ಅಥವಾ

ಒಟ್ಟು 121 ಕಡೆಗಳಲ್ಲಿ , 33 ವಚನಕಾರರು , 103 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಟ್ಟ ಬಯಲಲ್ಲಿ ಒಂದು ಶರಧಿ ಹುಟ್ಟಿತ್ತು. ಆ ಶರಧಿಯ ನಡುವೆ ಒಂದು ಕಮಲ ಹುಟ್ಟಿತ್ತು. ಆ ಕಮಲದ ನೆಲೆಯ ಕಾಣಲರಿಯದೆ ತೊಳಲಿ ಬಳಲಿ, ಜಗದೊಳಗೆ ನಚ್ಚುಮಚ್ಚಿಗೊಳಗಾಗಿ, ಚುಚ್ಚಳ ಪೂಜೆಗೆ ಸಿಲ್ಕಿ, ಕುಲಕೆ ಛಲಕೆ ಕೊಂದಾಡಿ, ಭವಕ್ಕೆ ಗುರಿಯಾಗುವ ಮನುಜರ ಕಂಡು ನಾಚಿತ್ತೆನ್ನ ಮನವು. ಆ ಮನದ ಬೆಂಬಳಿಗೊಂಡು ಹೋದವರೆಲ್ಲ ಮರುಳಾಗಿ ಹೋದರು. ಇದ ನೋಡಿ ನಾನು ಬಟ್ಟಬಯಲಲ್ಲಿ ನಿಂದು ನೋಡಿದಡೆ, ಶರಧಿ ಬತ್ತಿತ್ತು ಕಮಲ ಕಾಣಬಂದಿತ್ತು. ಆ ಕಮಲ ವಿಕಾಸವಾಯಿತ್ತು ಪರಿಮಳವೆಂಬ ವಾಸನೆ ತೀಡಿತ್ತು. ಆ ವಾಸನೆವಿಡಿದು ಜಗದಾಸೆಯ ಹಿಂಗಿ ಮಾತು ಮಥನವ ಕೆಡಿಸಿ, ಮಹಾಜ್ಯೋತಿಯ ಬೆಳಗಿನಲಿ ಓಲಾಡುವ ಶರಣರ ಆಸೆ ರೋಷ ಪಾಶಕ್ಕೊಳಗಾದ ಈ ಜಗದ ಹೇಸಿಗಳೆತ್ತಬಲ್ಲರು, ಈ ಮಹಾಶರಣರ ನೆಲೆಯ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಎಂಟಕ್ಕೆ ಗಂಟಾಗಿ ನಂಟನ ತಾಯಿ ನಮ್ಮೂರಿಗೆ ಹೋದಳು. ಅರಸುಗಳೈವರು ಅರಸಿಯ ಮುದ್ದಾಡ ಹೋದರು. ರೂಪುಳ್ಳ ಹೆಂಡತಿ ಕಂಡಡೆ ಏನೆಂದೊ: ನಮ್ಮ ಕಪಿಲಸಿದ್ಧಮಲ್ಲಿನಾಥ ಉಂಬಡೆ ಓಗರವಿಲ್ಲವೆಂದನು.
--------------
ಸಿದ್ಧರಾಮೇಶ್ವರ
ಜಗದಗಲದ ಗದ್ಗುಗೆಗಳಿಗೆ ಅಪ್ರಮಾಣದ ಲಿಂಗಪ್ರತಿಷ್ಠೆಯ ಮಾಡಿದರು ನೋಡಾ. ಅದಕ್ಕೆ ತೊಂಬತ್ತಾರಂಗುಲ ಪ್ರಮಾಣಿನ ದೇಗುಲ ನೋಡಾ. ನಾಲ್ಕೈದು ಬಾಗಿಲು ನೋಡಾ. ಬೇರೊಂದು ಬಾಗಿಲು ಮುಚ್ಚಿ ಮುಸುಕಿಹುದು. ದಶಮದ್ವಾರವ ನೆರೆಹೆವೆಂದು ಬಾಗಿಲ ಮುಚ್ಚಹೋದಡೆ ತೆಗೆವವು. ತೆಗೆಯಹೋದಡೆ ಮುಚ್ಚುವವು ನೋಡಾ. ಈ ವರ್ಮಸಕೀಲವನರಿಯದೆ ಅತಿರಥರು ಮಹಾರಥರು ತೊಳಲಿ ಬಳಲುತೈದಾರೆ. ವೀರದ್ಥೀರಸುಭಟರುಗಳೆಲ್ಲಾ ಹೇಡಿಬಳೆಯಂ ತೊಟ್ಟು ಹೆಣ್ಣಾಗಿ ಹೋದರು. ಅರುಹಿರಿಯರೆಲ್ಲಾ ಮರುಳಾಗಿ ಮತಿಗೆಟ್ಟು ಹೋದರು. ಇದನಾರಯ್ಯಾ ಬಲ್ಲವರು ? ನೀವಿಕ್ಕಿದ ಕದವ ತೆಗೆಯಬಲ್ಲವರಾರೊ ಅಯ್ಯಾ ! ತೆಗೆಯದ ಕದವನಿಕ್ಕಬಲ್ಲವರಾರೊ ಅಯ್ಯಾ ! ಪದಪಂಕದಲ್ಲಿನ ದ್ವಾರಮಂ ಕಾಯ್ದಿಪ್ಪ ದಿಟ್ಟಿಯ ಕಡೆಗಣ್ಣಿನ ಬೆಳಗಿನೊಳಗಾಡುವ ಅವ್ಯಯ ಹರಿಬ್ರಹ್ಮಾದಿಗಳು ಮೊದಲಾದ ಸಚರಾಚರದವರನೆಲ್ಲ ನುಂಗಿತ್ತು ನೋಡಾ. ಇದನಾರಿಗೂ ಅರಿಯಬಾರದು ನೋಡಾ. ನೀವಿದ್ದಲ್ಲಿ ಇಲ್ಲದಿಪ್ಪ ಶರಣರಿಗಲ್ಲದೆ ಇದರ ಭೇದವ ಬಲ್ಲವ ಅಲ್ಲಮನು. ಕಾಮನ ಕಣ್ಣಿಗೆ ಮುಳ್ಳಬೆಟ್ಟದೊಡನೆ ಮುಟ್ಟದ ಕದವು ತೆಗೆದವು. ತೆಗೆದಿದ್ದ ಬಾಗಿಲು ತಮತಮಗೆ ಮುಚ್ಚಿದವು ನೋಡಾ. ಹೂಗಲ್ಲಿಗೆ ಕಿಚ್ಚನಿಕ್ಕಿ ಆ ಬಾಗಿಲ ಕಾಯ್ದಿಪ್ಪವಳ ಮೂಗ ಮೊಲೆಯ ಕೊಯ್ದು, ಸಾಗರದ ಕಟ್ಟೆಯ ಒಡೆದು, ದಶಮ ದ್ವಾರದಲ್ಲಿ ನಿಂದು, ನಿಮ್ಮ ಹೊತ್ತಿರ್ಪವಳ ನೆತ್ತಿಗಣ್ಣಿಂದ ತೆಗೆದು ನೋಡಿ, ಏಕಾದಶದ್ವಾರದ ಸೂತ್ರ ಸೂಕ್ಷ್ಮವಿನ್ನು ಮಹಾಬೆಳಗಿನೊಳಗೆ ಸಾಸಿವೆಯ ಛಿದ್ರವ ಮಾಡಿ ಕುಂಬಳದ ಕಾಯ ಕೀಲಕೊಟ್ಟಂತೆಯಿಪ್ಪ ನಿಜಗುರು ಭೋಗೇಶ್ವರ ನಿಮ್ಮ ಇರವು, ಪ್ರಭುವಿನ ಕರುಣವುಳ್ಳ ಲಿಂಗಾಂಗಿಗಳಿಗಲ್ಲದೆ ವಾಗದ್ವೈತದಿಂದ ಒಡಲ ಹೊರೆವ ಬಹುಭಾಷಿಗಳಿಗೆಂತು ಸಾಧ್ಯವಪ್ಪುದೊ ?
--------------
ಭೋಗಣ್ಣ
ವಂಚಿಸುವ ಸತಿ ಸುತ ಬಂಧು ಮೊದಲಾದ ಲೋಕವ ನಂಬಿ, ನಿರ್ವಂಚಕರಪ್ಪ ಗುರು ಲಿಂಗ ಜಂಗಮರ ವಂಚಿಸಿ ನರಕಕ್ಕಿಳಿವರನೇನೆಂಬೆನಯ್ಯಾ ? ಅಕಟಕಟಾ, ಈ ಹೀಂಗೆ ಶಿವಾಚಾರ ? ಈ ಹೀಂಗೆ ಭೃತ್ಯಾಚಾರ ? ಭಕ್ತಿ ಮುಕ್ತಿಯನರಿಯದೆ ಹೋದರು. ತನು ಮನ ಧನ ಕೆಟ್ಟುಹೋಹುದೆಂಬ ಯುಕ್ತಿಯನರಿಯಿರಿ. ಇದನರಿದು, ವಂಚಿಸುವವರನೆ ವಂಚಿಸಿ ನಿರ್ವಂಚಕರಾಗಿ ಗುರು ಲಿಂಗ ಜಂಗಮಕ್ಕೆ ದಾಸೋಹವ ಮಾಡಲು ತನು ಕೆಡದು, ಮನ ಕೆಡದು, ಧನ ಕೆಡದು. ಮುಕ್ತಿಯುಂಟು ಭಕ್ತಿಯುಂಟು, ಇದು ಸತ್ಯ ಶಿವ ಬಲ್ಲ, ಶಿವನಾಣೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಮೂರೂರ ಮಧ್ಯದಲ್ಲಿ ಆರು ವರ್ಣದ ಪದ್ಮ ಬೇರೆ ಬೇರವಕೆ ಅಕ್ಷರಗಳಾರು. ಏರಿ ಬಂದಪೆವೆಂಬ ಕರ್ಮಯೋಗಿಗಳೆಲ್ಲ ಗಾರಾಗಿ ಹೋದರು. ಮೀರಿದ ಶಿವಯೋಗ ಗಾರಾದವರಿಗೆ ಸೂರೆಯೆ, ಕಪಿಲಸಿದ್ಧಮಲ್ಲಿಕಾರ್ಜುನ?
--------------
ಸಿದ್ಧರಾಮೇಶ್ವರ
ನೊಣ ರಣವ ಹೊಕ್ಕು, ಶ್ರೋಣಿತವ ಭುಂಜಿಸುವಾಗ, ಕೇಣಸರದ ಭಟರೆಲ್ಲರೂ ನೊಣದ ರಾವಡಿಗಂಜಿ ಹೇಳದೆ ಹೋದರು. ಅರ್ಕೇಶ್ವರಲಿಂಗವನರಿಯಿರಣ್ಣಾ.
--------------
ಮಧುವಯ್ಯ
ಉಪಮೆ ಉಪಮಿಸಲರಿಯದೆ ಉಪಮಾತೀತವೆನುತ್ತಿದ್ದಿತ್ತು. ಅರಿವು, ಅರಿವಿನ ಮರೆಯಲ್ಲಿರ್ದುದನರಿಯಲರಿಯದೆ, ಪರಾಪರವೆಂದು ನುಡಿಯುತ್ತಿದ್ದಿತ್ತು. ಧ್ಯಾನ ಧ್ಯಾನಿಸಲರಿಯದೆ, ಧ್ಯಾನರೂಪಾತೀತನೆಂದು, ತದ್ಧ್ಯಾನಗೊಂಡಿತ್ತು. ಜ್ಞಾತೃ ಜ್ಞಾನ ಜ್ಞೇಯಕ್ಕೆ ಇನ್ನಾವ ಜ್ಞಾನವೊ? ವೇದವಿಜ್ಞಾನವೆಂದುದಾಗಿ, `ತತ್ತ್ವಮಸಿ' ವಾಕ್ಯಂಗಳೆಲ್ಲವೂ ಹುಸಿಯಾಗಿ ಹೋದವು. ಸಚ್ಚಿದಾನಂದವೆಂದುದಾಗಿ ದ್ವೈತಾದ್ವೈತಿಗಳೆಲ್ಲ ಸಂಹಾರವಾಗಿ ಹೋದರು. ಬಂದೂ ಬಾರದ, ನಿಂದ ನಿರಾಳ ಗುಹೇಶ್ವರ.
--------------
ಅಲ್ಲಮಪ್ರಭುದೇವರು
ಭವಿಯ ತಂದು ಪೂವಾಶ್ರಯವ ಕಳೆದು ಭಕ್ತನ ಮಾಡಿದ ಬಳಿಕ, ಪೂರ್ವವನ್ನೆತ್ತಿ ನುಡಿವ ಶಿವದ್ರೋಹಿಯ ಮಾತ ಕೇಳಲಾಗದು. ಲಿಂಗವೆ ಗುರು, ಗುರುವೇ ಲಿಂಗವೆಂದು, ಹೆಸರಿಟ್ಟು ಕರೆವ ಗುರುದ್ರೋಹಿಯ ಮಾತ ಕೇಳಲಾಗದು. ಹೆಸರಿಲ್ಲದ ಅಪ್ರಮಾಣ ಮಹಿಮನನು ಹೆಸರಿಟ್ಟು ಕರೆವ ಲಿಂಗದ್ರೋಹಿಯ ಮಾತ ಕೇಳಲಾಗದು. ಪೂರ್ವವಿಲ್ಲದ ಶಿಷ್ಯ, ನೇಮವಿಲ್ಲದ ಗುರು, ಹೆಸರಿಲ್ಲದ ಲಿಂಗ ಈ ತ್ರಿವಿಧವನರಿಯದೆ ಕೆಟ್ಟು ಹೋದರು, ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಶ್ರೀ ಮಹಾಮಂತ್ರವ ಜಪಿಸಿದಾತಂಗೆ ಮತ್ರ್ಯಲೋಕ ಮೊದಲಾಗಿ ಆವ ಲೋಕದಲ್ಲಿ ಹೋದರು ಸಮಸ್ತಲಿಂಗಭೋಗ ದೊರವುದಯ್ಯ. ಶ್ರೀ ಮಹಾಮಂತ್ರವ ಜಪಿಸಿದಾತಂಗೆ ಸಮಸ್ತಲೋಕದಲ್ಲಿ ಸತ್ಯ ಸಾತ್ವಿಕ ಪರೋಪಕಾರ ಸುಗುಣ ದೊರವುದಯ್ಯ. ಶ್ರೀ ಮಹಾಮಂತ್ರವ ಜಪಿಸಿದಾತಂಗೆ ಪರಮವಿರಕ್ತಿ ದೊರವುದಯ್ಯ. ಶ್ರೀ ಮಹಾಮಂತ್ರವ ಜಪಿಸಿದಾತಂಗೆ ಸಾರಸದ್ಭಕ್ತಿ ದೊರವುದಯ್ಯ. ಶ್ರೀ ಮಹಾಮಂತ್ರವ ಜಪಿಸಿದಾತಂಗೆ ಶಮೆ ದಮೆ ಶಾಂತಿ ಸೈರಣೆ ಸತ್ಕ್ರಿಯಾ ಸಮ್ಯಜ್ಞಾನ ಸದಾಚಾರ ದೊರವುದಯ್ಯ. ಶ್ರೀ ಮಹಾಮಂತ್ರವ ಜಪಿಸಿದಾತಂಗೆ ನಿಜಶಿವಯೋಗ ದೊರವುದು ನೋಡ. ಶ್ರೀ ಮಹಾಮಂತ್ರವೆ ಸಕಲಕಾರಣಕ್ಕೆ ಮೂಲಚೈತನ್ಯ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಗೋಳಕಾಕಾರ ಗೋರಕ್ಷನೆಂಬ ಪಟ್ಟಣದಲ್ಲಿ, ಗೋಮಯವೆಂಬ ಪರಶಕ್ತಿ ಅಪರ ಪ್ರಸೂತಕವಾಗಲಾಗಿ, ಅದರಂಡದಲ್ಲಿ ಆಡು ಹುಟ್ಟಿತ್ತು. ಆಡಿನ ಅಂಡದಲ್ಲಿ ಕೋಡಗ ಹುಟ್ಟಿತ್ತು. ಕೋಡಗದ ಕುಂಡಿಯಲ್ಲಿ ಸಿರಿಯಕ್ಕ ಹುಟ್ಟಿದಳು. ಸಿರಿಯಕ್ಕನ ಆತುರಿಯದಲ್ಲಿ ಮೂದೇವಿ ಉರಿಯಕ್ಕ ಹುಟ್ಟಿದಳು. ಉರಿಯಕ್ಕನ ಉರವಣೆಯಲ್ಲಿ ಜಗ ಹುಟ್ಟಿ, ಜಗದ ಸಿರಿಯಲ್ಲಿ ಹೋದರು ಹಿರಿಯರೆಲ್ಲರು, ಬಂಕೇಶ್ವರಲಿಂಗವನರಿಯದೆ.
--------------
ಸುಂಕದ ಬಂಕಣ್ಣ
ಕತ್ತಲೆಮನೆಯೊಳಗೆ ಒಬ್ಬ ಸೂಳೆ ನಾಲ್ವರ ಕೂಡಿಕೊಂಡು ಹತ್ತೆಂಟು ಕೇರಿಗಳಲ್ಲಿ ಸುಳಿದಾಡುತಿರ್ಪಳು ನೋಡಾ. ಮೇಲಣ ದಾರಿಯಲ್ಲಿ ಒಬ್ಬ ಕುಂಟಣಗಿತ್ತಿಯು ಬಂದು ಆ ಸೂಳೆಯ ಕೈವಿಡಿಯಲು, ಹತ್ತೆಂಟು ಕೇರಿಗಳು ಅಳಿದುಹೋದವು ನೋಡಾ. ನಾಲ್ವರು ಬಿಟ್ಟು ಹೋದರು ನೋಡಾ. ಆ ಸೂಳೆಯ ಕೂಡಿಕೊಂಡು ಒಂಬತ್ತು ಬಾಗಿಲ ಮುಂದೆ ನಿಂದು ಪರಕೆ ಪರವಾದ ಲಿಂಗವನಾಚರಿಸುತಿರ್ಪರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಾಯದ ಕಳವಳದಲ್ಲಿ ಹುಟ್ಟಿ ಲಿಂಗವನರಿಯದಂ[ತವರಿ]ರಲಿ, ಷಡು ಮಹಾವೇದ ಶಾಸ್ತ್ರಗಮಪುರಾಣದರ್ಥವನೋದಿ ಲಿಂಗ ಉಂಟು, ಇಲ್ಲೆಂಬ ಅಜ್ಞಾನಿಗಳಂತಿರಲಿ. ಷಡುಶೈವರು ಹಂಚಾಗಿ ಹೋದರು. ಎಂತು ನಿಜಲಿಂಗವಂತಂಗೆ ಸರಿಯೆಂಬೆ ಅದ್ವೈತಿಗಳೆಲ್ಲಾ ಲಿಂಗಾರಾಧನೆ ಹುಸಿಯೆಂದು ಬುದ್ಧಿತಪ್ಪಿಕ್ರಮಗೆಟ್ಟು ಹೋದರು, ಬ್ರಹ್ಮ ನಾನೆಂದು ಶಿರವ ಹೋಗಾಡಿಕೊಂಡನು, ಬ್ರಹ್ಮಾದಿದೇವತೆಗಳು ಮಹಾಲಿಂಗಕ್ಕೆ ದೂರವಾಗಿ ಹೋದರು, ಹಮ್ಮಿಲ್ಲದ ಕಾರಣ ಕೂಡಲಸಂಗನ ಶರಣರು ಜಂಗವಂದ್ಯರಾದರು.
--------------
ಬಸವಣ್ಣ
ಮಾಂಸಕ್ಕೆ ಮೆಚ್ಚಿದ ಅರಸುಗಳು ನಾಯಂಜಲ ತಿಂದು ನರಕಕ್ಕಿಳಿದು ಹೋದರು. ಸೂಳೆಗೆ ಮೆಚ್ಚಿದವರು ಸೂಳೆಯ ಬಂಟರೆಂಜಲ ತಿಂದು ನರಕಕ್ಕಿಳಿದು ಹೋದರು-ಇದು ಲೋಕವರಿಯಲುಂಟು. ಲಿಂಗವ ಮೆಚ್ಚಿದ ಸದ್ಭಕ್ತರು ಗುರುಲಿಂಗಜಂಗಮದ ಒಕ್ಕು ಮಿಕ್ಕ ಪ್ರಸಾದವ ಕೊಂಡು ಆಗಳೆ ಅಂತೆ ಮೋಕ್ಷವನೈದಿದರು, ಶಿವರಹಸ್ಯದಲ್ಲಿ; ಶ್ವಾನೋಚ್ಛಿಷ್ಟಾಯತೇ ರಾಜಾ ವೇಶ್ಯೋಚ್ಛಿಷ್ಟಂ ಜಗತ್ತ್ರಯಂ ಜಂಗಮೋಚ್ಛಿಷ್ಟಭುಂಜಾನೋ ಸದ್ಯೋ ಮುಕ್ತೋ ನ ಸಂಶಯಃ ಎಂದುದಾಗಿ ಗುರುಲಿಂಗಜಂಗಮದ ಪ್ರಸಾದವ ಕೊಂಬವರ ಕಂಡು ನಿಂದಿಸುವರ ಬಾಯಲ್ಲಿ ಬಾಲಹುಳು ಸುರಿಯದೆ ಮಾಣ್ಬವೆ ಕೂಡಲಚೆನ್ನಸಂಗಮದೇವಾರಿ
--------------
ಚನ್ನಬಸವಣ್ಣ
ಮುನ್ನಲಿ ಕಂಡ ವಸ್ತು ಮುನ್ನವೆ ಅಡಗಿತ್ತು. ಮನ್ನಣೆಯ ಶೂಲಕ್ಕೆ ಮುನ್ನವೆ ಹೋದರು. ಚೆನ್ನಬಸವನೆಂಬ ಪರಿಪೂರ್ಣಜ್ಞಾನಿ ಪ್ರಭಾಸಂಪೂಜ್ಯನಾದ. ಕನ್ನೆಯರ ಕೂಟವಳಿಯಿತ್ತು ಚೆನ್ನಬಸವಣ್ಣನಿಂದ ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ತಮ್ಮ ತಮ್ಮ ಮುಖದಲ್ಲಿ; ಲಿಂಗವನೊಲಿಸಿದರು, ಆರಾಧಿಸಿದರು, ಬೇಡಿತ್ತ ಪಡೆದರು ಎಲ್ಲಾ_ ಲಿಂಗಭೋಗೋಪಭೋಗಿಗಳಾಗಿ ಭೋಗಿಸುವವರಿಲ್ಲ. ಗಂಗೆವಾಳುಕರೆಲ್ಲ ವರಮುಖಿಗಳಾಗಿ ಮೂರ್ತಿಯಳಿದು ಹೋದರು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->