್ಕಾಗಿ ಇಂತೀ ಐದು ಭೇದದಲ್ಲಿ ದಶವಾಯುವ ಕಲ್ಪಿಸಿಕೊಂಡು, ಹೆಸರ ರೂಹಿಟ್ಟು ಅಸುನಾಥನ ಒಡಗೂಡಬೇಕೆಂಬಲ್ಲಿ ಇದು ಸಂದಿಲ್ಲದ ಸಂಶಯ. ನಾನಾರು ಇದೇನೆಂಬುದು ಏಕೀಕರಿಸಿದಲ್ಲಿ ಸರ್ವೇಂದ್ರಿಯ ನಾಶನ, ಸದ್ಯೋಜಾತಲಿಂಗವನರಿವುದು ವಿನಾಶನ.
--------------
ಅವಸರದ ರೇಕಣ್ಣ
ಹೆಸರಿಡಬಾದ ಲಿಂಗವ ಹೆಸರಿಟ್ಟು ಎನ್ನ ಕರಸ್ಥಲಕ್ಕೆ ತಂದು ಕರತಳಾಮಳಕದಂತೆ ಮಾಡಿ ಎನ್ನ ಕರಸ್ಥಲಕ್ಕೆ ಕ್ರಿಯಾಲಿಂಗವ ಕೊಟ್ಟ. ಶ್ರೀಗುರು ಚೆನ್ನ ಬಸವಣ್ಣ ಹೆಸರಿಟ್ಟ ಲಿಂಗದ ಹೆಸರ ಹೇಳುವೆ ಕೇಳಯ್ಯಾ. ಕಂಜಕರ್ಣಿಕೆಯ ಹಣೆಯಲ್ಲಿ ವಿಹತ್ತವಸವೆಂದು ಬರೆದ ಐದಕ್ಷರವೆ ಆತನ ಪ್ರಣವನಾಮ. ಅವ್ಯಯ ಕರದೊಳಿಪ್ಪ ಆರಕ್ಷರ ಆತನ ದ್ವಿತೀಯ ನಾಮ. ಅವ್ಯಯ ಆನಂದ ಮಸ್ತಕದೊಳಿಪ್ಪ ಅಕ್ಷರವೆ ಆತನ ಆಚಾರ್ಯನಾಮ. ಎಂತೀ ನಾಮತ್ರಯಂಗಳನರಿದು ಧ್ಯಾರೂಢನಾಗಿ ಮಾಡುವರು ಎತ್ತಾನಿಕೊಬ್ಬರು. ಈ ಬಸವಣ್ಣ ಮೊದಲಾದ ಪುರಾತರು ಆ ಅವ್ಯಯ ಅನುಮತದಿಂದ ಲಿಂಗಾರ್ಚನೆಯ ಮಾಡಿ ನಿತ್ಯ ನಿಜನಿವಾಸಿಗಲಾದರು. ಆ ಶರಣರ ಅನುಮತದರಿವಿನ ಉಪದೇಶವ ಕೇಳಿ, ಎನಗಿನ್ನಾವುದು ಹದನವಯ್ಯಾ ಎಂಬ ಚಿಂತೆಯ ಬಿಟ್ಟು ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೈಯಲ್ಲಿ ಪಿಡಿದೆನು.
--------------
ಸಿದ್ಧರಾಮೇಶ್ವರ
ಕವಿಗಳುಯೆಂದು ಹೆಸರಿಟ್ಟುಕೊಂಡು ನುಡಿವ ಅಣ್ಣಗಳು ನೀವು ಕೇಳಿರೊ. ಪ್ರಥಮ ಶಿವಾಲ್ಯದಲ್ಲಿ ಮೂಲಸ್ಥಾನದ ಲಿಂಗವನರಿದು ಅಲ್ಲಿದ್ದ ವಿಮಳವಾದ ಗಂಟ ಕೊಯಿದು, ಸಕಲ ಪರಿಮಳ ದ್ರವ್ಯಂಗಳ ಆ ಮೂಲಲಿಂಗಕ್ಕೆ ಕೊಡಬಲ್ಲಡೆ ಕ ಎಂಬ ಅಕ್ಷರದ ಭೇದವ ಬಲ್ಲನೆಂದೆನ್ನಬಹುದು. ಪರಬ್ರಹ್ಮನ ಆಶ್ರೈಸಬಲ್ಲಡೆ ವಿ ಎಂಬ ಅಕ್ಷರದ ಭೇದವ ಬಲ್ಲಡೆ ನಿಮ್ಮ ಹೆಸರ ನೀವೇ ಇಟ್ಟುಕೊಂಡು, ಕವಿಯೆಂಬ ಎರಡಕ್ಷರದ ಬೇದವನರಿಯದೆ ವಾದ ತರ್ಕವ ಮಾಡಿ ಗುರುಗುಡುವುದು ಕಾರಣವಲ್ಲ. ಬಲ್ಲರೆ ಹೇಳಿ, ಅರಿಯದಿದ್ದರೆ ಕೇಳಿ. ಕವಿಯೆಂಬ ಎರಡು ಐವತ್ತೆರಡು ಅಕ್ಷರದ ಭೇದವ ಅಷ್ಟದಳಕಮಲವ ವಿಚಾರಿಸುವುದು, ಅಲ್ಲದ ಕಾರಣ (?) ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಗುರು ಗುರುವೆಂದೇನೊ, ಪರಕ್ಕೆ ಹೆಸರ ಹೇಳುವನ್ನಕ್ಕವೆ ? ಲಿಂಗ ಲಿಂಗವೆಂದೇನೊ, ಅಂಗ ಬೀಳುವನ್ನಕ್ಕವೆ ? ಜಂಗಮ ಜಂಗಮವೆಂದೇನೊ, ಧನವ ಸವೆವನ್ನಕ್ಕವೆ ? ಪ್ರಸಾದ ಪ್ರಸಾದವೆಂದೇನೊ, ಉಂಡು ಕಳಚಿ ಪ್ರಳಯಕ್ಕೊಳಗಾಗುವನ್ನಕ್ಕವೆ ? ಪಾದತೀರ್ಥ ಪಾದತೀರ್ಥವೆಂದೇನೊ, ಕೊಂಡು ಕೊಂಡು ಮುಂದೆ ಜಲವ ಮಾಡುವನ್ನಕ್ಕವೆ ? ಅಲ್ಲಿ ನಿಂದಿರದಿರಾ ಮನವೆ ! ನಿಂದಡೆ ನೀನು ಕೆಡುವೆ ಬಂದಡೆ ನಾನು ಕೆಡುವೆ. ಎನ್ನ ತಂದೆ ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣಂಗೆ ಪ್ರಭುದೇವರು ತೋರಿದರೀಯನುವ !
--------------
ಚನ್ನಬಸವಣ್ಣ
ಶಿಶು ತಾಯ ಮೊಲೆವಾಲನೊಸೆದುಂಡು ತೃಪ್ತನಾಗಿ ಹೆಸರ ಬೆಸಗೊಂಬಡದು ಉಪಮೆಗೆ ಸಾಧ್ಯವಿಲ್ಲಯ್ಯಾ. ಕಣ್ಣಾಲಿ ಕಪ್ಪ ನುಂಗಿ ಸಣ್ಣ ಬಣ್ಣಗಳುಡಿಗೆನಯಫ ಬಣ್ಣದೊಳಗಣ ಭ್ರಮೆ ಇನ್ನಾರಿಗಳವಡದು. ಬಣ್ಣ ಸಮುಚ್ಚಯವಾಗಿ ಬಣ್ಣ ಬಗೆಯನೆ ನುಂಗಿ ಗುಹೇಶ್ವರನೆಂಬ ನಿಲವ ನಿಜದ ನಿಷ್ಪತ್ತಿ ನುಂಗಿತ್ತು.
--------------
ಅಲ್ಲಮಪ್ರಭುದೇವರು
ಜಂಬೂದ್ವೀಪದ ವ್ಯವಹಾರಿ ಖಂಡ ಭಂಡವ ತುಂಬಿ ಕುಂಭಿನಿಯುದರದ ಮೇಲೆ ಪಸರವನಿಕ್ಕಿದ. ಉಷ್ಣ ತೃಷ್ಣೆ ಘನವಾಗಿ, ಕಡಲೇಳು ಸಮುದ್ರವ ಕುಡಿದು ನೀರಡಿಸಿದಾತ ಅರಲುಗೊಂಡು ಬೆರಗಾದ. ಶಿಶು ತಾಯ ಹೆಣನ ಹೊತ್ತುಕೊಂಡು ಹೆಸರ ಹೇಳುತ್ತೈದಾನೆ ! ಗುಹೇಶ್ವರನೆಂಬ ನಿಲವ ವಸುಧೆಯಾಕೃತಿ ನುಂಗಿತ್ತು.
--------------
ಅಲ್ಲಮಪ್ರಭುದೇವರು
ಭಕ್ತಿ ಭಕ್ತಿಯೆಂದೇನು ತುತ್ತಿಡುವನ್ನಕ್ಕವೆ ? ಗುರು ಗುರುವೆಂದೇನು ಪರಕೆ ಹೆಸರ ಹೇಳುವನ್ನಕ್ಕವೆ ? ಲಿಂಗ ಲಿಂಗವೆಂದೇನು ಅಂಗ ಬೀಳುವನ್ನಕ್ಕವೆ ? ಜಂಗಮ ಜಂಗಮವೆಂದೇನು ಮುಂದಿದ್ದ ಧನವೆಲ್ಲಾ ಸವೆವನ್ನಕ್ಕವೆ ? ಪಾದೋದಕ ಪಾದೋದಕವೆಂದೇನು ಇವೆಲ್ಲಾ ಜಲವ ಕೂಡಿ ಹೋಹನ್ನಕ್ಕವೆ ? ಪ್ರಸಾದ ಪ್ರಸಾದವೆಂದೇನು ಉಂಡುಂಡು ತನು ಕಳಚಿ ಪ್ರಳಯಕ್ಕೊಳಗಹನ್ನಕ್ಕವೆ ? ಅಲ್ಲಿ ನಿಂದಿರದಿರಾ ಮನವೆ, ನಿಂದಿದ್ದರೆ ನೀ ಕೆಡುವೆ, ಬಂದರೆ ನಾ ಕೆಡುವೆ, ಎನ್ನ ತಂದೆ ಕೂಡಲಚೆನ್ನಸಂಗಯ್ಯಾ, ಈ ಅನುವ ಬಸವಣ್ಣ ತೋರಿದನಾಗಿ, ಆನು ಬದುಕಿದೆನು.
--------------
ಚನ್ನಬಸವಣ್ಣ
ನೇಮಸ್ಥ ಲಿಂಗವನರಿಯ, ಸೂಳೆಯ ಮಗ ತಂದೆಯನರಿಯ. ಪಿತೃಕಾರ್ಯ ಮಹಳವ ಮಾಡುವಲ್ಲಿ ಆರ ಹೆಸರ ಹೇಳಿ ಮಾಡುವನಯ್ಯಾ ? ಗುಹೇಶ್ವರಾ, ನಿಮ್ಮನರಿಯದವರನು ಉಭಯಭ್ರಷ್ಟರೆಂಬೆ.
--------------
ಅಲ್ಲಮಪ್ರಭುದೇವರು
ಒಡವೆ ಭಂಡಾರ ಕಡವರ ದ್ರವ್ಯವ ಬಡ್ಡಿ ಬೆವಹಾರಕ್ಕೆ ಕೊಟ್ಟು ಮನೆಯ ಗೋಂಟಿನಲ್ಲಿ ಹೊಯಿದುಕೊಂಡಿದ್ದೆನಾದಡೆ ಅದು ಎನ್ನರ್ಥವಲ್ಲ, ಅನರ್ಥವೆಂದೆಂಬೆ. ಸಂಗಮದೇವಾ, ನೀನು ಜಂಗಮರೂಪಾಗಿ ಬಂದು ಆ ಧನವನು ನೀನು ಬಲ್ಲಂತೆ ಎನ್ನ ಮುಂದೆ ಸೂರೆಗೊಳುತಿರ್ದಡೆ, ನಾನು ಬೇಕು ಬೇಡೆಂದು ಮನದಲ್ಲಿ ಮರುಗಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ. ಕಾಮನೇಮವೆಂಬ ಸಿಂಧುಬಲ್ಲಾಳನ ವಧುವ ಸರ್ವಭುವನದೊಡೆಯ ಸಂಗಮದೇವರು ಬೇಡುವಂತಲ್ಲ. ಎನ್ನ ಸತಿ ನೀಲಲೋಚನೆ ಪೃಥ್ವಿಗಗ್ಗಳೆಯ ಚೆಲುವೆ, ಆಕೆಯನು ಸಂಗಮದೇವಾ, ನೀನು ಜಂಗಮರೂಪಾಗಿ ಬಂದು ಎನ್ನ ಮುಂದೆ ಸಂಗವ ಮಾಡುತ್ತಿರಲು ಎನ್ನೊಡನಿರ್ದ ಸತಿಯೆಂದು ಮಾಯಕ್ಕೆ ಮರುಗಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ. ಪ್ರತ್ಯಕ್ಷವಾಗಿ ಸಿರಿಯಾಳಸೆಟ್ಟಿ ಚಂಗಳವ್ವೆಯ ಮನೆಗೆ ಬಂದು ಅವರ ಮಗನ ಬೇಡುವಂತಲ್ಲ. ಸಂಗಮದೇವಾ, ನಿಮ್ಮ ಹೆಸರ ಚಿಕ್ಕಸಂಗಯ್ಯನಿದ್ದಾನೆ. ನೀನು ಜಂಗಮರೂಪಾಗಿ ಬಂದು, ಆತನ ಹಿಡಿದು ಎನ್ನ ಮುಂದೆ ಹೆಡಗುಡಿಯ ಕಟ್ಟಿ, ಚಿನಿಖಂಡವ ಮಾಡಿ ಬಾಣಸವ ಮಾಡುವಲ್ಲಿ, ಎನ್ನ ಉದರದಲ್ಲಿ ಬಂದ ಪುತ್ರನೆಂದು ಮಾಯಕ್ಕೆ ನಾನು ಮರುಗಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ. ಇಂತೀ ತ್ರಿವಿಧವೂ ಹೊರಗಣವು. ಎನ್ನ ನೋವಿನೊಳಗಲ್ಲ, ಎನ್ನ ಬೇನೆಯೊಳಗಲ್ಲ. ಇನ್ನು ನಾನಿದೇನೆ, ಕದ್ದ ಕಳ್ಳನ ಕಟ್ಟುವಂತೆ ಕಟ್ಟಿ, ನೀನು ಜಂಗಮರೂಪಾಗಿ ಬಂದು ಎನ್ನಂಗದ ಮೇಲೆ ಶಸ್ತ್ರವನಿಕ್ಕಿ ನೋಡು, ಬಸಿದ ಶೂಲಪ್ರಾಪ್ತಿಯ ಮಾಡಿ ನೋಡು, ಸೂಜಿಯ ಮೊನೆಯಂತಿರ್ದ ಶೂಲದ ಮೇಲಿಕ್ಕಿ ನೋಡು, ನವಖಂಡವ ಮಾಡಿ ಕಡಿಕಡಿದು ನೋಡು, ಆ ಶೂಲವೈದೈದು ಮುಖವಾಗಿ ಹಾಯುವಾಗ ಹರಿತಿನಿಸಿ ನೋಡು. ಈ ರೀತಿಯಲ್ಲಿ ಎನ್ನ ಭಂಗಬಡಿಸಿ ನೋಡಿದಡೆಯೂ ಲಿಂಗಾರ್ಚನೆಯ ಮಾಡುವುದ ಬಿಡೆ, ಜಂಗಮದಾಸೋಹವ ಮಾಡುವುದ ಬಿಡೆ, ಪಾದತೀರ್ಥಪ್ರಸಾದವ ಕೊಂಬುದ ಬಿಡೆ. ಇಂತೀ ತ್ರಿವಿಧಕ್ಕೆ ರೋಷವ ಮಾಡಿಬಿಟ್ಟೆನಾದಡೆ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ. ಇಷ್ಟರೊಳಗೆ ತಪ್ಪುಳ್ಳಡೆ ಮೂದಲಿಸಿ ಮೂಗಕೊಯಿ, ಕೂಡಲಸಂಗಮದೇವಾ. ಬಡ್ಡಿ ಬೆವಹಾರಕ್ಕೆ ಕೊಟ್ಟು ಮನೆಯ ಗೋಂಟಿನಲ್ಲಿ ಹೊಯಿದುಕೊಂಡಿದ್ದೆನಾದಡೆ ಅದು ಎನ್ನರ್ಥವಲ್ಲ, ಅನರ್ಥವೆಂದೆಂಬೆ. ಸಂಗಮದೇವಾ, ನೀನು ಜಂಗಮರೂಪಾಗಿ ಬಂದು ಆ ಧನವನು ನೀನು ಬಲ್ಲಂತೆ ಎನ್ನ ಮುಂದೆ ಸೂರೆಗೊಳುತಿರ್ದಡೆ, ನಾನು ಬೇಕು ಬೇಡೆಂದು ಮನದಲ್ಲಿ ಮರುಗಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ. ಕಾಮನೇಮವೆಂಬ ಸಿಂಧುಬಲ್ಲಾಳನ ವಧುವ ಸರ್ವಭುವನದೊಡೆಯ ಸಂಗಮದೇವರು ಬೇಡುವಂತಲ್ಲ. ಎನ್ನ ಸತಿ ನೀಲಲೋಚನೆ ಪೃಥ್ವಿಗಗ್ಗಳೆಯ ಚೆಲುವೆ, ಆಕೆಯನು ಸಂಗಮದೇವಾ, ನೀನು ಜಂಗಮರೂಪಾಗಿ ಬಂದು ಎನ್ನ ಮುಂದೆ ಸಂಗವ ಮಾಡುತ್ತಿರಲು ಎನ್ನೊಡನಿರ್ದ ಸತಿಯೆಂದು ಮಾಯಕ್ಕೆ ಮರುಗಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ. ಪ್ರತ್ಯಕ್ಷವಾಗಿ ಸಿರಿಯಾಳಸೆಟ್ಟಿ ಚಂಗಳವ್ವೆಯ ಮನೆಗೆ ಬಂದು ಅವರ ಮಗನ ಬೇಡುವಂತಲ್ಲ. ಸಂಗಮದೇವಾ, ನಿಮ್ಮ ಹೆಸರ ಚಿಕ್ಕಸಂಗಯ್ಯನಿದ್ದಾನೆ. ನೀನು ಜಂಗಮರೂಪಾಗಿ ಬಂದು, ಆತನ ಹಿಡಿದು ಎನ್ನ ಮುಂದೆ ಹೆಡಗುಡಿಯ ಕಟ್ಟಿ, ಚಿನಿಖಂಡವ ಮಾಡಿ ಬಾಣಸವ ಮಾಡುವಲ್ಲಿ, ಎನ್ನ ಉದರದಲ್ಲಿ ಬಂದ ಪುತ್ರನೆಂದು ಮಾಯಕ್ಕೆ ನಾನು ಮರುಗಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ. ಇಂತೀ ತ್ರಿವಿಧವೂ ಹೊರಗಣವು. ಎನ್ನ ನೋವಿನೊಳಗಲ್ಲ, ಎನ್ನ ಬೇನೆಯೊಳಗಲ್ಲ. ಇನ್ನು ನಾನಿದೇನೆ, ಕದ್ದ ಕಳ್ಳನ ಕಟ್ಟುವಂತೆ ಕಟ್ಟಿ, ನೀನು ಜಂಗಮರೂಪಾಗಿ ಬಂದು ಎನ್ನಂಗದ ಮೇಲೆ ಶಸ್ತ್ರವನಿಕ್ಕಿ ನೋಡು, ಬಸಿದ ಶೂಲಪ್ರಾಪ್ತಿಯ ಮಾಡಿ ನೋಡು, ಸೂಜಿಯ ಮೊನೆಯಂತಿರ್ದ ಶೂಲದ ಮೇಲಿಕ್ಕಿ ನೋಡು, ನವಖಂಡವ ಮಾಡಿ ಕಡಿಕಡಿದು ನೋಡು, ಆ ಶೂಲವೈದೈದು ಮುಖವಾಗಿ ಹಾಯುವಾಗ ಹರಿತಿನಿಸಿ ನೋಡು. ಈ ರೀತಿಯಲ್ಲಿ ಎನ್ನ ಭಂಗಬಡಿಸಿ ನೋಡಿದಡೆಯೂ ಲಿಂಗಾರ್ಚನೆಯ ಮಾಡುವುದ ಬಿಡೆ, ಜಂಗಮದಾಸೋಹವ ಮಾಡುವುದ ಬಿಡೆ, ಪಾದತೀರ್ಥಪ್ರಸಾದವ ಕೊಂಬುದ ಬಿಡೆ. ಇಂತೀ ತ್ರಿವಿಧಕ್ಕೆ ರೋಷವ ಮಾಡಿಬಿಟ್ಟೆನಾದಡೆ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ. ಇಷ್ಟರೊಳಗೆ ತಪ್ಪುಳ್ಳಡೆ ಮೂದಲಿಸಿ ಮೂಗಕೊಯಿ, ಕೂಡಲಸಂಗಮದೇವಾ.
--------------
ಬಸವಣ್ಣ
ಯೋನಿಯಿಲ್ಲದ ಸ್ತ್ರೀಗೆ ಶಿಶ್ನವಿಲ್ಲದ ಪುರುಷನು. ಮೊಲೆ ಮುಡಿ ಇಲ್ಲದ ಸ್ತ್ರೀಗೆ ಕೈಕಾಲು ಇಲ್ಲದ ಪುರುಷನು. ಇಬ್ಬರ ಸಂಗದಿಂದ ಕರುಳಿಲ್ಲದ ಶ್ವೇತವರ್ಣದ ಶಿಶುವು ಹುಟ್ಟಿತ್ತು. ಆ ಶಿಶುವು ನೋಡಿದವರ ನೋಟದಲ್ಲಿ ಸತ್ತು ಬದುಕಿದವರ ಹೊತ್ತು, ಅತ್ತವರ ನುಂಗಿ, ಹೆತ್ತವರ ಹೆಸರ ಮಾಜಿ ಗುಹೇಶ್ವರನ ಚರಣದಲ್ಲಿ ಅಡಗಿತ್ತು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಭೃಗುಮುನೀಶ್ವರನ ಶಾಪದಿಂದ ವಿಷ್ಣು ದಶಾವತಾರವಾಗಿ ಬಂದಲ್ಲಿ, ಶಿವಭಕ್ತಿಯನೆ ಮಾಡಿದನೆಂಬುದಕ್ಕೆ ಶಿವಧರ್ಮಪುರಾಣ ಪ್ರಸಿದ್ಧ ನೋಡಿ. ಅದೆಂತೆಂದಡೆ : ಮತ್ಸ್ಯ ಕೂರ್ಮೋ ವರಾಹಶ್ಚ ನಾರಸಿಂಹಶ್ಚ ವಾಮನಃ | ರಾಮೋ ರಾಮಶ್ಚ ರಾಮಶ್ಚ ಬೌದ್ಧಶ್ಚ ಕಲಿ ಕಾಹ್ವಯಃ || ಎಂದುದಾಗಿ, ಶಿವಲಿಂಗವ ಹರಿ ಪ್ರತಿಷೆ*ಯ ಮಾಡಿದ. ಮತ್ಸ್ಯಾವತಾರದಲ್ಲಿ ಮತ್ಸ್ಯಕೇಶ್ವರದೇವರ ಲಂಕಾಪುರಿಯಲ್ಲಿ ಶಿವಲಿಂಗವ ಹರಿ ಪ್ರತಿಷೆ*ಯ ಮಾಡಿದ. ಕೂರ್ಮಾವತಾರದಲ್ಲಿ ಕೂರ್ಮೇಶ್ವರದೇವರ ಧಾರಾವತಿಯಲ್ಲಿ ಶಿವಲಿಂಗವ ಹರಿ ಪ್ರತಿಷೆ*ಯ ಮಾಡಿದ. ವರಾಹವತಾರದಲ್ಲಿ ವರಾಹೇಶ್ವರದೇವರ ವೃಂದಗಿರಿಯಲ್ಲಿ ಶಿವಲಿಂಗವ ಹರಿ ಪ್ರತಿಷೆ*ಯ ಮಾಡಿದ. ವಾಮನಾವತಾರದಲ್ಲಿ ವಾಮೇಶ್ವರದೇವರ ವಾರಣಾಸಿಯಲ್ಲಿ ಶಿವಲಿಂಗವ ಹರಿ ಪ್ರತಿಷೆ*ಯ ಮಾಡಿದ. ರಾಮಾವತಾರದಲ್ಲಿ ರಾಮೇಶ್ವರದೇವರ ಸೇತುವಿನಲ್ಲಿ ಶಿವಲಿಂಗವ ಹರಿ ಪ್ರತಿಷೆ*ಯ ಮಾಡಿದ. ನಾರಸಿಂಹಾವತಾರದಲ್ಲಿ ನರಸಿಂಹೇಶ್ವರದೇವರ ಆವು [ಅಹೋ]ಬಳದಲ್ಲಿ ಶಿವಲಿಂಗವ ಹರಿ ಪ್ರತಿಷೆ*ಯ ಮಾಡಿದ ಬೌದ್ಧಾವತಾರದಲ್ಲಿ ಬೌದ್ಧಕಲಿಕೆಯೆಂಬ ಹೆಸರ ದೇವರ ಕಾಶಿಯಲ್ಲಿ ಶಿವಲಿಂಗವ ಹರಿ ಪ್ರತಿಷೆ*ಯ ಮಾಡಿದ. ಪರಶುರಾಮಾವತಾರದಲ್ಲಿ ಪರಶುರಾಮೇಶ್ವರದೇವರ ಕಪಿಲೆಯ ತೀರದಲ್ಲಿ ಶಿವಲಿಂಗವ ಹರಿ ಪ್ರತಿಷೆ*ಯ ಮಾಡಿದ. ಕೃಷ್ಣಾವತಾರದಲ್ಲಿ ಕೃಷ್ಣೇಶ್ವರದೇವರ ಹಿಮವತ್ಪರ್ವತದಲ್ಲಿ ಶಿವಲಿಂಗವ ಹರಿ ಪ್ರತಿಷೆ*ಯ ಮಾಡಿದ. ಕಲಿಯುಗದಲ್ಲಿ ಸ್ತ್ರೀ ರೂಪಿಂದ ಅಗಲಕ್ಕೆ ನಿಂದ. ಇಂತೀ ದಶಾವತಾರದಲ್ಲಿಯೂ ಹರಿಯೆ ಭಕ್ತ. ಹರಿಯ ಬಿಟ್ಟು ಭಕ್ತರಿಲ್ಲ. ಸೊಡ್ಡಳದೇವರಿಂದ ಬಿಟ್ಟು ಕರ್ತರಿಲ್ಲ ಕೇಳಿರಣ್ಣಾ.
--------------
ಸೊಡ್ಡಳ ಬಾಚರಸ
ಹಿರಿಯತನಕ್ಕೆ ಹೆಚ್ಚಿ, ಹೆಸರ ಹೊತ್ತು ನಡೆಗೆಟ್ಟು, ಕಡೆಗೆ ಬೇಡಿಕೊಂಡು ತಿರುಗುವ ಹಡಿಕೆ ಮುಖಮಯನ, ನಿರತಿಶಯ ಬೆಡಗಿನ ಬೇಹಾರಿಗಳೊಪ್ಪುವರೆ ? ಬೂದಿಯ ಹೇರ ನೀರಲದ್ದಿ ನಾ ಹೊತ್ತುಕೊಳ್ಳೆಯೆಂದರೆ ಕ್ರಯದ ಕರ್ಮದಲ್ಲಿ ಕಾಣರೆ ? ಆ ಹುಸಿಹುಂಡನ ಸೋಂಕನೊಲ್ಲದಿರ್ದ ನಿಜವಿರತಿಭಕ್ತಿಯಮುಖದಲ್ಲಿ ನಮ್ಮ ಚೆಲುವಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಶಿವಾಶ್ರಯದಲ್ಲಿ ಜನಿಸಿ ಭವಾಶ್ರಯವ ನೆನೆವ ಭಂಡರ ಮುಖವ ನೋಡೆ ನೋಡೆ. ಶಿವಾಶ್ರಯವೆ ಶ್ರೀಗುರುನಾಥನ ಕರಕಮಲವೆಂಬ ಪರಿ. ಭವಾಶ್ರಯವೆ ತನ್ನ ಹಿಂದಣ ಪೂರ್ವದ ಭವಿ ತಾಯಿ ತಂದೆ ಬಂಧು ಬಳಗವೆಂಬ ಪರಿ. ಇದು ಕಾರಣ ಗುರುಕರಜಾತನಾಗಿ ನರರ ಹೆಸರ ಹೇಳಿ ಹಾಡಿ ಹೊಗಳಿಸುವ ನರಕಿ ಭವಿಯ ಎನಗೊಮ್ಮೆ ತೋರದಿರಾ. ಆ ಕುಲಗೆಟ್ಟ ಹೊಲೆಯರ ಮುಖವ ನೋಡಲಾಗದು ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ನಾನಾರ ಹೆಸರ ಕುರುಹಿಡಲಯ್ಯಾ ಬಸವಾ ? ನಾನಾರ ರೂಪ ನಿಜವಿಡಲಯ್ಯಾ ಬಸವಾ ? ನಾನಾರ ಮಾತ ನೆಲೆಗೊಳಿಸಲಯ್ಯಾ ಬಸವಾ ? ನಾನಾರ ಮನವನಂಗೈಸಲಯ್ಯಾ ಬಸವಾ ? ಎನ್ನ ಸುಖಾಕಾರಮೂರ್ತಿ ಬಸವನಡಗಿದಬಳಿಕ ಎನಗೆ ಹೆಸರಿಲ್ಲ. ರೂಪು ನಿರೂಪವಾಯಿತ್ತಯ್ಯಾ ಸಂಗಯ್ಯಾ, ಬಸವನಡಗಿದಬಳಿಕ
--------------
ನೀಲಮ್ಮ
ಇನ್ನಷ್ಟು ... -->