ಅಥವಾ

ಒಟ್ಟು 47 ಕಡೆಗಳಲ್ಲಿ , 15 ವಚನಕಾರರು , 36 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದ್ರವ್ಯ ನೀನು ದ್ರವ್ಯಾರ್ಥ ನೀನು; ಪದ ನೀನು, ಪದಾರ್ಥ ನೀನು. ಸಕಲ ನೀನು ನಿಷ್ಕಲ ನೀನು. ಸಕಲ ನಿಷ್ಕಲಾತ್ಮಕ ಪರಿಪೂರ್ಣ ಶಿವನಲ್ಲದೆ ಅನ್ಯ ಭಿನ್ನಭಾವ ಉಂಟೆ ? ಸಕಲ ನಿಷ್ಕಲ ತತ್ವಂಗಳು; ನಿಮ್ಮೊಳಗೆ ಸಮಾಸವನೆಯ್ದುವೆವೆಂದು ತಮ್ಮ ತಮ್ಮ ಅಂಗದ ಮೇಲೆ ಸರ್ವಪದಾರ್ಥಂಗಳ ಹೆಸರಿಟ್ಟು ಹೊತ್ತುಕೊಂಡೈದಾವೆ ನೋಡಾ ! ಅದೆಂತೆಂದಡೆ: ``ದ್ರವ್ಯಾರ್ಥಂ ಚ ಮಹಾದೇವೋ ದ್ರವ್ಯರೂಪೋ ಮಹೇಶ್ವರಃ ಇತಿ ಮೇ ಭೇದನಂ ನಾಸ್ತಿ ಸರ್ವರೂಪಸ್ಸದಾಶಿವಃ'' _ ಇಂತೆಂದುದಾಗಿ_ನಾದ ನೀನು, ಬಿಂದು ನೀನು, ಕಳೆ ನೀನು, ಕಳಾತೀತ ನೀನು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಐಗ್ರಾಮ ಚೌಗ್ರಾಮ ಅಯ್ಯ ನಿನ್ನಯ ಸೀಮೆ. ಅತ್ಯೋನ್ನತದ ಫಲಕ್ಕೊಸರುತಿಹದು ಒಸರುತಿಹ ಲಿಂಗವನು ವಶಕೆ ತಂದು ಶಿಷ್ಯಂಗೆ ಹೆಸರಿಟ್ಟು ಕೊಟ್ಟಾತ ಗುರು ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಭವಿಯ ತಂದು ಪೂವಾಶ್ರಯವ ಕಳೆದು ಭಕ್ತನ ಮಾಡಿದ ಬಳಿಕ, ಪೂರ್ವವನ್ನೆತ್ತಿ ನುಡಿವ ಶಿವದ್ರೋಹಿಯ ಮಾತ ಕೇಳಲಾಗದು. ಲಿಂಗವೆ ಗುರು, ಗುರುವೇ ಲಿಂಗವೆಂದು, ಹೆಸರಿಟ್ಟು ಕರೆವ ಗುರುದ್ರೋಹಿಯ ಮಾತ ಕೇಳಲಾಗದು. ಹೆಸರಿಲ್ಲದ ಅಪ್ರಮಾಣ ಮಹಿಮನನು ಹೆಸರಿಟ್ಟು ಕರೆವ ಲಿಂಗದ್ರೋಹಿಯ ಮಾತ ಕೇಳಲಾಗದು. ಪೂರ್ವವಿಲ್ಲದ ಶಿಷ್ಯ, ನೇಮವಿಲ್ಲದ ಗುರು, ಹೆಸರಿಲ್ಲದ ಲಿಂಗ ಈ ತ್ರಿವಿಧವನರಿಯದೆ ಕೆಟ್ಟು ಹೋದರು, ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಜನಿತವಿಲ್ಲದೆ ಜನಿಸಿ ಸ್ವಯವಾದ ಹರನೇ ನೀನು ನಿರೂಪನೇರಿ ಜನಿಸಿ ಜನಿತವ ಬಗೆಯರಾಗಿ ಎಮ್ಮ ಪುರಾತನರೇ ನಿರೂಪರು, ಕುಲದಲ್ಲಿ ಹುಟ್ಟಿ ಕುಲವ ಬೆರೆಸರಾಗಿ ಎಮ್ಮ ಪುರಾತನರೇ ಕುಲಜರು. ಆದಿಲಿಂಗ ಅನಾದಿಶರಣ. ಹೆಸರಿಲ್ಲದ ದೆಶೆಗೇಡಿ ಲಿಂಗವ ವಶಕ್ಕೆ ತಂದು ಹೆಸರಿಟ್ಟು ಕರೆದರೆ ನೀನು ಸುಲಭನೇ? ಅಲ್ಲ. ನೀನು ಕುಲಗೇಡಿ, ನಿನ್ನನಾರು ಬಲ್ಲರು? ನೀನಗೋಚರ. ಹರನೇ, ನೀ ಬೇಡಿತ್ತ ಕೊಟ್ಟು ನೀ ಬಂದರೆ ನಿನ್ನನಾಗುಮಾಡಿದರಲ್ಲದೆ ಎಮ್ಮ ಪುರಾತನರು ನಿಮ್ಮಲ್ಲಿಗೆ ಬಂದು ದೈನ್ಯಬಟ್ಟು ಬೇಡಿದರಲ್ಲೈ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಹೆಸರಿಡಬಾದ ಲಿಂಗವ ಹೆಸರಿಟ್ಟು ಎನ್ನ ಕರಸ್ಥಲಕ್ಕೆ ತಂದು ಕರತಳಾಮಳಕದಂತೆ ಮಾಡಿ ಎನ್ನ ಕರಸ್ಥಲಕ್ಕೆ ಕ್ರಿಯಾಲಿಂಗವ ಕೊಟ್ಟ. ಶ್ರೀಗುರು ಚೆನ್ನ ಬಸವಣ್ಣ ಹೆಸರಿಟ್ಟ ಲಿಂಗದ ಹೆಸರ ಹೇಳುವೆ ಕೇಳಯ್ಯಾ. ಕಂಜಕರ್ಣಿಕೆಯ ಹಣೆಯಲ್ಲಿ ವಿಹತ್ತವಸವೆಂದು ಬರೆದ ಐದಕ್ಷರವೆ ಆತನ ಪ್ರಣವನಾಮ. ಅವ್ಯಯ ಕರದೊಳಿಪ್ಪ ಆರಕ್ಷರ ಆತನ ದ್ವಿತೀಯ ನಾಮ. ಅವ್ಯಯ ಆನಂದ ಮಸ್ತಕದೊಳಿಪ್ಪ ಅಕ್ಷರವೆ ಆತನ ಆಚಾರ್ಯನಾಮ. ಎಂತೀ ನಾಮತ್ರಯಂಗಳನರಿದು ಧ್ಯಾರೂಢನಾಗಿ ಮಾಡುವರು ಎತ್ತಾನಿಕೊಬ್ಬರು. ಈ ಬಸವಣ್ಣ ಮೊದಲಾದ ಪುರಾತರು ಆ ಅವ್ಯಯ ಅನುಮತದಿಂದ ಲಿಂಗಾರ್ಚನೆಯ ಮಾಡಿ ನಿತ್ಯ ನಿಜನಿವಾಸಿಗಲಾದರು. ಆ ಶರಣರ ಅನುಮತದರಿವಿನ ಉಪದೇಶವ ಕೇಳಿ, ಎನಗಿನ್ನಾವುದು ಹದನವಯ್ಯಾ ಎಂಬ ಚಿಂತೆಯ ಬಿಟ್ಟು ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೈಯಲ್ಲಿ ಪಿಡಿದೆನು.
--------------
ಸಿದ್ಧರಾಮೇಶ್ವರ
ವಿರಹದಲುತ್ಪತ್ಯವಾದವರ, ಮಾಯದ ಬೇಳುವೆ ಹತ್ತಿತ್ತಲ್ಲಾ ! ಸ್ವರೂಪ ನಿರೂಪವೆಂದರಿಯರು, ಹೆಸರಿಟ್ಟು ಕರೆವ ಕಷ್ಟವ ನೋಡಾ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಹೆಸರಿಡಬಾರದ ಲಿಂಗವ ಕರಸ್ಥಳಕ್ಕೆ ಹೆಸರಿಟ್ಟು ತಂದನೆನ್ನ ಗುರು. ಆ ಹೆಸರಿಟ್ಟ ಲಿಂಗದ ಹೆಸರು ಹೇಳುವೆನು. ಕಂಜಕನ್ನಿಕೆಯ ಹಣೆಯಲ್ಲಿ ವಿದ್ಥಿವಶವೆಂದು ಬರೆದ ಐದಕ್ಷರವೆ ಆತನ ಪರಮನಾಮ. ಅವ್ವೆಯ ಕರಂಗಳೊಪ್ಪಿಪ್ಪ ಅಕ್ಷರಂಗಳಾರೆ ದ್ವಿತೀಯ ನಾಮ. ಅವ್ವೆಯ ಆನಂದ ಮನ್ಮಸ್ತಕದಲ್ಲಿ ಒಪ್ಪಿಪ್ಪ ಅಕ್ಷರದ್ವಯವೆ ಆತನ ಆಚಾರ್ಯನಾಮ. ಇಂತು ನಾಮತ್ರಯಂಗಳನರಿದು ಧ್ಯಾನಾರೂಢನಾಗಿ ಲಿಂಗಾರ್ಚನೆಯ ಮಾಡುವರೆತ್ತಾನೊಬ್ಬರು. ಬಸವಣ್ಣ ಮೊದಲಾದ ಸಕಲ ಪುರಾತರು, ಅವ್ವೆಯ ಅನುಮತದಿಂದ ಶುದ್ಧ ಸಿದ್ಧ ಪ್ರಸಿದ್ಧ ಲಿಂಗಾರ್ಚನೆಯಂ ಮಾಡಿ ನೀನಾದರು. ಎನಗಿನ್ನಾವುದು ಹದನೈ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಹೆಸರಿಡಬಾರದ ಘನತರ ಲಿಂಗವ ಹೆಸರಿಟ್ಟು, ವಾಙ್ಮನಕ್ಕಗೋಚರವಪ್ಪ ಲಿಂಗವ ವಾಕ್ಯಕ್ಕೆ ತಂದು, `ಅತ್ಯ್ಕತಿಷ್ಠದ್ದಶಾಂಗುಲಂ' ಎಂಬ ಲಿಂಗವ ಚಿತ್ತಕ್ಕೆ ತಂದು, ಸುತ್ತಿರ್ದ ಮಾಯಾಪ್ರಪಂಚವ ಬಿಡಿಸಿದ ಬಸವಣ್ಣ; ಚಿತ್ತಶುದ್ಧನ ಮಾಡಿದ ಬಸವಣ್ಣ. ಮಲತ್ರಯಂಗಳ ಹರಿದು, ಶುದ್ಧ ತಾತ್ಪರ್ಯವರುಹಿ, ಮುಕ್ತನ ಮಾಡಿದ ಗುರು ಬಸವಣ್ಣ. ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆನ್ನ ಕಾರಣ ಧರೆಗೆ ಬಂದ.
--------------
ಸಿದ್ಧರಾಮೇಶ್ವರ
ಇಂತೀ ವಿಚಾರವನು ತಿಳಿಯದೆ ಪ್ರಾಣಲಿಂಗಿ ಪ್ರಾಣಲಿಂಗಿ ಎಂದು ಹೆಸರಿಟ್ಟು ಇಷ್ಟಲಿಂಗದಲ್ಲಿ ಅವಿಶ್ವಾಸವ ಮಾಡಿ, ಕ್ರಿಯಾಚಾರದಲ್ಲಿ ಅನಾಚಾರಿಯಾಗಿ, ಜೀವಾತ್ಮನೇ ಪರಮಾತ್ಮನೆಂದು ಅಹಂಕರಿಸಿ, ದೇಹದ ಸಕಲಕರಣವಿಷಯಂಗಳಲ್ಲಿ ಮನಮಗ್ನವಾಗಿ ತನ್ನ ನಿಜದ ನಿಲವ ಮರೆದು, ಪರರಿಗೆ ಶಿವಶರಣಂಗಳ ವಚನವ ನೋಡಿ ಶಿವಾನುಭಾವವ ಪೇಳುವ ಕುನ್ನಿ ಮನುಜರ ಕೂಗ್ಯಾಡಿ ಕೂಗ್ಯಾಡಿ ನರಕದಲ್ಲಿಕ್ಕೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಭೂಮಿಯಲ್ಲಿ ಹುಟ್ಟಿದ ಕಲ್ಲು ತಂದು ಲಿಂಗವೆಂದು ಹೆಸರಿಟ್ಟು, ಶುಕ್ಲ ಶೋಣಿತಾತ್ಮಸಂಬಂಧವಾದ ಮಾತಾಪಿತರ ಸಂಯೋಗದಿಂದ ಪುಟ್ಟಿದ ಮನುಜರಿಗೆ ಭಕ್ತನೆಂದು ಹೆಸರಿಟ್ಟು, ಇಂತಪ್ಪ ಭಕ್ತಂಗೆ ಅಂತಪ್ಪ ಲಿಂಗವನು ವೇಧಾ, ಮಂತ್ರ, ಕ್ರಿಯೆ ಎಂಬ ತ್ರಿವಿಧ ದೀಕ್ಷೆಯಿಂದ ಮೂರೇಳು ಪೂಜೆಯ ಮಾಡಿ, ಅಂಗದ ಮೇಲೆ ಲಿಂಗಧಾರಣವ ಮಾಡಿದಡೆ, ಅದು ಲಿಂಗವಲ್ಲ, ಅವನು ಭಕ್ತನಲ್ಲ. ಅದೇನು ಕಾರಣವೆಂದಡೆ: ಅವನು ಮರಣಕ್ಕೆ ಒಳಗಾಗಿ ಹೋಗುವಲ್ಲಿ ಪೃಥ್ವಿಯ ಕಲ್ಲು ಪೃಥ್ವಿಯಲ್ಲಿ ಉಳಿಯಿತು. ಭಕ್ತಿ ಭ್ರಷ್ಟವಾಗಿ ಹೋಯಿತು ಬಿಡಾ ಮರುಳೆ. ಇದು ಲಿಂಗಾಂಗಸ್ವಾಯುತವಲ್ಲ. ಲಿಂಗಾಂಗದ ಭೇದವ ಹೇಳ್ವೆ ಲಾಲಿಸಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಪಾದೋದಕ ಪ್ರಸಾದಗಳೆಂದೆಂಬಿರಿ, ಪಾದೋದಕ ಪ್ರಸಾದದ ಬಗೆಯ ಪೇಳ್ವೆ. ಗದ್ದುಗೆಯ ಮೇಲೆ ಗದ್ದುಗೆಯ ಹಾಕಿ, ಜಂಗಮಲಿಂಗಿಗಳ ಕರತಂದು ಕುಳ್ಳಿರಿಸಿ, ಧೂಪ ದೀಪ ಪತ್ರಿ ಪುಷ್ಪದಿಂದ ಪಾದಪೂಜೆಯ ಮಾಡಿ, ಕೆರೆ ಬಾವಿ ಹಳ್ಳ ಕೊಳ್ಳ ನದಿ ಮೊದಲಾದವುಗಳ ನೀರ ತಂದು- ಬ್ರಹ್ಮರಂಧ್ರದಲ್ಲಿರುವ ಸತ್ಯೋದಕವೆಂದು ಮನದಲ್ಲಿ ಭಾವಿಸಿ, ಆ ಜಂಗಮದ ಉಭಯಪಾದದ ಮೇಲೆರೆದು, ಪಾದೋದಕವೇ ಪರಮತೀರ್ಥವೆಂದು ಲಿಂಗ ಮುಂತಾಗಿ ಸೇವಿಸಿ, ನವಖಂಡಪೃಥ್ವಿಯಲ್ಲಿ ಬೆಳೆದ ಹದಿನೆಂಟು ಜೀನಸಿನ ಧಾನ್ಯವ ತಂದು, ಉದಕದಲ್ಲಿ ಹೆಸರಿಟ್ಟು, ಅಗ್ನಿಯಲ್ಲಿ ಪಾಕವಮಾಡಿ, ತಂದು ಜಂಗಮಕ್ಕೆ ಎಡೆಮಾಡಿ, ಜಂಗಮವು ತನ್ನ ಲಿಂಗಕ್ಕೆ ಅರ್ಪಿಸಿ ಸೇವಿಸಿದಬಳಿಕ ತಾವು ಪ್ರಸಾದವೇ ಪರಬ್ರಹ್ಮವೆಂದು ಭಾವಿಸಿ, ಕೊಂಡು ಸಲಿಸುವರಯ್ಯ. ಇಂತೀ ಕ್ರಮದಿಂದ ಕೊಂಬುದು ಪಾದೋದಕಪ್ರಸಾದವಲ್ಲ. ಇಂತೀ ಉಭಯದ ಹಂಗು ಹಿಂಗದೆ ಭವಹಿಂಗದು, ಮುಕ್ತಿದೋರದು. ಮತ್ತಂ, ಹಿಂದಕ್ಕೆ ಪೇಳಿದ ಕ್ರಮದಿಂದಾಚರಿಸಿ, ಗುರುಲಿಂಗಜಂಗಮದಲ್ಲಿ ಪಾದೋದಕ ಪ್ರಸಾದವ ಸೇವಿಸಬಲ್ಲವರಿಗೆ ಪ್ರಸಾದಿಗಳೆಂಬೆ. ಇಂತಪ್ಪವರಿಗೆ ಭವ ಹಿಂಗುವದು, ಮುಕ್ತಿಯೆಂಬುದು ಕರತಳಾಮಳಕವಾಗಿ ತೋರುವುದು. ಈ ಪಾದೋದಕದ ಭೇದವ ಬಸವಣ್ಣ ಚೆನ್ನಬಸವಣ್ಣ ಪ್ರಭುದೇವರು ಮುಖ್ಯವಾದ ಏಳುನೂರೆಪ್ಪತ್ತು ಪ್ರಮಥಗಣಂಗಳು ಬಲ್ಲರಲ್ಲದೆ ಮಿಕ್ಕಿನ ಜಡಮತಿ ಕಡುಪಾತಕರಾದ ಭಿನ್ನಭಾವ ಜೀವಾತ್ಮರೆತ್ತ ಬಲ್ಲರಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನ ಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಬೀಜದೊಳಗೆ ಅಂಕುರವಿರ್ಪುದು. ಅಂಕುರದೊಳಗೆ ಬೀಜವಿರ್ಪುದು. ಅಂಕುರ ಬೀಜವೆಂದು ಹೆಸರು ಎರಡಾದಡೇನು ? ಒಳಗಿರ್ಪ ಸಾರವು ಒಂದೇ ಆಗಿರ್ಪಂತೆ ಬಸವಣ್ಣನೆ ಶಿವನು, ಶಿವನೆ ಬಸವಣ್ಣನು. ಬಸವಣ್ಣ ಶಿವನೆಂಬ ಹೆಸರೆರಡಾದಡೇನು ? ಅಖಂಡವಸ್ತು ಒಂದೇ ಆದಕಾರಣ, ನಿಮ್ಮ ಅಖಂಡೇಶ್ವರನೆಂದು ಹೆಸರಿಟ್ಟು ಕರೆದೆನಯ್ಯಾ ದೇವರದೇವಾ.
--------------
ಷಣ್ಮುಖಸ್ವಾಮಿ
ಅಯ್ಯಾ, ಏಳೇಳು ಜನ್ಮದಲ್ಲಿ ಶಿವಭಕ್ತನಾಗಿ ಬಾರದಿರ್ದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ ! ನಿಮ್ಮ ಪ್ರಸಾದಕ್ಕಲ್ಲದೆ ಬಾಯ್ದೆರೆಯೆನಯ್ಯಾ. ಪ್ರಥಮಭವಾಂತರದಲ್ಲಿ ಶಿಲಾದನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಭೃತ್ಯನ ಮಾಡಿ ಎನನ್ನಿರಿಸಿಕೊಂಡಿರ್ದಿರಯ್ಯಾ. ಎರಡನೆಯ ಭವಾಂತರದಲ್ಲಿ ಸ್ಕಂದನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಕಾರುಣ್ಯವ ಮಾಡಿರಿಸಿಕೊಂಡಿರ್ದಿರಯ್ಯಾ. ಮೂರನೆಯ ಭವಾಂತರದಲ್ಲಿ ನೀಲಲೋಹಿತನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಲೀಲಾವಿನೋದದಿಂದಿರಿಸಿಕೊಂಡಿರ್ದಿರಯ್ಯಾ. ನಾಲ್ಕನೆಯ ಭವಾಂತರದಲ್ಲಿ ಮನೋಹರನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಮನಃಪ್ರೇರಕನಾಗಲೆಂದಿರಿಸಿಕೊಂಡಿರ್ದಿರಯ್ಯಾ. ಐದನೆಯ ಭವಾಂತರದಲ್ಲಿ ಕಾಲಲೋಚನನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ಸರ್ವಕಾಲಸಂಹಾರವ ಮಾಡಿಸುತ್ತಿರ್ದಿರಯ್ಯಾ. ಆರನೆಯ ಭವಾಂತರದಲ್ಲಿ ವೃಷಭನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮಗೇರಲು ವಾಹನವಾಗಲೆಂದಿರಿಸಿಕೊಂಡಿರ್ದಿರಯ್ಯಾ. ಏಳನೆಯ ಭವಾಂತರದಲ್ಲಿ ಬಸವದಣ್ಣಾಯಕನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಒಕ್ಕುದ ಮಿಕ್ಕುದಕ್ಕೆ ಯೋಗ್ಯನಾಗಲೆಂದಿರಿಸಿಕೊಂಡಿರ್ದಿರಯ್ಯಾ. ಇದು ಕಾರಣ ಕೂಡಲಸಂಗಮದೇವಾ, ನೀವು ಬರಿಸಿದ ಭವಾಂತರದಲ್ಲಿ ನಾನು ಬರುತಿರ್ದೆನಯ್ಯಾ. 4
--------------
ಬಸವಣ್ಣ
ಪಂಚಭೂತದ ಸೂತಕದ ಬಳಿವಿಡಿದು ಪ್ರಜ್ವಲಿಸುವ ಆತ್ಮಜ್ಯೋತಿಯೆಂಬ ಮಾತಿನೊಳಗಲ್ಲ. ನಾದ ಬಿಂದು ಕಳಾತೀತನೆಂದು ನುಡಿವರು. ಹೆಸರಿಲ್ಲದ ಬಯಲ ತಮ್ಮ ತಮ್ಮ ಮುಖಕ್ಕೆ ಹೆಸರಿಟ್ಟು ತಮ ತಮಗೆ ಕರತಳಾಮಳಕವೆಂಬರು. ಅದರಾದಿಯಂತ್ಯವನರಿಯರು ಎಂತು ಬಲ್ಲರು ಸಿಮ್ಮಲಿಗೆಯ ಚೆನ್ನರಾಮನೆಂಬ ಶಬ್ದ ಉದ್ದೇಶಿಗಳು?
--------------
ಚಂದಿಮರಸ
ಪ್ರಸಾದ ಪ್ರಸಾದವೆಂದು ಹೆಸರಿಟ್ಟು ನುಡಿವವರಿಗೆ ಪ್ರಸಾದವೆಲ್ಲಿಯದೋ? ಮನಮುಟ್ಟಿ ಕೊಂಡುದು ಪ್ರಸಾದವಲ್ಲ, ತನುಮುಟ್ಟಿ ಕೊಂಡುದು ಪ್ರಸಾದವಲ್ಲ, ಧನಮುಟ್ಟಿ ಕೊಂಡುದು ಪ್ರಸಾದವಲ್ಲ. ಅವು ಏಕಾಗಿ ತ್ರಿವಿಧಸಾಹಿತ್ಯದಲ್ಲಿ ಮುಟ್ಟಿ ಕೊಂಡುದು ಪ್ರಸಾದವಲ್ಲ. ಇಕ್ಕುವವ ಶಿವದ್ರೋಹಿ, ಕೊಂಬವ ಗುರುದ್ರೋಹಿ. ಇದು ಕಾರಣ ಕೂಡಲಚೆನ್ನಸಂಗಯ್ಯನ ಪ್ರಸಾದ ಘನಕ್ಕೆ ಮಹಾಘನ ನಾನೇನೆಂದು ಬಣ್ಣಿಸುವೆ.
--------------
ಚನ್ನಬಸವಣ್ಣ
ಇನ್ನಷ್ಟು ... -->