ಅಥವಾ
(36) (23) (40) (2) (5) (2) (0) (0) (13) (3) (0) (14) (1) (1) ಅಂ (7) ಅಃ (7) (46) (1) (18) (0) (0) (2) (0) (3) (0) (0) (0) (0) (0) (0) (0) (8) (0) (8) (0) (23) (50) (0) (14) (13) (50) (1) (4) (0) (13) (11) (31) (0) (26) (37) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗುಡಿಗೊರವ ಗುಡಿಸಿ ಕಣ್ಣು ಕೆಂಪಗಾಗಿ ಜಟ್ಟಿಂಗ ಬೇತಾಳನ ನುಂಗಿ, ಬೇತಾಳ ಜಟ್ಟಿಂಗನ ನುಂಗಿ ತಲೆ ನರೆಗೂದಲ ನುಂಗಿ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಗುರುಪ್ರೇಮಿಯಾದಡೆ ಚತುರ್ವಿಧಭಕ್ತಿಯಿಂದ ತನುವ ದಂಡಿಸಲಾಗದು. ಲಿಂಗಪ್ರೇಮಿಗಳಾದಡೆ ಅಷ್ಟವಿಧಾರ್ಚನೆ ಷೋಡಶೋಪಚಾರಗಳಿಂದ ಮನವ ಬಳಲಿಸಲಾಗದು. ಜಂಗಮಪ್ರೇಮಿಗಳಾದಡೆ ಅನ್ನ ವಸ್ತ್ರ ಹದಿನೆಂಟು ಜೀನಸಿನ ಧಾನ್ಯ ಮೊದಲಾದ ಷೋಡಶಭಕ್ತಿಯಿಂದ ಆತ್ಮನ ಬಳಲಿಸಲಾಗದು. ಇಂತಪ್ಪ ಭಕ್ತರಿಗೆ ಭವ ಹಿಂಗದು ; ಮುಕ್ತಿಯು ತೋರದು. ಅದೇನು ಕಾರಣವೆಂದಡೆ : ತಮ್ಮ ನಿಜವ ಮರೆದು ಕರ್ಮಕಾಂಡಿಗಳಾದ ಕಾರಣ. ಇಂತಪ್ಪವರ ಬ್ಥಿನ್ನಕ್ರಿಯಾಚಾರವನು ಸುಜ್ಞಾನೋದಯವಾದ ಜ್ಞಾನಕಲಾತ್ಮನು ತನ್ನ ಪರಮಜ್ಞಾನದಿಂ ನಷ್ಟವ ಮಾಡಿ, ಶ್ರೀಗುರುಕಾರುಣ್ಯವ ಪಡೆದು, ಲಿಂಗಾಂಗಸಂಬಂದ್ಥಿಯಾಗಿ, ಸರ್ವಾಂಗಲಿಂಗಮಯ ತಾನೆಂದು ತಿಳಿದು, ವಿಚಾರಿಸಿಕೊಂಡು ಪರಶಿವಪರಮೂರ್ತಿಗಳಾದ ಗುರುಲಿಂಗಜಂಗಮವನ್ನು ತನ್ನ ತನುಮನದಲ್ಲಿ ಸ್ವಾಯತವಮಾಡಿದ ಶಿವಶರಣಂಗೆ ಭವ ಹಿಂಗಿ, ಮುಕ್ತಿ ಎಂಬುದು ಕರತಳಾಮಳಕವಾಗಿ ತೋರುವದು ಕಾಣೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಗುರುಪೂಜೆ ಮಾಡುವಾತ ಶಿಷ್ಯನಲ್ಲ. ಲಿಂಗಪೂಜೆ ಮಾಡುವಾತ ಶರಣನಲ್ಲ. ಜಂಗಮಪೂಜೆ ಮಾಡುವಾತ ಭಕ್ತನಲ್ಲ. ಇಂತೀ ತ್ರಿಮೂರ್ತಿಗಳ ಪಾದೋದಕ ಪ್ರಸಾದವ ಕೊಂಬುವಾತ ಪ್ರಸಾದಿಯಲ್ಲ. ಇಂತೀ ಚತುರ್ವಿಧದ ಹಂಗು ಹಿಂಗದೆ ಭವಹಿಂಗದು ಮುಕ್ತಿದೋರದು. ಮತ್ತಂ, ಇಂತೀ ತ್ರಿವಿಧ ಪೂಜೋಪಚಾರಂಗಳಮಾಡಿ ಪಾದೋದಕ ಪ್ರಸಾದವ ಕೊಳ್ಳದವರಿಗೆ ಭವಹಿಂಗದು ಮುಕ್ತಿದೋರದು ಎಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಗಂಡಗೊಂದು ಲಿಂಗ, ಹೆಂಡತಿಗೊಂದು ಲಿಂಗ, ಮಕ್ಕಳಿಗೊಂದು ಲಿಂಗ, ಸ್ನೇಹಿತರು ಗೆಳೆಯರಿಗೊಂದು ಲಿಂಗ, ಇಂತೀ ನಾಲ್ವರಿಗೆ ನಾಲ್ಕು ಲಿಂಗವಾದರೆ ಭವಮಾಲೆ ಹರಿಯದು. ಇಂತೀ ನಾಲ್ವರಿಗೆ ಒಂದೇ ಲಿಂಗವಾದರೆ ಭವಮಾಲೆ ಹಿಂಗುವುದು ನೋಡಾ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಗುರುವೆನಲು ಕೊರವದು ಭವಗಜವು. ಗುರುವೆನಲು ಹರಿವದು ಬಹುಜನ್ಮದ ದೋಷವು. ಗುರುವೆನಲು ಮುನ್ನೂರರುವತ್ತು ರೋಗಾದಿ ಬಾಧೆಗಳು ಸಂಹಾರವಾಗುವವು. ಗುರುವೆನಲು ಕಾಲಕಾಮಮಾಯಾದಿಗಳ ಬ್ಥೀತಿ ಕಂಟಕಗಳು ಸಂಹಾರವಾಗುವವು. ಗುರುವೆನಲು ಸಕಲೈಶ್ವರ್ಯ ದೊರಕೊಂಬುವದು. ಇಂತಪ್ಪ ಗುರುವಿನ ಶ್ರೀಚರಣಕ್ಕೆರಗಿ ನಮೋ ನಮೋ ಎಂದು ಬದುಕಿದೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಗುರು ಗುರುವೆಂದು ಬೊಗಳುತ್ತಿರ್ಪರು ಗುರುಸ್ವರೂಪವೆಂತಾದರಯ್ಯ? ಗುರುವಿನ ಸ್ವರೂಪ ಗುರುವಿನ ಲಕ್ಷಣವ ಪೇಳ್ವೆ. ಅದೆಂತೆಂದಡೆ: ಗುರುವಿನ ನಿಲವು ಸ್ವಯಂಜ್ಯೋತಿ, ಸ್ವಯಂ ಪ್ರಕಾಶ ಪರಂಜ್ಯೋತಿ. ಅಂತಪ್ಪ ಗುರುಸ್ವರೂಪರಾದ ಶಿವಜ್ಞಾನಿಗಳು ಭಕ್ತರಾಗಲಿ ಮಹೇಶ್ವರರಾಗಲಿ ಇಂತೀ ಆಶ್ರಮವನುಳ್ಳ ಪರದೇಶಿಗಳಾಗಲಿ ಆರಾದಡೇನು ಅಂತಪ್ಪವರಿಗೆ ಷಡೂರ್ಮಿ-ಷಡ್ವರ್ಗ-ಸಪ್ತವ್ಯಸನ-ಅಷ್ಟಮದ- ಪಂಚಕರಣಂಗಳು ಮೊದಲಾದ ಅರುವತ್ತಾರುಕೋಟಿ ಕರಣಂಗಳು ಅಳಿದು ಅಳಿಯದ ಹಾಂಗೆ ಲಿಂಗಕಿರಣಂಗಳ ಮಾಡಿ ಧರಿಸಿದವರೇ ಅನಾದಿಗುರುವೆಂದೆನುತ್ತಿರ್ಪೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಗೊಲ್ಲನ ಕೊಳಲಧ್ವನಿ ಕೇಳಿ ಹಂದಿ ನಾಯಿ ಎಮ್ಮೆ ಕೋಣ ಸರಳ ಕೊಂಬಿನಪಶುಗಳು ಸಾಯದೇ ಇರ್ಪವು. ಕೊಂಬಿಲ್ಲದ ಪಶುವು ಬಸವಣ್ಣ ಚೆನ್ನಬಸವಣ್ಣ ಪ್ರಭುದೇವರು ಮೊದಲಾದ ಏಳುನೂರೆಪ್ಪತ್ತು ಪ್ರಮಥಗಣಂಗಳು ಸತ್ತಿರ್ಪರು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಗುರುಲಿಂಗಜಂಗಮದಲ್ಲಿ ಅತ್ಯಂತ ಪ್ರೇಮಿಗಳೆಂದು ಪರರ ಮುಂದೆ ತಮ್ಮ ಬಿಂಕವ ತೋರುವರು. ತೋರಿದಂತೆ ಆಚರಣೆಯ ತೋರರು. ಅದೆಂತೆಂದಡೆ : ತನ್ನ ದೀಕ್ಷೋಪದೇಶವ ಮಾಡಿದಂಥ ಗುರು ಮನೆಗೆ ಬಂದರೆ ಮನ್ನಿಸರು. ನಯನುಡಿಯ ಮಾತನಾಡರು. ಒಂದು ಹೊನ್ನು ವಸ್ತ್ರವ ಬೇಡಿದರೆ ಇಲ್ಲೆಂಬರಲ್ಲದೆ ಕೊಟ್ಟು ಸಂತೋಷಪಡಿಸುವವರಿಲ್ಲ. ಗ್ರಾಮದ ಮಧ್ಯದಲ್ಲಿ ಆವನೊಬ್ಬ ಜಾತಿಹಾಸ್ಯಕಾರನು ಬಂದು, ಡೋಲು ಡಮಾಮಿಯ ಹೊಡೆದು, ಬೊಬ್ಬಿಯ ರವಸದಿಂದ ಮಣ್ಣವರಸಿ, ರಟ್ಟಿ ಮಂಡಿಯ ತಿಕ್ಕಿ, ತೊಡೆಯ ಚಪ್ಪರಿಸಿ, ಕೋ ಎಂದು ಕೂಗಿ, ಭೂಮಿಗೆ ಕೈ ಹಚ್ಚಿ, ಲಾಗದ ಮೇಲೆ ಲಾಗ ಹೊಡೆದು, ಅಂತರಪುಟಕಿಯಲ್ಲಿ ಮೂರು ಹೊರಳಿಕೆಯ ಹೊರಳಿ, ಮುಂದೆ ಬಂದು ನಿಂತು, ಮಜುರೆಯ ಮೇಲೆ ಮಜುರೆಯ ಹೊಡೆದು, ಅವರ ಹೆಸರೆತ್ತಿ ಕೊಂಡಾಡಲು, ಅವರ ಲಾಗಕ್ಕೆ ಮೆಚ್ಚಿ ಶಾಲು ಶಕಲಾತಿ ಮೊದಲಾದ ವಸ್ತ್ರವ ಕೊಟ್ಟು, ಕಾಲತೊಡರು ಮುಂಗೈಸರಪಳಿ ಛತ್ರ ಚಾಮರ ಜಲ್ಲಿ ಮೊದಲಾದ ಚಾಜವ ಕೊಟ್ಟು, ಸಂತೋಷಪಡಿಸುವರಲ್ಲದೆ ಇಲ್ಲೆಂಬರೇ? ಇಲ್ಲೆನ್ನರಯ್ಯ. ಮತ್ತಂ, ಲಿಂಗಪೂಜೆಯ ಮಾಡೆಂದಡೆ ಎನ್ನಿಂದಾಗದೆಂಬರು. ಲಿಂಗಕ್ಕೆ ಸಕಲಪದಾರ್ಥವನರ್ಪಿಸಿ ಸಲಿಸೆಂದಡೆ ಎನ್ನಿಂದಾಗದೆಂದು, ಬಂದ ಪದಾರ್ಥವ ಲಿಂಗಕ್ಕೆ ತೋರದೆ ಬಾಯಿಗೆಬಂದಂತೆ ತಿಂಬುವರು. ಜಟ್ಟಿಂಗ ಹಿರಿವಡ್ಯಾ ಲಕ್ಕಿ ದುರ್ಗಿ ಚಂಡಿ ಮಾರಿಯ ಪೂಜಿಸೆಂದಡೆ ತನುಮನವು ಹೊಳೆಯುಬ್ಬಿದಂತೆ ಉಬ್ಬಿ, ಹೊತ್ತಾರೆ ಎದ್ದು ಪತ್ರಿ ಪುಷ್ಪವ ತಂದು, ಒಂದೊತ್ತು ಉಪವಾಸ ಮಾಡಿ, ಮೈಲಿಗೆಯ ಕಳೆದು ಮಡಿಯನುಟ್ಟು, ಮನಪೂರ್ವಕದಿಂ ಪೂಜೋಪಚಾರವ ಮಾಡಿ, ಭೂಮಿಯಲ್ಲಿ ಕಾಯಕಷ್ಟವ ಮಾಡಿ ಬೆಳೆದಂಥ ಹದಿನೆಂಟು ಜೀನಸಿನ ಧಾನ್ಯವ ತಂದು ಪಾಕ ಮಾಡಿ, ಆ ದೇವತೆಗಳಿಗೆ ನೈವೇದ್ಯವ ಕೊಟ್ಟು, ಮರಳಿ ತಾವು ಉಂಬುವರಲ್ಲದೆ, ಅಂತಪ್ಪ ದೇವತೆಗಳಿಗೆ ಕೊಡದ ಮುನ್ನವೆ ಸಾಯಂಕಾಲಪರಿಯಂತರವಾದಡೂ ಒಂದು ಬಿಂದು ಉದಕ ಒಂದಗಳನ್ನವ ಕೊಳ್ಳದೆ, ತನು-ಮನ ಬಳಲಿಸುವರಯ್ಯಾ. ಮತ್ತಂ, ಜಂಗಮಲಿಂಗವು ಹಸಿವು ತೃಷೆ ಆಪ್ಯಾಯನವಾಗಿ ಮಧ್ಯಾಹ್ನ ಸಾಯಂಕಾಲದೊಳಗೆ ಭಿಕ್ಷಕ್ಕೆ ಬಂದಡೆ, ಅನುಕೂಲವಿಲ್ಲ, ಮನೆಯೊಳಗೆ ಹಡದಾರ ಗದ್ದಲುಂಟು ಮನೆಯೊಳಗೆ ಗೃಹಸ್ಥರು ಬಂದಾರೆ, ಘನಮಾಡಿಕೊಳ್ಳಿರಯ್ಯಾ ಮುಂದಕ್ಕೆ ಎಂಬರಲ್ಲದೆ, ಅಂತಪ್ಪ ಆಪ್ಯಾಯನವಾದ ಜಂಗಮವ ಕರೆದು ಅನ್ನೋದಕವ ನೀಡಿ, ತೃಪ್ತಿಯ ಬಡಿಸುವರೆ ? ಬಡಿಸುವದಿಲ್ಲ. ಊರೊಳಗೆ ಒಬ್ಬ ಜಾರಸ್ತ್ರೀಯಳು ಉಂಡು ವೀಳ್ಯವಕೊಂಡು ಸಹಜದಲ್ಲಿ ತಮ್ಮ ಗೃಹಕ್ಕೆ ಬಂದಲ್ಲಿ ಆ ಜಾರಸ್ತ್ರೀಗೆ ಮನೆಯವರೆಲ್ಲರು ಉಣ್ಣು ಏಳು ಉಂಬೇಳೆಂದು ಆಕೆಯ ಕರವ ಪಿಡಿದು ಕರೆವರಯ್ಯಾ. ಅವಳು ಎನಗೆ ಹಸುವಿಲ್ಲೆಂದು ತಮ್ಮ ಗೃಹಕ್ಕೆ ಹೋಗಲು, ಅವಳು ಹೋದಮೇಲೆ ದೇವರಿಗೆ ಎಡಿಯ ಕಳಿಸಿದಂತೆ ಕಳುಹುವರಯ್ಯ. ಇಂತಪ್ಪ ತ್ರಿವಿಧಭ್ರಷ್ಟ ಹೊಲೆ ಮಾದಿಗರಿಗೆ ಗುರು-ಲಿಂಗ-ಜಂಗಮದ ಪ್ರೇಮಿಗಳಾದ ಸದ್ಭಕ್ತರೆಂದಡೆ, ಶಿವಜ್ಞಾನಿಗಳಾದ ಶಿವಶರಣರು ಕಂಡು ತಮ್ಮೊಳಗೆ ತಾವೇ ನಕ್ಕು ಅರಿಯದವರಂತೆ ಶಬ್ದಮುಗ್ಧರಾಗಿ ಸುಮ್ಮನೆ ಇರ್ದರು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಗಿಲಾಯದ ಮಣ್ಣಿನ ಗೋಡೆಗೆ, ಕಟೆದ ಕಲ್ಲಿನ ಗಚ್ಚಿನ ಶಿವಾಲಯಕ್ಕೆ, ಎರಕದ ದೇಗುಲಕ್ಕೆ, ಇಂತೀ ತ್ರಿವಿಧಭಿತ್ತಿಗಳಿಗೆ ಚಿತ್ರವ ಬರೆದವರು ಬರೆಸಿದವರು ಇತ್ತಾಗಿ ಬಹುಕಾಲ ಇರ್ಪರು. ಇಂತೀ ಭಿತ್ತಿಗಳಲ್ಲಿ ಚಿತ್ರವ ಬರೆಯದವರು ಅತ್ತಾಗಿ ಬಹು ಕಾಲ ಇರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಗುರುಕಾರುಣ್ಯವಾದಡೆ ಕಾಲಿಲ್ಲದೆ ನಡೆಯಬೇಕು, ಕಣ್ಣಿಲ್ಲದೆ ನೋಡಬೇಕು, ಸತಿಸುತರ ಬಿಡಬೇಕು, ಊರಲ್ಲಿರದೆ ಅರಣ್ಯಕ್ಕೆ ಹೋಗದೆ ಇರಬಲ್ಲರೆ ಗುರುಕಾರುಣ್ಯವುಳ್ಳವರೆಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಗಜಿಬಿಜಿಯೆಂಬ ಪಟ್ಟಣದ ಗುಜ್ಜದೇವಿ ಎಂಬ ಸ್ತ್ರೀಯಳ ಕೋತಿವಿಲಾಸವ ಕಂಡು, ಶಿಕಾರಿಗೆ ಬಂದ ರಾಜಕುಮಾರನು ಮರುಳಾಗಿರುವದ ಅರಸು ಕಂಡು ಬಂದು ಮೂರು ಕಲ್ಲಾರು ಕೋಲಿನಿಂದ ಹೊಡೆದು, ಪುತ್ರನ ಕೊಂದು ತಾ ಸಾಯಲು, ಗಜಿಬಿಜಿಪಟ್ಟಣ ಸುಟ್ಟು, ಗುಜ್ಜದೇವಿಯಳಿದು, ಕೋತಿವಿಲಾಸವಡಗಿತ್ತು, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಗುರು ಮುನ್ನವೋ ಶಿಷ್ಯ ಮುನ್ನವೋ ಲಿಂಗ ಮುನ್ನವೋ ಶರಣ ಮುನ್ನವೋ ಜಂಗಮ ಮುನ್ನವೋ ಭಕ್ತ ಮುನ್ನವೋ ಪಾದೋದಕ-ಪ್ರಸಾದ ಮುನ್ನವೋ ವಿಭೂತಿ-ರುದ್ರಾಕ್ಷಿ ಮುನ್ನವೋ ಮಂತ್ರ ಮುನ್ನವೋ ಶಿವಾಚಾರ ಮೊದಲಾಗಿ ಆವುದು ಮುನ್ನವೋ ಎಂದು ತಿಳಿಯಬಲ್ಲರೆ ಗುರುವೆಂಬೆ. ಭೂಮಿ ಮುನ್ನವೋ ಆಕಾಶ ಮುನ್ನವೋ ಅಗ್ನಿ ಮುನ್ನವೋ ವಾಯು ಮುನ್ನವೋ ಚಂದ್ರ ಮುನ್ನವೋ ಸೂರ್ಯ ಮುನ್ನವೋ ಜ್ಯೋತಿ ಮುನ್ನವೋ ಕಾಳಗತ್ತಲೆ ಮುನ್ನವೋ ಸಮುದ್ರ ಮುನ್ನವೋ ಆತ್ಮ ಮೊದಲಾಗಿ ಆವುದು ಮುನ್ನವೋ ಎಂದು ತಿಳಿಯಬಲ್ಲರೆ ಲಿಂಗವೆಂಬೆ. ಹೆಣ್ಣು ಮುನ್ನವೋ ಗಂಡು ಮುನ್ನವೋ, ಗರ್ಭ ಮುನ್ನವೋ ಶಿಶು ಮುನ್ನವೋ ತಾಯಿ ಮುನ್ನವೋ ತಂದೆ ಮುನ್ನವೋ ಜ್ಞಾನ ಮುನ್ನವೋ ಅಜ್ಞಾನ ಮುನ್ನವೋ ಗಂಧ ಮುನ್ನವೋ ಘ್ರಾಣ ಮುನ್ನವೋ ರುಚಿ ಮುನ್ನವೋ ಜಿಹ್ವೆ ಮುನ್ನವೋ ನೋಟ ಮನ್ನವೋ ರೂಪ ಮುನ್ನವೋ ಶ್ರೋತ್ರ ಮುನ್ನವೋ ಶಬ್ದ ಮುನ್ನವೋ ತ್ವಕ್ ಮುನ್ನವೋ, ಮೃದು ಕಠಿಣ ಮೊದಲಾದ ಆವುದು ಮುನ್ನವೋ ಎಂದು ತಿಳಿಯಬಲ್ಲರೆ ಜಂಗಮವೆಂಬೆ. ಅರಿವು ಮುನ್ನವೋ ಮರೆವು ಮುನ್ನವೋ ಆಚಾರ ಮುನ್ನವೋ ಅನಾಚಾರ ಮುನ್ನವೋ ಬ್ರಹ್ಮಾಂಡ ಮುನ್ನವೋ ಪಿಂಡಾಂಡ ಮುನ್ನವೋ ಮನ ಮುನ್ನವೋ ಪ್ರಾಣ ಮುನ್ನವೋ ಧರ್ಮ ಮುನ್ನವೋ ಕರ್ಮ ಮುನ್ನವೋ ಇಂತೀ ಸರ್ವರೊಳಗೆ ತಾ ಮೊದಲಾಗಿ ಆವುದು ಮುನ್ನವೋ ಎಂದು ತಿಳಿಯಬಲ್ಲರೆ ಪಾದೋದಕ ಪ್ರಸಾದಿಗಳೆಂಬೆ; ವಿಭೂತಿ ರುದ್ರಾಕ್ಷಿಧಾರಣ ಮಂತ್ರಮೌನಿಗಳೆಂಬೆ. ಇಂತಪ್ಪ ವಚನದ ತಾತ್ಪರ್ಯ ತಿಳಿಯಬಲ್ಲರೆ ಲಿಂಗಾಂಗಸಮರಸಾನಂದಸುಖವ ತಿಳಿಯಬಲ್ಲ ಶಿವಜ್ಞಾನಸಂಪನ್ನರೆಂಬೆ. ಪರಶಿವಯೋಗಿಗಳೆಂಬೆ, ಷಟ್‍ಸ್ಥಲ ಭಕ್ತರೆಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಗುರುಪೂಜೆ ಮಾಡುವಣ್ಣಗಳ ಸೂಳೇರ ಬಾಯಿಲೋಳೆ ನೆಕ್ಕಿಸಿತ್ತು ಮಾಯೆ. ಲಿಂಗಪೂಜೆ ಮಾಡುವಣ್ಣಗಳ ಅಂಗನೆಯರ ತೊಡೆಯ ಮೂಸಿನೋಡಿಸಿತ್ತು ಮಾಯೆ. ಜಂಗಮಪೂಜೆ ಮಾಡುವಣ್ಣಗಳ ರಂಭೆಯರ ಜಾನು ಜಂಘಯಲ್ಲಿರಿಸಿತ್ತು ಮಾಯೆ. ಪಾದೋದಕ ಪ್ರಸಾದವಕೊಂಬ ಅಣ್ಣಗಳ ಮದ್ಯಪಾನ ಮಾಂಸವ ತಿನಿಸಿತ್ತು ಮಾಯೆ. ವಿಭೂತಿ ರುದ್ರಾಕ್ಷಿ ಧರಿಸುವಣ್ಣಗಳ ತಿದಿಯ ಹಿರಿಸಿ ಮುಸುಕಿಯ ಕಟ್ಟಿಸಿತ್ತು ಮಾಯೆ. ಮಂತ್ರಧ್ಯಾನಿಗಳೆಲ್ಲರ ಅಂಗನೆಯರ ಭಗಧ್ಯಾನದಲ್ಲಿರಿಸಿತ್ತು ಮಾಯೆ ಜಪತಪವ ಮಾಡುವಣ್ಣಗಳ ಮುಸುಕು ತೆಗೆದು ಸ್ತ್ರೀಯರ ಮುಖವ ನೋಡಿಸಿತ್ತು ಮಾಯೆ. ಗುರುಹಿರಿಯರೆಂಬಣ್ಣಗಳ ಹಿರಿಯ ಶೂಲಕ್ಕೆ ಇಕ್ಕಿತ್ತು ಮಾಯೆ. ವಿರಕ್ತರೆಂಬಣ್ಣಗಳ ರಂಭೇರ ಮಲ ಒಸರುವ ಪೃಷ*ವ ಪಿಡಿಸಿತ್ತು ಮಾಯೆ. ಪಟ್ಟದಯ್ಯಗಳು ಚರಮೂರ್ತಿ ಹಿರಿಯರು ಮಾನ್ಯರೆಂಬಣ್ಣಗಳ ರಟ್ಟೆಗೆ ಹಗ್ಗಹಚ್ಚಿ ಸ್ತ್ರೀಯರ ಮುಂದೆ ಹಿಂಡಗಟ್ಟಿ ಎಳಸಿತ್ತು ಮಾಯೆ. ವೇದಾಗಮ ಪುರಾಣ ತರ್ಕ ತಂತ್ರಗಳೆಲ್ಲ ನೋಡಿ ಹಾಡುವಣ್ಣಗಳೆಲ್ಲರ ಹೊಲೆಮಾದಿಗರ ಕಾಲು ಹಿಡಿಸಿತ್ತು ಮಾಯೆ. ಇಂತೀ ನಾನಾ ಹಾದಿ ಶ್ರುತಿಗಳ ವಾಕ್ಯವ ಕೇಳಿ ದಾನಧರ್ಮಗಳ ಮಾಡುವಣ್ಣಗಳನೆಲ್ಲರ ತಲೆಕೆಳಗಾಗಿ ಕಾಲುಮೇಲಾಗಿ ಎಂಬತ್ತುನಾಲ್ಕುಲಕ್ಷ ಯೋನಿಗಳಲ್ಲಿ ರಾಟಾಳ ತಿರುಗಿದಂತೆ ತಿರುಗಿಸಿತ್ತು ಮಾಯೆ. ಇಂತಪ್ಪ ಮಾಯೆಯ ಗೆಲುವರೆ ಆರಿಗೂ ಅಳವಲ್ಲ. ಶಿವಜ್ಞಾನಸಂಪನ್ನರಾದ ಶಿವಶರಣರೇ ಬಲ್ಲರಲ್ಲದೆ, ಮಿಕ್ಕಿನ ದೇವ ದಾನವ ಮಾನವರು ಮೊದಲಾದ ಎಲ್ಲರಿಗೂ ಇಲ್ಲ ಇಲ್ಲ ಎಂದನಯ್ಯ ವೀರಾಧಿವೀರ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಗುರುವೆಂಬವನೇ ಹೊಲೆಯ. ಲಿಂಗಾಂಗಿ ಎಂಬವನೇ ಮಾದಿಗ. ಜಂಗಮವೆಂಬವನೇ ಸಮಗಾರ. ಈ ಮೂವರೊಳಗೆ ಹೊಕ್ಕು ಬಳಕೆಯ ಮಾಡಿದಾತನೇ ಭಕ್ತ. ಆ ಭಕ್ತನೆಂಬುವನೇ ಡೋರ. ಇಂತೀ ಚತುರ್ವಿಧ ಭೇದವ ತಿಳಿದು, ಪಾದೋದಕ ಪ್ರಸಾದವ ಕೊಡಬಲ್ಲರೆ ಗುರುಲಿಂಗಜಂಗಮವೆಂಬೆ. ಈ ನಿರ್ಣಯವ ತಿಳಿದು ಪಾದೋದಕ ಪ್ರಸಾದ ಕೊಳ್ಳಬಲ್ಲರೆ ಭಕ್ತ, ಮಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣೈಕ್ಯರೆಂಬ ಷಟ್‍ಸ್ಥಲಬ್ರಹ್ಮಿ ಎಂಬೆ. ಆತನೇ ಅಚ್ಚಪ್ರಸಾದಿ, ನಿಚ್ಚಪ್ರಸಾದಿ, ಸಮಯಪ್ರಸಾದಿ, ಏಕಪ್ರಸಾದಿ. ಇಂತೀ ಕ್ರಮವರಿತು ಪಾದೋದಕ ಪ್ರಸಾದವ ಕೊಳ್ಳಬಲ್ಲರೆ ಮೋಕ್ಷವಾಗುವುದಕ್ಕೆ ತಡವಿಲ್ಲವಯ್ಯ. ಈ ಭೇದವ ತಿಳಿಯದೆ ಅಯ್ಯಾ, ಹಸಾದ ಮಹಾಪ್ರಸಾದ ಪಾಲಿಸಿರೆಂದು, ಕರುಣಿಸಿರೆಂದು ಕೃಪೆ ಮಾಡಿ ಭೂತದೇಹಿಗಳೆದುರಿಗೆ ಪಾತಕಮನುಜರು ಅಡ್ಡಡ್ಡ ಬಿದ್ದು ಎದಿ ವಡ್ಡುಗಟ್ಟಿ ಮೊಳಕಾಲು ಗೂಡುಗಟ್ಟಿ ಹಣೆ ಬುಗುಟಿ ಎದ್ದು ಈ ಪರಿಯಲ್ಲಿ ಅಯ್ಯಾ ಪ್ರಸಾದ ಪಾಲಿಸೆಂದು ಪಡಕೊಂಡು ಲಿಂಗಕ್ಕೆ ತೋರಿ ತೋರಿ ತಮ್ಮ ಉದರಾಗ್ನಿ ಅಡಗಿಸಿಕೊಂಡು, ಕಡೆಯಲ್ಲಿ ಎಣ್ಣೆಯ ನಾತಕ್ಕೆ ಅಲಗ ನೆಕ್ಕುವ ಶ್ವಾನನ ಹಾಗೆ ತಮ್ಮ ನಾಲಿಗಿಯಲಿ ತಳಗಿ ತಾಬಾಣವ ನೆಕ್ಕಿ ನೆಕ್ಕಿ, ಆ ತಳಗಿ ತಾಬಾಣ ಸವೆದು ಸಣ್ಣಾಗಿ ಹೋದವಲ್ಲದೆ, ಇಂತಪ್ಪ ಮತಿಭ್ರಷ್ಟ ಹೊಲೆಯ ಮಾದಿಗರಿಗೆ ಪರಶಿವನ ಮಹಾಪ್ರಸಾದ ಸಾಧ್ಯವೇ? ಸಾಧ್ಯವಲ್ಲ. ಮುಂದೆ ಎಂಬತ್ತುನಾಲ್ಕುಲಕ್ಷ ಯೋನಿದ್ವಾರದಲ್ಲಿ ತಿರುಗಿ ತಿರುಗಿ ಭವದತ್ತ ಮುಖವಾಗಿ ನರಕವನೆ ಭುಂಜಿಸುವದು ಉಂಟೆಂದ ನಿಮ್ಮ ಶರಣ ವೀರಾಧಿವೀರ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಗೊಲ್ಲಂಗೆ ಕಲ್ಲಿನ ಕಷ್ಟ, ಅಗ್ನಿಯ ತಪದ್ಯೋಗಿಗಳ ಸ್ತುತಿ ನಿಂದ್ಯ ಆವ ಪ್ರೇಮದ ಉಲ್ಲಾಸ ಸಂದುಸಂಶಯ ನಿಮಿಷಾರ್ಧವಿಲ್ಲ ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಗಂಡನಿಲ್ಲದ ಸ್ತ್ರೀಯರು ಗಂಡನ ಮದುವೆಯಾಗಿ, ಮನೆಯ ಗಂಡನ ಕೂಡ ಒಗತನವ ಮಾಡದೆ, ಪರಪುರುಷನ ಸಂಗವಮಾಡಿ ಬಹುಕಾಲಿರ್ಪರು. ಎನಗೆ ಗಂಡರಿಲ್ಲ. ಬಂದಲ್ಲಿ ಗಂಡರು ಮದುವೆಯಾಗಿ ಒಗತನವ ಮಾಡಿ ಗಂಡನ ಕೊಂದು ರಂಡೆಯಾಗಿ ಸೋಮೇಶ್ವರಲಿಂಗಕ್ಕೆ ಅರ್ಪಿತಮಾಡಿ ಕಾಯಕದಲ್ಲಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಗುರುಲಿಂಗಜಂಗಮದ ಪಾದೋದಕ ಪ್ರಸಾದಪ್ರೇಮಿಗಳೆಂದು, ನುಡಿದುಕೊಂಬ ನುಡಿಯಜಾಣರಲ್ಲದೆ, ಆ ತ್ರಿಮೂರ್ತಿಗಳ ಪಾದೋದಕ ಪ್ರಸಾದವ ಸೇವಿಸಿ ಭವಹಿಂಗಿಸಲರಿಯರು. ಅದೆಂತೆಂದಡೆ : ಶುದ್ಧಪ್ರಸಾದದಿಂದ ಮತ್ರ್ಯದ ಹಂಗು ಹಿಂಗಿತ್ತು. ಸಿದ್ಧಪ್ರಸಾದದಿಂದ ಸ್ವರ್ಗದ ಹಂಗು ಹಿಂಗಿತ್ತು. ಪ್ರಸಿದ್ಧಪ್ರಸಾದದಿಂದ ಪಾತಾಳದ ಹಂಗು ಹಿಂಗಿತ್ತು. ಮಹಾಪ್ರಸಾದದಿಂದ ಹದಿನಾಲ್ಕುಲೋಕದ ಹಂಗು ಹಿಂಗಿತ್ತು. ಇಂತೀ ಪ್ರಸಾದದ ಗ್ರಾಹಕದಿಂ ಗುರು-ಲಿಂಗ-ಜಂಗಮದ ಹಂಗು ಹಿಂಗಿ, ಸತಿಪತಿಯರು ಸತ್ತು ಅವರೆಲ್ಲಿರ್ದರು ಎಂಬುದನಾರೂ ಅರಿಯರಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಗುಂಗರಿಯ ಮೂರು ಮುಖದಲ್ಲಿ ಊರು ಇರ್ಪುದು. ಊರ ಮಧ್ಯದಲ್ಲಿ ಮೂರುಲೋಕವಿರ್ಪುದು. ಮೂರುಲೋಕದ ಮಧ್ಯದಲ್ಲಿ ಅಗ್ನಿಕೊಂಡ ಇರ್ಪುದು. ಆ ಕೊಂಡದೊಳಗೆ ವಿಚಿತ್ರದ ಸರ್ಪ ಇರ್ಪುದು. ಆ ಸರ್ಪದ ತಲೆಯೊಳಗೆ ಅನಂತಕೋಟಿ ಚಂದ್ರಸೂರ್ಯರ ಬೆಳಗಕೀಳ್ಪಡಿಸುವಂಥ ರತ್ನವಿರ್ಪುದು. ಗುಂಗರಿಯ ಕೊಂದು ಮೂರುಮುಖ ವಿಕಾರಮಾಡಿ, ಊರ ಸುಟ್ಟು ಮೂರುಲೋಕವೆಲ್ಲ ಕೆಡಿಸಿ, ಅಗ್ನಿಯ ನಂದಿಸಿ, ಸರ್ಪನ ಕೊಂದು, ಆ ರತ್ನವ ತಕ್ಕೊಳ್ಳಬಲ್ಲರೆ ಅನಾದಿಭಕ್ತನೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ